ಎನ್‌ಆರ್‌ಸಿ ಎಂಬ ಕತ್ತಿ ಹಾಗೂ ಸಿಎಬಿ ಎಂಬ ತ್ರಿಶೂಲ

ಅಸ್ಸಾಮಿನಂತಹ ಅತ್ಯಂತ ಹಿಂದುಳಿದ ಹಾಗೂ ಅನಕ್ಷರಸ್ಥ ರಾಜ್ಯದಲ್ಲಿ ಸಾಕಷ್ಟು ಮೂಲನಿವಾಸಿಗಳ ಹಾಗೂ 1971ಕ್ಕೆ ಮುಂಚೆ ಅಸ್ಸಾಮಿಗೆ ಬಂದ ಬಡ-ದಲಿತ-ಶೂದ್ರರ ಬಳಿ ಶಾಲೆ, ಭೂಮಿ, ಬ್ಯಾಂಕ್, ವಿಮೆ ಇತ್ಯಾದಿ ಸರಕಾರ ಕೇಳುವ ಯಾವುದೇ ದಾಖಲಾತಿಗಳು ಇಲ್ಲ. ಅದರಲ್ಲೂ ಮಹಿಳೆಯರು ಶಾಲೆಗೆ ಹೋಗದೆ, ಚಿಕ್ಕಂದಿನಲ್ಲೇ ಮದುವೆಯಾಗಿ ಗಂಡನ ಮನೆಗೆ ಹೋಗಿಬಿಡುವುದರಿಂದ, ಅವರ ಹೆಸರಲ್ಲಿ ಭೂಮಿಯಾಗಲೀ, ಬ್ಯಾಂಕ್ ಖಾತೆಯಾಗಲೀ, ವಿಮೆಯಾಗಲೀ ಇರುವುದಿಲ್ಲವಾದ್ದರಿಂದ ಮಹಿಳೆಯರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿಬಿಟ್ಟಿದೆ. ಇದರ ಜೊತೆಗೆ ಹೆಸರನ್ನು ಬರೆಸುವುದರಲ್ಲಿ ಮತ್ತು ಬರೆದುಕೊಳ್ಳುವುದರಲ್ಲಿ ಆಗುವ ಅಲ್ಪಸ್ವಲ್ಪ ತಪ್ಪುಗಳೂ ಸಹ ಇದ್ದಕ್ಕಿದ್ದಂತೆ ಅವರನ್ನು ವಿದೇಶಿಯರನ್ನಾಗಿ ಮಾಡಿಬಿಡುತ್ತಿದೆ.


ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿರುವ ಬಿಜೆಪಿ ಮತ್ತು ಸಂಘಪರಿವಾರವು ತನ್ನ ಬ್ರಾಹ್ಮಣೀಯ ಆಶಯದ ವಿರೋಧಿಗಳಾದ ದಲಿತರನ್ನು, ಆದಿವಾಸಿಗಳನ್ನು, ಹಿಂದೂಯೇತರ ಧರ್ಮೀಯರನ್ನು ಹಾಗೂ ವಿಚಾರವಾದಿಗಳನ್ನು ತಮ್ಮ ‘ನವ ಭಾರತ’ದ ಪರಿಕಲ್ಪನೆಯಿಂದ ಹೊರಗಿಡಲು ಸತತ ಪ್ರಯತ್ನ ಮಾಡುತ್ತಿದೆ. ಸಂಘೀ ಭಯೋತ್ಪಾದಕರು ಬೇರೆಬೇರೆ ಸಮುದಾಯಗಳ ಮೇಲೆ ನಡೆಸುತ್ತಿರುವ ಈ ದಾಳಿಗಳು ಬೇರೆಬೇರೆ ರೀತಿಯಲ್ಲಿವೆ. ಆದರೆ ಎರಡನೇ ಬಾರಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಮಾತ್ರ ಸಂಘಪರಿವಾರವು ಮುಸ್ಲಿಮರ ಮೇಲೆ ನಡೆಸುತ್ತಿರುವ ದಾಳಿ ಇನ್ನೂ ಹಲವಾರು ಆಯಾಮಗಳನ್ನೂ ಹಾಗೂ ಇನ್ನೂ ಹೆಚ್ಚಿನ ಬರ್ಬರತೆಯನ್ನು ಪಡೆದುಕೊಂಡಿದೆ.

