ಭಾರತೀಯ ಎಡಪಂಥೀಯರು ಮತ್ತು ಬ್ರಾಹ್ಮಣ್ಯ | Vartha Bharati- ವಾರ್ತಾ ಭಾರತಿ

ಭಾರತೀಯ ಎಡಪಂಥೀಯರು ಮತ್ತು ಬ್ರಾಹ್ಮಣ್ಯ

 ಭಾರತದ ಕಮ್ಯುನಿಸ್ಟರು ಭಾರತದ ಪ್ರಾಚೀನ, ಮಧ್ಯಯುಗೀಯ ಹಾಗೂ ಆಧುನಿಕ ಇತಿಹಾಸದಲ್ಲಿ ಕಾಣಿಸುವ ಉತ್ಪಾದನೆ ಮತ್ತು ಶ್ರಮಪರ ಹಾಗೂ ಶ್ರಮ ವಿರೋಧಿ ಆಧ್ಯಾತ್ಮಿಕ ಚಿಂತನಾಕ್ರಮವನ್ನು ಅಧ್ಯಯನ ಮಾಡುತ್ತಿದ್ದಲ್ಲಿ, ಅವರು ಈಗ ತೆಗೆದುಕೊಂಡಿರುವ ನಿಲುವಿಗಿಂತ ಭಿನ್ನವಾದ ಒಂದು ನಿಲುವನ್ನು ತೆಗೆದುಕೊಳ್ಳುತ್ತಿದ್ದರು. ಆಗ ಕಮ್ಯುನಿಸ್ಟ್ ಸಿದ್ಧಾಂತವು ಉತ್ಪಾದಕ ಸಮುದಾಯಗಳಿಂದ ಭಿನ್ನವಾದ ಒಂದು ಸಾಮಾಜಿಕ ರಾಜಕೀಯ ನಾಯಕತ್ವವಾಗಿ ಮೂಡಿಬರುವುದು ಸಾಧ್ಯವಿತ್ತು.

2014 ಮತ್ತು 2019ರಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಆರೆಸ್ಸೆಸ್ ಅಧಿಕಾರಕ್ಕೆ ಬಂದ ಬಳಿಕ ಭಾರತದಲ್ಲಿ ಮತ್ತು ಆಡಳಿತ ನಡೆಸುವ ಸರಕಾರದಲ್ಲಿ ಹಿಂದೂ ಧರ್ಮದ ಪಾತ್ರದ ಕುರಿತು ಹೆಚ್ಚು ಹೆಚ್ಚು ಚರ್ಚೆ ನಡೆಯುತ್ತಿದೆ. ಅದೇನಿದ್ದರೂ, ಹಿಂದೂ ಧರ್ಮಕ್ಕೆ ಭಾರತೀಯ ಕಮ್ಯುನಿಷ್ಟರ ಮೇಲೆ ಹಿಡಿತವಿದೆಯೇ ಎಂದು ಕೂಡ ನಾವು ಯೋಚಿಸಬೇಕಾಗಿದೆ. ಆಗ ಮಾತ್ರ ನಾವು ಜಾತಿ ಪದ್ಧತಿಗೆ ಸಂಬಂಧಿಸಿದ ಅವರ ಪಾತ್ರವನ್ನು ಅರ್ಥಮಾಡಿಕೊಳ್ಳಬಹುದು.

ಕಮ್ಯುನಿಸ್ಟರೆಂದರೆ, ಸಾಮಾನ್ಯವಾಗಿ ದೇವರಲ್ಲಿ ನಂಬಿಕೆ ಇರದ ವಿಚಾರವಾದಿಗಳೆಂದು ತಿಳಿಯಲಾಗುತ್ತದೆ. ಹಾಗಾಗಿ ಅವರು ಹಿಂದೂಗಳಲ್ಲ ಎಂಬ ಒಂದು ಅಭಿಪ್ರಾಯವನ್ನು ಸೃಷ್ಟಿಸಲಾಯಿತು. ದೇಶದ ರಾಜಕೀಯ ವಾಗ್ವಾದಗಳಲ್ಲಿ ಧರ್ಮವು ಕೇಂದ್ರ ಸ್ಥಾನದಲ್ಲಿರುವಾಗ, ತಮ್ಮ ಪಾಲಿಟ್‌ಬ್ಯೂರೋಗಳನ್ನು ಹಾಗೂ ಕೇಂದ್ರ ಸಮಿತಿಗಳನ್ನು ನಿಯಂತ್ರಿಸುವ ಮುಖ್ಯ ಕಮ್ಯುನಿಸ್ಟ್ ನಾಯಕರಿಗೆ ಹಿಂದೂ ಧರ್ಮದೊಡನೆ ಸಂಬಂಧವಿದೆಯೇ? ಅಥವಾ ಇಲ್ಲವೇ? ಎಂದು ಪರಿಶೀಲಿಸುವುದು ಅಗತ್ಯವಾಗುತ್ತದೆ. ಅಥವಾ ಅವರು ಹಿಂದೂ ಧರ್ಮದ ಪ್ರಭಾವದಲ್ಲಿ ಕೆಲಸ ಮಾಡುವುದಿಲ್ಲವೇ?

 ಅವರಲ್ಲಿ ಬಹುತೇಕ ನಾಯಕರು ಮೇಲ್ಜಾತಿ ಹಿಂದೂ ಕುಟುಂಬಗಳಿಂದ ಬಂದವರು ಮತ್ತು ತಮ್ಮ ಬಾಲ್ಯ ಹಾಗೂ ಯೌವನದ ಹೊಸ್ತಿಲಿನ ದಿನಗಳಲ್ಲಿ ಹಿಂದೂ ಧರ್ಮದ ಪ್ರಭಾವದಲ್ಲಿ ಬೆಳೆದವರು. ರಾಮಾಯಣ ಹಾಗೂ ಮಹಾಭಾರತ ಮತ್ತು ವಿಶೇಷವಾಗಿ ಪ್ರಾಚೀನ ಭಾರತದಲ್ಲಿ ಉತ್ಪಾದನಾ ಹಾಗೂ ವಿತರಣಾ ವ್ಯವಸ್ಥೆ ಬಗ್ಗೆ ಏನೂ ಹೇಳದ, ಭಗವದ್ಗೀತೆ ಅವರ ಮನೆಗಳಲ್ಲಿ ಓದಲಾಗುತ್ತಿದ್ದ ಪಠ್ಯಗಳು. ಮೇಲ್ಜಾತಿಯ ಮಕ್ಕಳಲ್ಲಿ ತಮ್ಮ ಬಾಲ್ಯದಲ್ಲಿ ಬೌದ್ಧ ಪಠ್ಯಗಳನ್ನು ಓದಿದವರು ಇಲ್ಲವೆಂದೇ ಹೇಳಬಹುದು, ಇದ್ದರೂ ಬೆರಳೆಣಿಕೆಯಷ್ಟು ಮಂದಿ ಇರಬಹುದು. ಗಾಂಧಿ ಮತ್ತು ಇತರ ರಾಷ್ಟ್ರೀಯ ನಾಯಕರು ಈ ಪಠ್ಯಗಳನ್ನು ದೊಡ್ಡ ರೀತಿಯಲ್ಲಿ ಬಳಸಿದ್ದರಿಂದ ಅವರು ಭಾರತದ ಮೇಲ್ಜಾತಿ ಸಮಾಜದ ಮೇಲೆ ಆಳವಾದ ಪರಿಣಾಮವನ್ನೇ ಬೀರಿದರು.

1996ರಲ್ಲಿ ‘ನಾನ್ಯಾಕೆ ಒಬ್ಬ ಹಿಂದೂ ಅಲ್ಲ’ ಎಂಬ ಲೇಖನದಲ್ಲಿ ನಾನು ಇದನ್ನೆ ಬರೆದಿದ್ದೆ. ಅವರ ಕುಟುಂಬಗಳು ಜನನ, ವಿವಾಹ, ಮರಣ, ಹಬ್ಬಗಳು ಎಲ್ಲದರಲ್ಲೂ ಹಿಂದೂ ಸಾಂಸ್ಕೃತಿಕ ನೆಲೆಯಲ್ಲಿ ಕಾರ್ಯಾಚರಿಸುತ್ತವೆ.

‘‘ಕಮ್ಯುನಿಸ್ಟ್ ‘ಮೇಲು’ ಜಾತಿಗಳು ಹಿಂದೂ ಜೀವನಕ್ರಮವನ್ನು ತ್ಯಜಿಸಿವೆಯೇ? ಕಮ್ಯುನಿಸ್ಟರು ತಾವು ದೇವಸ್ಥಾನಗಳಿಗೆ ಹೋಗುವುದಿಲ್ಲ ಎನ್ನಬಹುದು, ಆದರೆ ಅವರು ತಮ್ಮ ಕೇಂದ್ರ ಸಮಿತಿಗಳನ್ನು ಹಿಂದೂ ಅಧಿಕಾರ ನಿರ್ವಹಣಾ ಕೇಂದ್ರಗಳಾಗಿ ಪರಿವರ್ತಿಸಿದ್ದಾರೆಂಬುದನ್ನು ಅವರು ಮರೆತುಬಿಡುತ್ತಾರೆ.’’ (ಪು.61). ನಾನು ಹೀಗೆ ಬರೆದು 23 ವರ್ಷಗಳ ಬಳಿಕ ಕೂಡ ಸಿಪಿಎಂ ಒಬ್ಬನೇ ಒಬ್ಬ ದಲಿತ ಅಥವಾ ಆದಿವಾಸಿಯನ್ನು ಪಾಲಿಟ್‌ಬ್ಯೂರೊದ ಒಳಗೆ ಸೇರಿಸಿಕೊಳ್ಳುತ್ತಿಲ್ಲ ಎಂದರೆ ಕಮ್ಯುನಿಸ್ಟರು ಎಷ್ಟು ಕಲ್ಲು ಹೃದಯದವರು ಹಾಗೂ ಹಿಂದೂ ಧರ್ಮದಿಂದ ಪ್ರಭಾವಿತರು (ಹಿಂದೂಐಸ್ಡ್) ಎಂಬುದು ಗೊತ್ತಾಗುತ್ತದೆ. ಇದನ್ನೇ ಬಳಸಿಕೊಂಡು ಬಿಜೆಪಿ/ಆರೆಸ್ಸೆಸ್ ತಮ್ಮ ಉನ್ನತ ನಾಯಕರಲ್ಲಿ ಕೆಲವು ಮಂದಿ ದಲಿತ/ಆದಿವಾಸಿಗಳನ್ನು ತೋರಿಸಿ ಈ ಸಮುದಾಯಗಳ ಮತಗಳನ್ನು ಬಾಚಿಕೊಂಡಿದೆ.

