ಪ್ರೀತಿ ಇಲ್ಲ(ವಾ)ದ ಮೇಲೆ...

ಪ್ರೇಮಸಂಬಂಧ ಅಪಾಯಕ್ಕೆ ಅಷ್ಟೊಂದು ಪಕ್ಕಾಗಿರುವಂತಹದು-ವಲ್ನರಬಲ್! ಎಲ್ಲ-ರಕ್ತಸಂಬಂಧ ಅಥವಾ ಆಪ್ತಸಂಬಂಧ ಎಂಬ ಭೇದ ಇಲ್ಲದೆ-ಸಂಬಂಧಗಳ ಅಮೂರ್ತ ಸೀಮೆಯಲ್ಲಿ ತಣ್ಣನೆ ಚೂರಿಯಲುಗಿನ ವಿದ್ರೋಹ ಸುತ್ತಿ ಸುಳಿದಾಡು ವುದು ಎಷ್ಟು ಬೇಡ ಅಂದರೂ ನಮ್ಮ ಗಮನ ಜಗ್ಗುವ ಸತ್ಯ.


ವ್ಯಾಲಂಟೈನ್ ಡೇ-ಪ್ರೇಮಿಗಳ ದಿನ ಆಚರಿಸಿ ಸಂಭ್ರಮಿಸಿದ ತಿಂಗಳಲ್ಲೇ ಇಂತಹದೊಂದು ವಿಷಯ ಬರೆಯಲು ಉಪಕ್ರಮಿಸಿರುವುದು ಸ್ವಲ್ಪ ಸಿನಿಕತೆ ಅಲ್ಪಭಂಡತನದ ಕಾಯಿಲೆ ಗುಣಲಕ್ಷಣಗಳೇನೋ. ಆಗಲಿ, ಏನಂತೆ?

‘‘ಎಲ್ಲ ಮಾನವ ಸಂಬಂಧಗಳು ಒಂದು ಮುಗಿತಾಯದ ಅವಧಿಯೊಂದಿಗೆ ಏರ್ಪಡುತ್ತವೆ- ಆಲ್ ರಿಲೇಷನ್‌ಷಿಪ್ಸ್ ಕಮ್ ವಿತ್ ಆ್ಯನ್ ಎಕ್ಸ್‌ಪೈರಿ ಡೇಟ್!’’ ಇಂಥದೊಂದು ಚತುರ ನುಡಿ ಅಲ್ಲಿ ಇಲ್ಲಿ ಕಿವಿಗೆ ಬಿದ್ದೇ ಇರುತ್ತದೆ. ಏಳೇಳು ಜನ್ಮದ ಸಾಂಗತ್ಯ ಬಯಸಿದವರು ಒಂದೇ ಜನ್ಮಕ್ಕೆ ಸುಸ್ತಾಗುವುದು ಪ್ರೇಮ ಭಾವನೆ ಕುರಿತ ಕಪ್ಪುಹಾಸ್ಯ ಆಗಿರುವಂತೆ ಅನೇಕ ಮನೋಜ್ಞ ವಿಶ್ಲೇಷಣಾತ್ಮಕ ಕಥಾನಕಗಳ ಕೇಂದ್ರವೂ ಹೌದು: 2015ರಲ್ಲಿ ಹಲವು ಪ್ರಶಸ್ತಿಗಳನ್ನು ದೊರಕಿಸಿಕೊಂಡ ‘45 ಇಯರ್ಸ್’ ಬ್ರಿಟಿಷ್ ಚಲನಚಿತ್ರ ನೆನಪಾಗುತ್ತದೆ. ಅದರಲ್ಲಿ ತಮ್ಮ ವಿವಾಹದ ನಲವತ್ತೈದನೆ ವಾರ್ಷಿಕೋತ್ಸವಕ್ಕಾಗಿ ಹಿರಿಯ ದಂಪತಿ ವಾರದಿಂದ ಸಿದ್ಧತೆ ನಡೆಸುತ್ತಿರುತ್ತಾರೆ.

