ಟ್ರಂಪ್ ಯುಗದಲ್ಲಿ ಭಾರತಕ್ಕೆ ಎದುರಾಗಲಿವೆ ಸವಾಲುಗಳು....

 ಏಶ್ಯದ ಬಗ್ಗೆ ಅಮೆರಿಕದ ನೀತಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಅಮೆರಿಕ, ಚೀನಾ ಹಾಗೂ ರಶ್ಯದ ಜೊತೆ ನಡೆಸುವ ಮಾತುಕತೆಗಳಲ್ಲಿ ಸೂಕ್ತವಾದ ನಿಲುವನ್ನು ತಳೆಯುವುದು ಭಾರತಕ್ಕೆ ಒಂದು ದೊಡ್ಡ ಸವಾಲಾಗಲಿದೆಯೆಂದು ಅಮೆರಿಕದ 45ನೆ ಅಧ್ಯಕ್ಷರಾಗಿ ಟ್ರಂಪ್ ಚುನಾಯಿತರಾದ ಬಳಿಕ ಅಮೆರಿಕಕ್ಕೆ ಭೇಟಿ ನೀಡಿ ವಾಪಸಾದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಒಪ್ಪಿಕೊಂಡಿರುವುದು ವಾಸ್ತವ ಪರಿಸ್ಥಿತಿಗೆ ಕೈಗನ್ನಡಿಯಾಗಿದೆ.

ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ಕೆಲವೇ ದಿನಗಳ ಬಳಿಕ, ಭಾರತದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಅಮೆರಿಕಕ್ಕೆ ಭೇಟಿ ನೀಡಿದ್ದರು. ನಿಯೋಜಿತ ಅಮೆರಿಕ ಅಧ್ಯಕ್ಷರ ಪ್ರಮುಖ ಸಹಾಯಕರ ಜೊತೆ ಮಾತುಕತೆ ನಡೆಸುವುದು ಹಾಗೂ ಟ್ರಂಪ್ ಆಡಳಿತದಲ್ಲಿ ಮಹತ್ವದ ಹುದ್ದೆಗಳನ್ನು ಹೊಂದುವ ಸಾಧ್ಯತೆಯಿರುವ ವ್ಯಕ್ತಿಗಳ ಜೊತೆ ಸಂವಹನವನ್ನು ಏರ್ಪಡಿಸಿಕೊಳ್ಳಲು ಅವಕಾಶ ನೀಡುವುದೇ ಈ ಭೇಟಿಯ ಉದ್ದೇಶವಾಗಿತ್ತು.