ಭಾರತೀಯ ಕಮ್ಯುನಿಸ್ಟ್ ಪಕ್ಷ ಮತ್ತು ಆರೆಸ್ಸೆಸ್ ಒಂದೇ ವರ್ಷ, 1925ರಲ್ಲಿ ಅಸ್ತಿತ್ವಕ್ಕೆ ಬಂದವು. ಅಧಿಕಾರ ಶ್ರೇಣಿಯಲ್ಲಿ ಆರೆಸ್ಸೆಸ್ ಯಾವುದೇ ಎಸ್ಸಿ/ಎಸ್ಟಿ/ಮುಸ್ಲಿಮ್/ಕ್ರಿಶ್ಚಿಯನ್‌ಗೆ ತನ್ನ (ಹಿಂದೂ) ಸಂಘಟನೆಯ ಮುಖ್ಯಸ್ಥನಾಗಲು ಅವಕಾಶ ನೀಡಲಿಲ್ಲ. ಆದರೆ ಅದೀಗ ಉಪಾಯದಿಂದ ಮೋದಿಯನ್ನು ಮುಖ್ಯವಾಗಿರಿಸಿಕೊಂಡು ದೇಶದಲ್ಲಿ ಅಧಿಕಾರಕ್ಕೆ ಬರಲು ಯಶಸ್ವಿಯಾಗಿದೆ. ಸಿಪಿಎಂ ಕೂಡ ಒಬ್ಬ ಎಸ್ಸಿ/ಎಸ್ಟಿ/ಮುಸ್ಲಿಂ/ಕ್ರಿಶ್ಚಿಯನ್ ತನ್ನ ಪಕ್ಷದ ನಾಯಕನಾಗಲು ಅವಕಾಶ ನೀಡಲಿಲ್ಲ. ಯಾಕೆಂದರೆ ತನ್ನ ಅಭಿಪ್ರಾಯದಲ್ಲಿ ಕಮ್ಯುನಿಸ್ಟರು ಕೂಡ ಕಾರ್ಯಾಚರಣೆಯಲ್ಲಿ ಮೂಲತಃ ಹಿಂದೂಗಳು, ಅವರ ಜಾತೀಯತೆ ಕೂಡ ಇದರ ಒಂದು ಭಾಗವೇ ಆಗಿದೆ.

ಓರ್ವ ಹಿಂದೂವಾಗಿರುವ ಮಹಾತ್ಮಾಗಾಂಧಿಯನ್ನು ದೂರವಿಟ್ಟದ್ದಕ್ಕಿಂತ ಡಾ.ಬಿ.ಆರ್. ಅಂಬೇಡ್ಕರ್‌ರವರನ್ನು ಕಮ್ಯುನಿಸ್ಟರು ಹೆಚ್ಚು ದೂರವಿಡಲು ಇದೇ ಮುಖ್ಯ ಕಾರಣವಿರಬಹುದು.

    ಎಲ್ಲ ಉನ್ನತ ಕಮ್ಯುನಿಸ್ಟ್ ನಾಯಕರ ಹೆಸರುಗಳು ಅವರ ಧಾರ್ಮಿಕ ಹಾಗೂ ಜಾತಿ ಸಂಬಂಧಗಳನ್ನು, ಕೊಂಡಿಗಳನ್ನು ಸೂಚಿಸುತ್ತವೆ. ಪಶ್ಚಿಮ ಬಂಗಾಲ, ಕೇರಳ ಮತ್ತು ತ್ರಿಪುರದಲ್ಲಿ ಯಾವನೇ ಒಬ್ಬ ಎಸ್ಸಿ/ಎಸ್ಟಿ ಉನ್ನತ ನಾಯಕನ ಸ್ಥಾನ ಹೊಂದಲು ಸಾಧ್ಯವಾಗಲಿಲ್ಲ. ಕೇರಳದಲ್ಲಿ ಎಂ.ಪಿ. ಬೇಬಿ ಎಂಬ ಒಬ್ಬರು, ಕ್ರಿಶ್ಚಿಯನ್ ನಾಯಕರಿದ್ದಾರೆ. ಆದರೆ ಅವರು ಪಕ್ಷದಲ್ಲಿ ಒಂದು ನಿರ್ಣಾಯಕ ಶಕ್ತಿಯಲ್ಲ.

