---

ಕೋವಿಂದ್, ದಲಿತ ರಾಜಕಾರಣ ಮತ್ತು ಹಿಂದೂ ರಾಷ್ಟ್ರೀಯತೆ

ಸಮಾಜದ ದಲಿತರಿಗಾದ ಆಳವಾದ ಗಾಯಕ್ಕೆ ಮುಲಾಮು ಸವರುವ ತೋರಿಕೆಯ ಒಂದು ಪ್ರಯತ್ನವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಕೋವಿಂದ್‌ರನ್ನು ನಾಮಕರಣ ಮಾಡಿದಂತೆ ಕಾಣುತ್ತದೆ. ಗೋದ್ರಾ ರೈಲು ಸುಟ್ಟ ನೆಪ ಮುಂದುಮಾಡಿ ನಡೆಸಿದ ಗುಜರಾತ್ ನರಮೇಧ ಮತ್ತು ಗುಜರಾತ್‌ನ ಮುಸ್ಲಿಮರಿಗಾದ ಆಳವಾದ ನೋವಿನ ಬಳಿಕ ಬಿಜೆಪಿ, ಎಪಿಜೆ ಅಬ್ದುಲ್ ಕಲಾಂರವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದ್ದು ಇಲ್ಲಿ ನೆನಪಾಗುತ್ತದೆ.

ರಾಮ್‌ನಾಥ್ ಕೋವಿಂದ್‌ರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಕರಣ ಮಾಡುವ ಮೂಲಕ, ಬಿಜೆಪಿಯು ಸಂಕೇತ ರಾಜಕಾರಣದ (ಪಾಲಿಟಿಕ್ಸ್ ಆಫ್ ಟೋಕನಿಸಂ) ಆಟವಾಡಲು ಅದ್ಭುತ ಪ್ರಯತ್ನ ನಡೆಸಿದೆ. ಕೋವಿಂದ್ ಉತ್ತರ ಪ್ರದೇಶದ ಒಬ್ಬ ದಲಿತ. ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಪರಿವಾರದಿಂದ ಹಲವು ಹೆಸರುಗಳು ಕೇಳಿಬಂದಿದ್ದವಾದರೂ ಅಂತಿಮವಾಗಿ ಬಿಜೆಪಿ, ಕೋರಿಕೆಗೆ ಒಬ್ಬ ದಲಿತ ಮತ್ತು ಸೈದ್ಧಾಂತಿಕವಾಗಿ ಒಬ್ಬ ಹಿಂದೂ ರಾಷ್ಟ್ರೀಯವಾದಿಯಾಗಿರುವ ವ್ಯಕ್ತಿಯೊಬ್ಬರನ್ನು ಆಯ್ಕೆಮಾಡಿತು. ಮೋದಿ ಸರಕಾರದ ಕಳೆದ ಮೂರು ವರ್ಷಗಳಲ್ಲಿ ಮುಸ್ಲಿಮರ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧವಷ್ಟೇ ಹಿಂಸೆ ನಡೆದದ್ದಲ್ಲ; ನಿರ್ದಿಷ್ಟವಾಗಿ ದಲಿತರ ವಿರುದ್ಧವೂ ಹಿಂಸೆ ನಡೆಯಿತು. ಮದರಾಸಿನ ಪೆರಿಯಾರ್ ಅಧ್ಯಯನ ಕೇಂದ್ರದ ಮೇಲೆ ಹೇರಿದ ನಿಷೇಧದಿಂದ ಆರಂಭಿಸಿ ಓರ್ವ ದಲಿತ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಒಂದು ಪರಿಸ್ಥಿತಿಯನ್ನು ನಿರ್ಮಾಣ ಮಾಡುವವರೆಗೆ, ಉನಾದಲ್ಲಿ ದಲಿತರ ವಿರುದ್ಧ ನಡೆದ ‘ಗೋ-ಹಿಂಸೆ’ಯ ವರೆಗೆ ದಲಿತರು ಒಂದು ಸಾಮಾಜಿಕ ತಂಡವಾಗಿ ಕ್ರೂರ ದಾಳಿಗೊಳಗಾಗಿದ್ದಾರೆ.

