ಭಗವಂತನ ಬೇಹುಗಾರಿಕೆ

ಗೋಹತ್ಯೆ ಹಿಂಸೆಯೆನಿಸುವವನಿಗೆ ಮೀನು, ಕುರಿ, ಕೋಳಿ, ಹಂದಿ ಕೊನೆಗೆ ಹಾಲು ಕೊಡುವ ಆಡು, ಎಮ್ಮೆಯನ್ನು ಕೊಂದರೂ ಏನೂ ಅನ್ನಿಸದಿರುವುದು ಅಚ್ಚರಿಯ ವಿಚಾರವಲ್ಲವೇ? ಇವೆಲ್ಲ ಒಂದೊಂದು ಜ್ಞಾನ-ವಿಜ್ಞಾನದ ಭಾಗಗಳಲ್ಲವೇ? ಎರೆಹುಳವನ್ನು ಕಟ್ಟಿ ಮೀನು ಹಿಡಿಯುವುದೂ ಇಂತಹ ಪ್ರಯೋಗವೇ. ಆಡನ್ನು ಕಟ್ಟಿ ಹುಲಿಯನ್ನು ಹೊಡೆಯುತ್ತಿದ್ದರಂತಲ್ಲ! ಬೇಹುಗಾರಿಕೆ, ಯುದ್ಧ ಇವೆಲ್ಲ ಇಂತಹ ಪ್ರಯೋಗಗಳೇ.


ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬ ಹಾಗೆ ಈ ಸಾಮಾಜಿಕ, ರಾಜಕೀಯ, ಆರ್ಥಿಕ ಆಗುಹೋಗುಗಳು ಹಾಳು ಚಿಂತನೆಯನ್ನು ಬಿಡಲೊಲ್ಲವು. ದೈನಂದಿನ ಬದುಕನ್ನು ಇಷ್ಟೊಂದು ಪ್ರಭಾವಿಸುವ ಸಾಮಾಜಿಕ ಸತ್ಯವನ್ನು, ಆರ್ಥಿಕ ಪಲ್ಲಟಗಳನ್ನು, ರಾಜಕೀಯ ವಿಕೃತಿಗಳ ನಡುವೆ ಕಟ್ಟುವೆವು ನಾವು ಹೊಸ ನಾಡೊಂದನು ಸುಖದ ಬೀಡೊಂದನು ಎಂದು ಹಾಡುವುದಾದರೂ ಹೇಗೆ?

ಕೆಲವು ವಿದ್ಯಮಾನಗಳು ಬೇಡವೆಂದರೂ ಕಾಡುತ್ತವೆ:
ಕುಲಭೂಷಣ್ ಸುಧೀರ್ ಯಾದವ್ ಎಂಬ ಮಹಾರಾಷ್ಟ್ರ ಮೂಲದ ಭಾರತೀಯನೊಬ್ಬನಿಗೆ ಪಾಕಿಸ್ತಾನವು ಬೇಹುಗಾರಿಕೆಯ ಆಪಾದನೆಯ ಮೇಲೆ ಮರಣದಂಡನೆ ವಿಧಿಸಿದೆ. ಅದಿನ್ನೂ ಜಾರಿಯಾಗಿಲ್ಲ. ಮೇಲ್ಮನವಿ ಬಾಕಿಯಿದೆ. ಆತ ಬೇಹುಗಾರನಲ್ಲವೆಂದು ನಮ್ಮ ಸರಕಾರ ಹೇಳುತ್ತಿದೆ. ಆದರೆ ನಮ್ಮ ವಾದಕ್ಕೆ ಪುಷ್ಟಿಯಾಗಬಲ್ಲ ಸಮರ್ಥನೆಯನ್ನು ಆತ ಪಾಕಿಸ್ತಾನವನ್ನು ತನ್ನ ಮೂಲಕ ಪ್ರವೇಶಿಸಿದನೆನ್ನಲಾದ ಇರಾನಿನ ಸರಕಾರ ನೀಡುತ್ತಿಲ್ಲ. ಮುಂದೇನಾಗಬಹುದೋ ಗೊತ್ತಿಲ್ಲ. ಆದರೆ ಆತ ಕಳೆದ ಮಾರ್ಚ್ 2016ರಲ್ಲಿ ಬಂಧಿತನಾದಾಗ ನಮ್ಮ ಸರಕಾರ ಆತ ಭಾರತದ ಬೇಹುಗಾರನಲ್ಲವೆಂದಷ್ಟೇ ಹೇಳಿ (ಬೇಕಾದ್ದು ಮಾಡಿ, ನಮಗೂ ಆತನಿಗೂ ಸಂಬಂಧವೇ ಇಲ್ಲವೆಂಬ ಹಾಗೆ) ಸುಮ್ಮನಾದದ್ದನ್ನು ಮರೆಯುವುದು ಹೇಗೆ?

