ಭಾರತೀಯ ಚಲನಚಿತ್ರಗಳಲ್ಲಿ ಅಸ್ಪೃಶ್ಯತೆ-ಒಂದು ನೋಟ | Vartha Bharati- ವಾರ್ತಾ ಭಾರತಿ

ಭಾರತೀಯ ಚಲನಚಿತ್ರಗಳಲ್ಲಿ ಅಸ್ಪೃಶ್ಯತೆ-ಒಂದು ನೋಟ

ಭಾಗ-3

ಭಾರತೀಯ ಚಿತ್ರಗಳು ತಮ್ಮೆಲ್ಲ ಶಕ್ತಿಯನ್ನು ಕೇಂದ್ರೀಕರಿಸಿದ್ದು ಕತೆಯನ್ನು ರಂಜನೀಯವಾಗಿ ಹೇಳುವ ವಿಧಾನಗಳಿಗೆ. ರಂಜನೆಯೇ ಪ್ರಧಾನವಾಗುವುದರಿಂದ ಸಾಮಾಜಿಕ ಸಮಸ್ಯೆಗಳು ಚಿತ್ರಕತೆಯಲ್ಲಿ ನುಸುಳಿದರೂ, ಅವು ಅಂಚಿಗೆ ದೂಡಿಸಿಕೊಂಡುಬಿಡುತ್ತವೆ. ಅದರಲ್ಲೂ ‘ಜಾತಿ’ ಎಂಬ ಸಾಮಾಜಿಕ ವಾಸ್ತವ ಮತ್ತು ಅದು ಹುಟ್ಟುಹಾಕುವ ಸಮಸ್ಯೆಗಳ ವಿವಿಧ ಮುಖಗಳು ಜನಪ್ರಿಯ ಸಿನೆಮಾಗಳಲ್ಲಿ ಮುನ್ನೆಲೆಯಲ್ಲಿ ನಿರೂಪಣೆಗೊಂಡಿರುವ ಪ್ರಕರಣಗಳು ವಿರಳಾತಿ ವಿರಳ. ಇದು ಭಾರತೀಯ ಭಾಷೆೆಯ ಎಲ್ಲ ಮುಖ್ಯವಾಹಿನಿಯ ಸಿನೆಮಾಗಳಿಗೂ ಅನ್ವಯಿಸುವ ಅಭಿಪ್ರಾಯ.

ಭೂದಾನ ಮತ್ತು ಭಕ್ತಚೇತ ಚಿತ್ರಗಳ ನಂತರ ಕನ್ನಡದಲ್ಲಿ ಅಸ್ಪಶ್ಯತೆಯನ್ನು ಆಧರಿಸಿ ಪೂರ್ಣಪ್ರಮಾಣದಲ್ಲಿ ತಯಾರಾದ ಚಿತ್ರಗಳೇ ವಿರಳವಾದವು. ಪ್ರಧಾನ ಕತೆಯಲ್ಲಿ ಪರಿಶಿಷ್ಟ ಜಾತಿಯ ಪಾತ್ರಗಳು ಸುಮ್ಮನೆ ಬಂದುಹೋಗುವುದೇ ಹೆಚ್ಚು. ಇಲ್ಲವೇ ಪ್ರೇಮ ಪ್ರಧಾನ ಚಿತ್ರಗಳಲ್ಲಿ ಓರ್ವಪ್ರೇಮಿ/ಪ್ರಿಯಕರನ ಪಾತ್ರ ಮಾತ್ರ ಪರಿಶಿಷ್ಟ ಜಾತಿಗೆ ಸೇರಿರುವಂತಹ ಹಲವು ಚಿತ್ರಗಳು ಬಂದಿವೆ. ಇಲ್ಲೆಲ್ಲ ಸಮಸ್ಯೆಗೆ ಆಲಂಕಾರಿಕ ಪರಿಹಾರವಿದೆಯೇ ಹೊರತು ನಿಜಬದುಕಿನ ಕಠೋರ ವಾಸ್ತವಕ್ಕೆ ನಿರ್ದೇಶಕರು ಎದುರಾಗುವುದು ಕಡಿಮೆ. ‘ಭಾಗ್ಯಜ್ಯೋತಿ’, ‘ಕಾವೇರಿ’ ಮೊದಲಾದ ಚಿತ್ರಗಳು ಅದೇ ಹರಿಜನ ಹೆಣ್ಣು, ಮೇಲ್ಜಾತಿಯ ಗಂಡಿನ ನಡುವಿನ ಸಂಬಂಧಗಳನ್ನೇ ಕುರಿತ ಚಿತ್ರಗಳು. ಇವೆರಡೂ ಚಿತ್ರಗಳು ಒಂದಾದ ಮೇಲೊಂದರಂತೆ 1975ರಲ್ಲಿ ಬಿಡುಗಡೆಯಾದದ್ದು ವಿಶೇಷ.
