ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕಡೆಗಣನೆ | Vartha Bharati- ವಾರ್ತಾ ಭಾರತಿ

---

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕಡೆಗಣನೆ

ಕೇಂದ್ರ ಸರಕಾರ ಅಲ್ಪಸಂಖ್ಯಾತ ಕೇಂದ್ರಿತ ವಿಶ್ವವಿದ್ಯಾನಿಲಯದ ಬಗ್ಗೆ ಏಕೆ ಅಸಡ್ಡೆ ತೋರುತ್ತಿದೆ? ಬುಡಕಟ್ಟು ಕೇಂದ್ರಿತ ಕೇಂದ್ರೀಯ ವಿಶ್ವವಿದ್ಯಾನಿಲಯದ ಅಗತ್ಯದ ಬಗ್ಗೆ ಮಾತನಾಡುವವರು ಅಲ್ಪಸಂಖ್ಯಾತ ಸ್ಥಾನಮಾನ ಕೇಂದ್ರಿತ ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಅಗತ್ಯವನ್ನು ಏಕೆ ಅರ್ಥಮಾಡಿಕೊಳ್ಳುವುದಿಲ್ಲ? ಈ ವಿಶ್ವವಿದ್ಯಾನಿಲಯಗಳ ಅಲ್ಪಸಂಖ್ಯಾತ ಸ್ಥಾನಮಾನದಲ್ಲಿ ಅವರು ಏಕೆ ಅನಗತ್ಯ ಹಸ್ತಕ್ಷೇಪ ಮಾಡುತ್ತಾರೆ? ಸಂಸತ್ತು ಕಾಯ್ದೆಯಿಂದ ಸ್ಥಾಪಿಸಲ್ಪಟ್ಟ ಈ ವಿಶ್ವವಿದ್ಯಾನಿಲಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಧನಸಹಾಯ ಮಾಡಲು ಅವರು ಏಕೆ ಸಿದ್ಧರಿಲ್ಲ?

 ಕಳೆದ ಪಾರ್ಲಿಮೆಂಟ್ ‘ಸೆಶನ್’ನಲ್ಲಿ, ಸಂಸತ್ತಿನ ಉಭಯ ಸದನಗಳು ಸುಮಾರು 28 ಮಸೂದೆಗಳನ್ನು ಅಂಗೀಕರಿಸಿದವು, ಕೆಲವೇ ಕೆಲವು ನಿಮಿಷಗಳ ಕಾಲ ಅತೀ ಕಡಿಮೆ ಸಮಯದಲ್ಲಿ ಸಮರ್ಪಕವಾಗಿ ಚರ್ಚೆಯಾಗದ ರೀತಿಯಲ್ಲಿ ಅಂಗೀಕರಿಸಲ್ಪಟ್ಟ ಹಲವಾರು ಮಸೂದೆಗಳ ಪೈಕಿ ‘ಕೇಂದ್ರ ವಿಶ್ವವಿದ್ಯಾನಿಲಯದ ತಿದ್ದುಪಡಿ ಮಸೂದೆ 2019’ಯೂ ಒಂದು. ಕೇವಲ ನಾಲ್ಕು ಪುಟಗಳ ಈ ಕಾಯ್ದೆಯು ಆಂಧ್ರಪ್ರದೇಶ ರಾಜ್ಯದಲ್ಲಿ ಆಂಧ್ರಪ್ರದೇಶ ಕೇಂದ್ರ ವಿಶ್ವವಿದ್ಯಾನಿಲಯ ಮತ್ತು ಆಂಧ್ರಪ್ರದೇಶದ ಕೇಂದ್ರೀಯ ಜನಜಾತಿ ವಿಶ್ವವಿದ್ಯಾನಿಲಯ ಸ್ಥಾಪಿಸಲು ಪ್ರಸ್ತಾಪಿಸಿದೆ.