  ದೀರ್ಘಕಾಲದವರೆಗೆ ಕಮ್ಯುನಿಷ್ಟರು ಅಧಿಕಾರದಲ್ಲಿದ್ದ ಈ ಮೂರು ರಾಜ್ಯಗಳಲ್ಲಿ ಅಂಬೇಡ್ಕರ್‌ರವರ ಸೈದ್ಧಾಂತಿಕ ಪ್ರವೇಶವನ್ನು ವ್ಯವಸ್ಥಿತವಾಗಿ ತಡೆಯಲಾಯಿತು. ಅಲ್ಲಿ ಕಮ್ಯುನಿಸ್ಟರು ದಲಿತರ /ಆದಿವಾಸಿಗಳು/ಒಬಿಸಿಗಳ ಅಸ್ಮಿತೆ ಚಳವಳಿಗಳನ್ನು ಹಾಗೂ ಮಿಸಲಾತಿ ಬೇಡಿಕೆಯನ್ನು ಬಹಳ ಸಮಯದಿಂದ ದ್ವೇಷಿಸುತ್ತಲೇ ಬಂದಿದ್ದಾರೆ.

    ತೀರ ಇತ್ತೀಚೆಗೆ ಸಿಪಿಎಂನ ತೆಲಂಗಾಣ ಘಟಕವು ತನ್ನ ಹಿಂದೂತನದಿಂದ ದೂರಸರಿದು ಅಂಬೇಡ್ಕರ್ ವಾದವನ್ನು ಅಪ್ಪಿಕೊಳ್ಳಲು ಗಂಭೀರ ಪ್ರಯತ್ನ ನಡೆಸಿತು. ಒಂದು ಹೊಸ ಪ್ರಯೋಗದಲ್ಲಿ ಅದು ಕಾರ್ಲ್‌ಮಾಕ್ಸ್‌ನ ಜೊತೆ ಅಂಬೇಡ್ಕರ್ ಮತ್ತು ಮಹಾತ್ಮಾಗಾಂಧಿಯನ್ನು ಜೋಡಿಸಿತು. ಅದು ಎರಡು ಜಾಲಗಳನ್ನು ಆರಂಭಿಸಿತು; ಮೊದಲನೆಯದಾಗಿ ಟಿ-ಎಂಎಎಸ್ ಎಸ್ (ತೆಲಂಗಾಣ ಸಾಮಾಜಿಕ ಸಂಘಟನೆ ನೆಟ್ ವರ್ಕ್) ಇದರ ಅಧ್ಯಕ್ಷ ನಾನು ಎರಡನೇಯದಾಗಿ, ಇತರ ಹಲವು ದಲಿತಬಹು ಜನ ಸಂಘಟನೆಗಳೊಂದಿಗೆ ಸೇರಿ ಚುನಾವಣೆಗಳನ್ನು ಎದುರಿಸಲು ಬಹುಜನ ಎಡರಂಗ ( ಬಹುಜನ್ ಲೆಪ್ಟ್ ಫ್ರಂಟ್ -ಬಿಎಲ್‌ಎಫ್) ಎಂದು ಕರೆಯಲಾಗುವ ಚಿಕ್ಕ ಚಿಕ್ಕ ಪಕ್ಷಗಳ ಒಂದು ರಂಗವನ್ನು ರಚಿಸುವುದು. ಅದು ( ಸಿಪಿಎಂ) ಲಾಲ್ - ನೀಲ್ - ಜಿಂದಾಬಾದ್ ಮತ್ತು ‘ಜೈ ಭೀಮ್ ಲಾಲ್ ಸಲಾಮ್’ ಎಂಬ ಒಂದು ಘೋಷಣೆಯನ್ನು ನೀಡಿತು.

 ಸಿಪಿಎಂನ ಮಹಾಕಾರ್ಯದರ್ಶಿ ಸೀತಾರಾಂ ಯಚೂರಿ ಹಾಗೂ ಅದರ ಪಾಲಿಟ್ ಬ್ಯೂರೋ ಸದಸ್ಯ ಬಿ.ವಿ.ರಾಘವುಲು ಸಾರ್ವಜನಿಕ ವೇದಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಈ ಘೋಷಣೆಗಳನ್ನು ಕೂಗಿದರು. ಚುನಾವಣೆಗಳು ಮುಗಿದ ಕೂಡಲೇ ಬಿಎಲ್‌ಎಫ್‌ನ ರಚನೆಯೇ ತಪ್ಪು; ಅದು ಸರಿಯಾದ ಹೆಜ್ಜೆಯಾಗಿರಲಿಲ್ಲ ಮತ್ತು ಅವರು ತಮ್ಮ ವೇದಿಕೆಗಳಿಂದ ಅಂಬೇಡ್ಕರ್‌ರವರನ್ನು ಪ್ರವರ್ತಿಸುವುದಿಲ್ಲ, ಪ್ರಮೋಟ್ ಮಾಡುವುದಿಲ್ಲ ಎಂಬ ಏಕಪಕ್ಷೀಯವಾದ ನಿರ್ಧಾರ ತೆಗೆದುಕೊಂಡರು. ಈ ರೀತಿಯಾಗಿ ಅವರು ಒಂದು ಸಾರ್ವಜನಿಕ ಹೇಳಿಕೆ ನೀಡಿದರು. ಅವರ ಜೊತೆ ಕೆಲಸ ಮಾಡಿದ ಎಲ್ಲ ದಲಿತ ,ಆದಿವಾಸಿ, ಒಬಿಸಿ, ಅಲ್ಪಸಂಖ್ಯಾತ ಕಾರ್ಯಕರ್ತರಿಗೆ ಹಾಗೂ ಅವರ ಬಗ್ಗೆ ಅನುಕಂಪವುಳ್ಳವರಿಗೆ ಇದರಿಂದ ಆಘಾತವಾಯಿತು. ನನಗೆ ಕೂಡ ಆಘಾತವಾಯಿತು. ಯಾಕೆಂದರೆ ಪಕ್ಷವು (ಸಿಪಿಎಂ) ಬದಲಾಗುತ್ತಿದೆ ಮತ್ತು ಅದು ಫುಲೆ -ಡಾ.ಅಂಬೇಡ್ಕರ್‌ವಾದಿಗಳೊಂದಿಗೆ ಸೇರಿಕೊಂಡು ಕೆಲಸ ಮಾಡಲು ಇಷ್ಟಪಡುತ್ತಿದೆ. ಕೆಲಸಮಾಡಲು ಒಪ್ಪಿದೆ ಎಂದು ನಾನು ತಿಳಿದಿದ್ದೆ.

