ಚಲನಚಿತ್ರ ಚರಿತ್ರ ನಟರ ನವೀಕೃತ ತೇರು | Vartha Bharati- ವಾರ್ತಾ ಭಾರತಿ

---

ಚಲನಚಿತ್ರ ಚರಿತ್ರ ನಟರ ನವೀಕೃತ ತೇರು

ಸತ್ವಶಾಲಿ ಚರಿತ್ರ ನಟನಟಿಯರ ದಂಡು, ತೇರು ಅಥವಾ ಬಂಡಿಯಲ್ಲಿ ಮೆರವಣಿಗೆ ಹೊರಟಿರುತ್ತದೆ. ಅದೊಂದು ನಿರಂತರ ಪಯಣ. ಎಲ್ಲ ಬಗೆಯ ನಟನೆಯ ಅಗತ್ಯ ಪೂರೈಸುವಷ್ಟು ಸುಸಜ್ಜಿತವಾಗಿದೆ ಆ ದಂಡು. ಅಲ್ಲಿ ಯಾರೂ ಮುಖ್ಯರಲ್ಲ. ಯಾರನ್ನೂ ಬದಲಿಸಲೂ ಬಾರದು. ಬಂಡಿ, ಹತ್ತಿಪ್ಪತ್ತು ವರ್ಷಗಳ ದೂರ ಗಮಿಸಿದಂತೆ ಒಂದು ಸಂಚಲನ. ಕಲಾಕಾರರ ಸಂಕಲನ-ವ್ಯವಕಲನ...

ಹೀಗೆಲ್ಲ ಒಡಪು ಒಡಪಾಗಿ ನಮ್ಮ ನೆಚ್ಚಿನ ‘ಕ್ಯಾರೆಕ್ಟರ್ ಆರ್ಟಿಸ್ಟ್ಸ್’ ಕುರಿತು ಕಲ್ಪನೆ ಹರಿಯಬಿಡಬಹುದು. ಸಾರಾಂಶ ಇಷ್ಟೇ, ಸಿನೆಮಾಗಳಲ್ಲಿ ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ನಿರ್ವಹಿಸಿ ಪ್ರೇಕ್ಷಕರ ಮನ ಗೆಲ್ಲುವ ಪೋಷಕ ನಟರ ಪ್ರಸಕ್ತ ಬೆಳೆಯ ತರುವಾಯ ತಲೆಯೆತ್ತಲು ಅಷ್ಟೇ ಸೊಂಪಾದ ಪೈರು ಮರೆಯಲ್ಲಿಯೇ ಹಸಿರುಗೊಂಡಿರುತ್ತದೆ. ಅವಕಾಶ ದೊರೆತ ಕ್ಷಣ ಮೇಲ್ಮೈಗೆ ಚಿಮ್ಮಿ ದೃಷ್ಟಿ ಗೋಚರವಾಗುತ್ತದೆ.

ದೇಶಾದ್ಯಂತ ಜನರನ್ನು ಮುಟ್ಟುವ ಹಿಂದಿ ಸಿನೆಮಾ ಕ್ಷೇತ್ರದಲ್ಲಿ ನಾಸಿರುದ್ದೀನ್ ಶಾ, ಓಂಪುರಿ, ಪರೇಶ್ ರಾವಲ್, ಅನುಪಮ್ ಖೇರ್, ಪಂಕಜ್ ಕಪೂರ್, ಸುಲಭಾ ದೇಶಪಾಂಡೆ, ರೀಮಾ ಲಾಗೂ, ರೋಹಿಣಿ ಹಟ್ಟಂಗಡಿ, ಸುರೇಖಾ ಸಿಕ್ರಿ, ಶಬಾನಾ ಅಜ್ಮಿ ಮುಂತಾದವರ ನಂತರ ಯಾರಪ್ಪಾ ಎಂದು ಕಳವಳಗೊಳ್ಳುವಷ್ಟರಲ್ಲಿ ಇರ್ಫಾನ್ ಖಾನ್, ನವಾಝುದ್ದೀನ್ ಸಿದ್ದೀಕಿ, ಅದಿಲ್ ಹುಸೈನ್, ರಾಜ್‌ಕುಮಾರ್ ರಾವ್, ಅತುಲ್ ಕುಲಕರ್ಣಿ, ಸುಪ್ರಿಯಾ ಪಾಠಕ್, ನಂದಿತಾ ದಾಸ್, ಕೊಂಕಣಾ ಸೇನ್ ಶರ್ಮ, ರೈಮಾ ಸೆನ್, ರಿಚಾ ಛಡ್ಡ, ರಾಧಿಕಾ ಆಪ್ಟೆ ಇತ್ಯಾದಿ ಸಜ್ಜುಗೊಂಡಿರುತ್ತಾರೆ. ಕನ್ನಡ ಸಿನೆಮಾ ರಂಗದಲ್ಲೂ ಹೂಬಹೂಬು ಹೀಗೇ; ಕೇವಲ ಹೆಸರುಗಳು ಬದಲಾಗುತ್ತವೆ. ಯಾವ ಎದ್ದುತೋರುವ ಪಲ್ಲಟಗಳೂ ಇಲ್ಲದೆ ತನ್ನ ಪಯಣದಲ್ಲಿಯೇ ತೇರು ನವೀಕೃತಗೊಳ್ಳುವ ಬಗೆ ಹೀಗೆ.

ತನ್ನ ಅಸ್ಮಿತೆಯನ್ನು ಪಾತ್ರೆಯ ಆಕಾರಕ್ಕೆ ತಕ್ಕಂತೆ ಬದಲಿಸಿಕೊಳ್ಳುವ ನೀರಿನಷ್ಟೇ ಪಾರದರ್ಶಕ ಹಾಗೂ ಹರಿವಿನ ಗುಣವುಳ್ಳ ಅವರ ಪ್ರತಿಭೆ ಇದನ್ನು ಸಾಧ್ಯವಾಗಿಸುತ್ತದೆ; ನಟನೆ ಎಂಬ ಪ್ರದರ್ಶಕ ಕಲೆಯ ವಯರಿಂಗ್ ಅವರಲ್ಲಿ ಹುಟ್ಟಿನಿಂದ ಆಗಿ ಅನುಕೂಲಕರ ಪರಿಸ್ಥಿತಿಯಲ್ಲಿ ಬೆಳಗುತ್ತದೆ...ಎಂದೆಲ್ಲ ನಾವು, ಹುಲು ವೀಕ್ಷಕರು ಸೋಜಿಗಗೊಳ್ಳಬಹುದು. ಒಂದರೆಕ್ಷಣ ಝುಮ್ಮನೆ ಸಂವೇದನೆಯಲ್ಲಿ ಅದು ಇಹ-ಪರ ಮರೆಸುವ ಬಗೆಯನ್ನು ನೆನೆದುಕೊಳ್ಳಬಹುದು. ಅಲ್ಲಿಂದಾಚೆ ಅದು ಮೂಕ ಸಂತೋಷ.

ಉದಾಹರಣೆಗೆ, ಸದ್ಯ, ಎಲ್ಲರೂ ಮುಕ್ತಕಂಠದಿಂದ ಪ್ರಶಂಸಿಸುವ ನವಾಝುದ್ದೀನ್ ಸಿದ್ದೀಕಿ, ‘ಸರ್ಫರೋಷ್’ (1999)ನಲ್ಲಿ ನಿರ್ವಹಿಸಿದ ಕ್ಷಣಭಂಗುರ ಆರಂಭಿಕ ಪಾತ್ರದಿಂದ ಸುಪ್ರಸಿದ್ಧ ಕತೆಗಾರ, ಚಿಂತಕ, ಸಾದಾತ್ ಹಸನ್ ಮಾಂಟೊರನ್ನು ಚಿತ್ರೀಕರಿಸುವ ತನಕ ಬೆಳೆದಿರುವುದು ಅದೇ ವ್ಯಾಖ್ಯೆ ಮಾಡಲು ಬಾರದ ಪ್ರತಿಭೆಯ ಬಲದಿಂದ. ಪೊಲೀಸ್ ಇನ್‌ಸ್ಪೆಕ್ಟರ್, ಸೈಕೊಪಾತ್, ಗ್ಯಾಂಗ್‌ಸ್ಟರ್, ಪತ್ರಕರ್ತ, ವಿಕೃತ ಶಿಕ್ಷಕ, ಉಕ್ಕಿನ ಸಂಕಲ್ಪದ ವೃದ್ಧ ಪ್ರೇಮಿ...ಯಂತಹ ಸಂಕೀರ್ಣ ಪಾತ್ರಗಳನ್ನು ಅವರು ತೆರೆಯ ಮೇಲೆ ನಿಜ ಹಾಗೂ ನಂಬಲರ್ಹವಾಗಿಸಿದ ರೀತಿಗೆ ವಿವರಣೆಗಳಿಲ್ಲ. ಫೀಚರ್ ಫಿಲಮ್, ಕಿರು ಚಿತ್ರ, ವ್ಯಾಪಾರಿ ಚಿತ್ರ ಅಥವಾ ವಿದೇಶಿ ಚಿತ್ರ ಎಂಬ ಭೇದವಿಲ್ಲದೆ ಸವಾಲಿನ ರೋಲ್‌ಗಳನ್ನು ಅವರು ಭೇದಿಸುವ ಪರಿ ಅಪೂರ್ವ. ಇದು ಕೇವಲ ಒಬ್ಬ ಸಿದ್ದೀಕಿಯ ಸಿದ್ಧಿಯಲ್ಲ. ಹುಲ್ಲುಗಿಡಕ್ಕೆ ಅಂಟಿದ ಸಮಾನ ಎಳೆಯ ಬೇರುಗಳಂತೆ ಚರಿತ್ರ ನಟ-ನಟಿಯರ ಸಂಖ್ಯೆಯೂ ಸುಪರ್ ಸ್ಟಾರ್‌ಗಳಿಗೆ ಹೋಲಿಸಿದರೆ ಅಧಿಕ.

