ಸಕಲ ಚರಾಚರಗಳಿಗೆ ಲೇಸ ಬಯಸಿ... | Vartha Bharati- ವಾರ್ತಾ ಭಾರತಿ

---

ಸಕಲ ಚರಾಚರಗಳಿಗೆ ಲೇಸ ಬಯಸಿ...

ಪ್ರತಿಷ್ಠಿತ ಪ್ಯಾರಿಸ್ ಒಪ್ಪಂದಕ್ಕೆ ಪಿಳ್ಳೆ ನೆವ ತೆಗೆದು ಅಮೆರಿಕ ಹಿಂದೆಗೆದಿರುವುದು ಶೋಚನೀಯ ಅಷ್ಟೇ ಅಲ್ಲ, ಒಂದು ಬಗೆಯ ದಾರುಣತೆ. ಇದರಿಂದ ವಿಶ್ವದೆಲ್ಲೆಡೆ ಚಿಂತಕರ ಮನದಲ್ಲಿ ಚಿಂತೆ ದಟ್ಟೈಸಿದೆ. ನೋಟ್‌ಬ್ಯಾನ್ ನಮ್ಮ ಸಮಾಜದ ಕಟ್ಟಕಡೆಯ ಪ್ರಜೆಯನ್ನು ಮುಟ್ಟಿ ಚುರುಗುಟ್ಟಿಸಿದ ಹಾಗೆ ಅಭಿವೃದ್ಧಿ ಹೊಂದಿದ ಮೊದಲ ಜಗತ್ತಿನ ಪ್ರಜೆಗಳನ್ನು ಪರಿಸರ ನಾಶ ಹಾಗೂ ಅದರಿಂದ ಉಂಟಾಗುವ ಅಸಂಖ್ಯ ದುಷ್ಪರಿಣಾಮಗಳು ತಾಕಿ ಚಳಿ ಹುಟ್ಟಿಸುವತನಕ ಕಾಯಬೇಕೆ ಎಂಬ ಹತಾಶೆ, ಅವರ ಬುದ್ಧಿಗೇಡಿತನ ಕುರಿತು ಜುಗುಪ್ಸೆ ಹುಟ್ಟಿಸುತ್ತಿದೆ; ಏಕೆಂದರೆ, ‘‘ಎಲ್ಲವನ್ನೂ ಪ್ರಜೆಗಳಿಗಾಗಿ, ಸಾಮಾನ್ಯರಿಗಾಗಿ, ಅಮೆರಿಕದ ಹಿತಕ್ಕೆ ಪ್ರಥಮ ಪ್ರಾಶಸ್ತ್ಯ ಕೊಡುವುದಕ್ಕಾಗಿ ಮಾಡುತ್ತೇನೆ’’ ಎನ್ನುವುದು ಟ್ರಂಪ್ ಹಾಡಿದ್ದೇ ಹಾಡುವ ರಾಗ.

ಇಂತಹ ಸನ್ನಿವೇಶದಲ್ಲಿ, ವಿಶ್ವದ ಪ್ರತಿ ನಾಗರಿಕನೂ ವೈಯಕ್ತಿಕ ಸ್ತರದಲ್ಲಿ ಹೋರಾಟಮಾಡಬೇಕಾಗಿ ಬರುವ ದಿನ ದೂರವಿಲ್ಲ ಎಂದವರು ಭಾರತೀಯ ಆಂಗ್ಲ ಲೇಖಕ ಅಮಿತಾವ್ ಘೋಷ್. ತಮ್ಮ ಕಥಾಸಾಹಿತ್ಯಕ್ಕಾಗಿ ಪ್ರಸಿದ್ಧರಾಗಿದ್ದರೂ ಸುಮಾರು ನಾಲ್ಕು ದಶಕಗಳ ತಮ್ಮ ವಿಪುಲ ಬರವಣಿಗೆಯಲ್ಲಿ ಕಥನೇತರ ಸಾಹಿತ್ಯಕ್ಕೂ ಅವರು ಅವಕಾಶ ಮಾಡಿಕೊಂಡಿದ್ದಾರೆ. ಆ ಕುರಿತು ಚಿಂತಿಸುತ್ತ, ಹೊಸ ಹೊಳಹುಗಳನ್ನು, ನೋಟಗಳನ್ನು ಬರೆದಿಡುವುದು ಅವರ ಜೀವನಶೈಲಿಯೇ ಆಗಿದೆ. ಸಾಕಷ್ಟು ಸಂಶೋಧನೆ, ತಯಾರಿ ಜತೆ ಉತ್ಕೃಷ್ಟ ಕಥನ ಶೈಲಿಯಲ್ಲಿಯೇ ರೂಪುಗೊಂಡಿರುವ ಸುಮಾರು 200 ಪುಟದ ಅವರ ಪುಸ್ತಕ, ‘ದಿ ಗ್ರೇಟ್ ಡೀರೇಂಜ್‌ಮೆಂಟ್: ಕ್ಲೈಮೇಟ್ ಚೆೇಂಜ್ ಆ್ಯಂಡ್ ದಿ ಅನ್‌ಥಿಂಕಬಲ್’ (ಪೆಂಗ್ವಿನ್ ಪ್ರಕಾಶನ) ಕಳೆದ ವರ್ಷ ಇದೇ ವೇಳೆ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಈ ಹಿಂದೆ ಬರೆದ ‘ದಿ ಹಂಗ್ರಿ ಟೈಡ್’, ‘ರಿವರ್ ಆಫ್ ಸ್ಮೋಕ್’ನಂತಹ ಕಾದಂಬರಿ ಹಾಗೂ ‘ಇನ್ ಆ್ಯನ್ ಆ್ಯಂಟಿಕ್ ಲ್ಯಾಂಡ್’ನಂತಹ ಕಥನೇತರ ಕೃತಿಗಳಲ್ಲೂ ಚಂಡಮಾರುತ, ಅತಿವೃಷ್ಟಿ, ಪ್ರವಾಹ, ಬರಗಾಲಗಳನ್ನು ಚರ್ಚಿಸಿದ್ದಾರಾದರೂ ಅತ್ಯಂತ ತುರ್ತಿನಿಂದ, ಹೀಗೆ ಮಾಡದೆ ನಿರ್ವಾಹವೇ ಇಲ್ಲ ಎನ್ನುವ ತೀವ್ರತೆಯಲ್ಲಿ ಈ ಪುಸ್ತಕ ಬರೆದಿದ್ದೇನೆ ಎಂದು ಘೋಷ್ ಹೇಳಿಕೊಂಡಿದ್ದಾರೆ.

ಅಸ್ತಿತ್ವವನ್ನೇ ನಿರ್ಧರಿಸುವ ನೈಸರ್ಗಿಕ ಬದಲಾವಣೆಗಳನ್ನು ಬದಿಗಿರಿಸಿ, ಬೇರೆಲ್ಲ ಚಟುವಟಿಕೆಗಳನ್ನು ಮನುಷ್ಯ ಜನಾಂಗ ಭರದಿಂದ ಹಮ್ಮಿಕೊಂಡಿರುವುದು ಹೇಗೆ ಸಾಧ್ಯ ಎಂಬ ಕಳವಳ ಪುಸ್ತಕದ ತುಂಬ ಹರಡಿರುವ ವಿಷಣ್ಣ ಭಾವ. ನಮ್ಮನ್ನು ಕಾಯುವ ಪ್ರಕೃತಿಯನ್ನು ಕಾಯಲಾರದಂತೆ ಮಾಡುವ ಅಭಿವೃದ್ಧಿಯ ನಾಗಾಲೋಟ ಮಾನವತೆಯನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬ ಕಳವಳ ಅದರಲ್ಲಿ ಉತ್ಕಟವಾಗಿ ಹೊರಹೊಮ್ಮಿರುವ ಹಾಗೆಯೇ, ಅವರ ಶಾಲೀನ ವಿಷಯ ಪ್ರಸ್ತುತಿ ಅದನ್ನು ಸೂಕ್ಷ್ಮ ಹಾಗೂ ನಿರುದ್ವಿಗ್ನಗೊಳಿಸಿದೆ. ವಾಸ್ತವ ಸಂಗತಿ ಹಾಗೂ ಅಂಕಿಅಂಶಗಳನ್ನೇ ಆಧರಿಸಿದೆ. ಹಲವು ಪ್ರತಿಷ್ಠಿತ ಜಾಗತಿಕ ಹವಾಮಾನ ಮೇಳಗಳನ್ನು ಯೋಜಿಸಿ, ಸುಸ್ತಾಗುವಷ್ಟು ಚರ್ಚಿಸಿ, ಕಡೆಗೂ ಹಳೆಯ ಹಾದಿಯನ್ನೇ ಹಿಡಿಯುವ, ಅಥವಾ ಅದನ್ನು ಬದಲಿಸಲಾಗದ ಇಕ್ಕಟ್ಟಿನಲ್ಲಿ ಸಿಲುಕಿರುವ ಬಲಿಷ್ಠ, ಪ್ರಗತಿ ಹೊಂದಿದ ದೇಶಗಳು ಸಮಸ್ಯೆಯನ್ನು ಮರೆಮಾಚುತ್ತಿರುವಾಗ, ಎಲ್ಲ ಬಗೆಯಲ್ಲೂ ಅವುಗಳ ಮೇಲೆ ಅವಲಂಬಿತವಾದ ಪ್ರಗತಿಶೀಲ ರಾಷ್ಟ್ರಗಳು ತಾವೇ ಜವಾಬ್ದಾರಿ ಹೊರಲು ಮುಂದಾಗುವುದಷ್ಟೇ ಪರಿಹಾರ ಎಂಬ ಅವರ ಭವಿಷ್ಯವಾಣಿ ಒಂದೇ ವರ್ಷದಲ್ಲಿ ನಿಜವಾಗಿದೆ.

ಸಂಸ್ಕೃತಿ, ನಾಗರಿಕತೆಗಳು ವಿಕಸನಗೊಂಡಂತೆ ಬಲಿಷ್ಠರು ಅಶಕ್ತರನ್ನು ತುಳಿಯುವುದು, ಮನುಷ್ಯರು ಪ್ರಾಣಿಗಳನ್ನು ಬಂಧನದಲ್ಲಿಟ್ಟು ಪಳಗಿಸುವುದು, ಕ್ರೀಡೆ, ಮನರಂಜನೆ ಹೆಸರಿನಲ್ಲಿ ಅವನ್ನು ಹಿಂಸಿಸುವುದು ಒಂದು ಮಜಲಿನ ಶೋಷಣೆಯಾದರೆ, (ಇದ್ದಕ್ಕಿದ್ದಂತೆ ಒಂದು ನಿಗದಿತ ಪ್ರಾಣಿಯ ಮೇಲೆ, ಪರಿಮಾಣ ರಹಿತವಾಗಿ ದಯೆ ಹುಟ್ಟಿ, ಜನರ ಆಹಾರ ಅಭ್ಯಾಸ, ಅದು ನೆಲೆಗೊಂಡಿರುವ ಪ್ರಕೃತಿಯ ಆಹಾರ ಸರಪಳಿ ಎಲ್ಲವನ್ನೂ ಧೂಳೀಪಟ ಮಾಡಿ ಸಮಾಜದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವುದೂ ಒಂದು ವಿಪರೀತ ವರ್ತನೆ) ಸುತ್ತಲಿನ ಪ್ರಕೃತಿಯನ್ನು ಬೇಕಾಬಿಟ್ಟಿಯಾಗಿ ಬಳಸಿ ದಮನಕ್ಕೊಳಪಡಿಸುವುದು ಅದರದೇ ಇನ್ನೊಂದು ಕವಲು. ಈ ಬಗ್ಗೆ ನಮ್ಮ ಕಲೆ, ಸಾಹಿತ್ಯದ ದಾಖಲೀಕರಣ ಸೊನ್ನೆಯಾಗಿರುವುದು ಹೇಗೆ ಎಂಬುದು ಅಮಿತಾವ್‌ರ ಸಖೇದಾಶ್ಚರ್ಯದ ಪ್ರಶ್ನೆ. (ಕೆಲ ಮೇಧಾವಿಗಳು ಅದನ್ನು ವಸ್ತುವಾಗಿ ಮಾಡಿಕೊಂಡ ಅಪವಾದ ಇದೆಯಾದರೂ ವಿಜ್ಞಾನ ಸಾಹಿತ್ಯ ಎಂದು ಆ ಕೃತಿಗಳನ್ನು ಮೂಲೆಗುಂಪಾಗಿಸಲಾಗಿದೆ!) ಓದುಗರನ್ನು ಬಡಿದೆಬ್ಬಿಸುವ ಹೊಸ ಚಿಂತನೆ. ಆಧುನಿಕತೆಯ ಬೆಳವಣಿಗೆಗಾಗಿ ಪ್ರಾಕೃತಿಕ ಸಂಪನ್ಮೂಲಗಳನ್ನು ಸೂರೆಗೈಯುವುದು ಎಂತಹ ಆಧುನಿಕತೆಯನ್ನು ನಾವು ನೆಚ್ಚಿಕೊಳ್ಳಬೇಕು ಎಂಬ ಮೂಲಭೂತ ಪ್ರಶ್ನೆಯೆಡೆಗೆ ಕೊಂಡೊಯ್ಯುತ್ತದೆ. ಹಾಗೆಯೇ ಇಂತಹ ಜೀವನ್ಮರಣದ ಪ್ರಶ್ನೆಯನ್ನು ಬದಿಗಿಟ್ಟು ಕಲೆ, ಚರಿತ್ರೆ, ರಾಜಕೀಯ, ಸಾಹಿತ್ಯಗಳು ಮುಂದುವರಿದಿದ್ದು ಹೇಗೆ ಎಂಬ ಕಸಿವಿಸಿಯನ್ನೂ ಎಂದು ಮತ್ತೆ ಮತ್ತೆ ಅವರು ಉಚ್ಚರಿಸುತ್ತಾರೆ. ಇದರಿಂದ, ಮುಂದೊಮ್ಮೆ ನಮ್ಮ ಭವಿಷ್ಯ ಜನಾಂಗಕ್ಕೆ, ತಮ್ಮ ಪೂರ್ವಜರ ಬುದ್ಧಿಶಕ್ತಿ, ವೈಚಾರಿಕ ಸಾಮರ್ಥ್ಯಗಳ ಕುರಿತು ಎಂತಹ ಕಳಪೆ ಚಿತ್ರಣ ದೊರೆಯಬಹುದು ಎಂಬ ಊಹೆ ಗಮನಸೆಳೆಯುವಷ್ಟು ಶಕ್ತವಾಗಿದೆ.

ಕನ್ನಡ ಸಾಹಿತ್ಯದ ಅಪವಾದಗಳು ನಮ್ಮ ತಲೆ ಕಾಯಬಹುದು: ನಿಸರ್ಗದ ಅತ್ಯಂತ ದಟ್ಟ ಇರುವಿಕೆ ಹೊಂದಿರುವ ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಒಂದು ಉದಾಹರಣೆ. ರಾಮ ಐತಾಳ, ಸರಸೋತಿ, ಪಾರೋತಿಯರಂತೆ ಅವರ ಪರಿಸರವೂ ಆ ಕಾದಂಬರಿಯಲ್ಲಿ ಒಂದು ಪ್ರಮುಖ ಪಾತ್ರವಾಗಿ ತೋರುತ್ತದೆ. ಈ ಮೂವರ ಕೃಷಿ ಚಟುವಟಿಕೆಗಳು ಹಾಗೂ ಅವರ ಜೀವನದಲ್ಲಾಗುವ ಏರಿಳಿತಗಳು ಬಿಡಿಸಲು ಬಾರದಂತೆ ಹೆಣೆದುಕೊಂಡಿರುವುದನ್ನು ಗಮನಿಸುವುದೇ ಒಂದು ರಸಸ್ವಾದ. ಜೀವ ವಿಕಾಸದಲ್ಲಿ ತಪ್ಪಿಹೋದ ಕೊಂಡಿ-ಮಿಸ್ಸಿಂಗ್ ಲಿಂಕ್ ಆದ ಹಾರುವ ಓತಿಯ ಬೆನ್ನತ್ತುವ ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೊ’ ಅಂತೂ ಪ್ರಕೃತಿಯಂತೆಯೇ ಬಣ್ಣನೆಗೆ ಬಾರದ ನಿಗೂಢತೆ ಹೊಂದಿರುವ ಕೃತಿ. ಅತ್ಯಂತ ಉನ್ನತ ಸ್ತರದ ಅದರ ನಿರ್ವಹಣೆಗೆ ಮಾರುಹೋದಷ್ಟೂ ಇನ್ನೊಂದಷ್ಟು ಮಿಕ್ಕಿದೆ ಎಂಬ ಭಾವನೆ. ಆದರೆ ಇಲ್ಲೆಲ್ಲೂ ಪರಿಸರ ರಕ್ಷಣೆ, ಅದರ ಮಹತ್ವ ಇತ್ಯಾದಿ ಪ್ರಜ್ಞಾಪೂರ್ವಕವಾಗಿ ಹೊಮ್ಮುವುದಿಲ್ಲ ಎಂಬುದನ್ನು ಗಮನಿಸಬೇಕು.