ಕುಲಭೂಷಣ್ ಯಾದವ್ ಒಬ್ಬ ನೌಕಾ ಪಡೆಯ ಅಧಿಕಾರಿಯೆಂಬುದನ್ನು ಒಪ್ಪಿಕೊಳ್ಳೋಣ. ಆತನಿಗಿನ್ನೂ 46 ವರ್ಷ. ಪಾಕಿಸ್ತಾನದ ಪ್ರಕಾರ ಆತ ಭಾರತೀಯ ಗೂಢಚರ್ಯ ಸಂಸ್ಥೆ ‘ರಾ’ದಿಂದ ನಿಯುಕ್ತಿಗೊಂಡವನು ಮತ್ತು ಇರಾನಿನಲ್ಲಿ ಕೆಲವು ವರ್ಷಗಳಿದ್ದು ಅಲ್ಲಿಂದ ಪಾಕಿಸ್ತಾನದೊಳಗಿನ ಬೇಹುಗಾರಿಕೆಯ ಹೊಣೆಯನ್ನು ಮತ್ತು ಹುಸೈನ್ ಮುಬಾರಕ್ ಪಟೇಲ್ ಎಂಬ ರಹಸ್ಯ ಹೆಸರನ್ನು ಹೊತ್ತವನು. ಪಾಕಿಸ್ತಾನ ಸರಕಾರದ ರಹಸ್ಯ ಮಿಲಿಟರಿ ನ್ಯಾಯಾಲಯವು ಆತನ ವಿಚಾರಣೆ ನಡೆಸಿ ಆತನ ಒಪ್ಪಿಗೆ ಹೇಳಿಕೆಯೆನ್ನಲಾದ ಒಂದು ವೀಡಿಯೋವನ್ನು ಬಿಡುಗಡೆ ಮಾಡಿ ಆತನ ಮೇಲೆ ಬೇಹುಗಾರಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳ ಆರೋಪವನ್ನು ಹೇರಿ ಆತನಿಗೆ ಗಲ್ಲುಶಿಕ್ಷೆಯನ್ನು ವಿಧಿಸಿದೆ. ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಸಾಮಾನ್ಯ. ದೇಶದ ಅಧ್ಯಕ್ಷ ಪದವನ್ನು ಅಲಂಕರಿಸಿದ ಭುಟ್ಟೋ ಅವರನ್ನೇ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯದೆ ನೇಣುಗಂಬಕ್ಕೆ ಏರಿಸಿದ ಕುಖ್ಯಾತಿ ಅದರದ್ದು.

