ಅತ್ತಲಿತ್ತ ಪಶುವೈದ್ಯರ ನೀವು ಕಂಡಿರಾ/ಕಂಡೀರಾ? | Vartha Bharati- ವಾರ್ತಾ ಭಾರತಿ

---

ಅತ್ತಲಿತ್ತ ಪಶುವೈದ್ಯರ ನೀವು ಕಂಡಿರಾ/ಕಂಡೀರಾ?

ಇದೆಂತಹ ವಿಚಿತ್ರ ಪ್ರಶ್ನೆ? ಎಲ್ಲರಂತೆ ತಮ್ಮ ಇಷ್ಟದ ಉದ್ಯೋಗ ಆರಿಸಿಕೊಂಡು ಲಕ್ಷಾಂತರ ಜನ ಪಶುವೈದ್ಯರಾಗಿರಬಹುದಲ್ಲ?! ಅವರು ಕಾಣುವುದಿಲ್ಲ ಅಂದರೇನು ಅರ್ಥ ಅನ್ನಬೇಡಿ. ದೇಶದ, ಸಮಾಜದ ಆಗುಹೋಗುಗಳ ಬಗ್ಗೆ ಚಿಂತಕರ ಚಾವಡಿಯಲ್ಲಿ (ಪ್ರಸಕ್ತ ಅವು ಸುದ್ದಿಮನೆ, ಟೆಲಿವಿಷನ್ ರೂಪ ತಾಳಿವೆ) ಮಿಂಚುತ್ತಲಿರುವ ಪ್ರತಿಷ್ಠಿತ/ಕುಲೀನ/ಬುದ್ಧಿಜೀವಿ/ರಾಜಕಾರಣಿ ಸಮುದಾಯ ಅಥವಾ ‘ಎಲೀಟ್ ಕ್ಲಾಸ್’ನಲ್ಲಿ ಅವರ ಪ್ರಾತಿನಿಧ್ಯ ಕಡಿಮೆಯಲ್ಲವೆ ಎಂಬ ಯೋಚನೆ ಹೀಗೇ ಬಂತು.

ಉದಾಹರಣೆಗೆ, ಸುವಿಖ್ಯಾತ ಸರ್ಜನ್, ಗಣಿತಜ್ಞ, ಆರ್ಥಿಕ ತಜ್ಞ, ಐಟಿ ದಿಗ್ಗಜ ಮುಂತಾಗಿ ಮುಕುಟಪ್ರಾಯ ಅನುಯಾಯಿ ಅಥವಾ ವಕ್ತಾರರನ್ನು ಹೊಂದಿರುವ ನಮ್ಮ ಮುಖ್ಯ ರಾಜಕೀಯ ಪಕ್ಷಗಳಲ್ಲಿ ಪಶುವೈದ್ಯರು ನಾಪತ್ತೆ! (ಯಾರಾದರೂ ಈ ಪ್ರಮೇಯವನ್ನು ಪಟಕ್ಕನೆ ತುಂಡರಿಸಲಿ ಎಂಬ ಗುಪ್ತ ಸದಾಶಯದೊಂದಿಗೆ ಈ ಕೆಣಕೋಣ) ದಶಕಗಳ ಹಿಂದೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಜಂಟಿ ಕೋರ್ಸ್‌ಗಳಿಗೆ ಸಮಾನ ಪ್ರವೇಶ ಪರೀಕ್ಷೆ ಬರೆದು, ಅರ್ಹತೆಯ ಶ್ರೇಣಿ, ನಿಯಮ ಮತ್ತು ತಮ್ಮ ಇಷ್ಟಾನುಸಾರ ಒಂದನ್ನು ಆಯ್ಕೆ ಮಾಡಿಕೊಂಡು ಒಂದು ಅಲೆಯಾಗಿ ತರುಣ ವೃತ್ತಿಪರರು ಹರಡಿಕೊಂಡರೆ, ಸೆಕೆಂಡ್ ಬೆಸ್ಟ್ ಆಗಿ, ಕೃಷಿ ಇಲ್ಲವೇ ಪಶುವೈದ್ಯಕೀಯ ಆರಿಸಿಕೊಂಡು ಇನ್ನು ಕೆಲವರು ಮುಂದುವರಿಯುತ್ತಿದ್ದರು. ಅವರಲ್ಲಿ ಯಾರೂ ಸಾಮಾಜಿಕ ಶ್ರೇಣಿಯ ಉತ್ತುಂಗ ತಲುಪಲಿಲ್ಲವೇ? ಸಂಪತ್ತು ಸಂಚಯಿಸುವ ಕೈಗಾರಿಕೋದ್ಯಮಿಗಳಾಗಲಿಲ್ಲವೇ? ಎಲ್ಲ ವಿದ್ಯಮಾನಗಳ ಮೇಲೆಯೂ ಒಂದು ಮಾತು ಹಾಕಬಲ್ಲ ಚಿಂತಕರು, ಸಾಮಾಜಿಕ ಸೇವಾ ಸಂಸ್ಥೆಗಳ ಧುರೀಣರಾಗಲಿಲ್ಲವೇ? ನಾಯಕತ್ವದ ಗುಣ ಚಿಮ್ಮಿ ಚುನಾವಣೆಗಳಲ್ಲಿ ಸ್ಪರ್ಧಿಸಲಿಲ್ಲವೇ? ಶುದ್ಧ ವಿಜ್ಞಾನದ ಸಂಶೋಧನಾರ್ಥಿಗಳು ತಲೆ ತಗ್ಗಿಸಿ ತಮ್ಮ ಕೆಲಸದಲ್ಲಿ ಮಗ್ನರಾಗಿರಬೇಕಾದಂತೆ, ಸಣ್ಣ ಹಳ್ಳಿ, ಪಟ್ಟಣಗಳಲ್ಲಿ ದನ-ಕರು-ಕೋಳಿ-ಎಮ್ಮೆಗಳೊಂದಿಗೆ ದಿನಕಳೆಯಬೇಕಾದ ಕಾರ್ಯಭಾರವೇ ಅವರನ್ನು ಹಿಂದಕ್ಕೆ ಎಳೆಯಿತೇ?

ಇದಕ್ಕೆ ತಕ್ಕ ವೇತನ ಅವರಿಗೆ ಸಿಗುತ್ತಿದೆಯೇ? ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯ ಪಟ್ಟಿಯಲ್ಲಿ ಪಶುವೈದ್ಯಕೀಯ ಸಂಸ್ಥೆಗಳಿಗೆ ಆದ್ಯತೆ ಕೊಟ್ಟಿಲ್ಲವೇ? ಆಯಾ ಪ್ರದೇಶಗಳ ಆಡಳಿತಶಾಹಿ/ಅಧಿಕಾರಶಾಹಿಯ ಹೊಣೆಗಾರಿಕೆ ಈ ವಿಷಯದಲ್ಲಿ ಸಮರ್ಥವಾಗಿ ನಿರ್ವಹಿಸಲ್ಪಟ್ಟಿದೆಯೇ? (ಪಶುವೈದ್ಯಕೀಯ ಸಂಸ್ಥೆಗಳ ದುಸ್ಥಿತಿ ಕುರಿತು ಇತ್ತೀಚೆಗೆ ವರದಿ ಮಾಡಿದ ಒಂದು ವಾರ್ತಾವಾಹಿನಿ ವಸ್ತುಸ್ಥಿತಿ ಹಾಗಿಲ್ಲ ಎಂದು ಬಿಂಬಿಸಿತು) ನಿಖರ ಉತ್ತರ ಸಿಗಲಾರದ ಪ್ರಶ್ನೆಗಳು ಇವು. ಆದರೆ ಇವೆಲ್ಲ ಸೇರಿಯೇ ಪಶುವೈದ್ಯರ ಸ್ಥಾನಮಾನ ಮುಕ್ಕಾಗಿಸಿದೆ ಹಾಗೂ ಸಿದ್ಧಪ್ರಸಿದ್ಧರಾಗುವ ಅವಕಾಶದಿಂದ ಅವರನ್ನು ವಂಚಿಸಿದೆ ಎಂಬುದು ಮಾತ್ರ ಖಂಡಿತ. ಆದ್ದರಿಂದಲೇ ವೆಟರಿನೇರಿಯನ್ ಆಯ್ಕೆಯ ವೃತ್ತಿಯಾಗದೆ ಕ್ರಮೇಣ ಜನ ಸಮುದಾಯದಲ್ಲಿ ಅವರ ಅನುಪಾತ ಕ್ಷೀಣಿಸುತ್ತಿದೆಯೆ? ಹಾಗಾಗಿ ಸಮಾಜದಲ್ಲಿ ಅವರು ಎದ್ದುಕಾಣುತ್ತಿಲ್ಲವೆ?

