ವಾರದ ವ್ಯಕ್ತಿ

ಮರೆಯಲಾರದ ಮೇಲುಕೋಟೆ ಗಾಂಧಿ ಸುರೇಂದ್ರ ಕೌಲಗಿ

ಪ್ರಪಂಚದ ಯಾವುದೇ ಮೂಲೆಗೆ ಹೋಗಿ ಇಂಡಿಯಾ ಎಂದರೆ, ಗಾಂಧಿ ಎನ್ನುತ್ತಾರೆ. ಅದು ಅಷ್ಟೇ ಸಹಜ ಮತ್ತು ಸಾರ್ವಕಾಲಿಕ ಸತ್ಯ. ಆ ವ್ಯಕ್ತಿತ್ವವೇ ಅಂಥಾದ್ದು. ಗಾಂಧಿ ವಿಚಾರಧಾರೆಗಳಿಂದ ಪ್ರಭಾವಿತರಾದ ಹಲವರು ಇಂದಿಗೂ ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಬದುಕುತ್ತಿದ್ದಾರೆ. ಗಾಂಧಿಯನ್ನು ಹೊಸಗಾಲಕ್ಕೂ ದಾಟಿಸುತ್ತಿದ್ದಾರೆ, ಜೀವಂತವಾಗಿಟ್ಟಿದ್ದಾರೆ. ಅಂತಹವರಲ್ಲಿ ಮೇಲುಕೋಟೆಯ ಸುರೇಂದ್ರ ಕೌಲಗಿ ಪ್ರಮುಖರು. ಲೇಖಕರಾಗಿ, ಸರ್ವೋದಯ ಧುರೀಣರಾಗಿ, ಸಮಾಜ ಸೇವಕರಾಗಿ, ಸಾವಯವ ಕೃಷಿಕರಾಗಿ ನಮ್ಮ ನಾಡ ಗಾಂಧಿಯಂತೆಯೇ ಬದುಕಿದ್ದ ಸುರೇಂದ್ರ ಕೌಲಗಿಯವರು ಕಳೆದ ವಾರವಷ್ಟೇ ನಮ್ಮನ್ನಗಲಿದ್ದಾರೆ.

ಸುರೇಂದ್ರ ಕೌಲಗಿ ಎಂದಾಕ್ಷಣ ನೆನಪಾಗುವುದು ಹಸನ್ಮುಖ, ಖಾದಿ ಜುಬ್ಬ-ಪಂಚೆ, ಹೆಗಲಿಗೊಂದು ಬ್ಯಾಗ್. ಮೂಲತಃ ಧಾರವಾಡ ಜಿಲ್ಲೆಯ ಗುಡಿಗೇರಿ ಗ್ರಾಮದವರಾದ ಸುರೇಂದ್ರ ಕೌಲಗಿಯವರು, 1915 ಮೇ 8ರಂದು ಮೊದಲ ಬಾರಿಗೆ ಮಹಾತ್ಮ ಗಾಂಧೀಜಿ ಯವರು ಬೆಂಗಳೂರಿಗೆ ಬಂದಾಗ, ಅವರ ಸರಳ ಉಡುಗೆ ತೊಡುಗೆ, ಜೀವನಶೈಲಿ, ತಮ್ಮ ಸ್ವಂತ ಬದುಕನ್ನೇ ಬದಿಗಿಟ್ಟು ಸಮಾಜ ಸುಧಾರಿಸಲು ಹೆಣಗಾಡುತ್ತಿದ್ದುದನ್ನು ಖುದ್ದು ಕಂಡವರಿಂದ ಕೇಳಿ ತಿಳಿದಿದ್ದರು. ತದನಂತರ ಕೌಲಗಿಯವರು, ಗಾಂಧಿ ಎಂದರೆ ದೇವರೆಂದೇ ನಂಬಿದ್ದ ಭೂದಾನ ಚಳವಳಿಯ ನೇತಾರ ವಿನೋಭಾ ಭಾವೆಯವರ ಒಡನಾಟಕ್ಕೆ ಬಂದರು. ಸಂಪೂರ್ಣ ಕ್ರಾಂತಿಯ ಹರಿಕಾರ ಜಯಪ್ರಕಾಶ್ ನಾರಾಯಣರ ಕಾರ್ಯದರ್ಶಿಯಾಗಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದರು. ಅವರೊಡನಾಡಿ ಅವರ ಚಿಂತನೆಗಳಿಂದ ಪಕ್ವಗೊಂಡಿದ್ದರು, ಭವಿಷ್ಯದ ಗುರಿ-ದಾರಿಗಳನ್ನು ಕಂಡುಕೊಂಡಿದ್ದರು.

