ಎರಡು ಪ್ರಕರಣಗಳು ಮತ್ತು ಇಬ್ಬಗೆಯ ನ್ಯಾಯ!

ಕಾಲ ಗತಿಸಿದಂತೆ ಘಟನಾವಳಿಗಳು ಗತಿಸಿ ಹೋಗುವುದು ಸಾಮಾನ್ಯ. ಸದಾ ಕಾಲ ತಾಜಾ ಸುದ್ದಿಗಳನ್ನೇ ಎದುರು ನೋಡುವ ಸಮಾಜ ಇತ್ತೀಚೆಗಷ್ಟೇ ಜರಗಿದ ಕೃತ್ಯಗಳನ್ನು ಈಗಾಗಲೇ ಮರೆತಂತಿದೆ. ಹೈದರಾಬಾದ್‌ನಲ್ಲಿ ಜರುಗಿದ ಪಶು ವೈದ್ಯೆ ದಿಶಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ದೇಶವನ್ನು ತಲ್ಲಣಗೊಳಿಸಿದೆ. ಉನ್ನಾವೊ ಸಂತ್ರಸ್ತೆಯು ನ್ಯಾಯಾಲಯಕ್ಕೆ ತೆರಳುವ ದಾರಿಯಲ್ಲಿ ದುಷ್ಕರ್ಮಿಗಳು ಅವರನ್ನು ಸಜೀವ ದಹನ ಮಾಡಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಪ್ರತಿನಿತ್ಯವೂ ಇಂತಹ ಪ್ರಕರಣಗಳು ಜರುಗುತ್ತಿರುವುದು ಜನರಲ್ಲಿ ಆತಂಕವನ್ನುಂಟುಮಾಡಿದೆ. ಈ ಪ್ರಕರಣವು ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಮತ್ತಷ್ಟು ಕೃತ್ಯಗಳು ವರದಿಯಾಗಿವೆ. ಸಮಾಜದಲ್ಲಿ ಎಂತಹ ಕಾನೂನುಗಳು ಜಾರಿ ಇದ್ದರೂ ಇಂತಹ ಕೃತ್ಯಗಳನ್ನು ತಹಬಂಧಿಗೆ ತರಲಾಗದಿರುವುದು ವ್ಯವಸ್ಥೆಯ ವಿಫಲವನ್ನು, ಸಮಾಜದ ಕ್ರೌರ್ಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ದಿಶಾ ಪ್ರಕರಣದಲ್ಲಿನ ನಾಲ್ವರು ಆರೋಪಿಗಳನ್ನು ಪೊಲೀಸ್ ಕಮಿಷನರ್ ವಿ.ಸಿ ಸಜ್ಜನರ್ ಎನ್‌ಕೌಂಟರ್ ಮಾಡಿದ್ದಾರೆ. ಇದಕ್ಕೆ ದೇಶದಾದ್ಯಂತ ಪರ-ವಿರೋಧಗಳು ವ್ಯಕ್ತವಾಗಿವೆ. ದೇಶದಲ್ಲಿನ ಪ್ರತಿಷ್ಠಿತ ನಟರು, ಕ್ರೀಡಾಪಟುಗಳು ಹಾಗೂ ಜನಸಾಮಾನ್ಯರು ದಿಶಾಳ ಹತ್ಯೆಗೈದವರನ್ನು ಶಿಕ್ಷಿಸಿದಾಗ ಅಭಿನಂದನೆಯ ಹೊಳೆಯನ್ನು ಹರಿಸಿದ್ದಾರೆ. ಇಲ್ಲಿ ನಾವು ಗ್ರಹಿಸಬೇಕಾದ್ದು ಏಕಕಾಲಕ್ಕೆ ಜರುಗಿದ ಎರಡು ಪ್ರಕರಣಗಳ ಬಗ್ಗೆ ಸಮಾಜದ ಜನರ ಸ್ಪಂದನೆಯನ್ನು. ಅಂದರೆ, ದಿಶಾ ಪ್ರಕರಣದಲ್ಲಿ ಸಮಾಜವು ತೋರಿದ ಕಾಳಜಿ ಉನ್ನಾವೊ ಸಂತ್ರಸ್ತೆಯ ವಿಚಾರದಲ್ಲಿ ತುಸು ಭಿನ್ನಾವಾಗಿ ವ್ಯಕ್ತವಾಗಿದೆ. ಸಮಾಜದ ಜನರು ಕಟ್ಟ ಕಡೆಯ ಸಮುದಾಯದ ಹೆಣ್ಣಿನ ನೋವಿಗೆ ಮಿಡಿಯುವಲ್ಲಿ ಏಕೆ ಭಿನ್ನವಾಗಿ ವರ್ತಿಸಿದೆ?. ಇದು ನಮ್ಮಿಳಗಿನ ನ್ಯೂನತೆಯನ್ನು, ಸಮಾಜದಲ್ಲಿನ ಅಸಮಾನ ಮನಸ್ಥಿತಿಯನ್ನು ತೋರುತ್ತದೆ. ಅಲ್ಲದೇ ಸಮಾಜದಲ್ಲಿನ ಕಂದಾಚಾರಗಳು ಪ್ರಜೆಗಳನ್ನು ತಪ್ಪುದಾರಿಗೆ ಕೊಂಡೊಯ್ಯುತ್ತಿವೆ.

