ಅಭಿವ್ಯಕ್ತಿ ಸ್ವಾತಂತ್ರ್ಯಹರಣ-ಪ್ರಜಾಪ್ರಭುತ್ವದ ಮರಣ | Vartha Bharati- ವಾರ್ತಾ ಭಾರತಿ

ಅಭಿವ್ಯಕ್ತಿ ಸ್ವಾತಂತ್ರ್ಯಹರಣ-ಪ್ರಜಾಪ್ರಭುತ್ವದ ಮರಣ

ನಳಿನಿ ಬಾಲಕುಮಾರ್

‘‘ಕಾಶ್ಮೀರವನ್ನು ಬಿಡುಗಡೆಗೊಳಿಸಿ’’ ಎಂದರೆ ಪಾಕಿಸ್ತಾನಕ್ಕೆ ಸೇರಿಸಿ ಎಂಬರ್ಥವಲ್ಲ. ಅಪ್ಪಟ ಭಾರತೀಯರೇ ಆದ ಕಾಶ್ಮೀರಿ ಜನರನ್ನು ಪ್ರಕ್ಷುಬ್ಧ ಸ್ಥಿತಿಯಿಂದ ಪಾರು ಮಾಡಿ ಎಂದು ಪ್ರಭುತ್ವಕ್ಕೆ ಮನವರಿಕೆ ಮಾಡಿಕೊಡುವ ಸಾಮಾಜಿಕ ಜವಾಬ್ದಾರಿ ಎಲ್ಲ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಸಮಾಜದ ಹಿತಚಿಂತಕರಿಗೆ ಖಂಡಿತ ಇದೆ. ಇಂತಹ ಸಂದರ್ಭದಲ್ಲಿ ಪ್ರಭುತ್ವದ ಅವಿಭಾಜ್ಯ ಅಂಗವಾಗಿರುವ ವಿಕೃತ ಮನಸ್ಸುಗಳು ಪ್ರಗತಿಪರ ಹೋರಾಟಗಾರರನ್ನು ಸುಳ್ಳು ಮೊಕದ್ದಮೆಗಳ ಹೆಸರಿನಲ್ಲಿ ದಮನಗೊಳಿಸುವ ಪ್ರಯತ್ನದಲ್ಲಿ ನಿರತರಾಗಿರುವುದು ಖಂಡನೀಯ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ 2014ರಲ್ಲಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದ ನಂತರ ಭಾರತದ ಪ್ರಜಾಪ್ರಭುತ್ವಕ್ಕೆ ಹಲವಾರು ತೊಡಕುಗಳು ಸೃಷ್ಟಿಯಾಗಿವೆ. ಭಾರತದ ಆರ್ಥಿಕತೆ ನಿರಂತರವಾಗಿ ಕುಸಿಯುತ್ತಿದೆ. ಯುವಭಾರತ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯಿಂದಾಗಿ ನರಳುತ್ತಿದೆ. ಕಾರ್ಮಿಕರು ಉದ್ಯೋಗಾವಕಾಶಗಳ ಕುಸಿತದಿಂದಾಗಿ ಅತಂತ್ರರಾಗಿದ್ದಾರೆ. ರೈತರು ಸರಕಾರದ ನಿರ್ಲಕ್ಷ್ಯದಿಂದಾಗಿ ಆತ್ಮಹತ್ಯೆಯೆಡೆಗೆ ಸಾಗುತ್ತಿದ್ದಾರೆ. ಭಾರತದ ಮೂಲನಿವಾಸಿಗಳು ಪೌರತ್ವ ಕಾಯ್ದೆ ತಿದ್ದುಪಡಿಯಿಂದಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಆದಿವಾಸಿಗಳು ಪ್ರಭುತ್ವದ ದಮನಕಾರಿ ನೀತಿಯಿಂದಾಗಿ ತಮ್ಮ ನೆಲೆಯಿಂದ ವಂಚಿತರಾಗುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಪ್ರಜಾಸತ್ತಾತ್ಮಕ ಹೋರಾಟ ನಡೆಸುವ ಪ್ರಗತಿಪರರು ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ನಗರ ನಕ್ಸಲಿಯರು ಮತ್ತು ದೇಶದ್ರೋಹಿಗಳೆಂಬ ಆರೋಪಕ್ಕೆ ಗುರಿಯಾಗಿ ಹಲವಾರು ಮೊಕದ್ದಮೆಗಳಡಿಯಲ್ಲಿ ಜೈಲು ಸೇರುತ್ತಿದ್ದಾರೆ. ಮಹಿಳೆಯರು ನಿರ್ಭೀತಿಯಿಂದ ಬದುಕಲಾರದೆ ಅತ್ಯಾಚಾರ ಮತ್ತು ಕೊಲೆಗಳಿಗೆ ಈಡಾಗುತ್ತಿದ್ದಾರೆ. ಅಸಂಖ್ಯಾತ ಮಕ್ಕಳು ಅಪೌಷ್ಟಿಕತೆ ಮತ್ತು ಅನಾ ರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಅಸಹಾಯಕರಾಗಿ ಸಾಯುತ್ತಿದ್ದಾರೆ. ಇವು ಮೋದಿ ಸರಕಾರ ಭಾರತೀಯರಿಗೆ ನೀುತ್ತಿರುವ ಬಳುವಳಿಗಳು.

