ಭಾರತೀಯತೆಯ ಭಾವ ಮತ್ತು ಅಭಾವ | Vartha Bharati- ವಾರ್ತಾ ಭಾರತಿ

ಭಾರತೀಯತೆಯ ಭಾವ ಮತ್ತು ಅಭಾವ

ಪರಸ್ಪರ ಪ್ರೀತಿ-ವಿಶ್ವಾಸಗಳು ಯಾವುದೇ ಸುಖೀಸಮಾಜದ ಬುನಾದಿಗಳು. ಕೆಲವೇ ಜನರು ನಡೆಸುವ ದುರಭಿಮಾನದ ವ್ಯಾವಹಾರಿಕ ಕಾರ್ಯಗಳು ಸಮಾಜದ ಸಾಮಾನ್ಯ ಗುಣಲಕ್ಷಣಗಳಾಗಬಾರದು; ಆಗಲಾರವು. ಆದ್ದರಿಂದ ಭಾರತೀಯತೆಯೆಂಬುದನ್ನು ಭಾವದ ಸ್ವಲ್ಪಅಭಾವದೊಂದಿಗೆ ವೈಚಾರಿಕ ಗುಣವಾಗಿ ಬೆಳೆಸಿಕೊಂಡರೆ ಅದಕ್ಕೊಂದು ವಿಶ್ವಮಾನವತ್ವದ ಅರ್ಥ ಬರಬಹುದು.


ಈಗ ಸರ್ವೋಚ್ಚ ನ್ಯಾಯಾಲಯದಲ್ಲಿರುವ ಅಯೋಧ್ಯೆಯ ರಾಮಮಂದಿರ-ಬಾಬರಿ ಮಸೀದಿ ವಿವಾದದ ಪ್ರಕರಣದಲ್ಲಿ ಹಿಂದೂ ಸಂಘಟನೆಗಳ ಪರವಾಗಿ ವಾದಿಸುವ ಹಿರಿಯ ವಕೀಲರೊಬ್ಬರು ಭಾರತವು ಎಂದೂ ಅನ್ಯದೇಶೀಯರ ಮೇಲೆ ಮತ್ತು ಅನ್ಯ ದೇಶಗಳ ಮೇಲೆ ದಾಳಿ ಮಾಡಿದ್ದಿಲ್ಲ; ಆದರೆ ಬಾಬರ್ ಮತ್ತು ಅನೇಕ ಇತರ ವಿದೇಶಿ ಅರಸರು ಭಾರತದ ಮೇಲೆ ದಾಳಿ ಮಾಡಿದರು; ಅವರಿಗೆ ಈ ದೇಶದ ಯಾವ ಭೂಮಿಯ ಮೇಲೂ ಹಕ್ಕಿಲ್ಲವಾದ್ದರಿಂದ ಬಾಬರಿ ಮಸೀದಿಯ ಮೇಲೆ ಹಿಂದೂಗಳಿಗಲ್ಲದೆ ಇತರರಿಗೆ ಹಕ್ಕಿಲ್ಲ ಎಂದು ಹೇಳಿದರು. ಹೀಗೆ ದೇಶೀ ಮತ್ತು ವಿದೇಶಿ ಎಂಬ ತರತಮದ ಭಾರತವು ಒಂದು ಜನಾಂಗದ ಸ್ವತ್ತೆಂಬ ವ್ಯಾಖ್ಯಾನವು ಸರಿಯೋ ತಪ್ಪೋ ಎಂಬುದು ನ್ಯಾಯಾಲಯದ ಮುಂದಿರುವುದರಿಂದ ಅದನ್ನು ವಿವರವಾಗಿ ಟೀಕಿಸಲಾಗದು. ವಿವಾದಿತ ಜಾಗ ಯಾರಿಗೇ ಸೇರಲಿ, ಅದು ಈ ದೇಶದೊಳಗೇ ಉಳಿಯುತ್ತದೆ ಎಂಬ ನಿರ್ಮಮ ಪ್ರೀತಿ ಮಾತ್ರ ಇರಬೇಕಾಗಿದೆ.

