ಭಾರತೀಯ ಚಲನಚಿತ್ರಗಳಲ್ಲಿ ಅಸ್ಪೃಶ್ಯತೆ- ಒಂದು ನೋಟ | Vartha Bharati- ವಾರ್ತಾ ಭಾರತಿ

ಭಾರತೀಯ ಚಲನಚಿತ್ರಗಳಲ್ಲಿ ಅಸ್ಪೃಶ್ಯತೆ- ಒಂದು ನೋಟ

ಭಾಗ-2

ಭಾರತೀಯ ಚಿತ್ರಗಳು ತಮ್ಮೆಲ್ಲ ಶಕ್ತಿಯನ್ನು ಕೇಂದ್ರೀಕರಿಸಿದ್ದು ಕತೆಯನ್ನು ರಂಜನೀಯವಾಗಿ ಹೇಳುವ ವಿಧಾನಗಳಿಗೆ. ರಂಜನೆಯೇ ಪ್ರಧಾನವಾಗುವುದರಿಂದ ಸಾಮಾಜಿಕ ಸಮಸ್ಯೆಗಳು ಚಿತ್ರಕತೆಯಲ್ಲಿ ನುಸುಳಿದರೂ, ಅವು ಅಂಚಿಗೆ ದೂಡಿಸಿಕೊಂಡುಬಿಡುತ್ತವೆ. ಅದರಲ್ಲೂ ‘ಜಾತಿ’ ಎಂಬ ಸಾಮಾಜಿಕ ವಾಸ್ತವ ಮತ್ತು ಅದು ಹುಟ್ಟುಹಾಕುವ ಸಮಸ್ಯೆಗಳ ವಿವಿಧ ಮುಖಗಳು ಜನಪ್ರಿಯ ಸಿನೆಮಾಗಳಲ್ಲಿ ಮುನ್ನೆಲೆಯಲ್ಲಿ ನಿರೂಪಣೆಗೊಂಡಿರುವ ಪ್ರಕರಣಗಳು ವಿರಳಾತಿ ವಿರಳ. ಇದು ಭಾರತೀಯ ಭಾಷೆಯ ಎಲ್ಲ ಮುಖ್ಯವಾಹಿನಿಯ ಸಿನೆಮಾಗಳಿಗೂ ಅನ್ವಯಿಸುವ ಅಭಿಪ್ರಾಯ.

ಸ್ವಾತಂತ್ರ್ಯಪೂರ್ವದಲ್ಲಿ ಹಿಂದಿ, ಬಂಗಾಲಿ ಮತ್ತು ಇತರ ಭಾಷಾಚಿತ್ರಗಳಲ್ಲಿಯೂ ಅಸ್ಪಶ್ಯ ಜನಾಂಗದ ಕತೆಯನ್ನು ಆಧರಿಸಿದ ಚಿತ್ರಗಳು ತೆರೆಕಂಡವು. ಅವುಗಳ ಸಂಕ್ಷಿಪ್ತ ನೋಟ ಇಲ್ಲಿದೆ. ಪ್ರಸಿದ್ಧ ನಿರ್ಮಾಣ ಸಂಸ್ಥೆ ಬಾಂಬೇ ಟಾಕೀಸ್ 1936ರಲ್ಲಿ ನಿರ್ಮಿಸಿದ ‘ಅಚುತ್‌ಕನ್ಯಾ’ (ಅಸ್ಪಶ್ಯಕನ್ಯೆ) ಹಿಂದಿ ಚಿತ್ರವೇ ಅಸ್ಪಶ್ಯರ ಸಮಸ್ಯೆಯನ್ನು ಮೊದಲಬಾರಿಗೆ ನಿರೂಪಿಸಿದ ಅಧಿಕೃತ ಚಿತ್ರ ಎನ್ನಬಹುದು. ಸುಧಾರಣಾಯುಗದಲ್ಲಿ ನಿರ್ಮಾಣವಾದ ಈ ಚಿತ್ರ ಅಸ್ಪಶ್ಯ ಯುವತಿಯೊಬ್ಬಳ ಪ್ರಣಯಕತೆಯನ್ನಾಧರಿಸಿದೆ. ಅಸ್ಪಶ್ಯ ಹುಡುಗಿ ಕಸ್ತೂರಿ (ದೇವಿಕಾರಾಣಿ) ಮತ್ತು ಬ್ರಾಹ್ಮಣ ಹುಡುಗ ಪ್ರತಾಪ್ (ಅಶೋಕ್ ಕುಮಾರ್) ನಡುವಿನ ಪ್ರಣಯ ಸಮಾಜದಲ್ಲಿ ಎಬ್ಬಿಸುವ ಕಲ್ಲೋಲ ಮತ್ತು ಪ್ರೇಮಿಗಳು ದುರಂತದಲ್ಲಿ ಅಂತ್ಯವಾಗುವ ಕತೆಯಿದ್ದ ಈ ಚಿತ್ರ ಭಾರೀ ಯಶಸ್ಸು ಕಂಡಿತು. ಈ ಚಿತವು ವಾಣಿಜ್ಯ ಚಿತ್ರಗಳ ಎಲ್ಲ ಅಂಶಗಳನ್ನು ಒಳಗೊಂಡಿದ್ದರೂ (ಹಾಡು, ನೃತ್ಯ, ನುಗ್ಗಿ ಬರುವ ಹಾಸ್ಯದ ದೃಶ್ಯಗಳು, ಉದ್ದುದ್ದ ಸಂಭಾಷಣೆ) ಅದು ಆ ಕಾಲಕ್ಕೆ ಎತ್ತಿಕೊಂಡ ವಿಷಯ ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು.
ಬಿಮಲ್‌ರಾಯ್ ಅವರ ‘ಸುಜಾತ’ (1959) ಚಿತ್ರ ಸಹ ಅನಾಥ ಹರಿಜನ ಕನ್ಯೆಯೊಬ್ಬಳು ಬ್ರಾಹ್ಮಣ ಕುಟುಂಬದ ಆಶ್ರಯದಲ್ಲಿ ಬೆಳೆದು ಬ್ರಾಹ್ಮಣ ಯುವಕನನ್ನು ಪ್ರೀತಿಸುವ ಕತೆ. ಅಸ್ಪಶ್ಯತೆಯ ಭಿತ್ತಿ ಇದ್ದರೂ ಪ್ರಣಯಕತೆಯೇ ಪ್ರಧಾನವಾಗಿ ಬಿಮಲ್‌ರಾಯ್ ಅವರ ಕಾವ್ಯಾತ್ಮಕ ನಿರೂಪಣೆಯಲ್ಲಿ ಪ್ರೇಮಕತೆ ಮಾತ್ರ ಮನಸ್ಸನ್ನು ಗಾಢವಾಗಿ ತಟ್ಟುತ್ತದೆ. ಆದರೆ ಜಾತಿ ಸಮಸ್ಯೆ ಪ್ರೇಮಿಗಳಿಗೆ ಎದುರಾಗುವ ಅಡ್ಡಿಯೇ (ದಾಟಬಹುದಾದ) ಹೊರತು ಸಾಮಾಜಿಕ ಸಮಸ್ಯೆಯಾಗಿ ಬಿಂಬಿತವಾಗಿಲ್ಲ. ತಾನು ಪ್ರೀತಿಸಿದ ಯುವಕನನ್ನೇ ಪ್ರೀತಿಸಿದ ಮತ್ತೋರ್ವ ಹುಡುಗಿಗೆ ರಕ್ತದಾನ ಮಾಡಿದ ನಂತರವೇ ಸುಧಾರಣೆಯ ಫಲಿತಾಂಶ ನಿಜವಾಗುವಂಥ ಭ್ರಾಮಕ ಪರಿಹಾರ ಈ ಚಿತ್ರದಲ್ಲಿದೆ.
