ಜೆಸ್ಸಿಯ ಅಸಾಮಾನ್ಯ ಬದುಕಿನ ಸಣ್ಣ ಕಥೆ | Vartha Bharati- ವಾರ್ತಾ ಭಾರತಿ

ಜೆಸ್ಸಿಯ ಅಸಾಮಾನ್ಯ ಬದುಕಿನ ಸಣ್ಣ ಕಥೆ

ಜಗತ್ತಿನ ಶ್ರೇಷ್ಠ ಕ್ರೀಡಾಪಟುಗಳ ಜೀವನಸಾಧನೆಯನ್ನು ಚಲನಚಿತ್ರ ರೂಪದಲ್ಲಿ ನಿರೂಪಿಸುವ ಸಮಯದಲ್ಲಿಯೇ ಆಟಗಾರ ಮತ್ತು ಆಟದ ಬಯಲಿನ ಆಚೆಗಿನ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಸಾಗುತ್ತದೆ. ಅಂತಹ ಪ್ರಯತ್ನಗಳು ಆಟಗಾರನ ಜೀವನಕಥೆಯನ್ನು ಮಾತ್ರವಲ್ಲದೆ ಒಂದು ಕಾಲಘಟ್ಟದ ಸಮಾಜ, ಸಂಸ್ಕೃತಿ ಮತ್ತು ರಾಜಕೀಯ ಸಂಗತಿಗಳ ಸಂಕಥನವೂ ಆಗುತ್ತದೆ. ಅಂಥದೊಂದು ಅಪರೂಪದ ಪ್ರಯತ್ನ ರೇಸ್ ಚಲನಚಿತ್ರ.

ಆತನ ಹೆಸರು ಜೇಮ್ಸ್ ಕ್ಲೀವ್‌ಲಾಂಡ್ ಓವೆನ್ಸ್. ಚಿಕ್ಕದಾಗಿ ಜೆ.ಸಿ.ಓವೆನ್ಸ್ ಎಂದೇ ಕರೆಯುತ್ತಿದ್ದರು. ಆದರೆ ಶಾಲೆಯ ಒಬ್ಬ ಬೋಧಕಿ ಜೆಸ್ಸಿ ಎಂದು ಕರೆದದ್ದೇ ಶಾಶ್ವತವಾಯಿತು.

 ಜೆಸ್ಸಿ ಚರಿತ್ರೆಯ ಕೂಸು. ಅಮೆರಿಕದ ಶ್ರೀಮಂತಿಕೆಗೆ ಕಾರಣವಾದ ಕರಿಯ ಗುಲಾಮರ ಪರಂಪರೆಯಿಂದ ಬಂದವನು. ಗುಲಾಮರ ವಿಮೋಚನೆಯ ನಂತರ ಆತನ ತಂದೆ ಬಿಳಿಯರ ಹೊಲ ಹಿಡಿದು ಗೇಣಿಗೆ ದುಡಿಯುತ್ತಿದ್ದ. ಮೂವರು ಸೋದರಿಯರು ಮತ್ತು ಏಳುಜನ ಸೋದರರ ಒಟ್ಟು ಹನ್ನೊಂದು ಮಕ್ಕಳಲ್ಲಿ ಜೆಸ್ಸಿ ಹತ್ತನೆಯವನು. 1910ರ ಅಮೆರಿಕದ ಜನಸಂಖ್ಯಾ ವರದಿ ಪ್ರಕಾರ ರಾಷ್ಟ್ರದಲ್ಲಿ ವಾಸವಿದ್ದ ಒಟ್ಟು ಆಫ್ರೊ ಅಮೆರಿಕನ್ ಕರಿಯರಲ್ಲಿ ಶೇ.90ರಷ್ಟು ಮಂದಿ ದಕ್ಷಿಣ ರಾಜ್ಯಗಳಲ್ಲಿ ದುಡಿಯುತ್ತಿದ್ದರು. ಬಿಳಿಯರ ಕಿರುಕುಳ. ಜನಾಂಗಭೇದ ಕಾಟ ತಾಳಲಾಗದೆ 1916ರಿಂದ ಕರಿಯರು ಉತ್ತರಪ್ರಾಂತದ ನಗರಗಳಲ್ಲಿ ಕೆಲಸ ಅರಸಿ ವಲಸೆ ಹೋಗಲಾರಂಭಿಸಿದರು. ಹದಿನೈದು ಲಕ್ಷ ಕರಿಯರು ನೆಲೆತೊರೆದು ಹೋದ ಆ ಘಟನೆಯ ಅವಧಿ ಅಮೆರಿಕದ ಮಹಾ ವಲಸೆ ಅಥವಾ ಕರಿಯರ ವಲಸೆ ಎಂದೇ ಇತಿಹಾಸದಲ್ಲಿ ದಾಖಲಾಗಿದೆ. ಆ ಅವಧಿಯಲ್ಲಿ ದಕ್ಷಿಣ ಪ್ರಾಂತವನ್ನು (ಅಲಬಾಮ) ಬಿಟ್ಟು ಉತ್ತರದ ಕಡೆ ಗಂಟುಮೂಟೆ ಕಟ್ಟಿ ಹೊರಟ ಕುಟುಂಬದಲ್ಲಿ ಓವೆನ್ಸ್ ಕುಟುಂಬವೂ ಒಂದು. ಒಹಾಯೋ ಪ್ರಾಂತದ ಕ್ಲೀವ್‌ಲ್ಯಾಂಡ್ ನಗರದಲ್ಲಿ ಓವೆನ್ಸ್ ಕುಟುಂಬ ನೆಲೆಯಾದಾಗ ಜೆಸ್ಸಿಗೆ ಒಂಬತ್ತು ವರ್ಷ. ಶಾಲೆಗೆ ಸೇರಿದರೂ ಬಿಡುವಿನ ವೇಳೆಯಲ್ಲಿ ಜೆಸ್ಸಿ ಸಣ್ಣಪುಟ್ಟ ಕೆಲಸ ಮಾಡಿ ಕುಟುಂಬದ ದುಡಿಮೆಗೆ ನೆರವಾಗುತ್ತಿದ್ದ. ಶೂ ರಿಪೇರಿ ಅಂಗಡಿಯಲ್ಲಿ, ದಿನಸಿ ಅಂಗಡಿಯಲ್ಲಿ ಸಹಾಯಕನ ಕೆಲಸದಿಂದ ಹಿಡಿದು ಲಾರಿಗಳಿಗೆ ಸಾಮಾನು ಪೇರಿಸುವವರೆಗೆ ನಾನಾ ಕೆಲಸದಲ್ಲಿ ತೊಡಗಿದ್ದ. ಆಗ ಅವನಿಗೆ ತಾನು ವೇಗವಾಗಿ ಓಡಬಲ್ಲೆನೆಂಬುದು ಅರಿವಾಯಿತು. ಅದೇ ವೇಳೆ ಫೇರ್‌ಮೌಂಟ್ ಜೂನಿಯರ್ ಹೈಸ್ಕೂಲ್‌ನಲ್ಲಿದ್ದ ಚಾರ್ಲ್ಸ್ ರೈಲಿ ಎಂಬ ಕೋಚ್ ಅವನ ಸಾಮರ್ಥ್ಯಕ್ಕೆ ಬೆರಗಾಗಿ ಅವನಲ್ಲಿದ್ದ ಓಟಗಾರನನ್ನು ಬಡಿದೆಬ್ಬಿಸಿದ. ಅಲ್ಲಿಂದಾಚೆಗೆ ಆ ಓಟಗಾರ ಎಂದೂ ವಿರಮಿಸಲಿಲ್ಲ.

