(ಅ)ಖಂಡ ಭಾರತ ಮತ್ತು ಕದಡಿದ ಕಾಶ್ಮೀರ

ಉದ್ದೇಶವು ಎಷ್ಟೇ ಘನವಾಗಿರಲಿ, ಯಾವುದೇ ರಾಜ್ಯದ ಅಸ್ತಿತ್ವವನ್ನು ಬದಲಾಯಿಸುವಾಗ, ಅದನ್ನು ತುಂಡರಿಸುವಾಗ ಆ ರಾಜ್ಯದ ಜನಮನದ ಅಭಿಮತವನ್ನು ಪಡೆಯದೆ ದೇಶದ ಜನಪ್ರತಿನಿಧಿಗಳು ಸೇರಿ ಬದಲಾಯಿಸುವುದು ಬಹುಮತವೆಂಬ ಅಧಿಕಾರದ ದುರುಪಯೋಗವಾಗದೇ? ಇದನ್ನು ಬಾಲಿವುಡ್ ಆಗಲೀ, ರಾಜಕೀಯ ಪಕ್ಷದ ಬಲಾಬಲಗಳಾಗಲೀ ಇತ್ಯರ್ಥಗೊಳಿಸಲಾರದು.


ಕಣ್ಣು ಮುಚ್ಚಿ ತೆರೆಯುವುದರೊಳಗೆ ಎಂಬಂತೆ ಜಮ್ಮು ಮತ್ತು ಕಾಶ್ಮೀರ ಪುನಾರ್ರಚನೆ ಮಸೂದೆಯು ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರಗೊಂಡಿತು. ಸಂವಿಧಾನದ 35ಎ ಮತ್ತು 370ನೇ ವಿಧಿಗಳು ಅಕ್ಷರಶಃ ರದ್ದಾದವು. ಈ ಮಸೂದೆಯ ಪರಿಣಾಮವಾಗಿ ದೇಶಕ್ಕೆ ಒಂದು ರಾಜ್ಯವು ನಷ್ಟವಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಿವೆ. ಸ್ಪಷ್ಟವಾಗಿ ಹೇಳಬೇಕೆಂದರೆ ಜಮ್ಮು ಮತ್ತು ಕಾಶ್ಮೀರವೆಂಬ ರಾಜ್ಯವು ಅದೇ ಹೆಸರಿನ ಒಂದು ಕೇಂದ್ರಾಡಳಿತ ಪ್ರದೇಶವಾಗಿ ಅದರ ಒಂದು ಭಾಗವಾಗಿದ್ದ ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆಗೊಂಡಿದೆ. ಇಲ್ಲೂ ಒಂದು ಸೂಕ್ಷ್ಮ ಆದರೆ ಮಹತ್ತರ ವ್ಯತ್ಯಾಸವೆಂದರೆ ಜಮ್ಮು ಮತ್ತು ಕಾಶ್ಮೀರವೆಂಬ ಕೇಂದ್ರಾಡಳಿತ ಪ್ರದೇಶಕ್ಕೆ ಶಾಸನ ಸಭೆಯಿದೆ; ಲಡಾಖ್‌ಗೆ ಶಾಸನ ಸಭೆಯಿಲ್ಲ.

ರಾಜ್ಯಸಭೆಯಲ್ಲಿ 125:61 ಬಹುಮತವಾದರೆ ಲೋಕಸಭೆಯಲ್ಲಿ 366:66 (ಕೆಲವು ವರದಿಗಳಂತೆ 370:70). ಅದೀಗ ಕಾನೂನು; ಕಾಯ್ದೆ. ಚಂದ್ರಯಾನಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಇಷ್ಟೊಂದು ಮಹತ್ವದ ಕಾಯ್ದೆಯು ಸ್ವೀಕೃತಗೊಂಡದ್ದು ಈ ಶತಮಾನದ ಬಹುದೊಡ್ಡ ಅಚ್ಚರಿ. ಅಚ್ಚರಿಯೇನಿಲ್ಲ; ಏಕೆಂದರೆ ಈ ಅಧಿವೇಶನದಲ್ಲಿ ದಾಖಲೆಯ 36 ಮಸೂದೆಗಳು ಸ್ವೀಕೃತಗೊಂಡಿವೆ.

