ಹಿಂದೂ ಸ್ತ್ರೀಯರ ಉನ್ನತಿ ಮತ್ತು ಅವನತಿ: ಯಾರು ಹೊಣೆಗಾರರು? | Vartha Bharati- ವಾರ್ತಾ ಭಾರತಿ

ಹಿಂದೂ ಸ್ತ್ರೀಯರ ಉನ್ನತಿ ಮತ್ತು ಅವನತಿ: ಯಾರು ಹೊಣೆಗಾರರು?

‘ಮಹಾಬೋಧಿ’ ನಿಯತಕಾಲಿಕೆಯ ಮೇ -ಜೂನ್ 1951ರ ಸಂಚಿಕೆಯಲ್ಲಿ ಪ್ರಕಟಗೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‌ರ ‘the rise and fall of the hindu women: who was responsible for it?’’ ಎಂಬ ಶೀರ್ಷಿಕೆಯ ಇಂಗ್ಲಿಷ್ ಲೇಖನದ ಅನುವಾದವಿದು


ಭಾಗ- 2

ಬುದ್ಧನು ಆನಂದನ ನಡತೆ ಅದೆಷ್ಟು ಆಹ್ಲಾದಕರವಿತ್ತು, ಅವನು ಎಲ್ಲರಿಗೆ ಅದೆಷ್ಟು ಅಚ್ಚುಮೆಚ್ಚಿನವನಾಗಿದ್ದನು, ಎಂಬುದನ್ನು ವರ್ಣಿಸಿರುವನು. ಇವುಗಳಲ್ಲಿ ಎರಡು ಗಾಥೆಗಳನ್ನು ಕೆಳಕ್ಕೆ ನಮೂದಿಸುವೆನು:

‘‘13. ಸೋದರರೇ, ಆನಂದನಲ್ಲಿ ನಾಲ್ಕು ಅತುಲನೀಯ ಹಾಗೂ ಸ್ಫೂರ್ತಿದಾಯಕವಾದ ಸದ್ಗುಣಗಳಿವೆ.
ಹೀಗಾಗಿ ಸೋದರರೇ, ಸಂಘದ ಭಿಕ್ಕುಗಳ ಆನಂದನನ್ನು ಭೇಟಿಯಾ ಗಲು ಬರುತ್ತಿದ್ದರು. ಅವರು ಅವನನ್ನು ಕಂಡು ಪ್ರಫುಲ್ಲಿತರಾಗುತ್ತಿದ್ದರು. ಆನಂದನು ಅವರಿಗೆ ಧಮ್ಮವನ್ನು ಕಲಿಸುವಾಗಲೂ, ಅವನ ಪ್ರವಚನ ವನ್ನು ಆಲಿಸುವಾಗಲೂ ಅವರು ಆನಂದತುಂದಿಲರಾಗುತ್ತಿದ್ದರು. ಸೋದರರೇ, ಅದೇ ರೀತಿಯಾಗಿ ಆನಂದನು ವೌನ ತಳೆದರೆ ಅವರು ಕಳವಳಕ್ಕೀಡಾಗುತ್ತಿದ್ದರು.

ಅಲ್ಲದೆ ಸೋದರರೇ, ಸಂಘದ ಭಿಕ್ಕಣಿಯರು... ಧಮ್ಮೋಪದೇಶಕರು.... ಇಲ್ಲವೆ ಧಮ್ಮೋಪದೇಸಿಕೆಯರಾಗಲಿ ಆನಂದನನ್ನು ಭೇಟಿಯಾಗಿ ಅವನು ಧಮ್ಮವನ್ನು ಕಲಿಸಿದ ಬಳಿಕ ಅವರೆಲ್ಲರೂ ಪ್ರಫುಲ್ಲಿತರಾಗುತ್ತಿದ್ದರು. ಮತ್ತು ಸೋದರರೇ, ಆನಂದನು ವೌನ ತಳೆದರೆ ಮಾತ್ರ ಅವರು ತುಂಬ ಕಳವಳಕ್ಕೀಡಾಗುತ್ತಿದ್ದರು.’’