ಪ್ರೀತಿ-ಸಾಹಚರ್ಯದಲ್ಲಿ ಒಟ್ಟಿಗೇ ಮಾಗಿದ ಅವರ ದಾಂಪತ್ಯ ಅತ್ಯಂತ ಯಶಸ್ವಿ ಆಗಿದೆ ಹಾಗೂ ಹೀಗೆಯೇ ಮುಂದುವರಿಯುತ್ತದೆ ಎಂಬ ಭರವಸೆ ಗಂಡ-ಹೆಂಡಿರ ಎಲ್ಲ ಭಾವ-ಭಂಗಿಗಳಲ್ಲಿ, ನುಡಿ-ನೇವರಿಕೆಗಳಲ್ಲಿ, ವಿಶ್ವಾಸ-ನಂಬಿಕೆಯ ಪ್ರಭೆಯಲ್ಲಿ ತುಳುಕಿದೆ. ಆಗ ಬರುತ್ತದೆ, ಒಂದು ಕ್ಷಿಪಣಿಯಂತಹ ಪತ್ರ; ಪತಿಯ ಹದಿಹರೆಯದ ವರ್ಷಗಳ ಪ್ರಥಮ ಪ್ರೇಮದ ಅಧ್ಯಾಯ ಹೊತ್ತದ್ದು. ನೆನಪು, ಮಧುರ ಯಾತನೆ, ಕಳೆದುಹೋದದ್ದನ್ನು ಕಡೆಗೊಮ್ಮೆ ತುಂಬಿಕೊಳ್ಳುವ ಉಮ್ಮಳದಲ್ಲಿ ಆ ದಿನಗಳಿಗೇ ಪತಿ ಸಾಗಿಹೋದಾಗ ತನಗೇ ಆಶ್ಚರ್ಯವಾಗುವಂತೆ (ಹಾಗೆ ಗಟ್ಟಿ ವ್ಯಕ್ತಿತ್ವದ ಮಹಿಳೆ ಆಕೆ)ಬೇಯುವ ಪಾಡು ಪತ್ನಿಯದ್ದು. ಸಂಗಾತಿ ತನ್ನಿಂದ ವಿಮುಖನಾದ ಅಸುರಕ್ಷಿತ ಭಾವ, ಕಂಡುಕೇಳದ ಆತನ ಪ್ರೀತಿಯ ಸದ್ಯದ ವಾರಸುದಾರಳ ಕುರಿತು ಜ್ವಲಿಸುವ ಈರ್ಷ್ಯೆ, ಸಿಡಿಮಿಡಿಗಳ ತಾಕಲಾಟಗಳನ್ನು ಸ್ವತಃ ಅವಲೋಕಿಸುತ್ತಲೇ ನಿಯಂತ್ರಣ ಮೀರಿದ ಬೇಗುದಿ ಅನುಭವಿಸುತ್ತಾಳೆ. ಏಳೇಳು ದಿನ ಆಸ್ಥೆವಹಿಸಿ ವ್ಯವಸ್ಥೆಗೊಳಿಸಿದ ಪಾರ್ಟಿ ಇನ್ನೇನು ಜರಗಬೇಕು...ಆದರೆ ಅವರಿಬ್ಬರ ಮನೋಲೋಕ ಎಷ್ಟೊಂದು ಬದಲಾಗಿ ಹೋಗಿದೆ ಎಂಬುದರ ಮೇಲೆ ಚಿತ್ರದ ಧ್ಯಾನ.