ಇದು ಹಿಂದೂ ರಾಷ್ಟ್ರೀಯವಾದಿ ರಾಜಕಾರಣದ ಒಂದು ಉಪ ಉತ್ಪನ್ನ. ಇದಿಷ್ಟೇ ಅಲ್ಲದೆ, ಇದೇ ರೀತಿಯ ಇನ್ನೂ ಹಲವು ಉದಾಹರಣೆಗಳಿವೆ: ಓರ್ವ ಕೇಂದ್ರ ಸಚಿವರು ದಲಿತರು ನಾಯಿಗಳಿಗೆ ಸಮಾನ ಎಂದರು. ಓರ್ವ ಬಿಜೆಪಿ ನಾಯಕ ಹಾಗೂ ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ಕೃಪಾಶಂಕರ್ ಸಿಂಗ್, ಮಾಯಾವತಿ ಒಬ್ಬಳು ವೇಶ್ಯೆಗಿಂತಲೂ ಕೀಳು ಎಂದರು. ಆ ಬಳಿಕ ಅವರ ಅಭಿಪ್ರಾಯವನ್ನು ಖಂಡಿಸಲಾಯಿತಾದರು, ಹಿಂದಿನ ಬಾಗಿಲಿನ ಮೂಲಕ ಅವರ ಪತ್ನಿಗೆ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಯಿತು; ಮತ್ತು ತರುವಾಯ ಆಕೆಗೆ ಉತ್ತರ ಪ್ರದೇಶದ ಯೋಗಿ ಸಚಿವ ಸಂಪುಟದಲ್ಲಿ ಸಚಿವೆಯ ಸ್ಥಾನ ನೀಡಲಾಯಿತು. ಯೋಗಿಯವರು ಅಧಿಕಾರಕ್ಕೆ ಬಂದು, ಮೇಲ್ಜಾತಿಗಳಿಗೆ ತಾವು ಇನ್ನಷ್ಟು ಬಲಾಢ್ಯರು ಅನ್ನಿಸಲಾರಂಭಿಸಿದಂತೆ, ಗಾಯಕ್ಕೆ ಬರೆ ಎಳೆದಂತೆ ಸಹರಾನ್‌ಪುರದಲ್ಲಿ ದಲಿತರ ವಿರುದ್ಧ ಭಯಾನಕ ಹಿಂಸೆ ನಡೆಯಿತು. ದಲಿತರ ಮೇಲೆ ನಡೆದ ದಾಳಿಗಳ ವಿರುದ್ಧ ಚಂದ್ರಶೇಖರ್ ನೇತೃತ್ವದಲ್ಲಿ ಭೀಮ ಸೇನೆ ಪ್ರತಿಭಟಿಸಿದಾಗ ದಲಿತ ನಾಯಕರನ್ನು ಬಂಧಿಸಲಾಯಿತು; ಅವರ ಮೇಲೆ ದಾಳಿ ನಡೆಸಿದವರ ಮೇಲೆ ಸಣ್ಣ ಪುಟ್ಟ ಆಪಾದನೆ ಹೊರಿಸಿ ದಾಳಿಕೋರರನ್ನು ಬಿಡುಗಡೆ ಮಾಡಲಾಯಿತು.

ಸಮಾಜದ ದಲಿತರಿಗಾದ ಆಳವಾದ ಗಾಯಕ್ಕೆ ಮುಲಾಮು ಸವರುವ ತೋರಿಕೆಯ ಒಂದು ಪ್ರಯತ್ನವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಕೋವಿಂದ್‌ರನ್ನು ನಾಮಕರಣ ಮಾಡಿದಂತೆ ಕಾಣುತ್ತದೆ. ಗೋಧ್ರಾ ರೈಲು ಸುಟ್ಟ ನೆಪ ಮುಂದುಮಾಡಿ ನಡೆಸಿದ ಗುಜರಾತ್ ನರಮೇಧ ಮತ್ತು ಗುಜರಾತ್‌ನ ಮುಸ್ಲಿಮರಿಗಾದ ಆಳವಾದ ನೋವಿನ ಬಳಿಕ ಬಿಜೆಪಿ, ಎಪಿಜೆ ಅಬ್ದುಲ್ ಕಲಾಂರವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದ್ದು ಇಲ್ಲಿ ನೆನಪಾಗುತ್ತದೆ. ಕಲಾಂರವರ ಆಯ್ಕೆ ಕೂಡ ಸಾಂಕೇತಿಕತೆಯ ರಾಜಕಾರಣದ ಇನ್ನೊಂದು ಉದಾಹರಣೆ. ಆ ಸಾಂಕೇತಿಕತೆಯು ಭಾರತೀಯ ಸಮಾಜದಲ್ಲಿ ಇರುವ ತುಂಬ ಆಳವಾದ ಅಲ್ಪ ಸಂಖ್ಯಾತ ವಿರೋಧಿ ಭಾವನೆಗಳನ್ನು (ಆ್ಯಂಟಿ ಮೈನಾರಿಟಿ ಡೈನಾಮಿಕ್ಸ್) ಬದಲಾಯಿಸಲಿಲ್ಲ. ಯಾರೋ ನಮಗೆ ಸಹಾಯ ಹಸ್ತ ಚಾಚುತ್ತಿದ್ದಾರೆಂಬ ಒಂದು ಭಾವನೆಯನ್ನು ಸೃಷ್ಟಿಸುವುದೇ ಸಾಂಕೇತಿಕತೆ ಮಾಡುವ ಕೆಲಸ.

ಕೋವಿಂದ್ ಬಹಳ ಕಾಲದಿಂದ ಓರ್ವ ಆರೆಸ್ಸೆಸ್ ಸ್ವಯಂ ಸೇವಕ; ಅವರು ತನ್ನ ಪೂರ್ವಿಕರ ಮನೆಯನ್ನು ಆರೆಸ್ಸೆಸ್ ಚಟುವಟಿಕೆಗಾಗಿ ದಾನ ಮಾಡಿದ್ದಾರೆ. ಅವರ ಅನೇಕ ಹೇಳಿಕೆಗಳಲ್ಲಿ ವ್ಯಕ್ತವಾಗಿರುವ ಅವರ ಅಭಿಪ್ರಾಯಗಳು ಅವರು ಇಸ್ಲಾಂ ಮತ್ತು ಕ್ರೈಸ್ತ ಧರ್ಮವನ್ನು ವಿದೇಶಿ ಧರ್ಮಗಳೆಂದು ಪರಿಗಣಿಸುತ್ತಾರೆ ಎನ್ನುವುದನ್ನು ತೋರಿಸುತ್ತದೆ. ರಂಗನಾಥ ಮಿಶ್ರಾ ಆಯೋಗದ ವರದಿಯ ಮೇಲಿನ ಚರ್ಚೆಯಲ್ಲಿ ಅವರು ಭಾಗವಹಿಸುತ್ತಿದ್ದಾಗ ಅವರಿಗೆ ಇಂತಹ ಅಭಿಪ್ರಾಯ ಇದೆ ಎಂದು ಗೊತ್ತಾಯಿತು. ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ನೀಡುವ ಬಗ್ಗೆ ಅವರ ಈ ಅಭಿಪ್ರಾಯ ಹೊರಬಂತು. ‘‘ಮೀಸಲಾತಿಗಳಿಗಿಂತ ಶಿಕ್ಷಣಕ್ಕೇ ಹೆಚ್ಚು ಮಹತ್ವ ನಿಡಬೇಕು, ಶಿಕ್ಷಣವೇ ಹೆಚ್ಚು ಮುಖ್ಯ’’ ಎನ್ನುತ್ತಾರೆ ಕೋವಿಂದ್; ಅಂದರೆ ದಲಿತರಿಗೆ ಮೀಸಲಾತಿಗಳು ಅಷ್ಟೊಂದು ಮುಖ್ಯವಲ್ಲ ಎಂದು ಅವರು ಹೇಳಿದಂತಾಯಿತು.