  ಮುಖ್ಯವಾಗಿ ಆಂಧ್ರಪ್ರದೇಶ ರಾಜ್ಯದ ಬುಡಕಟ್ಟು ಸಮುದಾಯಕ್ಕೆ, ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸೌಲಭ್ಯಗಳನ್ನು ಒದಗಿಸುವ ಹಾಗೂ ಕಾಯ್ದೆಯಲ್ಲಿ ಉಲ್ಲೇಖಿಸಿರುವಂತೆ ಕಲೆ, ಸಂಸ್ಕೃತಿ ಮತ್ತು ಬುಡಕಟ್ಟು ಸಮುದಾಯದ ರೀತಿ ರಿವಾಜುಗಳನ್ನು ಒಳಗೊಂಡಂತೆ ಬುಡಕಟ್ಟು ಕೇಂದ್ರಿತ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ವಿಶೇಷ ಗಮನ ಹರಿಸಲು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವುದು ಎಂಬ ವಿಚಾರವು ಸರಕಾರದ ಮುಂದಿದೆ. ಸಂಸತ್ತಿನ ಈ ಕ್ರಮವನ್ನು ಶ್ಲಾಘಿಸಬೇಕಾಗಿದೆ ಮತ್ತು ಇದನ್ನು ಬುಡಕಟ್ಟು ಸಮುದಾಯಗಳ ಕೊಡುಗೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಒಂದು ಸಕಾರಾತ್ಮಕ ಹೆಜ್ಜೆಯೆಂದು ಪರಿಗಣಿಸಬೇಕು ಎನ್ನುವ ನಿಟ್ಟಿನಲ್ಲಿ ಹಲವಾರು ಚರ್ಚೆಗಳು ನಡೆದವು. ಬುಡಕಟ್ಟು ಸಮುದಾಯ ಕೇಂದ್ರೀಕೃತ ವಿಶ್ವವಿದ್ಯಾನಿಲಯದ ಆವಶ್ಯಕತೆ ಮತ್ತು ದೇಶದ ಇತರ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಪ್ರತಿನಿಧಿತ್ವ ಹಾಗೂ ಜನಜಾತಿ ಪದ್ಧತಿಗಳು ಮತ್ತು ಅವರ ಸಂಸ್ಕೃತಿಯ ಬಗ್ಗೆ ಮೀಸಲಾದ ಸಂಶೋಧನೆಯಂತಹ ವಿಚಾರಗಳನ್ನು ಕೇವಲ ಈ ಒಂದು ವಿಶ್ವವಿದ್ಯಾನಿಲಯವು ಪರಿಹರಿಸಲು ಯಾವ ರೀತಿ ಸಾಧ್ಯ? ಎಂದು ಸಂಸತ್ತಿನಲ್ಲಿ ಪ್ರಶ್ನಿಸಿದವರು ಇದ್ದಾರೆ. ಅವರ ಪ್ರಶ್ನೆಯಲ್ಲಿ ದೇಶದ ಬುಡಕಟ್ಟು ಸಮುದಾಯಕ್ಕೆ ಆಂಧ್ರಪ್ರದೇಶದಲ್ಲಿ ಕೇವಲ ಒಂದು ಯೂನಿವರ್ಸಿಟಿ ನಿರ್ಮಿಸಿದರೆ ಸಾಲದು. ಬದಲಾಗಿ ದೇಶಾದ್ಯಂತ ಬುಡಕಟ್ಟು ಜನಾಂಗದ ಶಿಕ್ಷಣದ ಬಗ್ಗೆ ಗಂಭೀರವಾಗಿ ಚಿಂತಿಸುವ ಆವಶ್ಯಕತೆ ಇದೆ.