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ಹೇಮಾವತಿ’ ಕಾದಂಬರಿಯನ್ನಾಧರಿಸಿದ ಚಲನಚಿತ್ರದಲ್ಲಿಯೂ ಹರಿಜನ ಹೆಣ್ಣುಮಗಳೊಬ್ಬಳು ಸಂಗೀತ ಕಲಿಯುವ ಕಥನವಿದೆ. ಆದರೂ ಅದು ಪೋಷಣೆಯಿಲ್ಲದೆ ಸೊರಗಿದೆ. ಸಿದ್ದಲಿಂಗಯ್ಯನವರು ತಮಗೆ ಪ್ರಿಯವಾದ ‘ಕೂಡಿ ಬಾಳಿದರೆ ಸ್ವರ್ಗ ಸುಖ’ ತತ್ವವನ್ನೇ ಇಲ್ಲಿಯೂ ಅಳವಡಿಸಿದ್ದಾರೆ. ಹಾಗಾಗಿ ಅಸ್ಪಶ್ಯತೆಯ ಆಚರಣೆಯ ಕ್ರೌರ್ಯ ಗಾಢವಾಗಿ ತಟ್ಟದು.
ಟಿ.ಎಸ್. ನಾಗಾಭರಣ ಅವರ ‘ಗ್ರಹಣ’ (1981) ಚಿತ್ರವು ಅಸ್ಪಶ್ಯರ ಬದುಕನ್ನು ಕುರಿತ ವಿಶಿಷ್ಟ ಪ್ರಯತ್ನ. ಕರ್ನಾಟಕದ ಗ್ರಾಮವೊಂದರಲ್ಲಿ ಹರಿಜನರಿಗೆ ತಾತ್ಕಾಲಿಕವಾಗಿ ಜನಿವಾರ ಹಾಕಿ ‘ಬ್ರಾಹ್ಮಣ’ರಾಗಿಸುವ ಆಚರಣೆಯನ್ನು ಕುರಿತದ್ದು. ತಾತ್ಕಾಲಿಕವಾಗಿ ಬ್ರಾಹ್ಮಣನಾಗಿರುವ ಸಮಯದಲ್ಲಿಯೇ ಸಾಯುವ ವ್ಯಕ್ತಿಯ ಸಂಸ್ಕಾರದ ಪ್ರಶ್ನೆ ಮತ್ತು ಸಾಮಾಜಿಕ-ರಾಜಕೀಯ ಸಂಬಂಧಗಳ ಹುನ್ನಾರಗಳನ್ನು ಈ ಚಿತ್ರ ನಿರೂಪಿಸುತ್ತದೆ. ‘ಗಂಧರ್ವ’ ಅವರು ನಿರ್ದೇಶಿಸಿದ ‘ಭೂಮಿ’ (2000) ಚಿತ್ರ ಸಹ ಬ್ರಾಹ್ಮಣ-ದಲಿತರ ನಡುವಿನ ಮುಖಾಮುಖಿಯನ್ನು ಪ್ರೇಮಕತೆಯೊಂದರ ಮೂಲಕ ಹೇಳುವ ಪ್ರಯತ್ನವಾಗಿತ್ತು. ಇಪ್ಪತ್ತೊಂದನೆಯ ಶತಮಾನದಲ್ಲಿ ಬಂದ ‘ಕಂಬಲಾಪಲ್ಲಿ’ ಚಿತ್ರವು ಹರಿಜನರ ಶೋಷಿತ ಬದುಕನ್ನು ನಿರೂಪಿಸುವ ಬದಲು ಹಿಂದಿ ಚಿತ್ರರಂಗದ ಢಕಾಯಿತಕತೆಯನ್ನೇ ನೆನಪಿಸುತ್ತಿತ್ತು. ಅಲ್ಲಿಗೆ ಅಸ್ಪಶ್ಯ ಲೋಕವನ್ನು ತೆರೆದಿಡುವ ಎಲ್ಲ ಪ್ರಯತ್ನಗಳು ಸ್ಥಗಿತವಾದಂತೆ ಕಂಡಿತು
ಇಂಥ ಪೂರ್ಣ ಪ್ರಮಾಣದ ಚಿತ್ರಗಳಿಗಿಂತ ಜಾತಿಯ ತರತಮವನ್ನು ಬಹಳ ತೀವ್ರವಾಗಿ ವಿಮರ್ಶೆಗೊಳಪಡಿಸುವ ಯತ್ನ ಕೆಲವು ಚಿತ್ರಗಳಲ್ಲಿ ಕಾಣಬಹುದು. ಅಂಥದರಲ್ಲಿ ‘ಸತ್ಯ ಹರಿಶ್ಚಂದ್ರ’ವೂ ಒಂದು. ವಿಶ್ವಾಮಿತ್ರ ಸೃಷ್ಟಿಸಿದ ಮಾತಂಗಕನ್ಯೆಯರನ್ನು (ಹೊಲತಿಯರು) ರಾಜಧರ್ಮವನ್ನು ಮುಂದೊಡ್ಡಿ ಮದುವೆಯಾಗಲು ನಿರಾಕರಿಸುವ ಹರಿಶ್ಚಂದ್ರ ಮತ್ತೊಬ್ಬ ಅಸ್ಪಶ್ಯ ವೀರಬಾಹುವಿನ ದಾಸನಾಗಬೇಕಾಗುತ್ತದೆ. ವೀರಬಾಹು ಕಂಡುಕೊಂಡ ಜೀವನ ಸತ್ಯ ಹರಿಶ್ಚಂದ್ರನಿಗಿಲ್ಲದಿರುವುದನ್ನು ಹುಣಸೂರು ಬಹು ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ಅದು ನಕ್ಷತ್ರಿಕ-ವೀರಬಾಹುವಿನ ಸಂಭಾಷಣೆಯಲ್ಲಿ ಎದ್ದುಕಾಣುತ್ತದೆೆ. ಹರಿಶ್ಚಂದ್ರನನ್ನು ಕೊಲ್ಲಲು ಮುಂದೆ ಬರುವ ವೀರಬಾಹುವಿನ ವೃತ್ತಾಂತವನ್ನು ಕೇಳಿದ ನಕ್ಷತ್ರಿಕ ‘‘ಅಯ್ಯಯ್ಯೋ... ಸ್ಮಶಾನ ಕಾಯುವ ಹೀನ ಕುಲದವನೇನೋ... ಛೇ... ಛೇ... ಹಾಗ್ಯಾಕೆ ಮುಂದುಕ್ ನುಗ್ ಬರ್ತಿಯೋ! ನಿನ್ನ ನೆರಳು ಬಿದ್ದರೆ ನನಗೆ ಮೈಲಿಗೆ ಆಗುತ್ತೆ. ದೂರ ಇರೋ ದೂರ ಇರೋ’’ ಎನ್ನುತ್ತಾನೆ. ಪ್ರತಿಕ್ರಿಯೆಯಾಗಿ ವೀರಬಾಹು ‘‘ನಾನೆಷ್ಟು ದೂರ ಹೋದ್ರೂನು ನಾನು ನೀನು ನಿಂತಿರೋದು ಒಂದೇ ನೆಲದ ಮೇಲಲ್ಲವಾ! ಈ ನಂಟನ್ನು ಹ್ಯಾಗ್ ತಪ್ಪಿಸ್ಕೊಳ್ತೀಯಾ ಅಂತಾ?’’ ಎಂದು ಪ್ರಶ್ನಿಸುತ್ತಾನೆ. ಕನ್ನಡ ಚಿತ್ರರಂಗ ಕಟ್ಟಿಕೊಟ್ಟ ಸಶಕ್ತ ದೃಶ್ಯಗಳಲ್ಲಿ ಅದೂ ಒಂದು.
ಈ ಹಿನ್ನೆಲೆಯಿಂದ ನೋಡಿದಾಗ ದಲಿತಲೋಕದ ನಾನಾ ಮುಖಗಳನ್ನು ದಟ್ಟವಾದ ನಿರೂಪಣೆಯಿಂದ ಅನುಭವಗಮ್ಯವಾಗಿಸಿದ ಮೊದಲ ಚಿತ್ರವೆಂದರೆ ‘ಚೋಮನದುಡಿ’ (1973). ಶಿವರಾಮ ಕಾರಂತರು ಬರೆದ ಕಾದಂಬರಿಯು ಪ್ರಕಟವಾದ ನಲವತ್ತು ವಷರ್ಗಳ ನಂತರ ತೆರೆಯ ಮೇಲೆ ಬಂದರೂ, ಕಾದಂಬರಿಯ ಪ್ರತಿ ಪುಟಕ್ಕೂ ನಿಷ್ಠವಾದ ನಿರೂಪಣೆಯಿಂದ ಅನನ್ಯ ಚಿತ್ರಕೃತಿಯಾಯಿತು. ‘ಚೋಮನದುಡಿ’ ಇಂದಿಗೂ ದಲಿತಲೋಕದ ಅವಮಾನ, ಸಂಭ್ರಮ, ಸಮಸ್ಯೆ, ಸಂಘರ್ಷ, ತಾಕಲಾಟ, ಅದಮ್ಯ ಬಯಕೆಗಳು ಹಾಗೂ ಸಾಮಾಜಿಕ ಕ್ರೌರ್ಯವನ್ನು ಅನುರಣನಗೊಳಿಸುತ್ತಿರುವ ಅಮರಕೃತಿ.