ಗಾಂಧಿಯ ತತ್ವಾದರ್ಶಗಳನ್ನು ಎದೆಗಿಳಿಸಿಕೊಂಡಿದ್ದ ಕೌಲಗಿಯವರು, ಅವುಗಳನ್ನು ಸಾಕಾರಗೊಳಿಸಲು ಬೆಳಗಾವಿಯ ಬೈಲಹೊಂಗಲದಿಂದ ಮಂಡ್ಯದ ಮೇಲುಕೋಟೆಗೆ ಬಂದು ನೆಲೆನಿಂತರು. 60ರ ದಶಕದಲ್ಲಿ ಒಂದಷ್ಟು ಜಮೀನನ್ನು ಗುರುತಿಸಿ ಜನಪದ ಸೇವಾ ಟ್ರಸ್ಟ್ ಸ್ಥಾಪಿಸಿದರು. ನಿರ್ಲಕ್ಷಿತ ಗ್ರಾಮೀಣ ಭಾಗದ ಅಂಗವಿಕಲ ಮಕ್ಕಳಿಗಾಗಿ ಉಚಿತ ಶಿಕ್ಷಣ, ವಸತಿ ಸೌಲಭ್ಯ ನೀಡುವ ಸಲುವಾಗಿ ‘ಕರುಣಾಗೃಹ’ ತೆರೆದರು. ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸಲು ಗ್ರಾಮೋದ್ಯೋಗ ತರಬೇತಿ ಕೇಂದ್ರ ಸ್ಥಾಪಿಸಿದರು. ಗಾಂಧೀಜಿಯವರ ಗ್ರಾಮಭಾರತದ ಕನಸನ್ನು ನನಸು ಮಾಡಲು ಕೈಮಗ್ಗಗಳನ್ನು ಹಾಕಿದರು. ಕೈಮಗ್ಗದಲ್ಲಿ ನೂಲುವ ಕಾರ್ಮಿಕರಿಗೆ ಕೈ ತುಂಬಾ ಹಣ ನೀಡಿ ಬದುಕು ರೂಪಿಸಿಕೊಳ್ಳಲು ಬೆಂಬಲವಾಗಿ ನಿಂತರು. ಆದರೆ ಯಾವ ಸರಕಾರದ ಸಹಕಾರ-ಸೌಲಭ್ಯವನ್ನೂ ಪಡೆಯಲಿಲ್ಲ. ಖಾದಿ ಬೋರ್ಡ್‌ನ ಯಾವುದೇ ರೀತಿಯ ಧನಸಹಾಯಕ್ಕೂ ಕೈ ಚಾಚಲಿಲ್ಲ.

ಗ್ರಾಮಭಾರತದ ಜೀವನಾಡಿಯಾದ ಕೃಷಿಗೆ ಶಕ್ತಿತುಂಬುವ ಸಲುವಾಗಿ, 25 ವರ್ಷಗಳ ಹಿಂದೆಯೇ ಜಪಾನಿನ ನೈಸರ್ಗಿಕ ಕೃಷಿ ತಜ್ಞ ಫುಕೊವೊಕರ ‘ಒಂದು ಹುಲ್ಲಿನ ಕ್ರಾಂತಿ’ ಕೃತಿಯನ್ನು ಮೊದಲ ಬಾರಿಗೆ ಮಗನಿಂದಲೇ ಕನ್ನಡಕ್ಕೆ ತರ್ಜುಮೆ ಮಾಡಿಸಿ, ತಮ್ಮ 25 ಎಕರೆ ಜಮೀನಿನ ‘ಹೊಸ ಜೀವನ ದಾರಿ’ಯಲ್ಲಿ ಚಾಲ್ತಿಗೆ ತಂದರು. ‘ಜನಪದ ವಿಚಾರ’ ಎಂಬ ಮಾಸಿಕ ಪತ್ರಿಕೆ ಆರಂಭಿಸಿ, ನೈಸರ್ಗಿಕ ಕೃಷಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಹಲವಾರು ಲೇಖನಗಳನ್ನು ಬರೆದರು. ದೇಶದ ಕೃಷಿಕರು ಹೈಬ್ರಿಡ್ ಬೀಜ, ರಾಸಾಯನಿಕ ಗೊಬ್ಬರ, ಸಾಲ-ಸಬ್ಸಿಡಿ, ಅಧಿಕ ಇಳುವರಿಯ ಹಿಂದೆ ಓಡುತ್ತಿದ್ದಾಗ ಸಹಜ ಕೃಷಿ ಕುರಿತು ಜನರಲ್ಲಿ ಜಾಗೃತಿ ಮೂಡಿಸತೊಡಗಿದರು. ಆನಂತರ ಹೊಸ ಸಮಾಜ ನಿರ್ಮಾಣದ ಭಾಗವಾಗಿ ಸ್ಕೂಲು ಕಾಲೇಜುಗಳನ್ನು ತೆರೆದರು. ಆದರೆ ಕೌಲಗಿಯವರು ಹಣಕಾಸಿನ ಸಮಸ್ಯೆಗೆ ಸಿಲುಕಿ ಶಾಲಾಕಾಲೇಜುಗಳನ್ನು ಮುಚ್ಚಿದರು. ಇಷ್ಟಾದರೂ ತಾವು ಆರಂಭಿಸಿದ ಜನಪದ ಸೇವಾ ಟ್ರಸ್ಟ್‌ಗೆ ವಿದೇಶಿ ಹಣ ಹರಿದು ಬರುವುದನ್ನು ಪ್ರಜ್ಞಾ ಪೂರ್ವಕವಾಗಿ ತಿರಸ್ಕರಿಸಿದರು.

ಇವತ್ತು ರಾಜಕೀಯ ಪಕ್ಷಗಳೇ ಕೆಲವು ಕುಟುಂಬಗಳ ಆಸ್ತಿಯಾಗಿರುವ ಸಂದರ್ಭದಲ್ಲಿ, ತಾವು ಸ್ಥಾಪಿಸಿದ ಜನಪದ ಸೇವಾ ಸಂಸ್ಥೆಯನ್ನು ಟ್ರಸ್ಟ್ ಎಂದು ದಾಖಲಿಸಿ ದೇಶಕ್ಕೇ ಮಾದರಿಯಾದರು. ಇವರು ಸ್ಥಾಪಿಸಿದ ಎಷ್ಟೋ ವರ್ಷಗಳ ನಂತರ, ಇದೇ ಉದ್ದೇಶಗಳನ್ನಿಟ್ಟುಕೊಂಡು ಆರಂಭಿಸಿದ ಎನ್‌ಜಿಒಗಳು, ಅವುಗಳ ಉದ್ದೇಶವನ್ನೇ ಮರೆತು ದುಡ್ಡಿನ ಹಿಂದೆ ಓಡಿದ ಉದಾಹರಣೆಗಳು ಬೇಕಾದಷ್ಟಿವೆ. ಆದರೆ ಕೌಲಗಿಯವರು, ‘ನಮ್ಮದು ಚಲನಶೀಲ ಕ್ರಿಯಾಶೀಲ ಐಡಿಯಾಗಳನ್ನು ಸೃಷ್ಟಿಸುವ ತಾಣ. ನಮ್ಮ ಪ್ರಯತ್ನಗಳು ಕೆಲಸಗಳು ಜನರಿಗೆ ಬೇಕಿದ್ದರೆ, ರೆಲವೆಂಟ್ ಆಗಿದ್ದರೆ ಉಳಿಯುತ್ತವೆ, ಇಲ್ಲದಿದ್ದರೆ ಹೋಗುತ್ತವೆ’ ಎಂದು ಖಡಕ್ಕಾಗಿ ಹೇಳುವ ಮೂಲಕ, ಅವರು ಅವರಾಗಿಯೇ ಉಳಿದರು. ಕೌಲಗಿಯವರ ಸಾಮಾಜಿಕ ಚಟುವಟಿಕೆಗಳು ಹೊರಗಿನ ಜನಕ್ಕೆ ವ್ಯರ್ಥಪ್ರಯತ್ನದಂತೆ ಕಾಣಿಸಿರಬಹುದು; ಗೇಲಿಗೆ ಒಳಗಾಗಿರಬಹುದು; ಕಷ್ಟ-ನಷ್ಟ ಕಂಗೆಡಿಸಿರಬಹುದು. ಆದರೂ ಗಾಂಧಿಮಾರ್ಗ ಬಿಟ್ಟು ಹೋದವರಲ್ಲ.