ಜನಜಾತಿ ಕೇಂದ್ರೀಕೃತ ವಿಶ್ವವಿದ್ಯಾನಿಲಯ

ಕೇಂದ್ರವು ‘ಕೇಂದ್ರ ವಿಶ್ವವಿದ್ಯಾನಿಲಯದ ತಿದ್ದುಪಡಿ ಮಸೂದೆ 2019’ನ್ನು ಅಂಗೀಕರಿಸಿದ ನಂತರ, ಕೇಂದ್ರ ಬುಡಕಟ್ಟು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಕುರಿತು ತನ್ನ ಬುಡಕಟ್ಟು ಸಮುದಾಯದೊಂದಿಗಿನ ನಿಜವಾದ ಪ್ರೀತಿಯನ್ನು ಆ ವಿಶ್ವವಿದ್ಯಾನಿಲಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡುವ ಮೂಲಕ ತೋರ್ಪಡಿಸಬೇಕಿತ್ತು. ಆದರೆ ನಿಧಿಯ ಹಂಚಿಕೆಯು ವಿಶ್ವವಿದ್ಯಾನಿಲಯದ ಸ್ಥಾಪನೆಯಲ್ಲಿ ನಿಜವಾದ ಸಮಸ್ಯೆಯಾಗಿ ಪರಿಣಮಿಸಿದೆ. ಮೊದಲ ಹಂತದಲ್ಲಿ ರೂ. 420 ಕೋಟಿ ಬಜೆಟ್ ಅನ್ನು ಕೇಂದ್ರ ಸರಕಾರ ಘೋಷಿಸಿತ್ತು. ಅದರಲ್ಲಿ ಕೇವಲ 8 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿತು. ಇದು ಮೊದಲ ಹಂತದ 420 ಕೋಟಿ ರೂ. ಬಜೆಟ್‌ನ ಪೈಕಿ ಕೇವಲ ಶೇ. 1.90 ಮಾತ್ರ. ಇದು ವಿಶ್ವ ವಿದ್ಯಾನಿಲಯಕ್ಕೆ ಒಂದು ರಸ್ತೆ ನಿರ್ಮಿಸಲು ಕೂಡಾ ಸಾಕಾಗಲಾರದು. ದಶಕದ ಹಿಂದೆ ಸ್ಥಾಪನೆಯಾದ ನಂತರವೂ (ಧರ್ಮಶಾಲಾ, ಹಿಮಾಚಲ ಪ್ರದೇಶದ ಸೆಂಟ್ರಲ್ ಯೂನಿವರ್ಸಿಟಿ ಮತ್ತು ಗುಜರಾತಿನ, ಗುಜರಾತ್ ಸೆಂಟ್ರಲ್ ಯೂನಿವರ್ಸಿಟಿ) ವಿಶ್ವವಿದ್ಯಾನಿಲಯವು ಸ್ವಂತ ಭೂಮಿಯನ್ನು ಹೊಂದಿಲ್ಲ. ಹೆಚ್ಚಿನ ಎಲ್ಲಾ ವಿಶ್ವವಿದ್ಯಾನಿಲಯಗಳು ಸ್ಥಾಪನೆಯ ದಶಕದ ನಂತರವೂ ಬಹುತೇಕ ತನ್ನ ಮೂಲಭೂತ ಆವಶ್ಯಕತೆಗಳನ್ನು ಹೊಂದಿಲ್ಲ ಎನ್ನುವುದು ಸತ್ಯ.

ವಿಶ್ವವಿದ್ಯಾನಿಲಯದ ಸ್ವರೂಪವು ಬುಡಕಟ್ಟು ಕೇಂದ್ರಿತವಾಗಿದೆ, ಅಂದರೆ, ಇದು ಬುಡಕಟ್ಟು ಕಲೆ, ಬುಡಕಟ್ಟು ಸಂಸ್ಕೃತಿ ಮತ್ತು ಬುಡಕಟ್ಟು ಪದ್ಧತಿಗಳಲ್ಲಿನ ಸಂಶೋಧನೆಗಳನ್ನು ಒಳಗೊಂಡಿರುತ್ತದೆ. ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಪ್ರಾತಿನಿಧ್ಯವನ್ನು ಹೆಚ್ಚಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಆವಶ್ಯಕತೆ ಇದೆ. ಏಕೆಂದರೆ ಅವರು ಉನ್ನತ ಶಿಕ್ಷಣದಲ್ಲಿ ಕಡಿಮೆ ದಾಖಲಾತಿ ಅನುಪಾತವನ್ನು ಹೊಂದಿದ್ದಾರೆ. ಹಾಗಾಗಿ ಈ ನಿರ್ದಿಷ್ಟ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಮೂಲಕ, ಸರಕಾರವು ಈ ಸಮಸ್ಯೆಯನ್ನು ಪರಿಹರಿಸವ ಬಗ್ಗೆ ಚಿಂತಿಸುತ್ತಿದೆ. ಆದರೆ ಈ ಮೂಲಕ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮೇಲೆ ತರಬಹುದು ಎಂದು ಆಶಿಸುವುದು ತಮಾಷೆಯೇ ಸರಿ.

ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ದಾಖಲಾತಿ ಅನುಪಾತ

 ಇದೇ ಸರಕಾರವು ಎರಡು ಮುಸ್ಲಿಂ ಕೇಂದ್ರೀಯ ವಿಶ್ವವಿದ್ಯಾನಿಲಯಗಳನ್ನು ಅಲ್ಪಸಂಖ್ಯಾತ ಸ್ಥಾನದೊಂದಿಗೆ ಗುರುತಿಸುವುದನ್ನು ವಿರೋಧಿಸುತ್ತಿದೆ ಮತ್ತು ವಿವಿಧ ರಾಜ್ಯಗಳಲ್ಲಿ ಅದರ ಆಫ್‌ಕ್ಯಾಂಪಸ್ ಕೇಂದ್ರಗಳನ್ನು ತೆರೆಯುವುದನ್ನು ವಿರೋಧಿಸುತ್ತಿದೆ. ಏಕೆ ಎಂದು ಕೇಳಿದರೆ ಅವರ ಬಳಿ ಸರಿಯಾದ ಉತ್ತರವಿಲ್ಲ, ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ವಹಿಸಿದ, ಸಾಚಾರ್ ಸಮಿತಿಯ ಅಧಿಕೃತ ವರದಿಯಲ್ಲಿ ಉಲ್ಲೇಖಿಸಿದಂತೆ ಕಳೆದ 5 ದಶಕಗಳಿಂದ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುತ್ತಿರುವ ಮುಸ್ಲಿಮರ ಸಂಖ್ಯೆಯು ಹೆಚ್ಚು ಸುಧಾರಿಸಿಲ್ಲ ಎಂಬ ಅಂಶದ ನಂತರವೂ, ಈ ರೀತಿಯ ವ್ಯವಹಾರವು ಏನನ್ನು ಸೂಚಿಸುತ್ತದೆ.?

ಸಮುದಾಯದ ಜನಸಂಖ್ಯೆಗೆ ಸಂಬಂಧಿಸಿದಂತೆ ನಾವು ದಾಖಲಾತಿ ಅನುಪಾತವನ್ನು ಪರಿಶೀಲಿಸಿದರೆ, ಉನ್ನತ ಶಿಕ್ಷಣ ಅನುಪಾತದಲ್ಲಿ, ಮುಸ್ಲಿಮರು ಬಹಳ ಹಿಂದುಳಿದಿದ್ದಾರೆ, ಇನ್ನು ಆಶ್ಚರ್ಯದಾಯಕ ವಿಚಾರವೇನೆಂದರೆ, ಸಾವಿರಾರು ವರ್ಷಗಳಿಂದ ನಿರಂತರ ದಮನಿಸಲ್ಪಟ್ಟ ಮತ್ತು ಅತೀ ಹಿಂದುಳಿದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅತೀ ಹಿಂದುಳಿದ ಸಮುದಾಯವೆಂದೇ ಗುರುತಿಸಲ್ಪಟ್ಟ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ)ಕ್ಕಿಂತ ಮುಸ್ಲಿಂ ಸಮುದಾಯದ ಸ್ಥಿತಿ ಕೆಟ್ಟದ್ದಾಗಿದೆ. ಮುಸ್ಲಿಮರು ಭಾರತದ ಜನಸಂಖ್ಯೆಯ ಶೇ. 14ರಷ್ಟನ್ನು ಹೊಂದಿದ್ದಾರೆ. ಆದರೆ ಉನ್ನತ ಶಿಕ್ಷಣದ ಅಖಿಲ ಭಾರತ ಸಮೀಕ್ಷೆಯ 2014-15ರ ವರದಿಯ ಪ್ರಕಾರ ಉನ್ನತ ಶಿಕ್ಷಣದಲ್ಲಿ ಅವರ ದಾಖಲಾತಿಯು ಕೇವಲ ಶೇ. 4.4ರಷ್ಟಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಎಲ್ಲಾ ಸಮುದಾಯಗಳಿಗೆ ಶ್ರಮಿಸುತ್ತಿದೆ ಎಂದು ಹೇಳಿಕೊಂಡಿದೆ. ಆದರೆ ಮುಸ್ಲಿಂ ಸಮುದಾಯದ ಪ್ರಸ್ತುತ ಶೈಕ್ಷಣಿಕ ಸ್ಥಿತಿ ಉತ್ತಮವಾಗಿಲ್ಲ ಎಂಬ ಅಂಶವನ್ನು ಗಮನಿಸಬೇಕಾಗಿದೆ, ಸಂಸತ್ ಚುನಾವಣೆಯಲ್ಲಿ ವಿಜಯ ಸಾಧಿಸುವ ಮೋದಿ ಸರಕಾರವು ಈ ವಲಯದಲ್ಲಿ ಹಿಂದುಳಿದಿರುವ ಮುಸ್ಲಿಂ ಸಮುದಾಯದ ಶೈಕ್ಷಣಿಕ ಸ್ಥಿತಿಯನ್ನು ಸುಧಾರಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಮತ್ತು ಇತರ ಸಮುದಾಯಗಳಿಗೆ ಸಮನಾಗಿ ಇಡೀ ಸಮುದಾಯವನ್ನು ಉನ್ನತೀಕರಿಸಲು ಅವರು ಶ್ರಮಿಸುತ್ತಿದ್ದಾರೆ ಎಂಬುದನ್ನು ಅವರ ಕಾರ್ಯಗಳಿಂದ ಸಾಬೀತುಪಡಿಸಬೇಕು. ಆದರೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಮುದಾಯದ ಪ್ರಗತಿಗೆ ಮತ್ತಷ್ಟು ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆಂದು ತೋರುತ್ತಿದೆ.

