ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರವಾದ, ಸಂವಿಧಾನ ಹೀಗೆಲ್ಲ... | Vartha Bharati- ವಾರ್ತಾ ಭಾರತಿ

ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರವಾದ, ಸಂವಿಧಾನ ಹೀಗೆಲ್ಲ...

ಭಾರತದಲ್ಲಿ ಯಾವ ಭಿನ್ನವಾದವೂ ನಿಲ್ಲದು. ಅವು ಒಂದು ಹಂತದಲ್ಲಿ ರಾಜಕೀಯದ, ಅಧಿಕಾರದ ಮುನ್ನಡೆ-ಹಿನ್ನಡೆಗೆ ಸಹಕಾರಿಯಾಗಬಹುದೇ ಹೊರತು ಶಾಶ್ವತ ಮೌಲ್ಯಗಳಾಗಲು ಸಾಧ್ಯವಿಲ್ಲ. ಯಾವುದೇ ನಡೆಯೂ ಪರಸ್ಪರ ಗೌರವದ ಭಾವದಲ್ಲಿ, ಮೇಲು-ಕೀಳಿಲ್ಲದ ಸೌಹಾರ್ದ ಸಪಾಟುನೆಲೆಯಲ್ಲಿ ಇರಬೇಕಾದ್ದು ಮತ್ತು ಅದು ಸಂವಿಧಾನದ ಚೌಕಟ್ಟಿನಲ್ಲಿ ನಡೆಯಬೇಕೆಂಬ ಕನಿಷ್ಠ ಔದಾರ್ಯ ಎಲ್ಲರಿಗೂ ಅದರಲ್ಲೂ ಚರಿತ್ರೆಯನ್ನು ಮರೆತು ಅಧಿಕಾರಕ್ಕಾಗಿಯೇ ಕಚ್ಚಾಡುವ ರಾಜಕೀಯ ಪಕ್ಷಗಳಿಗಂತೂ ಇರಬೇಕು.


ದೇಶದ ನಂಬಿಕೆಯೋ ಮೂಢ ನಂಬಿಕೆಯೋ ಗೊತ್ತಿಲ್ಲ, ಎಲ್ಲವೂ ಮಂಗಳಕರವಾಗಿ ಮುಗಿಯುತ್ತದೆಯೆಂದು ಜನರು ನಂಬುತ್ತಾರೆ. ಎಲ್ಲವೂ ಚೆನ್ನಾಗಿದೆ ಎಂಬುದು ಬೇರೆ; ಎಲ್ಲವೂ ಚೆನ್ನಾಗಿರಲಿ ಎಂಬುದು ಬೇರೆ. ಒಂದು ಅನುಕೂಲಶಾಸ್ತ್ರ; ಇನ್ನೊಂದು ಆದರ್ಶದ ಆಶಯ. ನಮ್ಮ ಸಿನೆಮಾಗಳು ದುರಂತದಲ್ಲಿ ಕೊನೆಗೊಳ್ಳುವ ಕಥಾವಸ್ತುವನ್ನು ಹೊಂದಿದರೂ ಅಂತ್ಯದಲ್ಲಿ ‘ಶುಭಂ’ ಎಂಬ ಫಲಕವನ್ನು ಕಾಣಿಸುವುದನ್ನು ಮರೆಯುವುದಿಲ್ಲ. ಪ್ರಾಯಃ ಮನುಷ್ಯನ ನಶ್ವರ ಬದುಕು ಅರ್ಥಪೂರ್ಣವಾಗುವುದು ಹೀಗೆಯೇ. ಇಲ್ಲದಿದ್ದರೆ ಮಗು ಹುಟ್ಟಿದಾಗ ಮೈಲುಗಟ್ಟಲೆ ಬದುಕಿನ ಕನಸನ್ನು ಆನಂದಿಸುವುದನ್ನು ಬಿಟ್ಟು ಒಂದಲ್ಲ ಒಂದು ದಿನ ಇದು ಸತ್ತುಹೋಗುತ್ತದಲ್ಲಾ ಎಂಬ ಅವಿವೇಕ ದುಃಖ ಅನಿವಾರ್ಯವಾದೀತು. ನವೆಂಬರ್ 26 ಭಾರತವು ಸಂವಿಧಾನ ದಿನಾಚರಣೆಯನ್ನು ಆಚರಿಸಿ ಕೊಂಡು ಬರುವ ದಿನ. ಅಗಸ್ಟ್ 15, 1947ರಂದು ಈ ದೇಶ ಸ್ವಾತಂತ್ರ್ಯವನ್ನು ಪಡೆಯಿತಾದರೂ ಮುಂದಿನ ನಡೆಗೆ ಒಂದಷ್ಟು ಕಾಲಮಾನ ಬೇಕಾಯಿತು. 1949ರ ಈ ದಿನ ಡಾ ಅಂಬೇಡ್ಕರ್ ನೇತೃತ್ವದ ಸಂವಿಧಾನ ಸಮಿತಿಯು ‘ಸಂವಿಧಾನ’ವೆಂಬ ಸ್ವಯಮಾಡಳಿತದ ರೂಪುರೇಷೆಯನ್ನು ಸಿದ್ಧಗೊಳಿಸಿದ ದಿನ. ಇದು ಮುಂದೆ 1950ರ ಜನವರಿ 26ರಂದು ಜಾರಿಗೆ ಬಂದು ಅದನ್ನು ಗಣರಾಜ್ಯೋತ್ಸವವೆಂದು ಆಚರಣೆಗೆ ತರಲಾಯಿತು.

ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವಗಳನ್ನು ಈ ದೇಶದ 2 ಪ್ರಮುಖ ದಿನಗಳನ್ನಾಗಿ ಕಾಣುವ ಭಾರತದಲ್ಲಿ ನವೆಂಬರ್ 26 ಅಷ್ಟು ಪ್ರಾಮುಖ್ಯತೆಯನ್ನು ಪಡೆಯಲಿಲ್ಲ. 2015ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಲು ಭಾರತ ಸರಕಾರವು ನಿರ್ಧರಿಸಿತು. ಎಲ್ಲ ಆಚರಣೆಗಳಿಗೂ ರಾಜಕೀಯ ಹಿನ್ನೆಲೆಯಿದ್ದರೂ ಇದೊಂದು ದಿನವನ್ನು ಸ್ವಾತಂತ್ರ್ಯೋತ್ಸವ ಗಣರಾಜ್ಯೋತ್ಸವ ಮತ್ತು ಗಾಂಧಿ ಜಯಂತಿಗಳಂತೆ ರಾಜಕೀಯರಹಿತವಾಗಿ ಆಚರಿಸುವುದು ದೇಶದ ಹಿತ. ಯಾವುದೇ ರಾಷ್ಟ್ರಕ್ಕೂ ತನ್ನ ಸಂವಿಧಾನಕ್ಕಿಂತ ಪವಿತ್ರ ಮತ್ತು ಉನ್ನತ ಗ್ರಂಥ ಮತ್ತು ವಿಚಾರ ಬೇರೊಂದಿರಲಿಕ್ಕಿಲ್ಲ; ಇರಬಾರದು. ವೈಯಕ್ತಿಕವಾಗಿ ನಾವು ಯಾವುದೇ ಕೃತಿಯನ್ನು, ವಿಚಾರವನ್ನು ನಮ್ಮ ಹೃದಯಗಳಿಗೆ ಆಪ್ತವಾಗಿಟ್ಟು ಕೊಂಡಾಗಲೂ ಸಮೂಹವಾಗಿ, ಸಮಾಜವಾಗಿ ದೇಶದ ಸಂವಿಧಾನವು ನಮ್ಮನ್ನು ಕಾಯುವ ಶಕ್ತಿಯಾಗಿದೆಯೆಂಬುದನ್ನು ಮರೆಯಬಾರದು. ಅದು ರಾಜಕೀಯ ಪ್ರಜ್ಞೆಯಲ್ಲ. ಅದು ಸಮೂಹ ಪ್ರಜ್ಞೆ; ಸಾಮಾಜಿಕ ಪ್ರಜ್ಞೆ. ಇಷ್ಟೇ ಅಲ್ಲ, ಅದನ್ನು ರಚಿಸಲು ದೇಶದ ಮಹಾನುಭಾವರು, ಚರಿತ್ರಾರ್ಹರು, ಪ್ರಾತಃಸ್ಮರಣೀಯರು ಎಷ್ಟು ಕಷ್ಟಪಟ್ಟಿದ್ದಾರೆಂಬುದನ್ನು ಮನದಟ್ಟುಮಾಡಿಕೊಂಡವರು ಸಂವಿಧಾನಕ್ಕೆ ಯಾವರೀತಿಯ ಅಪಚಾರವನ್ನೂ ಮಾಡಲಾರರು. ಸಂವಿಧಾನ ಸಮಿತಿ ಅಧ್ಯಕ್ಷರಾಗಿದ್ದ ಡಾ ಅಂಬೇಡ್ಕರ್ ಅವರು ದೇಶದ ಕಾನೂನು ಮಂತ್ರಿಯೂ ಆಗಿದ್ದರು. ಸಂಸತ್ತಿನಲ್ಲಿ ಕೇಳಲಾದ ಒಂದು ಪ್ರಶ್ನೆಗೆ ಉತ್ತರಿಸುವ ಸಲುವಾಗಿ ಅವರು ಇಡೀ ರಾತ್ರಿಯನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಕಳೆದಿದ್ದರೆಂಬುದನ್ನು ಮತ್ತು ಮಾರನೇ ದಿನ ಅದಕ್ಕೆ ಸ್ಪಷ್ಟ ಉತ್ತರವನ್ನು ನೀಡಿದರೆಂಬುದನ್ನು ದಾಖಲಿಸಲಾಗಿದೆ.

