---

ತದ್ರೂಪಿ ರಾಜಕೀಯ!

ಬದಲಾದ ಸನ್ನಿವೇಶಗಳಿಗೆ ತಕ್ಕಂತೆ ನಮ್ಮ ಎರಡೂ ರಾಷ್ಟ್ರೀಯ ಪಕ್ಷಗಳ ಪಾತ್ರನಿರ್ವಹಣೆ ಒಂದೇ ದಿಕ್ಕಿನಲ್ಲಿ ನಡೆಯುತ್ತಿರುವಂತೆ ಕಾಣುತ್ತಿದೆ. ಮೊನ್ನೆ ನಡೆದ ಗುಜರಾತ್ ಚುನಾವಣೆಗಳ ಪ್ರಚಾರ ವೈಖರಿಯನ್ನು ಮತ್ತು ಮುಂದಿನ ತಿಂಗಳುಗಳಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯದ ವಿಧಾನಸಭೆಗಳಿಗೆ ನಡೆಯುತ್ತಿರುವ ತಯಾರಿಗಳನ್ನು ಸೂಕ್ಷ್ಮವಾಗಿ ನೋಡಿದರೆ ಈ ಎರಡು ಪಕ್ಷಗಳೊಳಗೆ ನಡೆಯುತ್ತಿರುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಕಾಂಗ್ರೆಸ್ ಪಕ್ಷ ಭಾಜಪದ ಮತ್ತೊಂದು ರೂಪವಾಗಿ, ಭಾಜಪ ಕಾಂಗ್ರೆಸ್‌ನ ಮತ್ತೊಂದು ರೂಪವಾಗಿ ಹೊರಹೊಮ್ಮುತ್ತಿರುವ ಈ ಬದಲಾವಣೆ ಪ್ರಾರಂಭವಾಗಿದ್ದು ಬಹುಶ: 2017ರ ಹಲವು ರಾಜ್ಯಗಳ ಚುನಾವಣಾ ಫಲಿತಾಂಶಗಳು ಹೊರಬಿದ್ದನಂತರವೇ. ಅದನ್ನು ಹೀಗೆ ನೋಡಬಹುದು.

    ಗುಜರಾತ್ ವಿಧಾನಸಭಾ ಚುನಾವಣೆಗಳ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ಭಾಜಪಕ್ಕೆ ತನ್ನ ಗೆಲುವು ಕಷ್ಟವೆಂಬುದು ಅರ್ಥವಾಗತೊಡಗಿತ್ತು. ಆಗ ಅದಕ್ಕೆ ತನ್ನ ಹಿಂದುತ್ವದ ಮಂತ್ರವನ್ನು, ದೇಶಭಕ್ತಿ-ದೇಶದ್ರೋಹದ ಆಯುಧಗಳನ್ನು ಝಳಪಿಸಲೇ ಬೇಕಾದ ಅನಿವಾರ್ಯತೆ ಬಂದೊದಗಿತು. ಇದರ ಪರಿಣಾಮವಾಗಿ ಮೊದಲ ಹಂತದ ಪ್ರಚಾರದಲ್ಲಿ ‘ಸಬ್ ಕಾ ವಿಕಾಸ್-ಸಬ್ ಕಾ ಸಾಥ್’ ಬಗ್ಗೆ, ಅಭಿವೃದ್ಧಿಯ ಬಗ್ಗೆ, ಇಂಡಿಯಾವನ್ನು ವಿಶ್ವಗುರುವನ್ನಾಗಿ ಮಾಡುವ ಬಗ್ಗೆ ಮಾತಾಡುತ್ತಿದ್ದ ನಮ್ಮ ಪ್ರಧಾನಮಂತ್ರಿಯವರು ಜ್ಞಾನೋದಯವಾದವರಂತೆ ಭಾಜಪವನ್ನು ಸೋಲಿಸಲು ಕಾಂಗ್ರೆಸ್ ಪಾಕಿಸ್ತಾನದ ಜೊತೆ ಸಂಚುನಡೆಸುತ್ತಿದೆ ಎನ್ನುವಂತಹ ಆರೋಪಗಳನ್ನು ಮಾಡುತ್ತ್ತಾ, ಧರ್ಮಾಧಾರಿತ ವಿಷಯಗಳನ್ನು ಪ್ರಸ್ತಾಪಿಸತೊಡಗಿದರು.ಇದೇ ಸಮಯದಲ್ಲಿ ಕಾಂಗ್ರೆಸ್‌ನ ನಾಯಕರೊಬ್ಬರ ‘ನೀಚ’ ಎಂಬ ಹೇಳಿಕೆ ಮೋದಿಯವರಿಗೆ ಅನಿರೀಕ್ಷಿತವಾದ ಜಾತಿಯ ಶಸ್ತ್ರವೊಂದನ್ನು ನೀಡಿತು. ತಾನು ನೀಚಜಾತಿಯವನೆಂಬ ಕಾರಣಕ್ಕೆ ಕಾಂಗ್ರೆಸ್ ತನ್ನನ್ನು ವಿರೋಧಿಸುತ್ತಿದೆ ಎಂದು ಬಹಿರಂಗ ಸಭೆಗಳಲ್ಲಿ ಬಾವುಕರಾಗಿ ಹೇಳುತ್ತಾ ಗುಜರಾತಿನ ಹಿಂದುಳಿದವರ್ಗಗಳ ಮತ ಸೆಳೆಯುವಲ್ಲಿ ಸಫಲರಾದರು. ಇದನ್ನು ಅರ್ಥ ಮಾಡಿಕೊಂಡಂತೆ ಕಾಂಗ್ರೆಸ್‌ನ ನಾಯಕರಾದ ರಾಹುಲ್ ಗಾಂಧಿಯವರು ತಾವು ಹಿಂದೂ ವಿರೋಧಿ ಅಲ್ಲವೆಂದು ತೋರಿಸಿ ಕೊಳ್ಳಲು ಗುಜರಾತಿನ ಇದ್ದಬದ್ದ ದೇವಾಲಯಗಳನ್ನು ಸುತ್ತ ತೊಡಗಿದರು. ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಗಳನ್ನು ನಿರ್ಲಕ್ಷಿಸಿದಂತೆ ಒಂದೊಂದೇ ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ತಾನು ಸಹ ಹಿಂದೂ, ಎಂದು ತನ್ನ ಜನಿವಾರ ತೋರಿಸುತ್ತ, ತಾನು ಶಿವಭಕ್ತ ಎಂದೆಲ್ಲಾ ಹೇಳಿ ಬಹುಸಂಖ್ಯಾತ ಹಿಂದೂಗಳ ಓಲೈಕೆಯಲ್ಲಿ ತೊಡಗಿಸಿಕೊಂಡರು. ಅಲ್ಲಿಗೆ ಗುಜರಾತಿನ ಮಟ್ಟಿಗೆ ಭಾಜಪದ ಉಗ್ರ ಹಿಂದುತ್ವಕ್ಕೆ ಕಾಂಗ್ರೆಸ್ ತನ್ನ ಸೌಮ್ಯ ಹಿಂದುತ್ವದ ಮೂಲಕ ಸವಾಲೆಸೆಯುವಲ್ಲಿ ನಿರತವಾಯಿತು. ಅಂತಿಮವಾಗಿ ಫಲಿತಾಂಶಗಳು ಬಂದಾಗ ಭಾಜ ತಿಣುಕಾಡಿ ಗೆಲುವಿನ ದಡ ಸೇರಿತ್ತು.

