ಮೂಲನಿವಾಸಿಗಳ ಮಹಿಷ ದಸರಾ-2019 | Vartha Bharati- ವಾರ್ತಾ ಭಾರತಿ

ಮೂಲನಿವಾಸಿಗಳ ಮಹಿಷ ದಸರಾ-2019

ರಾಜಕಾರಣಿಗಳು, ಅಧಿಕಾರಿಗಳು, ಉದ್ದಿಮೆದಾರರು, ಮಧ್ಯವರ್ತಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಮುಕ್ತವಾದ ‘‘ಮಹಿಷ ದಸರಾ -2019’’ನ್ನು ದಿನಾಂಕ 27-09-2019ರ ಶುಕ್ರವಾರ ಮೂಲನಿವಾಸಿ ಬಂಧುಗಳು ಹಮ್ಮಿಕೊಂಡಿದ್ದಾರೆ. ಮೈಸೂರು ಪುರಭವನದ ಅಂಬೇಡ್ಕರ್ ಪ್ರತಿಮೆ ಸ್ಥಳದಿಂದ ಬುದ್ಧರಥ, ಭೀಮರಥ, ಅಶೋಕ ರಥ ಮತ್ತು ಮಹಿಷರಥಗಳ ಮೆರವಣಿಗೆ ಮಹಾಬಲ ಬೆಟ್ಟಕ್ಕೆ ಸಾಗಿ ಮಹಿಷ ಮಂಡಲದ ಸಾಮ್ರಾಟ ಮಹಿಷನಿಗೆ ಪುಷ್ಪಾರ್ಚನೆ, ಗಣ್ಯರಿಂದ ನುಡಿನಮನ, ಪುಸ್ತಕ ಬಿಡುಗಡೆ, ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬೌದ್ಧ ದಮ್ಮ ದೀಕ್ಷೆ ಮೊದಲಾದ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಭಾರತವು ಮೂಲನಿವಾಸಿ ನಾಗಬೌದ್ಧರ ಜನ್ಮಭೂಮಿ, ಪುಣ್ಯಭೂಮಿ ಮತ್ತು ಕರ್ಮಭೂಮಿಯಾಗಿದೆ. ಆಹಾರ ಮತ್ತು ಜೀವನೋಪಾಯ ಮಾರ್ಗಗಳನ್ನು ಹುಡುಕಿಕೊಂಡು ಯುರೋಪ್, ಮಧ್ಯಪ್ರಾಚ್ಯ ಮೊದಲಾದೆಡೆಯಿಂದ ಬಂದ ಆರ್ಯರು ವಾಮ ಮಾರ್ಗಗಳನ್ನು ಅನುಸರಿಸಿ ಸ್ಥಳೀಯ ಮೂಲನಿವಾಸಿಗಳನ್ನು ಜಾತಿಗಳ ಹೆಸರಿನಲ್ಲಿ ವಿಭಜಿಸಿ, ದುರ್ಬಲಗೊಳಿಸಿ, ಶೋಷಣೆಗೆ ಗುರಿಪಡಿಸಿ ಭೂಮಿ, ಬಂಡವಾಳ ಮತ್ತು ಅಧಿಕಾರಗಳನ್ನು ಗಳಿಸಿಕೊಂಡ ಬಗೆಯನ್ನು ಅನೇಕ ಪ್ರಬುದ್ಧ ಚಿಂತಕರು, ಇತಿಹಾಸಕಾರರು ಮತ್ತು ಸಂಘಟಕರು ಅಧಿಕೃತ ಐತಿಹಾಸಿಕ ಸ್ಮಾರಕಗಳು ಮತ್ತು ದಾಖಲೆಗಳ ಆಧಾರದ ಮೇಲೆ ದಾಖಲಿಸಿದ್ದಾರೆ. ಸನಾತನ ಧರ್ಮವೆಂದು ಪ್ರತಿಪಾದಿಸಲ್ಪಟ್ಟ ಯಥಾಸ್ಥಿತಿವಾದಿಗಳ ನೇತೃತ್ವದ ಬುದ್ಧಪೂರ್ವ ಭಾರತದಲ್ಲಿ ಮಹಿಳೆಯರು ಮತ್ತು ಮೂಲನಿವಾಸಿಗಳಿಗೆ ಪ್ರಕೃತಿದತ್ತವಾದ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಾಮೂಹಿಕ ಕಲ್ಯಾಣ ಮೊದಲಾದ ಮೂಲಭೂತ ಹಕ್ಕುಗಳು ಇರಲಿಲ್ಲ. ಸನಾತನ ಧರ್ಮದ ಪ್ರತಿಪಾದಕರ ಹುನ್ನಾರಗಳಿಗೆ ಗುರಿಯಾಗಿ ಮೂಲನಿವಾಸಿಗಳು ತಮ್ಮದಲ್ಲದ ತಪ್ಪಿಗೆ ಗುಲಾಮಗಿರಿಗೆ ಒಳಗಾದರು. ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳಿಂದ ವಂಚಿತರಾದ ಮೂಲನಿವಾಸಿಗಳನ್ನು 2,600 ವರ್ಷಗಳ ಹಿಂದೆ ಬುದ್ಧ ಸತ್ಯ, ಕರುಣೆ, ಅಹಿಂಸೆ ಮತ್ತಿತರ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಂಘಟಿಸಿದರು. ಭಾರತದಲ್ಲಿ ಮಾನವೀಯ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಆಧರಿಸಿದ ಹೊಸ ನಾಗರಿಕತೆಯನ್ನು ಬೆಳೆಸಿ ಮೂಲನಿವಾಸಿಗಳ ಸಾರ್ವಭೌಮತ್ವಕ್ಕೆ ಬುದ್ಧ ನೀಡಿದ ಕೊಡುಗೆ ಅನನ್ಯವಾದುದು.

ಭಾರತದ ಇತಿಹಾಸವೆಂದರೆ ಬೌದ್ಧ ಧರ್ಮ ಮತ್ತು ಬ್ರಾಹ್ಮಣ ಧರ್ಮಗಳ ನಡುವಣ ಸಂಘರ್ಷವೆಂದು ಮಹಾಮಾನವತಾವಾದಿ ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ. ಬುದ್ಧನ ನೇತೃತ್ವದಲ್ಲಿ ಸಮಸ್ತ ಭಾರತವು ಮೂಲನಿವಾಸಿ ನಾಗಬೌದ್ಧರ ಭೂಮಿಯಾಗಿ ಪರಿವರ್ತನೆಗೊಂಡಿತು. ಪ್ರಬುದ್ಧ ಭಾರತವನ್ನು ನಿರ್ಮಿಸಿದ ಬುದ್ಧನ ಬಗ್ಗೆ ದೇಶ ವಿದೇಶಗಳ ಇತಿಹಾಸಕಾರರು ಅಭಿಮಾನಪೂರ್ವಕವಾಗಿ ವಿಸ್ತೃತ ಚರಿತ್ರೆಯನ್ನು ರೂಪಿಸಿದ್ದಾರೆ. ಇಂತಹ ಐತಿಹಾಸಿಕ ಕಾಲಘಟ್ಟ ಹಾಗೂ ಪ್ರಕ್ರಿಯೆಯನ್ನು ಬಾಬಾ ಸಾಹೇಬರು ‘ಕ್ರಾಂತಿ’ ಎಂದು ಬಣ್ಣಿಸಿದ್ದಾರೆ. ಬುದ್ಧನ ಮಾರ್ಗದರ್ಶನದಲ್ಲಿ ಅಶೋಕ, ಮಿಲಿಂದ, ಕಾನಿಷ್ಕಾ, ಬಿಂಬಸಾರ, ಚಂದ್ರಗುಪ್ತ ಮೌರ್ಯ ಮೊದಲಾದ ದೊರೆಗಳು ಸುಗಮ ಆಡಳಿತದ ಹೊಸ ಯುಗವನ್ನು ಆರಂಭಿಸಿ ಭಾರತಕ್ಕೆ ವಿಶ್ವಮಾನ್ಯತೆಯನ್ನು ಗಳಿಸಿಕೊಟ್ಟ ಬಗ್ಗೆ ಐತಿಹಾಸಿಕ ಸ್ಮಾರಕಗಳು, ವಿದ್ಯಮಾನಗಳು ಮತ್ತು ದಾಖಲೆಗಳು ಸಾಕಷ್ಟು ಪುರಾವೆ ಒದಗಿಸುತ್ತವೆ.