ಅಂಕಿ ಅಂಶಗಳ ಪ್ರಕಾರ, ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಅತಿ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿಶ್ವವಿದ್ಯಾನಿಲಯದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ. 75 ಮುಸ್ಲಿಮರು ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ. 50ಕ್ಕಿಂತ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು. ಈ ವಿಶ್ವವಿದ್ಯಾನಿಲಯಗಳನ್ನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳೆಂದು ಪರಿಗಣಿಸಲಾಗಿದೆ ಮತ್ತು ಈ ವಿದ್ಯಾರ್ಥಿಗಳು ಹೆಚ್ಚಿನಂಶ ಭಾರತದ ಉತ್ತರ ಭಾಗಕ್ಕೆ ಸೇರಿದವರು. ಇದು ದೇಶದ ದಕ್ಷಿಣ ರಾಜ್ಯಗಳಿಗೆ ಹೋಲಿಸಿದರೆ ಶೈಕ್ಷಣಿಕವಾಗಿ ಹಿಂದುಳಿದಿದೆ.

ಮೇಲಿನ ಅಂಶವನ್ನು ಗಮನಿಸಿದರೆ, ಭಾರತದ ಈ ಎರಡು ಪ್ರಮುಖ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಅಲ್ಪಸಂಖ್ಯಾತ ಸ್ಥಾನಮಾನದ ಬಗ್ಗೆ ಕೇಂದ್ರ ಸರಕಾರದ ನೇತೃತ್ವದ ಮಧ್ಯಪ್ರವೇಶವು ಮುಸ್ಲಿಂ ಸಮುದಾಯವನ್ನು ಮತ್ತಷ್ಟು ಅಂಚಿನಲ್ಲಿರುವಂತೆ ಮಾಡುತ್ತದೆ. ಇದು ಈಗಾಗಲೇ ನಮ್ಮ ದೇಶದಲ್ಲಿ ಅತ್ಯಂತ ಹಿಂದುಳಿದಿರುವ ಸಮಾಜದ ಪ್ರಗತಿಯ ಬಗೆಗಿನ ದ್ವೇಷದ ನಡವಳಿಕೆಯನ್ನು ಮಾತ್ರ ಪ್ರತಿಬಿಂಬಿಸುತ್ತದೆ.