‘ಪಾರ್ಟಿ’ ಶಬ್ದ ತನ್ನ ಜತೆಗೆ ತಂದ ಅಸಂಗತ ಸಹಯೋಚನೆ- ಅಸೋಸಿಯೇಶನ್ ಅಂದರೆ, ಪ್ರೀತಿ ತುಂಡರಿಸಿಕೊಳ್ಳುವ ಬ್ರೇಕ್‌ಅಪ್ ಸಹ ಈ ಯುಗದ ಒಂದು ಸಂಭ್ರಮಾಚರಣೆ: ‘‘ದಿಲ್ ಪೆ ಪತ್ಥರ್ ರಖ್‌ಕೆ ಮೈನೆ ಮೇಕಪ್ ಕರ್‌ಲಿಯ/ ಮೇರೆ ಸಯ್ಯಜಿಸೆ ಆಜ್ ಮೈನೆ ಬ್ರೇಕಪ್ ಕರ್ ಲಿಯಾ!’’ ಜೀವನದಲ್ಲಿ ಏನು ಸಂಭವಿಸಿದರೂ ಪಾರ್ಟಿ ಮಾಡಿಯೇ ತೀರಬೇಕು ಎಂದು ಹಟ ತೊಟ್ಟಂತಿರುವ ಇಂತಹ ಧೋರಣೆ ಪ್ರೇಮ ಸಂಬಂಧಗಳಲ್ಲಿ ವಿದಾಯವನ್ನು ನಿರ್ವಹಿಸುವ ಪ್ರಬುದ್ಧತೆಯ ಸುಳುಹೂ ಬಿಟ್ಟು ಕೊಡುತ್ತಿರಬಹುದು. ಆದರೆ, ಬದಲಾದ ಆದ್ಯತೆ, ಆಯ್ಕೆ, ಜೀವನ ಸಂದರ್ಭಗಳಿಗೆ ತೆರೆದುಕೊಂಡು, ಅತ್ಯಂತ ವ್ಯಕ್ತಿಗತ ನಿರ್ಣಯ ತೆಗೆದು ಕೊಳ್ಳುವಾಗಲೂ, ಎದುರಿನ ಜೀವಿಯ ಘನತೆ, ಗೌರವಗಳನ್ನು ಪರಿಗಣಿಸಿ ಔದಾರ್ಯ ಮೆರೆಯುವ ದೃಷ್ಟಾಂತ ಗಾಢ ಪ್ರೇಮ ಸಂಬಂಧಗಳಲ್ಲಿಯೂ ಕಾಣದೇ ಹೋಗುವುದೂ ಇದೇ ಯುಗದ ಸತ್ಯ. ಪ್ರೇಯಸಿಯರಿಗೆ ಮನೆ ಬರೆದ, ಆಸ್ತಿ ಮಾಡಿಕೊಟ್ಟ, ಜಹಗೀರು ಬಿಟ್ಟುಕೊಟ್ಟ ಪ್ರಾಚೀನ ಕಾಲದ ಮಹನೀಯರುಗಳ ಮುಂದೆ ಸೆಲೆಬ್ರಿಟಿ ಮಾಜಿ ಪತ್ನಿಗೆ ಬಿಡಿಗಾಸು ಕೊಡದೆ, ಮಕ್ಕಳ ಪಾಲನೆಯ ಖರ್ಚುವೆಚ್ಚ ಹೊರದೆ ಹೊರ ಹಾಕುವ ಪುರುಷ ಪುಂಗವರು ಎಷ್ಟೊಂದು ಕೆಳಕ್ಕಿಳಿದಿದ್ದಾರೆ ಅನಿಸುತ್ತದೆ. ಪ್ರೇಮದಂತಹ ನವಿರು ಭಾವ ವಾಸ್ತವದಲ್ಲಿ ಇಷ್ಟು ಕಠೋರ ಆಗಿಬಿಡಬಹುದೇ? ನೀವು ತಲೆ ಅಲುಗಿಸಿ ಅಸಮ್ಮತಿ ಸೂಚಿಸುತ್ತಿರುವುದು ಭಾಸವಾಗುತ್ತಿದೆ... ಒಪ್ಪಿದೆ, ವ್ಯಾವಹಾರಿಕವಾಗಿ ಪ್ರೇಮವನ್ನು ದುಡಿಸಿಕೊಳ್ಳುವುದರಲ್ಲಿ ಹೆಂಗಸರೇನೂ ಹಿಂದೆ ಬಿದ್ದಿಲ್ಲ ಅನ್ನುತ್ತಿದ್ದೀರಲ್ಲವೇ? ಒಪ್ಪಿದೆ. ನಾನೇನು, ‘ಆಫ್ಟರ್ ದಿ ಸ್ಟಾರ್ಮ್’(2016) ಹೆಸರಿನ ಜಪಾನೀ ಚಲನಚಿತ್ರವೂ ಹಾಗೆಯೇ ಅರುಹುತ್ತಿದೆ. ಪ್ರತಿಭಾನ್ವಿತ ಲೇಖಕ ಇದರ ಹೀರೊ.