ಹಲವಾರು ಆಮಿಷಗಳನ್ನು ಒಡ್ಡಿ ಪ್ರಭುತ್ವನಿಷ್ಠ ಮಾಧ್ಯಮಗಳು ಮತ್ತು ಸಂವಿಧಾನ ವಿರೋಧಿ ಮನುವಾದಿಗಳ ಬೆಂಬಲದಿಂದ ಶ್ರೀಸಾಮಾನ್ಯರನ್ನು ದಾರಿ ತಪ್ಪಿಸಿ ಅಧಿಕಾರ ಗದ್ದುಗೆಗೇರಿದ ಮೋದಿಯವರು ಮತ ನೀಡಿದ ಜನರನ್ನು ಪೌರತ್ವ ಸಾಬೀತುಪಡಿಸಿ ಎಂದು ಹೇಳುತ್ತಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಮೋದಿಯವರ ದುರಾಡಳಿತದಿಂದ ಕಂಗೆಟ್ಟ ಜನ ದೇಶದಾದ್ಯಂತ ಪ್ರತಿಭಟನೆಯಲ್ಲಿ ದಿನನಿತ್ಯ ತೊಡಗಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರಕಾರದ ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆಗಳು ದಿನನಿತ್ಯ ಕುಸಿಯುತ್ತಿವೆ. ಆದರೂ ಸಹ ಮೋದಿಯವರ ಸರಕಾರಕ್ಕೆ ನಿಷ್ಠರಾಗಿರುವ ಮೂಲಭೂತವಾದಿಗಳು ದೇಶದ ಎಲ್ಲೆಡೆ ಸಾರ್ವಜನಿಕ ಸಭೆಗಳನ್ನು ನಡೆಸಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಮೊದಲಾದ ಸಂವಿಧಾನ ವಿರೋಧಿ ಕಾಯ್ದೆಗಳನ್ನು ಲಜ್ಜೆಗೆಟ್ಟು ಸಮರ್ಥಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಕೇಂದ್ರ ಸರಕಾರದ ಆಮಿಷಗಳಿಗೆ ಗುರಿಯಾಗಿ ಕೆಲವು ಸಾಹಿತಿಗಳು ಮತ್ತು ಸಮಾಜಸೇವಕರು ಮಾನ ಮರ್ಯಾದೆ ಬಿಟ್ಟು ನೂತನ ಮಸೂದೆಗಳನ್ನು ಸಮರ್ಥಿಸುತ್ತಿರುವುದನ್ನು ನೋಡಿ ಸಂವಿಧಾನ ನಿಷ್ಠರು ಕಂಗೆಟ್ಟಿದ್ದಾರೆ.

