ದೇಶದ್ರೋಹ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ | Vartha Bharati- ವಾರ್ತಾ ಭಾರತಿ

ದೇಶದ್ರೋಹ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ದೀಪಕ್ ಗುಪ್ತ ಸಂವಿಧಾನದ ಉಗಮ ಮತ್ತು ಮೂಲಭೂತ ಸ್ವಾತಂತ್ರ್ಯದ ಬೆಳವಣಿಗೆಗಳನ್ನು ವಿವರಿಸಿದ್ದಾರೆ. ನಾನೇ ಸರಿ; ನೀವು ತಪ್ಪು ಎಂಬ ನಿರ್ಣಯವು ಎಂದಿಗೂ ಶಾಶ್ವತ ಕಲ್ಪನೆಯಾಗಬಾರದು ಎಂಬುದನ್ನು ಅವರ ಮಾತುಗಳು ಸೂಚಿಸಿವೆ. ರವೀಂದ್ರನಾಥ ಟಾಗೋರ್ ಅವರನ್ನು ಉಲ್ಲೇಖಿಸುತ್ತ ಗುಪ್ತ ಅವರು ರವೀಂದ್ರರನ್ನು ಗೌರವಿಸುತ್ತಿದ್ದವರೂ ಅವರ ‘‘ರಾಷ್ಟ್ರೀಯತೆ ಎಂಬುದು ಒಂದು ಕಾಯಿಲೆ’’ ಎಂಬ ಮಾತುಗಳನ್ನು ಒಪ್ಪಲಿಲ್ಲ. ಆದರೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಸುರಕ್ಷಿತವಾಗಿತ್ತು. ಇಂದು ಅವರೇನಾದರೂ ಆ ಮಾತುಗಳನ್ನಾಡಿದ್ದರೆ ಅವರನ್ನು ದೇಶದ್ರೋಹದ ಆಪಾದನೆಗೆ ಗುರಿಪಡಿಸುತ್ತಿದ್ದರೇನೋ ಎಂದು ಹತಾಶಭಾವದಿಂದ ಹೇಳಿದ್ದಾರೆ.


ಕೆಲವು ವರದಿಗಳು, ಸಂಗತಿಗಳು ಆಯಾಯ ದಿನಗಳ ಅವಕಾಶವನ್ನು ತುಂಬಿಸುವ ತಮ್ಮ ಪಾತ್ರವನ್ನು, ಕರ್ತವ್ಯವನ್ನು ಮುಗಿಸಿ ಅಳಿದುಹೋಗುತ್ತವೆ. ಅವಕ್ಕೆ ಭವಿಷ್ಯವಿರುವುದಿಲ್ಲ. ಆದರೆ ಇನ್ನು ಕೆಲವು ವರದಿ, ಸಂಗತಿಗಳಾಗಿ ಅಷ್ಟಕ್ಕೇ ಮುಗಿದು ಹೋಗದೆ ಯೋಚನೆಗೆ ಹಚ್ಚುವ ಸರಕಾಗಿ ಉಳಿಯುತ್ತವೆ ಮತ್ತು ಭವಿಷ್ಯಕ್ಕೆ ದಾರಿದೀಪವಾಗಿ ಉಳಿಯುತ್ತವೆ. ವಿಜ್ಞಾನದ ಸಂಶೋಧನೆಗಳು ಈ ರೀತಿಯವು. ಒಳ್ಳೆಯ ಮಾತುಗಳು ಕೂಡಾ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಲ್ಲೊಬ್ಬರಾದ ದೀಪಕ್ ಗುಪ್ತ ಈಚೆಗೆ ಗುಜರಾತಿನ ಅಹಮದಾಬಾದಿನ ಸಮಾರಂಭವೊಂದರಲ್ಲಿ ಭಾರತದಲ್ಲಿ ‘ದೇಶದ್ರೋಹದ ಕಾನೂನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ದ ಕುರಿತು ಮಾತನಾಡಿದರು. ನ್ಯಾಯವಾದಿಗಳಿಗಾಗಿ ಏರ್ಪಡಿಸಿದ್ದ ಶಿಬಿರವೊಂದರ ಸಮಾರೋಪ ಭಾಷಣಕ್ಕೆ ಅವರು ಈ ವಿಚಾರವನ್ನು ಆಯ್ಕೆ ಮಾಡಿಕೊಂಡದ್ದು ಆಕಸ್ಮಿಕವೇನಲ್ಲವೆಂಬುದು ಅವರ ಮಾತುಗಳ ಅರ್ಥದಲ್ಲಿ, ಗರ್ಭದಲ್ಲಿ ಗೊತ್ತಾಗುವಂತಿತ್ತು.