ಆದರೆ ಇಂತಹ ತರ್ಕಗಳಲ್ಲಿ ವಿಚಾರವೆಷ್ಟು, ಭಾವವೆಷ್ಟು ಮತ್ತು ಈ ಎರಡರ ಅಭಾವವೆಷ್ಟು ಎಂಬುದನ್ನು ಪ್ರಶ್ನಿಸಬಹುದಾಗಿದೆ. ಬಾಬರನ ಕಾಲದಲ್ಲಿ ಇಂದು ನಾವು ಹೇಳುವ ಭಾರತವೆಂಬುದೊಂದಿರಲಿಲ್ಲ. ಈ ಭೂಖಂಡವು ಅನೇಕ ಅರಸೊತ್ತಿಗೆಗಳ, ಸಾಮ್ರಾಜ್ಯಗಳನ್ನೊಳಗೊಂಡಿತ್ತು. ಆದ್ದರಿಂದಲೇ ಇಂದಿನ ಭಾರತದ ಅನೇಕ ಪಾರಂಪರಿಕ ಶಿಖರಗಳು ಪಾಕಿಸ್ತಾನದಲ್ಲೋ (ಶಂಕರಾಚಾರ್ಯರ ಶಾರದಾಪೀಠ), ಅಫ್ಘಾನಿಸ್ತಾನ (ಘಾಸಿಗೊಂಡ ಬಾಮಿಯಾನ್ ಬುದ್ಧ), ಚೀನಾದಲ್ಲೋ (ಮಾನಸ ಸರೋವರ) ಇನ್ನೆಲ್ಲೋ ಇರಬಹುದಾಗಿದೆ. ಆದ್ದರಿಂದಲೇ ಸಾಮ್ರಾಟ್ ಅಶೋಕನು ಇಂದಿನ ಭಾರತದೊಳಗೇ ಇರುವ ಮತ್ತು ಇಂದಿನ ಅರ್ಥದಲ್ಲಿ ಸ್ವದೇಶಿಗಳೇ ಆಗಿರುವ ಕಳಿಂಗದ ಮೇಲೆ ದಾಳಿ ಮಾಡಿ ರಕ್ತಪಾತ ಹರಿಸಿದರೂ ಅವನನ್ನು ಅಶೋಕ ಚಕ್ರದ ಮೂಲಕ ಸ್ಮರಿಸುತ್ತೇವೆ. ಸಂತರಿಂದ ಆರಂಭವಾಗಿ ರಾಜಕಾರಣಿಗಳ ವರೆಗೆ, ಕ್ರೀಡಾಪಟುಗಳಿಂದ ಮೊದಲ್ಗೊಂಡು ಕಲಾವಿದರ ವರೆಗೆ ಈ ದೇಶದಲ್ಲಿ ಎಲ್ಲರೂ ಭಾರತೀಯತೆಯ ವ್ಯಾಖ್ಯಾನ ಮಾಡಿದ್ದಾರೆ; ಈ ಪರಂಪರೆ ಮುಂದುವರಿಯುತ್ತಿದೆ. ಆದ್ದರಿಂದ ಭಾರತ ಎಂದು ಹುಟ್ಟಿತು ಎಂಬ ಬಗ್ಗೆ ಯಾರೂ ಲಕ್ಷ್ಯ ನೀಡುವುದಿಲ್ಲ. ಇಂದಿನ ಭಾರತ ನಿರ್ಮಾಣ ಪ್ರಾಯಃ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಚಳವಳಿಯ ಫಲ, ಫಲಿತಾಂಶ ಮತ್ತು ಪರಿಣಾಮವಾಗಿದೆ.

ಅದರೆ ಭಾರತೀಯತೆಯ ವ್ಯಾಖ್ಯಾನದ ಈ ಪರಿಸ್ಥಿತಿ ಈಗಂತೂ ಅತೀ ವೇಗವಾಗಿ ಬೆಳೆಯುತ್ತಿದೆ ಮಾತ್ರವಲ್ಲ ಭಾರತದ ಬಹುಸಂಖ್ಯಾ ಧರ್ಮದ (ದುರಾಚಾರಕ್ಕೆ ಕಾರಣವಾಗಬಲ್ಲ ಮತಧರ್ಮವನ್ನು ಧರ್ಮವೆಂದು ತಪ್ಪಾಗಿ ಮತ್ತು ಸುಳ್ಳಾಗಿ ಪ್ರಚಾರಮಾಡುತ್ತಲೇ) ಆಧಾರವೆಂದು ಘೋಷಿಸಲಾಗುತ್ತಿದೆ. ಹಿಂದೆಲ್ಲ ಗಹನವಾದ ವಿಚಾರಗಳ ಬಗ್ಗೆ ಮಾತನಾಡಬೇಕಾದರೆ, ಬರೆಯ ಬೇಕಾದರೆ ಬಹಳಷ್ಟು ಓದು, ಅಧ್ಯಯನ ಮತ್ತು ಚರ್ಚೆಯ ಅಗತ್ಯವಿತ್ತು. ಈಗ ಅಕ್ಷರಜ್ಞಾನ ಸಾಕಾಗಿದೆ. ಮಾಧ್ಯಮ ಮತ್ತು ಸಾಮಾಜಿಕ ತಾಣಗಳು ಹೆಚ್ಚಾದಷ್ಟೂ ಅಭಿಮತಗಳು ಹೆಚ್ಚಾಗುತ್ತಿವೆ. ಎಲ್ಲರ ಕೂಗೂ ದಾಖಲೆಯಾಗುವ ಈ ಕಾಲದಲ್ಲಿ ವಿವೇಚನೆ ಮತ್ತು ವಿವೇಕಗಳಿಗೆ ಕಾಯುವ ವ್ಯವಧಾನ ಸಹಜವಾಗಿಯೇ ಕಡಿಮೆಯಾಗುತ್ತಿದೆ.