ಇನ್ನು ಇತರರು ಯಾವ ಲೆಕ್ಕ? ಹೀಗಾಗಿ ಕುಲಭೂಷಣ ಯಾದವರ ಭವಿಷ್ಯ ನಿಜಕ್ಕೂ ಕಪ್ಪಿಟ್ಟಿದೆ. ಭಾರತ ಸರಕಾರದ ವಿದೇಶಾಂಗ ನೈಪುಣ್ಯತೆಯ ನೈಜ ಪರೀಕ್ಷೆ ನಡೆಯಲಿದೆ. ಪಾಕಿಸ್ತಾನದ ಕೆಲವರಾದರೂ ಈ ಗಲ್ಲುಶಿಕ್ಷೆಯ ವಿರುದ್ಧ ದನಿಯೆತ್ತಿದ್ದಾರೆ. ಭುಟ್ಟೋವಿನ ಮೊಮ್ಮಗ ಬಿಲಾವಲ್ ಭುಟ್ಟೋ ಮರಣದಂಡನೆಯ ವಿರುದ್ಧ ಜನಾಭಿಪ್ರಾಯ ರೂಪಿಸುತ್ತಿದ್ದಾರೆ. ಕುಲಭೂಷಣ್ ಯಾದವ್ ಅಂತಲ್ಲ, ಯಾವುದೇ ಜೀವಹಾನಿಯ ವಿರುದ್ಧ ತಾನು ದನಿಯೆತ್ತುತ್ತಿದ್ದೇನೆಂಬ ವಾದ ಅವರದ್ದು. ಒಂದರ್ಥಲ್ಲಿ ಇದು ರಕ್ಷಣಾತ್ಮಕ ತಂತ್ರ. ಕುಲಭೂಷಣ್ ಯಾದವರ ಪರವಾಗಿ ಆತ ಮಾತನಾಡಿದರೆ ತಕ್ಷಣ ಅಲ್ಲಿನ ದೇಶಭಕ್ತರು ಆತನ ಬಲಿಯನ್ನು ಯಾಚಿಸಬಹುದು- (ನಮ್ಮಲ್ಲಿ ಕಸಬ್ ಅಫ್ಝಲ್ ಗುರು ಅಥವಾ ಹಫೀಝ್ ಅವರ ಜೀವದಯಾಪರವಾಗಿ ಯಾರಾದರೂ ಮಾತನಾಡಿದರೆ ಹೇಗಿರುತ್ತದೋ ಹಾಗೆ). ಕುಲಭೂಷಣ್ ಯಾದವ್ ನಿಜಕ್ಕೂ ನಿವೃತ್ತರೇ? ನಿವೃತ್ತಿಯಾದ ಆನಂತರ ಹೀಗೆ ಅಲ್ಲಿ ಸಿಕ್ಕಿಬೀಳಲು ಕಾರಣವಾದರೂ ಏನು? ಆತನ ಸಂಸಾರದ ಸ್ಥಿತಿಯೇನು? ಇವೆಲ್ಲ ಬೆಳ್ಳಿ ಪರದೆಯ ಮುಂದೆ ಬರುವ ವರೆಗೂ ಸತ್ಯವೂ ಕಲ್ಪನೆಯೂ ಹೊರಬರದು. ಅದೊಂದು ಜನಸಾಮಾನ್ಯರಿಗೆ ಆತಂಕ ತರುವ ವಿಷಯವಾಗಿ ಮಾತ್ರ ಉಳಿಯಬಹುದು. ಒಂದು ಜೀವ ಯಾವುದೋ ಕಾರಣದಿಂದ (ವಿನಾಕಾರಣವೂ ಒಂದು ಕಾರಣವೇ ಆಗಿರುವುದು ವರ್ತಮಾನದ ದುರಂತ!) ದಂಡನೆಗೆ ಬಲಿಯಾಗುವುದು ಸಂವೇದನಾಶೀಲ ಮನಸ್ಸುಗಳನ್ನು ಘಾಸಿಗೊಳಿಸುವ ಸಂಗತಿ. ಆದರೆ ಎಲ್ಲಿಯವರೆಗೆ ಮರಣದಂಡನೆಯೆಂಬ ಘೋರಶಿಕ್ಷೆೆಯಿರುತ್ತದೆಯೋ ಅಲ್ಲಿಯವರೆಗೆ ಅನೇಕ ಕುಲಭೂಷಣ್ ಯಾದವ್ ಅವರಂತಿರುವವರು ಇತಿಹಾಸದ ಕ್ರೂರ ಅಧ್ಯಾಯದ ಸಾಕ್ಷಿಗಳಾಗಿರುತ್ತಾರೆ. ಭಾರತವೂ ಇದಕ್ಕೆ ಹೊರತಲ್ಲವಾದ್ದರಿಂದ ಕುಲಭೂಷಣ್ ಯಾದವರ ಪ್ರಕರಣದ ಅರ್ಧ ಸತ್ಯ ಮಾತ್ರ ನಮ್ಮೆದುರಿಗಿದೆಯೆಂದಷ್ಟೇ ನಾವು ನಂಬಿದರೆ ಒಳ್ಳೆಯದು.