ಅಷ್ಟೇ ಅಲ್ಲ, ಅವರ ಈ ನಿಲುವು ವೈಯಕ್ತಿಕ ಮಾತ್ರವಲ್ಲ, ಪ್ರಾಯಃ ಅವರು ಸರ್ವೋಚ್ಚ ನ್ಯಾಯಾಲಯದ ಸರ್ವ ನ್ಯಾಯಮೂರ್ತಿಗಳ ಪರವಾಗಿ ಮಾತನಾಡಿದ ಹಾಗಿತ್ತು. ನ್ಯಾಯಮೂರ್ತಿ ದೀಪಕ್ ಗುಪ್ತ ಮಾತನಾಡಿದ ಸಂದರ್ಭದಲ್ಲಿ ದೇಶದ ಎಲ್ಲೆಡೆ ದೇಶದ್ರೋಹದ ಮಾತುಗಳು ಮುಖ್ಯವಾಗಿ ಆಳುವ ರಾಜಕಾರಣಿಗಳ ಮುಖಾರವಿಂದದಿಂದ ಹೊರಹೊಮ್ಮುತ್ತಿತ್ತು. ಮಂಗಳೂರಿನ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ದೇಶದ ಆತಂಕಕಾರೀ ಪರಿಸ್ಥಿತಿಯನ್ನು ಗಮನಿಸಿ ತನ್ನ ಪಾತ್ರನಿರ್ವಹಣೆಗೆ ಬೇಸತ್ತು ರಾಜೀನಾಮೆ ನೀಡಿದ ತಕ್ಷಣ ಅವರನ್ನು ಭ್ರಷ್ಟನೆಂದು ಒಂದು ಗುಂಪು ದೂರಿದರೆ, ಇನ್ನೊಂದು ಗುಂಪು ಅವರನ್ನು ದೇಶದ್ರೋಹಿ ಎಂದು ಸಾರಿತು. ಶಾಸಕರೊಬ್ಬರು ಇಷ್ಟೇ ಅಲ್ಲ, ರಾಜೀನಾಮೆ ಮಾತ್ರವಲ್ಲ, ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಎದುರಾಗಲಿದೆಯೆಂದು ಕೋಡಿಮಠದ ಶ್ರೀಗಳ ಸ್ಥಾನದಲ್ಲಿ ಕುಳಿತು ಭವಿಷ್ಯ ನುಡಿದರು. ಅದೇ ಸಮಯಕ್ಕೆ ದಿಲ್ಲಿ ಪೊಲೀಸರು ಜಮ್ಮು ಮತ್ತು ಕಾಶ್ಮೀರದ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಶೆಹ್ಲಾ ರಶೀದ್ ಸೇನೆಯ ವಿರುದ್ಧ ದಮನಕಾರೀ ಚಟುವಟಿಕೆಗಳನ್ನು ಆರೋಪಿಸಿ ಮಾಡಿದ ಟೀಕೆಗಳನ್ನು ದೇಶದ್ರೋಹವೆಂದು ಪರಿಗಣಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿದರು. ದಿಲ್ಲಿ ಉಚ್ಚ ನ್ಯಾಯಾಲಯ ಶೆಹ್ಲಾ ರಶೀದ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿ ದಸ್ತಗಿರಿಯಿಂದ ವಿಮೋಚನೆ ನೀಡಿದೆ.