ಒಂದು ಭೌಗೋಳಿಕ ಪ್ರದೇಶಕ್ಕೆ, ಸೀಮೆಗೆ ಗೊತ್ತಾದ ಸಂದರ್ಭಗಳಲ್ಲಿ ಸಾಮಾನ್ಯ ಆಚಾರ-ವಿಚಾರಗಳು ಇರುವುದು ಸಹಜವೇ. ಆದರೆ ಇವು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಲಕ್ಷಣಗಳಾಗಬೇಕಾದರೆ ವಿಚಾರಗಳು ಬದುಕಿನ ಆಳಕ್ಕೆ ಇಳಿಯಬೇಕು ಮತ್ತು ಅದು ಮೂರ್ತ-ಅಮೂರ್ತ ಸ್ಥಾಯೀಭಾವಗಳಾಗಬೇಕು. ಭಾರತೀಯತೆಯೆಂಬೊಂದು ಲಕ್ಷಣವಿರಬೇಕಾದರೆ ಇಲ್ಲಿನ ಸ್ಥಳೀಯ ಭಿನ್ನತೆ ಮರೆಯಾಗಿ ಎಲ್ಲರೂ ಒಂದು ಸಾಮಾನ್ಯ ಕಾರ್ಯಕಾರಣದ ವಿಧಾನಗಳನ್ನು ಕಂಡುಕೊಳ್ಳಬೇಕು. ಅದಿಲ್ಲದೆ ಭಾರತೀಯತೆಯೆಂದು ಹೇಳುವುದು ಒಂದು ಅಣಕ ಮತ್ತು ಅನುಕೂಲ ಸಿದ್ಧಾಂತವಾದೀತೇ ವಿನಾ ಸಮತೋಲದ ಸುಸಂಸ್ಕೃತ ಅಥವಾ ಸಾಂಸ್ಕೃತಿಕ ಅಭಿವ್ಯಕ್ತಿಯಾಗಲಾರದು.

ಎಲ್ಲ ದೇಶಗಳಲ್ಲೂ ರಾಜಕೀಯ ಮತ್ತು ಧರ್ಮ (ಮತವೆಂಬರ್ಥದಲ್ಲಿ) ಸಮಾಜವನ್ನು ಒಂದುಗೂಡಿಸುವ ಮತ್ತು ಒಡೆಯುವ ಸಾಧನವಾಗಿರುವಾಗ ಎಲ್ಲರೂ ಒಂದೇ ಸಾಮಾಜಿಕ ನೀತಿಯನ್ನು ಒಪ್ಪಲಾರರು. ನಮ್ಮ ನಮ್ಮ ಇಷ್ಟಾನಿಷ್ಟಗಳ ಆಧಾರದಲ್ಲಿ ನಾವು ತರ್ಕಿಸುತ್ತೇವೆ. ನಮಗೆ ಪ್ರಿಯವಾದ್ದನ್ನು (ಮಕ್ಕಳಿಂದ ಹಿಡಿದು ರಾಜಕೀಯ ಪಕ್ಷದ ವರೆಗೆ) ಅವನ್ನು ನಾವು ಬೇಷರತ್ತಾಗಿ ಬೆಂಬಲಿಸುತ್ತೇವೆ ಮತ್ತು ಅದಕ್ಕನುಕೂಲವಾದ ಬೀಜಗಳನ್ನು ಇತಿಹಾಸ, ಪುರಾಣ, ವರ್ತಮಾನಗಳಿಂದ ಅಗೆದು ತರುತ್ತೇವೆ ಮತ್ತು ಬಳಸುತ್ತೇವೆ. ನಮ್ಮದು ಎಂಬ ಒಂದು ಪರಿಸರವನ್ನು ನಾವು ನಿರ್ಮಾಣಮಾಡಿಕೊಳ್ಳುವುದು ಮನುಷ್ಯಸಹಜವಾದ ಹವ್ಯಾಸವಾಗಿರುವುದರಿಂದ ಅದರಲ್ಲೇ ನಾವು ಅಡ್ಡಾಡುತ್ತೇವೆ ಮತ್ತು ಮೇಯುತ್ತೇವೆ. ಅದರಿಂದ ಹೊರಗಿನದ್ದನ್ನು ಅಥವಾ ಅನ್ಯವಾದ್ದನ್ನು