ಹಾಗೆ, ಸಮರ್ಥವಾಗಿ, ಸಮರ್ಪಕವಾಗಿ ಕೊಟ್ಟ ಪಾತ್ರ ನಿಭಾಯಿಸುವ ಶ್ರೇಷ್ಠ ನಟ ನಟಿಯರ ಒಂದು ಸೌಹಾರ್ದಯುತ ಸಮೂಹವನ್ನು ಕಟ್ಟಿ ಬೆಳೆಸಿದ ಹಿರಿಮೆ ನಿರ್ದೇಶಕ ಶ್ಯಾಮ್ ಬೆನಗಲ್‌ರಿಗೆ ಸಲ್ಲಬೇಕು. ‘ಸಂವಿಧಾನ’ ಕುರಿತ ಅವರ ಇತ್ತೀಚಿನ ಟೆಲಿವಿಷನ್ ಸರಣಿಯಲ್ಲಿ ಅವರೆಲ್ಲರನ್ನೂ ಒಟ್ಟಿಗೇ ನೋಡಿದರೆ ಪುಲಕವಾಗುತ್ತದೆ. ವಯೋವೃದ್ಧ ಮೌಲಾನಾ ಅಬುಲ್ ಕಲಾಮ್ ಆಝಾದ್ ಆಗಿ ಟಾಮ್ ಆಲ್ಟರ್, ಹಂಸ ಮೆಹತಾ ಆಗಿ ಇಳಾ ಅರುಣ್, ಗೋಪಾಲಸ್ವಾಮಿ ಅಯ್ಯಂಗಾರ್ ಆಗಿ ರಜಿತ್ ಕಪೂರರನ್ನು ನೋಡುವಾಗ ಅದೇ ನಿರ್ದೇಶಕರ ಎಲ್ಲ ಪ್ರಾಜೆಕ್ಟ್ ಗಳಲ್ಲಿಯೂ ಇದೇ ಕಲಾವಿದರು ನಿರ್ವಹಿಸಿದ ನಾನಾ ಪಾತ್ರಗಳ ಮಿನಿ ಪರಿಶೆ ಮನದ ಪರದೆಯ ಮೇಲೆ ಹಾಯುತ್ತದೆ.