ಮೌರ್ಯರ ಕೊನೆಯ ದೊರೆ ಬೃಹದ್ರತನ ಸೇನೆಯ ಮುಖ್ಯಸ್ಥ ಪುಷ್ಯಮಿತ್ರಶುಂಗ ಅಮಾನುಷ ಸಂಚನ್ನು ರೂಪಿಸಿ ತನ್ನ ದೊರೆಯನ್ನು ಕೊಂದು ಅಸಮಾನತೆಯ ಸಂಕೇತವಾದ ಮನುಯುಗವನ್ನು ಆರಂಭಿಸುತ್ತಾನೆ. ಸುಮಿತ್ರಾ ಭಾರ್ಗವನೆಂಬ ವೈದಿಕಶಾಹಿಯ ಪ್ರವರ್ತಕ ‘ಮನುಸ್ಮತಿ’ ಎಂಬ ಸಮಾನತೆ ವಿರೋಧಿ ಧಾರ್ಮಿಕ ಕಟ್ಟುಪಾಡುಗಳನ್ನು ರೂಪಿಸಿದ್ದಾನೆ. ಮಹಿಳೆಯರು ಸ್ವತಂತ್ರರಲ್ಲ, ಶೂದ್ರರು ಹುಟ್ಟಿರುವುದೇ ಬ್ರಾಹ್ಮಣರ ಸೇವೆಗಾಗಿ, ಬ್ರಾಹ್ಮಣರು, ವೈಶ್ಯರು ಮತ್ತು ಕ್ಷತ್ರಿಯರು ಹುಟ್ಟಿರುವುದೇ ರಾಜ್ಯಾಡಳಿತ ನಡೆಸಲಿಕ್ಕಾಗಿ ಎಂಬ ಅವೈಜ್ಞಾನಿಕ ಹಾಗೂ ಅಮಾನವೀಯ ಚಿಂತನೆಗಳನ್ನು ಮೂಲನಿವಾಸಿಗಳ ಮೇಲೆ ಹೇರಿ ವೈದಿಕಶಾಹಿ ರೂಪುಗೊಳ್ಳಲು ಮನುವಾದಿಗಳು ಕಾರಣರಾದರು. ಇದನ್ನು ಅಂಬೇಡ್ಕರ್ ನಿಸರ್ಗ ಧರ್ಮ ಮತ್ತು ಮಾನವೀಯತೆಗಳಿಗೆ ವಿರುದ್ಧವಾದ ಪ್ರತಿಕ್ರಾಂತಿ ಎಂಬುದಾಗಿ ಪ್ರತಿಪಾದಿಸಿದ್ದಾರೆ.

ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ಬೌದ್ಧವಾದಿ ಮತ್ತು ಮಹಾನ್ ಚಕ್ರವರ್ತಿ ಸಾಮ್ರಾಟ್ ಅಶೋಕನು ಮಹಾದೇವತೇರ ಎಂಬ ಬುದ್ಧನ ಅನುಯಾಯಿಯನ್ನು ದಕ್ಷಿಣ ಭಾರತಕ್ಕೆ ಬೌದ್ಧ ಧರ್ಮ ಪ್ರಚಾರ ಮತ್ತು ಮೌಲ್ಯಾಧಾರಿತ ಆಡಳಿತ ನೀಡುವ ಸಲುವಾಗಿ ಕಳುಹಿಸಿದನು. ಬೌದ್ಧ ಭಿಕ್ಕು ಮಹಾದೇವತೇರ ಅಂದು ಆಳಿದ ಮಹಿಷ ಮಂಡಲವೇ ಇಂದಿನ ಮೈಸೂರು ಎಂಬುದನ್ನು ಪ್ರಸಿದ್ಧ ಇತಿಹಾಸಕಾರ ಸೂರ್ಯನಾಥ ಕಾಮತ್ ಮೈಸೂರು ಗೆಜೆಟಿಯರ್‌ನಲ್ಲಿ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಮಂಡಿಸಿದ್ದಾರೆ. ಮಹಿಷ ಮಂಡಲ, ಮಹಿಷ ಪುರಿ, ಮಹಿಷೂರು ಮೊದಲಾದ ಹೆಸರಿನಿಂದ ಮಹಿಷನ ಸಾಮ್ರಾಜ್ಯವು ಕರೆಯಲ್ಪಟ್ಟಿದೆ. ಮಹಿಷೂರನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಬೃಹತ್ ಸಾಮ್ರಾಜ್ಯ ಕಟ್ಟಿ ವಿಂಧ್ಯಾಪರ್ವತದ ಮಹಿಸ್ಮತಿ ತಪ್ಪಲಿನವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಆಳಿದ ಮಹಿಷನನ್ನು ಈ ಭಾಗದ ಮೂಲನಿವಾಸಿಗಳು ಅತ್ಯಂತ ಪ್ರೀತಿ ಮತ್ತು ಧನ್ಯತೆಗಳಿಂದ ಸ್ಮರಿಸುತ್ತಾರೆ.