ಇಂದು ಹಾಗಿಲ್ಲ; ಈಗಾಗಲೇ ಸಂವಿಧಾನವು ದುಶ್ಶಾಃಸನರ ಕೈಯಲ್ಲಿ ಮಹಾಭಾರತದ ದ್ರೌಪದಿಯಂತೆ ವಸ್ತ್ರಾಪಹಾರ ಯತ್ನಕ್ಕೊಳಗಾಗಿದೆ. ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉಡಾಫೆ ಉತ್ತರವನ್ನು ನೀಡಿಯೂ ಪಾರಾಗಬಹು ದೆಂಬುದು ಮತ್ತು ಸಂಖ್ಯಾಬಲದ ಶಕ್ತಿಪ್ರದರ್ಶನದಲ್ಲೇ ಸತ್ಯವನ್ನು ಸಾಬೀತು ಮಾಡುತ್ತಾರೆಂಬುದು ಕಹಿಸತ್ಯವಾಗಿದೆ. ಇಂತಹ ಸಂದರ್ಭಗಳಲ್ಲೆಲ್ಲ ಕೃಷ್ಣನಂತೆ ಅಕ್ಷಯಾಂಬರವನ್ನಲ್ಲದಿದ್ದರೂ ಮಾನಮುಚ್ಚಿಕೊಳ್ಳುವಷ್ಟು ಬಟ್ಟೆಯನ್ನು ನೀಡಿ ರಕ್ಷಿಸಿದೆ.

ಜರ್ನಲ್ ಆಫ್ ಏಶ್ಯನ್ ಸ್ಟಡೀಸ್‌ನ 1997ರ ಮೇ ಸಂಚಿಕೆಯಲ್ಲಿ ಕೋಮು ವಿವಾದಗಳು ಮತ್ತು ಭಾರತದ ಸ್ಥಿತಿಗತಿಯ ಕುರಿತ ವಿಚಾರ ಸಂಕಿರಣದ ಪ್ರಬಂಧಗಳನ್ನು ಪ್ರಕಟಿಸಿತು. ‘‘ಪ್ರಜಾಪ್ರಭುತ್ವಗಳು ಕೋಮು ರಾಷ್ರೀಯತೆಯನ್ನು ಸಹಿಸಿಕೊಳ್ಳಬಲ್ಲವೇ?’’ ‘‘ಸ್ವನಿರ್ಣಯ ಚಳವಳಿಗಳ ಏಳು ಬೀಳುಗಳು’’, ‘‘ಸಮಾಜ, ವಾಸ್ತವತೆ ಮತ್ತು ಸ್ವಾಯತ್ತೆ: ಈಶಾನ್ಯ ಭಾರತದಲ್ಲಿ ಆಕ್ರಮಣ ಮತ್ತು ಸಾಂಸ್ಥಿಕ ಬೆಳವಣಿಗೆ’’, ‘‘ಶಿವಸೇನೆಯ ಪುನರ್ಜನ್ಮ: ಸಾಂಸ್ಥಿಕ ಶಕ್ತಿ ಮತ್ತು ತಾರ್ಕಿಕ ನಿಲುವುಗಳ ಸಂಬಂಧ’’, ‘‘ಸಾಮಾಜಿಕ ಸಂಘರ್ಷಗಳು ಮತ್ತು ಭಾರತ ರಾಷ್ಟ್ರದ ಕುರಿತ ಚಿಂತನೆ’’ ಮುಂತಾದ ವಿವರಗಳು ಚರ್ಚೆಗೊಂಡವು. ಅದರಲ್ಲಿ ಪ್ರಕಟವಾದ ಲೇಖನಗಳು ಇಂದಿಗೂ ಪ್ರಸ್ತುತ ಮಾತ್ರವಲ್ಲ ಇಂದಿನ ರಾಜಕೀಯ ನಡೆಯನ್ನು ಅಂದೇ ಗುರುತಿಸಿದವೇ ಎಂದು ಕಾಣುವಂತಿದೆ.

