ಗಾಂಧಿ ಹಾಗೂ ಮಾಧ್ಯಮ

ಭಾಗ-1

ಗಾಂಧಿ ಇಂದಿನ ಒಬ್ಬ ಪತ್ರಕರ್ತನಿಗಿಂತ ಎರಡು ಪಟ್ಟು ಸಮಯವನ್ನು ಪತ್ರಿಕೋದ್ಯಮದಲ್ಲಿ ಕಳೆದರು. ಅವರಿಗೆ ಬೇಸರವೇ ಆಗದ ಕಾರಣ ಏನೆಂದರೆ ಅವರು ಜನರಿಗೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಬರೆದರು. ಜನ ಪತ್ರಿಕೆಗಳಿಂದ ದೂರ ಹೋಗುತ್ತಿದ್ದಾರೆ. ಅದಕ್ಕೆ ಕಾರಣ ಡಿಜಿಟಲ್ ಮಾಧ್ಯಮ ಅಂತ ನಾವು ಹೇಳಿಕೊಂಡು ಅಡ್ಡಾಡುತ್ತಿದ್ದೇವೆ. ಆದರೆ ಅದಕ್ಕೆ ಕಾರಣ ಮಾಧ್ಯಮದ ರೂಪವಲ್ಲ. ಫೋನಿನ ಸೆಳೆತದಿಂದ ಜನ ಕಾಗದದಿಂದ ದೂರ ಹೋಗುತ್ತಿಲ್ಲ. ಜನಪರ ವಿಷಯಗಳನ್ನು ನಾವು ಬರೆಯದೇ ಹೋದದ್ದಕ್ಕೆ ಅವರು ನಮ್ಮನ್ನು ದೂರ ಮಾಡುತ್ತಿದ್ದಾರೆ ಅಂತ ನನ್ನ ತರ್ಕ.

ಮೊದಲಿಗೆ ಕೆಲವು ವಿಕಿಪೀಡಿಯಾ ಶೈಲಿಯ ಮಾಹಿತಿ. ಗಾಂಧೀಜಿ ಅವರು ತಮ್ಮ 78 ವರ್ಷದ ಜೀವನದಲ್ಲಿ 45 ವರ್ಷಕ್ಕೂ ಹೆಚ್ಚು ಕಾಲ ಪತ್ರಕರ್ತರಾಗಿದ್ದರು. ಅವರು ಏಳು ಪತ್ರಿಕೆಗಳ ಜೊತೆ ಸಂಬಂಧ ಇಟ್ಟುಕೊಂಡಿದ್ದರು. ಅವರು ಅವುಗಳಲ್ಲಿ ಲೇಖನ ಬರೆದರು, ಅವುಗಳ ಸಂಪಾದನೆ ಮಾಡಿದರು ಅಥವಾ ಅವುಗಳನ್ನು ಆರಂಭಿಸಿದರು.

ಅವರು ಶುರು ಮಾಡಿದ ಮೊತ್ತ ಮೊದಲ ಪತ್ರಿಕೆ ‘ಇಂಡಿಯನ್ ಒಪಿನಿಯನ್’, 1903ರಲ್ಲಿ. ಕೊನೆಯ ಪತ್ರಿಕೆಗಳು ಹರಿಜನ, ಹರಿಜನ ಸೇವಕ, ಹರಿಜನ ಬಂಧು 1933. ನಡುವೆ ‘ಯಂಗ್ ಇಂಡಿಯಾ’ ಹಾಗೂ ‘ನವಜೀವನ’ದ ಸಂಪಾದಕರಾಗಿದ್ದರು. ‘ಇಂಡಿಯನ್ ಒಪಿನಿಯನ್’, ‘ಯಂಗ್ ಇಂಡಿಯಾ’ ಹಾಗೂ ‘ಹರಿಜನ’ ಇಂಗ್ಲಿಷ್ ಪತ್ರಿಕೆಗಳು. ‘ನವಜೀವನ’ ಗುಜರಾತಿ ಹಾಗೂ ಹಿಂದಿ. ‘ಹರಿಜನ ಬಂಧು’ ಗುಜರಾತಿ, ‘ಹರಿಜನ ಸೇವಕ’ ಹಿಂದಿ. ಅವರು ಬರೆದ ಪತ್ರಗಳು, ಪುಸ್ತಕಗಳು, ಮಾಡಿದ ಭಾಷಣಗಳು ಮತ್ತು ಎಲ್ಲಾ ಲೇಖನಗಳು ಸೇರಿದರೆ ಸುಮಾರು 10 ಸಾವಿರ ಪುಟ ಆಗಬಹುದು ಅಂತ ಅವರ ಕೃತಿಗಳ ಡಿಜಿಟಲೀಕರಣ ಮಾಡುತ್ತಿರುವ ‘ಗಾಂಧಿ ಹೆರಿಟೇಜ್ ಪೋರ್ಟಲ್’ನಲ್ಲಿ ದಾಖಲಾಗಿದೆ. ಕೆಲವು ಪತ್ರಿಕೆಗಳಿಗೆ ಅವರೇ ಲೇಖನ ಕಳಿಸಿದರು, ಇನ್ನು ಅನೇಕರು ಸಿಂಡಿಕೇಷನ್‌ಶೈಲಿಯಲ್ಲಿ ಅವರ ಬರಹಗಳನ್ನು ಬಳಸಿಕೊಂಡರು.