ಇಲ್ಲವಾದರೆ ಅವರು ಈಗ ಕಂಬಿ ಎಣಿಸಬೇಕಿತ್ತು. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವವೆಂಬ ಐವತ್ತಾರು ಇಂಚಿನ ಭಿತ್ತಿಯ ಹೆಮ್ಮೆ, ಹಿರಿಮೆಯ ಭಾರತದಲ್ಲಿ ಕಾಶ್ಮೀರದ ತುರ್ತು ಪರಿಸ್ಥಿತಿಯಂತಹ ವಿಚಾರವು ದೇಶಭಕ್ತಿಯ ಗದ್ದಲದಲ್ಲಿ ಸದ್ದಿಲ್ಲದಾಗಿದೆ. ದೇಶಭಕ್ತಿಯೆಂಬ ನೀರಿನ ಗುಳ್ಳೆಯ ಒಳಗೆ ಈ ಅಮಾನವೀಯ ಮತ್ತು ಸದ್ದಡಗಿಸುವ ಕೃತ್ರಿಮಗಳು ಅಡಗಿಹೋಗಿವೆ. ದೇಶಾದ್ಯಂತ ಮಾಧ್ಯಮಗಳ ಸಹಿತ ಮೆದುಳು ಕೆಲಸ ಮಾಡಬಹುದಾದ ಯಾರಿಗೂ ಇಂತಹ ಪರಿಸ್ಥಿತಿ ನಮಗೆದುರಾದರೆ ಏನಾಗಬಹುದು ಎಂಬ ಅರಿವೇ ಇಲ್ಲದಂತಹ ಸಮ್ಮೋಹನ ಕೆಲಸ ಮಾಡುತ್ತಿದೆ. ಮಹಾಭಾರತದ ವಿರಾಟಪರ್ವದ ಗೋಗ್ರಹಣ ಸಂದರ್ಭದಲ್ಲಿ ಆಗತಾನೇ ಬೃಹನ್ನಳೆಯ ಸ್ಥಿತಿಯಿಂದ ಹೊರಬಂದ ಅರ್ಜುನ ಸಮ್ಮೋಹನಾಸ್ತ್ರ ಎಸೆದಾಗ ಕೌರವರ ಪಡೆಯೆಲ್ಲ ವಿವಶವಾಗಿ ಒರಗಿತು. ಆದರೆ ಈ ಸಮ್ಮೋಹನಾಸ್ತ್ರ ಭೀಷ್ಮರನ್ನು ಪ್ರಭಾವಿಸಲಿಲ್ಲ. ಆದರೆ ಅವರೂ ಸಮ್ಮೋಹನಕ್ಕೆ ಒಳಗಾದಂತೆ ನಟಿಸಿದರು.

ಇಂದಿನ ಅನೇಕ ಬುದ್ಧಿವಂತರ ಸ್ಥಿತಿ ಹೀಗಿದೆ. ಸ್ಥಳೀಯ ಶಾಸಕರಿಂದ ಮತ್ತಿತರ ಪುಟಗೋಸಿ ರಾಜಕಾರಣಿಗಳಿಂದ ಮೊದಲ್ಗೊಂಡು ಕೇಂದ್ರದ ಸಚಿವ ಮಹೋದಯರ, ಪ್ರಧಾನಿಯವರೆಗೂ ಎಲ್ಲರೂ ತಮ್ಮ ವಿರುದ್ಧ ಯಾವುದೇ ಟೀಕೆ ಬರಲಿ, ಅಂತಹವರನ್ನು ದೇಶದ್ರೋಹಿಗಳೆಂದು ಟೀಕಿಸುತ್ತಿದ್ದರು ಮತ್ತು ಅವರ ಮಾತಿಗೆ ಸಮೂಹ ಗಾಯನದ ಪಲ್ಲವಿಯನ್ನು ಹಾಡುವ ಸಹಗಾಯಕರಂತೆ ಇತರ ಭಕ್ತಾಂಜನೇಯರು ಕೊರಳು ನೀಡುತ್ತಿದ್ದರು. ‘‘ಗಿಡಗಂಟೆಯಾ ಕೊರಳೊಳಗಿಂದ ಹಕ್ಕಿಗಳಾ ಹಾಡು’’ ಎಂಬ ವರಕವಿ ಬೇಂದ್ರೆಯವರ ಅನನ್ಯ ಸಾಲುಗಳು ಇಷ್ಟು ವ್ಯಂಗ್ಯವಾದ ಧ್ವನಿಯಲ್ಲಿ ನೆನಪಾಗುವುದು ನಮ್ಮ ಸಂವೇದನಾಶೀಲದ ವೈಶಿಷ್ಟ್ಯವಾಗುಳಿಯದೆ ನಮ್ಮ ಕಾಲದ ದುರ್ದೈವವಾಗಿ ಪರಿಣಮಿಸಿದೆ. ಇರಲಿ, ದೀಪಕ್ ಗುಪ್ತ ಮೊದಲಿಗೆ ತಮ್ಮ ಗುರುಗಳಾದ ನ್ಯಾಯಮೂರ್ತಿ ಪಿ.ಡಿ.ದೇಸಾಯಿಯವರನ್ನು ಸ್ಮರಿಸುತ್ತ ಅವರ ನ್ಯಾಯಪರತೆಯನ್ನು ಎತ್ತಿಹಿಡಿದರು.