ಆದರೆ ಭಾರತದ ವಿಶಿಷ್ಟ ಸಾಮಾಜಿಕ ಪರಿಕಲ್ಪನೆಯಲ್ಲಿ ಜಾತಿ, ಮತ, ಧರ್ಮ, ಸಮಾಜ, ಜನಾಂಗ ಇವು ಸೃಷ್ಟಿಸಬಹುದಾದ ಗೊಂದಲದಲ್ಲಿ ಯಾವುದನ್ನೂ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. (ಗ್ರಾಮೀಣ ಭಾರತದಲ್ಲೇ ಭಾರತವು ಬದುಕುತ್ತಿದೆ. ಆದ್ದರಿಂದಲೇ ಈ ವೈವಿಧ್ಯ; ವೈಶಿಷ್ಟ್ಯ. ಈ ಸತ್ಯವಾಕ್ಯವು ಕ್ಲೀಷೆಯಾಗುವುದು ಅನಿವಾರ್ಯ. ಸತ್ಯವೆಂಬ ಪದವೇ ಕ್ಲೀಷೆ.) ಈ ಕುರಿತು ರಾಬರ್ಟ್ ಡಿ.ಕಿಂಗ್ ಎಂಬ ಪಾಶ್ಚಾತ್ಯ ಸಮಾಜಶಾಸ್ತ್ರಜ್ಞನು ತನ್ನ ಅಭಿಪ್ರಾಯವನ್ನು ಕ್ರೋಡೀಕರಿಸಿ ಬರೆದಿದ್ದಾನೆ. ಅವನ ಅಭಿಪ್ರಾಯದಂತೆ ಭಾರತದ ಈ ವೈಶಿಷ್ಟ್ಯಗಳೇ, ಗೊಂದಲಗಳೇ ಅದು ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಲು ಶಕ್ತವಾಯಿತು. ಅವನು ತನ್ನ ಅಭಿಪ್ರಾಯವನ್ನು ಸಮರ್ಥಿಸಲು ಸ್ವತಂತ್ರ ಭಾರತದ ಹಲವು ಉದಾಹರಣೆಗಳನ್ನು ನೀಡುತ್ತಾನೆ. ಬೌದ್ಧಿಕಚಿಂತಕರಿಗೆ ಬೆಳಕಿಗಿಂತ ಕತ್ತಲೇ ಹೆಚ್ಚು ಕಾಣಿಸುತ್ತಿದೆಯೆಂಬ ಟೀಕೆಯೂ ಇದೆ! ಇದನ್ನು ಆತನು ಅವನತಿಯ ಮೌಲ್ಯಮಾಪನವೆಂದು ಬಣ್ಣಿಸುತ್ತಾನೆ. ನಮ್ಮ ವ್ಯವಸ್ಥೆಗಳಲ್ಲಿರುವ ಅಷ್ಟೂ ಲೋಪದೋಷಗಳ ಹೊರತಾಗಿಯೂ (ಇವುಗಳಲ್ಲಿ ಆರ್ಥಿಕ ಅಸಮಾನತೆ, ಜಾತಿಕಾರಣವಾದ ತಾರತಮ್ಯ ಇವೆಲ್ಲ ಸೇರಿದೆ) ನಾವು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಕುರಿತು ಹೆಮ್ಮೆಪಡಬಹುದಾಗಿದೆ. ಈ ಪ್ರವೃತ್ತಿಯನ್ನು ಉತ್ತರ ಐರ್‌ಲ್ಯಾಂಡ್, ಅಮೆರಿಕ ಮತ್ತು ಇನ್ನೂ ಸ್ಪಷ್ಟವಾಗಿ ಭಾರತದಲ್ಲಿ ಕಾಣಬಹುದಾಗಿದೆಯೆಂದು ಆತನು ವಿವರಿಸುತ್ತಾನೆ. ನಮ್ಮ ಚಿಂತನೆಯಲ್ಲಿ ಎಷ್ಟೇ ನೇತ್ಯಾತ್ಮಕ ಅಂಶಗಳಿದ್ದರೂ (ಅವನ್ನು ವಾಸ್ತವತೆಯೆಂದು ನಾವು ಕರೆದರೂ) ಅವುಗಳನ್ನು ಮೀರಿ ಈ ದೇಶವು ತನ್ನ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮೈಕೊಡವಿ ಮೇಲೆದ್ದುಕೊಳ್ಳುತ್ತಿದೆ. ಇದಕ್ಕೆ ಆತನು ನೀಡುವ ಉದಾಹರಣೆಗಳು ಸರ್ವೇಸಾಮಾನ್ಯವಾಗಿ ನಾವೆಲ್ಲ ತಿಳಿದವುಗಳೇ ಆಗಿದ್ದರೂ ಆತನ ಚಿಂತನೆಗೆ ಒಂದು ಸಮಗ್ರತೆಯನ್ನು ನೀಡುವ ಉದ್ದೇಶದಿಂದ ಇಲ್ಲಿ ಸಾಂದರ್ಭಿಕವಾಗಿ ಉಲ್ಲೇಖಿಸಲಾಗಿದೆ.