ಸೃಷ್ಟಿಯಲ್ಲಿ ಮನುಷ್ಯರಿಗೆ ಇರುವಷ್ಟೇ ಪ್ರಾಮುಖ್ಯ ಸಕಲ ಚರಾಚರ ವಸ್ತುಗಳಿಗೂ ಇವೆ ಎಂಬ ವಿನಮ್ರತೆಯಲ್ಲಿ ಬದುಕುವ, ಸೌಹಾರ್ದಯುತ ತಾತ್ತ್ವಿಕತೆಯ ಹಲವು ಧಾರೆಗಳು ವಿಶ್ವದಲ್ಲಿ ಇಂದಿಗೂ ಉಳಿದಿವೆ. ಆದರೆ ಇಂತಹ ಬಹುತ್ವದ ಆಧುನಿಕತೆಯನ್ನು ತ್ಯಜಿಸಿ, ಮೇರೆಯಿಲ್ಲದ ಆರ್ಥಿಕ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡಿರುವ ಪಶ್ಚಿಮದ ಏಕ ಆಕಾರದ ಆಧುನಿಕತೆಯನ್ನೇ ಬಹುತೇಕ ಎಲ್ಲ ದೇಶಗಳೂ ಸೊಲ್ಲೆತ್ತದೆ ಒಪ್ಪಿಕೊಂಡಿವೆ. ‘‘ಅಂತಹುದೇನೂ ಆಗಲಾರದು’’ ಎಂಬ ಮೈಮರವೆಯಲ್ಲಿಯೇ ಇವೆ. ಕತ್ತಿ ತಲೆ ಮೇಲೆ ತೂಗುತ್ತಿದೆ, ವಿಶ್ವ ಕುಳಿತಿರುವ ಟೈಮ್ ಬಾಂಬ್ ಸ್ಫೋಟದ ಕ್ಷಣಗಣನೆ ನಡೆಯುತ್ತಿದೆ ಇತ್ಯಾದಿ ಇತ್ಯಾದಿ ಭೀಷಣ ಎಚ್ಚರಿಕೆಗಳು ಸಹ ಯಾರ ಮೇಲೆಯೂ ಪರಿಣಾಮ ಬೀರುತ್ತಿಲ್ಲ! ಈ ವಿದ್ಯಮಾನದಲ್ಲಿ ತೆರೆದು ತೋರುತ್ತಿರುವುದು ವ್ಯಕ್ತಿ ನೆಲೆಯ, ದೇಶಗಳ, ‘ಪ್ರಪಂಚದ ಡೀರೇಂಜ್‌ಮೆಂಟ್-ಬುದ್ಧಿಗೇಡಿತನ’; ‘‘ನೀ ದಿನ ಹೋದಾಕಿ, ಇರಬೇಕು ಜ್ವಾಕಿ’’ ಎಚ್ಚರಿಕೆಯನ್ನು ಹೊಸಕಿ ಹಾಕುವ ಮೂರ್ಖತನ.

