ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ಸಂವಿಧಾನ | Vartha Bharati- ವಾರ್ತಾ ಭಾರತಿ

1949 ನವೆಂಬರ್ 26 ಸಂವಿಧಾನ ಸಮರ್ಪಣಾ ದಿನ

ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ಸಂವಿಧಾನ

ಸಂವಿಧಾನ ಕುರಿತು ಡಾ. ಅಂಬೇಡ್ಕರ್‌ರವರು ‘‘ನಮ್ಮ ಸಂವಿಧಾನವು ಎಲ್ಲ ಕಾಲದಲ್ಲೂ ಆಡಳಿತ ನಡೆಸಲು ಬಲಿಷ್ಠವಾಗಿದೆ. ಒಂದು ವೇಳೆ ಪರಿಸ್ಥಿತಿ ಕೈ ಮೀರಿ ಹದಗೆಟ್ಟು ಹೋದಲ್ಲಿ ಅದರರ್ಥ ನಮಗೆ ಕೆಟ್ಟ ಸಂವಿಧಾನ ಇದೆಯೆಂದಲ್ಲ, ಸಂವಿಧಾನ ಕೆಟ್ಟ ಮನುಷ್ಯನ (ಆಳ್ವಿಕೆ ನಡೆಸುವವರ) ಕ್ಯೆಯಲ್ಲಿದೆಯಂರ್ಥ’’ ಎಂದು ಹೇಳುತ್ತಾರೆ

ಸಾವಿರಾರು ವರ್ಷ ಪರಕೀಯರ ಆಳ್ವಿಕೆಯಲ್ಲಿದ್ದ ಭಾರತ ದೇಶ 1945ರ ದ್ವಿತೀಯ ಮಹಾಯುದ್ಧ ಕೊನೆಗೊಂಡ ನಂತರ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಆಗ ಬ್ರಿಟಿಷ್ ಸರಕಾರವು ತ್ರಿ ಸದಸ್ಯ ಆಯೋಗವನ್ನು (ಕ್ಯಾಬಿನೆಟ್ ಮಿಷನ್) ರಚಿಸಿ 1946 ಮಾರ್ಚ್ 16ರಂದು ಭಾರತದ ಆಡಳಿತ ನಿರ್ವಹಣೆಗಾಗಿ ಸಂವಿಧಾನ ರಚಿಸುವ ಸಂಬಂಧ ರಾಜ್ಯಾಂಗ ಸಭೆಯನ್ನು ರಚಿಸಲು ಶಿಫಾರಸು ಮಾಡಿತು. ಈ ಕುರಿತು ರಾಜ್ಯಾಂಗ ರಚನಾ ಸಭೆಗೆ ಪ್ರಾಂತೀಯ ವಿಧಾನ ಸಭೆಗಳಿಂದ ಅನೇಕ ಸದಸ್ಯರನ್ನು ಆರಿಸಲಾಯಿತು, ಸ್ವಾತಂತ್ರ್ಯ ಪೂರ್ವದಿಂದಲೂ ಕೇಂದ್ರ ಆಡಳಿತದಲ್ಲಿ ಮಂತ್ರಿಯಾಗಿದ್ದ ಅಪಾರ ರಾಜಕೀಯ ಅನುಭವ ಹೊಂದಿದ್ದ ಡಾ. ಬಿ. ಆರ್. ಅಂಬೇಡ್ಕರ್‌ರವರು ಜೋಗೇಂದ್ರನಾಥ್ ಮೆಂಡಲ್ ಮತ್ತು ಪರಿಶಿಷ್ಟ ಜಾತಿಯ ಬೆಂಬಲದಿಂದ ಬಂಗಾಳ ವಿಧಾನ ಸಭೆಯಿಂದ ಆಯ್ಕೆಗೊಂಡು ರಾಜ್ಯಾಂಗ ಸಭೆಯನ್ನು ಪ್ರವೇಶಿಸಿದರು. ಆಗ 296 ಸದಸ್ಯರು ಅರ್ಹತೆ ಪಡೆದಿದ್ದರು. ಆದರೆ, ಅಧಿವೇಶನದಲ್ಲಿ 207 ಸದಸ್ಯರು ಮಾತ್ರ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಸದಸ್ಯರು ಗೈರಾಗಿದ್ದರು. ರಾಜ್ಯಾಂಗ ರಚನಾ ಸಭೆಯ ಮೊದಲ ಸಭೆಯು 1946 ಡಿಸೆಂಬರ್ 9ರಂದು ದಿಲ್ಲಿಯ ಸಂವಿಧಾನ ಭವನದಲ್ಲಿ ಪ್ರಾರಂಭಿಸಲಾಯಿತು. ರಾಜ್ಯಾಂಗ ರಚನಾ ಸಭೆಯ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದ ವಿಚಾರ ಡಿಸೆಂಬರ್ 10ರಂದು ಅಂಗೀಕಾರವಾಗಿ ಡಿಸೆಂಬರ್ 11 ರಂದು ಸಭೆಯ ಅಧ್ಯಕ್ಷರಾಗಿ ಡಾ. ರಾಜೇಂದ್ರ ಪ್ರಸಾದ್ ಆಯ್ಕೆಯಾದರು.