ನಾವೂ ಪತ್ರಕರ್ತರು, ಅವರೂ ಪತ್ರಕರ್ತರು ಅಂದುಕೊಂಡು ಬೀಗುವ ಮೊದಲು ಅವರಿಗೂ ನಮಗೂ ಇರುವ ಸಾಮ್ಯವನ್ನು ಹಾಗೂ ವ್ಯತ್ಯಾಸವನ್ನು, ನೋಡೋಣ. ಅವರು ಪತ್ರಕರ್ತರಾಗಿದ್ದರು, ತಮ್ಮ ಕಾಲದ ಆಗುಹೋಗುಗಳಿಗೆ ಸ್ಪಂದಿಸುತ್ತಿದ್ದರು ಅನ್ನುವುದು ನಮಗೂ ಅವರಿಗೂ ಇರುವ ಸಾಮ್ಯವನ್ನು ತೋರುತ್ತದೆ.

ಇನ್ನು ಅವರಿಗೂ ನಮಗೂ ಇರುವ ವ್ಯತ್ಯಾಸಗಳನ್ನು ನೋಡಿದರೆ, ಆ ಪಟ್ಟಿ ದೊಡ್ಡದಾಗುತ್ತದೆ. ಅವರಿಗೆ ಪತ್ರಿಕೋದ್ಯಮ ಯಾವತ್ತೂ ವೃತ್ತಿಯಾಗಿರಲಿಲ್ಲ. ಅದು ಅವರಿಗೆ ಜನರಿಗೆ ಸಂದೇಶ ಕಳಿಸುವ ಮಾಧ್ಯಮವಾಗಿತ್ತು. ಅವರು ಜನಾಭಿಪ್ರಾಯ ರೂಪಿಸಲು, ಹೋರಾಟದ ಮನೋಭೂಮಿಕೆ ತಯಾರು ಮಾಡಲು, ದನಿ ಇಲ್ಲದವರ ದನಿಯಾಗಿಸಲು, ಬ್ರಿಟಿಷರ ತಪ್ಪುಗಳನ್ನು ಅವರದೇ ಭಾಷೆಯಲ್ಲಿ ಎತ್ತಿ ತೋರಿಸಲು, ಪತ್ರಿಕೆಗಳನ್ನು ಬಳಸಿಕೊಂಡರು.

ನಮ್ಮ ತಲೆಮಾರಿನ ಪತ್ರಕರ್ತರು ಸುದ್ದಿಮನೆಗಳಲ್ಲಿ ಕೆಲಸ ಮಾಡುವುದು ಸರಾಸರಿ ಕೇವಲ 20 ವರ್ಷ ಅಂತ ಅಮೆರಿಕದ ಒಂದು ಅಧ್ಯಯನ ಹೇಳಿದೆ. ಅದಕ್ಕೆ ಮುಖ್ಯ ಕಾರಣ ಒಂದೇ ಕೆಲಸ ಮಾಡಿ ಬೇಸರವಾಗುತ್ತದೆ ಎನ್ನುವುದು. ನಮ್ಮ ದೇಶದಲ್ಲಿ ಇದಕ್ಕೆ ಬೇರೆ ಕಾರಣಗಳು ಇರಬಹುದು. ನಮಗಿಂತ ಕಿರಿಯ ವಯಸ್ಸಿನ ಹುಷಾರು ಪತ್ರಕರ್ತರೊಬ್ಬರು ‘‘ಐ ವಾಂಟ್ ಮೈ ಇವನಿಂಗ್ಸ್ ನನಗೆ ನನ್ನ ಸಂಜೆಗಳನ್ನು ಕಳೆದುಕೊಳ್ಳಲಿಕ್ಕೆ ಇಷ್ಟ ಇಲ್ಲ’’ ಅಂತ ಹೇಳಿ ಕೆಲಸ ಬಿಟ್ಟರು. ಆದರೆ ಅವರು ಅದರ ಬದಲಾಗಿ ರಾತ್ರಿಪಾಳಿಯ ಕಾಲ್ ಸೆಂಟರಿನಲ್ಲಿ ಕೆಲಸ ಮಾಡಬೇಕಾಯಿತು. ಇದು ಅವರ ಬಗೆಗಿನ ಟಿಪ್ಪಣಿ ಅಲ್ಲ. ನಮ್ಮ ಕಾರ್ಯಕ್ಷೇತ್ರವನ್ನು ತಿಳಿದುಕೊಳ್ಳುವ ಪ್ರಯತ್ನ.