 ವಾಶಿಂಗ್ಟನ್‌ಗೆ ಭೇಟಿ ನೀಡಿ, ಸ್ವದೇಶಕ್ಕೆ ಹಿಂದಿರುಗಿದ ಬಳಿಕ ಜೈಶಂಕರ್ ಅವರು ಹೊಸದಿಲ್ಲಿಯ ರಕ್ಷಣಾ ಅಧ್ಯಯನ ಹಾಗೂ ವಿಶ್ಲೇಷಣೆ ಕುರಿತ ರಾಷ್ಟ್ರೀಯ ಇನ್ಸ್‌ಟಿ ಟ್ಯೂಟ್‌ನಲ್ಲಿ ನಡೆದ ವಿಚಾರಸಂಕಿರಣವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಾ ‘‘ಟ್ರಂಪ್ ಆಡಳಿತದಲ್ಲಿ ಜಗತ್ತಿನ ಜೊತೆ ಅಮೆರಿಕದ ಬಾಂಧವ್ಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ’’ ಎಂದು ಹೇಳಿದ್ದರು. ನೂತನ ಟ್ರಂಪ್ ಆಡಳಿತವು ವಿಭಿನ್ನವಾದ ಆದ್ಯತೆಗಳನ್ನು ಹೊಂದಿದೆಯೆಂದು ಖಚಿತವಾಗಿ ಭವಿಷ್ಯ ನುಡಿಯಬಹುದು’’ ಎಂದಿದ್ದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ರಂಪ್ ಅವರು ವಿವಿಧ ದ್ವಿಪಕ್ಷೀಯ ವಿಚಾರಗಳಲ್ಲಿ ಅಮೆರಿಕದ ಹಾಲಿ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದ್ದರು. ಟ್ರಂಪ್ ಶ್ವೇತಭವನವನ್ನು ಪ್ರವೇಶಿಸಿದ ಬಳಿಕ ಯುರೋಪ್ ಹಾಗೂ ಏಶ್ಯದ ರಾಷ್ಟ್ರಗಳಿಗೆ ಸಂಬಂಧಿಸಿ ಅಮೆರಿಕದ ವಿದೇಶಾಂಗ ನೀತಿಯಲ್ಲಿ ಪ್ರಮುಖ ಬದಲಾವಣೆಗಳಾಗುವುದಂತೂ ಖಚಿತ. ಟ್ರಂಪ್ ಪ್ರತಿಪಾದಿಸುತ್ತಿರುವ ‘ಅಮೆರಿಕದ ಹಿತಾಸಕ್ತಿಯೇ ಮೊದಲು’ ಎಂಬ ವಿದೇಶಾಂಗ ನೀತಿ, ಉಕ್ರೇನ್‌ನ ಕ್ರಿಮಿಯಾದ ಮೇಲೆ ರಶ್ಯದ ಆಕ್ರಮಣವನ್ನು ಯುರೋಪ್ ಒಕ್ಕೂಟವು ಖಂಡಿಸಿದ ಬಳಿಕವೂ, ರಶ್ಯನ್ ಅಧ್ಯಕ್ಷ ವ್ಲಾದಿಮಿರ್ ಪುತಿನ್‌ರನ್ನು ಅವರು ಪ್ರಶಂಸಿಸಿರುವುದು ಮತ್ತು ನ್ಯಾಟೊ ಸೇನಾ ಒಕ್ಕೂಟದ ಬಗ್ಗೆ ಅವರ ಬಹಿರಂಗ ಟೀಕೆ, ಇವೆಲ್ಲವೂ ಯುರೋಪ್‌ನಲ್ಲಿರುವ ಅಮೆರಿಕದ ಮಿತ್ರರ ಇರಿಸುಮುರಿಸಿಗೆ ಕಾರಣವಾಗಿದೆ.

ಏಶ್ಯದಲ್ಲಿನ ಅಮೆರಿಕನ್ ಮೈತ್ರಿಕೂಟದ ವೌಲ್ಯವನ್ನು ಕೂಡಾ ಅವರು ಪ್ರಶ್ನಿಸಿದ್ದಾರೆ. ಬೃಹತ್ ಶಕ್ತಿಯಾಗಿ ಬೆಳೆಯುತ್ತಿರುವ ಚೀನಾ ಹಾಗೂ ಪುಂಡು ರಾಷ್ಟ್ರವಾದ ಉತ್ತರ ಕೊರಿಯದ ಎದುರು ಜಪಾನ್ ಹಾಗೂ ದಕ್ಷಿಣ ಕೊರಿಯ ಮತ್ತಿತರ ದೇಶಗಳಿಗೆ ಅಮೆರಿಕವು ಒದಗಿಸುತ್ತಿರುವ ಭದ್ರತೆಗಾಗಿ ಹಣವನ್ನು ಪಾವತಿಸದೆ ಇದ್ದಲ್ಲಿ, ಆ ರಾಷ್ಟ್ರಗಳು ತಮ್ಮ ರಕ್ಷಣೆಗೆ ಬೇರೆ ದಾರಿ ಕಂಡುಕೊಳ್ಳಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಚೀನಾವನ್ನು ಹೊರತುಪಡಿಸಿ ಪೆಸಿಫಿಕ್ ಸಮುದ್ರ ವಲಯದ 12 ರಾಷ್ಟ್ರಗಳು ಕಳೆದ ವರ್ಷದ ಫೆಬ್ರವರಿ 4ರಂದು ಸಹಿಹಾಕಿರುವ ಪೆಸಿಫಿಕ್ ಸಾಗರದಂಚಿನ ದೇಶಗಳ ಪಾಲುದಾರಿಕೆ ಒಡಂಬಡಿಕೆಯನ್ನು ಹಿಂತೆಗೆದುಕೊಳ್ಳುವುದಾಗಿಯೂ ಟ್ರಂಪ್ ಪ್ರತಿಜ್ಞೆಗೈದಿದ್ದರು.