ಕ್ಯಾಂಪಸ್‌ನ ಅಭಿವೃದ್ಧಿ ಮತ್ತು ಪ್ರಗತಿಯು ಅಂದಿನ ಅಧಿಕಾರಿಗಳು ನಿಗದಿಪಡಿಸಿದ ನಿರೀಕ್ಷೆಗಳು ಮತ್ತು ಅಪೇಕ್ಷಿತ ಗುರಿಗಳ ಪ್ರಕಾರ ನಡೆದಿಲ್ಲ. ಕಿಶನ್‌ಗಂಜ್ ಮತ್ತು ಮಲಪ್ಪುರಂ ಕ್ಯಾಂಪಸ್‌ಗಳಲ್ಲಿ, ಕೇವಲ ಎರಡು ಕೋರ್ಸ್‌ಗಳನ್ನು (ಕಿಶನ್‌ಗಂಜ್‌ನಲ್ಲಿ ಬಿ.ಎಡ್. ಮತ್ತು ಎಂಬಿಎ ಹಾಗೂ ಮಲಪ್ಪುರಂನಲ್ಲಿ ಎಂಬಿಎ ಮತ್ತು ಬಿಎಎಲ್‌ಎಲ್‌ಬಿ) ಪ್ರಾರಂಭಿಸಲಾಗಿದೆ ಮತ್ತು ಕೇವಲ ಮೂರು ಕೋರ್ಸ್‌ಗಳನ್ನು (ಎಂಬಿಎ, ಬಿಎಎಲ್‌ಎಲ್‌ಬಿ ಮತ್ತು ಬಿ.ಎಡ್.) ಮುರ್ಷಿದಾಬಾದ್ ಆಫ್ ಕ್ಯಾಂಪಸ್‌ನಲ್ಲಿ ಪ್ರಾರಂಭಿಸಲಾಯಿತು. ಅಲ್ಲದೆ ಔರಂಗಾಬಾದ್‌ನಲ್ಲಿ ನಾಲ್ಕನೇ ಪ್ರಸ್ತಾಪಿತ ಆಫ್-ಕ್ಯಾಂಪಸ್ ಬಲಪಂಥೀಯ(ಬಿಜೆಪಿಯ ಮಿತ್ರ ಪಕ್ಷ ಶಿವಸೇನೆಯ, ಚಂದ್ರಕಾಂತ್ ಖೈರೆ) ಸ್ಥಳೀಯ ಸಂಸದರ ತೀವ್ರ ವಿರೋಧದಿಂದಾಗಿ 100 ಎಕರೆ ಭೂಮಿಯನ್ನು ಹಂಚಿಕೆ ಮಾಡಿದ ನಂತರವೂ ಪ್ರಾರಂಭಿಸಲು ಸಾಧ್ಯವಾಗಲಿಲ್ಲ.

ಈ ಆಫ್ ಕ್ಯಾಂಪಸ್‌ಗಳ ಪ್ರಗತಿಯನ್ನು ನಿಧಾನಗತಿಯತ್ತ ತಳ್ಳುತ್ತಲೇ ಬರುತ್ತಿದ್ದು, ನಂತರ ಬಂದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಶ್ರೀಮತಿ ಸ್ಮತಿ ಇರಾನಿ, ‘‘ಎಎಂಯು ಆಫ್ ಕ್ಯಾಂಪಸ್‌ಗಳ ಸ್ಥಾಪನೆಯು ಸ್ವತಃ ಕಾನೂನುಬಾಹಿರವಾಗಿದೆ. ಆದ್ದರಿಂದ ಈ ಕೇಂದ್ರಗಳಿಗೆ ಹಣವನ್ನು ಕಡಿಮೆ ಮಾಡಲಾಗಿದೆ ಮತ್ತು ನಿಲ್ಲಿಸಲಾಗಿದೆ’’ ಎಂದು 2016ರಲ್ಲಿ ಅಸಮರ್ಥನೀಯ ಹೇಳಿಕೆಗಳನ್ನು ನೀಡಿದರು. ಇದುವರೆಗೂ ಈ ಸಮಸ್ಯೆಯನ್ನು ಬಗೆಹರಿಸಲಾಗಿಲ್ಲ ಮತ್ತು ಹಣದ ಕೊರತೆಯು ಈ ಎಲ್ಲ ಎಎಂಯು ಆಫ್ ಕ್ಯಾಂಪಸ್‌ಗಳ ಈಗಾಗಲೇ ಹದಗೆಡುತ್ತಿರುವ ಪರಿಸ್ಥಿತಿಯನ್ನು ಮತ್ತಷ್ಟು ಅಪಾಯಕ್ಕೆ ದೂಡುತ್ತಿದೆ. ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ಅವರ ಇತ್ತೀಚಿನ ಹೇಳಿಕೆಯಿಂದ ಮಲಪ್ಪುರಂ ಆಫ್ ಕ್ಯಾಂಪಸ್‌ನ ಕಠೋರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು. ಲೋಕಸಭೆಯಲ್ಲಿ ವಿವಿಧ ವಿರೋಧ ಪಕ್ಷಗಳ ಸಂಸದರು ಜ್ಞಾಪಿಸಿದ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಕೇಂದ್ರ ಸರಕಾರವು ಈ ಎಲ್ಲಾ ಮನವಿಗಳಿಗೆ ಕಿವುಡತೆಯ ಮೂಲಕವೇ ಉತ್ತರಿಸುತ್ತಿದೆ.