ಹೊಸ ತೆಲಂಗಾಣ ಪ್ರಯೋಗ ಈಗ ಚೆಲ್ಲಾ ಪಿಲ್ಲಿಯಾಗಿದೆ. ತನ್ನ ಅಂಬೇಡ್ಕರ್ ವಿರೋಧಿ ನಿಲುವಿನಿಂದಾಗಿ ಪ್ರಸಿದ್ಧರಾಗಿರುವ ಬಿ. ವಿ. ರಾಘವುಲು, ಅಂಬೇಡ್ಕರ್‌ರವರನ್ನು ವಿರೋಧಿಸುವುದರ ನೇತೃತ್ವ ವಹಿಸಿ ‘ಲಾಲ್-ನೀಲ್ ಜಿಂದಾಬಾದ್’ ಮತ್ತು ‘ ಜೈ ಭೀಮ್ ಲಾಲ್ ಸಲಾಮ್’ ಘೋಷಣೆಗಳಿಂದ ಹಿಂದೆ ಸರಿದು ಕಮ್ಯುನಿಸ್ಟ್ ನಾಯಕರು ಯಾವತ್ತೂ ಬದಲಾಗುವುದಿಲ್ಲ ಎಂಬ ಭಾವನೆಯನ್ನು ಉಂಟುಮಾಡಿದರು.

ಬಿಜೆಪಿ/ಆರೆಸ್ಸೆಸ್ ಅಂಬೇಡ್ಕರ್ ರವರನ್ನು ತಮ್ಮವರನ್ನಾಗಿ ಮಾಡಿಕೊಳ್ಳಲು, ಅವರ ಮೇಲೆ ಮಾಲಕತ್ವ ಹೊಂದಲು ಪ್ರಯತ್ನಿಸುತ್ತಿರುವಾಗಲೇ ಕಮ್ಯುನಿಸ್ಟರು ಈ ಅಂಬೇಡ್ಕರ್ ವಿರೋಧಿ ನಿಲುವು ತೆಗೆದುಕೊಂಡರು. ಅಂಬೇಡ್ಕರ್ ಓರ್ವ ಬೌದ್ಧ ಧರ್ಮೀಯ ಎಂಬುದನ್ನೂ ಅವರು ಪರಿಗಣಿಸಲಿಲ್ಲ. ಬೌದ್ಧ ಧರ್ಮಕ್ಕೆ ಪ್ರಗತಿಗಾಮಿಯಾದ ಒಂದು ಧಾರ್ಮಿಕ ಸಿದ್ಧಾಂತವಿದೆ ಮತ್ತು ಜಾತಿ ಹಾಗೂ ಅಸ್ಪಶ್ಯತೆ ಕೇಂದ್ರಿತವಾದ ಹಿಂದೂ ಧರ್ಮಕ್ಕೆ ಬದಲಾಗಿ ಪ್ರಗತಿಪರವಾದ ಬೌದ್ಧ ಧರ್ಮವನ್ನು ಪ್ರವರ್ತಿಸಬೇಕೆಂಬ ನಿಲುವನ್ನು ಭಾರತೀಯ ಕಮ್ಯುನಿಸ್ಟರು ಯಾವತ್ತೂ ತೆಗೆದುಕೊಳ್ಳಲಿಲ್ಲ. ಅವರು ವೌನವಾಗಿ ಹಲವು ರೀತಿಗಳಲ್ಲಿ ಹಿಂದೂಧರ್ಮ ಹಾಗೂ ಜಾತೀಯತೆಯನ್ನು ರಕ್ಷಿಸುತ್ತಲೇ ಇದ್ದರು.

