ಗುಂಪು ಥಳಿತ: ಭಾಗವತ್ ಹಿಪಾಕ್ರಸಿ | Vartha Bharati- ವಾರ್ತಾ ಭಾರತಿ

ಗುಂಪು ಥಳಿತ: ಭಾಗವತ್ ಹಿಪಾಕ್ರಸಿ

ಥಳಿಸಿ ಹತ್ಯೆಯ ಘಟನೆಗಳು ಪೂರ್ವ ಯೋಜಿತ ಸಂಚೆಂಬ ಆರೋಪಗಳನ್ನು ಭಾಗವತ್ ಅಲ್ಲಗಳೆಯುತ್ತಾರೆ. ಕೆಲವು ತಥಾಕಥಿತ ನಾಯಕರ ಬಗ್ಗೆ ನಿರ್ದಿಷ್ಟ ಸಮುದಾಯವೊಂದರ ಹಿತಾಸಕ್ತಿಗಳನ್ನು ಸಮರ್ಥಿಸಿಕೊಳ್ಳುವ ಹೆಸರಿನಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷವನ್ನು ಸೃಷ್ಟಿಸುತ್ತಿದ್ದಾರೆ. ದೇಶದಲ್ಲಿ ಇಂತಹ ಘಟನೆಗಳನ್ನು ಮಟ್ಟಹಾಕಲು ಸಮರ್ಪಕವಾದ ಕಾನೂನುಗಳಿವೆ ಹಾಗೂ ಅವುಗಳನ್ನು ಪ್ರಾಮಾಣಿಕವಾಗಿ ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ.

ಭಾರತವು ಜಗತ್ತಿನ ಕಾನೂನುಬಾಹಿರ ಹತ್ಯೆಯ ರಾಜಧಾನಿಯಾಗಿ ಪರಿವರ್ತನೆಗೊಂಡಿದೆ. 2014ರಲ್ಲಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ ನಮ್ಮ ದೇಶಕ್ಕೆ ಈ ಕುಖ್ಯಾತಿಯ ಗುರುತು ಅಂಟಿಕೊಂಡಿತು. ಮೋದಿ ಆಳ್ವಿಕೆಯು ದಲಿತರು ಹಾಗೂ ಅಲ್ಪಸಂಖ್ಯಾತರ ಥಳಿಸಿ ಹತ್ಯೆಗೈಯುವ ಕೃತ್ಯಗಳಿಗೆ ಹೊಸತೊಂದು ನಾಂದಿಯನ್ನು ಹಾಡಿತು. ದುರದೃಷ್ಟವಶಾತ್ ದ್ವೇಷ ಅಪರಾಧಗಳಿಗೆ ಸರಕಾರದ ಬಳಿ ಯಾವುದೇ ದತ್ತಾಂಶಗಳ ಸಂಗ್ರಹವಿಲ್ಲ. ಆದರೆ ಕೆಲವೇ ಕೆಲವು ಮಾಧ್ಯಮಗಳು ಈ ಕಾನೂನುಬಾಹಿರ ಹತ್ಯೆಗಳ ದತ್ತಾಂಶಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ. ನರೇಂದ್ರ ಮೋದಿಯವರ 5 ವರ್ಷಗಳ ಮೊದಲ ಅವಧಿ (2014-19)ಯಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರ ವಿರುದ್ಧದ ಧಾರ್ಮಿಕ ಅಪರಾಧ ಪ್ರಕರಣಗಳಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಡೆದುದಕ್ಕಿಂತ ಶೇ.90ರಷ್ಟು ಹೆಚ್ಚಳವಾಗಿದೆ. 2019ರ ಮೇ 23ರಂದು ಮೋದಿಯವರು ಭಾರತದ ಪ್ರಧಾನಿಯಾಗಿ ಪುನರಾಯ್ಕೆಗೊಂಡ ಬಳಿಕ ಗುಂಪು ಥಳಿತದ ಮುಖ್ಯ ಗುರಿಯಾಗಿದ್ದ ಮುಸ್ಲಿಮರಲ್ಲಿ ಭರವಸೆ ನೀಡಲು ಸಾಂತ್ವನದ ಮಾತುಗಳನ್ನಾಡಿದರು. ಆದರೆ ಥಳಿತದ ಅಪರಾಧಗಳಲ್ಲಿ ಹಲವು ಪಟ್ಟು ಏರಿಕೆಯಾಗಿದೆ. ಎನ್‌ಡಿಟಿವಿ ವರದಿ ಪ್ರಕಾರ, ಥಳಿತದ ಅಪರಾಧಗಳಲ್ಲಿ 1 ಸಾವಿರ ಶೇಕಡಾದಷ್ಟು ಏರಿಕೆಯಾಗಿದೆ.
 ಕೇಸರಿ ಸಂಘಟನೆಗಳ ಬೆಂಬಲಿಗರಿಂದ ಥಳಿಸಿ ಹತ್ಯೆಗಳನ್ನು ನಡೆಸುವ ಘಟನೆಗಳು ಭಾರತಕ್ಕೆ ಹೊಸದೇನೂ ಅಲ್ಲ. ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಥಳಿಸಿ ಹತ್ಯೆಗೈದಿರುವ ಅಥವಾ ಹತ್ಯಾಕಾಂಡವನ್ನು ಎಸಗಿರುವ ಘಟನೆಗಳ ದೀರ್ಘ ಪಟ್ಟಿಯೇ ಇದೆ. ಸ್ವಾತಂತ್ರಾನಂತರ ಭಾರತದಲ್ಲಿ ನಡೆದಿರುವ ದಲಿತರ ಹತ್ಯಾಕಾಂಡದ ಪ್ರಮುಖ ಘಟನೆಗಳನ್ನು ಇಲ್ಲಿ ನೀಡಲಾಗಿದೆ; 1968ರಲ್ಲಿ ಕಿಲ್ವೆನ್‌ಮನಿ ಹತ್ಯಾಕಾಂಡ, ತಮಿಳುನಾಡು, 1985 ಕರಂಚೇಡು ಹತ್ಯಾಕಾಂಡ, 1991ರ ಆಂಧ್ರಪ್ರದೇಶದಲ್ಲಿನ ಸಂಡೂರು ಹತ್ಯಾಕಾಂಡ, 1996ರಲ್ಲಿ ಬಿಹಾರದ ತೊಲಾದಲ್ಲಿ ನಡೆದ ನರಮೇಧ, 1997ರಲ್ಲಿ ಬಿಹಾರದ ಲಕ್ಷ್ಮಣ್‌ಪುರ ಬಾಥೆನಲ್ಲಿ ನಡೆದ ಹತ್ಯಾಕಾಂಡ, 1997ರಲ್ಲಿ ತಮಿಳುನಾಡಿನ ಮೆಲವಾಲವು ಹತ್ಯಾಕಾಂಡ, ಮುಂಬೈನಲ್ಲಿ 1997ರಲ್ಲಿ ನಡೆದ ರಮಾಬಾಯಿ ಹತ್ಯಾಕಾಂಡ, 1999ರ ಬಂತ್ ಸಿಂಗ್ ಹತ್ಯಾಕಾಂಡ, ಕರ್ನಾಟಕದಲ್ಲಿ 2000ದಲ್ಲಿ ನಡೆದ ದಲಿತರ ಹತ್ಯೆ, ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ 2006ರಲ್ಲಿ ನಡೆದ ನರಮೇಧ, ಹರ್ಯಾಣದ ಮಿರ್ಚ್‌ಪುರ್‌ನಲ್ಲಿ 2011ರಲ್ಲಿ ನಡೆದ ದಲಿತರ ಹತ್ಯೆ, 2012ರ ದಲಿತ ವಿರೋಧಿ ಹಿಂಸಾಚಾರ, 2013ರಲ್ಲಿ ತಮಿಳುನಾಡಿನ ಮರಕ್ಕನಾಮ್‌ನಲ್ಲಿ ದಲಿತ ವಿರೋಧಿ ಹಿಂಸಾಚಾರ, 2014ರಲ್ಲಿ ಮಹಾರಾಷ್ಟ್ರದ ಜಾವ್‌ಖೇಡ ಹತ್ಯಾಕಾಂಡ, 2015ರ ರಾಜಸ್ಥಾನದ ಡಂಗ್ವಾಸ್‌ನಲ್ಲಿ ನಡೆದ ದಲಿತ ವಿರೋಧಿ ಹಿಂಸಾಚಾರ.
 ನೆಲ್ಲಿ ಹತ್ಯಾಕಾಂಡ (1983), ಸಿಖ್ಖ್ ಹತ್ಯಾಕಾಂಡ (1984), ಬಾಬರಿ ಮಸೀದಿ ಧ್ವಂಸದ ಬಳಿಕ ಅಯೋಧ್ಯೆ ಹಾಗೂ ಭಾರತದ ವಿವಿಧೆಡೆ ನಡೆದ ಹಿಂಸಾಚಾರ, ಮುಂಬೈ ಗಲಭೆ (1992-1993), ಗುಜರಾತ್‌ನಲ್ಲಿ ಕ್ರೈಸ್ತರ ವಿರುದ್ಧ ಹಿಂಸಾಚಾರ (1997), 1993ರ ಜನವರಿ 23ರಂದು ಒಡಿಶಾದ ಕಿಯೊಂಜರ್ ಜಿಲ್ಲೆಯ ಮನೋಹರ್‌ಪುರ ಗ್ರಾಮದಲ್ಲಿ ಕ್ರೈಸ್ತ ಪಾದ್ರಿ ಗ್ರಹಾಂ ಸ್ಟುವರ್ಟ್ ಸ್ಟೈನ್ಸ್ ಹಾಗೂ ಅವರ ಇಬ್ಬರು ಪುತ್ರರಾದ ಫಿಲಿಪ್ (10 ವರ್ಷ) ಹಾಗೂ ತಿಮೊಥಿ (6 ವರ್ಷ) ಅವರ ಜೀವಂತ ದಹನದ ಘಟನೆ, ಗುಜರಾತ್ ನರಮೇಧ (2002), ಕಂದಮಾಲ್ ಹಿಂಸೆ/ಕ್ರೈಸ್ತರ ವಿರುದ್ಧ ಅತ್ಯಾಚಾರ (2008)ದಂತಹ ಹತ್ಯಾಕಾಂಡಗಳಲ್ಲಿ ಭಾರತದ ಪ್ರಮುಖ ಅಲ್ಪಸಂಖ್ಯಾತ ಸಮುದಾಯಗಳು ಬಲಿಪಶುಗಳಾಗಿವೆ.
 ಈ ಅಪರಾಧಗಳನ್ನು ಗಂಭೀರ ಅಪರಾಧಗಳು ಎಂದು ಘೋಷಿಸಲಾಯಿತು. ಆದಾಗ್ಯೂ ಈವರೆಗೆ ಯಾರಿಗೂ ಕೂಡಾ ಅಂತಿಮ ಶಿಕ್ಷೆಯನ್ನು ಜಾರಿಗೊಳಿಸಲಾಗಿಲ್ಲ. ಮೋದಿ ಅಧಿಕಾರಕ್ಕೇರಿದ ಬಳಿಕ ಆರಂಭಗೊಂಡ ಗುಂಪು ಥಳಿತದ ಘಟನೆಗಳು ಪ್ರಸಕ್ತ ಘೋರವಾಸ್ತವತೆಯನ್ನು ತೆರೆದಿಟ್ಟಿವೆ. ಆಡಳಿತದಲ್ಲಿರುವ ಆರೆಸ್ಸೆಸ್/ಬಿಜೆಪಿ ನಾಯಕರು, ಈ ಕ್ರಿಮಿನಲ್‌ಗಳಿಗೆ ಸಂಸತ್ ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್‌ಗಳನ್ನು ನೀಡಿ ಗೌರವಿಸಿದರು, ಆರೋಪಿಗಳಿಗೆ ಸಾರ್ವಜನಿಕ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು ಹಾಗೂ ಜೈಲುಗಳಲ್ಲಿರುವ ಆರೋಪಿಗಳನ್ನು ಅರೆಸ್ಸೆಸ್, ಬಿಜೆಪಿ ನಾಯಕರು ಭೇಟಿ ನೀಡುವ ಮೂಲಕ ಅವರಿಗೆ ಬೆಂಬಲ ಸೂಚಿಸಿದ್ದರು.
ಈ ವರ್ಷದ ಅಕ್ಟೋಬರ್ 8ರಂದು ನಾಗಪುರದ ಆರೆಸ್ಸೆಸ್ ಪ್ರಧಾನ ಕಚೇರಿಯಲ್ಲಿ ಅವರು ಈ ಸಮಸ್ಯೆಯನ್ನು ದುರ್ಬಲಗೊಳಿಸಲು ಮುಂದೆಬಂದಿರುವುದು ಸಹಜವೇ ಆಗಿದೆ. ಈ ಸಮಸ್ಯೆಯ ಕುರಿತಾದ ಚರ್ಚೆಯನ್ನು ಬೇರೆಡೆಗೆ ಸೆಳೆಯಲು ಸಾಧ್ಯವಿದ್ದಷ್ಟು ಪ್ರಯತ್ನಿಸಿದ ಅವರು ಹೀಗೆಂದು ಘೋಷಿಸಿದರು.