ಬಾಳಬಂಧನಕಾರಿಯಾದ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪಶ್ಯರ ಬದುಕಿನ ಘೋರತೆ ಎದೆ ನಡುಗಿಸುವಂಥದ್ದು. ಅದು ನಮ್ಮ ಧಾರ್ಮಿಕ ಕ್ರೌರ್ಯದ ಪರಾಕಾಷ್ಠ. ಅದರಲ್ಲೂ ನಾಡಿನ ವಿವಿಧ ರಾಜ್ಯ ಮತ್ತು ಪ್ರದೇಶಗಳಲ್ಲಿ ಬದುಕುವ ಒಂದೊಂದು ಅಸ್ಪಶ್ಯ ಪಂಗಡದ ಕತೆ ಒಂದೊಂದು ವಿಧ. ದಕ್ಷಿಣಕನ್ನಡ ಜಿಲ್ಲೆಯಲ್ಲೇ ಮೇರ, ಬೈರ, ಅಜಿಲ, ಮಾರಿ ಎಂದು ನಾಲ್ಕಾರು ಅಸ್ಪಶ್ಯ ಪಂಗಡಗಳಿವೆ. ಇದರಲ್ಲಿ ಮೇರಜಾತಿಯ ಹೊಲೆಯರಿಗೆ ಸಾಗುವಳಿ ಮಾಡುವ ಅವಕಾಶವಿದೆ. ತೀರಾ ಕೆಳಗಿನ ಮಾರಿ ಹೊಲೆಯರಿಗೆ ಅಂಥ ಅವಕಾಶವಿಲ್ಲ. ಸತ್ತದನವನ್ನು ತಿನ್ನುವುದು, ನಿಕೃಷ್ಟಕಾಯಕ ಅವರ ಪಾಲಿನದು. ಈ ಬಳಗದ ಪ್ರಾತಿನಿಧಿಕ ಜೀವಿಯಾದ ಚೋಮನ ಬದುಕು ಈ ಚಿತ್ರದ ಕಥಾವಸ್ತು. ಅದರಲ್ಲೂ ಭೂಮಿಯನ್ನು ಗೇಣಿಗೆ ಮಾಡಬೇಕೆಂಬುದು ಅವನ ಕನಸು; ಬೋಗನಹಳ್ಳಿಯ ಚೋಮನ ಕನಸು ಆಕಾಶ ಕುಸುಮ. ‘ಹೊಲೆಯರು ನೇಗಿಲು ಹಿಡಿದರೆ ಪ್ರಳಯವೇ ಬಂದೀತೆಂದು ಊರವರು ತಿಳಿದಿದ್ದಾರೆ. ನಿಂಗ್ಯಾಕೆ ಈ ಬೋಳು ಭ್ರಮೆ’ ಎಂದು ಪ್ರೀತಿಯ ಮಗಳು ಛೇಡಿಸಿದರೂ ಆಶಾಭಂಗವಾಗದು. ತಾನು ದುಡಿಯುವ ಹೊಲದ ಯಜಮಾನ ಸಂಕಪ್ಪಯ್ಯನಿಗೆ ಗೇಣಿಗೆ ಭೂಮಿ ನೀಡಬೇಕೆಂಬ ಆಸೆಯಿದ್ದರೂ ಅವನ ತಾಯಿ ‘ಹೊಲೆಯರಿಂದ ನೆಲ ಸಾಗುವಳಿಯೇ? ಯಾರಾದರೂ ಹಾಗೆ ಕೊಟ್ಟಿದ್ದಾರೆಯೇ? ಎಂಥ ಕಾಲ ಬಂತು’ ಎಂದು ಅವಕಾಶದ ಬಾಗಿಲು ಮುಚ್ಚುತ್ತಾಳೆ. ಆದರೆ ಚೋಮನಿಗೆ ‘ನನ್ನದೊಂದೇ ಆಸೆ. ನನ್ನದೇ ಒಂದು ಗೇಣಿ ನೆಲ. ಬದುಕಿದ್ದಕ್ಕೂ ಒಂದು ಲೆಕ್ಕ’ ಎಂಬ ನಂಬಿಕೆಯನ್ನೇ ತಬ್ಬಿ ಹಿಡಿಯುತ್ತಾನೆ, ಒಡೆಯರ ಬೇಸಾಯವನ್ನು ಕುತೂಹಲದ ಕಣ್ಣಿನಿಂದ ನೋಡುತ್ತಾನೆ. ಭೂಮಿಯನ್ನು ಪಡೆಯುವ ಸಣ್ಣ ನಿರೀಕ್ಷೆಯೂ ಆತನಲ್ಲಿ ದೊಡ್ಡ ಉತ್ಸಾಹ ಮೂಡಿಸುತ್ತದೆ.
ಬಡತನವೇ ಹೊದ್ದುಕೊಂಡು, ಸಾಲದ ಶೂಲದಲ್ಲಿ ಸಿಕ್ಕಿಹಾಕಿಕೊಂಡು ಕಳ್ಳು ಹೀರುತ್ತಾ, ದುಡಿಯನ್ನು ಮೆಟ್ಟುತ್ತಾ ತನ್ನೆಲ್ಲ ನೋವನ್ನು ಮರೆವ ಚೋಮ ತನ್ನ ನಾಲ್ವರು ಗಂಡುಮಕ್ಕಳಲ್ಲಿ ಮೂವರನ್ನು ಕಳೆದುಕೊಳ್ಳುತ್ತಾನೆ. ದೊಡ್ಡವ ಚನಿಯ ಮಲೇರಿಯಾ ರೋಗಕ್ಕೆ ತುತ್ತಾದರೆ, ಎರಡನೆಯ ಮಗ ಗುರುವ ಮತಾಂತರಗೊಂಡು ಬೇರ್ಪಡುತ್ತಾನೆ. ಮೂರನೆಯ ಮಗ ಕಾಳ ಈಜಲು ಹೋಗಿ ಮುಳುಗಿ ಸಾಯುತ್ತಾನೆ. ಹತ್ತಿರದಲ್ಲೇ ಇದ್ದ ಬ್ರಾಹ್ಮಣ ಯುವಕ ರಕ್ಷಿಸಲು ಹೋಗುವ ಯತ್ನ ‘ಜಾತಿಯ ಶ್ರೇಷ್ಠತೆ’ಯಿಂದ ಭಗ್ನವಾಗುತ್ತದೆ. ಚೋಮನ ದುಃಖದ ಕಟ್ಟೆತುಂಬಿ ಬರುವುದು ಮಗಳು ‘ಬೆಳ್ಳಿ’ಯ ‘ದ್ರೋಹ’ದಿಂದ. ತನ್ನ ಸಾಲವನ್ನು ತೀರಿಸಲು ಘಟ್ಟದ ಮೇಲೆ ಹೋಗಿ ಯಶಸ್ವಿಯಾಗಿ ಬಂದ ಮಗಳ ಮೇಲೆ ಅಕ್ಕರೆ ಉಕ್ಕುತ್ತದೆ. ಆದರೆ ಅಂಥ ಮಗಳು ಮೇಸ್ತ್ರಿಯೊಂದಿಗೆ ಇರುವ ದೃಶ್ಯ ಕಂಡಾಗ ಚೋಮನ ನಂಬಿಕೆಯ ಪ್ರಪಂಚ ಸ್ಫೋಟಗೊಳ್ಳುತ್ತದೆ. ಜಗತ್ತನ್ನೇ ಅಸಹ್ಯದಿಂದ ನೋಡುವ ಚೋಮ ತನ್ನ ಹಸುಗಳನ್ನು ಬಿಟ್ಟು ಅಟ್ಟುತ್ತಾನೆ. ನೇಗಿಲನ್ನು ಮುರಿದು ಬೆಂಕಿಗೆ ಹಾಕುತ್ತಾನೆ. ‘ಗುಡಿ’ಯನ್ನು ಸೇದಿ ಬದುಕಿನಲ್ಲಿ ಎಂದೂ ಮೆಟ್ಟದ ರೀತಿಯಲ್ಲಿ ತನ್ನ ದುಡಿಯನ್ನು ಮೆಟ್ಟುತ್ತಾನೆ. ‘‘ಅದು ಪ್ರಳಯ ತಾಂಡವದ ಢಮರು ನಿನಾದ!’’ ದುಡಿಯ ನಿನಾದ ನಿಲ್ಲುವುದರ ಜೊತೆಗೆ ಚೋಮನ ಬದುಕೂ ಅಂತ್ಯ ಕಾಣುತ್ತದೆ.