ಯಾವ್ಯಾವುದೋ ತರ್ಕಗಳನ್ನೊಡ್ಡಿ ದೂರೀಕರಿಸುತ್ತೇವೆ ಮತ್ತು ತಿರಸ್ಕರಿಸಲು ಕಾರಣಗಳನ್ನು-ಕೆಲವೊಮ್ಮೆ ನೆಪಗಳನ್ನು-ಪಡೆಯುತ್ತೇವೆ. ಇದು ತೀರಾ ಸಾಮಾನ್ಯವೆಂದು ಕಂಡುಬರುವ ವಿಚಾರ ಮತ್ತು ವಸ್ತು-ವಿಷಯಗಳಲ್ಲೂ ಪ್ರತಿಬಿಂಬಿತವಾಗುವುದನ್ನು ಕಾಣಬಹುದು. ಬಹುಚರ್ಚಿತವಾದ ಪರಧರ್ಮ ಸಹಿಷ್ಣುತೆಯು ಭಾರತೀಯವೇ? ಈ ಗುಣ ಕೆಲವು ಭಾರತೀಯರಲ್ಲಿವೆ; ಹಾಗೆಯೇ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಕೆಲವರಲ್ಲಿವೆ.

ಇದನ್ನು ನಮ್ಮ ಶ್ರೇಷ್ಠತೆಯೆಂದು ಮತ್ತು ಭಾರತೀಯರ ಸಾಮಾನ್ಯ ಗುಣ ಲಕ್ಷಣವೆಂದು ಬಿಂಬಿಸುವುದು ಒಂದು ತಂತ್ರವಾದೀತೇ ವಿನಾ ತಾರ್ಕಿಕ ಸಾಧುತ್ವವಾಗಲಾರದು. ಮಹಿಳೆಯರನ್ನು ಗೌರವಿಸುವುದು ಭಾರತೀಯತೆಯೆಂಬ ಪ್ರಮೇಯಕ್ಕನುಗುಣವಾಗಿ ನಾವು ನಮ್ಮ ಎಲ್ಲ ಸಿದ್ಧಾಂತ ಗ್ರಂಥಗಳನ್ನು ಆರ್ಷೇಯ ನುಡಿಮುತ್ತುಗಳನ್ನು ಉಲ್ಲೇಖಿಸುತ್ತೇವೆ. ಸ್ವಾಮಿ ವಿವೇಕಾನಂದರು ಜಗತ್ತಿನ ಇತರ ರಾಷ್ಟ್ರಗಳಿಗೂ ಭಾರತಕ್ಕೂ ಇರುವ ವ್ಯತ್ಯಾಸವೆಂದರೆ ಇತರ ರಾಷ್ಟ್ರಗಳಲ್ಲಿ ತಾಯಿಯ ಹೊರತು ಇತರ ಎಲ್ಲ ಹೆಂಗಸರನ್ನು ಕಾಮದ ಕಣ್ಣಿಂದ ನೋಡಿದರೆ ಭಾರತದಲ್ಲಿ ಪತ್ನಿಯನ್ನು ಹೊರತು ಪಡಿಸಿ ಇತರ ಎಲ್ಲರನ್ನೂ ತಾಯಿಯಂತೆ ಕಾಣುತ್ತೇವೆ ಎಂದು ಹೇಳಿದರೆಂಬುದನ್ನು ನಮ್ಮ ಬೆನ್ನು ತಟ್ಟಿಕೊಳ್ಳುವುದಕ್ಕೆ ಎಲ್ಲೆಂದರಲ್ಲಿ ಉಲ್ಲೇಖಿಸುತ್ತೇವೆ. ನಿಜಕ್ಕೂ ನಾವು ಹೇಳುವ ಸ್ತ್ರೀಗೌರವ ಪರಂಪರೆ ನಮ್ಮಲ್ಲಿತ್ತೇ? ಇದು ನಿಜಕ್ಕೂ ಸತ್ಯವೇ? ಎಂಬುದನ್ನು ನಾವು ಪರಾಮರ್ಶಿಸುವುದೇ ಇಲ್ಲ. ರಾವಣ, ಕೀಚಕ, ದುಶ್ಶಾಸನರು (ಇದ್ದದ್ದೇ ಹೌದಾದರೆ) ಈ ದೇಶದಲ್ಲೇ ಇದ್ದವರು. ಅಹಲ್ಯೆಯನ್ನು ಭಂಗಗೊಳಿಸಿದ ದೇವೇಂದ್ರ, ತುಳಸಿಯನ್ನು ಮಲಿನಗೊಳಿಸಿದ ವಿಷ್ಣು ನಮ್ಮ ದೇವರುಗಳು. ವಿಶ್ವಾಮಿತ್ರರಂತಹ ಋಷಿಗಳೇ ಮೇನಕೆಗೆ ಸೋತುಹೋದ ಈ ಭರತ ಭೂಮಿಯಲ್ಲಿ ಎಲ್ಲ ಜಾತಿ-ಮತಗಳ ಸಂತರು, ಸನ್ಯಾಸಿಗಳು, ಮಠಾಧಿಪತಿಗಳು ಭ್ರಷ್ಟರಾದರೆ ಅವರನ್ನು ನಮ್ಮ ಪರಂಪರೆಗೆ ಕಳಂಕ ತಂದವರೆಂದು ದೂಷಿಸುವಾಗ ನಾವು ಹಿಂದಣ ಹೆಜ್ಜೆಗಳನ್ನು ಕಾಣಿಸುವುದೇ ಇಲ್ಲ. ಇತ್ತೀಚೆಗೆ ಹೆಚ್ಚಾಗುತ್ತಿರುವ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಭಾರತೀಯವೇ? ನಾವು ಭಾರತವೆಂದು ಕರೆಯುವ ಈ ಭೂಭಾಗದ ಚರಿತ್ರೆಯಲ್ಲಿ ಇಂತಹ ನೂರಾರು ಉದಾಹರಣೆಗಳಿವೆ. ಇವು ಎಲ್ಲ ದೇಶಗಳ ಪರಂಪರೆಯಲ್ಲೂ ಇವೆ.
ಕ್ರೌರ್ಯ ಮತ್ತು ವಂಚನೆ ಎಲ್ಲ ಮನುಷ್ಯರ ಸಹಜ ಪ್ರಕೃತಿ. ಇದನ್ನು ಮೀರಿದವರು ಮಾತ್ರ ಮಹಾನುಭಾವರು. ಆದರೆ ನಾವು ಮಾತ್ರ ಪ್ರಾಮಾಣಿಕರು ಮತ್ತು ವಿಶ್ವವನ್ನು ಕಾಪಾಡಬಲ್ಲ ಗುರುಗಳು ಎಂದು ಹೇಳಿಕೊಳ್ಳುತ್ತಿರುವಾಗ ನಾವು ಪೃಥ್ವಿರಾಜನ ಹಿಂದಿದ್ದಂತಹ ಜಯಚಂದನಂಥವರನ್ನು ಮಾತ್ರವಲ್ಲ, ಇಂದಿನ ರಾಜಕೀಯದಲ್ಲಿ ಕಾಣುವ ದ್ವೇಷ, ಸೇಡು, ಪಕ್ಷಾಂತರ, ವಿಶ್ವಾಸಘಾತುಕತನ, ಭ್ರಷ್ಟಾಚಾರ ಮುಂತಾದ ಅನೈತಿಕ ಕುತಂತ್ರಗಳನ್ನು ಪ್ರಜ್ಞಾಪೂರ್ವಕವಾಗಿ ಮರೆಯುತ್ತೇವೆ. ಟಿಪ್ಪುಸುಲ್ತಾನನ್ನು ದ್ವೇಷಿಸುವವರು ಅವನ ದಿವಾನರಾಗಿದ್ದ ಪೂರ್ಣಯ್ಯನವರನ್ನು ದ್ವೇಷಿಸುವುದಿಲ್ಲ. ಟಿಪ್ಪು ಸುಲ್ತಾನನಿಗೆ ಮೋಸಮಾಡಿದವನು ಆತನ ಜಾತಿಯ ಮೀರ್‌ಸಾದಕನೆಂಬುದನ್ನು ಹೇಳುವುದಿಲ್ಲ. ಭಾರತವೆಂದು ಕರೆಸಿಕೊಳ್ಳುವ ಈ ಭೂಭಾಗದಲ್ಲಿ ನಡೆದ ಅಸಂಖ್ಯ ಕೃತ್ರಿಮಗಳು