ಭಾರತವು ಅಮೆರಿಕದ ಜೊತೆಗಾರ ರಾಷ್ಟ್ರವಲ್ಲ. ಆದರೆ 2008ರಲ್ಲಿ ಐತಿಹಾಸಿಕ ಅಣುಶಕ್ತಿ ಸಹಕಾರ ಒಪ್ಪಂದಕ್ಕೆ ಸಹಿಹಾಕಿದ ಬಳಿಕ ಹಾಗೂ 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ ಉಭಯ ರಾಷ್ಟ್ರಗಳ ವ್ಯೆಹಾತ್ಮಕ ದ್ವಿಪಕ್ಷೀಯ ಪಾಲುದಾರಿಕೆಯು ಸ್ಥಿರವಾಗಿ ಬೆಳೆಯುತ್ತಾ ಬಂದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಭಾರತವು ಅಮೆರಿಕಕ್ಕೆ ತುಂಬಾ ಹತ್ತಿರವಾಗಲು ಯತ್ನಿಸುತ್ತಿದೆ. ಅಮೆರಿಕದ ಜೊತೆ ನಿಕಟವಾದ ಭದ್ರತೆ ಹಾಗೂ ರಕ್ಷಣಾ ಬಾಂಧವ್ಯಗಳನ್ನು ಏರ್ಪಡಿಸಲು ಮೋದಿ ಸರಕಾರವು ಭಾರತದ ವ್ಯೆಹಾತ್ಮಕ ಸ್ವಾಯತ್ತೆಯ ಜೊತೆ ರಾಜಿ ಮಾಡಿಕೊಳ್ಳುತ್ತಿದೆಯೆಂದು ಕೆಲವರು ಟೀಕಿಸಿದ್ದಾರೆ.

  2015ರ ಜನವರಿ 26ರಂದು ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ‘ಏಶ್ಯ-ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರ ಪ್ರಾಂತಕ್ಕಾಗಿನ ಜಂಟಿ ವ್ಯೆಹಾತ್ಮಕ ದೂರದೃಷ್ಟಿ’ ಒಪ್ಪಂದವನ್ನು ಘೋಷಿಸಿದರು. ಹಿರಿಯ ರಾಜತಾಂತ್ರಿಕ ಮಧ್ಯೆ ನಡೆಯುವ ಭಾರತ-ಅಮೆರಿಕ-ಜಪಾನ್ ತ್ರಿಪಕ್ಷೀಯ ಮಾತುಕತೆಗಳಿಗೆ ವಿದೇಶಾಂಗ ಸಚಿವರುಗಳ ಮಾತುಕತೆಗೆ ಸರಿಸಮಾನವಾದ ಸ್ಥಾನಮಾನ ನೀಡಲಾಯಿತು. ಭಾರತ-ಅಮೆರಿಕ ನೌಕಾಪಡೆಗಳ ಜಂಟಿ ‘ಮಲಬಾರ್’ ಸಮರಾಭ್ಯಾಸದಲ್ಲಿ ಜಪಾನ್‌ನ ನೌಕಾಯಾನ ಆತ್ಮರಕ್ಷಣೆ ಪಡೆಯು ಸೇರ್ಪಡೆಗೊಳ್ಳುವುದರೊಂದಿಗೆ ಅದನ್ನು ತ್ರಿಪಕ್ಷೀಯ ಸೇನಾ ಕವಾಯತ್ತಾಗಿ ಮಾರ್ಪಡಿಸಲಾಯಿತು.

 ಆದರೆ ಈ ಬೆಳವಣಿಗೆಗಳು ಚೀನಾಕ್ಕೆ ಸಂತಸ ತಂದಿಲ್ಲ ಮತ್ತು ಇವೆಲ್ಲವೂ ತನ್ನನ್ನು ಹದ್ದುಬಸ್ತಿನಲ್ಲಿಡುವ ಪ್ರಯತ್ನಗಳೆಂದು ಅದು ಭಾವಿಸಿಸುತ್ತಿದೆ. ತನ್ನ ಸಾಗರಪ್ರದೇಶದ ನೆರೆಹೊರೆಯ ರಾಷ್ಟ್ರಗಳ ಜೊತೆಗೆ ಚೀನಾ ಹೊಂದಿರುವ ಪ್ರಾದೇಶಿಕ ವಿವಾದಗಳ ಬಗ್ಗೆ ಭಾರತವು ತಾಳಿರುವ ನಿಲುವು, ಹೆಚ್ಚುಕಮ್ಮಿ ಅಮೆರಿಕ ಹಾಗೂ ಜಪಾನ್ ದೇಶಗಳ ನಿಲುವಿಗೆ ಸರಿಸಮವಾಗಿದೆ.