 ‘‘ಇಂದಿನ ದಿನಗಳಲ್ಲಿ ನಮ್ಮ ಸಮಾಜದ ಸಮುದಾಯವೊಂದರ ಸದಸ್ಯರು ಇನ್ನೊಂದು ಸಮುದಾಯದಿಂದ ಆಕ್ರಮಣಕ್ಕೊಳಗಾಗುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಅಂತಹ ವರದಿಗಳು ಏಕಪಕ್ಷೀಯವಾಗಿವೆ. ಇಂತಹ ಘಟನೆಗಳು ಎರಡೂ ಕಡೆಗಳಿಂದಲೂ ನಡೆದಿರುವ ವರದಿಗಳೂ ಕೂಡಾ ಇವೆ. ಈ ಕುರಿತ ಆರೋಪ, ಪ್ರತ್ಯಾ ರೋಪಗಳು ನಡೆಯುತ್ತಲೇ ಇವೆ. ಕೆಲವು ಘಟನೆಗಳು ದುರುದ್ದೇಶಪೂರ್ವಕವಾಗಿ ನಡೆಸಲಾದ ಕಪೋಲಕಲ್ಪಿತ ಘಟನೆಗಳಾಗಿದ್ದರೆ, ಇನ್ನು ಕೆಲವು ಘಟನೆಗಳನ್ನು ತಿರುಚಿದ ರೀತಿಯಲ್ಲಿ ಪ್ರಕಟಿಸಲಾಗಿದೆ.’’
 ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡುಬಂದಾಗಲೂ ಇದೇ ಭಾಗವತ್ ಅವರು ಅತ್ಯಾಚಾರಗಳು ವಿದೇಶೀಯವೆಂದು ಘೋಷಿಸಿದ್ದರು.
   ಥಳಿಸಿ ಹತ್ಯೆಗೈಯುವ ಕೃತ್ಯಗಳು ಎರಡೂ ಕಡೆಗಳಿಂದ ನಡೆಯುತ್ತಿವೆಯೆಂಬ ಘೋರ ಸುಳ್ಳನ್ನು ಭಾಗವತ್ ಹೇಳಿದ್ದರು. ಇಲ್ಲಿ ನಡೆದಿದ್ದುದು ಏಕಪಕ್ಷೀಯವಾಗಿದ್ದು, ಅದರ ಬಲಿಪಶುಗಳು ಮುಸ್ಲಿಮರು, ಕ್ರೈಸ್ತರು ಹಾಗೂ ದಲಿತರಾಗಿದ್ದರು. ಕಳೆದ ವರ್ಷದ ಜುಲೈನಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶವೊಂದರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗುಂಪಿನ ಪ್ರಭುತ್ವವು ನಡೆಸುವ ಭಯಾನಕ ಕೃತ್ಯಗಳು ಸಮಾಜದ ಹೊಸ ವ್ಯವಸ್ಥೆಯಾಗಲು ಅವಕಾಶ ನೀಡಬಾರದೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿತ್ತು. ರಕ್ತದಾಹಿ ಗುಂಪುಗಳಿಂದ ಬಹುತ್ವವಾದಿ ಸಮಾಜದ ರಕ್ಷಿಸುವ ತುರ್ತು ಅಗತ್ಯವನ್ನು ಅದು ಒತ್ತಿ ಹೇಳಿತ್ತು. ಆದರೆ ಈ ಕುರಿತ ಕಾನೂನಿನ ಪರಿಕಲ್ಪನೆ ಇನ್ನಷ್ಟೇ ಮೂರ್ತರೂಪ ಪಡೆದುಕೊಳ್ಳಬೇಕಾಗಿದೆ ಹಾಗೂ ಜಾರಿಗೊಳ್ಳಬೇಕಿದೆ. ಈ ಗುಂಪು ಥಳಿತದ ಹಾಗೂ ಅದನ್ನು ನಡೆಸುವವರ ಹೀನ ಕಾರ್ಯಸೂಚಿಯ ಮೂಲದ ಕುರಿತು ಯಾವುದೇ ಸಂದಿಗ್ಧತೆಗೊಳಗಾಗಬೇಕಿಲ್ಲ. ದೇಶದ ಯಾವುದೇ ಭಾಗದಲ್ಲಿ ನಡೆದ ಗುಂಪುದಾಳಿಗಳಲ್ಲಿ, ಹತ್ಯೆಗೈಯಲ್ಪಟ್ಟವರನ್ನು ‘‘ಭಾರತ್ ಮಾತಾ ಕಿ ಜೈ’’ ಹಾಗೂ ‘‘ಜೈಶ್ರೀರಾಮ್’’ ಎಂದು ಘೋಷಿಸುವಂತೆ ಬಲವಂತ ಪಡಿಸಲಾಗಿತ್ತು. ಒಂದು ವೇಳೆ ಇದು ಕೇವಲ ಕಾಕತಾಳೀಯವಾಗಿದ್ದರೆ, ಖಂಡಿತವಾಗಿಯೂ ಅವು ಗಿನ್ನೆಸ್ ವಿಶ್ವದಾಖಲೆಯ ಪುಸ್ತಕಕ್ಕೆ ಸೇರ್ಪಡೆಗೊಳ್ಳಲು ಯೋಗ್ಯವಾದ ಪ್ರಕರಣಗಳಾಗಿವೆ.