ಮಾರ್ಕ್ಸ್‌ವಾದದ ಈ ವ್ಯಾಖ್ಯಾನ ಯಾವತ್ತೂ ಸೃಜನ ಶೀಲವಾಗಿರಲಿಲ್ಲ. ‘‘ನಿನ್ನ ನೆರೆಕರೆಯವನನ್ನು ನಿನ್ನಂತೆಯೇ ನಡೆಸಿಕೋ’’ ಎಂಬ ಸಾಮಾಜಿಕ ಸಿದ್ಧಾಂತದಲ್ಲಿ ನಂಬಿಕೆ ಇಟ್ಟ ಒಂದು ಧಾರ್ಮಿಕ ಸಂಸ್ಕೃತಿಯಲ್ಲಿ ಮಾರ್ಕ್ಸ್‌ವಾದ ಬೆಳೆದು ಬಂದಿದೆ ಎಂಬುದು ಕಮ್ಯುನಿಸ್ಟರು ಯಾವತ್ತೂ ಅರ್ಥಮಾಡಿಕೊಳ್ಳಲೇ ಇಲ್ಲ. ಆ ನೆರೆಕರೆ, ನೆರೆಹೊರೆ ವಿಭಿನ್ನ ಧರ್ಮಗಳದ್ದಾಗಿರಬಹುದು.

 ಆದಿ ಕ್ರಿಶ್ಚಿಯನ್ ಧರ್ಮ ಬೋಧಕರ ಹೇಳಿಕೆಗಳಲ್ಲಿ ಒಂದು ಮಾತು ಹೀಗೆದೆ; ‘‘ನಾವು ನಿಮ್ಮ ಜತೆ ಇದ್ದಾಗಲೂ, ನಾವು ನಿಮಗೆ ಹೀಗೆ ಆದೇಶಿಸುತ್ತೇವೆ; ಯಾವನೇ ಒಬ್ಬ ಕೆಲಸ ಮಾಡಲು ಸಿದ್ಧನಿಲ್ಲವಾದರೆ, ಅವನು ಏನನ್ನೂ ತಿನ್ನಲೂಬಾರದು’’ (ತೆಸಲೋನಿಯನ್ಸ್ 3:10 ಇಎಸ್‌ವಿ). ವ್ಲಾಡಿಮರ್ ಲೆನಿನ್‌ನ ಪ್ರಸಿದ್ಧ ಮಾತು, ‘‘ ಯಾರು ಕೆಲಸ ಮಾಡುವುದಿಲ್ಲವೋ ಅವನು ತಿನ್ನಲೂಬಾರದು’’ ಎಂಬ ವಾಕ್ಯ ಬೈಬಲ್‌ನ ಈ ಹಿನ್ನೆಲೆಯಿಂದಲೇ ಬಂದದ್ದು.

ಬೈಬಲ್‌ನ ಈ ಮಾತು ಯುರೋಪ್‌ನಲ್ಲಿ ಸಾಮಾಜಿಕ ಚಿಂತನೆಯ ಮೂಲ ಸೆಲೆಯಾಗಿತ್ತು. ಭಾರತದ ಕಮ್ಯುನಿಸ್ಟರು ವಸ್ತುನಿಷ್ಠವಾಗಿ ಯಾವತ್ತೂ ಭಾರತೀಯ ಇತಿಹಾಸವನ್ನು ಅಧ್ಯಯನ ಮಾಡಲಿಲ್ಲ. ಹಿಂದೂ ಧರ್ಮದ ‘‘ಉತ್ಪಾದನೆ ಎಂದರೆ ಕೊಳಕು’’ ಎಂಬ ನಿಲುವಿಗೆ ವ್ಯತಿರಿಕ್ತವಾಗಿ ಬೌದ್ಧ ಧರ್ಮದಲ್ಲಿ ಹೆಚ್ಚು ರಚನಾತ್ಮಕವಾದ ಶ್ರಮ ಸಿದ್ಧಾಂತದ ತತ್ವವಿದೆ.

 ಭಾರತದ ಕಮ್ಯುನಿಸ್ಟರು ಭಾರತದ ಪ್ರಾಚೀನ, ಮಧ್ಯಯುಗೀಯ ಹಾಗೂ ಆಧುನಿಕ ಇತಿಹಾಸದಲ್ಲಿ ಕಾಣಿಸುವ ಉತ್ಪಾದನೆ ಮತ್ತು ಶ್ರಮಪರ ಹಾಗೂ ಶ್ರಮ ವಿರೋಧಿ ಆಧ್ಯಾತ್ಮಿಕ ಚಿಂತನಾಕ್ರಮವನ್ನು ಅಧ್ಯಯನ ಮಾಡುತ್ತಿದ್ದಲ್ಲಿ, ಅವರು ಈಗ ತೆಗೆದುಕೊಂಡಿರುವ ನಿಲುವಿಗಿಂತ ಭಿನ್ನವಾದ ಒಂದು ನಿಲುವನ್ನು ತೆಗೆದುಕೊಳ್ಳುತ್ತಿದ್ದರು. ಆಗ ಕಮ್ಯುನಿಸ್ಟ್ ಸಿದ್ಧಾಂತವು ಉತ್ಪಾದಕ ಸಮುದಾಯಗಳಿಂದ ಭಿನ್ನವಾದ ಒಂದು ಸಾಮಾಜಿಕ ರಾಜಕೀಯ ನಾಯಕತ್ವವಾಗಿ ಮೂಡಿಬರುವುದು ಸಾಧ್ಯವಿತ್ತು.