ದೇಶವನ್ನು ಆಳುವ ಪಕ್ಷ ಮತ್ತು ಅದರ ಅಂಗಪಕ್ಷಗಳನ್ನು ಹೊರತುಪಡಿಸಿ ದೇಶದ ಇತರ ಎಲ್ಲಾ ವಿರೋಧ ಪಕ್ಷಗಳು ಒಂದು ರೀತಿಯ ಅಸ್ತವ್ಯಸ್ತ ಸ್ಥಿತಿಯಲ್ಲಿವೆ. ಬೆಂಬಲಿಸುವುದೋ ವಿರೋಧಿಸುವುದೋ ಎಂಬ ಟಿ-20 ನಿರ್ಣಯಕ್ಕೆ ಬರಬೇಕಾದ ಅನಿವಾರ್ಯತೆ ಇವಕ್ಕೆ. ಆದ್ದರಿಂದ ಎಎಪಿ, ಬಿಎಸ್ಪಿ, ಬಿಜೆಡಿ ಮುಂತಾದ ಪ್ರಾದೇಶಿಕ ಪಕ್ಷಗಳು ಮಸೂದೆಯನ್ನು ಬೆಂಬಲಿಸಿದವು. ಕಾಂಗ್ರೆಸ್ ತಾಂತ್ರಿಕವಾಗಿ ವಿರೋಧಿಸಿದರೂ ಅದರಲ್ಲೇ ಒಳೊಡಕಿದೆಯೆಂಬುದನ್ನು ಅದರ ಅನೇಕ ಹಿರಿ-ಕಿರಿ ಜನಪ್ರತಿನಿಧಿಗಳು, ರಾಜಕಾರಣಿಗಳು ತೋರಿಸಿಕೊಟ್ಟರು. ಮಸೂದೆಯ ಚರ್ಚೆಯಲ್ಲಿ ಭಾಗವಹಿಸಿದ ಎಎಪಿ ಪಕ್ಷವು ತಾನು ಅಧಿಕಾರದಲ್ಲಿರುವ ದಿಲ್ಲಿಯೆಂಬ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನವನ್ನು ಒತ್ತಾಯಿಸುತ್ತಾ ಇದ್ದರೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಜಮ್ಮು ಮತ್ತು ಕಾಶ್ಮೀರವೆಂಬ ರಾಜ್ಯವು ತನ್ನ ಸ್ಥಾನಮಾನವನ್ನು ಕಳೆದುಕೊಳ್ಳುವ ಮಸೂದೆಯನ್ನು ಬೆಂಬಲಿಸಿದ್ದು ಅದರ ಬೇಜವಾಬ್ದಾರಿ ಅಥವಾ ವಿರೋಧಾಭಾಸವನ್ನು ಅನಾವರಣಗೊಳಿಸಿದೆ. ಹಾಗೆಯೇ ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸಬೇಕೆಂಬ ಅನೇಕ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ಮತ್ತು ನಿಲುವಿಗೆ ವಿರೋಧವಾಗಿ ಈ ಮಸೂದೆಯನ್ನು ಬೆಂಬಲಿಸಿದವು.

ಬಹುಮತದಿಂದಾಗಿ ಕೇಂದ್ರವು ಯಾವ ರಾಜ್ಯದ ಆಕಾರವನ್ನೂ ಮೊಟಕುಗೊಳಿಸಲು ಈ ಮಸೂದೆಯು ಪೀಠಿಕೆಯಾಗಬಹುದೆಂಬ ಅರಿವನ್ನು ಮರೆತಂತೆ ಈ ಪಕ್ಷಗಳು ವರ್ತಿಸಿದವು. ಪ್ರಾಯಃ ಇಂತಹ ವಿರೋಧಾಭಾಸಗಳನ್ನು ಮರೆಯಲು ಅಥವಾ ಅಲಕ್ಷಿಸಲು ಅವಕ್ಕಿದ್ದ ಒಂದೇ ನೆಲೆಯೆಂದರೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷ ಸ್ಥಾನಮಾನಗಳು. ಇವನ್ನು ಕಿತ್ತುಕೊಂಡು ಈಗ ತಮ್ಮಾಂದಿಗೆ ಸಮಾನತೆ ಅಥವಾ ತಮಗಿಂತಲೂ ಕೆಳಗಿನ ಸ್ಥಾನಮಾನವನ್ನು ಆ ರಾಜ್ಯಕ್ಕೆ ಕರುಣಿಸಲು ಒಟ್ಟಾಗಿ ನಡೆಸಿದ ವ್ಯವಹಾರದಂತೆ ಈ ನಿಲುವು ಇತ್ತು. ಕಾಶ್ಮೀರ ಕಣಿವೆ ಮತ್ತು ದೇಶದ ಒಕ್ಕೂಟ ವ್ಯವಸ್ಥೆಯ ರಾಜಕಾರಣವನ್ನು ಪ್ರಭಾವಿಸುವ ಒಂದು ಮಸೂದೆಯ ಕುರಿತು ಇದಿಷ್ಟು ಸಂಸತ್ತಿನ ಒಳಗೆ ನಡೆದ ಬೆಳವಣಿಗೆಯಾದರೆ ಈ ಕಾನೂನಿನ ವಾಸ್ತವ ಮತ್ತು ವಸ್ತುನಿಷ್ಠ ಚರ್ಚೆ ನಡೆಯಲೇ ಇಲ್ಲ. ರಾಜಕೀಯ ನಿರ್ಣಯಗಳನ್ನು ರಾಜಕೀಯದಿಂದ ಹೊರಗೆಳೆದು ಚರ್ಚಿಸಬಾರದು. ಏಕೆಂದರೆ ಅವು ಯಾವ ತರ್ಕಕ್ಕೂ ಬಾಗುವುದಿಲ್ಲ. ರಾಜಕೀಯ ನಿರ್ಣಯಗಳು ರಾಜಕೀಯ ಕಾರಣಗಳಿಗಾಗಿ ಸಮರ್ಥಿಸಲ್ಪಡುತ್ತವೆ/ವಿರೋಧಿಸಲ್ಪಡುತ್ತವೆ-ಯೇ ವಿನಾ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಅಗತ್ಯಗಳ ನಿಯಮಗಳಿಗಾಗಿ ಅಲ್ಲ. ಜನರು ಬಹಳಷ್ಟು ರಾಜಕೀಯಗೊಂಡಿರುವುದರಿಂದ ಅವರು ಎಲ್ಲವನ್ನೂ ತಮ್ಮ ರಾಜಕೀಯ ಮೂಗಿಗೆ ನೇರವಾಗಿ ನಿರ್ಧರಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ.

