ಅಕ್ರಮ ನೇಮಕಾತಿಯಿಂದ ಸಾರ್ವಜನಿಕ ಆಡಳಿತಕ್ಕೆ ಗಂಭೀರ ಅಪಾಯ | Vartha Bharati- ವಾರ್ತಾ ಭಾರತಿ

ಅಕ್ರಮ ನೇಮಕಾತಿಯಿಂದ ಸಾರ್ವಜನಿಕ ಆಡಳಿತಕ್ಕೆ ಗಂಭೀರ ಅಪಾಯ

ಉತ್ತರ ಪತ್ರಿಕೆಗಳ ಮೌಲ್ಯಮಾಪನ ಅವಧಿಯಲ್ಲಿ ಲೋಕಸೇವಾ ಆಯೋಗದ ಸದಸ್ಯರು ಕೊಠಡಿಗೆ ಪ್ರವೇಶಿಸಿ ಅಕ್ರಮ ನಡೆಸಿದ ಬಗ್ಗೆ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಡಿಜಿಟಲ್ ಮೌಲ್ಯಮಾಪನದ ನಂತರ ಸಂಬಂಧಪಟ್ಟ ಪರೀಕ್ಷಕರು ಡಿಜಿಟಲ್ ಸಹಿಯನ್ನು ಮಾಡಿಲ್ಲದಿರುವುದು ಅಧಿಕೃತವಾಗಿ ತಿಳಿದುಬಂದಿದೆ. ಡಿಜಿಟಲ್ ಮೌಲ್ಯಮಾಪನದ ನಂತರ ಆಯೋಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಸ್‌ವರ್ಡ್ ನ್ನು ಬಳಸಿಕೊಂಡು ಅಂಕಗಳನ್ನು ತಿದ್ದಿರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ.

ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಸುಗಮ ಆಡಳಿತ ಮತ್ತು ಒಳಗೊಳ್ಳುವ ಅಭಿವೃದ್ಧಿ ಪ್ರಕ್ರಿಯೆಗಳು ವಿಶೇಷ ಮಹತ್ವ ಹೊಂದಿವೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಸ್ವರಾಜ್ಯದ ಸಂಕೇತವಾದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸುರಾಜ್ಯದ ಸಂಕೇತವಾಗಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ರಾಜಕೀಯ ಇಚ್ಛಾಶಕ್ತಿ ಮತ್ತು ಸಾಮಾಜಿಕ ಹೋರಾಟಗಳ ಕೊರತೆಯಿಂದಾಗಿ ಸಾರ್ವಜನಿಕ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರವುಂಟಾಗಿ ಸಾರ್ವಜನಿಕ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸುಗಮ ನಿರ್ವಹಣೆಗಾಗಿ ಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯ ಲೋಕಸೇವಾ ಆಯೋಗಗಳನ್ನು ಸ್ಥಾಪಿಸಲಾಗಿದೆ. ಕೇಂದ್ರ ಲೋಕಸೇವಾ ಆಯೋಗ ಇದುವರೆಗೂ ಭ್ರಷ್ಟಾಚಾರ ಮುಕ್ತ ನೇಮಕಾತಿಗೆ ದೇಶದಾದ್ಯಂತ ಹೆಸರಾಗಿದೆ. ಆದರೆ ಕರ್ನಾಟಕ ರಾಜ್ಯವನ್ನೂ ಒಳಗೊಂಡಂತೆ ವಿವಿಧ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಲೋಕಸೇವಾ ಆಯೋಗಗಳು ನೇಮಕಾತಿಗೆ ಸಂಬಂಧಿಸಿದಂತೆ ನಡೆಸಿರುವ ಅಕ್ರಮ, ಅವ್ಯವಹಾರ ಮತ್ತು ಭ್ರಷ್ಟಾಚಾರಗಳು ಮಾಧ್ಯಮಗಳು ಮತ್ತು ನಾಗರಿಕ ಸಮಾಜಳಲ್ಲಿ ಗಂಭೀರ ಟೀಕೆಗೆ ಗುರಿಯಾಗಿವೆ.