***
ಅಂತಾರಾಷ್ಟ್ರೀಯ ಬೇಹುಜಾಲ ನಮಗೆ ಅಂದರೆ ಜನಸಾಮಾನ್ಯರಿಗೆ, ಆರಾಮಕುರ್ಚಿಯ ಚಿಂತಕರಿಗೆ ಗೊತ್ತಿಲ್ಲದಂತೆ ನಡೆಯುತ್ತದೆ. ಪಂಜಾಬ್, ಕಾಶ್ಮೀರದಲ್ಲಿ ಬಾಂಬ್ ಸ್ಫೋಟ ನಡೆದ ತಕ್ಷಣ ಪಾಕಿಸ್ತಾನದ ಕರಾಚಿ, ಲಾಹೋರ್‌ಗಳಲ್ಲಿ ಬಾಂಬ್ ಸ್ಫೋಟ (ಅಥವಾ ತದ್ವಿರುದ್ಧವಾಗಿ ಅಲ್ಲಿ ಬಾಂಬ್ ಸ್ಫೋಟವಾದ ತಕ್ಷಣ ನಮ್ಮಲ್ಲಿ!) ನಡೆಯುತ್ತದೆಯೆಂದು ಒಬ್ಬ ನಿವೃತ್ತ ಸೇನಾ ಅಧಿಕಾರಿ ಹೇಳಿದ್ದರು. ಬೇಹುಗಾರಿಕೆ ಕ್ಷೇತ್ರದಲ್ಲಿ ಪ್ರತೀ ಸರಕಾರವೂ ತನ್ನ ಗೋಪ್ಯತೆಯನ್ನು ಕಾಪಾಡಿಕೊಂಡು ಮುಗ್ಧರಂತೆ ವರ್ತಿಸುತ್ತದೆಯೆಂಬುದು ಜಾಗತಿಕ ಸತ್ಯ. ಮಾತಾಹರಿ ಕೂಡಾ ಸಿಕ್ಕಿ ಬೀಳುವ ವರೆಗೆ ವಾರಾಂಗನೆಯಂತಿದ್ದವಳು. ಹೀಗಾಗಿ ಯಾವ ಹುತ್ತದಲ್ಲಿ ಯಾವ ಹಾವಿದೆಯೆಂಬುದು ನಮ್ಮ ಊಹೆಗೆ ಮೀರಿದ ವಿಚಾರ. ಜೇಮ್ಸ್ ಬಾಂಡ್ ಸಿನೆಮಾಗಳಲ್ಲಿ ಒಬ್ಬ ಅಮೆರಿಕನ್ ಅಥವಾ ಬ್ರಿಟಿಷ್ ಅಥವಾ ಇತರ ಐರೋಪ್ಯ ದೇಶದ ಬೇಹುಗಾರನಿಗೆ ಪ್ರತಿಯಾಗಿ ಒಬ್ಬ ಕಮ್ಯುನಿಸ್ಟ್ ಬೇಹುಗಾರನನ್ನು ಬಿಡುಗಡೆ/ವಿನಿಮಯ ಮಾಡುವುದನ್ನು ನೋಡಿದವರಿಗೆ ಮತ್ತು ಅಮೆರಿಕ ಹಾಗೂ ಸೋವಿಯೆತ್ ಒಕ್ಕೂಟದ ನಡುವಣ ಶೀತಲ ಸಮರದ ಚರಿತ್ರೆ-ರಾಜಕೀಯವನ್ನು ಗಮನಿಸಿದವರಿಗೆ ಕೆಲವಾದರೂ ಸೂಕ್ಷ್ಮ ಎಳೆಗಳು ಗೋಚರಿಸಬಹುದು. ನಾವು ನೋಡುತ್ತಿದ್ದ ಎಲ್ಲ ಸಿನೆಮಾಗಳಲ್ಲೂ ಕಮ್ಯುನಿಸ್ಟರು ಕೆಟ್ಟವರಾಗಿಯೂ ಅಮೆರಿಕ ಮತ್ತು ಅದರ ಬೆಂಬಲದ ಪಡೆಗಳು ಹೀರೋಗಳಾಗಿಯೂ ಚಿತ್ರಿಸಲ್ಪಡುತ್ತಿದ್ದರು.