ಆದ್ದರಿಂದ ಇದನ್ನು ದೇಶಾದ್ಯಂತ ಮತಕ್ಕೆ ಹಾಕಿದರೂ ಇದೊಂದು ದೇಶಭಕ್ತಿಯ ನಡೆಯಾಗಿ ಭಾರೀ ಬಹುಮತ ಗಳಿಸುವುದು ಖಾತ್ರಿ. ಮಾಜಿ ಕೇಂದ್ರ ಮಂತ್ರಿ ಮತ್ತು ಮೋದಿಯ ಟೀಕಾಕಾರರಲ್ಲೊಬ್ಬರಾದ ಯಶವಂತ ಸಿನ್ಹಾ ಅವರು ಈ ಮಸೂದೆಯ ಪರಿಣಾಮವನ್ನು ವಿಶ್ಲೇಷಿಸಿ ಈಗ ಮತ್ತೆ ಚುನಾವಣೆ ನಡೆದರೆ ಆಳುವ ಪಕ್ಷವು ಈ ಹಿಂದೆ ಇಂದಿರಾ ಗಾಂಧಿ ಕೊಲೆಯಾದಾಗ ರಾಜೀವ್ ಗಾಂಧಿ ನಾಯಕತ್ವದ ಕಾಂಗ್ರೆಸ್ ಗಳಿಸಿದ 400ಕ್ಕೂ ಮಿಕ್ಕಿ ಸ್ಥಾನಗಳ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆಯೆಂದರು. ಏಕೆಂದರೆ ಇದು ಜನಹಿತ ಹೌದೋ ಅಲ್ಲವೋ ಅಥವಾ ಜಮ್ಮು ಮತ್ತು ಕಾಶ್ಮೀರ ರಾಜ್ಯದ ತುಂಡರಿಸುವಿಕೆಯಿಂದ ಭಾರತದ ಅಖಂಡತೆಗೇನು ಲಾಭ ಎಂದು ತೀರ್ಮಾನವಾಗುವ ಬದಲು ಜನ‘ಪ್ರಿಯ’ವೆಂಬ ಖ್ಯಾತಿಗೆ ಒಳಪಟ್ಟಿದೆ.

ಬಹುಪಾಲು ಭಾರತೀಯರಿಗೆ ಸಂವಿಧಾನದ ಮತ್ತು ಸಾಂದರ್ಭಿಕ ವಿಶೇಷವಾಗಿ 35ಎ ಮತ್ತು 370ನೇ ವಿಧಿಗಳ ಕುರಿತು ಅರಿವಿಗಿಂತ ಹೆಚ್ಚು ಅಜ್ಞಾನ. ಆದರೆ ರಾಜಕೀಯ ನಿಷ್ಠೆ ಈ ಎಲ್ಲ ಅಜ್ಞಾನಗಳನ್ನು ತೊಡೆದು ಹಾಕಿ ಯೋಚನೆಯ, ಚಿಂತನೆಯ ಬದಲು ನಿರ್ಧಾರವನ್ನೇ ಆಯ್ಕೆಮಾಡುತ್ತದೆ. ಆದ್ದರಿಂದ ಬಹುಜನ ಹಿತಾಯವೂ ಅಲ್ಲ, ಬಹುಜನ ಸುಖಾಯವೂ ಅಲ್ಲ. ಆದರೆ ಬಹುಜನ ಇಷ್ಟಪಡುತ್ತಾರೆಂಬುದೇ ಮತ್ತು ಬಹುಜನರಿಗೆ ಅದು ಪ್ರಿಯವಾಗಿದೆಯೆಂಬುದೇ ಈ ಕಾನೂನಿನ ಸತ್ಯ. ಹಿತ ಮತ್ತು ಸುಖ ಎಂಬ ಪದಗಳಿಗೆ ಪರ್ಯಾಯವಾಗಿ ಇಷ್ಟ ಅಥವಾ ಪ್ರಿಯ ಎಂಬ ಪದವನ್ನು ಬಳಸಿದರೆ ಸಮಸ್ಯೆ ಮುಗಿಯಿತು. ಹೀಗೆ ಹೇಳಿದಾಗ ಈ ಮಾತುಗಳನ್ನು ಸಮರ್ಥಿಸುವ ಅಗತ್ಯವಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತದ ಇತರ ರಾಜ್ಯಗಳಿಗಿಂತ ಭಿನ್ನ ಇತಿಹಾಸ ಮತ್ತು ರಾಜಕೀಯವಿದೆ. ಪ್ರಾಯಃ ದೇಶದ ಎಲ್ಲೆಡೆ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರು ಬಹುಸಂಖ್ಯಾತರಾಗಿರುವ ಮತ್ತು ಮುಸ್ಲಿಮರೇ ಬಹುಸಂಖ್ಯಾತರಾಗಿದ್ದರೂ ಹಿಂದೂ ರಾಜಸತ್ತೆಯಿದ್ದ ರಾಜ್ಯ ಇದೊಂದೇ. ಭಾರತ ವಿಭಜನೆಯ ಆನಂತರದ ವಿಶಿಷ್ಟ ಸಂದರ್ಭದಲ್ಲಿ ಭಾರತದೊಂದಿಗೆ ವಿಲೀನವಾಗಬೇಕಾದರೆ ಕೆಲವೊಂದು ಷರತ್ತುಗಳೊಂದಿಗೆ ಸೇರಿಕೊಂಡ ರಾಜ್ಯವಿದು. ದೇಶದ ಅಖಂಡತೆಗೆ ನೆರವಾದ ಸರ್ದಾರ್ ವಲ್ಲಭಭಾಯಿ ಪಟೇಲರಂತಹವರೂ ಒಪ್ಪಿಕೊಂಡು ಒಂದು ತಾತ್ಕಾಲಿಕವಾದ ಆದರೆ ಶಾಂತಿಯುತವಾದ ಒಪ್ಪಂದದೊಂದಿಗೆ ದೇಶದ ಒಂದು ರಾಜ್ಯವಾದ ಭೂಪ್ರದೇಶ. ಇದರ ಒಂದಷ್ಟು ಭಾಗ ಪಾಕಿಸ್ತಾನದ ಪಾಲಾಯಿತು.

ಅನಂತರ ಸದಾ ಅಶಾಂತಿಯ ತವರುಮನೆಯಾದರೂ ‘ಭೂಮಿಯ ಮೇಲಣ ಸ್ವರ್ಗ’ವೆಂದು ಬಣ್ಣನೆಗೆ, ಚಿತ್ರೀಕರಣಕ್ಕೆ ಒಳಗಾದ ರಾಜ್ಯವಿದು. ಇದರ ಈಶಾನ್ಯ ಭಾಗವು ಚೀನಾಕ್ಕೆ ಲಗತ್ತಾಗಿದ್ದು ದೊಡ್ಡ ಪ್ರಮಾಣದ ಭಾಗ ಚೀನಾದ ಸ್ವಾಧೀನವಿದೆ. ಕಳೆದುಕೊಂಡ ಭೂಭಾಗ ನಮ್ಮದೆಂದು ನಾವು ಅವಿರತವಾಗಿ ಹೋರಾಡುತ್ತಲೇ ಬಂದಿದ್ದರೂ ಅದನ್ನು ಮರಳಿ ಪಡೆಯಲಾಗದ ವಾಸ್ತವ ನಮ್ಮ ಕಣ್ಣ ಮುಂದಿದೆ. ಇಬ್ಬರು ವೈರಿಗಳ ಪೈಕಿ ಕಡಿಮೆ ಕೆಚ್ಚಿನ ಪಾಕಿಸ್ತಾನವನ್ನು ನಾವು ಎದುರಿಸುತ್ತಲೇ ಬಂದಿದ್ದೇವೆ; ಒಂದು ಹಂತದಲ್ಲಿ ಪೂರ್ವ ಪಾಕಿಸ್ತಾನವನ್ನು ಸ್ವತಂತ್ರ ಬಾಂಗ್ಲಾದೇಶವನ್ನಾಗಿಸಿ ಇಂದಿರಾ ಗಾಂಧಿ ಪಾಕಿಸ್ತಾನದ ಬಲವನ್ನು ಕುಗ್ಗಿಸಿ ಅದನ್ನು ಶಾಶ್ವತ ಅಂಗಹೀನವಾಗಿಸಿದರು. ಆದರೆ ಬಲಾಢ್ಯ ಚೀನಾದೆದುರು ಈ 6-7 ದಶಕಗಳಿಂದಲೂ ನಮ್ಮದು ಮೌಖಿಕ, ರಾಜತಾಂತ್ರಿಕ ಪ್ರತಿಭಟನೆಯಾಗಷ್ಟೇ ಉಳಿದದ್ದು ವಿಪರ್ಯಾಸ.