ಪಲ್ಲವಿ ಜೋಷಿ, ರಾಜೇಶ್ವರಿ ಸಚ್‌ದೇವ್ ಮುಂತಾದ ಎಳೆಯ ನಟನಟಿಯರು ಪ್ರೌಢರಾದ ಬೆಳವಣಿಗೆ ಕಾಣಸಿಗುತ್ತದೆ. ಸಿದ್ಧಪಡಿಸಿದ ಚಿತ್ರಪಠ್ಯ ಆಧರಿಸಿ, ಸಿನೆಮಾ ನಿರ್ಮಾಣದ ಒಂದೊಂದು ಘಟಕವೂ ಪರಮಾಯಿಷಿ ದುಡಿದು, ಮಿಡಿಯುವ ಒಂದು ಸೃಷ್ಟಿಯಂತೆ ಚಲನಚಿತ್ರ ಜೀವಂತವಾಗುವುದರ ಪ್ರಕ್ರಿಯೆ ಅರಿವಿಗೆ ಬರುತ್ತದೆ. ರೇಖಾಚಿತ್ರದಂತಿರುವ ಪಾತ್ರವನ್ನು, ಅನೇಕ ಅಂಗಚಲನೆ, ಮುಖಭಾವ, ನಡಿಗೆ, ಮಾತನಾಡುವ ಶೈಲಿ, ಅಭ್ಯಾಸಬಲದಿಂದ ಪದೇಪದೇ ಮಾಡುವ ಉದ್ಗಾರ, ಗುಣುಗುಣಿಸುವಿಕೆಯಿಂದ ಪೋಷಿಸಿ, ಒಂದು ರಕ್ತಮಾಂಸದ ಮನುಷ್ಯನಾಗಿಸುವುದು, ಆ ಮೂಲಕ ಕತೆಯನ್ನು ನಿಜ ಜೀವನಕ್ಕೆ ಹತ್ತಿರವಾಗಿಸುವುದು ಇತ್ಯಾದಿ ಕಸರತ್ತು, ಕ್ರಾಫ್ಟ್ ಹಾಗೂ ಉಪಾಯಗಳು ಹಾಲಿವುಡ್, ಬಾಲಿವುಡ್, ಪ್ರಾಂತೀಯ ಸಿನೆಮಾ ಎಂಬ ಭೇದವಿಲ್ಲದೆ, ಎಲ್ಲ ಕಡೆ ಸಮಾನವಾಗಿದೆ. ಆದರೂ ಶಿಸ್ತು, ಅಧ್ಯಯನ ಹಾಗೂ ಹೆಚ್ಚು ಅನುಕೂಲಗಳು ಇರುವ ಪಾಶ್ಚಿಮಾತ್ಯ ಚಿತ್ರಗಳಲ್ಲಿ ಅವು ಮಾದರಿಯಂತೆ ಇವೆ.

ನಮ್ಮಲ್ಲಿರುವವನ್ನು ಅವರಿಗೆ ಕಡ ನೀಡುವುದು, ಅವರು ಮಾಡಿದ್ದನ್ನು ನಾವೂ ಪ್ರಯೋಗಿಸುವುದು ಸರ್ವೇಸಾಮಾನ್ಯ. ಅದರಲ್ಲೇನೂ ನಾಚಿಕೆ-ಹಿಂಜರಿಕೆ ಇಲ್ಲ. ‘‘ಬಾಂಡ್ ಪಾತ್ರಧಾರಿ ಕೂಲ್ ಆಗಿ ನಡೆಯುವ ಶೈಲಿ, ಗನ್ ಹಿಡಿಯುವ ರೀತಿ, ಕಣ್ಣಕೊನೆಯಿಂದ ಕೋಣೆಯನ್ನು ಪರಿಶೀಲಿಸುವ ರೀತಿಯನ್ನು ನನ್ನ ಈ ಪಾತ್ರಕ್ಕೆ ಹೊಂದಿಸಿಕೊಳ್ಳಲು ಯತ್ನಿಸುತ್ತೇನೆ’’ ಎಂದು ನವಾಝುದ್ದೀನ್, ನಿರ್ಮಾಣ ಹಂತದಲ್ಲಿರುವ ‘ಬಾಬು ಮೊಷಾಯ್...’ ಕುರಿತು ಹೇಳಿರುವುದನ್ನು ಇದೇ ಸ್ಪಿರಿಟ್‌ನಲ್ಲಿ ತೆಗೆದುಕೊಳ್ಳಬೇಕು. ಯಾವುದೇ ಪಾತ್ರದ ‘ಪಾಲಿಟಿಕ್ಸ್ ಹಾಗೂ ಫಿಲಾಸಫಿ’ ತಿಳಿದುಕೊಳ್ಳುವುದೇ ಅದನ್ನು ಕಲಾವಿದನ ಮೂಲಕ (ಅವನ ಇಡೀ ಇರುವಿಕೆಯನ್ನೇ ವಾಹಕವಾಗಿಸಿ) ಹೊರತರುವ ಮುಖ್ಯ ವಿಧಾನ ಎಂಬ ಅವರ ಅಭಿಪ್ರಾಯ ಅಂತರಂಗದ ಬದಲಾವಣೆಗಳಿಗೆ ಸಂಬಂಧಿಸಿದ್ದು; ತಲೆಯಲ್ಲಿರುವ ಕಲೆ, ಇಡೀ ಶರೀರಕ್ಕೆ ಇಳಿಯುವ ಪರಿ!