 ಇಂತಹ ಪ್ರಕರಣಗಳು ಕಥುವಾ, ಉನ್ನಾವೊ, ಸೂರತ್, ಮಣಿಪುರ, ಕರ್ನಾಟಕ ಮತ್ತು ದಿಲ್ಲಿ ಇನ್ನೂ ಅನೇಕ ರಾಜ್ಯಗಳಲ್ಲಿ ಜರುಗಿವೆ. ಎಲ್ಲಾ ಪ್ರಕರಣಗಳಲ್ಲಿ ಹದಿಹರೆಯದ ವಯಸ್ಸಿನವರು ಬಲಿಯಾಗಿರುವುದು ನೋವಿನ ಸಂಗತಿ. ಅಲ್ಲದೆ, ಪ್ರತಿಯೊಂದು ಪ್ರಕರಣಗಳನ್ನು ಜಾತಿ, ಧರ್ಮದ ಆಧಾರದ ಮೇಲೆ ನೋಡುವುದು ಜಾತಿಗ್ರಸ್ತ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಸಮಾಜದಲ್ಲಿ ಘಟಿಸುತ್ತಿರುವ ಹೇಯ ಕೃತ್ಯಗಳಲ್ಲಿ ನಮ್ಮ ಧರ್ಮಗಳಲ್ಲಿನ ಕಂದಾಚಾರಗಳ ಪಾಲಿದೆ. ದೇಶದಲ್ಲಿನ ಮೂಲಭೂತವಾದಿ ಮನಸ್ಸುಗಳು ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಸಮಾಜದಲ್ಲಿ ಅಶಾಂತಿ, ಅಭದ್ರತೆಯ ವಾತಾವರಣವನ್ನು ಸೃಷ್ಟಿಸುತ್ತಿವೆ. ಜಾತಿ-ಜಾತಿಗಳ ನಡುವೆ ಕಂದಕವನ್ನುಂಟುಮಾಡುತ್ತಾ ಸಮಾಜದ ಸಹಬಾಳ್ವೆ ಜೀವನಕ್ಕೆ ಅಡ್ಡಿಪಡಿಸುತ್ತಿವೆ. ಧರ್ಮ ಮತ್ತು ಜಾತಿ ನಡುವಣ ಕಂದಕ ಮುಂದೆ ಕಲಹಕ್ಕೆ ಕಾರಣವಾಗುತ್ತದೆ. ಅದು ಅನ್ಯ ಧರ್ಮ, ಜಾತಿಯ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗುತ್ತಿವೆ. ದಿಶಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಬ್ರಿಗೇಡ್ ಮುಖ್ಯಸ್ಥ ತನ್ನ ಟ್ವಿಟರ್ ಖಾತೆಯಲ್ಲಿ ಆರೋಪಿಯೊಬ್ಬನ ಫೋಟೊವನ್ನು ‘‘ನನ್ನ ಹೆಸರು ಮುಹಮ್ಮದ್ ಪಾಷ, ನಾನೊಬ್ಬ ರೇಪಿಸ್ಟ್’’ ಎಂಬ ತಲೆಬರಹದೊಂದಿಗೆ ಶೇರ್ ಮಾಡಿದ್ದು ಎಲ್ಲರಿಗೂ ತಿಳಿದ ವಿಚಾರವೆ. ಹೀಗೆ ಸಮಾಜದಲ್ಲಿನ ಕಲುಷಿತ ಮನಸ್ಸುಗಳು ಪ್ರಕರಣವನ್ನು ಧರ್ಮ, ಜಾತಿಯ ಹೆಸರಿನಲ್ಲಿ ತಿರುಚುವ ಮೂಲಕ ಬೇರೊಂದು ರೂಪವನ್ನು ನೀಡುತ್ತವೆ. ಇಂತಹ ಕೃತ್ಯಗಳ ವಿಚಾರದಲ್ಲಿ ಯಾವುದೇ ಜಾತಿ, ಧರ್ಮ ಹಾಗೂ ವರ್ಗದ ಪೂರ್ವಗ್ರಹಗಳಿಗೆ ಒಳಗಾಗದೆ ಸ್ಪಂದಿಸುವ ಮನಸ್ಸನ್ನು ಸಮಾಜವು ಕಳೆದುಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಕರಿಯ ಜನಾಂಗದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾದಲ್ಲಿ ಅದು ಸರ್ವೇಸಾಮಾನ್ಯವೆಂಬಂತೆ ಕಾಣಲಾಗುತ್ತದೆ. ಹಾಗೆಯೇ, ಭಾರತದಲ್ಲೂ ಶೋಷಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಜರುಗುವ ಕೃತ್ಯಗಳನ್ನು ಸರ್ವೇಸಾಮಾನ್ಯವಾಗಿ ಕಾಣಲಾಗುತ್ತಿದೆ. ಇದು ಸಮಾಜದಲ್ಲಿ ಪಾಲಿಸಲಾಗುತ್ತಿರುವ ಸಾಂಪ್ರದಾಯಿಕ ನ್ಯಾಯ ಪದ್ಧತಿಗಳತ್ತ ಬೆಳಕು ಚೆಲ್ಲುತ್ತದೆ. ಅಂದರೆ ಹಣಬಲ, ಜನಬಲ ಹಾಗೂ ಜಾತಿಬಲವಿರುವವರಿಗೆ ಒಂದು ಬಗೆಯ ನ್ಯಾಯ ಹಾಗೂ ಇವುಗಳಿಂದ ವಂಚಿತರಾದವರಿಗೆ ಮತ್ತೊಂದು ನ್ಯಾಯವಿರುವುದನ್ನು ಸೂಚಿಸುತ್ತದೆ.

ಎರಡು ಪ್ರಕರಣಗಳನ್ನು ಸಮೀಕರಿಸಿ ನೋಡಿದಾಗ ನಮ್ಮ ಗ್ರಹಿಕೆಗೆ ಬರುವ ವಿಚಾರಗಳು ಹತ್ಯೆಗೀಡಾದವರು ಮತ್ತು ಹತ್ಯೆಗೈದವರ ಸಾಮಾಜಿಕ ಹಾಗೂ ಆರ್ಥಿಕ ಸ್ಥಾನಮಾನಗಳು. ಮೊದಲಿಗೆ ದಿಶಾ ಪ್ರಕರಣವನ್ನು ನೋಡಿದಾಗ ಆಕೆ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದವರು. ಅಲ್ಲದೆ, ಸಮಾಜದಲ್ಲಿ ಬಲಿಷ್ಠವೆನಿಸಿದ ಸಮುದಾಯಕ್ಕೆ ಸೇರಿದವರು. ಆದರೆ ಉನ್ನಾವೊ ಸಂತ್ರಸ್ತೆಯು ಬಲಿಷ್ಠವಲ್ಲದ ಸಮುದಾಯದಿಂದ ಬಂದಿದ್ದು, ಆಕೆಯ ಆರ್ಥಿಕ ಸ್ಥಿತಿಯು ಅಷ್ಟೊಂದು ಉತ್ತಮವಾಗಿಲ್ಲದಿರುವುದು ಕಾಣಬಹುದು. ದಿಶಾಳನ್ನು ಹತ್ಯೆಗೈದವರು ಸಾಮಾಜಿಕವಾಗಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯದವರಾಗಿದ್ದು, ಅವರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಉನ್ನಾವೊ ಪ್ರಕರಣದ ಅಪರಾಧಿಗಳು ಸಮಾಜದ ಪ್ರತಿಷ್ಠಿತ ಸಮುದಾಯದವರು, ಅವರ ಆರ್ಥಿಕ ಸ್ಥಿತಿಯು ಪ್ರಬಲವಾಗಿದೆ. ದಿಶಾ ಪ್ರಕರಣಕ್ಕೂ ಮೊದಲೇ ಉನ್ನಾವೊ ಪ್ರಕರಣ ಜರುಗಿದ್ದು ಅದಕ್ಕೆ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ವರ್ಷಗಳೇ ಬೇಕಾಯಿತು. ಪ್ರಕರಣದ ಅಪರಾಧಿಗಳು ತಮ್ಮಲ್ಲಿರುವ ಹಣ, ರಾಜಕೀಯ ಬಲ, ಜಾತಿಬಲಗಳನ್ನು ಬಳಸಿಕೊಂಡು ಪ್ರಕರಣದ ಮೇಲೆ ತಮ್ಮ ಹಿಡಿತ ಸಾಧಿಸಿದ್ದನ್ನು ಕಾಣಬಹುದು. ಅಲ್ಲದೇ ಇಂತಹ ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸ್ ವ್ಯವಸ್ಥೆ ತೋರಿದ ನಿರುತ್ಸಾಹ ಢಾಳಾಗಿ ವ್ಯಕ್ತವಾಗಿದೆ. ಸಂತ್ರಸ್ತೆ ಮತ್ತು ಅಪರಾಧಿಗಳ ನಡುವೆ ವೈವಾಹಿಕ ಒಪ್ಪಂದದ ವಿಚಾರಗಳನ್ನು ಪ್ರಸ್ತಾಪಿಸುವ ಮುಖೇನ ಪ್ರಕರಣವನ್ನು ಕದಲಿಸುವ ಪ್ರಯತ್ನಗಳು ಜರುಗಿವೆ. ರಾಜಕೀಯ ಶಕ್ತಿಗಳು ಸಂತ್ರಸ್ತೆಯ ಕುಟುಂಬಕ್ಕೆ ಹಣದ ಆಮಿಷವೊಡ್ಡಿ ಪ್ರಕರಣವನ್ನು ಮುಕ್ತಾಯ ಮಾಡಲೆತ್ನಿಸಿದ್ದಾರೆ. ಅಲ್ಲದೆ, ಸಮಾಜದಲ್ಲಿನ ಪ್ರತಿಷ್ಠಿತ ವರ್ಗಗಳು, ಸೆಲೆಬ್ರಿಟಿಗಳು ಯಾರೊಬ್ಬರು ಈ ಕೃತ್ಯದ ಪರ ಧ್ವನಿ ಎತ್ತದಿರುವುದು ಆಶ್ಚರ್ಯವಾಗಿದೆ. ಹಾಗೆಯೇ, ದಿಶಾ ಪ್ರಕರಣ ಜರುಗಿ ಕೆಲವೇ ದಿನಗಳಲ್ಲಿ ಅಪರಾಧಿಗಳನ್ನು ಬಂಧಿಸಲಾಗಿತ್ತು. ಬಂಧನದಲ್ಲಿದ್ದ ಅಪರಾಧಿಗಳನ್ನು ಸ್ಥಳ ಪರಿಶೀಲನೆ ವಿಚಾರದಲ್ಲಿ ಘಟನಾ ಸ್ಥಳಕ್ಕೆ ಕರೆದೊಯ್ದು ಎನ್‌ಕೌಂಟರ್ ಮಾಡಿದ್ದು ಸಮಾಜದಲ್ಲಿ ಪ್ರಶಂಸೆಗೆ ಒಳಗಾಯಿತು. ಪ್ರತಿಯೊಬ್ಬ ಅಪರಾಧಿಗೂ ಶಿಕ್ಷೆಯಾಗಬೇಕಾದ್ದು ನ್ಯಾಯ. ಆದರೆ, ಅಧೀನದಲ್ಲಿದ್ದ ಅಪರಾಧಿಗಳನ್ನು ಆಕ್ರಮಣದ ಕಾರಣ ನೀಡಿ ಎನ್‌ಕೌಂಟರ್ ಮಾಡಿ ಹತ್ಯೆಗೈದಿರುವುದು ಚರ್ಚೆಗೆ ಗ್ರಾಸವಾಗಿದೆ. ಇದು ನ್ಯಾಯಾಂಗ ವ್ಯವಸ್ಥೆಯನ್ನು ಧಿಕ್ಕರಿಸುವ ನಡೆಯಾಗಿದೆ. ಅಲ್ಲದೆ, ನ್ಯಾಯವು ಹಣ, ಅಧಿಕಾರ, ಜಾತಿ ಹಾಗೂ ರಾಜಕೀಯ ಮೊದಲಾದ ಕಾರಣಗಳಿಂದ ಅಸಮಾನವಾಗಿರುವುದನ್ನು ನಾವು ಮನಗಾಣಬೇಕಿದೆ. ಇದು ನ್ಯಾಯ ವ್ಯವಸ್ಥೆಯ ಬಗ್ಗೆ ಜನರಲ್ಲಿರುವ ಅಪನಂಬಿಕೆಯನ್ನು ತೋರುತ್ತದೆ. ಕಟ್ಟ ಕಡೆಯ ಸಮುದಾಯಗಳ ಮೇಲಾಗುವ ದೌರ್ಜನ್ಯಗಳಿಗೆ ಆಮಿಷಗಳ ಬೆಲೆ ತೆರುವ ಮೂಲಕ ಪ್ರಕರಣವನ್ನು ಮುಗಿಸುವ ಹುನ್ನಾರಗಳು ಸಮಾಜದಲ್ಲಿ ಅವ್ಯಾಹತವಾಗಿ ಜರುಗುತ್ತಿವೆ. ಇಂತಹ ಕೃತ್ಯಗಳನ್ನು ಕೇವಲ ಜಾತಿ, ಧರ್ಮ, ವರ್ಗಗಳ ಚೌಕಟ್ಟಿನಲ್ಲಿಯೇ ಯೋಚಿಸುವ ಸಂಕುಚಿತ ಮನಸ್ಥಿತಿಯನ್ನು ಇಂದಿನ ಸಮಾಜ ಬೆಳೆಸಿಕೊಂಡಿರುವುದು ಶೋಚನೀಯ.

ಹೀಗೆ ಪಟ್ಟಭದ್ರ ಹಿತಾಸಕ್ತಿಗಳು, ಬಂಡವಾಳಶಾಹಿ ಮನಸ್ಸುಗಳು ಸಮಾಜದಲ್ಲಿ ಅಸಮಾನತೆಯ ಮನಸ್ಥಿತಿ ಹುಟ್ಟು ಹಾಕುತ್ತಿವೆ. ಆ ಮೂಲಕ ಹೆಣ್ಣಿನ ಮೇಲಾಗುವ ದೌರ್ಜನ್ಯಗಳನ್ನು ವಿಶಿಷ್ಟ ರೀತಿಯಲ್ಲಿ ನೋಡುವಂತೆ ಮಾಡಿವೆ. ಜನರ ನಡುವೆ ಅಂತರವನ್ನು ಸೃಷ್ಟಿಸುವ ಮೂಲಕ ಸಹಬಾಳ್ವೆಯ ಜೀವನನ್ನು ನಾಶಮಾಡಿದೆ. ಕಟ್ಟ ಕಡೆಯ ಸಮುದಾಯಗಳಿಗೆ ನ್ಯಾಯ ವಿಳಂಬತೆಯಿಂದಾಗಿ ನ್ಯಾಯ ನಿರಾಕರಣೆಯಾಗುತ್ತಿದೆ. ಸಾಮಾಜಿಕ, ಆರ್ಥಿಕ ಅಸಮಾನತೆಗೆ ಒಳಗಾಗಿರುವ ಸಮುದಾಯಗಳು ನ್ಯಾಯ ವಿಳಂಬತೆಯಿಂದ ಬಸವಳಿಯುತ್ತಿವೆ. ಆದ್ದರಿಂದ ಸಮಾಜದ ಪ್ರತಿಯೊಬ್ಬರು ಯಾವುದೇ ಪೂರ್ವಗ್ರಹಗಳಿಗೆ ಒಳಗಾಗದೆ ಪ್ರತಿಯೊಂದು ಅನ್ಯಾಯಗಳಿಗೂ ಏಕರೂಪ ನ್ಯಾಯ ಹಾಗೂ ತ್ವರಿತ ನ್ಯಾಯಾಂಗ ವ್ಯವಸ್ಥೆಗಾಗಿ ಧ್ವನಿಗೂಡಿಸುವ ಮೂಲಕ ಸ್ಪಂದಿಸಬೇಕಿದೆ. ಇಲ್ಲವಾದಲ್ಲಿ ನೆರೆ ಮನೆಯವರಿಗಾದ ಅನ್ಯಾಯ, ನಾಳೆ ನಮ್ಮ ಮೇಲಾಗುವ ಕಾಲ ದೂರವಿಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top