 ಈ ಬಾರಿ ಬಿಜೆಪಿ ಸರಕಾರವು ಸಂವಿಧಾನವನ್ನು ಬದಲಾಯಿಸದೆಯೇ, ಈ ದೇಶದ ಬಹುದೊಡ್ಡ ಸಂಖ್ಯೆಯ ಮುಸ್ಲಿಮರನ್ನು ಸಾಂವಿಧಾನಿಕವಾಗಿಯೇ ಭಾರತದಿಂದ ಹೊರದಬ್ಬುವ ಯೋಜನೆಯನ್ನು ರೂಪಿಸಿದೆ. ಅದರ ಭಾಗವಾಗಿಯೇ ಹಾಲಿ ಅಸ್ಸಾಮಿನಲ್ಲಿ ಮಾತ್ರ ಚಾಲ್ತಿಯಲ್ಲಿದ್ದ ಕಾನೂನುಬದ್ಧ ನಾಗರಿಕರನ್ನು ಗುರುತಿಸಿ, ವಿದೇಶಿಯರನ್ನು ಪತ್ತೆ ಹಚ್ಚಿ ಹೊರಗಟ್ಟುವ ‘ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್’- ‘ರಾಷ್ಟ್ರೀಯ ನಾಗರಿಕರ ರಿಜಿಸ್ಟರ್’ (ಎನ್‌ಆರ್‌ಸಿ) ಯೋಜನೆಯನ್ನು ದೇಶಾದ್ಯಂತ ವಿಸ್ತರಿಸುವ ಯೋಜನೆಯನ್ನು ಪ್ರಕಟಿಸಿದೆ ಮತ್ತು ಅದಕ್ಕೆ ಮುನ್ನ ಮುಸ್ಲಿಮರನ್ನು ಮಾತ್ರ ವಿದೇಶಿಯರೆಂದು ಗುರುತಿಸುವ ‘ಸಿಟಿಜನ್‌ಶಿಪ್ ಅಮೆಂಡ್‌ಮೆಂಟ್ ಬಿಲ್’- ನಾಗರಿಕತ್ವ ತಿದ್ದುಪಡಿ ಕಾಯ್ದೆ (ಸಿಎಬಿ)ಯನ್ನು ಜಾರಿಗೊಳಿಸುವುದಾಗಿಯೂ ಘೋಷಿಸಿದೆ. ಈ ಎರಡೂ ಯೋಜನೆಗಳು ಭಾರತದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸುವ ಮತ್ತು ಮುಸ್ಲಿಮರೆಂದರೆ ಅಕ್ರಮ ವಲಸಿಗರು, ದೇಶದ್ರೋಹಿಗಳು ಇತ್ಯಾದಿ ದುರಭಿಪ್ರಾಯವನ್ನು ಸಾಂಸ್ಥಿಕಗೊಳಿಸುವ ಉದ್ದೇಶವನ್ನು ಹೊಂದಿವೆ.
ಇದು ಹೇಗೆಂದು ನೋಡೋಣ.
 
ಹಾಗೆ ನೋಡಿದರೆ ಈ ಎನ್‌ಆರ್‌ಸಿ ಯೋಜನೆಯು ಭಾರತದ ಪ್ರಜಾತಾಂತ್ರಿಕ ಪರಿಕಲ್ಪನೆಯಲ್ಲಿರುವ ಅಂತರ್ಗತ ಕೊರತೆಯ ಸಂಕೇತವೇ ಆಗಿದೆ. ವಸಾಹತುಶಾಹಿಯ ಷಡ್ಯಂತ್ರಗಳಿಗೆ ಬಲಿಯಾಗಿ ಹೊಟ್ಟೆಪಾಡಿಗಾಗಿ ವಲಸೆ ಬಂದ ವಲಸಿಗರು ಒಂದು ಕಡೆ ಮತ್ತು ಹೊರಗಿನವರು ಅಪಾರ ಸಂಖ್ಯೆಯಲ್ಲಿ ವಲಸೆ ಬರುವುದರಿಂದ ತಮ್ಮ ಅನನ್ಯತೆ, ಹಕ್ಕು, ಸಂಸ್ಕೃತಿ, ಭೂಮಿ ಮತ್ತು ಅವಕಾಶಗಳಲ್ಲಿ ಏರುಪೇರು ಮತ್ತು ವಂಚನೆಗಳು ಅನುಭವಿಸುವ ಸ್ಥಳೀಯ ಮೂಲನಿವಾಸಿಗಳ ಆತಂಕಗಳು ಮತ್ತೊಂದೆಡೆ. ಇದು ವಸಾಹತೋತ್ತರ ಭಾರತವು ದೇಶದ ಹಲವು ಕಡೆ ಎದುರಿಸಿದ ಸಮಸ್ಯೆಯಾಗಿತ್ತು. ಎರಡೂ ಕೂಡಾ ವಾಸ್ತವಿಕ ಸಮಸ್ಯೆಗಳೇ. ಆದರೆ ಅದನ್ನು ಮುಂದಾಲೋಚನೆಯಿಂದ ಹಾಗೂ ಪ್ರಜಾತಾಂತ್ರಿಕ ದೃಷ್ಟಿಯಿಂದ ಬಗೆಹರಿಸಬಲ್ಲ ತಾತ್ವಿಕ ಅಡಿಪಾಯವೇ ನಮ್ಮ ಆಳುವವರ್ಗಗಳಿಗೆ ಇರಲಿಲ್ಲ. ಈ ವಲಸಿಗ ್ಡ ಮೂಲನಿವಾಸಿ ಸಮಸ್ಯೆಗೆ ಅತಿ ಹೆಚ್ಚು ಬಲಿಯಾದದ್ದು ಈಶಾನ್ಯಭಾರತ ಪ್ರದೇಶ. ವಿಶೇಷವಾಗಿ ಅಸ್ಸಾಂ ಮತ್ತು ತ್ರಿಪುರ. ಆಗಿನ ಅಸ್ಸಾಂ ಮತ್ತು ಬಾಂಗ್ಲಾದೇಶಗಳು ಬ್ರಿಟಿಷ್ ಭಾರತದ ಭಾಗವಾಗಿದ್ದು 1826ರಲ್ಲಿ. ಅದರಲ್ಲಿ ಅಸ್ಸಾಮಿನ ಭಾಗ ಪ್ರಧಾನವಾಗಿ ಗುಡ್ಡಗಾಡಿನಿಂದ ಕೂಡಿದ್ದು ಅಲ್ಲಿನ ಮೂಲನಿವಾಸಿಗಳಾಗಿದ್ದ ಅಹೋಮ್ ಜನಾಂಗ ಮತ್ತು ಇತರ ಬುಡಕಟ್ಟು ಸಮುದಾಯಗಳು ಆದಿವಾಸಿಗಳು ಅತ್ಯಂತ ಹಿಂದುಳಿದ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದರು. ಹೋಲಿಕೆಯಲ್ಲಿ ನೋಡಿದರೆ ಜನಸಂಖ್ಯೆಯೂ ವಿರಳವಾಗಿತ್ತು. ಹೀಗಾಗಿ ಆ ಭಾಗದ ಲಕ್ಷಾಂತರ ಎಕರೆ ಮೈದಾನ ಪ್ರದೇಶಗಳು ಕೃಷಿಯಿಲ್ಲದೆ ಬೀಳು ಬಿದ್ದಿದ್ದವು. ಆದರೆ ಈಗಿನ ಬಾಂಗ್ಲಾದೇಶದ ಭಾಗವು ಪ್ರಧಾನವಾಗಿ ನದಿಯಾಸರೆಯ ಬಯಲುಭೂಮಿಯಾಗಿದ್ದರಿಂದ ಕೃಷಿ ಮತ್ತು ಕೃಷಿಯಾಧಾರಿತ ಸಮಾಜ ವಿಕಸನಗೊಡಿದ್ದವು. ಹೀಗಾಗಿ ಬ್ರಿಟಿಷರು ದೊಡ್ಡ ಸಂಖ್ಯೆಯಲ್ಲಿ ಆ ರೈತಾಪಿಯನ್ನು ಅಸ್ಸಾಮಿನ ಬಯಲು ಭೂಮಿಯಲ್ಲಿ ನೆಲೆಗೊಳಿಸಿ ಕೃಷಿ ಮಾಡಲು ಹಚ್ಚಿದರು. ನಂತರ ನಿಧಾನವಾಗಿ ಕಾಡನ್ನು ಸವರಿ ಕೃಷಿ ವಿಸ್ತರಣೆ ಮಾಡಲು ಉತ್ತೇಜಿಸಿದರು. ಹೀಗೆ ವಲಸೆ ಬಂದವರಲ್ಲಿ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಇದ್ದರು. ಹಿಂದೂಗಳಲ್ಲಿ ಪ್ರಧಾನವಾಗಿ ನಾಮಶೂದ್ರ ದಲಿತರೂ ಮತ್ತು ಒಕ್ಕಲುತನ ಬಲ್ಲ ಶೂದ್ರ ಜಾತಿಗಳೂ ಇದ್ದರು.

ಅದೇ ಸಮಯದಲ್ಲಿ ಅಸ್ಸಾಮಿನ ಗುಡ್ಡದ ತಪ್ಪಲುಗಳಲ್ಲಿ ಟೀ ತೋಟ ಪ್ರಾರಂಭಿಸಿದ ಬ್ರಿಟಿಷರು ಅಲ್ಲಿ ಕೆಲಸ ಮಾಡಲು ತೆಲಂಗಾಣ, ಆಂಧ್ರ, ಒಡಿಶಾ, ಜಾರ್ಖಂಡ್, ಬಿಹಾರಗಳಿಂದ ದೊಡ್ಡ ಸಂಖ್ಯೆಯಲ್ಲಿ ಆದಿವಾಸಿಗಳನ್ನು ವಲಸೆ ತಂದು ನೆಲೆಗೊಳಿಸಿದರು ಹಾಗೂ ಲೆಕ್ಕಪತ್ರ ಮತ್ತು ಉಸ್ತುವಾರಿಗಳಿಗೆ ಕೋಲ್ಕತಾ ಪ್ರಾಂತದಿಂದ ಬಂಗಾಳಿ ಬಾಬುಗಳನ್ನು ಕರೆತಂದರು. ಹೀಗಾಗಿ ಕೆಲವು ದಶಕಗಳಲ್ಲೇ ಅಸ್ಸಾಮಿನ ಸಾಮಾಜಿಕ ಚಹರೆಯೇ ಬದಲಾಗಿ ಸ್ಥಳೀಯ ಮೂಲನಿವಾಸಿಗಳು ಮೂಲೆಗುಂಪಾಗಿದ್ದರು. 