ಜನಪದ ಟ್ರಸ್ಟ್‌ಗೆ 50 ವರ್ಷಗಳು ತುಂಬಿದಾಗ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಎನ್‌ಜಿಒಗಳ ಘಟಾನುಘಟಿಗಳೆಲ್ಲ ಮೇಲುಕೋಟೆಗೆ ಅತಿಥಿಗಳಾಗಿ ಬಂದಾಗ, ಅವರೆಲ್ಲ ಕೌಲಗಿಯವರ ಶಿಸ್ತುಬದ್ಧ ಜೀವನಕ್ರಮವನ್ನು, ಜನಪದ ಸಂಸ್ಥೆಯ ನಿರಂತರ ನಿಸ್ವಾರ್ಥ ಸೇವೆಯನ್ನು ಮುಕ್ತಕಂಠದಿಂದ ಹೊಗಳಿ ದ್ದರು. ಟ್ರಸ್ಟ್‌ನ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ಕೊಂಡಾಡಿದ್ದರು. ಅಷ್ಟೇ ಅಲ್ಲ, ಫಾರಿನ್ ಫಂಡ್ ಪಡೆದು ತಾವೆಲ್ಲಿ ದಾರಿ ತಪ್ಪಿದೆವು ಎಂಬ ಆತ್ಮಾವಲೋಕನವನ್ನೂ ಮಾಡಿಕೊಂಡಿದ್ದರು. ಇದು ಸುರೇಂದ್ರ ಕೌಲಗಿಯವರ ನಿಜವಾದ ಗಾಂಧಿಮಾರ್ಗದ ಯಶಸ್ಸು. ಸುರೇಂದ್ರ ಕೌಲಗಿಯವರ ದಿಟ್ಟ ಮತ್ತು ಸ್ಪಷ್ಟ ಆಲೋಚನಾ ಮಾರ್ಗವೇ ವಿಭಿನ್ನವಾದುದು. ಅವರು ಯಾವಾಗಲೂ ಸೇವಾ ಸಂಸ್ಥೆಗಳು ಮಠಗಳಾಗಬಾರದು, ಯಾರ ಸ್ವಂತ ಆಸ್ತಿಯೂ ಆಗಬಾರದು ಎಂದು ಪ್ರತಿಪಾದಿಸುತ್ತಿದ್ದರು. ಅದನ್ನೇ ಪಾಲಿಸಿಕೊಂಡು ಬಂದರು. ಈ ನಿಟ್ಟಿನಲ್ಲಿ, ಬೆಂಗಳೂರಿನ ಗಾಂಧಿ ಭವನದ ಕಾರ್ಯವೈಖರಿಯ ಬಗ್ಗೆ ಅವರು, ಮಠದ ಸ್ವರೂಪ ಪಡೆಯುತ್ತಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

ಗಾಂಧಿ, ಖಾದಿ, ಚರಕವನ್ನು ತಮ್ಮ ಉಸಿರಿನಂತೆ ಪ್ರೀತಿಸುತ್ತಿದ್ದ ಗೌರವಿಸುತ್ತಿದ್ದ ಕೌಲಗಿಯವರು, ತಮ್ಮ 18ನೆ ವಯಸ್ಸಿನಲ್ಲಿ ಖಾದಿ ತೊಡಲು ಶುರು ಮಾಡಿ ದವರು, 84ನೆ ವಯಸ್ಸಿನವರೆಗೂ ಖಾದಿ ಬಿಟ್ಟು ಬೇರೆಯದನ್ನು ತೊಟ್ಟವರಲ್ಲ. ಮೂರು ಜೊತೆ ಬಟ್ಟೆ ಬಿಟ್ಟು ಇನ್ನೇನೂ ಇರಲಿಲ್ಲ. ಈ ಸರಳತೆಯ ಮಂತ್ರವನ್ನು ಅವರು ತಮ್ಮ ಮಕ್ಕಳಿಗೂ ಕಲಿಸಿದ್ದರು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ, ಯಾರು ಯಾವ ಕೆಲಸ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು ಎಂದಿದ್ದರು. ಆದರೆ ತಂದೆಯ ಉದಾರವಾದಿ ಗುಣಕ್ಕೆ ಮಾರುಹೋದ ಮಕ್ಕಳು, ಅವರೊಂದಿಗೆ ಕೈ ಜೋಡಿಸಿ, ಸರ್ವೋದಯವೇ ಸರಿಯಾದುದೆನಿಸಿ ಮೇಲುಕೋಟೆಯಲ್ಲಿಯೇ ಉಳಿದರು. ಸಮಾಜಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. ಸುರೇಂದ್ರ ಕೌಲಗಿಯವರ ಇನ್ನೊಂದು ಬಹಳ ಮುಖ್ಯವಾದ ಗುಣವೆಂದರೆ, ಸಾರ್ವಜನಿಕ ಬದುಕಿನಲ್ಲಿ ಪಾಲಿಸಿಕೊಂಡು ಬಂದ ಪಾರದರ್ಶಕತೆ. ಅವರ ಜನಪದ ಸೇವಾ ಟ್ರಸ್ಟ್‌ಗೆ ಯಾರೇ ಭೇಟಿ ಕೊಟ್ಟು ಏನನ್ನೇ ಖರೀದಿಸಿದರೂ, ಅದು ‘ಜನಪದ ವಿಚಾರ’ ಮಾಸಿಕದಲ್ಲಿ ಪ್ರಕಟವಾಗುತ್ತಿತ್ತು. ಇಲ್ಲಿಂದ ಇಂಥವರು ಬಂದರು, ಇದನ್ನು ಖರೀದಿಸಿದರು, ಇಷ್ಟು ಕೊಟ್ಟರು... ಬಿಡಿಗಾಸನ್ನೂ ಬಿಡದೆ ದಾಖಲಿಸುತ್ತಿದ್ದರು. ಮೊನ್ನೆ ಮೊನ್ನೆ ದೇವನೂರು ಮಹಾದೇವ, ಪುಟ್ಟಣ್ಣಯ್ಯ ಭಾಗವಹಿಸಿದ್ದ ಸರ್ವೋದಯ ಪಕ್ಷದ ಸಮಾವೇಶವೊಂದನ್ನು ಆಯೋಜಿಸಿದ್ದಾಗಲೂ, ದಾನಿಗಳಿಂದ ಬಂದ ಹಣ, ಖರ್ಚಾಗಿದ್ದು, ಉಳಿದದ್ದು... ಎಂದು ಲೆಕ್ಕ ಒಪ್ಪಿಸಿದ್ದರು. ಈ ರೀತಿ ಯಾರಿದ್ದಾರೆಂದು ಕೇಳಬೇಡಿ, ಬೆಳಕಿಗೆ ಬಾರದ, ಪ್ರಚಾರ ಬಯಸದ ಕೌಲಗಿಯವರಂತಹ ಹಲವರಿದ್ದಾರೆ.

ಅಂತಹವರಿರುವುದರಿಂದಲೇ ದೇಶ ಈಗಲೂ, ಈ ಪ್ರಕ್ಷುಬ್ಧ ಪರಿಸ್ಥಿತಿಯಲ್ಲೂ ತಣ್ಣಗಿರುವುದು. ಕೌಲಗಿಯವರು ಸಾಮಾಜಿಕ ಸ್ವಾಸ್ಥವನ್ನು ಕಾಪಾಡಬಲ್ಲ ಯಾವುದೇ ಜನಪರ ಚಳವಳಿಗಳು, ಸಭೆ ಸಮಾರಂಭಗಳು, ಹೋರಾಟಗಳು ಎಲ್ಲಿಯೇ ನಡೆದರೂ, ಅದಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಹತ್ತಿರದ ಮಂಡ್ಯದಲ್ಲಾದರೆ ಸರಕಾರಿ ಬಸ್‌ನಲ್ಲಿ ಸಾಮಾನ್ಯನಂತೆ ಹೋಗಿ ಭಾಗವಹಿಸುತ್ತಿದ್ದರು. ಕೊನೆ ಕೊನೆಗೆ ಆರೋಗ್ಯ ಕೈ ಕೊಡುವವರೆಗೂ ಹೀಗೆಯೇ ಕ್ರಿಯಾಶೀಲವಾಗಿ, ಸಮಕಾಲೀನ ಆಗುಹೋಗುಗಳಿಗೆ ಆಸ್ಥೆಯಿಂದ ಸ್ಪಂದಿಸುತ್ತಲೇ ಇದ್ದರು. ಕೌಲಗಿಯವರ ಮತ್ತೊಂದು ದಿಟ್ಟ ದೃಢ ನಿಲುವೆಂದರೆ, ತಮ್ಮ ಕರ್ಮಭೂಮಿಗೆ ಇಲ್ಲಿಯವರೆಗೆ ಯಾವ ರಾಜಕಾರಣಿಯನ್ನೂ ಮತ್ತು ಅಧಿಕಾರಿಯನ್ನೂ ಆಹ್ವಾನಿಸದೇ ಇರುವುದು. ಅವರ ಮರ್ಜಿ, ಮುಲಾಜಿಗೆ ಒಳಗಾದರೆ ಸೇವಾ ಸಂಸ್ಥೆಯ ದ್ಯೇಯೋದ್ದೇಶಗಳು ದಿಕ್ಕು ತಪ್ಪಲಿವೆ ಎಂಬುದನ್ನು ತಮ್ಮ ಅನುಭವದಿಂದ ಅರಿತಿದ್ದರು. ಆದರೆ ಹೊಸ ತಲೆಮಾರಿನ ಲೇಖಕರು, ಚಿಂತಕರು ಮತ್ತು ಯುವಕರೊಂದಿಗೆ ಕೂತು ಗಂಟೆಗಟ್ಟಲೆ ಚರ್ಚಿಸುತ್ತಿದ್ದರು. ಆಧುನಿಕ ಜಗತ್ತಿನ ವಿದ್ಯಮಾನಗಳ ಬಗ್ಗೆ ಕುತೂಹಲದಿಂದ ಕೇಳಿ ತಿಳಿದುಕೊಳ್ಳುತ್ತಿದ್ದರು. ಇಳಿವಯಸ್ಸಿನಲ್ಲಿಯೂ ಪತ್ರಿಕೆಗಳಿಗೆ ಲೇಖನ ಬರೆಯುವ, ಓದುವ ಉತ್ಸಾಹವನ್ನಿಟ್ಟುಕೊಂಡಿದ್ದರು.

ಇಂತಹ ಮಾನವತಾವಾದಿ ಸುರೇಂದ್ರ ಕೌಲಗಿಯ ವರಿಗೆ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಜಮ್ನಲಾಲ್ ಬಜಾಜ್ ಪ್ರಶಸ್ತಿ ಹಾಗೂ ಹೆಗ್ಗೋಡಿನ ದೇಸಿ ಸಂಸ್ಥೆ ನೀಡುವ ದಾಸಿಮಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈಗ ಮೇಲುಕೋಟೆಯ ಕೌಲಗಿಯವರ ಕರ್ಮಭೂಮಿ ಯಲ್ಲಿ ದತ್ತುಕೇಂದ್ರ, ಖಾದಿ ಕೈಮಗ್ಗ, ನೈಸರ್ಗಿಕ ಬಣ್ಣದ ಘಟಕ ಮತ್ತು ಹೊಸ ಜೀವನ ದಾರಿ- ಯುವಕರಿಗೆ ತರಬೇತಿ ಶಿಬಿರಗಳೆಂಬ ಚಟುವಟಿಕೆಗಳು ಮಗ ಸಂತೋಷ್ ಕೌಲಗಿಯವರ ಉಸ್ತುವಾರಿಯಲ್ಲಿ ಮುಂದು ವರೆದಿವೆ. ಗಾಂಧಿ-ವಿನೋಭಾ-ಜೆಪಿಗಳ ಪ್ರಭಾವಕ್ಕೆ ಒಳಗಾದ ಕೌಲಗಿಯವರು, ಸುಸ್ಥಿರ ಸಮಾಜ ನಿರ್ಮಾಣಕ್ಕಾಗಿ ಜೀವ ಸವೆಸಿದರು. ಸವೆಸುವ ಮೂಲಕ ಗಾಂಧಿ ಚಿಂತನೆ ಗಳನ್ನು ಜೀವಂತವಾಗಿಟ್ಟವರು. ಅವರು ಬಿಟ್ಟುಹೋದ ಭೂಮಿಕೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಗಾಂಧಿಪ್ರಿಯರೆಲ್ಲ ಕೈಜೋಡಿಸಬೇಕಾದ ಅಗತ್ಯವಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top