ಜಾಗತಿಕ ಇತಿಹಾಸ, ಬೌದ್ಧ ಇತಿಹಾಸ, ಮಹಿಷ ಮಂಡಲದ ಇತಿಹಾಸ ಮೊದಲಾದವುಗಳು ಆಂಗ್ಲಭಾಷೆ, ಪಾಳಿ ಭಾಷೆ ಮತ್ತಿತರ ಭಾಷೆಗಳಲ್ಲಿ ಯಥೇಚ್ಛವಾಗಿ ಲಭಿಸುತ್ತವೆ. ಮೌರ್ಯ ಚಕ್ರವರ್ತಿ ಬಿಂದುಸಾರನ ಕಾಲದಲ್ಲಿ ಮಹಿಷ ಮಂಡಲವು ಬಿಂದುಸಾರನ ಆಳ್ವಿಕೆಗೆ ಒಳಪಟ್ಟಿತ್ತೆಂಬುದನ್ನು ಬೌದ್ಧ ಗ್ರಂಥಗಳು ತಿಳಿಸುತ್ತವೆ. ಮಹಿಷನು ಸನಾತನ ಧರ್ಮ ಪ್ರತಿಪಾದಕರು ಹೇಳುವಂತೆ ರಾಕ್ಷಸನಲ್ಲ. ಮಹಿಷನು ಮಹಿಷ ಮಂಡಲದ ಮೂಲನಿವಾಸಿಗಳ ರಾಜ ಮತ್ತು ರಕ್ಷಕ. ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅನುಗುಣವಾಗಿ ರಾಜ್ಯಭಾರ ನಡೆಸಿ ಮಹಿಷ ಮಂಡಲವನ್ನು ಭಾರತದ ಕಲ್ಯಾಣ ರಾಜ್ಯವನ್ನಾಗಿ ರೂಪಿಸಿದ ಶ್ರೇಯಸ್ಸು ಮಹಿಷನಿಗೆ ಸಲ್ಲುತ್ತದೆ. ಮಹಿಷನು ಇಂದ್ರಾದಿ ದೇವತೆಗಳಿಂದ ಮೂಲನಿವಾಸಿಗಳ ಮೇಲೆ ಜರುಗಿದ ಅನ್ಯಾಯಗಳ ವಿರುದ್ಧ ನಡೆಸಿದ ಯುದ್ಧದಲ್ಲಿ ಜಯಗಳಿಸಿದನು. ಒಂದು ಕಾಲದಲ್ಲಿ ಮೂಲನಿವಾಸಿಗಳ ದೊರೆಯಾದ ಮಹಿಷ ಯುದ್ಧದಲ್ಲಿ ದೇವತೆಗಳನ್ನು ಗೆದ್ದು ಅವರನ್ನು ಯಾವ ಅಧೋಗತಿಗೆ ಇಟ್ಟಿದ್ದನೆಂದರೆ ಅವರು ಭೂಮಿಯ ಮೇಲೆ ಭಿಕ್ಷುಕರಾಗಿ ಅಲೆದಾಡುತ್ತಿದ್ದರು (ಡಾ.ಬಿ.ಆರ್.ಅಂಬೇಡ್ಕರ್, ಸಂ.3, ಪು.395).