ಹಾಗೆ ನೋಡಿದರೆ ಸುಮಾರು 18ನೆ ಶತಮಾನದಿಂದಲೇ (ಪಶ್ಚಿಮದಲ್ಲಿ) ಆರಂಭಗೊಂಡ ಪಶುವೈದ್ಯಕೀಯ ಅಧ್ಯಯನ ಇಂದು ಐದು ವರ್ಷ, ಸರ್ವಾಂಗೀಣವಾಗಿ, ಫಿಸಿಯೋಲಜಿ-ದೇಹವಿಜ್ಞಾನ, ಡೆಂಟಿಸ್ಟ್ರಿ-ದಂತವೈದ್ಯ, ಸರ್ಜರಿ-ಶಸ್ತ್ರಚಿಕಿತ್ಸೆಗಳನ್ನು ಒಳಗೊಂಡು ವಿಕಸಿತವಾಗಿದೆ. ಹೆಚ್ಚಿನ ವ್ಯಾಸಂಗಕ್ಕಾಗಿ ಪದವಿಯೋತ್ತರ ಕೋರ್ಸ್‌ಗಳಿವೆ. ಫಿಸಿಯೋಥೆರಪಿ, ನರ್ಸಿಂಗ್ ಇತ್ಯಾದಿಗಳಲ್ಲಿ ಪದವಿ ಪಡೆದುಕೊಂಡವರು ವೈದ್ಯಕೀಯೇತರ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಲು ಅವಕಾಶಗಳಿವೆ. ಕುದುರೆಯಂತಹ ಗೊರಸು ಹೊಂದಿರುವ ಜಾತಿಯ ಪ್ರಾಣಿಗಳಿಗೆ ಲಾಳ ಹೊಡೆಯಲು, ಬೇರೆ ಇತರ ತೊಂದರೆ ಸರಿಪಡಿಸಲು ತಾಂತ್ರಿಕ ಕೋರ್ಸ್ ಮಾಡಿಕೊಂಡಿರಬೇಕು. ಸೈನ್ಯದಲ್ಲಿ ಪಶುವೈದ್ಯರ ಅಗತ್ಯ ಇದೆ. ಪರಿಸರ ವಿಜ್ಞಾನ, ವನ್ಯಜೀವಿ ಸಂರಕ್ಷಣೆ, ಪ್ರಾಣಿಸಂಗ್ರಹಾಲಯಗಳಲ್ಲಿ ಅವರ ಸೇವೆಗೆ ಪ್ರಾಮುಖ್ಯ.

‘‘ಭಾರತದಲ್ಲಿ ಪಶುವೈದ್ಯರಾಗಿರುವುದು ಅಂದರೆ...’’ ಶೀರ್ಷಿಕೆಯಲ್ಲಿ ಅಂತರ್ಜಾಲದಲ್ಲಿ ದೊರೆತ ಒಬ್ಬ ‘ಡಾಗ್‌ಟರ್’ ಅನಿಸಿಕೆಗಳು ಸ್ವಾರಸ್ಯಕರ: ‘‘ಯಾರೂ ಪ್ರಶಂಸಿಸದೇ ಹೋದರೂ ನಮ್ಮ ಪಾಡಿಗೆ ನಾವು ಪ್ರೀತಿಯಿಂದ ಮಾಡುವ ಈ ಉದ್ಯೋಗ ಕಷ್ಟದ್ದೂ ಹೌದು; ಎಷ್ಟೋ ಸಾರಿ ನಾವು ಚಿಕಿತ್ಸೆ ನೀಡಿದ ಪ್ರಾಣಿಗಳ ಹಾಗೆಯೇ ವಾಸನೆ ಬೀರುತ್ತ ಮನೆಗೆ ಮರಳುತ್ತೇವೆ! ಆದರೂ ಬರೀ ಕಷ್ಟದಲ್ಲೇ ಕೈ ತೊಳೆವ ರೈತಾಪಿ ಜನರಿಗೆ ಏನೋ ಒಳ್ಳೆಯದನ್ನು ಮಾಡುತ್ತಿದ್ದೇವೆ ಎಂಬ ಧನ್ಯತೆ ಇರುತ್ತದೆ. ಈ ಮೂಲಕ ಪ್ರಾಣಿಗಳ, ಮನುಷ್ಯರ, ದೇಶದ ಒಳಿತಿಗೆ ಇನ್ನಿತರ ಅನಾಮಿಕ, ಅದೃಶ್ಯ ಕೆಲಸಗಾರರಂತೆ ನಾವೂ ಕಾಣಿಕೆ ಸಲ್ಲಿಸುತ್ತಿದ್ದೇವೆ ಎಂಬ ತೃಪ್ತಿ ಸಿಗುತ್ತದೆ’’ ‘‘ಪಟ್ಟಣ ಪ್ರದೇಶಗಳಿಗೆ ಬಂದರೆ ದೃಶ್ಯ ಬದಲು...ಮುದ್ದಿನ ಸಾಕುಪ್ರಾಣಿಗಳಾದ ನಾಯಿ, ಬೆಕ್ಕು, ಮೊಲ, ಆಮೆ ಅವುಚಿಕೊಂಡು ಬರುವ ಮಂದಿ ಗೂಗಲ್ ಪ್ರವೀಣರು. ವೈದ್ಯರಿಗೇ ಸಲಹೆ ನೀಡುವ, ಅವರ ಚಿಕಿತ್ಸೆ ವಿಮರ್ಶಿಸುವ ಅತಿ ಬುದ್ಧಿವಂತರು. ಇವೆಲ್ಲ ಸಾಮಾನ್ಯವಾಗಿ ಮಾಮೂಲಿ ಚಿಕಿತ್ಸೆಗಳಾಗಿರುವುದರಿಂದ ವೃತ್ತಿ ಪ್ರಾವೀಣ್ಯಕ್ಕೆ ಸವಾಲೊಡ್ಡುವುದು, ವೈದ್ಯರನ್ನೂ ಬೆಳೆಸುವುದು ಇತ್ಯಾದಿ ಅಸಂಭವ. ಹಾಗೆ ನೋಡಿದರೆ ಕಾಡುಪ್ರಾಣಿಗಳ ಚಿಕಿತ್ಸೆಯಲ್ಲಿ ಹಲವಾರು ಅಪರೂಪದ ಪ್ರಕರಣಗಳು ಸಿಗುವ ಸಾಧ್ಯತೆ ಇದೆ (ವಿದೇಶದಲ್ಲಿ ನೆಲೆಸಿರುವ ನನ್ನ ಸಹೋದ್ಯೋಗಿ ಮಿತ್ರರು ಇದನ್ನು ಪುಷ್ಟೀಕರಿಸುತ್ತಾರೆ). ಆದರೆ ನಮ್ಮ ದೇಶದಲ್ಲಿ, ಈಚೀಚೆಗೆ, ಅರಣ್ಯದ ಗಡಿ ದಾಟಿ ಊರಿಗೆ ದಾಳಿಯಿಟ್ಟ ಮೃಗಗಳು ಮತ್ತು ಮನುಷ್ಯರ ನಡುವೆ ಆದ ಹಣಾಹಣಿಯಲ್ಲಿ ಗಾಯಗೊಂಡ ವನ್ಯಪ್ರಾಣಿಗಳನ್ನು ಉಪಚರಿಸುವುದಕ್ಕಷ್ಟೇ ಪಶುವೈದ್ಯರ ನೈಪುಣ್ಯ ಬಳಕೆ.’’

ಯಶಸ್ವಿ ಪಶುವೈದ್ಯರೊಬ್ಬರು ಹಳ್ಳಿಯ ‘ಹತ್ತು ಸಮಸ್ತ’ರಲ್ಲಿ ಒಬ್ಬರಾಗಿ ಬೀಗಬಹುದಾದರೂ ನಗರಗಳಲ್ಲಿ ಅವಜ್ಞೆಗೆ ತುತ್ತಾಗುತ್ತಾರೆ. ಡಾಗ್ ಟ್ರೇನಿಂಗ್, ಗ್ರೂಮಿಂಗ್, ಬ್ರೀಡಿಂಗ್ ಮುಂತಾದವುಗಳಲ್ಲಿ ತೊಡಗಿ ಕೊಳ್ಳುವುದು ಹೆಚ್ಚಿನ ಸಂಪಾದನೆಗೆ ಒಂದು ದಾರಿಯೇನೋ ಹೌದು, ಆದರೆ ವೃತ್ತಿಸಂತೃಪ್ತಿಯನ್ನು ಇಲ್ಲಿ ಹುಡುಕಲಾಗದು. ಡೈರಿ, ಕೋಳಿ ಫಾರಂ, ಹಂದಿ ಸಾಕಣೆ, ಔಷಧಮಳಿಗೆ ಇತ್ಯಾದಿ ಸ್ಥಾಪಿಸಿ ಉದ್ಯಮಕ್ಕೆ ಇಳಿಯುವವರೂ ಇದ್ದಾರೆ. ಆದರೆ ದಾರಿ ಹೀಗೆ ಕವಲೊಡೆದಾಗ ಐದು ವರ್ಷದ ಕಠಿಣ ವ್ಯಾಸಂಗದಲ್ಲಿ ಕಲಿತದ್ದನ್ನೆಲ್ಲ ಮರೆಯುವಂತೆ ಆಗಬಹುದು.

‘‘ಪ್ರಾಣಿ ಸಂಬಂಧಿತ ವೈದ್ಯಕೀಯ ಸಂಶೋಧನೆಯಲ್ಲಿ ತೊಡಗಿಕೊಂಡಿರುವ, ಅನೇಕ ಬೃಹತ್ ಸಂಸ್ಥೆಗಳ (ಕೆಲವು ಶತಮಾನ ದಾಟಿವೆ) ದೇಶದ ಉದ್ದಗಲಕ್ಕೂ ಇವೆ. ಆದರೆ ಪ್ರಯೋಗಗಳನ್ನು ಪ್ರಾಣಿಗಳ ಕ್ಷೇಮಾಭ್ಯುದಯಕ್ಕಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆಯೆ ಎಂದು ಹೇಳುವುದು ಕಷ್ಟ’’ ಎಂದು ಬರೆಯುತ್ತಾರೆ ಮೇಲೆ ಉದ್ಧರಿಸಿದ ವೆಟ್. ಪಶು-ಪಕ್ಷಿಗಳಿಂದ ಮನುಷ್ಯರಿಗೆ ಹರಡುವ-ಝೂನಾಟಿಕ್-ಕಾಯಿಲೆಗಳ ನಿಯಂತ್ರಣದಲ್ಲೂ ಪಶುವೈದ್ಯರಿಗೆ ಮಹತ್ವದ ಪಾತ್ರವಿದೆ. ಸಹಸ್ರಮಾನದ ತಿರುವಿನಲ್ಲಿ ಅಗತ್ಯ ಇರುವ ಈ ವಿಜ್ಞಾನ ಶಾಖೆಯ ಹೊಸ ನೋಟ-ನಿಲುವು-ಆಧುನಿಕತೆ-ವ್ಯಾಪ್ತಿಗಳನ್ನು ತರುಣ ತಲೆಮಾರಿಗೆ ಈ ಸಂಸ್ಥೆಗಳು ನೀಡಬೇಕು.