1871ರ ಸೆನ್ಸಸ್ ಮತ್ತು 1931ರ ಸೆನ್ಸಸ್‌ಗಳ ವರದಿಗಳು ಹೇಳುವಂತೆ ಈ ಅವಧಿಯಲ್ಲಿ ಶೇ.28ರಷ್ಟು ಹೆಚ್ಚಿನ ವಲಸಿಗರು ಅಸ್ಸಾಮನ್ನು ಪ್ರವೇಶಿಸಿದ್ದರು. ಆದರೆ ಬ್ರಿಟಿಷರು ತಮ್ಮ ಸ್ವಾರ್ಥ ಆರ್ಥಿಕ ಹಿತಾಸಕ್ತಿ ಮತ್ತು ಸಾಮಾಜಿಕವಾಗಿ ಒಡೆದಾಳುವ ನೀತಿಯ ಭಾಗವಾಗಿ ಈ ವೈರುಧ್ಯಗಳನ್ನು ಹಾಗೂ ಅದರಿಂದ ಉಂಟಾದ ವೈಷಮ್ಯಗಳನ್ನು ಪ್ರೋತ್ಸಾಹಿಸಿದರೇ ವಿನಾ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ. ಭಾರತಕ್ಕೆ ಸ್ವ್ವಾತಂತ್ರ ಬರುವುದರ ಜೊತೆಗೆ ಭಾರತವೂ ಇಬ್ಭಾಗವಾಯಿತು.ಈಗಿನ ಬಾಂಗ್ಲಾದೇಶವು ಅಂದು ಪೂರ್ವ ಪಾಕಿಸ್ತಾನವಾಗಿ ಪಾಕಿಸ್ತಾನಕ್ಕೆ ಸೇರ್ಪಡೆಯಾಗಿತ್ತು. ಇದರಿಂದಾಗಿ 1947-50ರ ನಡುವೆ ಲಕ್ಷ ಸಂಖ್ಯೆಯಲ್ಲಿ ಪೂರ್ವ ಪಾಕಿಸ್ತಾನದಿಂದ ವಲಸಿಗರು ಭಾರತಕ್ಕೆ ಅಂದರೆ ಮೊದಲು ಅಸ್ಸಾಮಿಗೆ ವಲಸೆ ಬಂದರು. ಇದರ ನಂತರ 1965ರ ಭಾರತ-ಪಾಕಿಸ್ತಾನ ಯುದ್ಧ ಹಾಗೂ 1971ರಲ್ಲಿ ಬಾಂಗ್ಲಾದೇಶ ವಿಮೋಚನೆ ಯುದ್ಧಗಳ ನಡುವೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೆಚ್ಚೂ ಕಡಿಮೆ ಒಂದು ಕೋಟಿಗೂ ಹೆಚ್ಚು ವಲಸಿಗರು ಭಾರತವನ್ನು ಪ್ರವೇಶಿಸಿದರು. ಈ ಬಾರಿ ವಲಸೆ ಬಂದವರಲ್ಲಿ ಮುಸ್ಲಿಮರಿಗಿಂತ ಹಿಂದೂ ಮಧ್ಯಮವರ್ಗದ ಸಂಖ್ಯೆ ಹೆಚ್ಚಿತ್ತು.

ಅವರಲ್ಲಿ ಬಹುಭಾಗದ ವಲಸಿಗರನ್ನು ಪ. ಬಂಗಾಳ ಮತ್ತು ಭಾರತದ ಇತರ ಕಡೆಗಳಲ್ಲಿ ನೆಲೆಗೊಳಿಸಿದರೂ ಈ ಪ್ರಮಾಣದ ವಲಸೆ ಅಸ್ಸಾಮಿನ ಮೂಲನಿವಾಸಿಗಳಲ್ಲಿ ಸಹಜ ಆತಂಕವನ್ನು ಹುಟ್ಟಿಸಿತು. ಈ ಎಲ್ಲಾ ಕಾರಣಗಳಿಂದ ಬಾಂಗ್ಲಾದೇಶೀ ಅಕ್ರಮ ವಲಸಿಗರನ್ನು ಹೊರಹಾಕಬೇಕೆಂದು ಹಾಗೂ ಅಸ್ಸಾಮಿನ ಮೂಲನಿವಾಸಿಗಳ ಹಕ್ಕು ಮತ್ತು ಅನನ್ಯತೆಗಳನ್ನು ಕಾಪಾಡಬೇಕೆಂದು ಒತ್ತಾಯಿಸಿ ಅಸ್ಸಾಮಿನ ವಿದ್ಯಾರ್ಥಿಗಳು ಮತ್ತು ಯುವಕರು 1979ರಿಂದ 1985ರವರೆಗೆ ಉಗ್ರ ಚಳವಳಿಯನ್ನು ನಡೆಸಿದರು.