ಭಾರತದಷ್ಟು ಜಾತಿ, ಜನಾಂಗ ಮತ್ತು ಒಳತೋಟಿಗಳನ್ನು ಹೊಂದಿದ ದೇಶಕ್ಕೆ ವಿಶ್ವದ ಅತೀದೊಡ್ಡ ಪ್ರಜಾತಂತ್ರವೆಂಬ ಬಿರುದಿದ್ದರೂ ಅದು ಈ ಹೆಗ್ಗಳಿಕೆಯನ್ನು ಉಳಿಸಿಕೊಂಡದ್ದೇ ಅದರ ಶಕ್ತಿ. ಇನ್ಯಾವುದೇ ದೇಶವಾಗಿದ್ದರೂ ಈ ಸಂಘರ್ಷಗಳನ್ನು ತಡೆಯಲಾರದೆ ಇಷ್ಟರಲ್ಲಿ ಮಿಲಿಟರಿಯ ಅಥವಾ ಇನ್ಯಾವುದೇ ಮಹತ್ವಾಕಾಂಕ್ಷೆಯ ಸರ್ವಾಧಿಕಾರಕ್ಕೆ ಒಳಗಾಗುತ್ತಿತ್ತು. 1975ರಲ್ಲಿ ಭಾರತವು ಈ ಸರ್ವಾಧಿಕಾರದ ಬಹು ಸಮೀಪಕ್ಕೆ ಬಂದರೂ ಅದು ಕೇವಲ 18 ತಿಂಗಳುಗಳಲ್ಲಿ ಹೊರಬಂದ ಪವಾಡ ಭಾರತದಷ್ಟು ವಿಶಿಷ್ಟ, ವಿಶಾಲ, ಬೃಹತ್ ಭೂಭಾಗವನ್ನು ಹೊಂದಿದ ಅದರಲ್ಲೂ ಸಾಮ್ರಾಜ್ಯಶಾಹಿ, ವಸಾಹತುಶಾಹಿ ಇತಿಹಾಸವನ್ನು ಹೊಂದಿದ ವಿಶ್ವದ ಇನ್ಯಾವ ದೇಶದಲ್ಲೂ ನಡೆಯಲಾರದು. ಭಾರತವು ತನ್ನೆಲ್ಲ ಪಾರತಂತ್ರ್ಯ ಹಿಂಸೆ ಮತ್ತು ದಮನಿಕೆಯನ್ನು ಅನುಭವಿಸಿಯೂ ತನ್ನನ್ನು ವಸಾಹತುಶಾಹಿ ಗುಲಾಮಗಿರಿಗೆ ತಳ್ಳಿದ ಬ್ರಿಟನ್, ಫ್ರಾನ್ಸ್, ಡಚ್ ಮತ್ತು ಪೋರ್ಚುಗೀಸ್ ಸರಕಾರಗಳೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದೆ. ಬ್ರಿಟಿಷ್ ಬಳುವಳಿಯಾದ ಕ್ರಿಕೆಟ್ ಇಂದು ಭಾರತದ ರಾಷ್ಟ್ರೀಯ ಕ್ರೀಡೆಯೆನ್ನುವಷ್ಟು ಜನಪ್ರಿಯವಾಗಿದೆ.