ಮುಂದೆ ಮಾತನಾಡುವ ಮಾತುಗಳಿಗೆ ಇದು ಒಳ್ಳೆಯ ಮುನ್ನುಡಿಯಾಯಿತು. ಭಾರತದ ಸದ್ಯದ ಪರಿಸ್ಥಿತಿಯನ್ನು ಮತ್ತು ನಮ್ಮ ಸಂವಿಧಾನದ ಹಾಗೂ ದೇಶದ್ರೋಹದ ಕಾನೂನನ್ನು ಐತಿಹಾಸಿಕವಾಗಿ ದೀಪಕ್ ಗುಪ್ತ ವಿಶ್ಲೇಷಿಸಿದರು. ಸರಕಾರ ಮತ್ತು ದೇಶ ಇವುಗಳು ಪ್ರತ್ಯೇಕವಾದ ಅಸ್ತಿತ್ವಗಳು ಎಂದರು. ಈ ಪ್ರಾಥಮಿಕ ವಿಚಾರವನ್ನು ಅವರು ಹೇಳುವ ಸಂದರ್ಭ ಬಂದಿರುವುದು ಈ ದೇಶದ ದುರಂತ. ಪ್ರಜಾಪ್ರಭುತ್ವದಲ್ಲಿ ಸರಕಾರವನ್ನು ಅದನ್ನು ನಡೆಸುವ ವ್ಯಕ್ತಿಗಳನ್ನು ಟೀಕಿಸುವ ಹಕ್ಕು ಎಲ್ಲರಿಗೂ ಇದೆ; ಅದು ದೇಶದ್ರೋಹವಾಗುವುದಿಲ್ಲ. ಪ್ರಜೆಗಳಿಗೆ ಸರಕಾರದ ಭಯವಿರದ ಸ್ಥಿತಿಯೇ ನೈಜ ಪ್ರಜಾಪ್ರಭುತ್ವ. ಬಹುಮತವೇ ಕಾನೂನಲ್ಲ; ಸತ್ಯವೂ ಆಗಿರಬೇಕಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಬಹುತೇಕ ಸರಕಾರಗಳು ಅಧಿಕ ಸಂಖ್ಯೆಯ ಸ್ಥಾನಗಳನ್ನು-ಕೆಲವು ಸಲ ರಾಜಕೀಯ ಕಸರತ್ತಿನ ಮತ್ತು ಅನೈತಿಕ ಮೈತ್ರಿಗಳ ಮೂಲಕ- ಪಡೆಯುತ್ತವಾದರೂ ಅವಕ್ಕೆ ಎಂದೂ ಶೇಕಡಾ 50ಕ್ಕಿಂತ ಹೆಚ್ಚು ಮತ ಗಿಟ್ಟಿದ ಉದಾಹರಣೆಗಳಿಲ್ಲ. (ಹಿಟ್ಲರ್ ಮಾತ್ರ ಒಮ್ಮೆ ಶೇಕಡಾ 80ಕ್ಕೂ ಹೆಚ್ಚು ಪ್ರಜೆಗಳ ಬೆಂಬಲ ಹೊಂದಿದ್ದನಂತೆ!) ಆದ್ದರಿಂದ ಈ ಬಹುಮತದ ಕಲ್ಪನೆ ತಾಂತ್ರಿಕವಷ್ಟೇ ಅಲ್ಲದೆ ಸಹಜವಲ್ಲ. ಆದ್ದರಿಂದ ಯಾವೊಬ್ಬ ನಾಯಕನೂ ತಾನು ಭಾರತದ 130 ಕೋಟಿ ಜನರ ಆಶೋತ್ತರಗಳನ್ನು ಪೂರೈಸುತ್ತಿದ್ದೇನೆಂದು ಕೆಂಪುಕೋಟೆಯಲ್ಲಿ ಘೋಷಿಸಿದರೆ ಅದಕ್ಕಿಂತ ದೊಡ್ಡ ಸುಳ್ಳು ಬೇರಿಲ್ಲ. ಇಂತಹ ಸ್ಥಿತಿಯಲ್ಲಿ ನ್ಯಾಯಮೂರ್ತಿ ದೀಪಕ್ ಗುಪ್ತ ಅವರ ಮಾತುಗಳ ಸದ್ಯದ ಸ್ಥಿತಿಗೆ ಕನ್ನಡಿ ಹಿಡಿದಿವೆ.

ಗುಪ್ತ ಪಾರಂಪರಿಕ ಶ್ರೇಷ್ಠರಾದ ಬುದ್ಧ, ಮಹಾವೀರ, ಯೇಸುಕ್ರಿಸ್ತ, ಪೈಗಂಬರ್, ಗುರುನಾನಕ್‌ದೇವ್, ಮಾರ್ಟಿನ್‌ಲೂಥರ್‌ಕಿಂಗ್, ರಾಜಾರಾಮಮೋಹನ ರಾಯ್, ಸ್ವಾಮಿ ದಯಾನಂದ ಸರಸ್ವತಿ, ಕಾರ್ಲ್ ಮಾರ್ಕ್ಸ್, ಮಹಾತ್ಮಾ ಗಾಂಧಿ ಮುಂತಾದವರನ್ನು ತಮ್ಮ ಭಾಷಣದಲ್ಲಿ ಉದಾಹರಿಸಿದರು. ದೇಶಕ್ಕೆ ಅಗತ್ಯವಿದ್ದ ಜಾತ್ಯತೀತ ಉದಾಹರಣೆಗಳಿವು. ಅಷ್ಟೇ ಅಲ್ಲ, ಋಗ್ವೇದದಲ್ಲಿ ಉಲ್ಲೇಖಿತವಾದ ‘ಉತ್ತಮ ಯೋಚನೆಗಳು ನಮಗೆ ಎಲ್ಲಾ ಕಡೆಯಿಂದಲೂ ಬರಲಿ’ ಎಂಬ ಅರ್ಥದೊಂದಿಗೆ ವಿಶ್ವದ ಇತರ ದೇಶಗಳ ಜ್ಯೇಷ್ಠರನ್ನೂ ಉದಾಹರಿಸಿದರು. ವಿಶಾಲ ದೃಷ್ಟಿಕೋನಕ್ಕೆ ಅವರು ಕೆಂಪುಹಾಸನ್ನು ಬಿಡಿಸಿಟ್ಟರು. ನ್ಯಾಯಮೂರ್ತಿ ದೀಪಕ್ ಗುಪ್ತ ಗುರುನಾನಕರ ಬದುಕಿನಿಂದ ಒಂದಕ್ಕಿಂತ ಹೆಚ್ಚು ಉದಾಹರಣೆಗಳನ್ನು ನೀಡಿದ್ದಾರೆ. ಗುರುನಾನಕರು ಮಕ್ಕಾಕ್ಕೆ ಹೋಗಿದ್ದರು. ಹಾದಿಯಲ್ಲಿ ಬಳಲಿ ಒಂದೆಡೆ ಮಲಗಿದರು. ಆಗ ಮೌಲ್ವಿಯೊಬ್ಬ ‘‘ನೀವು ಮಕ್ಕಾದ ಕಡೆಗೆ ಕಾಲನ್ನು ಚಾಚಿ ಮಲಗಿದ್ದೀರಿ, ತಿರುಗಿ ಮಲಗಿ!’’ ಎಂದ. ಆಗ ನಾನಕರು ‘‘ಸರಿ, ದೇವರು ಇಲ್ಲದ ದಿಕ್ಕನ್ನು ತೋರಿಸು, ಅತ್ತ ಕಾಲು ಚಾಚುತ್ತೇನೆ’’ ಎಂದರು. ಸ್ವಾತಂತ್ರ್ಯವೆಂದರೆ ಹೀಗೆ. ಅದಕ್ಕೆ ದಿಕ್ಕನ್ನು ಹೇಳಲು ಸಾಧ್ಯವಿಲ್ಲ. ಇನ್ನೊಂದೆಡೆ ಗಂಗಾ ನದಿಯಲ್ಲಿ ಭಕ್ತರು ಪೂರ್ವಕ್ಕೆ ಮುಖಮಾಡಿ ತಮ್ಮ ಪೂರ್ವಿಕರಿಗೆ ಅರ್ಘ್ಯ ನೀಡುತ್ತಿದ್ದಾಗ ನಾನಕರು ಪಶ್ಚಿಮಕ್ಕೆ ಮುಖಮಾಡಿ ನೀರು ಹಾಯಿಸಿದರು. ಆಗ ಭಕ್ತರು ಇದೇನು ಮಾಡುತ್ತಿದ್ದಿರಿ ಎಂದು ಕೆಳಿದರು. ಅದಕ್ಕೆ ನಾನಕರು ನಾನು ನನ್ನ ಗದ್ದೆಗೆ ನಿರು ಹಾಯಿಸುತ್ತಿದ್ದೇನೆ ಎಂದರು.