ಮನುಷ್ಯ ಪ್ರಾಣಿ ಕೈಯಾರೆ ತಂದುಕೊಳ್ಳುವ ಸರ್ವವಿನಾಶದ ಕರಾಳ ಭವಿಷ್ಯವಾಣಿ ಹಲವು ರೂಪಗಳಲ್ಲಿ ನಮ್ಮ ಮುಂದೆ ಆಗಾಗ ಬರುತ್ತಿರುತ್ತದೆ. ಅವುಗಳಲ್ಲಿರುವ ಅಂಕಿ ಅಂಶಗಳು, ವಸ್ತುಸತ್ಯಗಳು ಬುದ್ಧಿ ಜಡಗೊಳಿಸುವಷ್ಟು ಅಗಾಧವಾಗಿರುತ್ತವೆ. ಎಲ್ಲವನ್ನೂ ತಿಳಿದುಕೊಳ್ಳಬೇಕು ಎಂಬ ಜರೂರಿಯಲ್ಲಿ, ಕರ್ತವ್ಯಪಾರಾಯಣದಂತೆ ಅವನ್ನು ಓದಿರುತ್ತೇವೆ; ತಕ್ಷಣ ಮರೆತಿರುತ್ತೇವೆ ಕೂಡ. ಈ ಕುರಿತು ಬರೆಯಲ್ಟಟ್ಟ ಪುಸ್ತಕವಾಗಲೀ, ಅದನ್ನು ನಾವು ಓದಿಕೊಂಡಿದ್ದಾಗಲೀ, ಹವಾಮಾನ ಬದಲಾವಣೆಯನ್ನು ಯಾವುದೇ ರೀತಿಯಲ್ಲಿ ಪ್ರಭಾವಿಸಲಾರವು ಎಂಬ ಖಚಿತತೆಯಲ್ಲಿ. ಆದರೆ ಅಮಿತಾವ್‌ರ ಪುಸ್ತಕ ಅವೆಲ್ಲವಕ್ಕಿಂತ ಭಿನ್ನ ಎಂಬ ಕಾರಣಕ್ಕಾಗಿಯೇ ಸೆಳೆಯುತ್ತದೆ ಎಂದಿದ್ದಾರೆ, ವಿಮರ್ಶಕರು. ಅಕಡೆಮಿಕ್ ಪರಿಭಾಷೆ ಬಳಸದೆ, ಅಗತ್ಯವಾದಷ್ಟೇ ಅಂಕಿ ಅಂಶಗಳೊಂದಿಗೆ ಹೆಣೆಯಲಾಗಿರುವ ನಿರೂಪಣೆ ಕಥಾನಕದಂತಿರುವುದೇ ಅದರ ಹೆಚ್ಚುಗಾರಿಕೆ.

ಹವಾಮಾನ ಬದಲಾವಣೆ ಕುರಿತು ನಿಷ್ಕ್ರಿಯರಾಗಿರುವ ಅಥವಾ ಜಾಣಮೌನ ವಹಿಸುವ ರಾಜಕಾರಣದ ಪ್ರತಿಫಲನದಂತಿದೆಯೆ ಮುಖ್ಯವಾಹಿನಿ ಕಥಾಸಾಹಿತ್ಯದ ಪಾಲಿಟಿಕ್ಸ್? ಲೇಖಕರು ಸ್ಥಾಪಿಸುವ ಈ ಸಮೀಕರಣಗಳು ಆಸಕ್ತಿದಾಯಕ: ಯಾವುದೇ ಭಾಷೆಯ ಮುಖ್ಯವಾಹಿನಿ ಸಾಹಿತ್ಯ, ಅತಿ ಉತ್ಕೃಷ್ಟ ದರ್ಜೆಯ ವೈಜ್ಞಾನಿಕ ಕಥಾನಕವನ್ನು ದೂರವೇ ಇಟ್ಟಿದೆ. ಸದ್ಯ ಬರುತ್ತಿರುವ ಭಾರತೀಯ ಆಂಗ್ಲ ಸಾಹಿತ್ಯ ಹಲವು ಸೂಕ್ಷ್ಮಾತಿಸೂಕ್ಷ್ಮ ವ್ಯಕ್ತಿ ಕೇಂದ್ರಿತ ಥೀಮ್‌ಗಳ ಸುತ್ತಲೇ ಇದೆ. ಅದರ ಇಂಚಿಂಚು ವಿವರಣೆ, ಸೂಕ್ಷ್ಮಾತಿಸೂಕ್ಷ್ಮ ನಿರೀಕ್ಷಣೆಗೆ ಮನುಷ್ಯನ ಮನಸ್ಸಿನ ಹರಹೇ ಸೀಮೆ. ಪಾತ್ರಗಳ ತಾಕಲಾಟಗಳು ತೀವ್ರವಾದಷ್ಟೂ ಅವುಗಳ ಹಿಂದಿರುವ ಕಾರಣ ಸಂಕುಚಿತವಾಗುತ್ತಾ ಹೋಗುತ್ತಿದೆ. ಇದು ಹೀಗೇ ಬರೆಯಲ್ಪಡಬೇಕು ಎಂಬ ನಿಯಮವನ್ನು ಸೃಜನಶೀಲ ಸಾಹಿತ್ಯಕ್ಕೆ ಹಾಕಲಾಗುವುದಿಲ್ಲ ಎಂಬುದು ನಿಜವಾದರೂ, ಇದೆಲ್ಲ ಹೀಗೇಕೆ ಆಯಿತು ಎಂಬ ಚಾರಿತ್ರಿಕ, ಸಾಂಸ್ಕೃತಿಕ ಚಿಂತನೆಗೂ ಮಹತ್ವವಿದೆ. ಇನ್ನು ವೈಯಕ್ತಿಕ ಸಿದ್ಧಿ, ಸಾಧನೆ, ವಿಕಸನಗಳಿಗೆ ವಾಹಕವಾಗಿರುವ (ಕ್ಷುಲ್ಲಕ ಪದಗಳಲ್ಲಿ ಹೇಳುವುದಾದರೆ, ಕುರ್ಚಿ, ಅಧಿಕಾರ, ಹಣ ಮಾಡುವುದು) ರಾಜಕೀಯವಂತೂ ಸರಿಯೇ ಸರಿ. ಅಮೆರಿಕದ ಅಧ್ಯಕ್ಷರಾಗಲೀ, ಐರೋಪ್ಯ ದೇಶಗಳ ನಾಯಕರುಗಳಾಗಲಿ, ಜಾಗತಿಕ ತಾಪಮಾನ ಕುರಿತು ಎಷ್ಟು ತಲೆಕೆಡಿಸಿಕೊಂಡರೂ ಈ ಕುರಿತು ಈ ತನಕ ಕಾರ್ಯಗತಗೊಂಡಿರುವುದು ಅತ್ಯಲ್ಪ!

ಬಂಗಾಳ ಮೂಲದ ಅಮಿತಾವ್ ಮತ್ತು ಕಾಸ್ಮೊಪಾಲಿಟನ್ ನಗರ ಮುಂಬೈ ನಡುವಿನ ಒಡನಾಟ- ದೇಶದ ಇನ್ನಿತರ ಬುದ್ಧಿಜೀವಿಗಳ ವಿಷಯದಲ್ಲಿರುವ ಹಾಗೆ- ಸಾಕಷ್ಟು ಗಾಢವಾದುದು. ಹಾಗಾಗಿ ಚಂಡಮಾರುತಕ್ಕೆ ಪಕ್ಕಾದ ದಕ್ಚಿಣ ಮುಂಬೈಯನ್ನು ಯಾವಾಗ ಅರಬಿ ಸಮುದ್ರ ಆಪೋಶನ ತೆಗೆದುಕೊಳ್ಳುವುದೋ ಎಂಬ ಚಿಂತನೆ ಪುಸ್ತಕದಲ್ಲಿ ವಿಶದವಾಗಿ ಚರ್ಚಿಸಲ್ಪಟ್ಟಿದೆ: ‘‘2005ರ ಅತಿವೃಷ್ಟಿ ಎಚ್ಚರಿಕೆ ಗಂಟೆ ಬಾರಿಸಿತ್ತು. ಆದರೂ ಸುಮಾರು ಒಂದು ಕೋಟಿ ಇರುವ ದಕ್ಷಿಣ ಮುಂಬೈ ಜನಸಮುದಾಯವನ್ನು ಸ್ಥಳಾಂತರಿಸುವುದು, ಮರುವಸತಿಗೊಳಿಸುವುದು ಮುಂತಾದ ವಿಷಯದಲ್ಲಿ ಪರಿಪೂರ್ಣ ಸಿದ್ಧತೆಗಳು ಆಗಿಲ್ಲ’’ ಎಂದವರು ಸಾಬೀತುಪಡಿಸಿದ್ದಾರೆ. ಕೊನೆಗೂ ಪರಿಹಾರ ಏನು? ನವ ಉದಾರವಾದ- ನಿಯೊ ಲಿಬರಲಿಸಂ ನೆಲೆಯಲ್ಲಿ ವಿಶ್ವದ ಪ್ರತಿ ಪ್ರಜೆಯೂ ಈ ಕುರಿತು ಜಾಗೃತನಾಗಿ ಬೀದಿಗಿಳಿದು ಹೋರಾಟ ನಡೆಸುವುದೇ?

ಘೋಷ್ ಘೋಷಿಸುವ ಈ ಕ್ರಮ ಸಹ ವೈಶಿಷ್ಟ್ಯಪೂರ್ಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top