ಗೋರಕ್ಷಕರು ಹಾಗೂ ಪ್ರಾಣಿದಯಾಸಂಘದವರೇ ಲೈಮ್‌ಲೈಟ್‌ನಲ್ಲಿರುವ ಪ್ರಸ್ತುತ ದಿನಗಳಲ್ಲಿ ಪಶುವೈದ್ಯರು ಹಾಗೂ ಪ್ರಾಣಿತಜ್ಞರನ್ನು ಆಲಿಸುವುದು ಎಲ್ಲರಿಗೂ ಮರೆತೇಹೋಗಿದೆ! ‘‘ಹೌದು, ನಮ್ಮ ಕೆಲವು ನಿಲುವುಗಳಿಗೆ ಸಮಾಜದ ತೀಕ್ಷ್ಣ ಪ್ರತಿಕ್ರಿಯೆ ಎದುರಿಸಬೇಕಾಗಿ ಬರುತ್ತದೆ’’ ಎಂದು ಮಾರ್ಮಿಕವಾಗಿ ಹೇಳುತ್ತಾರೆ, ಅಂತರ್ಜಾಲ ಪ್ರಶ್ನೋತ್ತರ ತಾಣದಲ್ಲಿ ಬರೆದ ಈತ; ಪ್ರಯೋಗಗಳಿಗೆ ಪಶುಗಳ ಬಳಕೆ, ಮಾಂಸಾಹಾರ ಸೇವನೆ, ಪ್ರಾಣಿಗಳ ಸಮೂಹವಧೆ ಮುಂತಾದ ಜಟಿಲ ಪ್ರಶ್ನೆಗಳನ್ನು ಉದಾಹರಿಸುತ್ತಾರೆ. ಜಲ್ಲಿಕಟ್ಟು ವಿವಾದ ಎಬ್ಬಿಸಿದ ಕೋಲಾಹಲ, ಸಂಸ್ಕೃತಿ ರಕ್ಷಕರು ಹಾಗೂ ಪ್ರಾಣಿದಯಾಸಂಘದವರ ನಡುವೆ ನಡೆದ ಮಾತಿನ ಮಾರಾಮಾರಿ ನೋಡಿ ತಲೆಕೆಟ್ಟು ಹೋಗಿತ್ತು. ಶಾಂತಿಯುತ ವಿರೋಧ ಸೂಚಿಸಿ ಯುದ್ಧ ಗೆದ್ದ ಸಾಮಾನ್ಯ ಜನತೆಯ ನಿಲುವಾದರೂ ವಿವಾದಾತೀತವಾಗಿತ್ತೇ? ಹೇಳಲು ಬಾರದು.

ಇಂತಹ ವಿಷಯಗಳಲ್ಲಿ ಪಶುವೈದ್ಯರನ್ನೂ ಗಣನೆಗೆ ತೆಗೆದುಕೊಳ್ಳಬೇಕು, ಈ ಸಮಸ್ಯೆಗಳನ್ನು ತೃಪ್ತಿಕರವಾಗಿ ಬಿಡಿಸಬಲ್ಲ ವೈಜ್ಞಾನಿಕತೆಯನ್ನು, ಪರಿಸರ ಜ್ಞಾನವನ್ನು ಈ ಶಾಖೆ ಹೊಂದಿದೆ ಎಂದು ಸಾಮಾನ್ಯರು ಒಪ್ಪಿಕೊಳ್ಳಬೇಕು ಎಂಬ ಯೋಚನೆ ಮೂಡುತ್ತಿದೆ. * * * ಚಿಂತಕರ ಚಾವಡಿಯಲ್ಲಿ ಹಾಗಿರಲಿ, ಕತೆ-ಕವಿತೆ ಬರೆಯುವ ಸೃಜನಶೀಲ ಕ್ಷೇತ್ರದಲ್ಲೂ ಪಶುವೈದ್ಯರು ಗೈರಾಗಿರಬೇಕೆ? ಏಕೆ? ಎಂಬ (ಈಗಿದು ವಿಚಿತ್ರ ಮಾತ್ರವಲ್ಲ ವ್ಯಕ್ತಿಗತ!) ಸಮಸ್ಯೆಗೆ ಒಂದು ಸಂತಸ ಮಿಶ್ರಿತ ಅಚ್ಚರಿ ಸಿಕ್ಕಿದ್ದು ಪ್ರತಿಷ್ಠಿತ ಕಥಾಸ್ಪರ್ಧೆಯೊಂದರಲ್ಲಿ ಡಾ. ಮಿರ್ಝಾ ಬಶೀರ್ ಬಹುಮಾನ ಗಿಟ್ಟಿಸಿದಾಗ! ಗೊರೂರು ಬರೆದ ‘ನಮ್ಮ ಎಮ್ಮೆಗೆ ಮಾತು ತಿಳಿಯುವುದೆ’ ಅನ್ನು ಬಹಳ ನೆನಪಿಸಿದ ಆ ಪಶುವೈದ್ಯಕೀಯ ಕತೆ, ಅನುಭವದ ಹೊಸತನ, ಅಭಿವ್ಯಕ್ತಿಯ ಕುಶಾಲು, ದಟ್ಟ ಅಂತಃಕರಣದಿಂದ ರೋಮಾಂಚನಗೊಳಿಸಿದ್ದನ್ನು ಸುಲಭದಲ್ಲಿ ಮರೆಯಲಾಗದು. ಆನಂತರ ಒಂದು ರವಿವಾರ ಪ್ರಕಟಗೊಂಡ ಅವರ ಕತೆ ಕೋಮುಗಲಭೆ/ಸೌಹಾರ್ದ ಕುರಿತಾಗಿತ್ತು.