ಅದರ ಫಲಿತಾಂಶವಾಗಿ 1985ರಲ್ಲಿ ಆಗಿನ ಪ್ರಧಾನಿ ರಾಜೀವ ಗಾಂಧಿ ಮತ್ತು ಅಸ್ಸಾಂ ಹೋರಾಟಗಾರರ ನಡುವೆ ಪ್ರಖ್ಯಾತ ‘ಅಸ್ಸಾಂ ಒಪ್ಪಂದ’ವಾಯಿತು. ಅದರ ಭಾಗವಾಗಿ 1971ರ ಮಾರ್ಚ್ 25ರ ನಂತರ ಭಾರತಕ್ಕೆ ಪ್ರವೇಶಿಸಿದ ಅಕ್ರಮ ವಲಸಿಗರನ್ನು ಗುರುತಿಸಿ, ವಶಕ್ಕೆ ತೆಗೆದುಕೊಂಡು ದೇಶದಿಂದ ಹೊರಹಾಕುವ ಕಾಯ್ದೆಯೊಂದನ್ನು ತರಲಾಯಿತು. ಅದಕ್ಕಾಗಿ 1951ರಲ್ಲಿ ಅಸ್ಸಾಮಿನಲ್ಲಿ ಪ್ರಾರಂಭಿಸಲಾಗಿದ್ದ ಎನ್‌ಆರ್‌ಸಿಯನ್ನು ಮರುಪರಿಷ್ಕರಿಸಬೇಕೆಂದೂ ಒಪ್ಪಂದವಾಯಿತು. ಅದರ ಭಾಗವಾಗಿಯೇ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ, ವಶಕ್ಕೆ ತೆಗೆದುಕೊಂಡು ಹೊರಹಾಕುವ ಕಾಯ್ದೆ- Illegal Migrants Detection, Detention and Deportation Act- (IMDT Act) ಜಾರಿಯಾಯಿತು. ಆ ಕಾಯ್ದೆಯ ಪ್ರಕಾರ ವ್ಯಕ್ತಿಯೊಬ್ಬರನ್ನು ವಲಸಿಗರೆಂದು ಸಾಬೀತು ಮಾಡುವ ಹೊಣೆಗಾರಿಕೆ ಸರಕಾರದ್ದಾಗಿತ್ತು. ಚುನಾವಣಾ ರಾಜಕೀಯದ ಒತ್ತಡಗಳಿಂದಾಗಿ ಆ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ. ಇದೆಲ್ಲದರ ನಡುವೆ ವಲಸೆ ಮುಂದುವರಿದಿತ್ತು. ಹಾಗೆಯೇ ಮೂಲನಿವಾಸಿಗಳ ಆತಂಕವೂ ಸಹ. ಈ ಸಂದರ್ಭದಲ್ಲಿ ಆರೆಸ್ಸೆಸ್ ರಂಗವನ್ನು ಪ್ರವೇಶಿಸಿತು. ವಲಸೆ ವಿರೋಧಿ ಚಳವಳಿಯನ್ನು ಪ್ರಧಾನವಾಗಿ ಮುಸ್ಲಿಂ ವಿರೋಧಿಯನ್ನಾಗಿ ಮಾಡುವಲ್ಲಿ ಸಾಕಷ್ಟು ಯಶಸ್ವಿಯಾಯಿತು. ಆದರೆ ವಲಸಿಗರಲ್ಲಿ ಹಿಂದೂಗಳು ಅರ್ಧಕ್ಕಿಂತ ಹೆಚ್ಚಿದ್ದರಿಂದ ವಲಸಿಗರನ್ನು ಹೊರದಬ್ಬುವ ಒಪ್ಪಂದವು ಇಡಿಯಾಗಿ ಜಾರಿಯಾಗುವುದು ಅದರ ಅಜೆಂಡಾಗಳಿಗೂ ಪೂರಕವಾಗಿರಲಿಲ್ಲ.

ಈ ಮಧ್ಯೆ ಕಾಂಗ್ರೆಸ್ ಮತ್ತು ಇತರ ಸ್ಥಳೀಯ ಅವಕಾಶವಾದಿ ರಾಜಕಾರಣಿ ಗಳು ಸ್ಥಳೀಯರಲ್ಲೇ ಒಡಕು ತರುವ ರಾಜಕೀಯ ಮಾಡಿದ್ದರ ಭಾಗವಾಗಿ ಇಡೀ ಅಸ್ಸಾಂ ಪ್ರಾಂತವು ಅಸ್ಸಾಮಿ-ಬೋಡೋ, ಅಸ್ಸಾಮಿ-ಬಂಗಾಳಿ, ಅಸ್ಸಾಮಿ-ಟೀ ಟ್ರೈಬ್ ಹಾಗೂ ಹಿಂದೂ-ಮುಸ್ಲಿಂ ವೈಷ್ಯಮ್ಯಗಳಲ್ಲಿ ಸಿಲುಕಿಕೊಂಡಿತು. ಇದರ ದುರ್ಲಾಭವನ್ನು ಆರೆಸ್ಸೆಸ್ ಮತ್ತು ಕಾಂಗ್ರೆಸ್ ಎರಡೂ ಮಾಡಿಕೊಂಡಿತು. ಮತ್ತೊಂದೆಡೆ 1971ರ ನಂತರ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದವರನ್ನು ಹೊರದಬ್ಬುವ ಐಎಂಡಿಟಿ ಕಾಯ್ದೆಯನ್ನು ಯಾವ ಸರಕಾರವೂ ಜಾರಿಗೆ ತರಲಿಲ್ಲ. ಅಲ್ಲದೆ ವಲಸಿಗರು ಯಾರೆಂಬುದನ್ನು ಸರಕಾರವೇ ಸಾಬೀತು ಮಾಡಬೇಕಾದ ಅಂಶದಿಂದ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ ಎಂಬ ಅಹವಾಲನ್ನು ಆಧರಿಸಿ ಮತ್ತು 1998ರಲ್ಲಿ ಆಗಿನ ಅಸ್ಸಾಂ ರಾಜ್ಯಪಾಲರು ಹೆಚ್ಚುತ್ತಿರುವ ವಲಸೆಯು ಉಂಟುಮಾಡುತ್ತಿರುವ ಆತಂಕದ ಬಗ್ಗೆ ಕೊಟ್ಟ ವರದಿಯನ್ನು ಆಧರಿಸಿ 2006ರಲ್ಲಿ ಸುಪ್ರೀಂ ಕೋರ್ಟು 1971ರ ಐಎಂಡಿಟಿ ಕಾಯ್ದೆಯನ್ನು ರದ್ದುಗೊಳಿಸಿತು ಹಾಗೂ 1955ರ ವಿದೇಶಿಯರ ಕಾಯ್ದೆಯ (ತಾವು ಅಕ್ರಮ ವಲಸಿಗರಲ್ಲವೆಂಬುದನ್ನು ಸಾಬೀತು ಮಾಡುವ ಹೊಣೆಗಾರಿಕೆಯನ್ನು ಆರೋಪಿಗಳ ಮೇಲೆ ಹೊರೆಸುವ ಕಾಯ್ದೆ) ಪ್ರಕಾರ ವಲಸಿಗರನ್ನು ಪತ್ತೆ ಹಚ್ಚಿ ಅಕ್ರಮ ವಲಸಿಗರನ್ನು ಗುರುತಿಸಿ ಹೊರದಬ್ಬುವ ಮತ್ತು ಅಸ್ಸಾಮಿಗೆ ಸೀಮಿತಗೊಳಿಸಿ ಎನ್‌ಆರ್‌ಸಿಯನ್ನು ಸಿದ್ಧಪಡಿಸಬೇಕೆಂದು ಆದೇಶ ಮಾಡಿತು. 2010ರಲ್ಲಿ ಅದನ್ನು ಅಸ್ಸಾಮಿನ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಯತ್ನಿಸಲಾಯಿತು. ಆದರೆ ದೊಡ್ಡ ಮಟ್ಟದ ಗಲಭೆಗಳು ಶುರುವಾದ್ದರಿಂದ ಅರ್ಧಕ್ಕೆ ಕೈಬಿಡಲಾಯಿತು.

ಆದರೆ 2012ರಲ್ಲಿ ಸುಪ್ರೀಂ ಕೋರ್ಟು ಈ ಬಗ್ಗೆ ದಾಖಲಿಸಲಾಗಿದ್ದ ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಇತ್ಯರ್ಥ ಮಾಡುತ್ತಾ ಎನ್‌ಆರ್‌ಸಿಯನ್ನು ತನ್ನ ಸುಪರ್ದಿಯಲ್ಲೇ ಸಿದ್ಧಪಡಿಸಲು ಸರಕಾರಕ್ಕೆ ತಾಕೀತು ಮಾಡಿತು. ಆದ್ದರಿಂದಲೇ 2015ರಿಂದ ಅಸ್ಸಾಮಿನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆ ತೀವ್ರಗತಿ ಪಡೆದುಕೊಂಡಿದೆ.

ಈಗ ಅಸ್ಸಾಮಿನ 3.3 ಕೋಟಿ ನಾಗರಿಕರು ತಾವು 1971ಕ್ಕೆ ಮುಂಚೆಯಿಂದಲೂ ಭಾರತದಲ್ಲಿ ವಾಸಿಸುತ್ತಿದ್ದೇವೆ ಎಂದು ಯಾವುದಾದರೂ ಒಂದು ಸರಕಾರಿ ಕಾಗದ ಪತ್ರವನ್ನು ತೋರಿಸಿ ರುಜುವಾತು ಪಡಿಸಿಕೊಳ್ಳಬೇಕಾದ ಅಗತ್ಯ ಉಂಟಾಗಿದೆ. ಆದರೆ ಅಸ್ಸಾಮಿನಂತಹ ಅತ್ಯಂತ ಹಿಂದುಳಿದ ಹಾಗೂ ಅನಕ್ಷರಸ್ಥ ರಾಜ್ಯದಲ್ಲಿ ಸಾಕಷ್ಟು ಮೂಲನಿವಾಸಿಗಳ ಹಾಗೂ 1971ಕ್ಕೆ ಮುಂಚೆ ಅಸ್ಸಾಮಿಗೆ ಬಂದ ಬಡ-ದಲಿತ-ಶೂದ್ರರ ಬಳಿ ಶಾಲೆ, ಭೂಮಿ, ಬ್ಯಾಂಕ್, ವಿಮೆ ಇತ್ಯಾದಿ ಸರಕಾರ ಕೇಳುವ ಯಾವುದೇ ದಾಖಲಾತಿಗಳು ಇಲ್ಲ. ಅದರಲ್ಲೂ ಮಹಿಳೆಯರು ಶಾಲೆಗೆ ಹೋಗದೆ, ಚಿಕ್ಕಂದಿನಲ್ಲೇ ಮದುವೆಯಾಗಿ ಗಂಡನ ಮನೆಗೆ ಹೋಗಿಬಿಡುವುದರಿಂದ, ಅವರ ಹೆಸರಲ್ಲಿ ಭೂಮಿಯಾಗಲೀ, ಬ್ಯಾಂಕ್ ಖಾತೆಯಾಗಲೀ, ವಿಮೆಯಾಗಲೀ ಇರುವುದಿಲ್ಲವಾದ್ದರಿಂದ ಮಹಿಳೆಯರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿಬಿಟ್ಟಿದೆ. ಇದರ ಜೊತೆಗೆ ಹೆಸರನ್ನು ಬರೆಸುವುದರಲ್ಲಿ ಮತ್ತು ಬರೆದುಕೊಳ್ಳುವುದರಲ್ಲಿ ಆಗುವ ಅಲ್ಪಸ್ವಲ್ಪ ತಪ್ಪುಗಳೂ ಸಹ ಇದ್ದಕ್ಕಿದ್ದಂತೆ ಅವರನ್ನು ವಿದೇಶಿಯರನ್ನಾಗಿ ಮಾಡಿಬಿಡುತ್ತಿದೆ. ಅಂತಹವರನ್ನು ಅನುಮಾನಾಸ್ಪದ ನಾಗರಿಕರೆಂದು ಕರೆದು ಬಯಲು ಬಂದಿಖಾನೆ (ಡಿಟೆನ್ಷನ್ ಸೆಂಟರ್)ನಲ್ಲಿ ಇರಿಸಲಾಗುತ್ತಿದೆ. 2018ರ ಜುಲೈನಲ್ಲಿ ಈ ಎನ್‌ಆರ್‌ಸಿಯ ಕರಡುಪಟ್ಟಿ ಬಿಡುಗಡೆಯಾಗಿದ್ದು 3.3 ಕೋಟಿ ಅಸ್ಸಾಮಿಯರಲ್ಲಿ 40 ಲಕ್ಷ ಜನರ ಹೆಸರು ಅದರಲ್ಲಿಲ್ಲ.