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ದೇಶದ ಇತರ ರಾಜ್ಯಗಳಿಗಿಲ್ಲದ ಕೆಲವೊಂದು ಸ್ವಾತಂತ್ರ್ಯ ಮತ್ತು ರಿಯಾಯಿತಿಗಳಿದ್ದವು. ಹಣಕಾಸು, ರಕ್ಷಣೆ ಇಂತಹ ಕೆಲವು ಕ್ಷೇತ್ರಗಳನ್ನುಳಿದಂತೆ ಈ ರಾಜ್ಯಕ್ಕೆ ಸ್ವತಂತ್ರ ಸ್ಥಾನಮಾನಗಳನ್ನು ನೀಡಲಾಯಿತು. ಸಂಸತ್ತಿಗೆ ಇತರ ರಾಜ್ಯಗಳಿಗೆ ಅನ್ವಯಿಸುವಂತೆ ಕಾನೂನನ್ನು ರಚಿಸಬಲ್ಲ ಹಕ್ಕು ಇಲ್ಲಿ ಮೊಟಕಾಯಿತು. ದೇಶದ ಇತರೆಡೆ ಅನ್ವಯಿಸುವ ಕಾನೂನುಗಳು ತಥಾಕಥಿತವಾಗಿ ಈ ರಾಜ್ಯಕ್ಕೆ ಅನ್ವಯಿಸುವಂತಿರಲಿಲ್ಲ. ಇತರರು ಇಲ್ಲಿ ಭೂಮಿಯನ್ನು ಹೊಂದುವಂತಿರಲಿಲ್ಲ. ಇಷ್ಟೇ ಅಲ್ಲ; ಭಾರತದ ಸಂವಿಧಾನವೂ ವಿಧಿ 370 (1) (ಬಿ)ಗೊಳಪಟ್ಟು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುತ್ತಿತ್ತು. ಇದರಂತೆ ಯಾವುದೇ ಇತರ ಕಾನೂನೂ ರಾಜ್ಯದ ಒಪ್ಪಿಗೆಯಿಲ್ಲದೆ ಪ್ರವೇಶಿಸುವಂತಿರಲಿಲ್ಲ. ಆದರೆ ಇಂತಹ ಮಿತಿಗಳಿದ್ದರೂ ರಾಷ್ಟ್ರಪತಿಗಳು ಬಹಿರಂಗ ಆದೇಶದ ಮೂಲಕ ಈ ವಿಧಿಯನ್ನು ಅನೂರ್ಜಿತಗೊಳಿಸುವ (ರದ್ದು ಮಾಡುವ ಅಧಿಕಾರವಲ್ಲ) ಅಧಿಕಾರವನ್ನು ಹೊಂದಿದ್ದರು. ಇಲ್ಲೂ ಅಂತಹ ಆದೇಶಕ್ಕೆ ಪೂರ್ವದಲ್ಲಿ ರಾಜ್ಯದ ಸಂವಿಧಾನ ಪರಿಷತ್ತಿನ ಶಿಫಾರಸು ಅಗತ್ಯವಿತ್ತು. (ಇವನ್ನು ಕಾನೂನಿನ ಪರಿಧಿಯಲ್ಲಿ ಚರ್ಚಿಸಬಹುದು. ಈ ಬಗ್ಗೆ ತಾಂತ್ರಿಕವಾದ ವಿವರಣೆಯನ್ನು ನೀಡುವುದಕ್ಕೆ ಇದು ಸಂದರ್ಭವಲ್ಲ.)

ಆದರೆ ಮುಖ್ಯವಾಗಿ ಉದ್ದೇಶವು ಎಷ್ಟೇ ಘನವಾಗಿರಲಿ, ಯಾವುದೇ ರಾಜ್ಯದ ಅಸ್ತಿತ್ವವನ್ನು ಬದಲಾಯಿಸುವಾಗ, ಅದನ್ನು ತುಂಡರಿಸುವಾಗ ಆ ರಾಜ್ಯದ ಜನಮನದ ಅಭಿಮತವನ್ನು ಪಡೆಯದೆ ದೇಶದ ಜನಪ್ರತಿನಿಧಿಗಳು ಸೇರಿ ಬದಲಾಯಿಸುವುದು ಬಹುಮತವೆಂಬ ಅಧಿಕಾರದ ದುರುಪಯೋಗವಾಗದೇ? ಇದನ್ನು ಬಾಲಿವುಡ್ ಆಗಲೀ, ರಾಜಕೀಯ ಪಕ್ಷದ ಬಲಾಬಲಗಳಾಗಲೀ ಇತ್ಯರ್ಥಗೊಳಿಸಲಾರದು. ‘‘ದತ್ತುಮಕ್ಕಳಿಗೆ ಹಕ್ಕಿಲ್ಲ’’ ಎಂಬ ದುರ್ನೀತಿಯೊಂದಿಗೆ ಬ್ರಿಟನ್ ಭಾರತದ ಅನೇಕ ಅರಸೊತ್ತಿಗೆಗಳನ್ನು ಅವುಗಳ ಒಪ್ಪಿಗೆಯನ್ನು ಪಡೆಯದೇ ತೋಳ-ಕುರಿಮರಿ ನ್ಯಾಯದೊಂದಿಗೆ ಮಣ್ಣುಮುಕ್ಕಿಸಿತು. ಯಾವುದು ಆಯಾಯ ರಾಜ್ಯಕ್ಕೆ ಹಿತವೆಂಬುದು ಅವರವರೇ ತೀರ್ಮಾನಿಸಬೇಕಲ್ಲದೆ ದೊಡ್ಡ ಶಕ್ತಿಯೊಂದು ನಿರ್ಧರಿಸಲಾಗದು. ಒಮ್ಮೆ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಅದರ ಇತಿ-ಮಿತಿಗಳ ಅರಿವಿಲ್ಲದೆ ತಮ್ಮ ನಿಲುವನ್ನು ಹೇರುವುದು ಕೇಂದ್ರಕ್ಕೆ ಭೂಷಣವಲ್ಲ. ಇದು ದೇಶಭಕ್ತಿಯ ಪ್ರಶ್ನೆಯಲ್ಲ. ಸರಿ-ತಪ್ಪುಗಳ ವಿಶ್ಲೇಷಣೆ.

ಅಷ್ಟೇ ಅಲ್ಲ, ಇಂತಹ ಜನಹಿತ ಕಾನೂನನ್ನು ಜಾರಿಗೊಳಿಸುವ ಮೊದಲು ಅಮರನಾಥ ಯಾತ್ರಿಕರನ್ನು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಹೊರರಾಜ್ಯದ ವಿದ್ಯಾರ್ಥಿಗಳನ್ನು ಹೊರಕಳಿಸುವ, ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರನ್ನು ಗೃಹಬಂಧನಕ್ಕೊಳಪಡಿಸುವ, 36 ಸಾವಿರಕ್ಕೂ ಹೆಚ್ಚು (ಇದು ಕೆಲವು ದೇಶಗಳ ಸೇನಾಪಡೆಗಿಂತಲೂ ಹೆಚ್ಚಿನ ಸಂಖ್ಯೆ!) ಅರೆ ಮತ್ತು ಪೂರ್ಣ ಸೇನಾಪಡೆಯನ್ನು ನಿಯಮಿಸುವ, ಕರ್ಫ್ಯೂವನ್ನು ಹೇರುವ ಮತ್ತು ಭಯಭೀತ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿತ್ತೇ? ದೇವರ ಪೂಜೆಗೆ ನರಬಲಿಕೊಟ್ಟ ಹಾಗಿರುವ ಈ ರೌದ್ರನರ್ತನದಿಂದ ಶಾಂತಿ ಲಭಿಸುವುದಾದರೆ ಶ್ಮಶಾನದಲ್ಲಿರುವಷ್ಟು ಶಾಂತಿ ಎಲ್ಲೂ ಲಭಿಸದು. ತುರ್ತು ಪರಿಸ್ಥಿತಿಗೆ ಭಿನ್ನವಾಗಿರಲಿಲ್ಲ ಈ ನಡೆ.