ಕಳೆದ 5 ವರ್ಷಗಳಿಂದ ಮೋದಿ ಸರಕಾರ ಭಾರತೀಯ ಸಂವಿಧಾನಕ್ಕೆ ನಿರಂತರವಾಗಿ ಗುಂಡು ಹೊಡೆಯುತ್ತಿರುವುದು ಪ್ರಭುತ್ವದ ದಮನಕಾರಿ ಧೋರಣೆಗೆ ಸಾಕ್ಷಿಯಾಗಿದೆ. ಮೋದಿಯವರು ತಮ್ಮ ತಪ್ಪುನಿರ್ಧಾರಗಳು ಮತ್ತು ಕ್ರಮಗಳ ಮೂಲಕ ಗಾಂಧಿವಾದಕ್ಕೆ ತಿಲಾಂಜಲಿ ನೀಡಿ ಗೋಡ್ಸೆಯ ತತ್ವಗಳನ್ನು ಅಕ್ಷರಶಃ ಪಾಲಿಸುತ್ತಿದ್ದಾರೆ. ಮೋದಿ ಸರಕಾರದ ಮಂತ್ರಿಗಳು ಮತ್ತು ಸಂಸದರು ಎನ್‌ಡಿಎ ಸರಕಾರ ಬಂದಿರುವುದೇ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಾಮಾಜಿಕ ನ್ಯಾಯ, ಸರ್ವೋದಯ ಮೊದಲಾದ ಮೂಲ ಆಶಯಗಳನ್ನು ಪ್ರತಿಪಾದಿಸುವ ಸಂವಿಧಾನವನ್ನು ಬದಲಾಯಿಸುವುದಕ್ಕೆ ಎಂದು ಆಗಿಂದಾಗ್ಗೆ ಪ್ರತಿಪಾದಿಸುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ನಮ್ಮ ರಾಷ್ಟ್ರ ನಾಯಕರು ಬಹುತ್ವಕ್ಕೆ ಶರಣಾಗಿ ಜಾತ್ಯತೀತತೆಗೆ ಬದ್ಧರಾಗಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟರೆ, ಸಾವರ್ಕರ್, ಗೋಳ್ವಾಲ್ಕರ್, ಹೆಡಗೆವಾರ್, ಶ್ಯಾಮ್‌ಪ್ರಕಾಶ್ ಮುಖರ್ಜಿ ಎಂಬ ಸ್ವಾತಂತ್ರ್ಯ ಚಳವಳಿಯ ವಿರೋಧಿಗಳು ಮತ್ತು ಬ್ರಿಟಿಷರ ಅನುಯಾಯಿಗಳ ಸಂತಾನ ಇಂದು ಮೋದಿ ನೇತೃತ್ವದಲ್ಲಿ ಭಾರತವನ್ನು ಆಳುವ ಅವಕಾಶ ಪಡೆದು ಹಿಂದಿ ಭಾಷೆ, ಹಿಂದೂ ಧರ್ಮ ಮತ್ತು ಹಿಂದೂ ದೇಶ ಪ್ರತಿಪಾದನೆಗೆ ಮುಂದಾಗಿರುವುದು ಭಾರತೀಯ ಪ್ರಜಾಪ್ರಭುತ್ವಕ್ಕೆ ಬುದೊಡ್ಡ ಗಂಡಾಂತರ ಉಂಟುಮಾಡಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಉಸಿರೆಂದು ರಾಷ್ಟ್ರ ನಾಯಕರು ಮತ್ತು ಸಂವಿಧಾನ ಶಿಲ್ಪಿಗಳು ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಸಿಆರ್‌ಪಿಸಿ ಸೆಕ್ಷನ್-144ನ್ನು ಪ್ರಭುತ್ವ ದುರ್ಬಳಕೆ ಮಾಡಿಕೊಂಡು ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ನಿರ್ಬಂಧಿಸಬಾರದೆಂದು ತೀರ್ಪು ನೀಡಿದೆ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಮುಖಂಡರ ಗೃಹಬಂಧನ, ಸಾಮಾಜಿಕ ಹೋರಾಟಗಾರರ ಮೇಲಿನ ನಿರ್ಬಂಧ, ಅಂತರ್ಜಾಲ ಸೇವೆಯ ಸ್ಥಗಿತ ಮೊದಲಾದ ಸಂವಿಧಾನ ವಿರೋಧಿ ಕ್ರಮಗಳಿಗೆ ಪ್ರಭುತ್ವ ಮುಂದಾಗಿರುವುದನ್ನು ಸರ್ವೋಚ್ಚ ನ್ಯಾಯಾಲಯ ವಿರೋಧಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಹೆಸರಿನಲ್ಲಿ ಪ್ರಜೆಗಳ ಮೂಲಭೂತ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸಬಾರದೆಂದು ನ್ಯಾಯಾಲಯ ಸ್ಪ್ಟವಾಗಿ ತೀರ್ಪು ನೀಡಿದೆ.