ಈ ಲೆಕ್ಕದಲ್ಲಿ ಗಾಂಧಿ ಇಂದಿನ ಒಬ್ಬ ಪತ್ರಕರ್ತನಿಗಿಂತ ಎರಡು ಪಟ್ಟು ಸಮಯವನ್ನು ಪತ್ರಿಕೋದ್ಯಮದಲ್ಲಿ ಕಳೆದರು. ಅವರಿಗೆ ಬೇಸರವೇ ಆಗದ ಕಾರಣ ಏನೆಂದರೆ ಅವರು ಜನರಿಗೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಬರೆದರು. ಜನ ಪತ್ರಿಕೆಗಳಿಂದ ದೂರ ಹೋಗುತ್ತಿದ್ದಾರೆ. ಅದಕ್ಕೆ ಕಾರಣ ಡಿಜಿಟಲ್ ಮಾಧ್ಯಮ ಅಂತ ನಾವು ಹೇಳಿಕೊಂಡು ಅಡ್ಡಾಡುತ್ತಿದ್ದೇವೆ. ಆದರೆ ಅದಕ್ಕೆ ಕಾರಣ ಮಾಧ್ಯಮದ ರೂಪವಲ್ಲ. ಫೋನಿನ ಸೆಳೆತದಿಂದ ಜನ ಕಾಗದದಿಂದ ದೂರ ಹೋಗುತ್ತಿಲ್ಲ. ಜನಪರ ವಿಷಯಗಳನ್ನು ನಾವು ಬರೆಯದೇ ಹೋದದ್ದಕ್ಕೆ ಅವರು ನಮ್ಮನ್ನು ದೂರ ಮಾಡುತ್ತಿದ್ದಾರೆ ಅಂತ ನನ್ನ ತರ್ಕ.

ಅವರು ಪತ್ರಿಕೆಯನ್ನು ಸಂದೇಶವಾಹಕವಾಗಿ ಬಳಕೆ ಮಾಡಿದರು.

ಇಲ್ಲಿ ಒಂದು ಮಾತು ನೆನಪಾಗುತ್ತದೆ. ಗಾಂಧಿ ಅವರು ಗೋಪಾಲ ಕೃಷ್ಣ ಗೋಖಲೆ ಅವರನ್ನು ಮೊದಲ ಸಾರಿ ಭೇಟಿ ಆದಾಗ ಒಂದು ಪ್ರಶ್ನೆ ಕೇಳುತ್ತಾರೆ. ‘‘ಭಾರತಕ್ಕೆ ಸ್ವಾತಂತ್ರ್ಯ ಕೊಡಿ ಅಂತ ನೀವು ಪದೇ ಪದೇ ಇಂಗ್ಲೆಂಡಿನ ರಾಣಿಗೆ ಪತ್ರ ಬರೀತಾ ಇರತೀರಲ್ಲಾ, ಅದರಿಂದ ಏನು ಉಪಯೋಗ? ಅವರ ಮನಸ್ಸಂತೂ ನಿಮ್ಮ ಪತ್ರಗಳನ್ನು ಓದಿ ಬದಲಾಗುವುದಿಲ್ಲ’’. ಆಗ ಅವರು ‘‘ಅಯ್ಯೋ. ನಾನು ಅವರಿಗೋಸ್ಕರ ಅಂತ ಎಲ್ಲಿ ಪತ್ರ ಬರೀತೇನೆ? ಪತ್ರ ಅವರಿಗೆ ಬರೆದದ್ದಾದರೂ ಅದನ್ನು ನಮ್ಮ ಜನ ಓದಲಿ, ಅವರಲ್ಲಿ ಜಾಗೃತಿ ಮೂಡಲಿ ಅಂತ ಬರೆಯುತ್ತೇನೆ. ಪ್ರತಿ ಬಾರಿ ಪತ್ರ ಬರೆದಾಗಲೂ ಅವರು ಮಾಡುತ್ತಿರುವ ಅನ್ಯಾಯವನ್ನು ಅದರಲ್ಲಿ ಸವಿವರವಾಗಿ ಹೇಳಿರುತ್ತೇನೆ. ಅದನ್ನು ಓದಿದವರಿಗೆ ಅದು ತಿಳಿದು, ಬ್ರಿಟಿಷ್ ಸರಕಾರದ ದುರಾಡಳಿತದ ಬಗ್ಗೆ ನಮ್ಮ ಜನರಿಗೆ ಗೊತ್ತಾಗಲಿ ಅಂತಲೇ ಸಾಲು ಸಾಲು ಪತ್ರಗಳನ್ನು ಬರೆಯುತ್ತೇನೆ. ಅವುಗಳನ್ನು ಪತ್ರಿಕೆಗಳಲ್ಲಿ ಪ್ರಕಟ ಮಾಡುತ್ತೇನೆ’’ ಅಂತ ಹೇಳುತ್ತಾರೆ.