ಮಾಂಟೋನಂತಹ ಬಹುಶ್ರುತ ಪ್ರತಿಭಾವಂತನ ಪರಕಾಯ ಪ್ರವೇಶಕ್ಕೆ ಸಾಕಷ್ಟು ಓದು, ಆತ ಇದ್ದ ಆವರಣ ಸೃಷ್ಟಿಸಿಕೊಂಡು ಅದರಲ್ಲಿ ಮುಳುಗೇಳುವುದು ಮುಂತಾದ ಪೂರ್ವತಯಾರಿ ಮಾಡಿರುವುದನ್ನು ಅವರು ಹೇಳಿಕೊಂಡಿದ್ದಾರೆ.

 ಚರಿತ್ರ ನಟರಂತೆಯೇ ಅಪರೂಪದ ಜೀವಿಗಳು ಅವರ ಪ್ರಶಂಸಕರು. ತಮ್ಮ ಮೆಚ್ಚಿನ ನಟನನ್ನು ಅವರು ಫಾಲೋ ಮಾಡುವ ರೀತಿ ಅಪೂರ್ವ: ಒಮ್ಮೆ ನಾಟಕ ಪ್ರದರ್ಶನಕ್ಕೆಂದು ಪರವೂರಿಗೆ ಹೋದಾಗ ತಮ್ಮ ಚಪ್ಪಲಿ ನಿಗೂಢವಾಗಿ ಕಳುವಾಯಿತು. ಹೆಚ್ಚು ತಲೆ ಕೆಡಿಸಿಕೊಳ್ಳಲು ಸಮಯ ಇರದಿದ್ದುದ್ದರಿಂದ ಹೊಸ ಜೋಡಿ ಕೊಂಡಿದ್ದಾಯಿತು. ಆದರೆ, ಕೆಲ ಸಮಯದ ಬಳಿಕ ಅದೇ ಪಟ್ಟಣಕ್ಕೆ ಇನ್ನೊಂದು ಪ್ರದರ್ಶನ ನೀಡಲು ಹೋಗಬೇಕಾಯಿತು. ಅಂದು, ಕಾದುಕೊಂಡು ಭೇಟಿ ಮಾಡಿದ ಏಕಲವ್ಯನಂತಹ ಶಿಷ್ಯನೊಬ್ಬ ಕಾಣೆಯಾಗಿದ್ದ ಪಾದುಕೆಗಳೊಂದಿಗೆ ಪ್ರತ್ಯಕ್ಷನಾದ! ‘‘ಗುರೂಜಿ, ನಿಮ್ಮ ಚಪ್ಪಲಿಯ ಬಲದಿಂದಲಾದರೂ ನನಗೆ ನಟನೆ ಒಲಿಯಲಿ ಎಂದು ಕದ್ದೊಯ್ದೆ’’ ಎಂದು ರಹಸ್ಯ ಸ್ಫೋಟಿಸಿದ ಎಂಬ ಕತೆಯನ್ನು ಮನೋಜ್ ವಾಜಪೇಯಿ ಪ್ರೇಕ್ಷಕರೊಂದಿಗೆ ಒಮ್ಮೆ ಹಂಚಿಕೊಂಡರು. ಶಿಳ್ಳೆಗಳು ತೂರಿಬಂದವು! ಜನತಂತ್ರದ ಸಾಮಾನ್ಯರು ಚುನಾವಣೆಗಳಲ್ಲಿ ಬಲಾಢ್ಯರಿಗೆ ಮಣ್ಣು ಮುಕ್ಕಿಸುವ ಬುದ್ಧಿವಂತಿಕೆಗೆ ಸಂವಾದಿಯೇನೋ ಈ ಬಗೆಯ ಕುಶಾಗ್ರ ಪ್ರತಿಭಾರಾಧನೆ. ಯಾವ ಹೊಸ ರಿಲೀಸ್ ಎಷ್ಟು ಕೋಟಿ ಸಂಪಾದಿಸಿತು, ಶತಕೋಟಿ ಚಿತ್ರಗಳ ಕ್ಲಬ್‌ಗೆ ಸೇರ್ಪಡೆಯಾಯಿತು ಎಂಬುದನ್ನು ಪ್ರಜ್ಞೆಯ ಹೊರವಲಯಕ್ಕೂ ಬಿಟ್ಟುಕೊಳ್ಳದ ಈ ಮಂದಿ, ತಮ್ಮ ಫೇವರಿಟ್ ಪೋಷಕ ನಟನ ಚಿತ್ರ ನೋಡಿಬಂದ ಗುಂಗಿನಲ್ಲಿ ದಿನಗಟ್ಟಲೆ ಇರಬಲ್ಲರು.