  ಭಾರತವು ಅಮೆರಿಕಕ್ಕೆ ಹತ್ತಿರವಾಗುತ್ತಿರುವಂತೆಯೇ, ಚೀನಾದ ಜೊತೆ ಅದರ ಬಾಂಧವ್ಯವು ವಿಷಮಿಸಿದೆ. ಪರಮಾಣು ಪೂರೈಕೆದಾರರ ಬಳಗಕ್ಕೆ ಸೇರ್ಪಡೆಗೊಳ್ಳುವ ಹೊಸದಿಲ್ಲಿಯ ಪ್ರಯತ್ನಕ್ಕೆ ಬೀಜಿಂಗ್ ಅಡ್ಡಗಾಲು ಹಾಕಿದೆ. ಮಾತ್ರವಲ್ಲದೆ ಪಾಕ್ ಮೂಲದ ಉಗ್ರ ಮಸೂದ್ ಅಝರ್ ವಿರುದ್ಧ ವಿಶ್ವಸಂಸ್ಥೆ ನಿರ್ಬಂಧ ಹೇರುವಂತೆ ಮಾಡುವ ಹೊಸದಿಲ್ಲಿಯ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿತು. ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾದ ‘ಒಂದೇ ವೃತ್ತ ಒಂದೇ ರಸ್ತೆ’ ಯೋಜನೆಯನ್ನು ಭಾರತವು ಬಲವಾಗಿ ವಿರೋಧಿಸುತ್ತಿದೆ. ಈ ಪ್ರದೇಶದಲ್ಲಿ ಪ್ರಭಾವವನ್ನು ವಿಸ್ತರಿಸಲು ಚೀನಾ ನಡೆಸಿದ ಪ್ರಯತ್ನ ಇದೆಂದು ಅದು ಭಾವಿಸುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದುಹೋಗುವ ಚೀನಾ-ಪಾಕಿಸ್ತಾನ ಅರ್ಥಿಕ ಕಾರಿಡಾರ್ ನಿರ್ಮಾಣವನ್ನು ಕೂಡಾ ಈ ಯೋಜನೆ ಒಳಗೊಂಡಿದೆ. ಅದೇ ರೀತಿ ಭಾರತ ಹಾಗೂ ಚೀನಾ ನಡುವೆ ದೀರ್ಘಸಮಯದಿಂದ ನೆನೆಗುದಿಯಲ್ಲಿರುವ ಗಡಿವಿವಾದ ಕುರಿತ ಮಾತುಕತೆಯಲ್ಲಿಯೂ ಯಾವುದೇ ಪ್ರಗತಿ ಕಂಡುಬಂದಿಲ್ಲ.

ಹೀಗಾಗಿ ಮುಂದಿನ ದಿನಗಳಲ್ಲಿ ನಿಸ್ಸಂದೇಹವಾಗಿ ಭಾರತಕ್ಕೆ ಚಿಂತೆಗೀಡಾಗಲು ಹಲವಾರು ಕಾರಣಗಳಿವೆ. ಒಬಾಮ ಉತ್ತರಾಧಿಕಾರಿಯಾಗಿ ಟ್ರಂಪ್ ಅವರ ಆಯ್ಕೆಯು, ನಿರ್ಗಮನ ಸರಕಾರವು ಏಶ್ಯಕ್ಕೆ ನೀಡುತ್ತಿದ್ದ ಪ್ರಾಧಾನ್ಯತೆಯ ಮೇಲೆ ಅನಿಶ್ಚಿತತೆಯ ಕರಿನೆರಳು ಕವಿಯುವಂತೆ ಮಾಡಿದೆ.