ಸಭೆಯಲ್ಲಿ ಡಿಸೆಂಬರ್ 13ರಂದು ಜವಾಹರಲಾಲ್ ನೆಹರೂರವರು ಸಂವಿಧಾನ ರಚನೆ ಕುರಿತ ಧ್ಯೆಯೋದ್ದೇಶಗಳನ್ನು ಮಂಡಿಸಿದರು. ಇವುಗಳ ಮೇಲೆ ಅನೇಕ ಚರ್ಚೆಗಳಾದವು. ಅಧ್ಯಕ್ಷರು ಸಭೆಯನುದ್ದೇಶಿಸಿ ಭಾಷಣ ಮಾಡಿದರು. ಮುಸ್ಲಿಂ ಲೀಗ್‌ನ ಗೈರು ಹಾಜರಿ ಮತ್ತು ಹಲವು ಸಂಸ್ಥಾನಗಳು ಒಳಗೊಳ್ಳುವಿಕೆ ಕುರಿತು ಚರ್ಚೆ ತೀವ್ರತೆ ಪಡೆಯಿತು. ಹೀಗಾಗಿ, ಡಿಸೆಂಬರ್ 16ರಂದು ಸಭೆ ಮುಂದುವರಿಯಿತು. ಮುಂದೆ 1946 ಡಿಸೆಂಬರ್ 17ರಂದು ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್‌ರವರು ಡಾ. ಅಂಬೇಡ್ಕರ್‌ರವರು ತಮ್ಮ ಅಭಿಪ್ರಾಯ ಮಂಡಿಸಬೇಕೆಂದು ಆಹ್ವಾನಿಸಿದರು. ಸಂವಿಧಾನ ರಚನಾ ಸಭೆಯನ್ನುದ್ದೇಶಿಸಿ ಡಾ. ಅಂಬೇಡ್ಕರ್‌ರವರು ಅತ್ಯಂತ ವಿದ್ವತ್ ಪೂರ್ಣವಾಗಿ, ಈ ದೇಶದ ಪರಿಸ್ಥಿತಿ, ಮುಂದಿನ ಬೆಳವಣಿಗೆ, ದೇಶ ವಿದೇಶಗಳ ಸಂವಿಧಾನದ ಬೆಳವಣಿಗೆ ಮುಂತಾದ ಎಲ್ಲ ಹಿನ್ನೋಟ-ಮುನ್ನೋಟಗಳ ಚಿತ್ರಣವನ್ನು ಸಭೆಯ ಮುಂದೆ ನಿರರ್ಗಳವಾಗಿ ಮಂಡಿಸಿದರು. ಅವರ ಮಾತು ಒಬ್ಬ ಪ್ರೌಢ ರಾಜನೀತಿಜ್ಞನ ಮಾತಾಗಿತ್ತು. ಡಾ. ಅಂಬೇಡ್ಕರ್‌ರವರ ಭಾಷಣದ ಸಂದರ್ಭ ಸಭೆಯು ಅತ್ಯಂತ ನಿಶ್ಯಬ್ದವಾಗಿತ್ತು. ಸದಸ್ಯರೆಲ್ಲರೂ ಅವರ ಮಾತನ್ನು ಗಮನವಿಟ್ಟು ಆಲಿಸಿದರು. ಡಾ. ಅಂಬೇಡ್ಕರ್‌ರವರಿಗೆ ಅಭಿನಂದನೆಯ ಮಹಾಪೂರವೇ ಹರಿಯಿತು.