ಇದರಿಂದ ಸ್ಪಷ್ಟವಾಗುವ ಸಂಗತಿ ಏನೆಂದರೆ, ಆನಂದನು ಸ್ತ್ರೀಯರನ್ನು ಭೇಟಿಯಾಗುವುದು, ಇಷ್ಟೇ ಅಲ್ಲದೆ ಧಮ್ಮೋಪದೇಸಿಕಾ ಸಂಘದ ಸಮಸ್ಯೆಯಲ್ಲದ ಸ್ತ್ರೀಯರನ್ನು ಭೇಟಿಯಾಗುವುದು ಕೂಡಾ ನಿತ್ಯದ ಸಾಮಾನ್ಯ ಸಂಗತಿಯಾಗಿತ್ತು. ಅವನು ಅವರನ್ನು ಕಾಣುತ್ತಿದ್ದನು, ಭೇಟಿಯಾಗುತ್ತಿದ್ದನಲ್ಲದೆ ಅವರೊಡನೆ ಮಾತನಾಡುತ್ತಿದ್ದನು.

ಹೀಗಿರುವಲ್ಲಿ ಆನಂದನು ಇಂಥ ಪ್ರಶ್ನೆಯನ್ನು ಏಕೆ ಕೇಳಿದನು? ಸ್ತ್ರೀಯರು ಆನಂದನನ್ನು ಕಾಣುವುದು ಬುದ್ಧನಿಗೆ ತಿಳಿದಿತ್ತು. ಅವನು ಅದಕ್ಕಾಗಿ ಎಂದಿಗೂ ಆಕ್ಷೇಪಿಸಲಿಲ್ಲ. ಹೀಗಿರುವಾಗಲೂ ಬುದ್ಧನ ಮನದಲ್ಲಿ ಸ್ತ್ರೀಯರೊಡನೆಯ ಎಲ್ಲ ಬಗೆಯ ಸಂಬಂಧಗಳನ್ನು ಹರಿದೊಗೆಯುವ ಹಾಗೂ ಅವನ್ನು ಪ್ರತಿಬಂಧಿಸುವ ಯೋಚನೆ ಏಕೆ ಬಂದಿರಬಹುದು? ಈ ಇಡಿಯ ಭಾಗವು ಅದೆಷ್ಟು ಕೃತಕವಾಗಿದೆ ಎಂದರೆ ಮಠಶಾಹಿಯು ತರುವಾಯದ ಕಾಲದಲ್ಲಿ ಅದನ್ನು ಪ್ರಕ್ಷಿಪ್ತ ಮಾಡಿದೆಯೆಂದು ಖಚಿತವಾಗಿ ತಿಳಿಯಬೇಕು. ಆನಂದನ ಜೀವನದ ತುಂಬ ವಿರೋಧಾಭಾಸದ ಒಂದು ಸನ್ನಿವೇಶವು ಮಹಾಪರಿನಿಬ್ಬಾಣದ ಸುತ್ತಕ್ಕೆ ಸಂಬಂಧಿಸಿದ ಭಾಗದಲ್ಲಿ ಬಂದಿದೆ.

ಮೊದಲ ಸಂಗತಿ(ಪರಿಷತ್ತು)ಯಲ್ಲಿ ಆನಂದನ ಬಗೆಗೆ ಐದು ದೂರುಗಳು ಬಂದಿದ್ದವೆಂಬುದು ಸರ್ವವಿಧಿತ. ಅವು ಹೀಗಿದ್ದವು:
1) ಬುದ್ಧನ ಅಭಿಪ್ರಾಯದಂತೆ ವಿನಯದ ಯಾವ ಭಾಗದಲ್ಲಿ ಏರುಪೇರು ಮತ್ತು ದುರಸ್ತಿಗಳನ್ನು ಮಾಡುವ ಅಧಿಕಾರವನ್ನು ಸಂಘಕ್ಕೆ ನೀಡಲಾಯಿತು ಎಂಬುದನ್ನು ಕೇಳುವಲ್ಲಿ ಅವನು ಅಯಶಸ್ವಿಯಾದನು.
2) ಭಗವಂತನ ಉತ್ತರೀಯವನ್ನು ಸ್ಪರ್ಶಿಸುತ್ತ ಹಿಂದಕ್ಕೆ ಸರಿಯುವಾಗ ಅವನ ಕಾಲು ಆ ಬಟ್ಟೆಯ ಮೇಲೆ ಬಿದ್ದಿತು.
3) ಭಗವಂತನ ಪರಿನಿರ್ವಾಣದ ತರುವಾಯ ಅವನ ಪಾರ್ಥಿವಕ್ಕೆ ವಂದನೆಯನ್ನು ಸಲ್ಲಿಸಲು ಸ್ತ್ರೀಯರಿಗೆ ಮೊದಲ ಅವಕಾಶವನ್ನು ನೀಡಿದ್ದರಿಂದ ಅವರ ಕಣ್ಣೀರಿನಿಂದ ಭಗವಂತನ ಪಾರ್ಥಿವ ಶರೀರಕ್ಕೆ ಆದ ಅವಮಾನಕ್ಕೆ ಅವನು ಕಾರಣನು.
4) ಇನ್ನಷ್ಟು ಕಾಲ ಬಾಳಿರೆಂದು ಅವನು ಭಗವಂತನಿಗೆ ಹೇಳಲಿಲ್ಲ.
5) ಅವನು ಸ್ತ್ರೀಯರನ್ನು ಸಂಘಕ್ಕೆ ಸೇರ್ಪಡಿಸಿಕೊಳ್ಳಲು ತಾತ್ವಿಕವಾಗಿ ಹೊಣೆಗಾರನಾಗಿದ್ದನು.
ಆನಂದನು ಇವೆಲ್ಲವನ್ನು ಒಪ್ಪಿಕೊಂಡ.