‘‘ಎಲ್ಲೋ ದೂರದಲ್ಲಿರುವ ನಿಮ್ಮ ಗದ್ದೆಗೆ ಇಲ್ಲಿಂದ ನೀರು ಹಾಯಿಸುತ್ತೀರಲ್ಲ, ಇದು ಮೂರ್ಖತನ!’’ ಎಂದರು. ಆಗ ನಾನಕರು ‘‘ನೀವು ನೀಡುವ ಅರ್ಘ್ಯ ಪೂರ್ವಿಕರಿಗೆ ತಲುಪವುದಾದರೆ ಇದೂ ನನ್ನ ಗದ್ದೆಗೆ ತಲುಪೀತು’’ ಎಂದರು. ಪ್ರಜಾಪ್ರಭುತ್ವ ರಾಷ್ಟ್ರ ಅಂತಲ್ಲ, ಯಾವುದೇ ಜಾತ್ಯತೀತ, ಸ್ವತಂತ್ರ ಮತ್ತು ಆರೋಗ್ಯಕಾರೀ ಸಮಾಜದಲ್ಲಿ ಪ್ರತೀ ನಂಬಿಕೆಯೂ ಧಾರ್ಮಿಕವಾಗಬೇಕಿಲ್ಲ. ನಾಸ್ತಿಕರೂ ಆಸ್ತಿಕರಷ್ಟೇ ಸ್ವತಂತ್ರರು. ಹಾಗೆ ನೋಡಿದರೆ ಆಸ್ತಿಕರು ಧಾರ್ಮಿಕ ಶ್ರದ್ಧೆಯ ಗುಲಾಮರು. ಬದುಕನ್ನು ವೈಜ್ಞಾನಿಕವಾಗಿ ಮತ್ತು ತಾರ್ಕಿಕವಾಗಿ ಮಾಡಲು ಸತತ ದುಡಿದ ಶ್ರೇಷ್ಠರ ಉದಾಹರಣೆಗಳನ್ನು ಧಿಕ್ಕರಿಸಿ ಒಳ್ಳೆಯ ಭಾರತವನ್ನು ಕಟ್ಟಲು ಸಾಧ್ಯವೇ ಇಲ್ಲ. ಅದು ಹಿಟ್ಲರ್ ಕಟ್ಟಿದ ಜರ್ಮನಿಯಾದೀತು, ಅಷ್ಟೇ.

ದೀಪಕ್ ಗುಪ್ತ ಸಂವಿಧಾನದ ಉಗಮ ಮತ್ತು ಮೂಲಭೂತ ಸ್ವಾತಂತ್ರ್ಯದ ಬೆಳವಣಿಗೆಗಳನ್ನು ವಿವರಿಸಿದ್ದಾರೆ. ನಾನೇ ಸರಿ; ನೀವು ತಪ್ಪು ಎಂಬ ನಿರ್ಣಯವು ಎಂದಿಗೂ ಶಾಶ್ವತ ಕಲ್ಪನೆಯಾಗಬಾರದು ಎಂಬುದನ್ನು ಅವರ ಮಾತುಗಳು ಸೂಚಿಸಿವೆ. ರವೀಂದ್ರನಾಥ ಟಾಗೋರ್ ಅವರನ್ನು ಉಲ್ಲೇಖಿಸುತ್ತ ಗುಪ್ತ ಅವರು ರವೀಂದ್ರರನ್ನು ಗೌರವಿಸುತ್ತಿದ್ದವರೂ ಅವರ ‘‘ರಾಷ್ಟ್ರೀಯತೆ ಎಂಬುದು ಒಂದು ಕಾಯಿಲೆ’’ ಎಂಬ ಮಾತುಗಳನ್ನು ಒಪ್ಪಲಿಲ್ಲ. ಆದರೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಸುರಕ್ಷಿತವಾಗಿತ್ತು. ಇಂದು ಅವರೇನಾದರೂ ಆ ಮಾತುಗಳನ್ನಾಡಿದ್ದರೆ ಅವರನ್ನು ದೇಶದ್ರೋಹದ ಆಪಾದನೆಗೆ ಗುರಿಪಡಿಸುತ್ತಿದ್ದರೇನೋ ಎಂದು ಹತಾಶಭಾವದಿಂದ ಹೇಳಿದ್ದಾರೆ.

ದೇಶದ್ರೋಹದ ಕಾನೂನು ಇಂದು ನಗೆಪಾಟಲಾಗುವ ಸ್ಥಿತಿಗೆ ಬಂದಿದೆ. ಪೊಲೀಸರು ಇದೇ ಸಂದರ್ಭವೆಂಬಂತೆ ಅವಕಾಶ ಸಿಕ್ಕಿದರೆ ಸಾಕು, ದೇಶದ್ರೋಹದ ಪ್ರಕರಣಗಳನ್ನು ದಾಖಲುಮಾಡುತ್ತಾರೆ. (ಪೊಲೀಸರಿಂದ ಕಾನೂನಿನ ಅಂತರಾರ್ಥದ ಅರಿವನ್ನು ಬಯಸುವುದು ಮೂರ್ಖತನ!) ಯಾರನ್ನಾದರೂ ಅಪಮಾನಕಾರೀ ಪದಗಳಿಂದ ಟೀಕಿಸಿದರೆ ಅದು ಹೆಚ್ಚೆಂದರೆ ಮಾನಹಾನಿಗೆ ದಾರಿ ಮಾಡಿಕೊಡಬಹುದು. ಆದರೆ ದೇಶದ್ರೋಹವೆಂಬ ಆಪಾದನೆ ಸ್ಥಿರವಾಗಬೇಕಾದರೆ ಅದು ದೇಶವನ್ನಾಳುವವರ ಹಿತಕ್ಕೆ ವಿರೋಧವಾದರೆ ಸಾಲದು, ಹಿಂಸೆಗೆ ಪ್ರೇರಕವಾಗಬೇಕು. ಭಾರತದ ದೇಶದ್ರೋಹದ ಕಾನೂನು ಬ್ರಿಟಿಷರ ಬಳುವಳಿ. ಆಗ ಅವರಲ್ಲಿ ಬ್ರಿಟಿಷರಿಗೊಂದು ಕಾನೂನು; ವಸಾಹತುಶಾಹೀ ಆಡಳಿತಮಾಡುವಲ್ಲಿ ಇನ್ನೊಂದು ಕಾನೂನು ಇತ್ತು. ಆದರೆ ಜಗತ್ತು ವಿಶಾಲವಾದಂತೆ ಬ್ರಿಟನ್ ಸೇರಿದಂತೆ ಅನೇಕ ರಾಷ್ಟ್ರಗಳು ದೇಶದ್ರೋಹದ ಕಾನೂನನ್ನು ತಮ್ಮ ಸಂವಿಧಾನದಿಂದ ಕಿತ್ತುಹಾಕಿವೆ ಅಥವಾ ಅಪರೂಪವಾಗಿಸಿವೆ. ಇಂತಹ ಸಂದರ್ಭದಲ್ಲಿ ಭಾರತ ಮಾತ್ರ ಇಂತಹ ಕಾನೂನನ್ನೇ ಆಶ್ರಯಿಸಿ ತಮ್ಮನ್ನು ಟೀಕಿಸುವವರನ್ನು ನಿಯಂತ್ರಿಸಲು ಪ್ರಯತ್ನಿಸುವುದು ಹಾಸ್ಯಾಸ್ಪದವೇ ಸರಿ.