ಬಿಳಿಯ ವಿದ್ಯಾರ್ಥಿಗಳ ಕುಹಕದ ನಡುವೆಯೂ ಜೆಸ್ಸಿ ಓಟಗಾರನಾಗಿ ಅರಳಿದ. ದಾಖಲೆಯ ಮೇಲೆ ದಾಖಲೆಯನ್ನು ನಿರ್ಮಿಸುತ್ತಾ ಹೋದ. 1935ರ ಮೇ 25ರಂದು ಜೆಸ್ಸಿ ಆಟೋಟಗಳ ಸ್ಪರ್ಧೆಯಲ್ಲಿ ಹೊಸ ಇತಿಹಾಸ ಬರೆದ. ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ವೆಸ್ಟರ್ನ್‌ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಕೂಟದಲ್ಲಿ (ಮುಂದೆ ಬಿಗ್ ಟೆನ್ ಎಂದೇ ಹೆಸರಾಯಿತು) ಒಹಾಯೋ ಸ್ಟೇಟ್ ಯೂನಿವರ್ಸಿಟಿ ಪ್ರತಿನಿಧಿಸಿದ್ದ ಜೆಸ್ಸಿ 100 ಗಜ ಓಟದಲ್ಲಿ ವಿಶ್ವದಾಖಲೆ ಸರಿಗಟ್ಟಿದ. 220 ಗಜದ ಓಟ, 220 ಗಜ ಲೋ ಹರ್ಡಲ್ಸ್ ಮತ್ತು ಲಾಂಗ್ ಜಂಪ್‌ನಲ್ಲಿ ಹೊಸ ವಿಶ್ವದಾಖಲೆ ಮಾಡಿದ. ಈ ನಾಲ್ಕು ಸ್ಪರ್ಧೆಗಳನ್ನು ಕೇವಲ 45 ನಿಮಿಷದಲ್ಲಿ ಪೂರೈಸಿದ್ದ. ಅಷ್ಟು ಕ್ಷಿಪ್ರ ಅವಧಿಯಲ್ಲಿ ಅಷ್ಟೊಂದು ದಾಖಲೆ ಮಾಡಿದ ಇತಿಹಾಸ ಮತ್ತೆ ಎಂದೂ ಪುನರಾವರ್ತನೆಯಾಗಿಲ್ಲ!