ಅವರಲ್ಲಿ 36 ಲಕ್ಷ ಮರುಪರಿಶೀಲನೆಗೆ ಅರ್ಜಿ ಹಾಕಿದ್ದಾರೆ. ಅಂತಿಮ ಪಟ್ಟಿ ಬಿಡುಗಡೆ ಮಾಡುವಾಗ ಈ ಸಂಖ್ಯೆ ಒಂದಷ್ಟು ಕಡಿಮೆಯಾಗಬಹುದು. ಆದರೆ ಸರಕಾರವಾಗಲೀ ಅಥವಾ ಕೋರ್ಟಾಗಲೀ ಕಾಗದ ಪತ್ರಗಳ ಮಾನದಂಡಗಳನ್ನು ಸಡಿಲಿಸದೇ ಇರುವುದರಿಂದ 40 ಲಕ್ಷ ಜನರ ಆತಂಕ ಹೆಚ್ಚಾಗಿದೆ. ಅಲ್ಲದೆ ಕೇಂದ್ರ ಸರಕಾರ ಈಗಾಗಲೇ 46 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಮತ್ತಷ್ಟು ಡಿಟೆನ್ಷನ್ ಸೆಂಟರ್ (ಬಯಲು ಬಂದಿಖಾನೆ) ಗಳನ್ನು ಹೆಚ್ಚಿಸಲು ಆದೇಶಿಸಿದೆ. ಎನ್‌ಆರ್‌ಸಿಯಲ್ಲಿ ಹೆಸರಿಲ್ಲದವರನ್ನು ವಿದೇಶಿಯರೆಂದು ಘೋಷಿಸಿದರೂ ಅವರು ಬಾಂಗ್ಲಾದೇಶಕ್ಕೆ ಸೇರಿದವರೆಂಬ ಬಗ್ಗೆಯೂ ಅವರ ಬಳಿ ಯಾವುದೇ ಕಾಗದ ಪತ್ರವಿರುವುದಿಲ್ಲವಾದ್ದರಿಂದ ಆ ದೇಶವೂ ಅವರನ್ನು ಸೇರಿಸಿಕೊಳ್ಳುವುದಿಲ್ಲ. ಆಗ ಇವರ ಪರಿಸ್ಥಿತಿಯೇನಾಗುತ್ತದೆಂಬ ಬಗ್ಗೆ ಸುಪ್ರೀಂ ಕೋರ್ಟೂ ಸಹ ಏನೂ ಹೇಳುತ್ತಿಲ್ಲ. ಇವೆಲ್ಲವೂ ಒಟ್ಟು ಸೇರಿ ಇಂದು ಇಡೀ ಅಸ್ಸಾಮಿನ ಅಸಹಾಯಕ, ದುರ್ಬಲ, ದಲಿತ, ಅನಕ್ಷರಸ್ಥ ಹಾಗೂ ಅಲ್ಪಸಂಖ್ಯಾತ ಜನತೆ ಅತ್ಯಂತ ಅತಂಕದ ಸ್ಥಿತಿಯನ್ನೆದುರಿಸುತ್ತಿದ್ದಾರೆ. ಡಿಟೆನ್ಷನ್ ಶಿಬಿರಗಳಲ್ಲೇ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಈ ರೀತಿ ಅತಂತ್ರ ಸ್ಥಿತಿಯನ್ನೆದುರಿಸುತ್ತಿರುವವರಲ್ಲಿ ಹಿಂದೂಗಳು ಮತ್ತು ಮುಸ್ಲಿಮರಿಬ್ಬರೂ ಸರಿ ಪ್ರಮಾಣದಲ್ಲಿದ್ದಾರೆ ಅಥವಾ ಹಿಂದೂಗಳು ತುಸು ಹೆಚ್ಚೇ ಇದ್ದಾರೆ. ಆದ್ದರಿಂದಲೇ ಈ ಕದಡಿದ ನೀರಿನಲ್ಲಿ ಕೋಮುವಾದಿ ರಾಜಕೀಯ ಮಾಡಲು ಬಿಜೆಪಿ ಮುಂದಾಗಿದೆ. ಎನ್‌ಆರ್‌ಸಿಯಿಂದ ಬಾಂಗ್ಲಾದೇಶದಿಂದ ವಲಸೆ ಬಂದ ಹಿಂದೂಗಳಿಗೆ ಸಮಸ್ಯೆಯಾಗದೆ ಕೇವಲ ಮುಸ್ಲಿಮರಿಗೆ ಮಾತ್ರ ಅನ್ವಯವಾಗುವಂತೆ ಮಾಡಲು 2016ರ ಜುಲೈನಲ್ಲಿ ಬಿಜೆಪಿ ಸರಕಾರ ‘ಸಿಟಿಜನ್‌ಶಿಪ್ ಅಮೆಂಡ್‌ಮೆಂಟ್ ಬಿಲ್’- (ನಾಗರಿಕತ್ವ ತಿದ್ದುಪಡಿ ಕಾಯ್ದೆ-ಸಿಎಬಿ)ಯನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿತು. ಆದರೆ ರಾಜ್ಯಸಭೆಯಲ್ಲಿ ಆಗ ಅದಕ್ಕೆ ಬಹುಮತವಿಲ್ಲದ ಕಾರಣ ಮಸೂದೆ ನನೆಗುದಿಗೆ ಬಿದ್ದಿತು. ಮಾತ್ರವಲ್ಲ, ಈಶಾನ್ಯ ಭಾರತದಲ್ಲಿರುವ ಬಿಜೆಪಿಯ ಮಿತ್ರಪಕ್ಷಗಳೇ ಅದನ್ನು ವಿರೋಧಿಸಲು ಪ್ರಾರಂಭಿಸಿದವು.