ಮಲೆಯಾಳಂ ಭಾಷೆಯಲ್ಲಿ ತಯಾರಾದ ‘ನೀಲಕುಯಿಲ್’ (1954) ಅಸ್ಪಶ್ಯತೆಯ ಸಮಸ್ಯೆಯನ್ನು ವೈಯಕ್ತಿಕ ನೆಲೆಯಲ್ಲಿ ಗಾಢವಾಗಿ ನಿರೂಪಿಸಿದ ಚಿತ್ರ. ಪಿ. ಭಾಸ್ಕರನ್ ನಿರ್ದೇಶಿಸಿದ ಈ ಚಿತ್ರದಲ್ಲಿ ಸತ್ತ ಹರಿಜನ ಮಹಿಳೆಯೊಬ್ಬಳ ಮಗುವನ್ನು ಮೇಲ್ಜಾತಿಯ ಪೋಸ್ಟ್ ಮ್ಯಾನ್ ಪೋಷಿಸುವ ಕಾರ್ಯ ಸಮಾಜದಲ್ಲಿ ತಳಮಳ ಹುಟ್ಟುಹಾಕುತ್ತದೆ. ಕೊನೆಗೆ ಆ ಹರಿಜನ ಮಹಿಳೆಗೆ ಹುಟ್ಟಿದ ಮಗು ತನ್ನ ಅಕ್ರಮ ಸಂತಾನವೆಂದು ಮತ್ತೊಬ್ಬ ಮೇಲ್ಜಾತಿಯ ಪುರುಷ ಒಪ್ಪಿಕೊಂಡು ಮಗುವನ್ನು ಸ್ವೀಕರಿಸುವ ವಿಶಿಷ್ಟ ಕತೆಯ ಈ ಚಿತ್ರ ವಾಸ್ತವದ ನಿರೂಪಣೆಯಿಂದ ಗಮನ ಸೆಳೆದಿತ್ತು.
ಅರವತ್ತರ ದಶಕದಲ್ಲಿ ಹೆಚ್ಚು ಕಡಿಮೆ ಎಲ್ಲ ಸಮಸ್ಯೆಗಳಿಗೂ ರೊಮ್ಯಾಂಟಿಕ್ ಉತ್ತರಗಳನ್ನು ಹುಡುಕುತ್ತಿದ್ದ ಚಿತ್ರರಂಗ ಎಪ್ಪತ್ತರ ದಶಕದಿಂದಾಚೆಗೆ ಅಸ್ಪಶ್ಯತೆಯ ಬಗ್ಗೆ ಗಂಭೀರವಾದ ಚಿಂತನೆಯಲ್ಲಿ ತೊಡಗಿಸಿಕೊಂಡಿತು. ಬದಲಾದ ಸಾಮಾಜಿಕ ಜಾಗೃತಿ ಮತ್ತು ಸೈದ್ಧಾಂತಿಕ ನೆಲೆಯಿಂದ ವಸ್ತುವನ್ನು ನಿರೂಪಿಸುವ ಕ್ರಮ ಹಾಗೂ ಹೊಸ ನಿರ್ದೇಶಕರ ಆಗಮನದಿಂದ ಇದು ಸಾಧ್ಯವಾಯಿತೆನಿಸುತ್ತದೆ. ಕೇತನ್ ಮೆಹ್ತಾರವರ ‘ಅಂಧೇರ್ ನಗರಿ’ (‘ಭಾವ್ನಿ ಭಾವೈ’) ಚಿತ್ರಗಳು ಅಸ್ಪಶ್ಯತೆಯ ಕ್ರೌರ್ಯವನ್ನು ಗಾಢವಾಗಿ ನಿರೂಪಿಸಿದ ಚಿತ್ರಗಳಾದರೆ ಪ್ರಕಾಶ್‌ಝಾ ಅವರ ‘ದಾಮೂಲ್’ ಬಿಹಾರದ ಹರಿಜನರು ರಾಜಕೀಯ ಪಗಡೆಯ ದಾಳಗಳಾಗಿ ಬಳಕೆಯಾಗುವ ದುರಂತವನ್ನು ಕಟ್ಟಿಕೊಡುವ ಚಿತ್ರ. ಶ್ಯಾಮ್ ಬೆನೆಗಲ್‌ರವರ ‘ಅಂಕುರ್’, ‘ಮಂಥನ್’, ಗೌತಮ್ ಘೋಷ್‌ರವರ ‘ಪಾರ್’ ದಲಿತ ಬದುಕಿನ ವಿವಿಧ ಮುಖಗಳನ್ನು ಅನಾವರಣಗೊಳಿಸಿದ ಚಿತ್ರಗಳಲ್ಲಿ ಕೆಲವು.

ಸತ್ಯಜಿತ್‌ರೇ ಅವರು ದೂರದರ್ಶನಕ್ಕಾಗಿ ನಿರ್ದೇಶಿಸಿದ 52 ನಿಮಿಷಗಳ ಚಿತ್ರ ‘ಸದ್ಗತಿ’ (1982) ದಲಿತ ಸಮಾಜದ ಧಾರ್ಮಿಕ ಮತ್ತು ಜಾತೀಯ ಶೋಷಣೆಯ ಕ್ರೌರ್ಯಗಳನ್ನು ತೆರೆದಿಟ್ಟ ಚಿತ್ರ. ಮುನ್ಷಿ ಪ್ರೇಮಚಂದ್‌ರವರ ಸಣ್ಣಕತೆಯನ್ನಾಧರಿಸಿದ ಈ ಚಿತ್ರವು ದುಖಿ ಎಂಬ ಅಸ್ಪಶ್ಯ ತನ್ನ ಮಗಳ ಮದುವೆಗೆ ಶುಭ ದಿನವನ್ನು ಗೊತ್ತುಪಡಿಸಲು ಬ್ರಾಹ್ಮಣನ ಮನೆಗೆ ಹೋಗಿ ಅವರ ಮನೆ ಕೆಲಸ ಮಾಡುತ್ತಲೇ ಸತ್ತುಹೋಗುತ್ತಾನೆ. ಪೊಲೀಸ್ ತನಿಖೆಗೆ ಹೆದರಿ ಅಸ್ಪಶ್ಯರೂ ಶವ ಎತ್ತುವುದಿಲ್ಲ. ದಾರಿಗೆ ಅಡ್ಡವಾಗಿ ಬಿದ್ದ ಶವದ ಕಾಲಿಗೆ ಹಗ್ಗ ಕಟ್ಟಿ ಊರಿಂದಾಚೆಗೆ ಎಳೆದು ಬಿಸಾಡಿದ ಬ್ರಾಹ್ಮಣ ದಾರಿಯನ್ನು ಪವಿತ್ರಗೊಳಿಸುವ ಕ್ರಿಯೆಯಲ್ಲಿ ಚಿತ್ರ ಮುಗಿಯುತ್ತದೆ. ಒಂದು ಘಟನೆಯ ಮೂಲಕವೇ ಇಡೀ ದಲಿತ ಬದುಕಿನ ಮೇಲಿನ ಶೋಷಣೆಯನ್ನು ಪರಿಣಾಮಕಾರಿಯಾಗಿ ಹೇಳಿದ ಚಿತ್ರವಿದು.
ಸ್ವಾತಂತ್ರ್ಯಾನಂತರ ನಿರ್ಮಾಣಗೊಂಡ ಮಹೋನ್ನತ ಚಾರಿತ್ರಿಕ ಚಿತ್ರವೆಂದರೆ ಜಬ್ಬಾರ್ ಪಟೇಲ್‌ರವರ ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್’. ಅನೇಕ ಸಾಮಾಜಿಕ ಮತ್ತು ರಾಜಕೀಯ ಪರಿವರ್ತನೆಗಳು ಜಗತ್ತಿನಾದ್ಯಂತ ಸಂಭವಿಸುತ್ತಿದ್ದ ಅವಧಿಯಲ್ಲಿ ಬಾಬಾ ಸಾಹೇಬರವರ ಬದುಕಿನ (1891-1956) ಹಾದಿಯನ್ನು ಹಿಡಿಯುವ ಅಪೂರ್ವ ಪ್ರಯತ್ನ ಇಲ್ಲಿದೆ. ಈ ಅವಧಿಯಲ್ಲಿ ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ರಾಜಕೀಯ ಆಂದೋಲನ ಒಂದೆಡೆ ಸಂಭವಿಸುತ್ತಿದ್ದರೆ ಭಾರತೀಯ ಸಮಾಜದ ಜಾತಿ ಅಸಮಾನತೆಯ ವಿರುದ್ಧ ಅಂಬೇಡ್ಕರ್ ಹುಟ್ಟುಹಾಕಿದ ಸಂಘರ್ಷ ಅದೇ ವೇಳೆ ಘಟಿಸುತ್ತಿತ್ತು. ಮೇಲ್ಜಾತಿಯ ಹಿಂದೂ ಸಮಾಜದ ಬಂಧನಕಾರಿ ವ್ಯವಸ್ಥೆಯ ವಿರುದ್ಧ ಏಳುಕೋಟಿ ದಲಿತರನ್ನು ಅಂಬೇಡ್ಕರ್ ಮುನ್ನಡೆಸಿದ ಹೋರಾಟದ ಮಹತ್ವವನ್ನು ಪಟೇಲ್‌ರವರು ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಸಾಮಾಜಿಕ ಸಂಘರ್ಷವೆನ್ನುವುದು ಮಾನವತೆಯನ್ನು ಅದರ ಎಲ್ಲ ಅರ್ಥಸಾಧ್ಯತೆಗಳೊಂದಿಗೆ ಎತ್ತಿ ಹಿಡಿಯುವ ವಿಧಾನವೆಂದು ನಂಬಿದ್ದ ಅಂಬೇಡ್ಕರ್‌ರವರ ಸಿದ್ಧಾಂತಗಳನ್ನು ನಿರೂಪಿಸು ವುದರಲ್ಲಿ ನಿರ್ದೇಶಕ ಜಬ್ಬಾರ್ ಪಟೇಲ್ ಯಶಸ್ವಿಯಾಗಿದ್ದಾರೆ.