1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಓವೆನ್ಸ್ ದಂತಕಥೆಯೇ ಆಗಿಹೋದ. ಆರ್ಯಕುಲದ ಹಿರಿಮೆಯನ್ನು ಜಗತ್ತಿಗೆ ಸಾರುವ ವೇದಿಕೆಯಾಗಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಬಳಸಲು ಉದ್ದೇಶಿಸಿದ್ದ ಹಿಟ್ಲರನ ಯೋಜನೆಯನ್ನು ತಲೆಕೆಳಗು ಮಾಡಿದ. ಕರಿಯನ ಸಾಧನೆಯನ್ನು ಕಂಡು ಕರುಬಿದ ಹಿಟ್ಲರ್ ಅವನನ್ನು ಅಭಿನಂದಿಸದೆ ಕ್ರೀಡಾಂಗಣದಿಂದ ಹೊರನಡೆದ. ಮೂರು ಓಟದ ಸ್ಪರ್ಧೆ ಮತ್ತು ಒಂದು ರಿಲೇ ಸ್ಪಧೆರ್ಯಲ್ಲಿ ನಾಲ್ಕು ಚಿನ್ನದ ಪದಕ ಗಳಿಸಿದ ಜೆಸ್ಸಿ ಬಿಳಿಯ ಜನಾಂಗದ ಅಭಿಮಾನವನ್ನು ಗಳಿಸಿದ. ಜರ್ಮನಿಯ ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ಅಪ್ಪಿದರು. ಲಾಂಗ್ ಜಂಪ್‌ನಲ್ಲಿ ಅರ್ಹತಾ ಸುತ್ತಿನಲ್ಲಿಯೇ ಕೊನೆಯಾಗಬೇಕಾಗಿದ್ದ ಜೆಸ್ಸಿಯ ಗೆಲುವಿಗೆ ನೆರವಾದವನು ಅವನ ಪ್ರತಿಸ್ಪರ್ಧಿ ಜರ್ಮನಿಯ ಕಾರ್ಲ್ ಲುಡ್ವಿಗ್ ಲಾಂಗ್. ಬೆಳ್ಳಿ ಪದಕ ಪಡೆದ ಲಾಂಗ್ ಮುಂದೆ ಬಂದು ಜೆಸ್ಸಿಯ ಜೊತೆ ಗೆಲುವಿನ ನಡೆ(ವಿಕ್ಟರಿ ಲ್ಯಾಪ್)ಯಲ್ಲಿ ಹೆಜ್ಜೆ ಹಾಕಿದಾಗ ಆಟವು ಸೃಷ್ಟಿಸುವ ರೋಮಾಂಚನಕ್ಕೆ ನೆರೆ ಬಂದಿತ್ತು.

ಕರಿಯರ ಕೀಳರಿಮೆ ಸಂಕಷ್ಟಗಳ ವಿಮೋಚನೆಗೆ ಕ್ರೀಡೆಯೊಂದು ಮಹಾಮಾರ್ಗ ಎಂದು ತೋರಿಸಿದವನು ಜೆಸ್ಸಿ ಓವೆನ್ಸ್. ಅವನು ತೆರೆದ ಮಾರ್ಗದಲ್ಲಿ ಮುಂದೆ ಕರಿಯರು ಹಾರುತ್ತಾ, ಓಡುತ್ತಾ, ನೆಗೆಯುತ್ತಾ ಆಟದಲ್ಲಿ ಸಂಭ್ರಮಿಸುತ್ತ ಜಗತ್ತನ್ನು ಗೆದ್ದದ್ದು ಈಗ ಇತಿಹಾಸ. ಇಂಥ ಚಾರಿತ್ರಿಕ ಪುರುಷ ಒಲಿಂಪಿಕ್ಸ್ ಕೂಟದಲ್ಲಿ ಸೃಷ್ಟಿಸಿದ ದಾಖಲೆ 48 ವರ್ಷ ಅಂದರೆ ಅದೇ ಇನ್ನೊಬ್ಬ ಕರಿಯ ಕಾರ್ಲ್ ಲೂಯಿಸ್ 1984ರಲ್ಲಿ ಅದೇ ಈವೆಂಟ್‌ಗಳಲ್ಲಿ ಚಿನ್ನ ಪಡೆಯುವವರೆಗೆ ಅಬಾಧಿತವಾಗಿತ್ತು. ಬರ್ಲಿನ್‌ನಲ್ಲಿ ಮಾಡಿದ ಲಾಂಗ್ ಜಂಪ್ ದಾಖಲೆ 25 ವರ್ಷ ಯಾರೂ ಮುರಿದಿರಲಿಲ್ಲ. ಹೊಸ ದಾಖಲೆ ಮಾಡಲು ಮತ್ತೊಬ್ಬ ಕರಿಯ ಬಾಬ್ ಬೀಮನ್ ಬರಬೇಕಾಯಿತು.

(ಜೆಸ್ಸಿ ಮತ್ತು ಸಿನೆಮಾದ ಜೆಸ್ಸಿ ಪಾತ್ರಧಾರಿ ಸ್ಟೀಫನ್ ಜೇಮ್ಸ್)

ಆತನೊಬ್ಬ ಸರ್ವಕಾಲದ ಶ್ರೇಷ್ಠ ಕ್ರೀಡಾಪಟು. ಕರಿಯನಾಗಿ ಅಪಮಾನ ತಲ್ಲಣ ಅನುಭವಿಸಿದರೂ ಮಾನವ ಘನತೆಗೆ ಹೊಸ ಅರ್ಥ ತಂದವನು. ಆಟಕ್ಕೆ ಮತ್ತು ಮನುಕುಲ ಕ್ಕೊಂದು ಆಭರಣವಾಗಿದ್ದ ಜೆಸ್ಸಿ ಬದುಕು, ಚಿಂತನೆ ಮತ್ತು ಕ್ರಿಯೆಯಲ್ಲಿ ಪರಿಶುದ್ಧನಾಗಿದ್ದ. ಉತ್ತಮ ಆಟಗಾರ ಮತ್ತು ಉತ್ತಮ ಮನುಷ್ಯರಾಗಬೇಕೆಂಬವರಿಗೆ ಆತನೊಬ್ಬ ರೋಲ್ ಮಾಡೆಲ್: ಅನುಕರಣೀಯ ವ್ಯಕ್ತಿ.