ಯಾವುದೋ ಒಂದು ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿರುವುದೇ ಅವನ ಜೀವಮಾನ ಸಾಧನೆ. ಅದರ ಬಲದಲ್ಲಿಯೇ ಅಹಂ ಪೋಷಣೆ. ಸಂಪಾದನೆ ಸೊನ್ನೆ. ಸುಂದರ ಹೆಂಡತಿ, ಆರೇಳು ವರ್ಷದ ಮಗನನ್ನು ಕರೆದುಕೊಂಡು ದೂರಾಗಿದ್ದಾಳೆ. ಒಳ್ಳೇ ಸುಖ ಸೌಲಭ್ಯದ ಜೀವನ ನೀಡುವ ಯಾರಾದರೂ ಧನವಂತನನ್ನು ಸಂಗಾತಿಯಾಗಿ ಸ್ವೀಕರಿಸಲು ಸಿದ್ಧಳಿದ್ದಾಳೆ. (ಸಾಹಿತ್ಯ ಪ್ರತಿಭೆ ಕಟ್ಟಿಕೊಂಡು ಏನು ಮಾಡಬೇಕು?) ಅದಕ್ಕಾಗಿ ತೀಕ್ಷ್ಣ ಹುಡುಕಾಟ ನಡೆದಿದೆ. ನಡುವೆ, ತನ್ನದೇ ಭ್ರಮಾಲೋಕದಲ್ಲಿದ್ದುಕೊಂಡು, ಕೈಯಲ್ಲಿರುವ ಅಲ್ಪ ಸ್ವಲ್ಪಹಣವನ್ನೂ ಜೂಜಾಡಿ ಕಳೆಯುವ ಪತಿ ಮಾಜಿ ಹೆಂಡತಿ-ಮಗನ ಸಂಗಕ್ಕಾಗಿ ಹಾತೊರೆಯುತ್ತಿರುತ್ತಾನೆ. ಬಿರುಗಾಳಿ ಹವಾಮಾನ ಸೂಚನೆಯ ಒಂದು ದಿನ ಅವರಿಬ್ಬರು ಈತ ತಾಯಿಯೊಂದಿಗೆ ವಾಸ ಇರುವ ಬಿಡಾರಕ್ಕೆ ಬರುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಎಳೆಯರ ಭಾವನೆ ಅರಿತುಕೊಂಡು ಅದನ್ನು ತನಗೆ ಬೇಕಾದ ದಿಕ್ಕಿಗೆ ತಿರುಗಿಸಿಕೊಳ್ಳಬಲ್ಲ ಭಾವನಾತ್ಮಕ ಬುದ್ಧಿಮತ್ತೆಯ, ವಿಪುಲ ಜೀವನಾನುಭವದ ಮುದುಕಿ ಎಷ್ಟೇ ಪ್ರೇರೇಪಿಸಿದರೂ ಸೊಸೆ, ಶಿಲೆ. ಮಗನನ್ನು ಒಲಿಸಿಕೊಳ್ಳಲು ಸಾಹಿತಿ, ಅರ್ಧ ರಾತ್ರಿಯಲ್ಲಿ ಅವನನ್ನು ಉದ್ಯಾನವನಕ್ಕೆ ಕರೆದೊಯ್ಯುತ್ತಾನೆ. ಹುಡುಕುತ್ತಾ ಬಂದ ಹೆಂಡತಿಯೂ ಜತೆಗೂಡುತ್ತಾಳೆ. ಬಿರುಗಾಳಿ ಅಷ್ಟಿಷ್ಟಾಗಿ ತಾವು ಇರುವ ಪ್ರದೇಶವನ್ನು ಕ್ರಮಿಸುತ್ತಿರುವ, ಚಲನಶೀಲ, ಬೆಳದಿಂಗಳ ಮಾಯಾ ವಾಸ್ತವದಂತಹ ಪರಿಸರದಲ್ಲಿ ಮೂವರೂ ಸ್ವಲ್ಪ ಕಾಲ ಕಳೆಯುತ್ತಾರೆ. ತಮ್ಮ ಮದುವೆಗೆ ಇನ್ನೊಂದು ಅವಕಾಶ ನೀಡುವಷ್ಟು ಪತ್ನಿ ಮೆದುವಾದಳೇ ಎಂದು ನಾಯಕ ಭ್ರಮಿಸಿದರೆ ಅದಕ್ಕಿಂತ ಹೆಚ್ಚಿನ ಸುಳ್ಳು ಇನ್ನೊಂದಿಲ್ಲ. ವಾತಾವರಣ ನಿಚ್ಚಳಗೊಂಡ ಬೆಳಗು, ಬ್ಯಾಗ್ ಹೆಗಲಿಗೇರಿಸಿ ಉದ್ಯೋಗಸ್ಥೆ ಹೊರಟು ನಿಲ್ಲುತ್ತಾಳೆ. ಬಾಲಂಗೋಚಿಯಾಗಿ ಮಗ.

ಓವರ್ ಆ್ಯಕ್ಟಿಂಗ್ ಮಾಡುವ ನಟನಂತೆ ಅಂಗಲಾಚುವ ಅವರಪ್ಪನಿಗೆ, ಮೂರು ತಿಂಗಳಿಂದ ಬಾಕಿ ಇರುವ ಅಷ್ಟೂ ಹಣದೊಂದಿಗೆ ಬಂದರೆ ಮಾತ್ರ ಮುಂದಿನ ಭೇಟಿ ಎಂದು ಸ್ಟ್ರಿಕ್ಟಾಗಿ ಹೇಳಿ ನಡೆಯುತ್ತಾಳೆ. ಕ್ಯೂಟಾದ ಆ್ಯಂಟಿ ಕ್ಲೈಮಾಕ್ಸ್! ಆಫ್ಟರ್ ದಿ ಸ್ಟಾರ್ಮ್ ಏನಾದರೂ ಸಂಭವಿಸಿತೇ? ಇಲ್ಲವೇ? ಪ್ರೇಕ್ಷಕರಿಗೇ ಬಿಟ್ಟಿದ್ದು. ಯಾವಾಗ ನವಿರೋ, ಯಾವಾಗ ಕಠೋರವೋ, ಯಾವಾಗ ಜೀವಕ್ಕೆ ಜೀವ ಕೊಡುವಂಥದೋ, ಯಾವಾಗ ಜೀವ ತೆಗೆದೇ ತೀರುವಂಥದೋ ಹೇಳಲು ಬಾರದ ಅತ್ಯಂತ ಸಂಕೀರ್ಣ ಭಾವನಾಬಳ್ಳಿ ಇಬ್ಬರು ಭಿನ್ನ ವ್ಯಕ್ತಿಗಳನ್ನು ಹಬ್ಬಿ ಹಂದರ ಎಬ್ಬಿಸಲು, ವ್ಯಕ್ತಿತ್ವ, ಹಿನ್ನೆಲೆ, ಕೌಟುಂಬಿಕ ಪರಿಸರ, ನೆಚ್ಚುವ ಜೀವನಮೌಲ್ಯ, ಸ್ವಭಾವ ವೈರುಧ್ಯದ ಆಕರ್ಷಣೆ ಮುಂತಾದುವೆಲ್ಲ ಸಹಾಯಮಾಡುತ್ತವೆ ಎಂಬುದು ವರ್ತನಾವಿಜ್ಞಾನ ಹೇಳುವ ಸಿದ್ಧಾಂತ. ಟೋಟಲ್ ಆಗಿ ‘ಕಂಪ್ಯಾಟಿಬಲಿಟಿ’. ಈಗೆಲ್ಲ ತರುಣ-ತರುಣಿಯರು ಮದುವೆಗೆ ಪೂರ್ವಭಾವಿಯಾಗಿ ಒಂದೇ ಸೂರಿನಡಿ ತಂಗಿ, ದಾಂಪತ್ಯ ಪ್ರಯೋಗ ನಡೆಸಿ ತಮ್ಮ ನಡುವೆ ಹೊಂದಾಣಿಕೆ ಇದೆಯೇ, ಇಲ್ಲವೇ ಎಂದು ಅರಿತುಕೊಳ್ಳುವಷ್ಟು ಜಾಣರಾಗಿದ್ದಾರೆ.