ತೀವ್ರವಾದ ವಿಸ್ಮತಿಗೊಳಗಾದವರಂತೆ ಅವರು ಹೀಗೆಂದು ಘೋಷಿಸಿದ್ದರು. ‘‘ಗುಂಪು ಹತ್ಯೆಯೆಂಬುದು ಭಾರತೀಯ ವೌಲ್ಯವಲ್ಲ. ಅನ್ಯ ಧಾರ್ಮಿಕ ಗ್ರಂಥವೊಂದರ ಕಥೆಯೇ ಇದರ ಮೂಲವಾಗಿದೆ. ನಾವು ಭಾರತೀಯರು ಭ್ರಾತೃತ್ವದಲ್ಲಿ ನಂಬಿಕೆಯಿಟ್ಟವರು. ಇಂತಹ ಪದಗಳನ್ನು ಭಾರತೀಯರ ಮೇಲೆ ಹೇರದಿರಿ.... ಲಿಂಚಿಂಗ್ (ಥಳಿಸಿ ಹತ್ಯೆ) ಎಂಬುದು ಪಾಶ್ಚಾತ್ಯ ಕಲ್ಪನೆಯಾಗಿದೆ ಹಾಗೂ ದೇಶಕ್ಕೆ ಕಳಂಕ ತರುವುದಕ್ಕಾಗಿ ಅದನ್ನು ಭಾರತೀಯ ಪರಿಕಲ್ಪನೆಯಿಂದ ನೋಡಕೂಡದು’’ ಎಂದು ಹೇಳಿದ್ದಾರೆ.
ಭಾಗವತ್ ಪ್ರಕಾರ ಪಾಶ್ಚಾತ್ಯ ಪರಿಕಲ್ಪನೆಯೆಂದರೆ ಕ್ರೈಸ್ತ ಧಾರ್ಮಿಕತೆಯಾಗಿದೆ. ಕೇಸರಿ ಪಾಳಯದ ಸುಳ್ಳುವದಂತಿಗಳನ್ನು ಹರಡುವುದರಲ್ಲಿ ನಿಷ್ಣಾತರಾಗಿರುವ ಅವರು ಮುಂದುವರಿದು ಹೀಗೆಂದು ಹೇಳಿದ್ದರು
‘‘ಈ ಪರಿಕಲ್ಪನೆಯಲ್ಲಿ, ಹೊರದೇಶದಲ್ಲಿ ಸೃಷ್ಟಿಯಾದ ಧರ್ಮಗ್ರಂಥವೊಂದರಲ್ಲಿ ಹಳೆಯ ಕಥೆಯೊಂದಿದೆ. ಈ ಕಥೆಗೂ, ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಆ ಕಥೆಯಲ್ಲಿ ಹಳ್ಳಿಯೊಂದರಲ್ಲಿ ಜನರು ಮಹಿಳೆಗೆ ಕಲ್ಲೆಸೆಯಲು ಸಿದ್ಧರಾಗುತ್ತಾರೆ. ಆಗ ಅಲ್ಲಿಗೆ ಆಗಮಿಸಿದ ಯೇಸುಕ್ರಿಸ್ತರು ಹೀಗೆ ಹೇಳುತ್ತಾರೆ. ‘‘ಆಕೆ ಪಾಪಿಯೆಂಬ ಕಾರಣಕ್ಕಾಗಿ ನೀವು ಆಕೆಗೆ ಕಲ್ಲೆಸೆಯುತ್ತಿದ್ದೀರಿ. ಆದರೆ ಆಕೆಗೆ ಮೊದಲಿಗೆ ಕಲ್ಲೆಸೆಯುವ ವ್ಯಕ್ತಿಯು ಯಾವುದೇ ಪಾಪವನ್ನು ಮಾಡಿಲ್ಲವೆಂಬುದನ್ನು ನೀವು ಖಾತರಿಪಡಿಸಿಕೊಳ್ಳಿ ಎಂದು ಹೇಳುತ್ತಾರೆ. ಆಗ ಪ್ರತಿಯೊಬ್ಬರಿಗೂ ತಮ್ಮ ತಪ್ಪಿನ ಅರಿವಾಗುತ್ತದೆ.’’