ಏಕೆಂದರೆ ಈ ಮಸೂದೆಯ ಪ್ರಕಾರ 2014ರ ಡಿಸೆಂಬರ್ 31ಕ್ಕೆ ಮುಂಚೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ದಮನಕ್ಕೆ ತುತ್ತಾಗಿ ಭಾರತಕ್ಕೆ ಬಂದು ಐದುವರ್ಷಗಳ ಕಾಲ ವಾಸವಿದ್ದ ಆ ದೇಶಗಳ ಹಿಂದೂಗಳು, ಕ್ರೈಸ್ತರು, ಸಿಖ್ಖರು, ಪಾರ್ಸಿಗಳು, ಬೌದ್ಧರು ಮತ್ತು ಜೈನರು ಆರ್ಥಾತ್ ಮುಸ್ಲಿಮರನ್ನು ಬಿಟ್ಟು ಇತರ ಎಲ್ಲರಿಗೂ ಭಾರತದ ಪೌರತ್ವವನ್ನು ಕೊಡಲಾಗುವುದು. ಅಂದರೆ ಪರೋಕ್ಷವಾಗಿ 1971ರ ನಂತರವೂ ಭಾರತಕ್ಕೆ ವಲಸೆ ಬಂದಿರುವ ಬಾಂಗ್ಲಾದೇಶೀ ಹಿಂದೂಗಳಿಗೂ ಭಾರತದ ಪೌರತ್ವವನ್ನು ನೀಡಲಾಗುವುದು. ಹೀಗಾಗಿ ಇದು ಅಕ್ರಮ ವಲಸೆಯ ಹೆಸರಿನಲ್ಲಿ ಕೇವಲ ಮುಸ್ಲಿಮರನ್ನು ಮಾತ್ರ ದೇಶದಿಂದ ಹೊರಹಾಕುವ ಕೋಮುವಾದಿ ಹುನ್ನಾರವಾಗಿದೆ.

ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಈಗ ಈ ಎನ್‌ಆರ್‌ಸಿ ಯನ್ನು ಇಡೀ ದೇಶಕ್ಕೆ ಅನ್ವಯಿಸುವ ಯೋಜನೆ ಹಾಕಿಕೊಂಡಿದೆ ಮತ್ತು ಅದಕ್ಕೆ ಮುನ್ನ ಸಿಎಬಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಅನುಮೋದನೆ ಮಾಡಿಕೊಂಡು ಕಾಯ್ದೆ ಮಾಡಿಕೊಳ್ಳುವ ಸಂಚು ನಡೆಸಿದೆ. ಅದಕ್ಕಾಗಿಯೇ ಎನ್‌ಆರ್‌ಸಿಯ ಅಂತಿಮ ಪಟ್ಟಿ ಬಿಡುಗಡೆ ಮಾಡದಂತೆ ಹಲವು ಅಡೆತಡೆಗಳನ್ನು ಮತ್ತು ಕುಂಟು ನೆಪಗಳನ್ನೂ ಒಡ್ಡುತ್ತಿದೆ. ಇದು ಬಿಜೆಪಿ ಸರಕಾರದ ನಾಗರಿಕತೆ. ಇದು ಎನ್‌ಆರ್‌ಸಿ ಮತ್ತು ಸಿಎಬಿಗಳ ಅಸಲೀ ಹುನ್ನಾರ. ಒಂದು ಎರಡಲಗಿನ ಕತ್ತಿ. ಮತ್ತೊಂದು ತ್ರಿಶೂಲ. ಹೀಗಾಗಿಯೇ ಫ್ಯಾಶಿಸಂ ಅನ್ನುವುದು ಒಂದು ನಾಗರಿಕತೆಗೆ ಒಡ್ಡಿರುವ ಸವಾಲೂ ಆಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top