ಅದಾಗಲೇ ವೈವಾಹಿಕ ಬಂಧನದಲ್ಲಿ ಸಿಕ್ಕಿಬಿದ್ದಿರುವವರು ಮುಕ್ತ, ನಾಗರಿಕ ಸಹಜೀವನಕ್ಕೆ ಅತ್ಯಗತ್ಯ ಎನಿಸಿದ್ದನ್ನೆಲ್ಲ- ಪ್ರತ್ಯೇಕ ಬಾತ್‌ರೂಮ್ ಕಟ್ಟಿಸಿಕೊಳ್ಳುವುದೂ ಸೇರಿದಂತೆ- ಯೋಜಿಸಿ ಕೈಗೊಳ್ಳುತ್ತಾರೆ. ಸಂತಾನ ಹೊಂದಲು ತಮ್ಮ ಜೀವನ ವಿಧಾನ ಅನುಕೂಲಕರವೇ ಅಥವಾ ಇಲ್ಲವೇ ಎಂದು ಚರ್ಚಿಸಿ ಒಮ್ಮತ ತಲುಪಿರುತ್ತಾರೆ. ಆಳುಕಾಳು, ಸಹಾಯಕರು, ಅಡುಗೆಯವರು, ವರ್ಷಾಂತ್ಯ ಪ್ರವಾಸ, ಅಧ್ಯಯನ, ಸಮಾಜಸೇವೆ ಎಲ್ಲ ಸಾಂಗೋಪಾಂಗವಾಗಿ ನಡೆದಿರುತ್ತದೆ. ಇದನ್ನೆಲ್ಲ ಧೂಳೀಪಟ ಮಾಡುವ ಬಿರುಗಾಳಿ ಎಲ್ಲಿಂದಲೋ ಏಳದಿರಲಿ ಎಂಬುದೊಂದೇ ಮೌನ ಹಾರೈಕೆ. ಏಕೆಂದರೆ, ಪ್ರೇಮಸಂಬಂಧ ಅಪಾಯಕ್ಕೆ ಅಷ್ಟೊಂದು ಪಕ್ಕಾಗಿರುವಂತಹದು-ವಲ್ನರಬಲ್! ಎಲ್ಲ-ರಕ್ತಸಂಬಂಧ ಅಥವಾ ಆಪ್ತಸಂಬಂಧ ಎಂಬ ಭೇದ ಇಲ್ಲದೆ-ಸಂಬಂಧಗಳ ಅಮೂರ್ತ ಸೀಮೆಯಲ್ಲಿ ತಣ್ಣನೆ ಚೂರಿಯಲುಗಿನ ವಿದ್ರೋಹ ಸುತ್ತಿ ಸುಳಿದಾಡುವುದು ಎಷ್ಟು ಬೇಡ ಅಂದರೂ ನಮ್ಮ ಗಮನ ಜಗ್ಗುವ ಸತ್ಯ. ಜಯಮ್ಮ-ಶಶಿಕಲಾ ಪ್ರಸಂಗ ಸನಿಹದಲ್ಲೇ ಇದೆ. ಪ್ರೀತಿ ಇಲ್ಲವಾದ ಮೇಲೆ ಎಲ್ಲ ಶೂನ್ಯವೇ? ನೇಹದ ಮಧುರ ನೆನಹುಗಳು ಸಂಗ್ರಾಹ್ಯವಲ್ಲವೇ? ಎಷ್ಟೇ ಆಗಲಿ, ಅವು ಆ ಕ್ಷಣದ ನಿಜ ಆಗಿದ್ದುವಲ್ಲವೇ? ಹೀಗೆಲ್ಲ ಯೋಚಿಸಿ, ಭಗ್ನ ಪ್ರೇಮಿಗಳಿಂದ ವಸ್ತು-ವಿಷಯ ಸಂಗ್ರಹಿಸಿ 2010ರಲ್ಲಿ ಕ್ರೊಯೇಷಿಯ ಬಳಿ ಒಂದು ಮ್ಯೂಸಿಯಂ ಸ್ಥಾಪಿಸಲಾಯಿತು.