ಇದರ ಹಿನ್ನೆಲೆ ಮಜವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಸಂಘಟನೆ ಮಾಡುತ್ತಿದ್ದ ಮೋಹನದಾಸ ಅವರನ್ನು ಭಾರತಕ್ಕೆ ಕರೆ ತರಲು ಗೋಪಾಲ ಕೃಷ್ಣ ಗೋಖಲೆ ಅವರು ದೀನಬಂಧು ಚಾರ್ಲ್ಸ್ ಆ್ಯಂಡ್ರೂಸ್ ಅವರನ್ನು ಕಳಿಸಿಕೊಡುತ್ತಾರೆ. ಅವರು ನತಾಲಿನಲ್ಲಿ ವಕೀಲಿಕೆ ನಡೆಸುತ್ತಿದ್ದ ಮೋಹನದಾಸ ಅವರನ್ನು ಹುಡುಕಿಕೊಂಡು ಹೋಗಿ ಪರಿಚಯ ಮಾಡಿಕೊಳ್ಳುತ್ತಾರೆ. ಅವರ ಸ್ನೇಹ ಗಟ್ಟಿಯಾಗುತ್ತದೆ. ಚಾರ್ಲ್ಸ್ ಆ್ಯಂಡ್ರೂಸ್ ಅವರು ಗಾಂಧಿ ಅವರನ್ನು ಕರೆದುಕೊಂಡು ಬಂದು ಗೋಖಲೆ ಅವರಿಗೆ ಪರಿಚಯ ಮಾಡಿಸುತ್ತಾರೆ.

ಆ್ಯಂಡ್ರೂಸ್ ಹಾಗೂ ಗಾಂಧಿ ಅವರ ಸ್ನೇಹದ ಬಗ್ಗೆ ಒಂದು ಮಾತು. ರವೀಂದ್ರನಾಥ ಟಾಗೋರ್ ಅವರು ಗಾಂಧಿ ಅವರಿಗೆ ಮಹಾತ್ಮಾ ಅಂತ ಕರೆದಾಗ ಅದು ಇವರಿಗೆ ಬಿರುದಿನಂತೆ ಅಂಟಿಕೊಳ್ಳುತ್ತದೆ. ಅದರ ಬಗ್ಗೆ ಅವರನ್ನು ಕೇಳಿದಾಗ ಅವರು ‘‘ಚಾರ್ಲೀ (ಚಾರ್ಲ್ಸ್ ಆ್ಯಂಡ್ರೂಸ್) ನನ್ನನ್ನು ಮೋಹನ ಅಂತ ಕರೀತಾನೆ. ಹಾಗೆ ಯಾರಾದರೂ ನನ್ನನ್ನ ಕರೆಯೋದು ನನಗೆ ಇಷ್ಟ’’ ಅಂತ ಹೇಳುತ್ತಾರೆ. ಚರ್ಚ್‌ನ ಪಾದ್ರಿ ಆಗಿದ್ದ ಆ್ಯಂಡ್ರೂಸ್ ಅವರು ಪೂರ್ವ ಏಶ್ಯಕ್ಕೆ ವರ್ಗವಾಗಿ ಹೋಗುವ ವರೆಗೂ ಅವರು ಅಣ್ಣ ತಮ್ಮಂದಿರಂತೆ ಇರುತ್ತಾರೆ. ಕೊನೆಯ ವರೆಗೂ ಒಬ್ಬರನ್ನೊಬ್ಬರು ಏಕವಚನದಲ್ಲಿ ಮಾತಾಡಿಸುತ್ತಾ ಇದ್ದರು. ಇದನ್ನು ಯಾಕೆ ಹೇಳುತ್ತಾ ಇದ್ದೇನೆ ಎಂದರೆ ಗಾಂಧಿ ಅನ್ನುವವರು ಅಸಾಮಾನ್ಯರು, ಭಗವಂತನ ಅವತಾರ, ಸೂಪರ್‌ಮ್ಯಾನ್‌ನ ಚಿಕ್ಕಪ್ಪನ ಮಗ ಅಂತ ಕೆಲವರು ಆರಾಧಿಸುವುದಕ್ಕೂ, ಅವರಿಗೆ ದೇವಸ್ಥಾನ ಕಟ್ಟುವುದಕ್ಕೂ ಇನ್ನು ಒಬ್ಬ ಹುಲು ಮಾನವ ಇಷ್ಟು ಒಳ್ಳೆಯವ ಆಗಿರಲಿಕ್ಕೆ ಸಾಧ್ಯವೇ ಇಲ್ಲ. ಅವರಲ್ಲಿ ಸಾವಿರ ಐಬು ಇದ್ದಿರಬೇಕು ಅಂತ ಕೆಲವರು ವಿರೋಧಿಸುವುದಕ್ಕೂ ಇದು ಉತ್ತರ ಕೊಡುತ್ತದೆ.

ಗುಜರಾತ್- ರಾಜಸ್ಥಾನದ ಗಡಿ ಹಳ್ಳಿಯಲ್ಲಿ ಕೆಲವರು ಗಾಂಧಿಗೆ ಮಹಾತ್ಮಾ ಮಂದಿರ ಎಂಬ ಗುಡಿ ಕಟ್ಟಲು ಹೊರಟಾಗ ಇವರು ಅವರಿಗೆ ಪತ್ರಿಕೆಯಲ್ಲಿ ಒಂದು ಲೇಖನ ಬರೆಯುತ್ತಾರೆ. ‘‘ಇದನ್ನು ನಿಲ್ಲಿಸಿ. ಇದು ಸರ್ವಶಕ್ತ ದೇವರಿಗೆ ಮಾಡುವ ಅವಮಾನ ಹಾಗೂ ನನ್ನಂತಹವನಿಗೆ ಅತೀವ ಮುಜುಗರ ಉಂಟು ಮಾಡುವ ಸಂಗತಿ. ಇದರಿಂದ ಯಾವುದೇ ಉಪಯೋಗವಿಲ್ಲ. ಇದರ ಬದಲಾಗಿ ನಿಮ್ಮ ಊರಿನ ಬಡವರಿಗೆ ಶಾಲೆ ಅಥವಾ ಆಸ್ಪತ್ರೆ ಕಟ್ಟಿಸಿ. ನಾನಂತೂ ಆ ಸ್ಥಳಕ್ಕೆ ಎಂದಿಗೂ ಭೇಟಿ ನೀಡುವುದಿಲ್ಲ’’.

ಗಾಂಧಿ ಪತ್ರಕರ್ತರಾಗಿದ್ದಕ್ಕೆ ಅನೇಕ ಆಯಾಮಗಳಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ನೋಡೊಣ.

ಮೊದಲನೆಯದು - ಧೈರ್ಯ

ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ಸರಕಾರ ನಾಗರಿಕತೆಯ ಕಾಯ್ದೆ (ಏಶ್ಯದವರ ನೋಂದಣಿ ಕಾಯ್ದೆ) ತಂದಾಗ ಅದನ್ನು ವಿರೋಧಿಸಿದ ಗಾಂಧಿ ಬರೆದ ಮಾತುಗಳನ್ನು ಇಲ್ಲಿ ಗಮನಿಸೋಣ. ‘‘ಭಾರತೀಯರು, ಚೀನಾ ಮೂಲದವರು ಮುಂತಾದ ಏಶ್ಯದವರ ನಾಗರಿಕತೆಯನ್ನು ಈ ಕಾಯ್ದೆ ಪ್ರಶ್ನಿಸುತ್ತದೆ. ದಶಕಗಳಿಂದ ಇಲ್ಲಿ ನೆಲೆಸಿ ಇಲ್ಲಿ ದುಡಿದು, ಮನೆ ಮಕ್ಕಳು, ಮೊಮ್ಮಕ್ಕಳನ್ನು ಕಂಡ, ಈ ದೇಶದ ಪ್ರಗತಿಯಲ್ಲಿ ಭಾಗಿಯಾದವರನ್ನೂ ಸಹಿತ ಈ ಕಾಯ್ದೆ ಸಂಶಯದಿಂದ ನೋಡುತ್ತದೆ. ಪುರುಷರು ನೋಂದಣಿ ಮಾಡಿಸಿಕೊಳ್ಳದಿದ್ದರೆ ಅವರು ನಾಗರಿಕರಲ್ಲ ಎಂದು ಹೊರಗೆ ಹಾಕಲಾಗುತ್ತದೆ. ಅವರ ಹೆಂಡಂದಿರನ್ನು ವೇಶ್ಯೆಯರು ಎಂದು ಭಾವಿಸಲಾಗುತ್ತಿದೆ. ಈಶ್ವರ ಸೃಷ್ಟಿಯ ಈ ಜಗತ್ತಿನಲ್ಲಿ ಇದು ಸಲ್ಲದು. ನಾಗರಿಕ ಜಗತ್ತಿನ ಯಾವುದೇ ದೇಶ ಈ ರೀತಿ ನಡೆದುಕೊಳ್ಳುವುದು ಸಾಧ್ಯವಿಲ್ಲ. ಸಾಧ್ಯವಾಗಲೂ ಬಾರದು’’. ಈ ಮಾತನ್ನು ಅಲ್ಲಿನ ಮಿಲಿಟರಿ ಸರಕಾರದ ವಿರುದ್ಧ ಅವರು ಹೇಳಿದರು. ಹೇಳಿ ಜೀವಂತ ಉಳಿದರು.