ಅವನು ಈ ಆಪಾದನೆಗಳನ್ನು ಒಪ್ಪಿಕೊಳ್ಳುವುದೋ, ಬಿಡುವುದೋ ಎನ್ನುವುದು ಬೇರೆ ಸಂಗತಿ. ಮೂರನೆಯ ಆಪಾದನೆ ಮಹತ್ವದ್ದಾಗಿದೆ. ಈಗಿನ ಚರ್ಚೆಯಲ್ಲಿ ಅದು ಮಹತ್ವದ ಅಂಶವಾಗಿದೆ. ಮಹಾಪರಿನಿಬ್ಬಾಣ ಸತ್ತದಲ್ಲಿ ಉಲ್ಲೇಖಿಸಲಾದ ಭಗವಂತನ ಉಪದೇಶವು ಸತ್ಯವೆಂಬ ಸಂಗತಿಯು ವಾಸ್ತವವಾಗಿದ್ದರೆ ಆನಂದನು ಭಗವಂತನ ಉಪದೇಶವು ಸತ್ಯವೆಂಬ ಸಂಗತಿಯು ಬುದ್ಧನು ಸ್ವಲ್ಪ ಹೊತ್ತಿನ ಮೊದಲು ಮಾಡಿದ ಉಪದೇಶವನ್ನು ಅವನು ಬೇಕೆಂದೇ ಇಷ್ಟೊಂದು ಪ್ರಕಟವಾಗಿ ನಿರಾಕರಿಸುತ್ತಿದ್ದನೆ? ಖಂಡಿತವಾಗಿಯೂ ಇಲ್ಲವೆಂಬುದೇ ಇದಕ್ಕೆ ಉತ್ತರವಾಗಿದೆ. ಈ ಋಣಾತ್ಮಕ ಉತ್ತರದಿಂದ ಏನು ಸಿದ್ಧವಾಗುತ್ತದೆ. ಒಂದು ವೇಳೆ ಬುದ್ಧನು ಹೀಗೆ ಉಪದೇಶವನ್ನು ಅವನಿಗೆ ಮಾಡಿಯೇ ಇರಲಿಲ್ಲವೆಂದು ಸಿದ್ಧವಾಗುತ್ತದೆ.

ಒಂದು ವೇಳೆ ಬುದ್ಧನು ಹೀಗೆ ಉಪದೇಶವನ್ನು ಮಾಡಿದ್ದರೆ ಆನಂದನು ಅದಕ್ಕೆ ಎದುರಾಗಿ ನಡೆದುಕೊಳ್ಳುತ್ತಲೇ ಇರಲಿಲ್ಲ. ಇದರಿಂದಾಗಿ, ಬುದ್ಧನು ಇಂಥ ಯಾವುದೇ ಉಪದೇಶವನ್ನು ಆನಂದನಿಗೆ ಮಾಡಿರಲಿಲ್ಲವೆಂದು ಖಚಿತವಾಗಿ ಹೇಳಬಹುದು. ಬುದ್ಧನ ಈ ಪ್ರಶ್ನೆಯನ್ನು ಕುರಿತಾದ ದೃಷ್ಟಿಕೋನವನ್ನು ಗಮನಿಸಲಾಗಿ ಅವನು ಇಂಥ ಉತ್ತರವನ್ನು ನೀಡಬಹುದಿತ್ತೆ? ಸ್ತ್ರೀಯರನ್ನು ಕುರಿತಾದ ಬುದ್ಧನ ನಡವಳಿಕೆಯೇ ಈ ಪ್ರಶ್ನೆಗೆ ಉತ್ತರವಾಗಿದೆ. ಬುದ್ಧನು ಸ್ತ್ರೀಯರನ್ನು ಭೇಟಿಯಾಗುವುದನ್ನು ಕುರಿತು ಆನಂದನಿಗೆ ಉಪದೇಶವನ್ನು ನೀಡಿದನೆಂದು ಹೇಳಲಾಗುತ್ತದೆ. ಆದರೆ ಅವನಾದರೂ ಅದನ್ನು ತಪ್ಪಿಸುತ್ತ್ತಿದ್ದನೇ? ಈ ಬಗೆಗಿನ ವಾಸ್ತವತೆ ಏನು?

ತಕ್ಷಣ ಎರಡು ಸನ್ನಿವೇಶಗಳು ಕಣ್ಣೆದುರು ಬರುತ್ತಿವೆ. ಅವುಗಳಲ್ಲಿ ಒಂದು ವಿಶಾಖಾಳದು. ಅವಳು ಬುದ್ಧನ ಎಂಬತ್ತು ಜನ ಪ್ರಮುಖ ಶಿಷ್ಯರಲ್ಲಿ ಒಬ್ಬಳು. ಅವಳನ್ನು ‘ದಾನದಾತರ ಪ್ರಮುಖ’ಳೆಂಬ ಪದವಿಯಿಂದ ಗೌರವಿಸಲಾಗಿತ್ತು. ವಿಶಾಖಳು ಬುದ್ಧನ ಪ್ರವಚನವನ್ನು ಆಲಿಸಲು ಎಂದಿಗಾದರೂ ಹೋಗಲಿಲ್ಲವೇ? ಅವಳು ಅವರ ಸಂಘಾರಾಮವನ್ನು ಪ್ರವೇಶಿಸಲಿಲ್ಲವೆ? ಸ್ತ್ರೀಯರೊಡನೆ ಹೇಗೆ ನಡೆದುಕೊಳ್ಳಬೇಕೆಂದು ಬುದ್ಧನು ಆನಂದನಿಗೆ ನೀಡಿದ್ದನೆಂದು ಹೇಳಲಾಗುವ ಉಪದೇಶದಂತೆಯೇ ತಾನೂ ವಿಶಾಖಾಳೊಂದಿಗೆ ನಡೆದುಕೊಂಡಿದ್ದನೆ? ಆಗ ಪ್ರವಚನಕ್ಕೆ ಹಾಜರಿದ್ದ ಭಿಕ್ಕುಗಳು ಏನು ಮಾಡಿದರು? ಅವರು ಪ್ರವಚನದಿಂದ ಹೊರನಡೆದರೆ?

ಕಣ್ಣೆದುರು ಬರುವ ಎರಡನೆಯ ಸನ್ನಿವೇಶವು ವೈಶಾಲಿಯ ಅಮ್ರಪಾಲಿಯದು. ಅವಳು ಬುದ್ಧನನ್ನು ಕಾಣಲು ಹೋಗಿ ಬುದ್ಧ ಹಾಗೂ ಭಿಕ್ಕುಗಳನ್ನು ಭೋಜನಕ್ಕಾಗಿ ತನ್ನ ಸೌಧಕ್ಕೆ ಬರಲು ಆಹ್ವಾನಿಸಿದಳು. ಅವಳೊಬ್ಬ ವಾರಾಂಗನೆಯಾಗಿದ್ದಳು. ಅವಳು ವೈಶಾಲಿಯಲ್ಲಿ ಎಲ್ಲರಿಗಿಂತಲೂ ಹೆಚ್ಚು ಚೆಲುವೆಯಾಗಿದ್ದಳು. ಬುದ್ಧ ಹಾಗೂ ಭಿಕ್ಕುಗಳು ಅವಳನ್ನು ತಪ್ಪಿಸಿದ್ದರೆ? ಅದೇ ವೇಳೆಗೆ ಲಿಚ್ಛವಿಯವರು ನೀಡಿದ ಆಹ್ವಾನವನ್ನು ನಿರಾಕರಿಸಿದ್ದರಿಂದ ಅವರಿಗೆ (ಲಿಚ್ಛವಿಯವರಿಗೆ) ತುಂಬ ಅವಮಾನ ಆದಂತೆ ಅನ್ನಿಸುತ್ತಿರುವಾಗಲೂ, ಬುದ್ಧನು ಅವಳ ಆಹ್ವಾನವನ್ನು ಸ್ವೀಕರಿಸಿ, ಅವಳ ಸೌಧಕ್ಕೆ ಹೋಗಿ, ಅವಳು ನೀಡಿದ ಭೋಜನ ಕೂಟದಲ್ಲಿ ಪಾಲ್ಗೊಂಡನು.