ಜಲಾಂತರ್ಗಾಮಿ ಡ್ರೋನ್ ವಿವಾದ

 ತೈವಾನ್ ಅಧ್ಯಕ್ಷ ತ್ಸಾಯಿಂಗ್ ವೆನ್ ಜೊತೆ ಟ್ರಂಪ್ ನಡೆಸಿದ ದೂರವಾಣಿ ಮಾತುಕತೆ ಹಾಗೂ ಅಮೆರಿಕದ ಜಲಾಂತರ್ಗಾಮಿ ಡ್ರೋನ್ ನೌಕೆಯನ್ನು ಚೀನಾವು ಅಂತಾರಾಷ್ಟ್ರೀಯ ಗಡಿಪ್ರದೇಶದಲ್ಲಿ ವಶಪಡಿಸಿಕೊಂಡ ಬಳಿಕ ಆ ಕಮ್ಯುನಿಸ್ಟ್ ದೇಶವನ್ನು ಅವರು ಬಲವಾಗಿ ಟೀಕಿಸಿರುವುದು,ಮುಂದಿನ ದಿನಗಳಲ್ಲಿ ಚೀನಾದ ಜೊತೆ ವಿಶ್ವದ ಹಿರಿಯಣ್ಣನ ಹಗೆತನ ಇನ್ನಷ್ಟು ಉಲ್ಬಣಿಸುವ ಸೂಚನೆಗಳನ್ನು ನೀಡಿದೆ.

  ಹೊಸದಿಲ್ಲಿಯು ಕಳೆದ ಎರಡು ತಿಂಗಳುಗಳಿಂದ ಟ್ರಂಪ್ ತಂಡದ ಜೊತೆ ಮಾತುಕತೆಗಳನ್ನು ನಡೆಸುತ್ತಿದೆ. ಏಶ್ಯದಲ್ಲಿನ ಮಿತ್ರರು ಹಾಗೂ ಪಾಲುದಾರ ರಾಷ್ಟ್ರಗಳ ಜೊತೆಗಿನ ಬಾಂಧವ್ಯಗಳ ಕುರಿತು ಟ್ರಂಪ್ ಚುನಾವಣೆ ಸಂದರ್ಭದಲ್ಲಿ ಪ್ರತಿಪಾದಿಸಿದ್ದ ನಿಲುವುಗಳನ್ನೇ ಅಧಿಕಾರಕ್ಕೇರಿದ ಬಳಿಕವೂ ಅನುಸರಿಸಲಿದ್ದಾರೆಂಬ ಸ್ಪಷ್ಟ ಸೂಚನೆಯನ್ನು ಟ್ರಂಪ್ ಬಳಗ ಭಾರತಕ್ಕೆ ನೀಡಿದೆ. ಇತ್ತೀಚೆಗೆ ಭಾರತ, ರಶ್ಯ ಹಾಗೂ ಚೀನಾ ನಡುವೆ ನಡೆದ ಏಶ್ಯ-ಪೆಸಿಫಿಕ್ ಮಾತುಕತೆಗಳು, ಈ ಮೂರು ದೇಶಗಳು ಪರಸ್ಪರ ಸಮಾನವಾದ ಹಿತಾಸಕ್ತಿಗಳನ್ನು ಹಾಗೂ ನಿಕಟವಾದ ಅಭಿಪ್ರಾಯಗಳನ್ನು ಹೊಂದಿರುವುದನ್ನು ಸಾಬೀತುಪಡಿಸಿದೆ. ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಮೇಲೆ ಸಮನ್ವಯತೆಯನ್ನು ಬಲಪಡಿಸಲು ಇದು ನೆರವಾಗಲಿರುವುದರಿಂದ ಈ ಮಾತುಕತೆಗಳನ್ನು ಮುಂದುವರಿಸಲು ಅವು ಸಮ್ಮತಿಸಿವೆ.

  ಏಶ್ಯದ ಬಗ್ಗೆ ಅಮೆರಿಕದ ನೀತಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಅಮೆರಿಕ, ಚೀನಾ ಹಾಗೂ ರಶ್ಯದ ಜೊತೆ ನಡೆಸುವ ಮಾತುಕತೆಗಳಲ್ಲಿ ಸೂಕ್ತವಾದ ನಿಲುವನ್ನು ತಳೆಯುವುದು ಭಾರತಕ್ಕೆ ಒಂದು ದೊಡ್ಡ ಸವಾಲಾಗಲಿದೆಯೆಂದು ಅಮೆರಿಕದ 45ನೆ ಅಧ್ಯಕ್ಷರಾಗಿ ಟ್ರಂಪ್ ಚುನಾಯಿತರಾದ ಬಳಿಕ ಅಮೆರಿಕಕ್ಕೆ ಭೇಟಿ ನೀಡಿ ವಾಪಸಾದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಒಪ್ಪಿಕೊಂಡಿರುವುದು ವಾಸ್ತವ ಪರಿಸ್ಥಿತಿಗೆ ಕೈಗನ್ನಡಿಯಾಗಿದೆ.

ಕೃಪೆ: ಡೆಕ್ಕನ್ ಹೆರಾಲ್ಡ್

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top