 ಕೇಂದ್ರ ಸರಕಾರ ಅಲ್ಪಸಂಖ್ಯಾತ ಕೇಂದ್ರಿತ ವಿಶ್ವವಿದ್ಯಾನಿಲಯದ ಏಕೆ ಅಸಡ್ಡೆ ತೋರುತ್ತಿದೆ? ಬುಡಕಟ್ಟು ಕೇಂದ್ರಿತ ಕೇಂದ್ರೀಯ ವಿಶ್ವವಿದ್ಯಾನಿಲಯದ ಅಗತ್ಯದ ಬಗ್ಗೆ ಮಾತನಾಡುವವರು ಅಲ್ಪಸಂಖ್ಯಾತ ಸ್ಥಾನಮಾನ ಕೇಂದ್ರಿತ ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಅಗತ್ಯವನ್ನು ಏಕೆ ಅರ್ಥಮಾಡಿಕೊಳ್ಳುವುದಿಲ್ಲ? ಈ ವಿಶ್ವವಿದ್ಯಾನಿಲಯಗಳ ಅಲ್ಪಸಂಖ್ಯಾತ ಸ್ಥಾನಮಾನದಲ್ಲಿ ಅವರು ಏಕೆ ಅನಗತ್ಯ ಹಸ್ತಕ್ಷೇಪ ಮಾಡುತ್ತಾರೆ? ಸಂಸತ್ತು ಕಾಯ್ದೆಯಿಂದ ಸ್ಥಾಪಿಸಲ್ಪಟ್ಟ ಈ ವಿಶ್ವವಿದ್ಯಾನಿಲಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಧನಸಹಾಯ ಮಾಡಲು ಅವರು ಏಕೆ ಸಿದ್ಧರಿಲ್ಲ?

ಮೇಲೆ ಉಲ್ಲೇಖಿಸಲಾದ ಘಟನಾವಳಿಗಳನ್ನು ಗಮನಿಸಿದರೆ ಇದು ಸರಕಾರದ ನಡೆಯ ಬಗ್ಗೆ ಒಂದು ಪ್ರಶ್ನಾರ್ಥಕ ಚಿಹ್ನೆಯನ್ನು ಸ್ಪಷ್ಟವಾಗಿ ಇರಿಸುತ್ತದೆ. ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೇ ಅಥವಾ ಇದು ಸ್ಪಷ್ಟವಾದ ತಪ್ಪುಆಡಳಿತವೇ ಅಥವಾ ಬಿಜೆಪಿಯ ಮುಸ್ಲಿಮರ ವಿರುದ್ಧ ದ್ವೇಷದ ಸಿದ್ಧಾಂತವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಕಡೆಗಣಿಸಲು ಮೂಲ ಕಾರಣವೇ? ಎಂಬ ಪ್ರಶ್ನೆಗಳು ನಮ್ಮನ್ನು ಖಂಡಿತ ಕಾಡದಿರದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top