ಇದಲ್ಲದೆ ಇನ್ನಷ್ಟು ಉದಾಹರಣೆಗಳು ಬೇಕಿಲ್ಲ. ನಂದಕೋವದ ಸತ್ತದಲ್ಲಿ ಹೇಳಿದಂತೆ ಬುದ್ಧನು ಶ್ರಾವಸ್ತಿಯಲ್ಲಿ ಉಳಿದುಕೊಂಡಾಗ ಮಹಾಪ್ರಜಾಪತಿ ಗೌತಮಿಯು ತನ್ನ ಜೊತೆಗೆ ದಾನಿಗಳಾದ ಐದು ನೂರು ಜನ ಸ್ತ್ರೀಯರನ್ನು ಕರೆತಂದಳು. ಅವಳು ಧಮ್ಮದ ಬಗೆಗೆ ಮಾರ್ಗದರ್ಶನ ಮಾಡಬೇಕೆಂದು ಬುದ್ಧನನ್ನು ಕೇಳಿಕೊಂಡಳು. ಆಗ ಬುದ್ಧನು ಅವರೆಲ್ಲರಿಂದ ಪಲಾಯನ ಮಾಡಿದ್ದನೇ? ಪಜ್ಜುನನ ಮಗಳಾದ ಕೋಕನದಾಳ ಸೌಂದರ್ಯದ ತೇಜಸ್ಸು ಇಡಿಯ ಮಹಾ ವನದಲ್ಲಿ ಹಬ್ಬಿತ್ತು. ಬುದ್ಧನು ವೈಶಾಲಿಯಲ್ಲಿ ಇರುವಾಗ ಅವಳು ಅವನನ್ನು ಭೇಟಿಯಾಗಲು ಪ್ರಾತಃಕಾಲದಲ್ಲಿ ಬಂದಿದ್ದಳೆಂದು ಸಂಯುಕ್ತ ನಿಕಾಯದಲ್ಲಿ ನಮೂದಿಸಲಾಗಿದೆ.

ರಾಜಾ ಪ್ರಸೇನಜೀತನ ಪತ್ನಿಯಾದ ರಾಣಿ ಮಲ್ಲಿಕಾ ಇವಳು ಧಮ್ಮವನ್ನು ಕುರಿತಾದ ಉಪದೇಶವನ್ನು ಪಡೆಯಲು ಬುದ್ಧನಲ್ಲಿಗೆ ಮೇಲಿಂದ ಮೇಲೆ ಬರುತ್ತಿದ್ದಳೆಂಬ ಉಲ್ಲೇಖಗಳು ಪಿಟಿಕಾಗಳಲ್ಲಿ ಅಲ್ಲಲ್ಲಿ ಇವೆ.
ಬುದ್ಧನು ಸ್ತ್ರೀಯರ ಭೇಟಿಯನ್ನು ನಿಷೇಧಿಸಿರಲಿಲ್ಲ, ಎಂಬುದು ಈ ಘಟನೆಗಳಿಂದ ಸ್ಪಷ್ಟವಾಗುತ್ತದೆ. ಅದೇ ರೀತಿಯಾಗಿ ಸ್ತ್ರೀಯರಿಗೂ ಬುದ್ಧನಲ್ಲಿಗೆ ಹೋಗಲು ಸಂಕೋಚ ಎನ್ನಿಸುತ್ತಿರಲಿಲ್ಲ.

ಸ್ತ್ರೀಯರೊಡನೆ ಮೇಲಿಂದ ಮೇಲಾಗುವ ಭೇಟಿಗಳು ಹಾಗೂ ಮಾನವನ ಸ್ವಭಾವದ ದೌರ್ಬಲ್ಯಗಳನ್ನು ಗಮನಿಸಿ ಬುದ್ಧನು ಭಿಕ್ಕುಗಳಿಗೆ ಸಾಮಾನ್ಯ ಅನುಯಾಯಿಗಳನ್ನು ಭೇಟಿಗೆಂದು ಮೇಲಿಂದ ಮೇಲೆ ಮನೆಗೆ ಕರೆಯಬಾರದೆಂದು ಉಪದೇಶಿಸಿದ್ದುದು ನಿಜ. ಆದರೆ ಅವನು ಇಂಥ ಭೇಟಿಗಳನ್ನು ನಿಷೇಧಿಸಿರಲಿಲ್ಲ. ಇಷ್ಟೇ ಅಲ್ಲದೆ ಅವನೆಂದಿಗೂ ಸ್ತ್ರೀಯರನ್ನು ಕುರಿತು ತಿರಸ್ಕಾರವನ್ನು ತೋರಲಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top