ವಿಶೇಷವೆಂದರೆ 1975ರಲ್ಲಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿಯನ್ನು ದೇಶಾದ್ಯಂತ ಜಾರಿ ಮಾಡಿದಾಗ ದೇಶದೆಲ್ಲೆಡೆ ಸರ್ವಾಧಿಕಾರದ ವಿರುದ್ಧ ಪ್ರತಿಭಟನೆ ನಡೆಯಿತು. ಆದರೆ ಇಂತಹ ಪ್ರತಿಭಟನಾಕಾರರನ್ನು ಸರಕಾರ ದೇಶದ್ರೋಹಿಗಳೆಂದು ಕರೆಯಲಿಲ್ಲ. ಇಂದು ಹಾಗಲ್ಲ, 1975ನ್ನು ಹೋಲುವ ಸ್ಥಿತಿ ಜಮ್ಮು ಮತ್ತು ಕಾಶ್ಮೀರದಲ್ಲಿದೆ ಮಾತ್ರವಲ್ಲ, ದೇಶಾದ್ಯಂತ ದೇಶದ್ರೋಹಿಗಳ ನಾಮಫಲಕ ಹಾಕುವ ಕೆಲಸಕ್ಕೆ ಕೇಂದ್ರ ಸರಕಾರ ಇಳಿದಿದೆ. ಎಲ್ಲಿಯ ವರೆಗೆ ವಿಚಾರಗಳ ಅಭಿವ್ಯಕ್ತಿಗೆ ಆತಂಕವಿಲ್ಲವೋ ಅಲ್ಲಿಯ ವರೆಗೆ ಪ್ರಜಾಪ್ರಭುತ್ವ ಬದುಕುತ್ತದೆ. ಅದು ಸಾಯುವುದಿಲ್ಲ; ಸತ್ತಂತಿರುತ್ತದೆ; ಆದರೆ ಜೀವಸೆಲೆಯ ಜಲ ಮುಟ್ಟಿದರೆ, ತಟ್ಟಿದರೆ ಮತ್ತೆ ಚಿಗುರುತ್ತದೆ.

ಎಲ್ಲ ಕಾಲದಲ್ಲೂ ಕೆಟ್ಟ ಆಡಳಿತವಿದ್ದೇ ಇತ್ತು. ದಾಸರು ಉತ್ತಮ ಪ್ರಭುತ್ವ ಲೊಳಲೊಟ್ಟೆ ಎಂದದ್ದು ಇದೇ ಅರ್ಥದಲ್ಲಿ. ದೇವರು ಪ್ರತ್ಯಕ್ಷನಾಗಿ ಈ ಭೂಮಿಯಲ್ಲಿ ಬದುಕಿದರೆ ಪ್ರಾಯಃ ಈ ಕೆಟ್ಟ ಆಡಳಿತದ ಹಾಗೆಯೇ ಇರುತ್ತಿದ್ದನೇನೋ? ಅದಕ್ಕೇ ಅವನನ್ನು ಕೆಟ್ಟ ನಿರ್ದೇಶಕರ ಹಾಗೆ ಪರದೆಯ ಹಿಂದೆಯೇ ಇರಿಸಲಾಗಿದೆ.

ಒಟ್ಟಾರೆ ಹೇಳುವುದಾದರೆ ಸಂವಾದ ಸಾಧ್ಯವಾಗದ ಸ್ಥಿತಿ ಇಡೀ ದೇಶದಲ್ಲಿದೆ. ನೆಹರೂ ಕಾಲದಲ್ಲಿ ಶೇಕಡಾ ಹತ್ತಕ್ಕೆ ಮೋಸವಿಲ್ಲ ಎಂದು ಹೇಳುವುದಾದರೆ ಈಗ ಆ ಹತ್ತಕ್ಕೂ ಸಂಚಕಾರ ಬಂದಿದೆ. ಇಂತಹ ಸಂದರ್ಭದಲ್ಲಿ ನ್ಯಾಯಮೂರ್ತಿ ದೀಪಕ್ ಗುಪ್ತ ಅವರ ಎಚ್ಚರಿಕೆ ನಮ್ಮ ಬುದ್ಧ್ದಿಯನ್ನು ಕೆಣಕಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ‘‘ನ್ಯಾಯಾಂಗ ಏನು ಬೇಕಾದರೂ ಹೇಳಲಿ, ನಾವಿರೋದೇ ಹೀಗೆ’’ ಎಂಬ ಮನಸ್ಥಿತಿಯ ಸರಕಾರದ ಕುರಿತು ಏನು ಹೇಳಿದರೂ ಬರೆದರೂ ಅಷ್ಟೇ!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top