ಕಮ್ಯುನಿಸ್ಟ್ ನಾಯಕತ್ವಕ್ಕಿಂತ ಆರೆಸ್ಸೆಸ್/ಬಿಜೆಪಿ ನಾಯಕತ್ವ ಬದಲಾವಣೆಗೆ ಹೆಚ್ಚು ಮುಕ್ತವಾಗಿ ತೆರೆದುಕೊಂಡಿದೆ ಎಂದು ಕೆಳಜಾತಿಯ ಓರ್ವ ಸಾಮಾನ್ಯ ವ್ಯಕ್ತಿ ತಿಳಿಯುವಂತಹ ಒಂದು ಸ್ಥಿತಿಯನ್ನು ಭಾರತದ ಕಮ್ಯುನಿಸ್ಟ್‌ರು ಸೃಷ್ಟಿಸಿದ್ದಾರೆ.

ಇದು ಬರಗಾಲದಲ್ಲಿ ಕಮ್ಯುನಿಸ್ಟರಿರುವ ಜನಸಮೂಹದ ಮೂಲ ನೆಲೆಯನ್ನು, ಬೆಂಬಲವನ್ನು ಮಾತ್ರ ಕೊಲ್ಲುವುದಿಲ್ಲ. ಇದು ಅವರಿಗಿರುವ ಈ ಬೆಂಬಲವನ್ನು ಎಲ್ಲ ಕಡೆಯೂ ನಾಶ ಮಾಡುತ್ತದೆ. ಒಂದು ದಿನ ತಾನು ಪಕ್ಷದ ಉನ್ನತ ಸ್ಥಾನವನ್ನು ತಲುಪುತ್ತೇನೆ ಎಂಬ ಒಂದು ಕನಸನ್ನು ಹೊಂದಿರುವ ಯಾವನೇ ಒಬ್ಬ ಸೃಜನಶೀಲ ದಲಿತ/ಅನಿವಾಸಿ/ಒಬಿಸಿ ಕಾರ್ಯಕರ್ತ ಇಂದು ಕಮ್ಯುನಿಸ್ಟ್ ಪಕ್ಷಗಳಲ್ಲಿ(ಸಿಪಿಎಂ, ಸಿಪಿಐ) ಕೆಲಸ ಮಾಡಲಾರ. ಈ ಪಕ್ಷಗಳಲ್ಲಿ ಕೆಲಸ ಮಾಡುವ ಇಂತಹ ವರ್ಗದ ಕಾರ್ಯಕರ್ತ ತಾನು ಒಂದು ದಿನ ಪಕ್ಷದ ಉನ್ನತ ಸ್ಥಾನವನ್ನು ಅಲಂಕರಿಸುತ್ತೇನೆ ಎಂಬ ಕನಸನ್ನು ಹೊಂದಿರುವುದೇ ಅಸಾಧ್ಯವೆನ್ನುವಂತಹ ಸ್ಥಿತಿ ಈಗ ನಿರ್ಮಾಣವಾಗಿದೆ. ಕಮ್ಯುನಿಸ್ಟ್ ಪಕ್ಷದ ಚೌಕಟ್ಟಿನಲ್ಲಿ ಇಂತಹ ಜಾತಿಯ ತಡೆಗೆ ಖಂಡಿತವಾಗಿಯೂ ಅದರ ಹಿಂದೂ ನೆಲೆಯೇ ಕಾರಣವಾಗಿದೆ.

ಆದರೂ ಓರ್ವ ಉತ್ತಮ ವಾಗ್ಮಿ ಹಾಗೂ ಸಮರ್ಥ ದಲಿತ ನಾಯಕನಾಗಿರುವ ಡಿ. ರಾಜಾರವರನ್ನು ಸಿಪಿಐಯ ಮಹಾಕಾರ್ಯದರ್ಶಿಯಾಗಿ ಮಾಡಿರುವುದು ಸ್ವಲ್ಪ ಭರವಸೆ ಮೂಡಿಸಿದೆ. ಈ ಎಲ್ಲಾ ಕಾರಣಗಳಿಂದಾಗಿ ಅಂಬೇಡ್ಕರ್‌ರವರ ಜಾತಿ-ವಿರೋಧಿ ಬರವವಣೆಗಳು ಹಾಗೂ ಚಳವಳಿಗಲ್ಲದೆ, ಅವರ ಬೌದ್ಧಧರ್ಮದ ಕಾರಣಕ್ಕಾಗಿಯೇ ಸಿಪಿಎಂ ಅವರನ್ನು ವಿರೋಧಿಸುತ್ತಿದೆ ಎಂಬ ಭಾವನೆ ಸಹಜವಾಗಿಯೇ ಮೂಡುತ್ತದೆ. ಇಸ್ಲಾಂ, ಕ್ರಿಶ್ಚಿಯನ್ ಧರ್ಮದಂತಹ ಅಲ್ಪಸಂಖ್ಯಾತ ಧರ್ಮಗಳಿಗೆ ಸೇರಿದವರಿಗೂ ಸಿಪಿಎಂ ಅವಕಾಶ ನೀಡಲಿಲ್ಲ ಎಂಬುದು ಕೂಡ ಕಮ್ಯುನಿಸ್ಟರು ಬೌದ್ಧ ಧರ್ಮಕ್ಕೂ ಅಷ್ಟೇ ವಿರೋಧಿಯಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.