ಇಂಥ ಅಸಾಮಾನ್ಯ ಕ್ರೀಡಾಪಟುವಿನ ಜೀವನದ ಮಹತ್ವದ ಘಟ್ಟದ ಕಥನವು ‘ರೇಸ್’(2016) ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಈ ಚಿತ್ರವು ಅನೇಕ ದೃಷ್ಟಿಯಿಂದ ಮಹತ್ವವಾದದ್ದು. ಜಗತ್ತಿಗೆ ನಾಝಿಗಳ ಹಿರಿಮೆಯನ್ನು ಸಾರಲು ಒಲಿಂಪಿಕ್ ವೇದಿಕೆಯನ್ನು ರೂಪಿಸಿದ್ದ ಹಿಟ್ಲರನೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಗೆಲುವು ಸಾಧಿಸಿದ ಜೆಸ್ಸಿ ಓವೆನ್ಸ್ ಮೂಲಕ ಆಟದ ಸುಂದರ ಗಳಿಗೆಗಳನ್ನು ಸೆರೆ ಹಿಡಿದ ಸಿನೆಮಾ ಇದು. ಬರ್ಲಿನ್ ಒಲಿಂಪಿಕ್ಸ್ ಪೂರ್ವದ ಓವೆನ್ಸ್ ಬದುಕಿನ ಮಹತ್ವಪೂರ್ಣ ಮೂರು ವರ್ಷಗಳ ಬದುಕು ಈ ಚಿತ್ರದ ಹೂರಣ. ಆ ಮೂರು ವರ್ಷಗಳ ಅವಧಿಯಲ್ಲಿ ಓವೆನ್ಸ್‌ನನ್ನು ನೆಪವಾಗಿರಿಸಿಕೊಂಡು ನಿರ್ದೇಶಕ ಸ್ಟೀಫನ್ ಹಾಕಿನ್ಸ್ ಆ ಕಾಲಘಟ್ಟದ ಕರಿಯರ ಪರಿಸ್ಥಿತಿ, ಕ್ರೀಡಾ ರಾಜಕೀಯ, ಎರಡನೇ ಮಹಾಯುದ್ಧ ಪೂರ್ವದ ಹಿಟ್ಲರನ ಸರ್ವಾಧಿಕಾರ, ಗೋಬೆಲ್ಸ್‌ನ ತಂತ್ರಗಾರಿಕೆ, ಅಮೆರಿಕದ ಬಿಳಿಯರ ಗರ್ವ, ಕರಿಯರ ಮೇಲಿನ ದಬ್ಬಾಳಿಕೆ ಇತ್ಯಾದಿಗಳವರೆಗೂ ಚಿತ್ರವನ್ನು ವಿಸ್ತರಿಸಿದ್ದಾನೆ.

ಈಗಾಗಲೇ ಓಟದ ಸ್ಪರ್ಧೆಗಳಲ್ಲಿ ಖ್ಯಾತಿ ಪಡೆದರೂ, ಜನಾಂಗೀಯ ದ್ವೇಷ, ಅವಹೇಳನಗಳಿಗೆ ತುತ್ತಾದ ಜೆಸ್ಸಿ ಓವೆನ್ಸ್, ಓಹಾಯೋ ಸ್ಟೇಟ್ ಯೂನಿವರ್ಸಿಟಿಗೆ ಆಗಮಿಸುವ ಕಾಲದಿಂದ ಚಿತ್ರ ಆರಂಭವಾಗುತ್ತದೆ. ತನ್ನ ಓಟದ ಚುರುಕುತನದಿಂದ ಅಲ್ಲಿನ ಬಿಳಿಯ ಕೋಚ್ ಲಾರೆನ್ಸ್(ಲ್ಯಾರಿ) ಸ್ನೈಡರ್‌ನ ಗಮನ ಸೆಳೆಯುತ್ತಾನೆ. ಒಂದು ಕಾಲದಲ್ಲಿ ಸ್ವತಃ ಓಟಗಾರನಾಗಿ ಖ್ಯಾತಿ ಗಳಿಸಿದ್ದ ಆದರೆ ಮಿಲಿಟರಿ ಸೇವೆಯಲ್ಲಿ ಗಾಯಗೊಂಡ ಲ್ಯಾರಿ ಸ್ನೈಡರ್ ಆಫ್ರೊಅಮೆರಿಕನ್ನರ ಆಟದ ಪ್ರತಿಭೆಗೆ ಸಾಣೆ ಹಿಡಿದವನು. ಜೆಸ್ಸಿ ಓವೆನ್ಸ್‌ನ ಅಪ್ರತಿಮ ಸಾಮರ್ಥ್ಯ ಕಂಡ ಆತ ಓವೆನ್ಸ್ ತಾಂತ್ರಿಕವಾಗಿ ಸುಧಾರಿಸಬೇಕಾದ ಅಗತ್ಯವನ್ನು ಮನಗಾಣುತ್ತಾನೆ. ಅವನನ್ನು ತರಬೇತುಗೊಳಿಸುವ ಸ್ನೈಡರ್, 1936ರ ಒಲಿಂಪಿಕ್ಸ್‌ಗೆ ಅರ್ಹವಾಗಿರುವುದನ್ನು ತಿಳಿಸಿದಾಗ ಓವೆನ್ಸ್ ನಾಝಿ ಜರ್ಮನಿಯ ಜನಾಂಗೀಯ ದ್ವೇಷದಿಂದ ಭಾಗವಹಿಸಲು ಹಿಂದೆಗೆಯುತ್ತಾನೆ. ಅಮೆರಿಕದ ಒಲಿಂಪಿಕ್ ಸಮಿತಿ ಸಹ ನಾಝಿ ಒಲಿಂಪಿಕ್ ಕೂಟ ಬಹಿಷ್ಕರಿಸುವ ಸಿದ್ಧತೆಯಲ್ಲಿರುತ್ತದೆ. ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಯಾರು ಬೇಕಾದರೂ ಸ್ಪರ್ಧಿಸಲು ಮುಕ್ತ ಅವಕಾಶವಿದೆ ಎಂದು ನಾಝಿ ಸರಕಾರದ ಪ್ರಸಾರ ಸಚಿವ ಪಾಲ್ ಜೋಸೆಫ್ ಗೋಬೆಲ್ಸ್ ಭರವಸೆ ನೀಡಿದಾಗ ಅಮೆರಿಕ ಒಪ್ಪಿಕೊಳ್ಳುತ್ತದೆ.