ಸ್ವಯಂಪ್ರೇರಣೆಯಿಂದ ತಮ್ಮಲ್ಲಿರುವ ನೆನಪಿನ ಕಾಣಿಕೆ ಇತ್ಯಾದಿ ದೇಣಿಗೆ ನೀಡುವಂತೆ ಪ್ರೀತಿಯಲ್ಲಿ ಸೋತವರಿಗೆ ನಿವೇದನೆ ಮಾಡಿಕೊಳ್ಳಲಾಯಿತು. ಸಂಗ್ರಹಿಸಿ ಪ್ರದರ್ಶನಕ್ಕಿಟ್ಟ ವಸ್ತು, ಜತೆಗೊಂದು ಕ್ಲುಪ್ತ ಟಿಪ್ಪಣಿ ಇರುವ ವಿನ್ಯಾಸ. ಹಾಗೆ ಈ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನ ಭಾಗ್ಯ ಪಡೆದು, ಏನೇನೆಲ್ಲಾ ಬಂದು ಕುಳಿತಿವೆ ಅನ್ನುವುದು ನಿಜಕ್ಕೂ (ಸೋತ ಪ್ರೇಮವನ್ನು ಮರೆಸುವಷ್ಟು?!) ಕುತೂಹಲ ಕೆರಳಿಸುವಂಥದು: ಪಿಂಗಾಣಿ ಸಾಸರಿನ ಚೂರು, ಒಂಬತ್ತು ಗಜದ ಢಾಳು ಬಣ್ಣದ ಜರಿ ಸೀರೆ ಕೆಲ ಉದಾಹರಣೆಗಳು. ಮುಂಗೋಪಿ ಪ್ರೇಮಿ ಸಾಸರ್ ಒಡೆದಾಗ ಸಿಡಿದ ಚೂರು ಸಂಗ್ರಹಿಸಿಟ್ಟುಕೊಂಡಿದ್ದಾರೆಂದರೆ ಅದಿನ್ನೆಂತಹ ತಾಳಿಕೆ ಗುಣ ಎಂದು ಮೆಚ್ಚುಗೆಯ ನಿಟ್ಟುಸಿರು ಹೊರಬೀಳುವುದರೊಳಗೆ ಢಾಳಾದ ಬಣ್ಣದ ಸೀರೆ ಹೊತ್ತಿರುವ ಟಿಪ್ಪಣಿಯ ಅಸಹನೆಯ ರೊಚ್ಚು ಅದನ್ನು ವಾಪಸು ಕಳುಹಿಸಿಬಿಡುತ್ತದೆ: ‘‘ನಾನು, ಇಷ್ಟೊಂದು ನವನಾವೀನ್ಯ ಅಭಿರುಚಿ, ಫ್ಯಾಶನ್‌ಗಳನ್ನು ಶಿರಸಾವಹಿಸಿ ಪಾಲಿಸುವ ನಾನು, ಇಂತಹ ವಸ್ತ್ರಭಂಡಾರಕ್ಕೆ ಯೋಗ್ಯಳೆಂದು ಅದು ಹೇಗೆ ನೀನು ನಿರ್ಧರಿಸಿದೆ?’’