ಸಭೆಯಲ್ಲಿ ಸಂವಿಧಾನ ರಚನೆಗಾಗಿ ವಿವಿಧ ಉಪವಾಕ್ಯಗಳ ಬಗ್ಗೆ ಅನೇಕ ಚರ್ಚೆಗಳಾದವು. ಚರ್ಚೆಗಳಲ್ಲಿ ಡಾ. ಅಂಬೇಡ್ಕರ್ ರವರು ಭಾಗವಹಿಸಿ ಸಮರ್ಪಕವಾಗಿ ಉತ್ತರ ನೀಡಿದರು. 1947 ಜನವರಿ 24ರಂದು ಕ್ಯಾಬಿನೆಟ್ ಸಂವಿಧಾನ ರಚನೆಗೆ ಒಂದು ಸಲಹಾ ಸಮಿತಿಯನ್ನು ರಚಿಸಿ ಸರ್ದಾರ್ ವಲ್ಲಭಬಾಯಿ ಪಟೇಲ್‌ರವರನ್ನು ಅಧ್ಯಕ್ಷರಾಗಿ ಮಾಡಿತು. ಆಗ ವಿವಿಧ ಉಪ ಸಮಿತಿಗಳು ರಚನೆಯಾದವು. ಇದರಲ್ಲಿ ಎರಡಕ್ಕೆ ಜವಾಹರ ಲಾಲ್ ನೆಹರೂ ಅಧ್ಯಕ್ಷರಾದರೆ, ಡಾ. ಅಂಬೇಡ್ಕರ್‌ರವರು ಕೇಂದ್ರ ಸಂವಿಧಾನ ಸಮಿತಿಯ ಸದಸ್ಯರಾದರು. ಜವಾಹರ ಲಾಲ್ ನೆಹರೂರವರು 1947 ಜುಲ್ಯೆ 4ರಂದು ರಾಷ್ಟ್ರಪತಿಗೆ ಸಂವಿಧಾನ ರಚನೆ ಕುರಿತು ವರದಿ ಸಲ್ಲಿಸಿದರು. ನಡುವೆ ಮುಸ್ಲಿಂಲೀಗ್‌ನ ಒತ್ತಾಯದ ಮೇರೆಗೆ, ಭಾರತ ಮತ್ತು ಪಾಕಿಸ್ತಾನ 1947 ಅಗಸ್ಟ್‌ನಲ್ಲಿ ಇಬ್ಭಾಗವಾಯಿತು. ಭಾರತಕ್ಕೆ ಅಗಸ್ಟ್-15-1947ರಂದು ಸ್ವಾತಂತ್ರ್ಯ ಲಭಿಸಿತು. ನೆಹರೂ ಪ್ರಥಮ ಪ್ರಧಾನಿಯಾದರು. ಸರ್ದಾರ್ ವಲ್ಲಭಬಾಯಿ ಪಟೇಲ್ ಉಪ ಪ್ರಧಾನಿ ಮತ್ತು ಗೃಹ ಮಂತ್ರಿಯಾದರು. ಡಾ. ಅಂಬೇಡ್ಕರ್‌ರವರು 1947 ಅಗಸ್ಟ್ 15ರಂದು ಪ್ರಥಮ ಕಾನೂನು ಮಂತ್ರಿಯಾದರು. ಅದೇ ಅಗಸ್ಟ್ 29ರಂದು ಸಂಸತ್ತು ಡಾ. ಅಂಬೇಡ್ಕರ್‌ರವರನ್ನು ಸಂವಿಧಾನ ಕರಡು ರಚನಾ ಸಮಿತಿಯ ಸದ್ಯರಾಗಿ ಸರ್ವಾನುಮತದಿಂದ ಆರಿಸಿತು.