ಲಾಗಾಯ್ತಿನಿಂದ ಇವೆ; ಮತ್ತು ಎಲ್ಲ ದೇಶಗಳ ಭೂಪ್ರದೇಶಗಳಲ್ಲೂ ನಡೆದಿವೆ. ಇವಕ್ಕೆ ಕಾಲ-ದೇಶಗಳ ಕಟ್ಟಿಲ್ಲವಾದ್ದರಿಂದ ಇವನ್ನು ಸಹಜವೆಂದೇ ಸ್ವೀಕರಿಸಬೇಕು. ಇವು ನಿಯಮಗಳಲ್ಲ; ನಿಜಗಳು. ಆದರೆ ನಾವು ಸ್ವಾರ್ಥಕಾರಣವಾಗಿ, ಪ್ರತಿಷ್ಠೆ ಕಾರಣವಾಗಿ ಇತರರಿಗಿಂತ ನಾವು ಮೇಲೆಂಬ ಸುಳ್ಳನ್ನು ಹಿಗ್ಗಿಸುವುದಕ್ಕಾಗಿ ವಿವಿಧ ನಿಯಮಗಳನ್ನು ಸೃಷ್ಟಿಸುತ್ತೇವೆ.
ಕ್ರೀಡೆಗಳ ಉದಾಹರಣೆಗಳನ್ನು ಗಮನಿಸಿದರೆ ಇವು ಸ್ಪಷ್ಟವಾಗುತ್ತವೆ. ನಮ್ಮ ಕ್ರೀಡಾಪಟುಗಳ ಸಾಧನೆಗಳು ಮೆಚ್ಚತಕ್ಕದ್ದು. ಆದರೆ ಅವು ಇತರ(ರ) ಸಾಧನೆಗಳಿಗಿಂತ ಹೆಚ್ಚೆಂಬುದನ್ನು ಸಾಧಿಸುವುದಕ್ಕೋಸ್ಕರ ಸಾಬೀತು ಮಾಡಲೋಸ್ಕರ ನಾವು ವಿವಿಧ ಮಾನದಂಡಗಳನ್ನು ರೂಪಿಸುತ್ತೇವೆ. ಈಚೆಗೆ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯನ್ನು ಗಮನಿಸಿದ ಅಲ್ಲಿನ ಮಾಜಿ ಹಿರಿಯ ಆಟಗಾರ ವಿವಿಯನ್ ರಿಚರ್ಡ್ಸ್ ಭಾರತದ ಮೇಲುಗೈಯ ಲಕ್ಷಣವನ್ನು ಹೊಗಳಿದ್ದು ನಮ್ಮ ವೇಗದ ಬೌಲಿಂಗ್ ವಿಭಾಗದಲ್ಲಿ. ಭಾರತವು ಈ ಬಗೆಯ ವೇಗಿಗಳನ್ನು ಪಡೆಯಬಹುದೆಂದು ಯಾರು ನಿರೀಕ್ಷಿಸಿದ್ದರು ಎಂದು ಅವರು ಹೇಳಿದ್ದು ನಮ್ಮ ಬೌಲಿಂಗ್ ವಿಭಾಗದ ಬೆಳವಣಿಗೆಯನ್ನು ವೀಕ್ಷಿಸಿ. ಆದರೆ ನಾವು ಬ್ಯಾಟ್ಸ್‌ಮನ್‌ಗಳ ಅಗ್ಗಳದ ಸಾಧನೆಗಳನ್ನು ಕೊಂಡಾಡಿದಷ್ಟು ಬೌಲರುಗಳ ಸಾಧನೆಯನ್ನು ಕೊಂಡಾಡುವುದಿಲ್ಲ. ಆದರೆ ಗಮನಿಸಬೇಕಾದ್ದೆಂದರೆ ನಮ್ಮ ಬ್ಯಾಟಿಂಗ್ ಯಾವತ್ತೂ ಚೆನ್ನಾಗಿತ್ತು. ಆದರೆ ಇತರ ತಂಡಗಳ ಬೌಲಿಂಗ್ ಹಿಂದೆ ಇದ್ದಷ್ಟು ಚೆನ್ನಾಗಿ ಈಗಿಲ್ಲ. ಇದರಿಂದಾಗಿ ನಮ್ಮ ಬ್ಯಾಟಿಂಗ್ ಇನ್ನೂ ಚೆನ್ನಾಗಿ ಕಾಣಿಸುತ್ತದೆ.