ಕರ್ನಾಟಕ ಲೋಕಸೇವಾ ಆಯೋಗ 2015ರಲ್ಲಿ ಸುಮಾರು 428 ಹುದ್ದೆಗಳ ಆಯ್ಕೆಯಲ್ಲಿ ನಡೆಸಿರುವ ವ್ಯಾಪಕ ಭ್ರಷ್ಟಾಚಾರ ಮತ್ತು ಅಕ್ರಮಗಳು ದೇಶದ ಗಮನ ಸೆಳೆದಿವೆ. ಈ ಹುದ್ದೆಗಳಿಗೆ ನೇಮಕಾತಿ ಸಂಬಂಧಿಸಿದಂತೆ ಮೇ 15, 2017ರಲ್ಲಿ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಡಿಸೆಂಬರ್ ತಿಂಗಳ ಒಳಗಾಗಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳನ್ನು ನಡೆಸಿದೆ. ಆದರೆ ಸುಮಾರು 2 ವರ್ಷಗಳ ನಂತರ ಡಿಸೆಂಬರ್ 23, 2019ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿರುವುದು ನೇಮಕಾತಿಯಲ್ಲಿ ಜರುಗಿರುವ ಅಕ್ರಮಗಳಿಗೆ ಸಾಕ್ಷಿಯಾಗಿದೆ. ಸುಮಾರು 7 ದಿನಗಳ ಕಾಲಾವಕಾಶ ನೀಡಿ ಆಯ್ಕೆ ಪ್ರಕ್ರಿಯೆಯಲ್ಲಿನ ಲೋಪದೋಷಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಆಯೋಗ ಅಭ್ಯರ್ಥಿಗಳಿಗೆ ಸೂಚನೆ ನೀಡಿರುವುದರ ಹಿಂದೆ ವ್ಯಾಪಕ ಭ್ರಷ್ಟಾಚಾರ ನಡೆದಿರುವುದಕ್ಕೆ ಪುರಾವೆಯಾಗಿದೆ.

ವಾಸ್ತವವಾಗಿ ಇದೇ ಆಯೋಗ 2014ರ ನೇಮಕಾತಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಕೆಗೆ ಸುಮಾರು 30 ದಿನಗಳ ಕಾಲಾವಕಾಶ ನೀಡಿತ್ತು. ಕೆ.ಪಿ.ಎಸ್.ಸಿ. ನಿಯಮಾವಳಿಗಳ ಪ್ರಕಾರ ಕನಿಷ್ಠ 15 ದಿನಗಳ ಸಮಯಾವಕಾಶ ನೀಡುವ ಶಿಷ್ಟಾಚಾರವನ್ನು ಗಾಳಿಗೆ ತೂರಿ ಸುಮಾರು 7 ದಿನಗಳ ಕಡಿಮೆ ಅವಧಿಯನ್ನು ಆಕ್ಷೇಪಣೆ ಸಲ್ಲಿಕೆಗೆ ನೀಡಿರುವುದರ ಹಿಂದೆ ಭ್ರಷ್ಟಾಚಾರದ ಪ್ರಭಾವ ಎದ್ದು ಕಾಣುತ್ತದೆ. ವಿಶೇಷವಾಗಿ ಈ 7 ದಿನಗಳ ಅವಧಿಯಲ್ಲಿ ಕ್ರಿಸ್‌ಮಸ್ ರಜೆ, 4ನೇ ಶನಿವಾರ ಹಾಗೂ ರವಿವಾರ ಸೇರಿದಂತೆ 3 ದಿನಗಳ ಸರಕಾರಿ ರಜೆ ಇದ್ದುದನ್ನು ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಬೇಕು. ಹಿಂದೆ ಆಯ್ಕೆಯಾಗಿರುವ ಮತ್ತು ಆಯ್ಕೆಯಾಗದಿರುವ ಅಭ್ಯರ್ಥಿಗಳ ವಿಷಯವಾರು ಅಂಕಗಳನ್ನು ಆಯೋಗ ಪ್ರಕಟಿಸಿದೆ. ಆದರೆ 2015ರ ನೇಮಕಾತಿಗೆ ಸಂಬಂಧಿಸಿದಂತೆ ಕೇವಲ ಆಯ್ಕೆ ಹೊಂದಿರುವ ಅಭ್ಯರ್ಥಿಗಳ ಅಂಕಗಳನ್ನು ಮಾತ್ರ ಇ-ಮೇಲ್ ಮೂಲಕ ಪ್ರಕಟಿಸಿರುವುದರ ಹಿಂದೆ ಸ್ಥಾಪಿತ ಹಿತಾಸಕ್ತಿಗಳ ಹುನ್ನಾರ ಪ್ರಧಾನವಾಗಿ ಕಂಡುಬರುತ್ತದೆ. ಅಲ್ಲದೆ ಇ-ಮೇಲ್ ಪ್ರಕಟಿಸಿರುವ ಅಂಕಪಟ್ಟಿಯಲ್ಲಿ ಯಾವುದೇ ವಿದ್ಯುನ್ಮಾನ ಭದ್ರತೆ, ಸಂಬಂಧಿಸಿದ ಅಧಿಕಾರಿಯ ಸಹಿ ಮತ್ತು ಆಯೊೀಗದ ಲಾಂಛನಗಳು ಕಂಡುಬಂದಿಲ್ಲ.

ನ್ಯಾಯವಂಚಿತ ಅರ್ಹ ಅಭ್ಯರ್ಥಿಗಳು ಮಾಹಿತಿ ಹಕ್ಕು ಅಧಿನಿಯಮ, 2005ರ ಅನ್ವಯ ಕಾನೂನು ಬದ್ಧವಾಗಿ ಮುಖ್ಯ ಪರೀಕ್ಷೆಯ ವಿಷಯವಾರು ಅಂಕ ಹಾಗೂ ಉತ್ತರ ಪತ್ರಿಕೆಗಳನ್ನು ಒದಗಿಸಲು ದಿನಾಂಕ 31-12-2019ರಲ್ಲಿ ಆಯೋಗವನ್ನು ಸಂಪರ್ಕಿಸಿ ದ್ದರು. ದಿನಾಂಕ 09-01-2020ರಂದು ಆಯೋಗ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿಲ್ಲವಾದ ಕಾರಣ ನೀವು ಕೋರಿರುವ ಮಾಹಿತಿ ಒದಗಿಸಲು ಸಾಧ್ಯವಿಲ್ಲವೆಂಬ ನೆಪ ನೀಡಿ ಮರುದಿನವೇ ಅಂದರೆ ದಿನಾಂಕ 10-01-2020ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿರುವುದು ಅಕ್ರಮ ನೇಮಕಾತಿಗೆ ಸ್ಪಷ್ಟ ಉದಾಹರಣೆಯಾಗಿದೆ. ವಾಸ್ತವವಾಗಿ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ಮೌಲ್ಯಮಾಪಕರ ಹೆಸರು, ಸಹಿ ಮತ್ತು ಗುರುತುಗಳು ಇಲ್ಲದಿರುವುದು ಆಯೋಗ ನಡೆಸಿರುವ ಅಕ್ರಮಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ. ರಾಜ್ಯ ಲೋಕಸೇವಾ ಆಯೋಗವು ಉಚ್ಚನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಉತ್ತರ ಪತ್ರಿಕೆಗಳನ್ನು ಕೊಡಲು ನಿರಾಕರಿಸಿರುವುದು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆಯೆಂಬುದನ್ನು ಕರ್ನಾಟಕ ರಾಜ್ಯ ಸರಕಾರ ಗಮನಿಸಬೇಕು.