ಸ್ವಾತಂತ್ರ್ಯ ಪೂರ್ವದಿಂದಲೂ ವಿಭಿನ್ನ ಭಾಷೆ, ಜಾತಿ, ಧರ್ಮ, ಸಂಸ್ಕೃತಿ ಹೊಂದಿರುವ ಭಾರತ ದೇಶದ ಪರಿಸ್ಥಿತಿಯ ಹಿನ್ನೋಟ ಮತ್ತು ಮುನ್ನೋಟ ಎಲ್ಲವನ್ನು ಅರಿತಿದ್ದ ಡಾ. ಅಂಬೇಡ್ಕರ್‌ರವರು ಪ್ರಮುಖವಾಗಿ 1909ರ ಮಾರ್ಲೋಮಿಂಟೋ ಸುಧಾರಣೆಗಳು, 1919 ಮತ್ತು 1935ರ ಭಾರತ ಸರಕಾರದ ಅಧಿನಿಯಮಗಳನ್ನು ಅವಲೋಕಿಸಿ ವಿವಿಧತೆಯಲ್ಲಿ ಏಕತೆ ಕಾಣಲು ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಎಂದು ಸಾರುವ ತತ್ವದಡಿ ‘ಪ್ರಜೆಗಳು ಪ್ರಭುಗಳು’ ಎಂಬ ಪ್ರಜೆಗಳೇ ಪರಮಾಧಿಕಾರ ಹೊಂದುವ ‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ’ ಇರುವ ಸರಕಾರವನ್ನು ಭಾರತದಲ್ಲಿ ಸ್ಥಾಪಿಸಲು ಮತ್ತು ನಾಗರಿಕರಿಗೆ ಆತ್ಮ ಗೌರವವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಸ್ತ್ರೀ, ಪುರುಷರೆಲ್ಲರೂ ಸಮಾನರು ಎಂದು ಹೇಳುವ ಮೂಲಭೂತ ಹಕ್ಕುಗಳನ್ನು ಸಮರ್ಪಕವಾಗಿ ನೀಡುವ ಉತ್ತಮ ಶಕ್ತಿಯುತ ಸಂವಿಧಾನವನ್ನು ರಚಿುವ ಕಾರ್ಯದಲ್ಲಿ ತೊಡಗಿಕೊಂಡರು.

ಸಂವಿಧಾನ ತಯಾರಿಸುವ ಬಹುದೊಡ್ಡ ಕೆಲಸದಲ್ಲಿ ಅವರು ಒಟ್ಟು 29 ಸಂವಿಧಾನ ರಚನಾ ಸಭೆಯ ಸದಸ್ಯರ 22 ವಿವಿಧ ಸಮಿತಿಗಳನ್ನು ರಚಿಸಿಕೊಂಡು ಕರಡು ಸಂವಿಧಾನ ರಚನಾ ಕಾರ್ಯ ಕೈಗೆತ್ತಿಕೊಂಡರು. ಕರಡು ಸಂವಿಧಾನ ಪರಿಶೀಲಿಸಲು ಡಾ. ಬಿ. ಆರ್. ಅಂಬೇಡ್ಕರ್, ಕೆ.ಎಂ. ಮುನ್ಸಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್. ಗೋಪಾಲಸ್ವಾಮಿ ಅಯ್ಯರ್, ಸೈಯದ್ ಮುಹಮ್ಮದ್ ಸಾದುಲ್ಲಾ, ಸರ್ ಬಿ.ಎಲ್. ಮಿಟ್ಟರ್, ಡಿ.ಪಿ. ಖ್ಯೆತಾನ್‌ರನ್ನು ನೇಮಿಸಲಾಯಿತು. ಆದರೆ, ಸಂವಿಧಾನ ಕರಡು ಪರಿಶೀಲನೆಗೆ ಆಯ್ಕೆಯಾದ 7 ಜನ ಸದಸ್ಯರಲ್ಲಿ ಒಬ್ಬರು ನಿಧನರಾದರು. ಇಬ್ಬರು ಅನಾರೋಗ್ಯದಿಂದ ದೂರ ಉಳಿದರು. ಇನ್ನೊಬ್ಬರು ಒಂದು ಸಭೆಗೂ ಬರಲಿಲ್ಲ! ಮಗದೊಬ್ಬರು ವಿದೇಶದಲ್ಲಿ ಉಳಿದುಕೊಂಡರು. ಕೆಲವರು ಸಂವಿಧಾನ ಪರಿಶೀಲನೆ ಬಗ್ಗೆ ಜವಾಬ್ದಾರಿ ವಹಿಸಲಿಲ್ಲ! ಕೊನೆಗೆ ಸಂವಿಧಾನ ರಚಿಸುವ ಕೆಲಸ ಡಾ. ಅಂಬೇಡ್ಕರ್ ಒಬ್ಬರ ಮೇಲೆ ಬಿತ್ತು. ಇಂತಹ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಕಿಂಚಿತ್ತೂ ಎದೆಗುಂದದೇ ಸಂವಿಧಾನ ರಚಿಸುವ ಕೆಲಸದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ತೊಡಗಿಕೊಂಡರು.

ಡಾ. ಅಂಬೇಡ್ಕರ್‌ರವರು ಬರೆದ ಸಂವಿಧಾನದ ಪ್ರಸ್ತಾವನೆಯಲ್ಲಿ ‘‘ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ‘ಸಮಾಜವಾದಿ’ ‘ಧರ್ಮನಿರಪೇಕ್ಷ’ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ, ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸಮಗ್ರತೆಗಾಗಿ, ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕಾಗಿ ಧೃಢಸಂಕಲ್ಪಮಾಡಿ, ವಿಚಾರದ, ವಿಶ್ವಾಸದ, ನಂಬಿಕೆಯ, ಆರಾಧನೆ ಹಾಗೂ ಅಭಿವ್ಯಕ್ತಿಗೊಳಿಸುವ ಸಮಾನತೆಯ ಸ್ಥಾನ ಮತ್ತು ಅವಕಾಶ ಹಾಗೂ ಈ ಭಾವನೆಗಳನ್ನು ಸಮಸ್ತರಲ್ಲಿ ಹರಡಲು, ಭ್ರಾತೃತ್ವವನ್ನು ವ್ಯಕ್ತಿ ಗೌರವದ ಮತ್ತು ರಾಷ್ಟ್ರದ ಐಕ್ಯತೆಯನ್ನು ಕಾಪಾಡುತ್ತೇವೆ’’ ಎಂಬ ಬಲಿಷ್ಠ ಪೀಠಿಕೆಯಿದೆ. ಇಂತಹ ಮಹತ್ತರವಾದ ಸಂವಿಧಾನವನ್ನು ಬರೆಯಲು ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್‌ರವರು 2 ವರ್ಷಗಳು, 11 ತಿಂಗಳು, 17 ದಿನಗಳನ್ನು ತೆಗೆದುಕೊಂಡು, 395 ಅನುಚ್ಛೇೀದಗಳನ್ನು, 12ಪರಿಚ್ಛೇದಗಳನ್ನು, 22 ಭಾಗಗಳನ್ನು, 6 ಪರಿಶಿಷ್ಟಗಳನ್ನು ರಚಿಸಿ ಫೆಬ್ರವರಿ 08, 1949ರಂದು ಸಂವಿಧಾನ ರಚನಾ ಸಮಿತಿಗೆ ಸಲ್ಲಿಸಿದರು. ಸುಮಾರು 8 ತಿಂಗಳುಗಳ ಕಾಲ ಸಂವಿಧಾನ ಸಾರ್ವಜನಿಕರ ಮತ್ತು ರಾಷ್ಟ್ರದ ಚಿಂತಕರ ಚರ್ಚೆಯಲ್ಲಿತ್ತು. ಆಗ ಸಂವಿಧಾನ ವಿಮರ್ಶಕರು, ಸಂವಿಧಾನ ಪ್ರಿಯರು, ವಿರೋಧಿಗಳು ಎಲ್ಲರೂ ಅಗತ್ಯಕಿಂತ ಹೆಚ್ಚು ಸಮಯ ತೆಗೆದುಕೊಂಡು ಸಂವಿಧಾನವನ್ನು ಒಪ್ಪಿದ್ದರು. ಸಂವಿಧಾನ ಜಾರಿಯಾಗುವುದಕ್ಕೂ ಮೊದಲು ಅನೇಕ ಸಲಹೆಗಳನ್ನು ಪಡೆದುಕೊಂಡು ಒಟ್ಟು 7,635 ತಿದ್ದುಪಡಿಗಳನ್ನು ಮಾಡಿ ನಂತರ ಅಂಗೀಕರಿಸಿ ಚರ್ಚಿಸಲಾಯಿತು. ಇದಕ್ಕಾಗಿ ಒಟ್ಟು 165 ದಿನಗಳು, 11 ಅಧಿವೇಶನಗಳು ಬೇಕಾಯಿತು. ನಂತರ 1949-ನವೆಂಬರ್-26ರಂದು ಡಾ. ಅಂಬೇಡ್ಕರ್ ರವರು ಸಂವಿಧಾನವನ್ನು ಸಂಸತ್ತಿಗೆ ಸಮರ್ಪಿಸಿದರು. ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತು.

ಭಾರತಕ್ಕೆ ವಿಶ್ವದಲ್ಲೇ ಅತ್ಯುತ್ತಮವಾದ ಸಂವಿಧಾನ ನೀಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರನ್ನು ಪ್ರಧಾನ ಮಂತ್ರಿ ಜವಹಾರಲಾಲ್ ನೆಹರೂ, ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ, ಮಿ.ಪ್ರಾಂಕ್ ಅಂತೋಣಿ, ಕೃಷ್ಣಚಂದ್ರ ಶರ್ಮಾ, ಟಿ.ಟಿ. ಕೃಷ್ಣಮಾಚಾರಿ, ಗಾಡ್ಗಿಲ್ ಮುಂತಾದ ಗಣ್ಯರು ಒಪ್ಪಿಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಡಾ. ಅಂಬೇಡ್ಕರ್‌ರವರ ಪರಿಶ್ರಮವು ದೇಶಕ್ಕೆ ನೀಡಿದ ಅಪಾರ ಕೊಡುಗೆ ಎಂದು ಹೇಳಿದ್ದಾರೆ. ಸಂವಿಧಾನ ಕುರಿತು ಡಾ. ಅಂಬೇಡ್ಕರ್‌ರವರು ‘‘ನಮ್ಮ ಸಂವಿಧಾನವು ಎಲ್ಲ ಕಾಲದಲ್ಲೂ ಆಡಳಿತ ನಡೆಸಲು ಬಲಿಷ್ಠವಾಗಿದೆ. ಒಂದು ವೇಳೆ ಪರಿಸ್ಥಿತಿ ಕೈ ಮೀರಿ ಹದಗೆಟ್ಟು ಹೋದಲ್ಲಿ ಅದರರ್ಥ ನಮಗೆ ಕೆಟ್ಟ ಸಂವಿಧಾನ ಇದೆಯೆಂದಲ್ಲ, ಸಂವಿಧಾನ ಕೆಟ್ಟ ಮನುಷ್ಯನ (ಆಳ್ವಿಕೆ ನಡೆಸುವವರ) ಕ್ಯೆಯಲ್ಲಿದೆಯಂದರ್ಥ’’ ಎಂದು ಹೇಳುತ್ತಾರೆ. ನಾವು ಭಾರತೀಯರು ಎಂದು ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ಸಂವಿಧಾನವು 1950ರ ಜನವರಿ 26ರಂದು ಸಂಸತ್ತಿನಲ್ಲಿ ಅಂಗೀಕಾರವಾಗಿ ಭಾರತವು ಅಂದಿನಿಂದ ಗಣರಾಜ್ಯವಾಯಿತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top