ಮಹಿಷನು ಇಂದ್ರಾದಿ ದೇವತೆಗಳ ವಿರುದ್ಧ ವೀರೋಚಿತವಾಗಿ ಹೋರಾಟ ನಡೆಸಿ ಜಯಗಳಿಸಿದ ಸಂತಸದ ಸುದ್ದಿ ದಶದಿಕ್ಕುಗಳಲ್ಲಿಯೂ ಹರಡಿದ ಹಿನ್ನೆಲೆಯಲ್ಲಿ ಮೂಲನಿವಾಸಿಗಳು ಮಹಿಷನ ವಿಜಯವನ್ನು ‘ದಸರಾ’ ಎಂಬ ಹೆಸರಿನಲ್ಲಿ ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾರೆ. ಬೌದ್ಧ ಇತಿಹಾಸದಲ್ಲಿ ಈ ಸಂಭ್ರಮವನ್ನು ‘ವಿಜಯದಶಮಿ’ ಎಂದು ದಾಖಲಿಸಲಾಗಿದೆ. ಪಿತೃಪಕ್ಷವೆಂಬುದು ಪೂರ್ವಜನರನ್ನು ಪ್ರೀತಿ ಮತ್ತು ಕೃತಜ್ಞತೆಗಳಿಂದ ಸ್ಮರಿಸಿ ಬಂಧುಗಳಿಗೆ ಅನ್ನದಾಸೋಹ ನಡೆಸುವ ಮಾನವೀಯ ಪರಂಪರೆಯನ್ನು ಮಹಿಷನು ರೂಪಿಸಿದನು. ಈ ಪರಂಪರೆ ಇಂದಿಗೂ ಕೂಡ ಮೈಸೂರು ನಗರದ ವಿವಿಧ ಭಾಗಗಳಲ್ಲಿ ಎಲ್ಲ ಜನಾಂಗಗಳಲ್ಲಿಯೂ ಆಚರಣೆಯಲ್ಲಿದೆ.

ಚಾಮುಂಡಿ ಎಂಬ ಹೆಸರು ಬೌದ್ಧ ಇತಿಹಾಸ, ಭಾರತೀಯ ಇತಿಹಾಸ ಮತ್ತು ಮಹಿಷ ಮಂಡಲದ ಇತಿಹಾಸಗಳಲ್ಲಿ ದಾಖಲಾಗಿಲ್ಲ. ಚಾಮುಂಡಿ ಎಂಬುದು ಮಿಥ್ಯೆ, ಸತ್ಯವಲ್ಲ. ಮಹಿಷನನ್ನು ದುಷ್ಟನೆಂದು ವೈದಿಕರು ಪ್ರತಿಬಿಂಬಿಸಿ ಆತನನ್ನು ಚಾಮುಂಡಿ ವಧಿಸಿ ಪ್ರಜೆಗಳನ್ನು ರಕ್ಷಿಸಿದಳು ಎಂಬುದು ಆಧಾರ ರಹಿತವಾದ ಕಟ್ಟುಕಥೆ. ಮಹಿಷ ದುಷ್ಟನಲ್ಲ, ಚಾಮುಂಡಿ ದುಷ್ಟ ಶಿಕ್ಷಕಿಯಲ್ಲ ಎಂಬ ಸತ್ಯಸಂದೇಶವನ್ನು ಮೂಲನಿವಾಸಿಗಳಿಗೆ ರವಾನಿಸಿ ಕಳೆದು ಹೋದ ಚರಿತ್ರೆಯನ್ನು ಪುನಾರೂಪಿಸುವ ಸಲುವಾಗಿ ‘ಮೂಲ ನಿವಾಸಿಗಳಿಂದ ಮಹಿಷ ದಸರಾ’ ಆಚರಿಸಲಾಗುತ್ತಿದೆಯೇ ವಿನಹ ಯಾವ ಧರ್ಮಕ್ಕೆ ಅಥವಾ ಜನಾಂಗಕ್ಕೆ ಅವಹೇಳನ ಮಾಡುವ ಉದ್ದೇಶದಿಂದಲ್ಲ. ಯದುವಂಶದ ಅರಸರು ನೂರಾರು ವರ್ಷಗಳಿಂದ ಆಚರಿಸುತ್ತಿರುವ ದಸರಾ ಉತ್ಸವದಲ್ಲಿ ಚಾಮುಂಡಿ ಕೇಂದ್ರ ಬಿಂದುವಲ್ಲ. ಇಂದಿಗೂ ಕೂಡ ಯದುವಂಶದ ಅರಸರು ದಸರಾ, ಹಬ್ಬ, ಪೂಜೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ‘‘ಮಹಿಷ ಮಂಡಲದ ಮಹಾರಾಜರಿಗೆ ಪರಾಕ್’’ ಎಂದು ಇತಿಹಾಸ ಪ್ರಜ್ಞೆಯಿಂದ ಗೌರವಿಸುವುದು ಮುಂದುವರಿದಿದೆ. ಯದುವಂಶದ ಪ್ರಮುಖ ದೊರೆಗಳಲ್ಲಿ ಒಬ್ಬರಾದ ಜಯಚಾಮರಾಜೇಂದ್ರ ಒಡೆಯರ್ ತಮ್ಮ ಎಲ್ಲಾ ಪತ್ರ ವ್ಯವಹಾರಗಳು ಮತ್ತು ದಾಖಲೆಗಳಲ್ಲಿ ‘ಮಹಿಷೂರು’ ಎಂದು ಇತಿಹಾಸ ಪ್ರಜ್ಞೆಯಿಂದ ನಮೂದಿಸಿದ್ದಾರೆ.

ಭಾರತದ ವೈದಿಕಶಾಹಿ ಮೂಲನಿವಾಸಿಗಳ ಶ್ರೇಷ್ಠ ದೊರೆಗಳಾದ ಬಲಿಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮೊದಲಾದವರನ್ನು ತುಚ್ಛೀಕರಿಸಿ ಬೌದ್ಧ ಪರಂಪರೆಯನ್ನು ನಾಶಮಾಡುವ ಹುನ್ನಾರ ನಡೆಸಿದ್ದಾರೆ. ದೇವಾಲಯಗಳನ್ನು ಕಟ್ಟುವುದು, ದೇವರನ್ನು ಸೃಷ್ಟಿಸುವುದು, ಭಕ್ತಾದಿಗಳನ್ನು ರೂಪಿಸುವುದು, ಮೌಢ್ಯಗಳನ್ನು ವೈಭವೀಕರಿಸುವುದು, ಪಾಪ-ಕರ್ಮ ಎಂಬ ಭಯ ಸೃಷ್ಟಿಸಿ ಮೂಲನಿವಾಸಿಗಳನ್ನು ದಾರಿತಪ್ಪಿಸಿ ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹುಂಡಿಯೊಳಗೆ ಅಥವಾ ಮಂಗಳಾರತಿ ತಟ್ಟೆಯೊಳಗೆ ಇಟ್ಟು ತದನಂತರ ತಮ್ಮ ಆಸ್ತಿಯನ್ನು ಹೆಚ್ಚಿಸಿಕೊಂಡು ಹೆಂಡತಿ ಮಕ್ಕಳನ್ನು ಯಾವುದೇ ಶ್ರಮ, ರಕ್ತ, ಬೆವರು ಸುರಿಸದೇ ಉದ್ಧರಿಸುವ ಸಲುವಾಗಿ ವೈದಿಕರು ಚಾಮುಂಡಿಯಂತಹ 333 ಕೋಟಿ ದೇವಾನುದೇವತೆಗಳನ್ನು ಸೃಷ್ಟಿಸಿ ನಯವಂಚಕರಾಗಿ ಸುಖದಿಂದ ಬದುಕುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇಂತಹ ಪ್ರಕೃತಿ ವಿರೋಧಿ ಹಾಗೂ ಸಂವಿಧಾನ ವಿರೋಧಿ ವೈದಿಕಶಾಹಿ ಹುನ್ನಾರಗಳನ್ನು ‘ಮಹಿಷ ದಸರಾ’ ಸಂದರ್ಭದಲ್ಲಿ ಮೂಲನಿವಾಸಿಗಳ ಗಮನಕ್ಕೆ ತಂದು ಅವರನ್ನು ಸರಿದಾರಿಗೆ ತರುವ ಬಹುದೊಡ್ಡ ಜವಾಬ್ದಾರಿ ಪ್ರಗತಿಪರ ಚಿಂತಕರ ಮೇಲಿದೆ. ದೇವರು ಮತ್ತು ಧರ್ಮಗಳ ಹೆಸರಿನಲ್ಲಿ ಮೂಲನಿವಾಸಿಗಳನ್ನು ಮೌಢ್ಯದೆಡೆಗೆ, ಬಡತನದೆಡೆಗೆ, ಅಸಹಾಯಕತೆಯೆಡೆಗೆ ಮತ್ತು ವಿನಾಶದೆಡೆಗೆ ಕೊಂಡೊಯ್ಯುವ ವೈದಿಕರ ಅಥವಾ ಸನಾತನ ಧರ್ಮ ಪ್ರತಿಪಾದಕರ ಆಟ ನಿಲ್ಲಲೇ ಬೇಕು.