ಕೇವಲ ಪತ್ರಿಕೆ ಕಚೇರಿಯ ಕೆಲಸಕ್ಕೆ ಸೀಮಿತವಾಗದೆ ಬೀದಿಗೆ ಇಳಿದರು, ಹೋರಾಟ ಮಾಡಿದರು, ಭಾರತೀಯರನ್ನು ಸಂಘಟಿಸಿ, ಅಧಿಕಾರಿಗಳ ಮುಂದೆ, ಬಹಿರಂಗ ಸಭೆಯಲ್ಲಿ ನಾಗರಿಕತೆಯ ದಾಖಲೆಗಳನ್ನು ಬೆಂಕಿಗೆ ಹಾಕಿದರು. ಆ ನಂತರ ಜೈಲಿಗೆ ಹೋದರು, ಲಾಠಿ ಏಟು ತಿಂದರು, ಅದು ಬೇರೆ ವಿಷಯ. ಆದರೆ ಪತ್ರಕರ್ತರಾಗಿ ಸೇನಾಧಿಕಾರಿಗಳ ವರ್ಣಭೇದ ನೀತಿಯ ವಿರುದ್ಧ ಬರೆದರು. ನಾನು ಹೊರಗಿನವನು. ನನಗ್ಯಾಕೆ ಇಲ್ಲಿಯ ಉಸಾಬರಿ ಅಂತ ಸುಮ್ಮನಿರಲಿಲ್ಲ. ಅಲ್ಲಿಂದ ಹೊರಟು ಬರಲಿಲ್ಲ.

ಅಧಿಕಾರದ ಮುಖಕ್ಕೆ ಎದುರು ಮಾತನಾಡುವುದು ಅವರಿಗೆ ಸಿದ್ಧಿಸಿತ್ತು. ಅಸಹಕಾರ ಚಳವಳಿಯಲ್ಲಿ ಅವರು ಬರೆದ ಸಂಪಾದಕೀಯ ಹೀಗಿದೆ. ‘‘ನೀವು ಭಾರತೀಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಅನಾಗರಿಕವಾದದ್ದು. ನಮ್ಮ ಕನಿಷ್ಠ ಮಾನವ ಹಕ್ಕುಗಳನ್ನು ನೀವು ಕಿತ್ತು ಕೊಳ್ಳುತ್ತಿದ್ದೀರಿ. ಮೃಗಗಳ ಜೀವನ ನಮ್ಮದಾಗಿದೆ. ಒಂದೇ ತಾಯಿಯ ಮಕ್ಕಳಾದ ನಮ್ಮನ್ನು ನೀವು ಬೇರೆಯಾಗಿಸಿದ್ದೀರಿ. ನೀವು ಮಾಡುತ್ತಿರುವುದು ಬರೀ ತಪ್ಪಲ್ಲ. ಘೋರ ಪಾಪದ ಕೆಲಸ. ಇಡೀ ಜಗತ್ತಿನಾದ್ಯಂತ ಮಾಧ್ಯಮಗಳು ನಿಮ್ಮನ್ನು ಟೀಕಿಸುತ್ತಿವೆ. ಆದರೆ ಅದು ನಿಮ್ಮನ್ನು ತಾಕುತ್ತಿಲ್ಲ. ನಿಮ್ಮ ದಂತ ಗೋಪುರದಲ್ಲಿ ನೀವು ಇದ್ದೀರಿ. ಆದರೆ ನಿಮ್ಮ ತಪ್ಪುಗಳು ನಿಮಗೇ ತೋಚಬೇಕು. ಇಲ್ಲದಿದ್ದಲ್ಲಿ ಅವುಗಳ ವ್ಯಾಪ್ತಿ ನಿಮಗೆ ಗೊತ್ತಾಗಲಾರದು’’.