ಇತ್ತೀಚೆಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೋಂಗ್ ಉನ್‌ನ ಮಲಸೋದರ ಕಿಮ್ ಜೋಂಗ್ ನಾಮ್‌ನನ್ನು ಮಲೇಷ್ಯಾದಲ್ಲಿ ಹತ್ಯೆ ಮಾಡಲಾಯಿತು. ಆತ ಪಾಪ, ಉತ್ತರ ಕೊರಿಯಾದಿಂದ ಓಡಿಹೋಗಿ ಮಲೇಷ್ಯಾದಲ್ಲಿ ಗುಟ್ಟಾಗಿ ವಾಸಿಸುತ್ತಿದ್ದವನು. ಅವನ ಹತ್ಯೆಗೆ ಕಾರಣ ಯಾರೆಂಬುದಕ್ಕೆ ಸಾಕ್ಷ್ಯವೇ ಬೇಕಿರಲಿಲ್ಲ. ಮಲೇಷ್ಯಾ ಸರಕಾರವು ಈ ಹತ್ಯೆಯ ದಾಳಗಳನ್ನು ಬಂಧಿಸಿತು. ಜೊತೆಗೇ ಇತರ ನಾಲ್ಕು ಮಂದಿ ಉತ್ತರ ಕೊರಿಯನರನ್ನು ಈ ಸಂಚಿನಲ್ಲಿ ಭಾಗಿಯೆಂದು ಗುರುತಿಸಿತು. ಅಷ್ಟರಲ್ಲಿ ಉತ್ತರ ಕೊರಿಯಕ್ಕೆ ಪ್ರವಾಸ ಹೋಗಿದ್ದ (ಬೇಹುಗಾರಿಕೆಗೋ ಎಂಬುದು ಸ್ಪಷ್ಟವಾಗಿಲ್ಲ!) ಮಲೇಷ್ಯರನ್ನು ಅಲ್ಲಿನ ಸರಕಾರ ಬಂಧಿಸಿತು. ಸಹಜವಾಗಿಯೇ ಮಲೇಷ್ಯಾ ಸರಕಾರವು ಒಂದು ಕೊಡುಕೊಳ್ಳುವ ಒಪ್ಪಂದವನ್ನು ಮಾಡಲೇ ಬೇಕಾಯಿತು. ಹೀಗಾಗಿ ಸೆರೆ ಸಿಕ್ಕ ಇಬ್ಬರು ಮಹಿಳೆಯರನ್ನು ಹೊರತು ಪಡಿಸಿ ಇತರ ಉತ್ತರ ಕೊರಿಯನ್ನರೂ ಮಲೇಷ್ಯನ್ನರೂ ಈಗ ಕ್ಷೇಮ. ಸತ್ತವನ ದೇಹ ಉತ್ತರ ಕೊರಿಯಕ್ಕೆ ಮರಳಿದೆ. ಆತನ ಆತ್ಮಕ್ಕೆ ಶಾಂತಿ ಸಿಗಲಿ.