ಈ ಕುರಿತು ಇತರ ಯಾವುದೇ ದೇಶವಾದರೂ ತಿರಸ್ಕಾರಭಾವವನ್ನು ಹೊಂದಬಹುದಾಗಿತ್ತು. (ಕ್ರಿಕೆಟ್ ಪ್ರೇಮವು ವಸಾಹತುಶಾಹಿ ಏಶ್ಯನ್ ದೇಶಗಳ ಸಾಮಾನ್ಯ ಲಕ್ಷಣ ಇದು ಎಂಬುದನ್ನು ಆತ ಪ್ರಸ್ತಾವಿಸಬಹುದಿತ್ತು!) ಇದು ಸಾಮಾನ್ಯ ನಡೆಯಲ್ಲ. ಭಾರತದ ಯಾವುದೇ ನಗರವೂ ಅಮೆರಿಕದ ನಗರಗಳಿಗಿಂತ ಸುರಕ್ಷಿತವಾಗಿವೆ. (ಮಧ್ಯಪೂರ್ವ ದೇಶಗಳಲ್ಲಿ ನಮಗಿಂತಲೂ ಹೆಚ್ಚಿನ ರಕ್ಷಣೆಯಿದೆ!) ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಅದರ ಬಹುಭಾಷೆಗಳು ಅದರ ಐಕ್ಯಕ್ಕೆ ಅಡ್ಡಿಮಾಡಬಹುದೆಂಬ ಶಂಕೆಯಿತ್ತು. ಆದರೆ ಭಾರತವು ಅದನ್ನು ಮೀರಿ ಬೆಳೆದಿದೆ. ಹಿಂದಿ ಭಾಷಾಹೇರಿಕೆ ಎದುರಾದಾಗಲೆಲ್ಲ ಪ್ರತಿಭಟನೆಯೆದ್ದರೂ ಸಮಸ್ಯೆ ಪರಿಹಾರವಾದ ತಕ್ಷಣ ಸಮಾಜ ಸಹಜವಾಗಿ ಮುಂದುವರಿದಿದೆ. ರಾಷ್ಟ್ರಕಲ್ಪನೆಯ ದೃಷ್ಟಿಯಿಂದ ಸ್ವಿಟ್ಸರ್‌ಲ್ಯಾಂಡ್ ಅತ್ಯಂತ ಬಹುಮುಖಿ ಸಮಾಜವನ್ನು ಹೊಂದಿದರೂ ಅದು ಅನಾಕರ್ಷಕವೆಂದೂ ಭಾರತದಷ್ಟು ಜೀವಂತಿಕೆಯನ್ನು ಹೊಂದಿಲ್ಲವೆಂದೂ ಆತ ಹೇಳುತ್ತಾನೆ. ವೈವಿಧ್ಯದಲ್ಲಿ ಐಕ್ಯವನ್ನು ಭಾರತ ಹೇಳಿದಾಗ ಇದೊಂದು ಪಲಾಯನ ತಂತ್ರವೆಂದು ಬಣ್ಣಿಸಿದವರೂ ಇದ್ದರು. ಆದರೆ ನಮ್ಮ ಶಕ್ತಿಯಿರುವುದೇ ಈ ಭಿನ್ನತೆಯಲ್ಲಿ. ಅದಿಲ್ಲವಾದರೆ ನೂರಾರು ಅರಸೊತ್ತಿಗೆಗಳನ್ನು ಹೊಂದಿದ ಭಾರತವೆಂಬ ಈ ಭೂಭಾಗವು ಬ್ರಿಟಿಷ್ ಮತ್ತಿತರರಿಂದ ಮುಕ್ತಿಹೊಂದಲು ಒಟ್ಟಾಗಿ ಹೋರಾಡುವುದು ಸಾಧ್ಯವೇ ಇರಲಿಲ್ಲ.