ಅಂದಿನ ಸುಪ್ರೀಂ ಕೋರ್ಟು ಇವರಿಗೆ ಜೈಲು ಹಾಗೂ ದಂಡ ಎರಡೂ ವಿಧಿಸಿದಾಗ ಅವರು ಹೇಳಿದ್ದು ‘‘ಈ ನಿರ್ಣಯ ತಪ್ಪು. ಇದನ್ನು ನಾನು ಒಪ್ಪುವುದಿಲ್ಲ. ದಂಡ ಕೊಡುವುದಿಲ್ಲ. ಜೈಲಿಗೂ ಹೋಗುವುದಿಲ್ಲ. ಬಲವಂತವಾಗಿ ಹಾಕಿದರೆ ಆಮರಣ ಉಪವಾಸ ಮಾಡುತ್ತೇನೆ.’’ ಆನಂತರ ಅವರನ್ನು ಎರಡೂ ಶಿಕ್ಷೆಗಳಿಂದ ಮುಕ್ತ ಮಾಡಲಾಯಿತು. ಸೂರ್ಯ ಮುಳುಗದ ನಾಡಿನ ಇಡೀ ಶಕ್ತಿ ಒಂದು ಕಡೆ ಆಗಿ, ಇನ್ನೊಂದು ಕಡೆ ನೈತಿಕ ಧೈರ್ಯವೊಂದನ್ನು ಬಿಟ್ಟು ಏನೂ ಇಲ್ಲದ ಮನುಷ್ಯ ಹೀಗೆ ನಡೆದುಕೊಂಡ. ಈ ಶಕ್ತಿಯ ಕುರುಹಾದರೂ ನಮ್ಮ ಬಳಿ ಉಳಿದಿದೆಯೇ?

ನಿರ್ಲಿಪ್ತತೆ

ಬ್ರಿಟಿಷರನ್ನು ಜೀವನ ಪರ್ಯಂತ ವಿರೋಧಿಸಿದ ಗಾಂಧಿ 1932ರಲ್ಲಿ ಪಕ್ಷ ರಾಜಕೀಯದಿಂದ ಸನ್ಯಾಸ ತೆಗೆದುಕೊಳ್ಳುತ್ತಾರೆ. ‘‘ನಾನು ಇನ್ನು ಮೇಲೆ ಕಾಂಗ್ರೆಸ್‌ನ ನಾಕಾಣೆ ಸದಸ್ಯನಲ್ಲ’’ ಅಂತ ಘೋಷಿಸಿದರು. ಆ ನಂತರದ ಅವರ ಬರವಣಿಗೆಗಳನ್ನು ಗಮನಿಸಿದರೆ ಅವರು ಯಾರ ಪಕ್ಷಪಾತಿಯೂ ಆಗಿರಲಿಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ಅದರಲ್ಲೂ ವಿಶೇಷವಾಗಿ 1935ರ ನಂತರ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅವರು ಆ ಪಕ್ಷ ಹಾಗೂ ಅವರ ಆಡಳಿತವನ್ನು ತೀವ್ರವಾಗಿ ಟೀಕಿಸಿದರು. ಕೇವಲ ಆರ್ಥಿಕ ಬೆಳವಣಿಗೆಗೆ ಪಕ್ಷದ ಕಾರ್ಯಸೂಚಿಯನ್ನು ಸೀಮಿತಗೊಳಿಸುವುದರಿಂದ ಯಾವ ಸಾಧನೆಯೂ ಆಗಲಾರದು. ಸಾಮಾಜಿಕ ಬೆಳವಣಿಗೆ, ಸಮ ಸಮಾಜದ ನಿರ್ಮಾಣ ನಮ್ಮ ಮುಂದಿರಬೇಕಾದ ಧ್ಯೇಯ. ಆ ದಿಕ್ಕಿನಲ್ಲಿ ಕೆಲಸ ಮಾಡದ ಯಾವ ರಾಜಕೀಯ ಆಂದೋಲನವೂ ತನ್ನ ಗುರಿಯಿಂದ ದೂರ ಸರಿದಂತೆ ಎಂದು ಟೀಕಿಸಿದರು. ಸರ್ವೋದಯಕ್ಕೆ, ಅಸ್ಪಶ್ಯತೆ ನಿವಾರಣೆಗೆ, ಮಹಿಳಾ ಸಶಕ್ತೀಕರಣಕ್ಕೆ, ಹಿಂದುಳಿದ ವರ್ಗದವರ ಕಲ್ಯಾಣಕ್ಕೆ ಬೆಂಬಲ ಸೂಚಿಸುವ ಯಾವ ರಾಜಕೀಯ ಹೋರಾಟಕ್ಕೂ ತನ್ನ ಬೆಂಬಲ ಇಲ್ಲ ಎಂದು ಸಾರಿದರು.

ಇದು ತುಂಬ ಮುಖ್ಯವಾದದ್ದು. ನಮ್ಮವರು ಏನು ಮಾಡಿದರೂ ಸರಿ, ವಿರೋಧಿಗಳು, ನಮ್ಮ ಸಿದ್ಧಾಂತಕ್ಕೆ ಒಗ್ಗದವರು ಏನು ಮಾಡಿದರೂ ತಪ್ಪುಎನ್ನುವ ಧೋರಣೆ ನಮ್ಮನ್ನು ಸಂಕುಚಿತವಾಗಿಸುತ್ತಿದೆ. ನಾವು ಇತರರಲ್ಲಿನ ಒಳ್ಳೆಯಗುಣಗಳನ್ನು ಕಂಡಷ್ಟೇ ನಿರ್ಮಲ ಮನಸ್ಸಿನಿಂದ ನಮ್ಮವರ ತಪ್ಪುಗಳನ್ನು ಎತ್ತಿ ತೋರಿಸಲು ಸಾಧ್ಯವಾದರೆ ಅದೇ ಸಮತೂಕದ ಪತ್ರಿಕೋದ್ಯಮ.