ಆದರೆ ಥಳಿಸಿ ಹತ್ಯೆಯು ಕ್ರೈಸ್ತಧರ್ಮದಿಂದ ಆರಂಭಗೊಂಡಿತೆಂಬುದನ್ನು ಸಾಬೀತು ಪಡಿಸಲು ಯೇಸುಕ್ರಿಸ್ತರ ಈ ಉದಾತ್ತ ಕೆಲಸವನ್ನು ಅವರು ಹೀಗೆ ಬಿಂಬಿಸಿದ್ದಾರೆ. ಇದಕ್ಕೆ ರಾಷ್ಟ್ರೀಯ ಚರ್ಚ್ ಕೌನ್ಸಿಲ್ ಸಮರ್ಥವಾಗಿ ಪ್ರತಿಕ್ರಿಯಿಸಿದೆ.
‘‘ಅತ್ಯುನ್ನತ ಸರಕಾರಿ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಸರಕಾರಗಳ ಇಂತಹ ಹೇಯಕೃತ್ಯಗಳನ್ನು ಹಾಗೂ ಬೇಜವಾಬ್ದಾರಿಯುತ ಸಾರ್ವಜನಿಕ ಹೇಳಿಕೆಗಳನ್ನು ಖಂಡಿಸಬೇಕಾಗಿದ್ದು, ಆ ಮೂಲಕ ದೇಶದಲ್ಲಿ ಶಾಂತಿ ಹಾಗೂ ಕೋಮು ಸೌಹಾರ್ದವನ್ನು ಕಾಪಾಡಬಹುದಾಗಿದೆ.
ಅಮೆರಿಕದಲ್ಲಿ ನಡೆದ ಅಂತರ್ಯುದ್ಧದ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಪ್ಪು ವರ್ಣೀಯರು ಚೀನಿಯರು ಹಾಗೂ ಹಿಸ್ಪಾನಿಕ್ ಜನಾಂಗೀಯರನ್ನು ಥಳಿಸಿ ಹತ್ಯೆಗೈಯಲಾಗಿತ್ತು. ಇದೀಗ ಭಾರತದಲ್ಲಿ ಮೋದಿ ಆಳ್ವಿಕೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಥಳಿಸಿ ಹತ್ಯೆಗಳಾಗುತ್ತವೆ. ವೇದಗಳ ಬಳಿಕ ಬ್ರಾಹ್ಮಣವಾದವು ಅತ್ಯಂತ ನಿಷ್ಠೆಯಿಂದ ಆರಾಧಿಸುವ ಗ್ರಂಥವಾದ ಮನುಸ್ಮತಿಯನ್ನು ಭಾರತದ ಸಂವಿಧಾನವೆಂಬುದಾಗಿ ಘೋಷಿಸಬೇಕೆಂದು ಆರೆಸ್ಸೆಸ್, ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಕ್ರಿಸ್ತಪೂರ್ವ ಎರಡನೇ ಶತಮಾನದಲ್ಲಿ ರಚನೆಯಾದ ಮನುಸ್ಮತಿಯು ವಿಶ್ವದ ಇತಿಹಾಸದಲ್ಲೇ ಥಳಿಸಿ ಹತ್ಯೆಗೈಯುವುದಕ್ಕೆ ಆದೇಶ ನೀಡುವ ಅತ್ಯಂತ ಪುರಾತನ ಗ್ರಂಥವಾಗಿದೆ.
  ಆ ಗ್ರಂಥದಲ್ಲಿ ಶೂದ್ರರಿಗೆ ವಿಧಿಸಲಾಗುವ ಶಿಕ್ಷೆ ವಿಧಾನಗಳ ಬಗ್ಗೆ ನೋಟ ಬೀರಿದಾಗ ಇದು ಮನದಟ್ಟಾಗುತ್ತದೆ. ಮನು ಪ್ರಕಾರ ದ್ವಿಜನೆಂದು ಕರೆಯಲ್ಪಡುವ ಬ್ರಾಹ್ಮಣನನ್ನು ಕೆಳಜಾತಿಯವನಾದ ಶೂದ್ರನು ಅಪಮಾನಿಸಿದಲ್ಲಿ, ಆತನ ನಾಲಗೆಯನ್ನೇ ಕತ್ತರಿಸಬೇಕು. ಒಂದು ವೇಳೆ ಶೂದ್ರನು ದ್ವಿಜರ ಹೆಸರುಗಳನ್ನು ಹಾಗೂ ಪಂಗಡಗಳ ವಿವಾದಾತ್ಮಕವಾಗಿ ಬಳಸಿದಲ್ಲಿ, ಆತನ ಬಾಯಿಗೆ ಹತ್ತು ಬೆರಳುಗಳಷ್ಟು ಉದ್ದದ ಕಬ್ಬಿಣದ ಮೊಳೆಯನ್ನು ನುಗ್ಗಿಸಬೇಕು. ಒಂದು ವೇಳೆ ಆತ ಉದ್ದಟತನದಿಂದ ಬ್ರಾಹ್ಮಣರಿಗೆ ಅವರ ಕರ್ತವ್ಯವನ್ನು ಬೋಧಿಸಲು ಹೊರಟಲ್ಲಿ, ರಾಜನು ಆತನ ಬಾಯಿ ಹಾಗೂ ಕಿವಿಗಳಿಗೆ ಕಾದ ಎಣ್ಣೆಯನ್ನು ಸುರಿಯಬೇಕು.
ಕೆಳಜಾತಿಯವನ ಯಾವುದೇ ಅಂಗವು ಮೇಲ್ಜಾತಿಯವರಿಗೆ ನೋವುಂಟು ಮಾಡಿದಲ್ಲಿ ಅದೇ ಅಂಗವನ್ನು ಕತ್ತರಿಸಬೇಕೆಂದು ಮನು ಬೋಧಿಸಿದ್ದಾನೆ.
ಮೇಲ್ಜಾತಿಯವನ ಮೇಲೆ ತನ್ನ ಕೈ ಅಥವಾ ಕೋಲನ್ನು ಎತ್ತಿದಲ್ಲಿ ಆತನ ಕೈಯನ್ನು ಕತ್ತರಿಸಬೇಕು. ಕೋಪದಿಂದ ಕಾಲಿನಿಂದ ತುಳಿದಲ್ಲಿ ಆತನ ಕಾಲನ್ನು ಕತ್ತರಿಸಬೇಕು.
ಕೆಳಜಾತಿಯ ಮಾನವನು ಉನ್ನತ ಜಾತಿಯ ವ್ಯಕ್ತಿಯ ಜೊತೆ ಒಂದೇ ಆಸನದಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದಲ್ಲಿ ಆತನ ಪೃಷ್ಟಕ್ಕೆ ಬರೆ ಎಳೆಯಬೇಕು ಹಾಗೂ ಗಡಿಪಾರು ಮಾಡಬೇಕು ಅಥವಾ ಆತನ ಸೊಂಟ ಮುರಿಯಬೇಕು.
 ವಾಸ್ತವವಾಗಿ ಮನುಸ್ಮತಿ ಸಮೀಪದಲ್ಲೇ ಇರುವಾಗ, ಹಿಂದುತ್ವವಾದದ ಉಗ್ರ ಪ್ರತಿಪಾದಕರಿಗೆ ಭಾರತದಲ್ಲಿ ದಲಿತರನ್ನು ಹಾಗೂ ಮುಸ್ಲಿಮರ ಮೇಲೆ ಆಕ್ರಮಣ ಮಾಡಲು ಯಾವುದೇ ವಿದೇಶಿ ಮಾರ್ಗದರ್ಶನದ ಮೂಲ ಅಗತ್ಯವಿರುವುದಿಲ್ಲ.
ಥಳಿಸಿ ಹತ್ಯೆಯ ಘಟನೆಗಳು ಪೂರ್ವ ಯೋಜಿತ ಸಂಚೆಂಬ ಆರೋಪಗಳನ್ನು ಭಾಗವತ್ ಅಲ್ಲಗಳೆಯುತ್ತಾರೆ. ಕೆಲವು ತಥಾಕಥಿತ ನಾಯಕರ ಬಗ್ಗೆ ನಿರ್ದಿಷ್ಟ ಸಮುದಾಯವೊಂದರ ಹಿತಾಸಕ್ತಿಗಳನ್ನು ಸಮರ್ಥಿಸಿಕೊಳ್ಳುವ ಹೆಸರಿನಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷವನ್ನು ಸೃಷ್ಟಿಸುತ್ತಿದ್ದಾರೆ. ದೇಶದಲ್ಲಿ ಇಂತಹ ಘಟನೆಗಳನ್ನು ಮಟ್ಟಹಾಕಲು ಸಮರ್ಪಕವಾದ ಕಾನೂನುಗಳಿವೆ ಹಾಗೂ ಅವುಗಳನ್ನು ಪ್ರಾಮಾಣಿಕವಾಗಿ ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ.