ಯಾವುದೇ ಒಂದು ಜಾತಿಯ, ಮತದ, ಧರ್ಮದ ಜನರು ಈ ದೇಶದ ಸ್ವಾತಂತ್ರ್ಯವನ್ನು ಗಳಿಸಿದ್ದಲ್ಲ. ಎಲ್ಲರೂ ಒಟ್ಟಾಗಿ ಗಳಿಸಿದ ಈ ಸಂಪತ್ತನ್ನು ಯಾವುದೇ ಒಂದು ವರ್ಗ, ಸಮಾಜ, ಜನಾಂಗ, ಜಾತಿ-ಮತ-ಧರ್ಮದವರು ತಮ್ಮದೆಂದು ಹೇಳಲು ಸಾಧ್ಯವಿಲ್ಲ; ಅಥವಾ ತಾವೇ ಶ್ರೇಷ್ಠರು ಮತ್ತು ಇದು ತಮ್ಮದೇ ದೇಶ, ಇತರರು ಪರಕೀಯರು ಮತ್ತು ದ್ವಿತೀಯ ದರ್ಜೆಯ ಪ್ರಜೆಗಳು ಎಂದು ಹೇಳಲು ಇಲ್ಲಿ ಅವಕಾಶವಿಲ್ಲ. ಭಾರತ ರಾಷ್ಟ್ರೀಯತೆಯು ‘ಸರ್ವಧರ್ಮಾನ್ ಪರಿತ್ಯಜ್ಯ’ವಾಗುವ ವರೆಗೂ ಸರ್ವಧರ್ಮ ಸಮನ್ವಯತೆಯನ್ನು ಸಹಿಸಿಕೊಂಡು ಹೋಗುತ್ತದೆ. ದೇಶವು ಜಾತ್ಯತೀತವಾಗಬೇಕಾದ ಅಗತ್ಯ ಈ ದಿಕ್ಕಿನದ್ದು. ಅದನ್ನು ‘ಢೋಂಗಿ’ ಎಂದೂ ಇನ್ನೇನೋ ಹೆಸರಿನಲ್ಲಿ ಟೀಕಿಸುವುದು ಸುಲಭ. ಆದರೆ ಈ ದೇಶದ ಮೂಲಧಾತುವಿನ ಶಕ್ತಿಯನ್ನು ಕಡೆಗಣಿಸಿ ಮಾಡುವ ಯಾವುದೇ ಟೀಕೆಯೂ ಬಾಲಿಶವಾಗುತ್ತದೆ. ಅಯೋಧ್ಯೆಯ ಹಿಂಸೆಯನ್ನು ಆತ ಒಂದು ಅನಪೇಕ್ಷಿತ ವಿಚಿತ್ರ ಬೆಳವಣಿಗೆಯೆಂದು ಹೇಳುತ್ತಾನೆ. ಇದು ಸಾಮಾನ್ಯ ಭಾರತೀಯನ ಸಂಕಲ್ಪವಿರ ಲಿಕ್ಕಿಲ್ಲವೆಂದೂ ಒಂದು ಸಾಂಸ್ಥಿಕ ಮತ್ತು ರಾಜಕೀಯ ಬೆಳವಣಿಗೆಯೆಂದೂ ಆತ ಸರಿಯಾಗಿಯೇ ಊಹಿಸಿದ್ದ. ಡಬ್ಲ್ಯು.ಎಚ್. ಆಡೆನ್ ಹೇಳಿದ ‘‘ನಾವು ಪರಸ್ಪರ ಪ್ರೀತಿಸಬೇಕು ಇಲ್ಲವೇ ಸಾಯಬೇಕು’’ ಎಂಬ ಸಾಲುಗಳನ್ನು ಆತ ಉಲ್ಲೇಖಿಸುತ್ತಾನೆ.

ಬಹುಸಂಖ್ಯಾತ ಹಿಂದೂಗಳ ಮತ್ತು ಅಲ್ಪಸಂಖ್ಯಾತ ಮುಸ್ಲಿಮರ ನಡುವಣ ಮಹಾಯುದ್ಧವೆಂಬ ಬಣ್ಣನೆಗೆ ಒಳಗಾದ ಅಯೋಧ್ಯಾ ವಿವಾದದ ಕುರಿತು ಇತ್ತೀಚೆಗಿನ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಈ ದೇಶದ ಅಲ್ಪಸಂಖ್ಯಾತ ಮುಸ್ಲಿಮರು ಸ್ವೀಕರಿಸಿದ ರೀತಿಯನ್ನು ಗಮನಿಸಿದರೆ ತಾಳ್ಮೆಯ ಸಾಂಸ್ಕೃತಿಕ ಸಂಪನ್ನತೆಯನ್ನು ಗೌರವಿಸಲೇಬೇಕು. ಬಹುಸಂಖ್ಯಾತ, ಅಲ್ಪಸಂಖ್ಯಾತ ಎಂಬ ಪದಗಳೆಲ್ಲ ಸಾಂದರ್ಭಿಕವೇ ಹೊರತು ಶಾಶ್ವತವಲ್ಲ. ವರ್ಗ-ಜಾತಿವ್ಯವಸ್ಥೆಗೆ ಬಂದಾಗ ಈ ಪದಗಳ ಅರ್ಥ ಇನ್ನಷ್ಟು ಗೋಚರಿಸುತ್ತದೆ. ಹಿಂದೂಗಳಲ್ಲೇ ಎಷ್ಟೊಂದು ಜಾತಿಗಳು? ಇವರಲ್ಲಿ ಎಷ್ಟೊಂದು ಜನರು ತಮಗೆ ಮೀಸಲಾತಿ ಬೇಕೆಂದು ಕೇಳುತ್ತಿದ್ದಾರೆ! ಮುಸ್ಲಿಮರಲ್ಲೂ ಸುನ್ನಿ, ಶಿಯಾ ಹೀಗೆ ಹಲವು ಪಂಗಡಗಳು. ಸಮೀಕ್ಷಿಸಿದರೆ ಒಳಪಂಗಡಗಳಿಲ್ಲದ ಜಾತಿ-ಮತಗಳೇ ಭಾರತದಲ್ಲಿಲ್ಲ. ಯಾರು ಬಹುಸಂಖ್ಯಾತರು? ಯಾರು ಅಲ್ಪಸಂಖ್ಯಾತರು?