1950ರ ಹಾಗೂ 60ರ ದಶಕಗಳಲ್ಲಿ ಭೂಗತರಾಗಿ ಇದ್ದ ಮೇಲ್ಜಾತಿಯ ಕಮ್ಯುನಿಸ್ಟ್ ನಾಯಕರ ಹೆಸರುಗಳು ಕೂಡ ಅವರು ಸಾಂಸ್ಕೃತಿಕವಾಗಿ ಹಿಂದೂ ಆಗಿದ್ದರು ಎಂಬುದನ್ನು ತೋರಿಸುತ್ತವೆ. ಅಂದಿನ ದೊಡ್ಡ ಮವೋವಾದಿ ನಾಯಕ ಮುಪ್ಪಲ ಲಕ್ಷ್ಮಣ ರಾವ್ ಭೂಗತರಾಗಿದ್ದಾಗ ಅವರು ಗಣಪತಿ ಎಂಬ ಹೆಸರು ಇಟ್ಟುಕೊಂಡಿದ್ದರು. ಇದು ಹಿಂದೂ ದೇವರ ಹೆಸರು. ಕಮ್ಯುನಿಸ್ಟರು ಯಾವತ್ತೂ ಬೌದ್ಧ ಅಥವಾ ಇತರ ಧಾರ್ಮಿಕ ಸಂಸ್ಕೃತಿಗಳನ್ನಾಗಲಿ ಆಚರಣೆಗಳನ್ನಾಗಲಿ ಗೌರವಿಸಲಿಲ್ಲ.

ಹಲವು ಕಮ್ಯುನಿಸ್ಟ್ ನಾಯಕರ ಮರಣಾನಂತರ ಅವರ ಕರ್ಮಾದಿಗಳನ್ನು, ಉತ್ತರ ಕ್ರಿಯೆಗಳನ್ನು ಹಿಂದೂ ಸಂಪ್ರದಾಯದಂತೆಯೇ ನಡೆಸಲಾಗುತ್ತಿತ್ತು. ಈಗಲೂ ನಡೆಸಲಾಗುತ್ತಿದೆ. ಆದರೆ ಅವರು ಒಂದು ವೇಳೆ ತಮ್ಮನ್ನು ನಾಸ್ತಿಕರೆಂದು ಪರಿಗಣಿಸಿದರೂ ಕೂಡ, ಬೌದ್ಧ ಧರ್ಮದ ಆಚರಣೆಗಳು ಅವರ ನಾಸ್ತಿಕವಾದಿ ಆಚರಣೆಗಳಿಗೆ ಹತ್ತಿರವಾಗಿ ಇದ್ದವು. ಈಗಲೂ ಇವೆ. ಆದರೆ ಅವರು ಎಂದಿಗೂ ಅಂತಹ ಒಂದು ಪ್ರಗತಿಪರವಾದ ಹಾಗೂ ಸಮಾನತೆಯನ್ನು ಸಾರುವ ಆಧ್ಯಾತ್ಮಿಕತೆಯನ್ನು ತಮ್ಮದಾಗಿ ಮಾಡಿಕೊಳ್ಳಲೇ ಇಲ್ಲ.

ಅವರು ಇದೇ ರೀತಿಯಾದ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಚಿಂತನೆಯನ್ನು ಮುಂದುವರಿಸಿದಲ್ಲಿ ಅವರು ನಿಧಾನವಾಗಿ ಮೂಲೆಗುಂಪಾಗುತ್ತಾರೆ. ಈಗ ಕೇವಲ ದಲಿತ/ಆದಿವಾಸಿ/ಒಬಿಸಿ ಯುವಕ ಯುವತಿಯರು ಅವರ ಪಕ್ಷ ಸೇರುತ್ತಿದ್ದಾರೆ. ಮೇಲ್ಜಾತಿಯವರು ಸೇರುತ್ತಿಲ್ಲ. ಆದರೆ ಸದ್ಯದ ಕಮ್ಯುನಿಸ್ಟ್ ನಾಯಕತ್ವದ ಹಿಂದೂ ನಿಲುವಿನಿಂದ ಅವರು ಬೇಗನೆ ಭ್ರಮನಿರಸನಗೊಳ್ಳುತ್ತಿದ್ದಾರೆ. ವರ್ಗಗಳು ಹಾಗೂ ಜಾತಿಗಳು ಮುಂದುವರಿಯುತ್ತಲೇ ಇರುವಾಗ, ಸೂಕ್ತವಾಗಿ ಬದಲಾಗುವುದು ಅಥವಾ ನಾಶವಾಗುವುದು ಕಮ್ಯುನಿಸ್ಟರಿಗೇ ಸೇರಿದ ಆಯ್ಕೆಯಾಗಿದೆ.

 ಕೃಪೆ: countercurrents.org

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top