ಯುರೋಪ್‌ನ ಅತ್ಯಂತ ವಿನೂತನ ಬಗೆಯ ಮ್ಯೂಸಿಯಂ ಪ್ರಶಸ್ತಿಗೆ ಇದು 2011ರಲ್ಲಿ ಪಾತ್ರವಾಯಿತು. ಪ್ರೀತಿಯಲ್ಲಿ ವಂಚನೆ, ವಿದ್ರೋಹ ಅಂತರ್ಗತ ಎಂದಾಕ್ಷಣ ಅದು ಎಲ್ಲ ಪ್ರೇಮ ಸಂಬಂಧಗಳಲ್ಲೂ ತನ್ನನ್ನು ತಾನು ಪ್ರಕಟಪಡಿಸಿಕೊಳ್ಳುತ್ತದೆ ಎಂದೇನೂ ನಿಯಮ ಇಲ್ಲ. ವಿದ್ರೋಹ ಎಂಬುದು ಒಂದು ಅಡಗಿಕೂತಿರುವ ಗುಣಾಣು-ಡಾರ್ಮೆಂಟ್ ಜೀನ್ ಎಂದಿಟ್ಟುಕೊಳ್ಳಬಹುದು. ಭಾವನಾತ್ಮಕ ವಾಗಿ ಅಲ್ಲದಿದ್ದರೂ ಲೈಂಗಿಕತೆಯ ವಿಷಯದಲ್ಲಿ ಪುರುಷರು ಹೆಚ್ಚು ಚಪಲಚಿತ್ತರಾಗುತ್ತಾರೆ, ಸಂಗಾತಿಗೆ ನಿಷ್ಠರಾಗಿರುವಲ್ಲಿ ಸೋಲುತ್ತಾರೆ ಎಂಬುದು ಒಂದು ಸಾಮಾನ್ಯೀಕರಣಗೊಂಡಿರುವ ಸತ್ಯ. ಅದು ನಿಸರ್ಗದತ್ತ ವಾಗಿ ಅವರಲ್ಲಿರುವ ವೈವಿಧ್ಯದ ಬಯಕೆ ಎಂದೂ ಅರ್ಥೈಸಲಾಗುತ್ತದೆ. ಆದರೆ ಅದನ್ನು ಪೂರೈಸಿಕೊಳ್ಳ ಹೊರಟರೆ ಭಾರೀ ದಂಡ ತೆರಲು ಸಿದ್ಧರಿರಬೇಕು ಎನ್ನುವುದೂ ಸ್ವಯಂಸಿದ್ಧ.

ಏಕೆಂದರೆ ಸಂಗಾತಿ ಲೈಂಗಿಕವಾಗಿ ತನಗೆ ನಿಷ್ಠನಾಗಿಲ್ಲ ಎಂದಾಗ ಮುರಿಯುವ ಮನಸು ಮತ್ತೆಂದೂ ಚೇತರಿಸಿಕೊಳ್ಳುವುದಿಲ್ಲ. ಅಲ್ಲಿಂದೀಚೆಗೆ ಬರೀ ವಿರಸ, ವಿಘಟನೆ, ಗೋಳು. ಮನೆಗೆ, ಕುಟುಂಬಕ್ಕೆ, ಗಂಡನ್ನು ಕಟ್ಟಿಹಾಕುವ ಸ್ತ್ರೀಯರ ವಿಷಯ, (ಅದೇ ಪ್ರಕೃತಿಯೇ ದಯಪಾಲಿಸಿರುವುದು) ಹಾಗೆ. ಇಷ್ಟೊಂದು ಅಪಾಯ ತುಂಬಿರುವ ‘ಡೇಂಜರ್ ರೆನ್’ ನಲ್ಲಿಯೇ ಎಳೆ ಪ್ರೇಮಿಗಳು ವಿಹಾರ ಹೊರಡುವುದು, ಒಬ್ಬೊಬ್ಬರಾಗಿ ಮೆಟ್ಟಿಲು ಹತ್ತಿ, ಇಳಿದು ವಿಷಯ ಇತ್ಯರ್ಥ ಮಾಡಿಕೊಳ್ಳುವುದು ಒಂದು ಸ್ವಾಭಾವಿಕ ವಿದ್ಯ ಮಾನ. ಹಾಗಾಗಿ ನಿಜವಾಗಿ, ಹುಚ್ಚಾಗಿ, ಹಿಂದೆಗೆಯಲಾರದಂತೆ- ಟ್ರೂಲೀ, ಮ್ಯಾಡ್‌ಲೀ, ಹೋಪ್‌ಲೆಸ್ಲೀ ಪ್ರೀತಿಯಲ್ಲಿ ಬೀಳುವುದು ಉಸಿರಾಟದಷ್ಟೇ ಸಹಜ. ಬೆರಳೆಣಿಕೆಯ ಕೆಲವರ ವಿಷಯದಲ್ಲಿ ಮಾತ್ರ ಇಷ್ಟೆಲ್ಲ ಈಡೇರುತ್ತದೆ ಎಂಬುದೂ ಷರತ್ತುಗಳು ಅನ್ವಯ ಎಂಬ ವ್ಯಾವಹಾರಿಕ ಕೌಶಲದ ಸಣ್ಣ ಅಕ್ಷರದ ಮುನ್ನೆಚ್ಚರಿಕೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top