ಬಿಜೆಪಿಯ ಒಂದು ಭಾಗವಾಗಿ ಕೋವಿಂದ್ ಉತ್ತರ ಪ್ರದೇಶದಲ್ಲಿ ಜಾತೌ ದಲಿತರಲ್ಲದ (ನಾನ್-ಜಾತೌ) ದಲಿತರನ್ನು ಓಲೈಸಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಬಿಜೆಪಿ-ಆರೆಸ್ಸೆಸ್ ಹಲವು ದಲಿತರನ್ನು ತನ್ನೆಡೆಗೆ ಸೆಳೆದುಕೊಳ್ಳವುದರಲ್ಲಿ ಯಶಸ್ವಿಯಾಗಿದೆ. ಉದಾಹರಣೆಗೆ, ರಾಮ್ ವಿಲಾಸ್ ಪಾಸ್ವಾನ್. ತನ್ನ ವೈಯಕ್ತಿಕ ಅಧಿಕಾರಕ್ಕಾಗಿ ದಲಿತರ ಹಿತಾಸಕ್ತಿಗಳನ್ನು ಕೈ ಬಿಟ್ಟಿರುವ ಪಾಸ್ವಾನ್ ಕೋವಿಂದ್‌ರನ್ನು ವಿರೋಧಿಸುವವರನ್ನೆಲ್ಲ ದಲಿತ ವಿರೋಧಿ ಎಂದು ಪರಿಗಣಿಸಬೇಕೆಂದಿದ್ದಾರೆ! ಹಾಗಾದರೆ ಇಂದು ಓರ್ವ ದಲಿತ ನಾಯಕ ಎನ್ನುವುದರ ಅರ್ಥವೇನು? ದಲಿತರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿರುವಾಗ ಮತ್ತು ಹೆಚ್ಚುತ್ತಿರುವಾಗ ತಮ್ಮ ತುಟಿಗಳಿಗೆ ಹೊಲಿಗೆ ಹಾಕಿ ಕುಳಿತುಕೊಳ್ಳುವ ಕೋವಿಂದ್ ಮತ್ತು ಪಾಸ್ವಾನ್‌ರಂತಹ ಹಲವರಿದ್ದಾರೆ. ದಲಿತ ನಾಯಕತ್ವ ಇಂದು ಒಂದು ಸಂದಿಗ್ಧದಲ್ಲಿದೆ. ತಮಗೆ ಲಾಭ ಮತ್ತು ಅಧಿಕಾರ ನೀಡುವುದರಿಂದ ಪಾಸ್ವಾನ್‌ರ ತರಹದ ಹಲವು ನಮೂನೆಯ ದಲಿತ ನಾಯಕರು ಬಿಜೆಪಿ ಆರೆಸ್ಸೆಸ್‌ನ ಹಿಂದೂ ರಾಷ್ಟ್ರೀಯವಾದಿ ರಾಜಕಾರಣದ ಜತೆ ಕೈ ಜೋಡಿಸಿದ್ದಾರೆ. ಆದರೆ ದಲಿತರ ಉಳಿವು ಮತ್ತು ಗೌರವ ಹಾಗೂ ಸಮಾನ ನಾಗರಿಕರಾಗಿ ದಲಿತರಿಗೆ ಸಿಗಬೇಕಾದ ಹಕ್ಕುಗಳಿಗಾಗಿ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಇತರ ಹಲವು ದಲಿತ ನಾಯಕರಿದ್ದಾರೆ. ದಲಿತರ ಪಾಲಿಗೆ ಭಾರತೀಯ ಸಂವಿಧಾನ ಅಸ್ತಿತ್ವಕ್ಕೆ ಬಂದದ್ದೇ ಬಹಳ ದೊಡ್ಡ ಸಾಧನೆ. ಸಂವಿಧಾನವು ದಲಿತರಿಗೆ ಸೈದ್ಧಾಂತಿಕ ಸಮಾನತೆಯನ್ನು ನೀಡಿದೆ. ದಲಿತರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ಸಂವಿಧಾನವು ಅವರಿಗೊಂದು ನೆಲೆ ಒದಗಿಸಿದೆ.