ಈ ತೀರ್ಪಿನ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾಧ್ಯಮ ವಿದ್ಯಾರ್ಥಿನಿ ಕುಮಾರಿ ನಳಿನಿ ಬಾಲಕುಮಾರ್ ಇತ್ತೀಚೆಗೆ ಮೈಸೂರು ವಿವಿ ಆವರಣದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಸಂವಿಧಾನ ನಿಷ್ಠ ವಿದ್ಯಾರ್ಥಿ ಮುಖಂಡರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ‘‘ಫ್ರೀ ಕಾಶ್ಮೀರ್’’ (ಉಸಿರುಗಟ್ಟಿದ ವಾತಾವರಣದಲ್ಲಿ ನರಳಿ ಸಾಯುತ್ತಿರುವ ಕಾಶ್ಮೀರಿ ದೇಶ ಬಾಂಧವರನ್ನು ಬಿಡುಗಡೆಗೊಳಿಸಿ) ಎಂಬ ಸಂದರ್ಭೋಚಿತ ಭಿತ್ತಿಪತ್ರ ಪ್ರದರ್ಶಿಸಿದ ಕಾರಣ ಅವರ ಮೇಲೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಸುಮಾರು 8ಗಂಟೆ ಕಾಲ ವಿಚಾರಣೆಗೊಳಪಡಿಸಿರುವ ಕೃತ್ಯ ನಿಜಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಡಲಿ ಪೆಟ್ಟು ನೀಡಿದೆ. ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಯ ಹಂತದಲ್ಲಿದ್ದು ನಿರೀಕ್ಷಣಾ ಜಾಮೀನು ಪಡೆದಿರುವ ನಳಿನಿ ಬಾಲಕುಮಾರ್ ಅಪ್ಪಟ ಸಂವಿಧಾನ ನಿಷ್ಠೆ ಮತ್ತು ದೇಶಭಕ್ತಿಗಳನ್ನು ಆಧರಿಸಿದ ನ್ಯಾಯ ಪಡೆಯಬೇಕೆಂಬುದು ಪ್ರಜ್ಞಾವಂತರ ಆಶಯವಾಗಿದೆ.

ಮೈಸೂರು ವಿಶ್ವವಿದ್ಯಾನಿಲಯ ನಾಡಿನ ಹಲವಾರು ಪ್ರಗತಿಪರ ಚಳವಳಿಗಳಿಗೆ ಜ್ಞಾನ ದಾಸೋಹವನ್ನು ಒದಗಿಸಿ ಸಹಸ್ರಾರು ಪ್ರಬುದ್ಧ ಚಿಂತಕರು ಮತ್ತು ಹೋರಾಟಗಾರರನ್ನು ಸೃಷ್ಟಿಸಿರುವ ಹೆಗ್ಗಳಿಕೆ ಹೊಂದಿದೆ. ಮೌಢ್ಯದ ಎದೆಗೆ ಗುಂಡು ಹೊಡೆಯಿರಿ, ವೈಜ್ಞಾನಿಕತೆಯನ್ನು ಉತ್ತೇಜಿಸಿ ಮತ್ತು ಮಾನವೀಯತೆಯನ್ನು ಬೆಳೆಸಿ ಎಂದು ಕರೆ ನೀಡಿದ ಯುಗದ ಕವಿ ಕುವೆಂಪುರವರ ಆಶಯಗಳಿಗೆ ಅನುಸಾರವಾಗಿ ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಅನ್ಯಾಯಗಳ ವಿರುದ್ಧ ಸಿಡಿದೆದ್ದು ತಮ್ಮ ಅಹಿಂಸಾತ್ಮಕ ಹಾಗೂ ಪ್ರಗತಿಪರ ಹೋರಾಟಗಳ ಮೂಲಕ ವಿಶ್ವವಿದ್ಯಾನಿಲಯದ ಘನತೆಯನ್ನು ಹೆಚ್ಚಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಗತಿಪರ ಯುವ ಮುಖಂಡರು ಜೆಎನ್‌ಯು ವಿಶ್ವವಿದ್ಯಾನಿಲಯದ ಹೋರಾಟಗಾರರ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ನಡೆಸಿರುವ ಹೋರಾಟವನ್ನು ಹೃದಯ ಪೂರ್ವಕವಾಗಿ ಬೆಂಬಲಿಸುವುದರ ಬದಲಿಗೆ ಸ್ಥಳೀಯ ಸಂಸದ ಹೋರಾಟಗಾರರ ವಿರುದ್ಧ ಮೊಕದ್ದಮೆ ದಾಖಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದು ಖಂಡನೀಯ. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾತೀಯತೆ ಮತ್ತು ಗುಂಪು ರಾಜಕಾರಣ ಹೆಚ್ಚುತ್ತಿರುವುದಾಗಿ ನೀಡಿರುವ ಹೇಳಿಕೆ ಪೂರ್ವಾಗ್ರಹ ಪೀಡಿತವಾಗಿದೆ.