ಸ್ವತಂತ್ರ ಭಾರತವು 7 ದಶಕಗಳನ್ನು ಈ ಹಿನ್ನೆಲೆಯಲ್ಲಿ ದಾಟಿದೆ. ಮಹಾರಾಷ್ಟ್ರದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2019ರ ಸಂವಿಧಾನ ದಿನವು ಎಲ್ಲರೂ ನೆನಪಿಡುವಷ್ಟು ಪ್ರಮುಖವಾಗಿದೆ. ಸಂವಿಧಾನವು ಇಡೀ ದೇಶವನ್ನು ರಕ್ಷಿಸಿತೇ, ಒಂದು ರಾಜ್ಯವನ್ನು ರಕ್ಷಿಸಿತೇ ಅಥವಾ ಒಬ್ಬ ವ್ಯಕ್ತಿಯನ್ನು ರಕ್ಷಿಸಿತೇ ಎಂಬುದು ಮುಖ್ಯವೇ ಅಲ್ಲ. ಅಣುರೇಣುತೃಣಕಾಷ್ಟಗಳಲ್ಲಿಯೂ ಸಂವಿಧಾನದ ಭಗವಂತ ಒಂದಲ್ಲ ಒಂದು ರೂಪದಲ್ಲಿ ಇರುತ್ತದೆ. ಸಂವಿಧಾನವು ಎಲ್ಲರನ್ನೂ ಎಲ್ಲವನ್ನೂ ಗೌರವಿಸುತ್ತದೆ. ಅದು ಸಾಕಾರಗೊಂಡಾಗ ನ್ಯಾಯದ ಸಾಕ್ಷಾತ್ಕಾರವಾಗುತ್ತದೆ. 1947ರ ಅಗಸ್ಟ್ 15ರ ಮಧ್ಯರಾತ್ರಿ ಮಾಡಿದ ನೆಹರೂ ಅವರ ಭಾಷಣದ ಮೊದಲ ವಾಕ್ಯಗಳು ‘‘ಬಹು ಹಿಂದೆ ನಾವು ವಿಧಿಯೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡೆವು...’’ ಎಂಬುದು ನಿತ್ಯ ಜೀವನದ ಜೀವಾಳವಾಗಿರಬೇಕು.

 ಇಂತಹ ಭಾರತದಲ್ಲಿ ಯಾವ ಭಿನ್ನವಾದವೂ ನಿಲ್ಲದು. ಅವು ಒಂದು ಹಂತದಲ್ಲಿ ರಾಜಕೀಯದ, ಅಧಿಕಾರದ ಮುನ್ನಡೆ-ಹಿನ್ನಡೆಗೆ ಸಹಕಾರಿಯಾಗಬಹುದೇ ಹೊರತು ಶಾಶ್ವತ ಮೌಲ್ಯಗಳಾಗಲು ಸಾಧ್ಯವಿಲ್ಲ. ಯಾವುದೇ ನಡೆಯೂ ಪರಸ್ಪರ ಗೌರವದ ಭಾವದಲ್ಲಿ, ಮೇಲು-ಕೀಳಿಲ್ಲದ ಸೌಹಾರ್ದ ಸಪಾಟುನೆಲೆಯಲ್ಲಿ ಇರಬೇಕಾದ್ದು ಮತ್ತು ಅದು ಸಂವಿಧಾನದ ಚೌಕಟ್ಟಿನಲ್ಲಿ ನಡೆಯಬೇಕೆಂಬ ಕನಿಷ್ಠ ಔದಾರ್ಯ ಎಲ್ಲರಿಗೂ ಅದರಲ್ಲೂ ಚರಿತ್ರೆಯನ್ನು ಮರೆತು ಅಧಿಕಾರಕ್ಕಾಗಿಯೇ ಕಚ್ಚಾಡುವ ರಾಜಕೀಯ ಪಕ್ಷಗಳಿಗಂತೂ ಇರಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top