ಅದರಲ್ಲಿನ ಒಂದು ಸಂತನಂತಹ ಪಾತ್ರದ ಚಿತ್ರೀಕರಣ, ಅಬ್ದುಲ್ ರಶೀದರ ವಿಶಿಷ್ಟ ಶೈಲಿಗೆ ಹತ್ತಿರವಾಗಿದೆ ಎನಿಸಿತ್ತು...ಶ್ರೀಯುತರು ಪದ್ಯ ರಚನೆಯಿಂದ ತಮ್ಮ ಸಾಹಿತ್ಯಕೃಷಿ ಆರಂಭಿಸಿದರು, ಪಶುವೈದ್ಯಕೀಯ ಸಮುದಾಯದ ಮತ್ತೊಬ್ಬ ವರಿಷ್ಠ, ‘ಶಿಕಾರಿಯಲ್ಲದ ಶಿಕಾರಿ’ ಪುಸ್ತಕ ಬರೆದ ಟಿ.ಎಸ್. ರಮಾನಂದರ ಪರಂಪರೆ ಮುಂದುವರಿಸುತ್ತಿದ್ದಾರೆ ಎಂಬ ಪ್ರಶಂಸೆ ಎಲ್ಲೋ ಓದಲು ಸಿಕ್ಕಿತು. ಹೀಗೇ ಲಹರಿಗೆ ಇಳಿದರೆ, ಕನ್ನಡ ಸೃಜನಶೀಲ ಸಾಹಿತ್ಯದಲ್ಲಿ ಸಸ್ಯಶಾಸ್ತ್ರ, ಭೂಗರ್ಭಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ, ಪ್ರಾಣಿಶಾಸ್ತ್ರ, ಜೀವವಿಜ್ಞಾನ, ರಸಾಯನ ಶಾಸ್ತ್ರ, ಭೌತ ಶಾಸ್ತ್ರ, ಖಗೋಳ ವಿಜ್ಞಾನ, ಖಭೌತ ಶಾಸ್ತ್ರ, ವೈದ್ಯಕೀಯ, ಸಿವಿಲ್ ಎಂಜಿನಿಯರಿಂಗ್, ಸಾಫ್ಟ್‌ವೇರ್...ಮುಂತಾಗಿ ಎಲ್ಲ ವಿಜ್ಞಾನ ರಂಗಗಳ ರೆಪ್ರೆಸೆಂಟೆಟೀವ್ಸ್ ಇದ್ದಾರೆ! ಇದೀಗ ವೆಟರಿನರಿ ಕ್ಷೇತ್ರ ಪ್ರತಿನಿಧಿಸಲು ಒಬ್ಬ ಸಶಕ್ತ ಸ್ಪರ್ಧಿಯ ಆಗಮನ. ಕನ್ನಡ ನಾಡಿನ ಸಾಂಸ್ಕೃತಿಕತೆಯನ್ನು, ಶಿಲ್ಪ, ಜನಪದವನ್ನು ದೊಡ್ಡ ಮಟ್ಟದಲ್ಲಿ ಛಾಯಾಚಿತ್ರಗಳಲ್ಲಿ ದಾಖಲಿಸಿರುವ ತಂದೆ-ಮಗನ ಜೋಡಿ, ಬಿ. ಕೇಸರ ಸಿಂಗ್ ಹಾಗೂ ಚಂದ್ರಪಾಲ್ ಸಿಂಗ್‌ರಲ್ಲಿ ಚಂದ್ರಪಾಲ್, ಪಶುವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರು. ವೃತ್ತ ಒಂದು ಸುತ್ತು ಬಂದಿದೆ ಎನ್ನೋಣವೇ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top