ಶಿವರಾಮ ಕಾರಂತರು ‘ಚೋಮನದುಡಿ’ ಕಾದಂಬರಿಯನ್ನು ರಚಿಸಿದ್ದು 1933ರಲ್ಲಿ. ಸ್ವಾತಂತ್ರಕ್ಕೂ ಮೊದಲು. ಉದಾರವಾದಿ ಮಾನವೀಯತೆಯ ಝಲಕುಗಳು, ಗಾಂಧಿಯವರ ಅಸ್ಪಶ್ಯತಾ ವಿರೋಧಿ ಆಂದೋಲನ, ಅಂಬೇಡ್ಕರ್‌ರವರ ಮೊಳಕೆಯೊಡೆಯುತ್ತಿದ್ದ ಸ್ವಾಭಿಮಾನ ಚಳವಳಿಗಳು ಗರಿಗಟ್ಟಿಕೊಳ್ಳುತ್ತಿದ್ದ ಕಾಲದಲ್ಲಿ. ಆ ಕಾಲದ ಆದರ್ಶ ಮತ್ತು ಉತ್ಸಾಹಗಳ ಹಿನ್ನೆಲೆಯಲ್ಲಿ ಮೂಡಿಬಂದ ಕೃತಿ. ಆದರೆ ಈ ಕೃತಿ ಎಲ್ಲಿಯೂ ಅತಿಯಾದ ಆದರ್ಶಕ್ಕೆ ಕಟ್ಟುಬಿದ್ದು ಚೋಮನನ್ನು ದಡಕಾಣಿಸುವ ಗುರಿಯನ್ನು ಹೊಂದಿರಲಿಲ್ಲ. ಬದಲು ಆ ಕಾಲದ ಕಟುವಾಸ್ತವವನ್ನು ನಿರೂಪಿಸಿದ ಕೃತಿ.
‘ಚೋಮನದುಡಿ’ ಕಾದಂಬರಿಯಾಗಿ ಕನ್ನಡ ಸಾಹಿತ್ಯಕ್ಕೆ ‘ಯಥಾರ್ಥ ನಿರೂಪಣೆ ವಿಧಾನ’(Naturalism)ವನ್ನು ಪರಿಚಯಿಸಿದರೆ ನಿರ್ದೇಶಕ ಬಿ.ವಿ. ಕಾರಂತ ಅವರು ಚಿತ್ರದ ಆವೃತ್ತಿಯಲ್ಲಿ ನಿರ್ಭಾವುಕ ವಸ್ತುಸ್ಥಿತಿಯ ನಿರೂಪಣೆಯನ್ನು ಅಳವಡಿಸಿಕೊಂಡಿದ್ದರು. ಕಾದಂಬರಿಯಲ್ಲಿ ಕಾರಂತರು ಆಗಿನ ಸಾಮಾಜಿಕ ವ್ಯವಸ್ಥೆಯ ಚೌಕಟ್ಟಿನ ಮೂಲಕ ಚೋಮನ ಬದುಕನ್ನು ಅನ್ವೇಷಿಸಿದರೆ ಚಿತ್ರದಲ್ಲಿ ಬಿ.ವಿ. ಕಾರಂತರು ಚೋಮನ ಅಸಹಾಯಕ ಬದುಕಿನ ಮೂಲಕ ಸಾಮಾಜಿಕ ವ್ಯವಸ್ಥೆಯ ಕ್ರೌರ್ಯಕ್ಕೆ ಕನ್ನಡಿ ಹಿಡಿದಿದ್ದಾರೆ.
ವಸ್ತುಸ್ಥಿತಿಯ (Objective) ನಿರ್ಭಾವುಕ ನಿರೂಪಣೆಯ ವಿಧಾನವನ್ನು ಬಿ.ವಿ. ಕಾರಂತರು ಆಯ್ದುಕೊಂಡರೂ ಒಂದು ಸಿನೆಮಾ ಆಗಿ ಚೋಮನದುಡಿ ಸೃಷ್ಟಿಸುವ ಭಾವತೀವ್ರತೆ ವಿಶಿಷ್ಟವಾದದ್ದು. ಕಾದಂಬರಿಯ ಆಶಯಕ್ಕೆ ನಿಷ್ಠವಾದ (ಮೂಲ ಕಾದಂಬರಿಕಾರರೇ ಸಂಭಾಷಣೆ ರಚನೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಬದಲಾವಣೆ ಅತ್ಯಲ್ಪ) ಈ ಸಿನೆಮಾವು ಕಾದಂಬರಿಯ ವಿವರಗಳನ್ನು ದಟ್ಟವಾಗಿ ನಿರೂಪಿಸುತ್ತದೆ. ಈ ಚಿತ್ರದ ಮತ್ತೊಂದು ಪ್ರಮುಖ ಅಂಶವೆಂದರೆ ನಿರ್ದೇಶಕ ಕಾರಂತರು ಸೃಷ್ಟಿಸಿರುವ ಸಹಜ ಪರಿಸರ. ಚೋಮ ಬದುಕುವ ಒಂಟಿ ‘ಗುಡಿ’(ಅಸ್ಪಶ್ಯರು, ಮನೆಯನ್ನು ಗುಡಿ ಎನ್ನುತ್ತಾರೆ. ಎಂಥ ವ್ಯಂಗ್ಯ!)ಯ ಸುತ್ತಲಿನ ಪರಿಸರ, ದಕ್ಷಿಣಕನ್ನಡ ಜಿಲ್ಲೆಯ ಗದ್ದೆ, ತೆಂಗು ಅಡಿಕೆಯ ತೋಟಗಳು, ಮಲೆನಾಡಿನ ಕಾಫಿತೋಟ, ವಸತಿ ಗೃಹಗಳೆಲ್ಲವೂ ದಟ್ಟವಾದ ಪರಿಸರವನ್ನು ಕಟ್ಟಿಕೊಟ್ಟಿವೆ. ಚನಿಯ-ಗುರುವ ಅವರು ಘಟ್ಟವನ್ನು ಏರುವ ಕ್ರಿಯೆಯೇ ಒಂದು ದೊಡ್ಡ ಜೀವಯಾತ್ರೆಯೆಂಬಂತೆ ಚಿತ್ರಿಸಿದ್ದಾರೆ. ಆ ಯಾತ್ರೆಯಲ್ಲೇ ಅನಾವರಣಗೊಳ್ಳುವ ಸಾಮಾಜಿಕ ವಾಸ್ತವಗಳು (ಅಸ್ಪಶ್ಯರೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರನ್ನು ಕೀಳಾಗಿ ಕಾಣುವ) ತೆರೆದುಕೊಳ್ಳುತ್ತವೆ. ಧರ್ಮದ ಬಗೆಗಿನ ಗಾಢ ನಂಬಿಕೆಗಳ ಜಗತ್ತು ಚೋಮನ ಬದುಕಿನಲ್ಲಿ ವಹಿಸುವ ನಿರ್ಣಾಯಕ ಪಾತ್ರವೂ ಸಹ ಚಿತ್ರದಲ್ಲಿ ಘನೀಕೃತವಾಗುವುದು ವಿಶಿಷ್ಟವಾಗಿದೆ. ಚೋಮ ನೆಲದಾಸೆಗೆ ಚರ್ಚಿಗೆ ಹೋಗಿ, ಮತಾಂತರಕ್ಕೆ ಮನಸ್ಸು ಬಾರದೆ ಹಿಂದಿರುಗಿ ಬರುವಾಗ ಅಸಹ್ಯ ಪಟ್ಟುಕೊಂಡು ಹೊಳೆಯಲ್ಲಿ ಮುಳುಗು ಹಾಕುತ್ತಾನೆ. ಕೊನೆಗೆ ಮತಾಂತರಗೊಳ್ಳಲು ನಿರ್ಧರಿಸಿದ ನಂತರ ದಾರಿಯಲ್ಲಿ ಎದುರಾಗುವ ಪಂಜುರ್ಲಿ ಬಗೆಗಿನ ಗಾಢ ನಂಬಿಕೆಯನ್ನು ದಾಟಲಾಗದೇ ಹೋಗುತ್ತಾನೆ. ಹೀಗೆ ಧಾರ್ಮಿಕ ಚೌಕಟ್ಟು ಚೋಮನ ವಿಮೋಚನೆಗೆ ಅಡ್ಡವಾಗುತ್ತದೆ.