ಇದೇ ವೇಳೆ ತನ್ನ ಗರ್ಲ್‌ಫ್ರೆಂಡ್ ಮಿನಿ ರೂಥ್ ಸಾಲೊಮನ್ ಮತ್ತು ಮಗಳ ಬದುಕಿಗೆ ನೆರವಾಗಲು ಓವೆನ್ಸ್ ಕೆಲಸವೊಂದಕ್ಕೆ ಸೇರುತ್ತಾನೆ. ಆಟದ ತಾಲೀಮಿನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಸ್ನೈಡರ್ ಆತನಿಗೆ ಶಿಷ್ಯವೇತನ ಕೊಡಿಸಿ ತರಬೇತಿಯಲ್ಲಿ ತಲ್ಲೀನನಾಗಲು ನೆರವಾಗುತ್ತಾನೆ.

1935, ಮೇ 25, ಜಗತ್ತಿನ ಕ್ರೀಡಾ ಚರಿತ್ರೆಯಲ್ಲಿ ಮಹತ್ವದ ದಿನ. ಅಂದು ಮಿಷಿಗನ್‌ನ ಆನ್ ಆರ್ಬರ್‌ನಲ್ಲಿ ನಡೆದ ಬಿಗ್ ಟೆನ್ ಕ್ರೀಡಾಕೂಟದಲ್ಲಿ ಓವೆನ್ಸ್ 45 ನಿಮಿಷಗಳ ಅವಧಿಯಲ್ಲಿ ಭಾಗವಹಿಸಿದ 4 ಸ್ಪರ್ಧೆಗಳ ಮೂರರಲ್ಲಿ ವಿಶ್ವದಾಖಲೆ ಮಾಡಿ ಒಂದರಲ್ಲಿ ವಿಶ್ವದಾಖಲೆ ಸರಿಗಟ್ಟಿದ ಚಾರಿತ್ರಿಕ ಕ್ಷಣಗಳನ್ನು ಚಿತ್ರ ಪರಿಣಾಮಕಾರಿಯಾಗಿ ಚಿತ್ರಿಸಿದೆ. ಹೊಸದಾಗಿ ಆವರಿಸಿದ ಪ್ರಸಿದ್ಧಿಯ ಗುಂಗು ಅವನನ್ನು ಹುಡುಗಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿಸುತ್ತದೆ. ಇದರ ಸುಳಿವು ತಿಳಿದ ರೂಥ್ ಕಾನೂನು ಕ್ರಮಕ್ಕೆ ಮುಂದಾದಾಗ ಓವೆನ್ಸ್ ದಂಗಾಗುತ್ತಾನೆ. ಮುಂದಿನ ಸ್ಪರ್ಧೆಯಲ್ಲಿ ಅಗ್ರಸ್ಥಾನದಿಂದ ವಂಚಿತನಾಗುತ್ತಾನೆ. ತಪ್ಪನ್ನು ಅರಿತು ರೂಥ್‌ನಲ್ಲಿ ಕ್ಷಮಾಪಣೆ ಕೇಳಿ ಹಗುರವಾಗುವ ಓವೆನ್ಸ್ ಒಲಿಂಪಿಕ್ಸ್‌ಗೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಾನೆ. ಆದರೆ ಅದೇ ವೇಳೆಗೆ ಕರಿಯ ಜನಾಂಗದ ಸುಧಾರಣೆಗಾಗಿ ರಾಷ್ಟ್ರೀಯ ಸಮಿತಿಯು ರಾಜಕೀಯ ಕಾರಣಗಳಿಗಾಗಿ ಓವೆನ್ಸ್ ಹೋಗಬಾರದೆಂದು ಸಂದೇಶ ಕಳಿಸುತ್ತದೆ. ಜರ್ಮನಿಯು ಜನಾಂಗಭೇದವನ್ನು ಅನುಸರಿಸುತ್ತದೆ ಎಂಬ ಕಾರಣಕ್ಕಾಗಿ ಅಮೆರಿಕ ಒಲಿಂಪಿಕ್ಸ್ ಕೂಟ ಬಹಿಷ್ಕರಿಸಲು ಮುಂದಾಗಿತ್ತು. ಆದರೆ ಇಲ್ಲಿನ ಕರಿಯರ ಪಾಡು, ನಾಝಿ ಜರ್ಮನಿಯ ಯಹೂದಿಗಳಿಗಿಂತ ಹೇಗೆ ಭಿನ್ನ? ಎಂಬ ಪ್ರಶ್ನೆಯನ್ನು ಮುಂದಿಟ್ಟು ಕೇವಲ ರಾಷ್ಟ್ರದ ಪದಕಕ್ಕಾಗಿ ಕರಿಯರನ್ನು ಬಳಸಿಕೊಳ್ಳುವುದನ್ನು ಅಮೆರಿಕದ ಉದ್ದೇಶವನ್ನು ವಿಫಲಗೊಳಿಸಬೇಕಾದರೆ ಹೋಗದಿರುವುದೇ ಉಚಿತವೆಂದು ಸಮಿತಿಯ ಪ್ರತಿನಿಧಿ ಮನವೊಲಿಸುತ್ತಾನೆ. ಗೊಂದಲದಲ್ಲಿ ಬಿದ್ದ ಓವೆನ್ಸ್ ಮೊದಲು ನಿರಾಕರಿಸಿದರೂ ಹಲವರ ಒತ್ತಾಯಕ್ಕೆ ಮಣಿದು ಬರ್ಲಿನ್‌ನತ್ತ ಹೊರಡುತ್ತಾನೆ.