ಖ್ಯಾತ ಕಾನೂನು ಪಂಡಿತರೂ ಮಾಜೀ ಅಟಾರ್ನಿ ಜನರಲ್‌ರೂ ಆಗಿರುವ ಸೋಲಿ ಸೊರಾಬ್ಜಿಯವರು 370ನೇ ವಿಧಿಯನ್ನು ಅನೂರ್ಜಿತಗೊಳಿಸಿದ್ದು ಒಂದು ರಾಜಕೀಯ ನಡೆಯೇ ಹೊರತು ಬುದ್ಧಿವಂತ ನಡೆಯಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಇದರಲ್ಲಿ ಯಾವ ಕ್ರಾಂತಿಕಾರಿ ಕ್ರಿಯೆಯೂ ನಡೆದಿಲ್ಲವೆಂದು ಹೇಳುತ್ತ ಯಾವುದೇ ಚಾರಿತ್ರಿಕ ಹೆಜ್ಜೆಯೂ ಒಂದು ತಪ್ಪುಹೆಜ್ಜೆಯಾಗಬಹುದು ಎಂದಿದ್ದಾರೆ. ಉಮರ್ ಅಬ್ದುಲ್ಲ್ಲಾ, ಮೆಹಬೂಬ ಮುಫ್ತಿಯಂತಹ ನಾಯಕರನ್ನು ಬಂಧಿಸಿದ್ದು ಅನಗತ್ಯ ಮತ್ತು ಅನಪೇಕ್ಷಿತವೆಂದಿದ್ದಾರೆ.

ಶಾಂತಿಗಾಗಿ ಹಿರೋಶಿಮಾ-ನಾಗಸಾಕಿಗೆ ಬಾಂಬು ದಾಳಿ ನಡೆಸಿದೆನೆಂದು ಅಮೆರಿಕ ಸಮರ್ಥಿಸಿಕೊಳ್ಳುತ್ತಿದೆ. ಎಲ್ಲ ಹಿಂಸೆಗಳನ್ನೂ ಶಾಂತಿಯ ಮಹೋದ್ದೇಶದ ಮೊದಲ ಹೆಜ್ಜೆಗಳೆಂದು ಗುರುತಿಸಲಾಗಿದೆ; ಇದನ್ನೂ. ನಿರ್ಜನ ತಾಣವು ಭೂಮಿಯ ಮೇಲಣ ಸ್ವರ್ಗವಾಗುವುದಾದರೆ ಕಾಶ್ಮೀರವೂ ಶಾಶ್ವತವಾಗಿ ಸ್ವರ್ಗವೆನಿಸಬಹುದು.

ಇಂತಹ ಸಂದರ್ಭದಲ್ಲಿ ಹಿಟ್ಲರ್, ಮುಸೊಲಿನಿ, ಸ್ಟಾಲಿನ್‌ಗಳನ್ನೂ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮಕರಣಗೊಳಿಸಲಾಗಿತ್ತೆನ್ನುವುದು ತಪ್ಪಾಗಿ ದ್ದರೂ ವಿಚಿತ್ರವಾಗಿ ಕಾಣಿಸುವುದಿಲ್ಲ. ಪ್ರಾಯಃ ಇದಕ್ಕಾಗಿಯೇ ಗಾಂಧಿಯ ‘‘ದಾರಿಯೂ ಗುರಿಯಷ್ಟೇ ದೊಡ್ಡದಾಗಿರಬೇಕು’’ ಎಂಬ ಅರಿವು ಶ್ರೇಷ್ಠವಾಗಿ ಕಾಣಿಸುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top