ಹಿಟ್ಲರನ ಬಲಗೈ ಎಂದು ಗುರುತಿಸಿಕೊಂಡಿದ್ದ ಐಕ್‌ಮನ್ ಎರಡನೆಯ ವಿಶ್ವ ಸಮರದ ಅನಂತರದಲ್ಲಿ ಮಿತ್ರ ಪಕ್ಷಗಳ ಕೈಗೆ ಸಿಗದೆ ಅರ್ಜೆಂಟಿನಾದಲ್ಲಿ ಅವಿತುಕೊಂಡಿದ್ದ. ಆತನನ್ನು ಇಸ್ರೇಲಿನ ಬೇಹುಗಾರಿಕಾ ತಂಡವು ಅರ್ಜೆಂಟಿನಾ ಸರಕಾರಕ್ಕೆ ಗೊತ್ತಾಗದಂತೆ ಹುಡುಕಿ ಬಂಧಿಸಿ ತಂದಿತು. ಅರ್ಜೆಂಟಿನಾ ತನ್ನ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಿತೆಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿದರೂ ಯಶಸ್ವಿಯಾಗಲಿಲ್ಲ. ಐಕ್‌ಮನ್ ನೇಣುಗಂಬವನ್ನೇರಿದ.

ಉಗಾಂಡದ ಎಂಟೆಬ್ಬಿಯಲ್ಲಿ ಅಲ್ಲಿನ ಸರ್ವಾಧಿಕಾರಿ ಇದಿ ಅಮೀನ್ ಇಸ್ರೇಲಿನ ವಿಮಾನವನ್ನು ಭಯೋತ್ಪಾದಕರ ಮೂಲಕ ಬಲಾತ್ಕಾರವಾಗಿ ಅಪಹರಿಸಿ ತಂದಿದ್ದ. ಅದನ್ನು ಇಸ್ರೇಲಿನ ಬೇಹುಗಾರಿಕಾ ತಂಡವು ಕೇವಲ ತೊಂಬತ್ತು ನಿಮಿಷಗಳ ಇರುಳಿನ ಕಾರ್ಯಾಚರಣೆಯಲ್ಲಿ ಪಾರುಮಾಡಿತು. ಇದಿ ಅಮೀನನ ಅರಮನೆಯ ಕೂಗಳತೆಯ ಎಂಟೆಬ್ಬಿಯ ವಿಮಾನ ನಿಲ್ದಾಣದಲ್ಲಿ ನಡೆದ ಈ ಕಾರ್ಯಾಚರಣೆ ಆತನಿಗೇ ಗೊತ್ತಿಲ್ಲದೆ ನಡೆಯಿತು.

ಇಂತಹ ಅನೇಕ ಕಾರ್ಯಾಚರಣೆಗಳು ವಿಶ್ವದಲ್ಲಿ ನಡೆಯುತ್ತಲೇ ಇರುತ್ತವೆ. ಒಂದು ರಾಷ್ಟ್ರದ ದೇಶಭಕ್ತ ಇನ್ನೊಂದು ರಾಷ್ಟ್ರದ ಭಯೋತ್ಪಾದಕನಾಗುತ್ತಾನೆ. ಇದು ರಾಜಕೀಯ ಸಹಜಗಳೆಂದು ಎಲ್ಲ ಪ್ರಭುತ್ವಗಳೂ ಒಪ್ಪಿವೆ ಮತ್ತು ನಿರ್ದಾಕ್ಷಿಣ್ಯವಾಗಿ ಸಹಿಸಿಕೊಂಡಿವೆ. ಹೀಗಾಗಿ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ನಡೆಯುವ ಚಮತ್ಕಾರಗಳಿಗೂ ದೇಶದೊಳಗಣ ಸಂಗತಿಗಳಿಗೂ ಸಂಬಂಧವೇ ಇರುವುದಿಲ್ಲ.