ಭಾರತದ ಸರ್ವೋಚ್ಚ ನ್ಯಾಯಾಲಯ ಉತ್ತರ ಪ್ರದೇಶ ಲೋಕಸೇವಾ ಆಯೋಗಕ್ಕೆ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಶೀಲನೆಗಾಗಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಹೊಣೆಗಾರಿಕೆಗಳ ಹಿನ್ನೆಲೆಯಲ್ಲಿ ಒದಗಿಸಬೇಕೆಂದು ದಿನಾಂಕ 16-07-2018ರಂದು ಸ್ಪಷ್ಟ ನಿರ್ದೇಶನ ನೀಡಿತ್ತು. ಸಾರ್ವಜನಿಕ ಹಿತದೃಷ್ಟಿಯಿಂದ ಪರೀಕ್ಷಕನು ಅಭ್ಯರ್ಥಿಗಳ ಉತ್ತರ ಪತ್ರಿಕೆ ಹಾಗೂ ಲಿಪಿಯೊಂದಿಗೆ ವಿಶ್ವಾಸಾರ್ಹ ಸಂಬಂಧವನ್ನು ಹೊಂದಿಲ್ಲದ ಕಾರಣ ಲೋಕಸೇವಾ ಆಯೋಗ ಉತ್ತರ ಪತ್ರಿಕೆಗಳನ್ನು ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಒದಗಿಸಬೇಕು ಎಂಬ ನಿರ್ದೇಶನವಿದ್ದಾಗ್ಯೂ ಕರ್ನಾಟಕ ಲೋಕಸೇವಾ ಆಯೋಗ ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆಗಳನ್ನು ಕೊಡಲು ನಿರಾಕರಿಸಿರುವುದು ನ್ಯಾಯಾಂಗ ನಿಂದನೆ ಅಪರಾಧ ಮತ್ತು ನೇಮಕಾತಿ ಅಕ್ರಮಗಳಿಗೆ ಸೂಕ್ತ ಪುರಾವೆಗಳನ್ನು ಒದಗಿಸುತ್ತದೆ.

ಕರ್ನಾಟಕ ಲೋಕಸೇವಾ ಆಯೋಗವು ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆಗಳ ಪ್ರತಿಗಳನ್ನು ಕೊಡಲು ನಿರಾಕರಿಸಿರುವುದು ಭ್ರಷ್ಟ ಪ್ರವೃತ್ತಿಗೆ ನೇರ ಸಾಕ್ಷಿಯಾಗಿದೆ ಎಂದು ಕೆಎಎಸ್ ನೊಂದ ಅಭ್ಯರ್ಥಿಗಳ ಹಿತರಕ್ಷಣಾ ವೇದಿಕೆಯ ಪ್ರಧಾನ ಸಂಚಾಲಕಿ ಶ್ರೀಮತಿ ಆಯಿಷಾ ಫರ್ಝಾನ ಪ್ರತಿಪಾದಿಸಿರುವುದು ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ದೃಷ್ಟಿಯಿಂದ ಅತ್ಯಂತ ಔಚಿತ್ಯಪೂರ್ಣವಾಗಿದೆ ಮತ್ತು ಕಾನೂನುಬದ್ಧವಾಗಿದೆ. 2015ರ ಕೆಎಎಸ್ ಪರೀಕ್ಷೆಗಳ ಮೌಲ್ಯಮಾಪನ ಅತ್ಯಂತ ಅನುಮಾನಾಸ್ಪದವಾಗಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಅವಧಿಯಲ್ಲಿ ಸಂಬಂಧಪಟ್ಟ ಮೌಲ್ಯಮಾಪಕರ ಚಲನವಲನಗಳನ್ನು ಅಧಿಕೃತವಾಗಿ ದಾಖಲಿಸಿರುವ ಸಂಬಂಧಪಟ್ಟ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಲೋಕಸೇವಾ ಆಯೋಗಕ್ಕೆ ಅಭ್ಯರ್ಥಿಗಳು ಮಾಹಿತಿ ಹಕ್ಕಿನನ್ವಯ ಸಲ್ಲಿಸಿರುವ ಅರ್ಜಿಗೆ 30 ದಿನಗಳ ನಿಗದಿತ ಅವಧಿಯ ನಂತರವೂ ಯಾವುದೇ ಸ್ಪಂದನೆ ಬಂದಿಲ್ಲದಿರುವುದು ಪಾರದರ್ಶಕತೆಗೆ ಕೊಡಲಿಪೆಟ್ಟು ಬಿದ್ದಂತಾಗಿದೆಯೆಂದು ಅರ್ಜಿದಾರ ಸುಧನ್ವ ಅಭಿಪ್ರಾಯಪಟ್ಟಿದ್ದಾರೆ.