ಎಲ್ಲೆಡೆ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳಾಗುತ್ತಿರುವಾಗ ಹಾಗೂ ಅವುಗಳನ್ನು ಹಿಂದುತ್ವವಾದಿಗಳೇ ನಡೆಸುತ್ತಿರುವಾಗ, ಆರೆಸ್ಸೆಸ್ ಕಾರ್ಯಕರ್ತರಿಗೆ ಭಾಗವತ್ ನೀಡಿರುವ ಈ ಸಲಹೆಯು ನಗೆಪಾಟಲಿಗೆ ಎಡೆ ಮಾಡಿಕೊಡುತ್ತದೆ.
‘‘ಇಂತಹ ಪ್ರವೃತ್ತಿಯು ನಮ್ಮ ದೇಶದ ಪರಂಪರೆಗಾಗಲಿ ಅಥವಾ ಸಂವಿಧಾನದ ಆಶಯಕ್ಕಾಗಲಿ ಹೊಂದುವುದಿಲ್ಲ. ಭಿನ್ನಾಭಿಪ್ರಾಯಗಳು ಏನೇ ಇರಲಿ, ಯಾವುದೇ ಪ್ರಚೋದಕಾರಿ ಕೃತ್ಯಗಳು ನಡೆದಿರಲಿ ನಾವು ನಮ್ಮ ಸಂವಿಧಾನದ ಮಿತಿಯೊಳಗೆ ಕಾರ್ಯಾಚರಿಸಬೇಕು ಹಾಗೂ ಸೂಕ್ತ ಕ್ರಮಕ್ಕಾಗಿ ಅಂತಹ ಪ್ರಕರಣಗಳನ್ನು ಪೊಲೀಸರಿಗೆ ಹಸ್ತಾಂತರಿಸಬೇಕು ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸವಿರಿಸಬೇಕು. ಇದು ಸ್ವತಂತ್ರ ದೇಶದ ನಾಗರಿಕರ ಕರ್ತವ್ಯವಾಗಿದೆ.
ದೇಶದ ಸಂವಿಧಾನದ ಬಗ್ಗೆ ಆರೆಸ್ಸೆಸ್‌ಗೆ ಎಷ್ಟರ ಮಟ್ಟಿಗೆ ಕಾಳಜಿ ಇದೆಯೆಂಬುದು ನಮ್ಮ ಪ್ರಜಾತಾಂತ್ರಿಕ -ಜಾತ್ಯತೀತ ಸಂವಿಧಾನದ ಬದಲಿಗೆ ಮನುಸ್ಮತಿಯನ್ನು ಜಾರಿಗೊಳಿಸಬೇಕೆಂಬ ಅದರ ನಿರಂತರವಾದ ಬೇಡಿಕೆಯಿಂದ ಸ್ಪಷ್ಟವಾಗುತ್ತದೆ.’’
ಈ ಹುಸಿ ಮಾತಿಗೆ ಪ್ರತಿಕ್ರಿಯಿಸಿರುವ ಭಾರತದ ಇಂಗ್ಲಿಷ್ ದಿನಪತ್ರಿಕೆಯೊಂದು ಸಂಪಾದಕೀಯವೊಂದರಲ್ಲಿ ಹೀಗೆ ಬರೆದಿದೆ.
 ಕಾನೂನು ಬಾಹಿರ ಹತ್ಯೆ ಎಂದಾಗಲಿ ಅಥವಾ ಗುಂಪು ಹತ್ಯೆ ಎಂದಾಗಲಿ ಕರೆದರೂ ಅವು ಮಾರಣಾಂತಿಕವಾಗದೇ ಹೋಗದು. ಇಲ್ಲಿ ಜೀವಗಳನ್ನು ಬರ್ಬರವಾಗಿ ಹೊಸಕಿ ಹಾಕಲಾಗುತ್ತಿದೆ ಹಾಗೂ ಕಾನೂನಿನ ಪ್ರಭುತ್ವವನ್ನು ಹಳಿ ತಪ್ಪಿಸಲಾಗಿದೆ. ಗುಂಪು ಹತ್ಯೆಯು ಭಾರತಕ್ಕೆ ಅಪರಿಚಿತವಾದುದು ಹಾಗೂ ಅದು ಬೇರೆ ದೇಶಕ್ಕೆ ಸೇರಿದ್ದಾಗಿದೆ ಎಂದು ಹೇಳುವ ಮೂಲಕ ಹೊಣೆಗಾರಿಕೆಯನ್ನು ವರ್ಗಾಯಿಸಲು ಸಾಧ್ಯವಿಲ್ಲ. ಯಾವುದೇ ನಾಗರಿಕ ಸಮಾಜವು ಗುಂಪು ಥಳಿತವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.
ಕೃಪೆ: countercurrents.org

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top