ಇಂತಹ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಎಷ್ಟೊಂದು ಜೀವಹಾನಿಯಾಗುತ್ತದೆಯೋ ಯಾರು ಲೆಕ್ಕವಿಟ್ಟವರು? ಅನೇಕರು ಜೈಲಿನಲ್ಲಿ ಕೊಳೆತು ಸತ್ತರೆ ಇನ್ನು ಅನೇಕರು ಸದ್ದಿಲ್ಲದೆ ಹತ್ಯೆಗೀಡಾಗುತ್ತಾರೆ. ನಮ್ಮ ಸರಬ್ಜಿತ್ ಸಿಂಗ್ ಬೇಹುಗಾರಿಕೆಯ ಆಪಾದನೆಯ ಮೇಲೆ ಮರಣದಂಡನೆಗೆ ಗುರಿಯಾಗಿ ಅನಂತರ ಪಾಕಿಸ್ತಾನದ ಜೈಲಿನಲ್ಲಿ ಹಲ್ಲೆಗೀಡಾಗಿ ಸತ್ತರೆಂದು ವರದಿಯಾಯಿತು. ಮರಣದಂಡನೆಯ ಸಾವಿಗಿಂತ ಅಪಘಾತದ ಸಾವು ಕಡಿಮೆ ದಾರುಣ ಅಲ್ಲವೇ? ಇದರ ನಿಜ ಶಾಶ್ವತವಾಗಿ ಕಾಲಗರ್ಭದಲ್ಲಿ ಹೂತುಹೋಗುತ್ತದೆ. ಇದರ ಅಗೆತ ಮೊದಲು ಕೋಶಾವಸ್ಥೆ; ಕೊನೆಗೂ ಕೋಶಾವಸ್ಥೆಯೇ. ***

ನಮ್ಮ ಶಾಲಾಕಾಲೇಜುಗಳ ಪ್ರಯೋಗಶಾಲೆಗಳಲ್ಲಿ ಎರೆಹುಳ, ಜಿರಳೆ, ಕಪ್ಪೆ, ಮುಂತಾದ ಪ್ರಾಣಿಗಳನ್ನು ನಮ್ಮ ಅಧ್ಯಯನಗಳಿಗಾಗಿ ಮೊಳೆಯಿಂದ ಹಲಗೆಯ ಮೇಲೆ ಜಡಿದು ಆನಂತರ ಹರಿತವಾದ ಉಪಕರಣಗಳ ಮೂಲಕ ಸಿಗಿಯಲಾಗುತ್ತದೆ. ಅವುಗಳು ಸ್ಮತಿ ತಪ್ಪಿದ ಆನಂತರವೂ ನೋವಿನಿಂದ ಕೈಕಾಲುಗಳನ್ನು ಬಡಿಯುವುದನ್ನು ನೋಡಲಾಗದೆ ನೋಡಿ ನಮ್ಮ ವಿಜಯದ ದ್ಯೋತಕವಾಗಿ ಅವುಗಳ ಅಭಿದಮನಿ-ಅಪಧಮನಿಗಳ ರಕ್ತವ್ಯೆಹವನ್ನು, ಜೀರ್ಣಾಂಗವ್ಯೆಹವನ್ನು, ಮತ್ತಿತರ ದೇಹದ ಭಾಗಗಳನ್ನು ಅಂಗಾಂಗಗಳನ್ನು ಪ್ರದರ್ಶಿಸುತ್ತೇವೆ. ಪ್ರಾಯಃ ಎಲ್ಲ ಜೀವವಿಜ್ಞಾನ ವಿದ್ಯಾರ್ಥಿಗಳು ಇದನ್ನು ಅನುಭವಿಸಿದ್ದಾರೆ.