ಕನ್ನಡದಲ್ಲಿಯೂ ‘ಬಾಲಕ ಅಂಬೇಡ್ಕರ್’ ಮತ್ತು ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್’ ಎಂಬ ಚಿತ್ರಗಳು ಬಂದಿವೆ. ಮೊದಲನೆಯ ಚಿತ್ರದಲ್ಲಿ ಅಂಬೇಡ್ಕರ್‌ರವರು ಶಿಕ್ಷಣ ಕಲಿಕೆಯಲ್ಲಿ ತೋರಿದ ಆಸಕ್ತಿಯನ್ನು ನಿರೂಪಿಸುವ ಪ್ರಯತ್ನವಿದೆ. ಅತ್ತ ಸಾಕ್ಷ್ಯಚಿತ್ರವೂ ಆಗದೆ ಇತ್ತ ಕಥಾ ನಿರೂಪಣೆಯೂ ಆಗದೆ, ಬರೀ ಪುಸ್ತಕ ಹಿಡಿದು ಓದುವ ದೃಶ್ಯಗಳನ್ನೇ ತುರುಕಿರುವ ಪ್ರಯತ್ನದಲ್ಲಿ ಅಂಬೇಡ್ಕರ್ ವ್ಯಕ್ತಿತ್ವ ಹರಳುಗಟ್ಟುವುದೇ ಇಲ್ಲ. ಇನ್ನು ಎರಡನೆಯ ಚಿತ್ರ ಅಂಬೇಡ್ಕರ್‌ರವರನ್ನು ಒಬ್ಬ ಪವಾಡ ಪುರುಷನಂತೆ ವಾಚ್ಯಗೊಳಿಸಿ ಚಿತ್ರಿಸಿದ್ದು, ಎಲ್ಲೂ ಸಾಮಾಜಿಕ ಸಮಸ್ಯೆಗಳನ್ನು ನಿರೂಪಿಸುವುದೇ ಇಲ್ಲ.

ಕನ್ನಡದಲ್ಲಿ ಭಕ್ತಿ ಚಿತ್ರಗಳನ್ನು ಹೊರತುಪಡಿಸಿ ಅಸ್ಪಶ್ಯರ ಬದುಕನ್ನು ನಿರೂಪಿಸಿದ ಮೊದಲ ಚಿತ್ರ ಎಂದರೆ ‘ಭೂದಾನ’. 1962ರಲ್ಲಿ ತೆರೆಕಂಡ ಈ ಕನ್ನಡ ಚಿತ್ರವು ‘ಚೋಮನ ದುಡಿ’ಯ ಕತೆ ಮತ್ತು ವಿನೋಬ ಭಾವೆಯವರ ಭೂದಾನ ಚಳವಳಿಯ ಹಿನ್ನೆಲೆಯಲ್ಲಿ ಸ್ವಾತಂತ್ರ್ಯನಂತರದ ಹರಿಜನ ಕುಟುಂಬದ ಕತೆಯಾಗಿತ್ತು. ಡಾ. ಶಿವರಾಮ ಕಾರಂತರು 1930ರ ಆದಿಯಲ್ಲಿ ಬರೆದ ಚೋಮನ ಕತೆಯನ್ನು ಅಯ್ಯರ್ ಅವರು 1950ರ ದಶಕದಲ್ಲಿ ದಾಸಣ್ಣನ ಕಥೆಯಾಗಿ ಹಲವಾರು ಬದಲಾವಣೆ ಮೂಲಕ ಮಾರ್ಪಡಿಸಿದ್ದಾರೆ. ಮೂಲದಲ್ಲಿ ಚೋಮನಿಗೆ ಸಿಗದ ಭೂಮಿ ಈ ಚಿತ್ರದ ದಾಸಣ್ಣನಿಗೆ ವಿನೋಭಾಭಾವೆಯವರ ಭೂದಾನ ಆಂದೋಲನದಿಂದ ದೊರೆಯುತ್ತದೆ. ಮೇಲುಜಾತಿಯವರ ಹುನ್ನಾರದಿಂದ ಸಾಲಗಾರನಾಗಿ ಪಡೆದ ಜಮೀನನ್ನು ಕಳೆದುಕೊಂಡು ಹುಚ್ಚನಾದ ದಾಸಣ್ಣನಿಗೆ ಮತ್ತೆ ನ್ಯಾಯ ಸಿಕ್ಕಿ ಚಿತ್ರ ಸುಖಾಂತ್ಯ ಕಾಣುತ್ತದೆ.