ಇಂದು ಸಮಾನಾಂತರ ದೂರದ ವರದಿಗಾರಿಕೆ ಕಮ್ಮಿಯಾಗಿದೆ. ಇವರು ನಮ್ಮವರು ಅವರು ಇತರರು ಎನ್ನುವ ವಿಚಾರ- ನಡವಳಿಕೆ ಇಬ್ಬಗೆಯ ಪತ್ರಕರ್ತರಲ್ಲಿ ಕಂಡು ಬರುತ್ತಿದೆ. ಇದರಿಂದ ನಾವು ಅವರು ಅನ್ನುವ ಭ್ರಮಾ ಪತ್ರಿಕೋದ್ಯಮ ಸಹಜ ವಾಗಿದೆ. ನಮ್ಮ ಸಮಾಜದ ಸ್ವಾಸ್ಥಕ್ಕೆ, ಪ್ರಜಾಸತ್ತೆಯ ವಿಕಾಸಕ್ಕೆ ಇದು ಬಹಳ ಅಪಾಯಕಾರಿ.

ಕೆಲವು ದಶಕಗಳ ಹಿಂದೆ ಈ ಸಿದ್ಧಾಂತದವರು ಹೀಗೆ, ಆ ಸಿದ್ಧಾಂತದವರು ಹಾಗೆ, ಬಲಪಂಥೀಯರು ಹೀಗೆಂದರೆ ಎಡಪಂಥೀಯರು ಹಾಗೆನ್ನುತ್ತಾರೆ ಎನ್ನುವ ಮಾತುಗಳನ್ನು ಆಡುತ್ತಿದ್ದ ನಾವು ಈಗ ಇವರು ಸರಿ, ಅವರು ತಪ್ಪುಎನ್ನುವ ತೀರ್ಮಾನ ರೂಪಿ ಮಾತುಗಳನ್ನು ಆಡುತ್ತಿದ್ದೇವೆ. ಕೇವಲ ಕೆಲವು ಶತಮಾನಗಳಲ್ಲಿ ಯಾವುದೇ ಸಿದ್ಧಾಂತದ ಸರಿ ತಪ್ಪುಗಳು ಸಾಬೀತು ಆಗುವುದಿಲ್ಲ. ಇವುಗಳನ್ನು ಸಂಪೂರ್ಣವಾಗಿ ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕು ಮಾಧ್ಯಮಕ್ಕೆ ಇಲ್ಲ ಎನ್ನುವ ತರ್ಕವನ್ನೂ ಮೀರಿ ನಾವು ಪಕ್ಷಪಾತಿಗಳಾಗುತ್ತಿದ್ದೇವೆ. ಮಾನವ ಕುಲ ಹೇಗೆ ವಿಕಾಸಗೊಳ್ಳುತ್ತಿದೆಯೋ ಹಾಗೆಯೇ ಸಿದ್ಧಾಂತಗಳೂ ಕೂಡ ವಿಕಾಸ ಗೊಳ್ಳುತ್ತಿವೆ. ಅವುಗಳ ಪರಿಪೂರ್ಣತೆಯ ಬಗ್ಗೆ ಷರಾ ಬರೆಯುವ ಅಗತ್ಯ ಈಗಂತೂ ಇಲ್ಲ.

ಈ ಹಿನ್ನೆಲೆಯಲ್ಲಿಯೇ ಗಾಂಧಿ ತನ್ನ ಜೀವನ ಕಥೆಗೆ ‘‘ಸತ್ಯದೊಂದಿಗೆ ನನ್ನ ಪ್ರಯೋಗಗಳು’’ ಅನ್ನುವ ಹೆಸರು ಹುಡುಕಿಕೊಂಡಿದ್ದು ನನಗೆ ಸಮಪರ್ಕವಾದ ನಡೆ ಅನ್ನಿಸುತ್ತದೆ. ಅವರು ಸತ್ಯದೊಂದಿಗೆ ಪ್ರಯೋಗ ಮಾಡಬಹುದಾದರೆ ನಾವೇಕೆ ಸಿದ್ಧಾಂತಗಳೊಡನೆಯ ಪ್ರಯೋಗಗಳನ್ನು ಅರ್ಧದಲ್ಲಿ ಕೈ ಬಿಡಬೇಕು?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top