ಇತಿಹಾಸ, ಸಾಹಿತ್ಯ ಅಥವಾ ಸಾಮಾನ್ಯ ಜ್ಞಾನ ಹೊಂದಿದವರಿಗೂ ಯೇಸುಕ್ರಿಸ್ತರನ್ನು ಹೀಗೆಯೇ ಶಿಲುಬೆೆಗೆ ಬಡಿದದ್ದು ನೆನಪಾಗದಿರದು. ಪ್ರಾಣಿಗಳನ್ನು ಘಾಸಿಗೊಳಿಸಿದಾಗ ಸಂಕಟವಾಗದವರಿಗೆ ಮನುಷ್ಯರನ್ನು ಘಾಸಿಗೊಳಿಸಿದಾಗಲೂ ಸಂಕಟವಾಗಬಾರದು. ಗೋಹತ್ಯೆ ಹಿಂಸೆಯೆನಿಸುವವನಿಗೆ ಮೀನು, ಕುರಿ, ಕೋಳಿ, ಹಂದಿ ಕೊನೆಗೆ ಹಾಲು ಕೊಡುವ ಆಡು, ಎಮ್ಮೆಯನ್ನು ಕೊಂದರೂ ಏನೂ ಅನ್ನಿಸದಿರುವುದು ಅಚ್ಚರಿಯ ವಿಚಾರವಲ್ಲವೇ? ಇವೆಲ್ಲ ಒಂದೊಂದು ಜ್ಞಾನ-ವಿಜ್ಞಾನದ ಭಾಗಗಳಲ್ಲವೇ? ಎರೆಹುಳವನ್ನು ಕಟ್ಟಿ ಮೀನು ಹಿಡಿಯುವುದೂ ಇಂತಹ ಪ್ರಯೋಗವೇ. ಆಡನ್ನು ಕಟ್ಟಿ ಹುಲಿಯನ್ನು ಹೊಡೆಯುತ್ತಿದ್ದರಂತಲ್ಲ! ಬೇಹುಗಾರಿಕೆ, ಯುದ್ಧ ಇವೆಲ್ಲ ಇಂತಹ ಪ್ರಯೋಗಗಳೇ. ಇವು ನಮ್ಮ ಯಶಸ್ಸಿನ ಅಳತೆಗೋಲಿಗೆ ಇವೆಲ್ಲ ಸಾಕ್ಷಿಗಳಾಗಿ, ಸಾಕ್ಷಿಪ್ರಜ್ಞೆಗಳಾಗಿ ಉಳಿಯುತ್ತವೆ. ಈ ಕ್ರೌರ್ಯ ಆಯ್ದ ಕ್ಷೇತ್ರಗಳಲ್ಲಿ, ಆಯಾ ಪರಿಣತಿಯ ಭಾಗಗಳಾಗಿರುತ್ತವೆ. ಇವೆಲ್ಲ ಒಂದೊಂದು ಜಗತ್ತಿನ ಆಯ್ಕೆಗಳಾಗಿರುವುದು ಮತ್ತು ಭಗವಂತನ ಬೇಹುಗಾರಿಕೆಯ ಸಂಕೇತವಾಗಿರುವುದು ವಿಶೇಷವೇನಲ್ಲ.

ಆದ್ದರಿಂದ ನಮ್ಮ ಜಗತ್ತು ಎಷ್ಟು ವಿಶಾಲವೋ ಅಷ್ಟೂ ಆಯ್ಕೆಗಳಿರುತ್ತವೆ. ಎತ್ತರದಲ್ಲಿರುವವರಿಗೆ, ಉನ್ನತ ಸ್ಥಾನದಲ್ಲಿರುವವರಿಗೆ ಹಿಂಸೆಯೆಂಬುದು ಒಂದು ಸಾಧನ; ಒಂದು ಮೆಟ್ಟಲು; ಒಂದು ಮಾಧ್ಯಮ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top