ವಿದೇಶದಿಂದ ಭಾರತಕ್ಕೆ ವಲಸೆ ಬಂದ ಆರ್ಯರು ತಮ್ಮ ಅನಧಿಕೃತ ವಾಸವನ್ನು ದೃಢೀಕರಿಸಲು ಮತ್ತು ನೆಲದ ಮೂಲನಿವಾಸಿಗಳನ್ನು ದೇಶದಿಂದ ಎತ್ತಂಗಡಿ ಮಾಡಲು ಜಾರಿಗೊಳಿಸಲು ಹೊರಟಿರುವ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಮಸೂದೆಗಳನ್ನು ಪ್ರಜ್ಞಾವಂತ ಭಾರತೀಯರು ದೇಶದ ಎಲ್ಲೆಡೆ ವಿರೋಧಿಸಿ ಪ್ರತಿಭಟನೆ ನಡೆಸಿರುವುದು ಜಗತ್ತಿನ ಗಮನ ಸೆಳೆದಿದೆ. ಇಂತಹ ಬಹುಜನ ಭಾರತೀಯರ ಮೂಲಭೂತ ಹಕ್ಕುಗಳನ್ನು ಅತ್ಯಲ್ಪಸಂಖ್ಯೆಯ ವಲಸೆ ಬಂದ ಮೂಲಭೂತ ವಾದಿಗಳು ಕಸಿದುಕೊಳ್ಳಲು ಹೊರಟಿರುವುದು ತರವಲ್ಲ. ದೇಶದ ನೈಜ ಸಮಸ್ಯೆಗಳು ಮತ್ತು ಸರಕಾರದ ವೈಫಲ್ಯತೆಗಳನ್ನು ಮರೆಮಾಚಲು ಇತ್ತೀಚೆಗೆ ಹಲವಾರು ಹೊಸ ಸಮಸ್ಯೆಗಳನ್ನು ಮೋದಿ ನೇತೃತ್ವದ ಕೇಂದ್ರ ಸರಕಾರ ಸೃಷ್ಟಿಸಿರುವುದು ಭಾರತೀಯರ ಗಮನಕ್ಕೆ ಬಂದಿದೆ. ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಿಸಿ ಲಾಭ ಪಡೆಯಲು ಯತ್ನಿಸುವ ಕೋಮುವಾದಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಶಿಕ್ಷಿಸುವ ಬದಲಿಗೆ ಪ್ರಜ್ಞಾವಂತ ನಾಗರಿಕರು ಮತ್ತು ಹೋರಾಟಗಾರರ ಮೇಲೆ ರಾಜ್ಯಾಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸುವುದು ಸರಿಯಲ್ಲ.