ಇಬ್ಬರು ದಾಂಡಿಗರನ್ನು ಹೋಲಿಸುವಾಗ ಈ ಪ್ರತಿಷ್ಠೆ ಇನ್ನೂ ಸ್ಪಷ್ಟವಾಗುತ್ತದೆ. ಭಾರತದ ಈಗಿನ ಕ್ರಿಕೆಟ್ ನಾಯಕ ವಿರಾಟ್‌ಕೊಹ್ಲಿ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜೀ ನಾಯಕ ಮತ್ತು ಈಗಿನ ಆಟಗಾರ ಸ್ಟೀವನ್‌ಸ್ಮಿತ್ ಇವರ ಹೋಲಿಕೆ ಒಂದು ಉದಾಹರಣೆ. ನಾವು ನಮ್ಮ ಜಾಹೀರಾತುಗಳಿಂದ ಮತ್ತು ನಾವು ವಿಶ್ವ ಕ್ರಿಕೆಟ್ ಖಜಾನೆಗೆ ನೀಡುವ ಪ್ರತಿಶತ 85ರಷ್ಟು ಆರ್ಥಿಕ ಕೊಡುಗೆಯಿಂದಾಗಿ ನಮ್ಮ ನಿಯಮಗಳೇ ವಿಶ್ವವನ್ನು ಆಳುವಂತೆ ಮಾಡಲು ಶಕ್ತರಾಗಿದ್ದೇವೆ. ಆದರೆ ಇದೇ ಯಶಸ್ಸಿಗೆ ಮಾನದಂಡವಾಗಲಾರದು. ವಿರಾಟ್‌ಕೊಹ್ಲಿ ಒಬ್ಬ ಒಳ್ಳೆಯ ಆಟಗಾರ. ಅಲ್ಲಿಗೆ ಈ ಜಾಹೀರಾತು ಅಂತ್ಯವಾಗಬೇಕು. ಆದರೆ ನಾವು ಆತನನ್ನು ಮಾತ್ರ ಲೆಕ್ಕಕ್ಕಿಟ್ಟು ಉಳಿದ (ನಮ್ಮ ತಂಡದ ಮತ್ತು ಇತರ ತಂಡಗಳ) ಶ್ರೇಷ್ಠರನ್ನು ಪ್ರಖರ ಬೆಳಕಿಗೆ ಬಾರದಂತೆ ಮಾಧ್ಯಮಗಳ ಮೂಲಕ, ಕ್ರೀಡಾ ವಿಮರ್ಶೆಗಳ ಮೂಲಕ, ತಡೆಯುತ್ತೇವೆ. ಇದೂ ಒಂದು ಆರ್ಥಿಕ ಕಸರತ್ತೇ ಹೌದು. ಇದು (ವಿಶ್ವ ಸುಂದರಿ ಸ್ಪರ್ಧೆಯಂತೆ!) ಜಾಗತಿಕ ಕಾರ್ಪೊರೇಟ್ ವಲಯಕ್ಕೆ ಬೇಕು. ಏಕೆಂದರೆ ಅವರಿಗೆ ಈ ಜಾಹೀರಾತುಗಳೇ ಸಂಜೀವಿನಿ. ಇದಕ್ಕೆ ಪರ್ಯಾಯವಾಗಿ ಇತರ ಆಟಗಾರರನ್ನು ಹೋಲಿಸಲು ನಮ್ಮ ವಿಮರ್ಶೆಗೆ ಅವಕಾಶವಿಲ್ಲ. ಒಂದು ಪುಟ್ಟ ಹೋಲಿಕೆಯನ್ನು ಮಾಡಿ ಇದನ್ನು ಸ್ಪಷ್ಟವಾಗಿಸಬಹುದು. ಆಸ್ಟ್ರೇಲಿಯಾದ ಸ್ಟೀವನ್‌ಸ್ಮಿತ್, ಕೀವಿಸ್ ತಂಡದ ಕೇನ್‌ವಿಲಿಯಮ್ಸನ್, ಇಂಗ್ಲೆಂಡಿನ ಜೋರೂಟ್, ಪಾಕಿಸ್ತಾನದ ಬಾಬರ್ ಆಝಮ್ ಇವರೆಲ್ಲರೂ ಆಯಾಯ ತಂಡದ ಪ್ರಮುಖ ಮತ್ತು ವಿಶ್ವದರ್ಜೆಯ ಆಟಗಾರರು. ಆದರೂ ಮೇಲೆ ಹೇಳಿದಂತೆ ಕೊಹ್ಲಿ ಮತ್ತು ಸ್ಮಿತ್ ಇವರ ನಡುವಣ ಹೋಲಿಕೆಯು ಆಕರ್ಷಕವಾಗಿದೆ. ಕೊಹ್ಲಿ 5.11.1988ರಂದು ಹುಟ್ಟಿದರೆ ಸ್ಮಿತ್ 2.6.1989ರಲ್ಲಿ ಹುಟ್ಟಿದವರು. ಕೊಹ್ಲಿ 79 ಟೆಸ್ಟ್‌ಗಳಲ್ಲಿ (135 ಇನ್ನಿಂಗ್ಸ್‌ಗಳಲ್ಲಿ) 8 ಬಾರಿ ಔಟಾಗದೇ ಉಳಿದು 25 ಶತಕ ಮತ್ತು 22 ಅರ್ಧ ಶತಕಗಳೊಂದಿಗೆ 6,749 ರನ್ನುಗಳನ್ನು 53.14 ಸರಾಸರಿಯೊಂದಿಗೆ ಪೇರಿಸಿದರೆ, ಸ್ಮಿತ್ 66 ಟೆಸ್ಟ್‌ಗಳಲ್ಲಿ (120 ಇನ್ನಿಂಗ್ಸ್‌ಗಳಲ್ಲಿ) 16 ಬಾರಿ ಔಟಾಗದೇ ಉಳಿದು 25 ಶತಕ ಮತ್ತು 25 ಅರ್ಧ ಶತಕಗಳೊಂದಿಗೆ 6,577 ರನ್ನುಗಳನ್ನು 63.24 ಸರಾಸರಿಯೊಂದಿಗೆ ಪೇರಿಸಿದರು. ಶ್ರೇಷ್ಠತೆಯ ಅಳತೆಗೆ ಬೇರೆ ವಿವರಣೆ ಬೇಕಾಗಿಲ್ಲ. ಆದರೆ ನಮ್ಮ ಮಾಧ್ಯಮಗಳು ಮತ್ತು ದೇಶಭಕ್ತರು ಕೊಹ್ಲಿಯನ್ನು (ಸಚಿನ್ ತೆೆಂಡುಲ್ಕರ್ ಅವರನ್ನೂ ಮೀರಿಸಿದ) ಸಾರ್ವಕಾಲಿಕ ವಿಶ್ವಶ್ರೇಷ್ಠರೆಂದು ಬಣ್ಣಿಸುತ್ತಾರೆ! ಈ ಬಗೆಯ ಅಭಿಮಾನವನ್ನು ನೇತ್ರ ತಜ್ಞರಲ್ಲಿ ಪರೀಕ್ಷಿಸಲೇಬೇಕಲ್ಲವೇ?
ಪರಸ್ಪರ ಪ್ರೀತಿ-ವಿಶ್ವಾಸಗಳು ಯಾವುದೇ ಸುಖೀಸಮಾಜದ ಬುನಾದಿಗಳು. ಕೆಲವೇ ಜನರು ನಡೆಸುವ ದುರಭಿಮಾನದ ವ್ಯಾವಹಾರಿಕ ಕಾರ್ಯಗಳು ಸಮಾಜದ ಸಾಮಾನ್ಯ ಗುಣಲಕ್ಷಣಗಳಾಗಬಾರದು; ಆಗಲಾರವು. ಆದ್ದರಿಂದ ಭಾರತೀಯತೆಯೆಂಬುದನ್ನು ಭಾವದ ಸ್ವಲ್ಪಅಭಾವದೊಂದಿಗೆ ವೈಚಾರಿಕ ಗುಣವಾಗಿ ಬೆಳೆಸಿಕೊಂಡರೆ ಅದಕ್ಕೊಂದು ವಿಶ್ವಮಾನವತ್ವದ ಅರ್ಥ ಬರಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top