ಇದಕ್ಕೆ ವ್ಯತಿರಿಕ್ತವಾಗಿ ಆರೆಸ್ಸೆಸ್‌ನ ರಾಜಕಾರಣ ಭಾರತೀಯ ರಾಷ್ಟ್ರೀಯತೆಯನ್ನು ವಿರೋಧಿಸುತ್ತಾ ಬಂದಿದೆ; ಅದು ಹಿಂದೂ ರಾಷ್ಟ್ರೀಯತೆಯ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಅದು ತನ್ನ ಒಳಗೆಯೇ ಜಾತಿ ಶ್ರೇಣೀಕರಣಕ್ಕೆ ನೆಲೆ ನೀಡಿರುವ ಶಾಸ್ತ್ರ ಗ್ರಂಥಗಳನ್ನು ಎತ್ತಿ ಹಿಡಿಯುತ್ತಲೇ ಇದೆ. ಹೀಗಾಗಿ ಹಿಂದೂ ರಾಷ್ಟ್ರೀಯತೆಯು ಕಳೆದ ಒಂದು ಶತಮಾನದಿಂದ ತುಂಬ ದೀರ್ಘವಾದ ಪ್ರಯಾಣ ನಡೆಸಿದೆ; ತುಂಬ ದೂರ ಸಾಗಿ ಬಂದಿದೆ. ಮಹಾರಾಷ್ಟ್ರದ ವಿದರ್ಭದಲ್ಲಿ ಬ್ರಾಹ್ಮಣರಲ್ಲದವರ ಚಳವಳಿಯ ರೂಪದಲ್ಲಿ ದಲಿತರ ಪ್ರತಿಭಟನೆಗಳು ಹೆಚ್ಚುತ್ತಿದ್ದ ಸನ್ನಿವೇಶದಲ್ಲಿ ಆರೆಸ್ಸೆಸ್ ಬಲವಾಗಿ ಬೆಳೆದದ್ದು ಒಂದು ಆಕಸ್ಮಿಕವೇ? ಒಂದು ಕಾಕತಾಳೀತಯವೇ? ಆ ಚಳವಳಿ ಬ್ರಾಹ್ಮಣ ಜಮೀನ್ದಾರನಿಗೆ ಪ್ರಾಧಾನ್ಯ ನೀಡಿದ್ದ ಸಾಮಾಜಿಕ ಚೌಕಟ್ಟಿನ ವಿರುದ್ಧ ನಡೆದ ಚಳವಳಿಯಾಗಿತ್ತು. ಸಮಾನತೆಯನ್ನಾಧರಿಸಿದ ಚಳವಳಿಗಳು ದೇಶದ ಸ್ವಾತಂತ್ರ ಚಳವಳಿಗೆ ಸಮಾನಾಂತರವಾಗಿ ನಡೆಯುತ್ತ ಬಂದಿದ್ದವು. ಸಮಾನತೆಗಾಗಿ ನಡೆಸಿದ ಹೋರಾಟಗಳ ಹಾಗೂ ಚಳವಳಿಗಳ ಮೂಲಕ ದಲಿತರು ತಮ್ಮ ಆವಶ್ಯಕತೆಗಳನ್ನು ಸಮಾಜದಲ್ಲಿ ಅಭಿವ್ಯಕ್ತಿಪಡಿಸುತ್ತಿದ್ದರು.

ಆದರೆ ಹಿಂದೂ ರಾಷ್ಟ್ರೀಯವಾದವು ಗತಕಾಲದ ಹಳೆಯ ವ್ಯವಸ್ಥೆಯನ್ನೇ ಎತ್ತಿ ಹಿಡಿಯಿತು; ಅದು ಜಾತಿ ಚೌಕಟ್ಟನ್ನು ತುಂಬ ಸೂಕ್ಷ್ಮವಾದ, ನಾಜೂಕಾದ ರೀತಿಯಲ್ಲಿ ಪ್ರತಿಪಾದಿಸಿತು. ಕ್ರಮೇಣ, ವಿಶೇಷವಾಗಿ, 1990ರ ದಶಕದ ನಂತರ ಆರೆಸ್ಸೆಸ್-ಬಿಜೆಪಿ ರಾಜಕಾರಣ ದಲಿತರಿಗೆ ಮೀಸಲಾತಿ ಹಾಗೂ ಸಮಾನತೆಯನ್ನು ವಿರೋಧಿಸುತ್ತಾ ಬಂದಿದೆ. ಅದು ದಲಿತರನ್ನು ತನ್ನ ರಾಜಕೀಯ ತೆಕ್ಕೆಯೊಳಕ್ಕೆ ಸೆಳೆದುಕೊಳ್ಳಲು ಹಲವು ಮಜಲುಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಆದಿವಾಸಿಗಳ ‘ಹಿಂದೂಕರಣ’ ಕೆಲಸ ಮಾಡುತ್ತಿರುವ ‘ವನವಾಸಿ ಕಲ್ಯಾಣ ಆಶ್ರಮ’ದ ಬಳಿಕ, ‘ಜಾತಿಗಳ ನಡುವೆ ಸಾಮರಸ್ಯ’ದ ಪರವಾಗಿ ಕೆಲಸ ಮಾಡಲು, ಅಂದರೆ ‘ಸಮತಾ’ (ಸಮಾನತೆಗಾಗಿ) ನಡೆಸುವ ಹೋರಾಟಗಳ ವಿರುದ್ಧವಾಗಿ ಕಾರ್ಯಾಚರಿಸಲು ‘ಸಾಮಾಜಿಕ್ ಸಮ್ರಸ್ತಾ ಮಂಚ್’ (ಸಾಮಾಜಿಕ ಸಾಮರಸ್ಯ ವೇದಿಕೆ)ಯನ್ನು ಹುಟ್ಟುಹಾಕಿತು. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಈ ವೇದಿಕೆಯು, ಇಸ್ಲಾಂ ಧರ್ಮದಿಂದ ನಡೆದ ದಾಳಿಗಳಿಂದ ಹಿಂದೂಧರ್ಮವನ್ನು ದಲಿತರು ರಕ್ಷಿಸುತ್ತಾ ಬಂದಿದ್ದಾರೆ ಎಂದು ಪ್ರಚಾರ ಮಾಡಲು ಪ್ರಯತ್ನಿಸುತ್ತಾ ಬಂದಿದೆ. ಇತ್ತೀಚೆಗೆ ಆರೆಸ್ಸೆಸ್ ಕೂಟವು, ಅಂಬೇಡ್ಕರ್‌ರವರನ್ನು ಶ್ರೇಷ್ಠ ಹಿಂದೂ (ಗ್ರೇಟ್ ಹಿಂದೂ) ಎಂದು ಕರೆಯುವ ಮೂಲಕ, ಅವರ ವಾರ್ಷಿಕ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲು ಹಲವು ಪ್ರಯತ್ನಗಳನ್ನು ನಡೆಸುತ್ತಿದೆ. ಅಂಬೇಡ್ಕರ್ ಅವರ ರಾಜಕಾರಣ ಮತ್ತು ಹಿಂದೂ ರಾಷ್ಟ್ರೀಯವಾದಿ ರಾಜಕಾರಣ ಉತ್ತರ-ದಕ್ಷಿಣ ಧ್ರುವಗಳಂತೆ; ಒಂದಕ್ಕೊಂದು ತೀರ ವಿರುದ್ಧವಾಗಿವೆ. ಅಂಬೇಡ್ಕರ್‌ರವರು ಸ್ವಾತಂತ್ರ, ಸಮಾನತೆ, ಮತ್ತು ಭ್ರಾತೃತ್ವದ ಪರವಾಗಿದ್ದಾರೆ; ಆದರೆ ಹಿಂದೂ ರಾಷ್ಟ್ರೀಯತೆಯು ವೇದಕಾಲದ ಶ್ರೇಣೀಕೃತ ವೌಲ್ಯಗಳನ್ನು ಪ್ರತಿಪಾದಿಸುತ್ತದೆ.