ಕೊನೆಯದಾಗಿ; ದಮನಿತ ಮತ್ತು ದಮನಕಾರ; ಶೋಷಕ ಮತ್ತು ಶೋಷಿತನ ಪಾತ್ರಗಳು ಎಂದೂ ಶಾಶ್ವತವಲ್ಲ. ಅವು ಅಸ್ಥಿರ, ನಶ್ವರ. ಸಾಮಾಜಿಕ ಸಂಬಂಧಗಳಲ್ಲಿ ಶೋಷಿತ ಶೋಷಕನನ್ನು ಮೆಟ್ಟಿನಿಲ್ಲುವ ಅವಕಾಶಗಳು, ಶೋಷಕ ಶೋಷಿತನಾಗಿ ಬದಲಾಗುವಂಥ ಕ್ರಿಯೆಗಳು ಜರುಗುತ್ತಲೇ ಇರುತ್ತವೆ. ಈ ಪಾತ್ರ ಬದಲಾವಣೆಗೆ ಸಮಾಜ ನಿರಂತರವಾಗಿ ವಿನ್ಯಾಸಗಳನ್ನು ಹೆಣೆಯುತ್ತಿರುತ್ತದೆ. ಅಂಥ ಅವಕಾಶಗಳನ್ನು ತನ್ನ ಸ್ಥಾನ ಬದಲಿಸಿಕೊಳ್ಳಲು ಪಾತ್ರಗಳು ಹೆಣಗುತ್ತವೆ ಎಂಬ ಸಾಮಾಜಿಕ ಸಿದ್ಧಾಂತವನ್ನು ಪ್ರಸಿದ್ಧ ನಾಟಕಕಾರ ಬರ್ಟೋಲ್ಟ್ ಬೆಷ್ಟ್ ನಂಬಿದ್ದ. ಐರೋಪ್ಯ ಸಮಾಜದಲ್ಲಿ ಅಂಥ ಚಲನಶೀಲತೆಗೆ ಅನೇಕ ಉದಾಹರಣೆಗಳು ದೊರೆಯುತ್ತವೆ. ಆದರೆ ಜಾತೀಯ ಕಟ್ಟುಪಾಡಿನಲ್ಲಿ ಸಿಕ್ಕು, ಚಲನಶೀಲತೆಯನ್ನು ಕಳೆದುಕೊಂಡ ಸಮಾಜದಲ್ಲಿ ಶೋಷಿತನ ಬಿಡುಗಡೆಗೆ ಸಾಮಾಜಿಕ ಸಂಬಂಧಗಳು ನೆರವಾಗುವುದೇ ಇಲ್ಲ. ಇದು ಭಾರತೀಯ ಸಮಾಜದ ಕಟುವಾಸ್ತವ. ಅಂಥ ಕಟುವಾಸ್ತವವನ್ನು ತೆರೆದಿಟ್ಟ ಮೊದಲ ಚಿತ್ರ ‘ಚೋಮನದುಡಿ’.
ಆರಂಭದಲ್ಲಿ ಹೇಳಿದಂತೆ ಅಸ್ಪಶ್ಯತೆಯ ಸಮಸ್ಯೆಯನ್ನು ಅದರೆಲ್ಲ ಆಯಾಮಗಳಿಂದ ಶೋಧಿಸುವ ಪ್ರಯತ್ನಗಳು ಹೆಚ್ಚು ನಡೆದಿಲ್ಲ. ಅದಕ್ಕೆ ಬೇಕಾದ ಸಿದ್ಧತೆ ಧೈರ್ಯದ ಕೊರತೆ ನಮ್ಮ ನಿರ್ದೇಶಕರಲ್ಲಿದೆ. ಇತ್ತೀಚೆಗೆ ಬಂದ ‘ಆರ್ಟಿಕಲ್ 15’ ಈ ನಿಟ್ಟಿನಲ್ಲಿ ಮಿತಿಗಳ ನಡುವೆಯೂ ಒಂದು ಗಮನಾರ್ಹ ಪ್ರಯತ್ನ. ನಮ್ಮ ನೆಲದಲ್ಲಿ ಹನ್ನೆರಡನೆಯ ಶತಮಾನದ ವಚನಕಾರರ ಆಂದೋಲನ, ಇಪ್ಪತ್ತನೆಯ ಶತಮಾನದ ಆರಂಭದಿಂದ ನಡೆದ ಹಿಂದುಳಿದ ವರ್ಗಗಳ ಚಳವಳಿ, ಮೈಸೂರು ಸಂಸ್ಥಾನದಲ್ಲಿ ಅಸ್ಪಶ್ಯರ ಏಳಿಗೆಗಾಗಿ ಕೈಗೊಂಡ ಸುಧಾರಣೆಗಳು, ಬೂಸಾ ಪ್ರಕರಣದ ನಂತರ ಗರಿಗಟ್ಟಿಕೊಂಡ ದಲಿತ ಚಳವಳಿ, ಬಂಡಾಯ ಸಾಹಿತ್ಯ ಇತ್ಯಾದಿಗಳು ಅಸ್ಪಶ್ಯ ಸಮಸ್ಯೆ ಬಗೆಗಿನ ಚಿತ್ರ ನಿರ್ಮಾಣಕ್ಕೆ ಹೆಚ್ಚಿನ ಪ್ರೇರಣೆಯೊದಗಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಈ ಸಮಸ್ಯೆಯು ‘ಚೋಮನದುಡಿ’ ಬಿಟ್ಟರೆ ಮತ್ತಾವುದೇ ಚಿತ್ರದಲ್ಲಿ ಮುನ್ನೆಲೆಗೆ ಬರಲಿಲ್ಲ ಎನ್ನುವುದೂ ಅಷ್ಟೇ ಗಮನಾರ್ಹ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top