ಕಳೆದ 5 ವರ್ಷಗಳಿಂದ ಮೈಸೂರಿನಲ್ಲಿ ಮೂಲನಿವಾಸಿಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಸುಸ್ಥಿರಗೊಳಿಸುವ ಸಲುವಾಗಿ ಎಲ್ಲ ಪ್ರಗತಿಪರರು ಮತ್ತು ಮಹಿಷ ಮಂಡಲದ ಮೂಲನಿವಾಸಿಗಳು ಸ್ವಪ್ರೇರಣೆಯಿಂದ, ಅಹಿಂಸಾತ್ಮಕವಾಗಿ ಮತ್ತು ಸಂವಿಧಾನಬದ್ಧವಾಗಿ ‘ಮಹಿಷ ದಸರಾ’ ಆಚರಿಸುತ್ತಿದ್ದಾರೆ. ಮಹಿಷ ಮಂಡಲದ ಮೂಲನಿವಾಸಿಗಳು ಮತ್ತು ನಾಗಬೌದ್ಧ ಬಂಧುಗಳಿಂದ ಯಾವುದೇ ದುಂದುವೆಚ್ಚ ಅಥವಾ ಕಂದಾಚಾರವಿಲ್ಲದೇ ‘‘ಮಹಿಷನ ಕ್ಷಾತ್ರಶಕ್ತಿ- ಮೂಲನಿವಾಸಿಗಳ ಮಹಾಶಕ್ತಿ’’ ಎಂಬ ಧ್ಯೇಯೋದ್ದೇಶದಿಂದ ‘ಮಹಿಷ ದಸರಾ’ ಆಚರಿಸಲಾಗುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳು, ಉದ್ದಿಮೆದಾರರು, ಮಧ್ಯವರ್ತಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಮುಕ್ತವಾದ ‘‘ಮಹಿಷ ದಸರಾ -2019’’ನ್ನು ದಿನಾಂಕ 27-09-2019ರ ಶುಕ್ರವಾರ ಮೂಲನಿವಾಸಿ ಬಂಧುಗಳು ಹಮ್ಮಿಕೊಂಡಿದ್ದಾರೆ. ಮೈಸೂರು ಪುರಭವನದ ಅಂಬೇಡ್ಕರ್ ಪ್ರತಿಮೆ ಸ್ಥಳದಿಂದ ಬುದ್ಧರಥ, ಭೀಮರಥ, ಅಶೋಕ ರಥ ಮತ್ತು ಮಹಿಷರಥಗಳ ಮೆರವಣಿಗೆ ಮಹಾಬಲ ಬೆಟ್ಟಕ್ಕೆ ಸಾಗಿ ಮಹಿಷ ಮಂಡಲದ ಸಾಮ್ರಾಟ ಮಹಿಷನಿಗೆ ಪುಷ್ಪಾರ್ಚನೆ, ಗಣ್ಯರಿಂದ ನುಡಿನಮನ, ಪುಸ್ತಕ ಬಿಡುಗಡೆ, ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬೌದ್ಧ ದಮ್ಮ ದೀಕ್ಷೆ ಮೊದಲಾದ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೂಲನಿವಾಸಿಗಳ ಅಂದಿನ ಮಹಿಷ ಮಂಡಲವೇ ಇಂದಿನ ಮೈಸೂರು.

ಈಮೇಲ್: " bpmcguru@yahoo.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top