‘‘ಕಾಶ್ಮೀರವನ್ನು ಬಿಡುಗಡೆಗೊಳಿಸಿ’’ ಎಂದರೆ ಪಾಕಿಸ್ತಾನಕ್ಕೆ ಸೇರಿಸಿ ಎಂಬರ್ಥವಲ್ಲ. ಅಪ್ಪಟ ಭಾರತೀಯರೇ ಆದ ಕಾಶ್ಮೀರಿ ಜನರನ್ನು ಪ್ರಕ್ಷುಬ್ಧ ಸ್ಥಿತಿಯಿಂದ ಪಾರು ಮಾಡಿ ಎಂದು ಪ್ರಭುತ್ವಕ್ಕೆ ಮನವರಿಕೆ ಮಾಡಿಕೊಡುವ ಸಾಮಾಜಿಕ ಜವಾಬ್ದಾರಿ ಎಲ್ಲ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಸಮಾಜದ ಹಿತಚಿಂತಕರಿಗೆ ಖಂಡಿತ ಇದೆ. ಇಂತಹ ಸಂದರ್ಭದಲ್ಲಿ ಪ್ರಭುತ್ವದ ಅವಿಭಾಜ್ಯ ಅಂಗವಾಗಿರುವ ವಿಕೃತ ಮನಸ್ಸುಗಳು ಪ್ರಗತಿಪರ ಹೋರಾಟಗಾರರನ್ನು ಸುಳ್ಳು ಮೊಕದ್ದಮೆಗಳ ಹೆಸರಿನಲ್ಲಿ ದಮನಗೊಳಿಸುವ ಪ್ರಯತ್ನದಲ್ಲಿ ನಿರತರಾಗಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪಮೈಸೂರು ನಗರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಂತರ ಬಿಜೆಪಿಗೆ ಧರ್ಮ ರೋಗ ಅಂಟಿದೆಯೆಂದು ಹೇಳಿರುವುದು ಸೂಕ್ತವಾಗಿದೆ. ವಾಸ್ತವವಾಗಿ ಲಾಲಾ ಲಜಪತರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಗೋಪಾಲಕೃಷ್ಣ ಗೋಖಲೆ, ಮೋತಿಲಾಲ್ ನೆಹರೂ, ಮಹಾತ್ಮಾಗಾಂಧಿ, ಜವಾಹರಲಾಲ್ ನೆಹರೂ, ಸುಭಾಶ್ಚಂದ್ರ ಭೋಸ್, ಸರ್ದಾರ್ ವಲ್ಲಭಭಾಯ್ ಪಟೇಲ್ ಮೊದಲಾದ ಕಾಂಗ್ರೆಸ್ ಪಕ್ಷದ ರಾಷ್ಟ್ರ ನಾಯಕರು ಹಿಂದೂ ಧರ್ಮದ ರಕ್ಷಕರಾಗಿ ಉಳಿಯದೇ ಅಖಂಡ ಭಾರತದ ಸ್ವಾತಂತ್ರ್ಯ ಮತ್ತು ಪ್ರಗತಿಗಳಿಗೆ ಬದ್ಧರಾಗಿದ್ದರು. ಕಾಂಗ್ರೆಸ್ ಚಳವಳಿಗೆ ಧರ್ಮದ ರೋಗ ಅಂಟಲು ಅಂದಿನ ರಾಷ್ಟ್ರ ನಾಯಕರು ಅನುವು ಮಾಡಿಕೊಡಲಿಲ್ಲವೆಂಬ ಸತ್ಯವನು್ನ ಭೈರಪ್ಪನವರು ಗ್ರಹಿಸಬೇಕು.

ಮಾನಸಗಂಗೋತ್ರಿಯಲ್ಲಿ ಜರುಗಿದ ಪ್ರತಿಭಟನೆ ಸಂಘಟಕರಿಗೆ ನಗರ ಪೊಲೀಸರು ನೋಟಿಸ್ ಜಾರಿಗೊಳಿಸಿ ವಿಚಾರಣೆಗೊಳಪಡಿಸಿ ಅವರ ಆತ್ಮಸ್ಥೈರ್ಯವನ್ನು ಕುಂದಿಸುವ ಪ್ರಯತ್ನ ನಡೆಸಿರುವುದು ಅಧಿಕಾರದ ದುರುಪಯೋಗವೇ ಹೊರತು ಯಾವುದೇ ರೀತಿಯ ಸಾರ್ವಜನಿಕ ಹಿತರಕ್ಷಣೆಗೆ ಪೂರಕವಾದ ಕ್ರಮವಲ್ಲ. ಫಲಕದ ಘೋಷಣೆ ಮತ್ತು ಪ್ರತಿಭಟನೆಯ ಪ್ರಯತ್ನವನ್ನು ತಮಗಿಷ್ಟ ಬಂದಂತೆ ವ್ಯಾಖ್ಯಾನಿಸಿ ಪ್ರತಿಭಟನಾಕಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವ ಹೀನಕೃತ್ಯವನ್ನು ಸಮಸ್ತ ಭಾರತೀಯರು ಖಂಡಿಸಬೇಕು. ದೇಶದ ಸ್ವಾತಂತ್ರ್ಯ, ಸಂಸ್ಕೃತಿ, ಸಾರ್ವಭೌಮತ್ವ ಮತ್ತು ಸಂವಿಧಾನಗಳ ವಾರಸುದಾರರು ದೇಶದ ಮೂಲನಿವಾಸಿಗಳೇ ಹೊರತು ಆರೆಸ್ಸೆಸ್, ಬಜರಂಗದಳ, ಎಬಿವಿಪಿ ಮೊದಲಾದ ಉಗ್ರ ಕೇಸರಿ ಸಂಘಟನೆಗಳ ಅಲ್ಪಸಂಖ್ಯಾತ ಹಿಂದುತ್ವವಾದಿಗಳಲ್ಲ. ಇಂತಹ ಸವಾಲಿನ ಸಂದರ್ಭದಲ್ಲಿ ಕುಬೇರರು, ಮನುವಾದಿಗಳು, ಜಾತಿವಾದಿಗಳು ಮತ್ತು ಸಂವಿಧಾನ ವಿರೋಧಿಗಳಿಂದ ಕೂಡಿರುವ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡ ಶಾಸಕಾಂಗದಿಂದ ದೇಶವನ್ನು ರಕ್ಷಿಸಿ ಎಂದು ಅಪೇಕ್ಷಿಸುವುದು ಸಾಧುವಲ್ಲ.