ಅಭ್ಯರ್ಥಿಗಳು ಪಡೆದ ಅಂಕಗಳನ್ನು ವ್ಯವಸ್ಥಿತವಾಗಿ ವಿಷಯವಾರು ವಿಘಟನೆ ಮಾಡದಿರುವುದರಿಂದ ನೊಂದ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸುಮಾರು 7 ವಿಷಯಗಳಲ್ಲಿ (ತಲಾ 250 ಅಂಕಗಳು) ಮತ್ತು ಸಂದರ್ಶನ (200 ಅಂಕಗಳು) ಒಟ್ಟು 1,950 ಅಂಕಗಳಲ್ಲಿ ಅಭ್ಯರ್ಥಿಗಳು ಪಡೆದಿರುವ ವಿಷಯವಾರು ಅಂಕಗಳನ್ನು ಸ್ಪಷ್ಟವಾಗಿ ಬೇರ್ಪಡಿಸಿ ನಮೂದಿಸಬೇಕೆಂದು ಅಭ್ಯರ್ಥಿಗಳು ಮಾಡಿರುವ ಮನವಿ ಅರ್ಥಪೂರ್ಣವಾಗಿದೆ. ಪ್ರಸ್ತುತ 2015ರ ಪರೀಕ್ಷೆ ಬರೆದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ನಕಲು ಪ್ರತಿಗಳನ್ನು ಒದಗಿಸುವಂತೆ ಮಾಹಿತಿ ಹಕ್ಕಿಗೆ ಅನುಗುಣವಾಗಿ ಮಾಡಿರುವ ಮನವಿಯನ್ನು ತಿರಸ್ಕರಿಸುವ ಅಧಿಕಾರ ಕರ್ನಾಟಕ ಲೋಕೇವಾ ಆಯೋಗಕ್ಕೆ ಖಂಡಿತವಾಗಿಯೂ ಇಲ್ಲ.

ಕೇಂದ್ರ ಲೋಕಸೇವಾ ಆಯೋಗವು ಡಿಜಿಟಲ್ ಮೌಲ್ಯಮಾಪನದಲ್ಲಿ ಲೋಪದೋಷಗಳು ಇರುವ ಕಾರಣ ಈ ಪದ್ಧತಿಯನ್ನು ಇದುವರೆಗೂ ಅಳವಡಿಸಿಕೊಂಡಿಲ್ಲ. ಪರೀಕ್ಷಕರು ಖುದ್ದಾಗಿ ಮೌಲ್ಯಮಾಪನ ನಡೆಸುವ ಕ್ರಮವು ಇದುವರೆಗೂ ಮುಂದುವರಿದಿದೆ. 2011ರವರೆಗೂ ಹಸ್ತಚಾಲಿತ ಮೌಲ್ಯಮಾಪನ ಕ್ರಮವನ್ನು ಕರ್ನಾಟಕ ಲೋಕಸೇವಾ ಆಯೋಗ ತಪ್ಪದೇ ಮುಂದುವರಿಸಿದೆ. ಆದರೆ 2014 ಮತ್ತು 2015ನೇ ಸಾಲಿನ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನ ನಡೆಸಿರುವ ಕರ್ನಾಟಕ ಲೋಕಸೇವಾ ಆಯೋಗದ ನಡೆ ಆರೋಗ್ಯಕರ ಶಿಷ್ಟಾಚಾರಗಳಿಗೆ ವಿರುದ್ಧವಾಗಿದೆ. ಹಿಂದೆ ತೆಲಂಗಾಣ ರಾಜ್ಯದಲ್ಲಿ ಡಿಜಿಟಲ್ ಮೌಲ್ಯಮಾಪನದಿಂದಾಗಿ ಅವಕಾಶ ವಂಚಿತ ಅಭ್ಯರ್ಥಿಯೊಬ್ಬ ಆತ್ಮಹತ್ಯೆ ಮಾಡಿ ಕೊಂಡಿರುವ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗಿದೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜರುಗಿದ ಲೋಕಸೇವಾ ಪರೀಕ್ಷೆಯಲ್ಲಿ ಡಿಜಿಟಲ್ ಮೌಲ್ಯಮಾಪನ ದಲ್ಲಿ ಅಕ್ರಮ ನಡೆಸಿದ ವಿಷಯ ಅಲ್ಲಿನ ಉಚ್ಚ ನ್ಯಾಯಾಲಯದ ಗಮನಕ್ಕೆ ಬಂದು ಫಲಿತಾಂಶವನ್ನು ತಡೆಹಿಡಿಯಬೇಕೆಂದು ಆದೇಶಿಸಿದೆ. ಇದರ ವಿರುದ್ಧ ಕೆಲವು ಅಭ್ಯರ್ಥಿಗಳು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದಾಗ ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ತೀರ್ಪನ್ನು ಪುರಸ್ಕರಿಸಿರುವುದು ನೇಮಕಾತಿ ಪಾರದರ್ಶಕತೆೆ ಸಂದ ಬಹುದೊಡ್ಡ ಗೌರವವಾಗಿದೆ.

ಮುಖ್ಯ ಪರೀಕ್ಷೆಯು ಡಿಸೆಂಬರ್ 2017ರಂದು ಮುಗಿದಿದ್ದರೂ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಜುಲೈ 2018ರ ತನಕವೂ ನಿರ್ವಹಿಸದಿರುವ ಹಿಂದೆ ನೇಮಕಾತಿ ಅಕ್ರಮ ಸ್ಪಷ್ಟವಾಗಿ ಗೋಚರಿಸುತ್ತದೆ. ಇದುವರೆಗೂ ಕರ್ನಾಟಕ ಲೋಕಸೇವಾ ಆಯೋಗ ಡಿಜಿಟಲ್ ಮೌಲ್ಯಮಾಪನ ಕುರಿತಂತೆ ಯಾವುದೇ ಪಾರದರ್ಶಕ ಹಾಗೂ ಜವಾಬ್ದಾರಿಯುತ ಶಿಷ್ಟಾಚಾರಗಳನ್ನು ಅಳವಡಿಸಿಕೊಂಡಿಲ್ಲದಿರುವುದು ಖಂಡನೀಯ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಅವಧಿಯಲ್ಲಿ ಲೋಕಸೇವಾ ಆಯೋಗದ ಸದಸ್ಯರು ಕೊಠಡಿಗೆ ಪ್ರವೇಶಿಸಿ ಅಕ್ರಮ ನಡೆಸಿದ ಬಗ್ಗೆ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಡಿಜಿಟಲ್ ಮೌಲ್ಯಮಾಪನದ ನಂತರ ಸಂಬಂಧಪಟ್ಟ ಪರೀಕ್ಷಕರು ಡಿಜಿಟಲ್ ಸಹಿಯನ್ನು ಮಾಡಿಲ್ಲದಿರುವುದು ಅಧಿಕೃತವಾಗಿ ತಿಳಿದುಬಂದಿದೆ. ಡಿಜಿಟಲ್ ಮೌಲ್ಯಮಾಪನದ ನಂತರ ಆಯೋಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಸ್‌ವರ್ಡ್‌ನ್ನು ಬಳಸಿಕೊಂಡು ಅಂಕಗಳನ್ನು ತಿದ್ದಿರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಆಧುನಿಕ ವೈಜ್ಞಾನಿಕ ಮಂಪರು ಪರೀಕ್ಷೆಗೆ ಗುರಿಪಡಿಸಿದರೆ ಸತ್ಯ ಹೊರಬರುತ್ತದೆ.

ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಸಂಬಂಧಪಟ್ಟ ವಿಷಯ ತಜ್ಞರಿಂದ ಮೌಲ್ಯಮಾಪನ ನಡೆಸದೆ ಇತರರಿಂದ ಮೌಲ್ಯಮಾಪನ ನಡೆಸಿರುವುದು ಅಕ್ರಮಕ್ಕೆ ಸಾಕ್ಷಿಯಾಗಿದೆ. ಉದಾಹರಣೆಗೆ ತತ್ವಶಾಸ್ತ್ರದ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ವಿಷಯದ ಉತ್ತರ ಪತ್ರಿಕೆ ಮೊದಲಾದವುಗಳನ್ನು ಇತರ ಪರೀಕ್ಷಕರು ಮೌಲ್ಯಮಾಪನ ನಡೆಸಿರುವುದು ಮೌಲ್ಯಮಾಪಕರ ಹಾಜರಾತಿ ಪುಸ್ತಕದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಈ ಬಾರಿ ಮುಖ್ಯ ಪರೀಕ್ಷೆಯಲ್ಲಿ ಮನಸೋ ಇಚ್ಛೆ ಅಂಕಗಳನ್ನು ತಮಗೆ ಬೇಕಾದ ಅಭ್ಯರ್ಥಿಗಳಿಗೆ ಕೊಡಿಸುವ ಕೆಲಸದಲ್ಲಿ ಲೋಕಸೇವಾ ಆಯೋಗದ ಸದಸ್ಯರ ಪಾತ್ರ ಇರುವುದನ್ನು ತಳ್ಳಿ ಹಾಕಲಾಗುವುದಿಲ್ಲ. ಆಯ್ಕೆಗೊಂಡ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟನೆಯಲ್ಲಿಯೂ ಲೋಕಸೇವಾ ಆಯೋಗ ಸ್ಪಷ್ಟವಾಗಿ ಅಕ್ರಮ ನಡೆಸಿದೆ. ಅಂತಿಮ ಆಯ್ಕೆ ಪಟ್ಟಿ ದಿನಾಂಕ 10-01-2020ರ ಸಂಜೆ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. ಆದರೆ ಇದಕ್ಕೂ ಮೊದಲೇ ಕರ್ನಾಟಕ ಸರಕಾರದ ಮುದ್ರಣಾಲಯದ ವಿಶೇಷ ರಾಜ್ಯಪತ್ರದಲ್ಲಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆಯೋಗದ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ರಾಜ್ಯಪತ್ರದಲ್ಲಿ ಪ್ರಕಟಿಸಲು ಸರಕಾರದ ಮುದ್ರಣಾಲಯಕ್ಕೆ ಕಳುಹಿಸಿರುವ ಆಯೋಗದ ಕ್ರಮ ಬಹಳಷ್ಟು ಗೂಡಾರ್ಥ ಹೊಂದಿದೆ. ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನದ ನಂತರ ಅಂಕಗಳನ್ನು ದುರುದ್ದೇಶಪೂರ್ವಕವಾಗಿ ತಿದ್ದಿ ಭಾರೀ ಪ್ರಮಾಣದಲ್ಲಿ ಲೋಕಸೇವಾ ಆಯೋಗದ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ಭ್ರಷ್ಟಾಚಾರ ನಡೆಸಿರುವ ಹಿನ್ನೆಲೆಯಲ್ಲಿ 2015ರ ನೇಮಕಾತಿಯನ್ನು ರದ್ದುಗೊಳಿಸುವ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಸರಕಾರ ಹೊಂದಿದೆ. ಅಲ್ಲದೆ ಉತ್ತರ ಪತ್ರಿಕೆಗಳನ್ನು ಸಂಬಂಧಪಟ್ಟ ವಿಷಯಗಳ ತಜ್ಞರನ್ನು ಒಳಗೊಂಡ ವಸ್ತುನಿಷ್ಠ ಹಸ್ತಚಾಲಿತ ಮೌಲ್ಯಮಾಪನಕ್ಕೆ ಒಳಪಡಿಸಿ ಅರ್ಹ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸತ್ಯಶೋಧನಾ ಸಮಿತಿ ರಚಿಸಲು ಮುಂದಾಗಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top