ಚಿತ್ರರಂಗದ ಒಳಗಿನವರು-ಹೊರಗಿನವರು, ಒಳಗಿನವರು ಹೊರಗಿನವರನ್ನು ಬಿಟ್ಟುಕೊಳ್ಳಲು ಒಡ್ಡುವ ಪ್ರತಿರೋಧ, ಮಾಡುವ ರಾಜಕೀಯ, ತಾರೆಯರ ಪುತ್ರ-ಪುತ್ರಿಯರ ಉಡಾವಣೆಗಾಗಿ ನಕ್ಷೆಗೊಳ್ಳುವ ಬೃಹತ್ ಯೋಜನೆಗಳು, ಅವು ಹಾರಬಹುದೇ ಅಥವಾ ಕುಸಿಯಬಹುದೇ ಎಂಬ ಕುರಿತು ಇರುವ ಅನಿಶ್ಚಿತತೆ...ಎಲ್ಲದರ ಗೋಜಲು ಸೀಳಿ ಪ್ರತಿಭಾವಂತ ಚರಿತ್ರ ನಟರು ಅವಕಾಶ ಗಿಟ್ಟಿಸಿಕೊಳ್ಳುವುದು, ಜನಮನ್ನಣೆ ಗಳಿಸುವುದು, ಚಿತ್ರದಿಂದ ಚಿತ್ರಕ್ಕೆ ಪ್ರವರ್ಧಮಾನರಾಗುತ್ತ ಬೆಳೆಯುವುದು ಸಹಜವಾಗಿಯೇ ಸಾಗುತ್ತದೆ: ತರುಣ ಪೀಳಿಗೆಯ ತಾಹಿರ್ ರಾಜ್ ಭಾಸಿನ್ (ಮರ್ದಾನಿ), ಜಿಮ್ ಸರ್ಭ್ (ನೀರಜಾ), ಮುಹಮ್ಮದ್ ಝೀಷನ್ ಅಯ್ಯೂಬ್ (ನೋ ಒನ್ ಕಿಲ್ಡ್ ಜೆಸ್ಸಿಕಾ, ರಾಂಜ್ಹನಾ) ವಿಕೀ ಕೌಶಲ್ (ಮಸಾನ್) ಭರವಸೆ ಹುಟ್ಟಿಸಿದ್ದಾರೆ.

ಸತತ ಹದಿನೈದು ವರ್ಷ ನವಾಝುದ್ದೀನ್ ತರಹದ ಗಟ್ಟಿ ನಟರು ಪ್ರಮುಖ ಅವಕಾಶಗಳಿಗಾಗಿ ಕಾಯಬೇಕಾಗಿ ಬಂದರೂ ಆ ಅಪರಿಮಿತ ಶ್ರಮದ ಫಲ ಮಾತ್ರ ಸವಿಸಿಹಿ. ''Nothing succeeds like Success'' ಜಾಣ್ನುಡಿ ಹೇಳುವಂತೆ ಒಮ್ಮೆ ಸಿಕ್ಕ ಯಶಸ್ಸು, ವಿಜಯಗಳ ಸರಮಾಲೆಯನ್ನೇ ಅವರ ಕೊರಳಿಗೆ ಹಾಕಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಮಡಿಲಿಗೆ ಬಿದ್ದಿವೆ. ಇನ್ನೂ ಹಲವು ಹತ್ತು ವ್ಯಕ್ತಿತ್ವಗಳನ್ನು ಅವರು ಪೋರ್ಟ್‌ರೇ ಮಾಡಿ ಚಿತ್ರರಸಿಕರ ಮನಸೂರೆಗೊಳ್ಳಬೇಕಿದೆ. ವಿಮರ್ಶಕರ ಮುಕ್ತಕಂಠದ ಒತ್ತಾಸೆ ತರತರದ ಪದಪುಂಜ, ಹೊಸ ಹೊಸ ಹೇಳುವ ರೀತಿಗಳಲ್ಲಿ ಅಭಿವ್ಯಕ್ತಗೊಂಡು ದಾಖಲಾಗಬೇಕಿದೆ. ನಿನ್ನೆ ಅವರು ಹುಟ್ಟಿದ ದಿನ. ಇಂದು ಹೀಗೊಂದು ಅಭಿನಂದನೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top