ಜಗತ್ತನ್ನೇ ತೋಳ್ಬಲದಿಂದ ಆಳಲು ಹೊರಟಿದ್ದ ಮಹಾರಾಕ್ಷಸ ಹಿಟ್ಲರ್ ತನ್ನ ಆಟ ಭೂಮಿಯ ಮೇಲೆ ನಡೆಯುವುದಿಲ್ಲವೆಂದು ಖಚಿತಪಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ದೃಷ್ಟಾಂತ ಜಗತ್ತಿನ ಇತಿಹಾಸದಲ್ಲಿದೆ. ಭಾರತದ ಪೌರತ್ವ ಮತ್ತು ಬಹುತ್ವಗಳಿಗೆ ಸಂಬಂಧಿಸಿದಂತೆ ಮತ್ತೊಂದು ಸ್ವಾತಂತ್ರ್ಯ ಸಮರಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ. ಸರ್ವಾಧಿಕಾರ ಮನೋಭಾವದಿಂದ ಪೌರತ್ವ ಮಸೂದೆಗಳನ್ನು ಜಾರಿಗೆ ತಂದು ಹಿಂದೂ ಸಾಮ್ರಾಜ್ಯ ಕಟ್ಟುವ ಮೋದಿ ಪ್ರಭುತ್ವಕ್ಕೆ ದೇಶದ ಒಳಗೆ ಮತ್ತು ಹೊರಗೆ ತೀವ್ರ ಮುಖಭಂಗವಾಗಿದೆ. ಬೇರೆ ದೇಶಕ್ಕೆ ಹೋದಾಗ ನಾವು ಬುದ್ಧನ ಭೂಮಿಯಿಂದ ಬಂದವರು ಎಂದು ಹೇಳುತ್ತಾ ಬುದ್ಧನ ಆಶಯಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಮೋದಿ ಬಳಗದ ನಡೆಯನ್ನು ಪ್ರಜ್ಞಾವಂತ ಭಾರತೀಯರು ಖಂಡಿಸಲೇ ಬೇಕು. ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರೆಗೆ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪಮಾಡಬೇಕೆಂಬ ವಿಶ್ವಮಾನವ ಅಂಬೇಡ್ಕರ್ ವಿಚಾರಧಾರೆ ಇಂದು ಪ್ರಸ್ತುತವಾಗಿದೆ. ‘ಕ್ವಿಟ್ ಎನ್‌ಡಿಎ - ಸೇವ್ ಇಂಡಿಯಾ’ ಘೋಷಣೆ ಭಾರತದ ಎಲ್ಲೆಡೆ ಮೊಳಗಬೇಕಿದೆ. ಸಮಸ್ತ ಭಾರತೀಯರನ್ನು ಸಾಮ್ರಾಜ್ಯಶಾಹಿಯಿಂದ ಬಿಡುಗಡೆಗೊಳಿಸುವ ಧರ್ಮಯುದ್ಧದಲ್ಲಿ ಎಲ್ಲ ರಾಷ್ಟ್ರ ನಿಷ್ಠ ಹಾಗೂ ಸಂವಿಧಾನ ನಿಷ್ಠ ಭಾರತೀಯರು ಅತ್ಯಂತ ಪ್ರೀತಿಯಿಂದ ತೊಡಗಿಸಿಕೊಳ್ಳಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top