ಬರ್ಲಿನ್‌ನಲ್ಲಿ ಓವೆನ್ಸ್ 100 ಮೀ. ಸ್ಪರ್ಧೆಯಲ್ಲಿ ಮೊದಲ ಚಿನ್ನವನ್ನು ಗೆಲ್ಲುತ್ತಾನೆ. ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯ ಅಮೆರಿಕದ ಅವೆರಿ ಬ್ರಂಡೇಜ್ ಆತನನ್ನು ಕರೆದುಕೊಂಡು ಹಿಟ್ಲರ್ ಬಳಿ ಕರೆದೊಯ್ಯುವ ವೇಳೆಗೆ ಕರಿಯನನ್ನು ಅಭಿನಂದಿಸಲು ನಿರಾಕರಿಸಿ ಆತ ಜಾಗ ಖಾಲಿ ಮಾಡಿರುತ್ತಾನೆ. ಸಂಚಾರ ದಟ್ಟಣೆ ನಿವಾರಿಸಿಕೊಳ್ಳಲು ಹಿಟ್ಲರ್ ಬೇಗ ಹೊರಡಬೇಕಾಯಿತೆಂದು ಗೋಬೆಲ್ಸ್ ಸಮಾಧಾನ ಮಾಡಿದರೂ ಕೆರಳಿದ ಬ್ರಂಡೇಜ್ ಹಿಟ್ಲರ್ ಗೆದ್ದ ಎಲ್ಲ ಸ್ಪರ್ಧಿಗಳನ್ನೂ ಅಭಿನಂದಿಸಬೇಕು. ಇಲ್ಲವೇ ಯಾರನ್ನೂ ಅಭಿನಂದಿಸಬಾರದು ಎಂದು ಗಡಸು ದನಿಯಲ್ಲಿ ಹೇಳಿ ಓವೆನ್ಸ್‌ನನ್ನು ಕರೆದೊಯ್ಯುತ್ತಾನೆ.

ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಸತತ ಫೌಲ್ ಮಾಡಿದ ಜೆಸ್ಸಿಗೆ ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಇದ್ದದ್ದು ಒಂದು ಪ್ರಯತ್ನ ಮಾತ್ರ. ಆಗ ಜರ್ಮನಿಗೆ ಚಿನ್ನವನ್ನು ತಂದುಕೊಡಬಲ್ಲ ಕಾರ್ಲ್ ಲುಜ್ ಲಾಂಗ್ ತನ್ನ ಎದುರಾಳಿ ಓವೆನ್ಸ್‌ಗೆ ತನ್ನ ನೆಗೆಯುವ ಹಂತವನ್ನು ಬದಲು ಮಾಡಲು ಸೂಚನೆ ನೀಡುತ್ತಾನೆ. ಅದನ್ನು ಪಾಲಿಸಿದ ಓವೆನ್ಸ್ ಮುಂದೆ ಚಿನ್ನದ ಪದಕವನ್ನೇ ಗೆಲ್ಲುತ್ತಾನೆ. ಮುಂದೆ ಎರಡು ವಿಭಿನ್ನ ಸಂಸ್ಕೃತಿಗಳ ಕ್ರೀಡಾಪಟುಗಳು ಗೆಳೆಯರಾಗುವ ಕತೆ ಬೇರೆಯೇ ಇದೆ! ಎರಡು ನೂರು ಮೀಟರ್ ಸ್ಪರ್ಧೆಯಲ್ಲಿ ಮತ್ತೊಂದು ಚಿನ್ನದ ಪದಕ ಗೆದ್ದು ತನಗೆ ನೀಡಿದ ಅವಕಾಶಗಳಲ್ಲಿ ಸಾಧನೆ ಮಾಡಿದ ತೃಪ್ತಿ ಪಡೆಯುತ್ತಾನೆ. ಆದರೆ 4x100 ರಿಲೇ ಅಮೆರಿಕ ತಂಡದಲ್ಲಿದ್ದ ಇಬ್ಬರು ಯಹೂದಿ ಆಟಗಾರರನ್ನು ತೆಗೆಯಬೇಕಾದ ಸಂಕಟದಲ್ಲಿ ಬ್ರಂಡೇಜ್ ಸಿಕ್ಕಿಹಾಕಿಕೊಳ್ಳುತ್ತಾನೆ. ಗೋಬೆಲ್ಸ್ ತಂತ್ರ ಅಲ್ಲಿ ಫಲಿಸುತ್ತದೆ. ಬಲವಂತದಿಂದ ಬದಲಿ ಓಟಗಾರನಾಗಿ ಸೇರಿಕೊಳ್ಳುವ ಓವೆನ್ಸ್ ನಾಲ್ಕನೇ ಚಿನ್ನಕ್ಕೆ ಕೊರಳೊಡ್ಡುತ್ತಾನೆ. ಇಡೀ ಕ್ರೀಡಾಕೂಟದ ಚಿತ್ರೀಕರಣ ಮಾಡಿ ದಾಖಲಿಸಲು ನೇಮಕಗೊಂಡ ಸಾಕ್ಷ್ಯಚಿತ್ರ ನಿರ್ದೇಶಕಿ ಲೆನಿ ರೀಫೆನ್‌ಸ್ಪಾಲ್ ಗೋಬೆಲ್ಸ್‌ನ ಆದೇಶಕ್ಕೆ ಮಣಿಯದೆ, ಮುಂದಿನ ಜನಾಂಗಕ್ಕಾಗಿ ಓವೆನ್ಸ್‌ನ ಸ್ಪರ್ಧೆಗಳನ್ನು ಚಿತ್ರೀಕರಿಸುವುದು ಮಾತ್ರವಲ್ಲ, ಆತನು ಲಾಂಗ್ ಜಂಪ್ ಮಾಡುವುದನ್ನು ಮತ್ತೆ ಪ್ರತ್ಯೇಕವಾಗಿ ಚಿತ್ರೀಕರಿಸಿಕೊಳ್ಳುತ್ತಾಳೆ. ಅಪ್ರತಿಮ ಓಟಗಾರನಿಗೆ ಭಯದ ನಾಡಿನಲ್ಲಿ ಸ್ನೇಹ ಮತ್ತು ಅಭಿಮಾನದ ಹೊಳೆ ಹರಿಯುತ್ತದೆ.

ಅಂತರ್‌ರಾಷ್ಟ್ರೀಯ ಸ್ಪರ್ಧೆಯಲ್ಲಿ ಅಮೆರಿಕದ ಹಿರಿಮೆಯನ್ನು ಎತ್ತಿ ಹಿಡಿದ ಓವೆನ್ಸ್‌ಗೆ ಅಮೆರಿಕದ ಸರಕಾರ ಸತ್ಕರಿಸುವ ಜಾಗಕ್ಕೆ ಹೆಂಡತಿಯ ಜೊತೆ ಹಿಂಬಾಗಿಲ ಪ್ರವೇಶಕ್ಕೆ ಮಾತ್ರ ಅವಕಾಶ ನೀಡುವ ಹೇಸಿಗೆತನ ಮತ್ತೆ ಮುಂದುವರಿಯುವಲ್ಲಿಗೆ ಚಿತ್ರ ಮುಗಿಯುತ್ತದೆ!

ಹಾಗೆ ನೋಡಿದರೆ 1936ರ ಬರ್ಲಿನ್ ಒಲಿಂಪಿಕ್ಸ್‌ನ ಉನ್ಮಾದದ ಪರಿಸರದಲ್ಲಿ ನಾಲ್ಕು ಚಿನ್ನದ ಪದಕಗಳ ಜೆಸ್ಸಿ ಓವೆನ್ಸ್‌ನ ಗೆಲುವು ಚಲನಚಿತ್ರಗಳಿಗಾಗಿಯೇ ಸಿದ್ಧಪಡಿಸಿದ ಅನೇಕ ಸಂಕೇತಗಳಿಂದ ಕೂಡಿತ್ತು. ಆ ಗೆಲುವು ಹಿಟ್ಲರನ ಸೋಲಿಗೆ ಎಂಟು ವರ್ಷಗಳ ಮೊದಲೇ ಬರೆದ ಮುನ್ನುಡಿ. ಗುಲಾಮಗಿರಿಯಲ್ಲಿ ನಶಿಸುತ್ತಿದ್ದ ಕರಿಯರ ಆತ್ಮಸ್ಥೈರ್ಯವನ್ನು ಉಕ್ಕಿಸಿದ ಚಾರಿತ್ರಿಕ ಘಟನೆ. ತಮ್ಮ ಕೀಳರಿಮೆಯನ್ನು ಕಿತ್ತೊಗೆಯಲು ಆಟವೊಂದು ಸಶಕ್ತ ಮಾಧ್ಯಮವೆಂದು ತೋರಿ, ಆ ಮೂಲಕ ಕರಿಯರ ವಿಜಯ ಯಾತ್ರೆಯ ನಾಂದಿ ಹಾಡಿದ ಗೆಲುವು ಅದು.