ಆದರೆ ಇಲ್ಲಿ ದಾಸಣ್ಣ ಅಸ್ಪಶ್ಯನೆಂಬುದನ್ನು ನಿರ್ದೇಶಕರು ಒಂದೆರೆಡು ಸನ್ನಿವೇಶಗಳಲ್ಲಿ ಉಲ್ಲೇಖಿಸುತ್ತಾರೆಯೇ ಹೊರತು ಗಾಢವಾಗಿ ನಿರೂಪಿಸುವುದಿಲ್ಲ. ಅವನ ಬದುಕು, ಬದುಕಿನ ಶೈಲಿ, ಜೀವಿಸುವ ಪರಿಸರ-ಯಾವುದೂ ಅಸ್ಪಶ್ಯರ ಜೀವನವನ್ನು ಪ್ರತಿನಿಧಿಸುವುದಿಲ್ಲ. ಹಾಗಾಗಿ ‘ಭೂದಾನ’ ಅಸ್ಪಶ್ಯರ ಬದುಕಿಗೆ ಸಂಬಂಧಿಸಿದ ಜೀತ, ಭೂಮಿ ಒಡೆತನ, ಮತಾಂತರ ಮುಂತಾದ ಸಮಸ್ಯೆಗಳನ್ನು ಕುರಿತ ಪ್ರಯತ್ನವೇ ಹೊರತು ಸಾಮಾಜಿಕ ಸಮಸ್ಯೆಯೊಂದನ್ನು ಅದರ ಎಲ್ಲ ಆಯಾಮಗಳಲ್ಲಿ ಕಟ್ಟಿಕೊಡುವುದಿಲ್ಲ.
ತಮಿಳಿನಲ್ಲಿ ಬಂದ ‘ಭಕ್ತಚೇತ’ ಸಂಪ್ರದಾಯ ವಿರೋಧಿ ಚಿತ್ರವೆಂದು ಖ್ಯಾತವಾಗಿದ್ದರೂ ಕನ್ನಡದ ಶಂಕರ್‌ಸಿಂಗ್ ಅದನ್ನು ಮತ್ತೆ ನಿರ್ಮಿಸಿದರು. ಚಪ್ಪಲಿ ಹೊಲಿಯುವ ಕಾಯಕದ ಚೇತನೆಂಬ ಹರಿಭಕ್ತನೊಬ್ಬನು ಮಾನವ ನಿರ್ಮಿತ ಕಟ್ಟುಪಾಡುಗಳು ತಂದೊಡ್ಡುವ ಸಮಸ್ಯೆಗಳಿಗೆ ಸಿಲುಕಿ ಕೊನೆಗೆ ಹರಿಯ ಕರುಣೆಯಿಂದ ಲೋಕ ಮನ್ನಣೆ ಗಳಿಸಿಕೊಳ್ಳುವುದೇ ಚಿತ್ರದ ಕಥಾವಸ್ತು. ಚಿತ್ರಕತೆ ಮತ್ತು ಸಂಭಾಷಣೆ ಬರೆದಿರುವ ಹುಣಸೂರು ಕೃಷ್ಣಮೂರ್ತಿ ಚೇತನನ್ನು ಸಾಮಾಜಿಕ ಅನಿಷ್ಟಗಳನ್ನು ಹಾಗೆಯೇ ಸ್ವೀಕರಿಸಿ ಮನ ಗೆಲ್ಲುವ ಭಕ್ತನಂತೆ ರೂಪಿಸಿಲ್ಲ. ತನ್ನ ಸಹನೆ ಮುಗಿದ ನಂತರ ಆತ ಪ್ರಭುತ್ವಕ್ಕೆ ಸವಾಲೆಸೆಯುತ್ತಾನೆ. ಬ್ರಾಹ್ಮಣ್ಯ ಮತ್ತು ಪ್ರಭುತ್ವ ಹೇರಿರುವ ಸಂಕಲೆಗಳ ಬಗ್ಗೆ ಸ್ಪಷ್ಟ ಮಾತಿನಲ್ಲೇ ಪ್ರತಿಭಟಿಸುತ್ತಾನೆ. ಸಂಪ್ರದಾಯ ಉಲ್ಲಂಘನೆಯು ನೀಡುವ ಶಿಕ್ಷೆಯ ಅರಿವಿದ್ದೂ ಚೇತ ಸ್ಫೋಟಿಸುತ್ತಾನೆ. ಚಿತ್ರದ ಕೊನೆಯ ಭಾಗವಂತೂ ಚೇತನ ಬಂಡಾಯಕ್ಕೆ ಸಂಬಂಧಿಸಿದ್ದಾಗಿದೆ. ಆರಂಭದಲ್ಲಿ ಮುಟ್ಟಬೇಡಿ, ನಾನು ಹೊಲೆಯ ಎಂದು ತಾನೇ ದೂರ ಸರಿಯುವ ಚೇತ ಕೊನೆಯಲ್ಲಿ (ನಾನು) ‘‘ಕೀಳು ಕುಲದವನಲ್ಲವೇ? ಭಗವಂತನ ಅನುಗ್ರಹವನ್ನು ಮೇಲ್ಜಾತಿಯವರು ಸಹಿಸಲಾರರು’’ ಎಂದು ಕಪಾಳಕ್ಕೆ ಹೊಡೆಯುವಂತೆ ತಿರುಗೇಟು ನೀಡುತ್ತಾನೆ. ‘‘ಹೀನ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಉತ್ತಮನಾಗಲು ಯತ್ನಿಸಬಾರದೇ?’’ ಎಂದು ಸಾಮಾಜಿಕ ಕಟ್ಟುಪಾಡುಗಳನ್ನು ಪ್ರಶ್ನಿಸುತ್ತಾನೆ. ಇದಲ್ಲದೆ ಚೇತನ ಹೆಂಡತಿಯೂ ರಾಜ ಮತ್ತು ಪುರೋಹಿತರ ವಿರುದ್ಧ ದನಿಯೆತ್ತುತ್ತಾಳೆ. ‘‘ನಿರಪರಾಧಿಗೆ ಶಿಕ್ಷೆ ವಿಧಿಸುವ ರಾಜನನ್ನು ದೊರೆಯೆನ್ನಬೇಕೋ? ಭೂಮಿಗೆ ಹೊರೆಯೆನ್ನಬೇಕೋ?’’ ಎಂದು ಸಿಡಿದು ನಿಲ್ಲುತ್ತಾಳೆ. ಮುಖ್ಯವಾಗಿ ಹೀನ ಜಾತಿಯವರು ಉತ್ತಮ ಜಾತಿಯವರ ಕಟ್ಟಳೆಗಳನ್ನು ಅನುಸರಿಸಿದರೆ ಅದು ಪ್ರಭುತ್ವ ಮತ್ತು ಪುರೋಹಿತಶಾಹಿಯ ವಿರುದ್ಧದ ವಿಪ್ಲವವೆಂದು ಸಂಪ್ರದಾಯ ಸಮಾಜ ಪರಿಭಾವಿಸಿದ್ದನ್ನು ಈ ಚಿತ್ರ ಸೂಚ್ಯವಾಗಿ ಹೇಳಲು ಪ್ರಯತ್ನಿಸಿದೆ. ಅಂಥ ವಿಪ್ಲವ ಅಗ್ನಿಯು ಕಿಡಿಯಾಗಿರುವಾಗಲೇ ನಂದಿಸುವುದು ರಾಜನ ಕರ್ತವ್ಯವೆಂಬಂತೆ ಪುರೋಹಿತಶಾಹಿ ಹೀನಕುಲದ ಭಕ್ತನ ವಿಕಾಸವನ್ನು ತಡೆಯಲೆತ್ನಿಸುತ್ತದೆ.
(ಮುಂದುವರಿಯುವುದು)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top