ಸಾಮಾಜಿಕ ಮಸಲತ್ತು (ಸೋಶಿಯಲ್ ಇಂಜಿನಿಯರಿಂಗ್) ನಡೆಸುವ ಮೂಲಕ ದಲಿತರು ಬಾಬರಿ ಮಸೀದಿಯ ಧ್ವಂಸದಲ್ಲಿ ಭಾಗವಹಿಸುವಂತೆ ಮಾಡಲಾಯಿತು. ಹಾಗೆಯೇ ಅವರು ಮುಸ್ಲಿಂ ವಿರೋಧಿ ಹಿಂಸೆಯಲ್ಲೂ ಪಾಲ್ಗೊಳ್ಳುವಂತೆ ಮಾಡಲಾಯಿತು. ನಾವೀಗ ಕೋವಿಂದ್‌ರವರ ಸ್ವಭಾವ, ಸಾಮರ್ಥ್ಯವನ್ನು ಹೇಗೆ ಅರ್ಥೈಸುವುದು? ಹೇಗೆ ಅಳೆಯುವುದು?, ಹೇಗೆ ಅಸೆಸ್ ಮಾಡುವುದು? ವ್ಯಕ್ತಿಯೊಬ್ಬನ ರಾಜಕಾರಣ ಆತನ ಜನನ ಒಂದೇ ಮುನ್ನಡೆಸುವುದಿಲ್ಲ; ಒಬ್ಬನ ಹುಟ್ಟು ಮಾತ್ರ ಅವನ ಜೀವನವನ್ನು ನಿರ್ಧರಿಸುವುದಿಲ್ಲ. ಹಿಂದೂ ರಾಷ್ಟ್ರೀಯತೆಗಾಗಿ ಕೆಲಸ ಮಾಡುವ, ಹಿಂದೂ ರಾಷ್ಟ್ರೀಯತೆಯನ್ನು ಪ್ರಚಾರ ಮಾಡುವ ದಲಿತರು ದಲಿತರಿಗೆ ಗಂಭೀರ ಸ್ವರೂಪದ ಹಾನಿಯನ್ನುಂಟುಮಾಡುತ್ತಿದ್ದಾರೆ; ಇದೇ ವೇಳೆ ಅಂಬೇಡ್ಕರ್‌ರವರ ಹಾದಿಯಲ್ಲಿ ಸಾಗುತ್ತಿರುವ, ಅವರ ಚಿಂತನೆಯನ್ನು ಹಾಗೂ ವಿಚಾರಧಾರೆಯನ್ನು ಎತ್ತಿ ಹಿಡಿಯುವ ದಲಿತೇತರರು ಕೂಡ ದಲಿತರ ಏಳಿಗೆಗಾಗಿ ನಿಜವಾಗಿ ದುಡಿಯುತ್ತಿದ್ದಾರೆ. ಕೋವಿಂದ್‌ರು ಖಂಡಿತವಾಗಿಯೂ ಆರೆಸ್ಸೆಸ್ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿರಬೇಕು. ಹಿಂದೂ ರಾಷ್ಟ್ರದ ಪಾರಮ್ಯಕ್ಕೆ ಕರೆ ನೀಡುವ ಪ್ರತಿಜ್ಞೆ ಅದು; ಭಾರತದ ಸಂವಿಧಾನವು ಇರುವುದು ಭಾರತೀಯ ರಾಷ್ಟ್ರೀಯವಾದದ ಪರವಾಗಿ. ಕೋವಿಂದ್‌ರು ರಾಷ್ಟ್ರಪತಿಯಾಗಿ ಯಾವುದನ್ನು ಎತ್ತಿ ಹಿಡಿಯುತ್ತಾರೆ? ಹಿಂದೂ ರಾಷ್ಟ್ರದ ಪಾರಮ್ಯವನ್ನೋ? ಅಥವಾ ಭಾರತೀಯ ರಾಷ್ಟ್ರೀಯತೆಯ ಪಾರಮ್ಯವನ್ನೋ.?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top