ಈ ಚಿತ್ರದ ಶೀರ್ಷಿಕೆಯೇ ವಿಶಿಷ್ಟವಾದದ್ದು. ‘ರೇಸ್’ ಎಂದರೆ ಸ್ಪರ್ಧೆಯೂ ಹೌದು. ಜನಾಂಗವೂ ಹೌದು. ಜನಾಂಗೀಯ ವಾದಕ್ಕೆ ಸಂಬಂಧಿಸಿದ ಪದವೂ ಹೌದು. ಓವೆನ್ಸ್ ಇಲ್ಲಿ ಮೈದಾನದ ಸ್ಪರ್ಧೆಯಲ್ಲಿ ಸೆಣಸಬೇಕಿದೆ. ಹಾಗೆಯೇ ಅಮೆರಿಕ ಮತ್ತು ಜರ್ಮನಿಯಲ್ಲಿ ಜನಾಂಗವಾದವನ್ನು ಎದುರಿಸಬೇಕಿದೆ. ಮೈದಾನದ ಸ್ಪರ್ಧೆಯಲ್ಲಿ ವಿಜಯ ಸಾಧಿಸುವ ಓವೆನ್ಸ್ ಸಾಮಾಜಿಕ ಸ್ಪರ್ಧೆಯ ಫಲಿತಾಂಶ ಎಂದೂ ಫಲಿಸದೆ ಹೋರಾಟ ನಿರಂತರವಾಗಿರುತ್ತದೆಂಬ ಸೂಚನೆಯನ್ನು ಚಿತ್ರ ನೀಡುತ್ತದೆ.

ಚಿತ್ರದಲ್ಲಿ ಅಮೆರಿಕದ ಒಲಿಂಪಿಕ್ ಸಮಿತಿಯು ನಾಝಿ ಜನಾಂಗದ ಜನಾಂಗಭೇದ ನೀತಿಯನ್ನು ಖಂಡಿಸುತ್ತಲೇ ತನ್ನ ದೇಶದ ಕರಿಯರ ಬಗ್ಗೆ ಮುಂದುವರಿಸಿರುವ ಅನಾದರದ ಬಗ್ಗೆ ತಾಳುವ ಮೌನ ಮತ್ತು ಅಮೆರಿಕದ ಇಬ್ಬಗೆ ನೀತಿಯನ್ನು ದಾಟಿಸುವಲ್ಲಿ ಚಿತ್ರ ಸಫಲ ವಾಗಿದೆ. ಆರ್ಥಿಕ ಹಿಂಜರಿತದಿಂದ ಜರ್ಜರಿತವಾದ ಉದ್ಯಮಿಗಳಲ್ಲಿ ಬ್ರಂಡೇಜ್ ಕೂಡ ಒಬ್ಬ. ಗೋಬೆಲ್ಸ್ ಅವನ ಅಸಹಾಯಕತೆಯನ್ನು ಬಳಸಿ ಯಹೂದಿ ಆಟಗಾರರನ್ನು ಬಹಿಷ್ಕರಿಸುವ ತಂತ್ರಗಾರಿಕೆ ಅಂದಿನ ಕ್ರೀಡಾ ರಾಜಕೀಯಕ್ಕೆ ಹಿಡಿದ ಕನ್ನಡಿ. ಹೀಗೆ ಚಿತ್ರ ಜೆಸ್ಸಿಯ ಸಾಧನೆಯ ಜೊತೆಗೆ ಆ ಕಾಲಘಟ್ಟದ ರಾಜಕೀಯ ಸನ್ನಿವೇಶಗಳನ್ನು ವ್ಯಾಖ್ಯಾನಕ್ಕೊಳಪಡಿಸುತ್ತದೆ.

ನಟ ಸ್ಟೀಫನ್ ಜೇಮ್ಸ್ ಜೆಸ್ಸಿಯ ಪಾತ್ರದ ಒಳತೋಟಿಗಳನ್ನು ಅಭಿವ್ಯಕ್ತಿಸುವಲ್ಲಿ ಯಶಸ್ಸು ಕಂಡಿದ್ದಾನೆ. ಅವೆರಿ ಬ್ರಂಡೇಜ್ ಪಾತ್ರದಲ್ಲಿ ಪ್ರತಿಭಾವಂತ ನಟ ಜೆರೊಮಿ ಐರನ್ಸ್ ಮತ್ತೊಮ್ಮೆ ತಾನೆಂಥ ಅದ್ಭುತ ನಟನೆಂಬುದನ್ನು ಸಾಬೀತುಪಡಿಸಿದ್ದಾನೆ. ಬರ್ಲಿನ್ ಒಲಿಂಪಿಕ್ಸ್ ಕ್ರೀಡಾಂಗಣವನ್ನು ಆಟದ ರೋಚಕತೆಯನ್ನು ಮರುಸೃಷ್ಟಿಸುವಲ್ಲಿ ಯಶಸ್ವಿಯಾಗಿರುವ ನಿರ್ದೇಶಕ ಮತ್ತವರ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು ಸಲ್ಲಲೇಬೇಕು. ಅಂದಹಾಗೆ ಜೆಸ್ಸಿ ಓವೆನ್ಸ್ ಆಟದಿಂದ ನಿವೃತ್ತಿ ಪಡೆದ ಮೇಲೆ ಅನೇಕ ಆಟಗಾರರಿಗೆ ಕೋಚ್ ಆಗಿ, ಕ್ರೀಡಾ ಪ್ರಸಾರಕನಾಗಿ ಸೇವೆ ಸಲ್ಲಿಸಿದ. 1976ರಲ್ಲಿ ಭಾರತಕ್ಕೂ ಬಂದಿದ್ದ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top