  ಅಲ್ಲಿಗೆ ಕಾಂಗ್ರೆಸ್ ನಾಯಕರಿಗೆ ಒಂದು ಅಂಶ ಅರ್ಥವಾಗಿತ್ತು, ಅದೆಂದರೆ ಭಾಜಪದ ಹಿಂದುತ್ವಕ್ಕೆ ತನ್ನ ಜಾತ್ಯತೀತತೆಯ ಮಂತ್ರ ಸಾಟಿಯಾಗಲಾರದೆಂದು. ಹಾಗಾಗಿಯೇ ಕಾಂಗ್ರೆಸ್ ಮೃದು ಹಿಂದುತ್ವದ ಹಿಂದೆ ಬಿದ್ದಿದೆ. ಇದಕ್ಕೆ ಪೂರಕವಾಗಿ ಮೊನ್ನೆ ರಾಹುಲ್ ಗಾಂಧಿಯವರು ತಮ್ಮ ಸ್ವಕ್ಷೇತ್ರವಾದ ಉತ್ತರಪ್ರದೇಶದ ಅಮೇಠಿಗೆ ಭೇಟಿ ನೀಡಿದಾಗ ಮಾಡಿದ ಮೊದಲ ಕೆಲಸವೆಂದರೆ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು. ಬಹುಶ; ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿಯವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದಾಗ ದೇವಾಲಯವೊಂದನ್ನು ಸಂದರ್ಶಿಸಿ ಪೂಜೆ ಸಲ್ಲಿಸಿದ್ದು! ವಿಶೇಷವೆಂದರೆ ತಮ್ಮ ಸ್ವಕ್ಷೇತ್ರ ಭೇಟಿಗೆ ಮಕರ ಸಂಕ್ರಾಂತಿಯ ಆಸುಪಾಸಿನ ದಿನಗಳನ್ನು ಆಯ್ಕೆ ಮಾಡಿಕೊಂಡ ರಾಹುಲ್ ಗಾಂಧಿ, ಮತ್ತೊಂದು ದೇವಸ್ಥಾನದಲ್ಲಿ ನಡೆಯುತ್ತಿದ್ದ ಹೋಮಹವನಗಳಲ್ಲಿ ಭಾಗವಹಿಸಿ ಬ್ರಾಹ್ಮಣರಿಗೆ ನೀಡಲಾಗುವ ಕಿಚಡಿ ರೂಪದ ಅನ್ನದಾನದಲ್ಲಿ ಭಾಗವಹಿಸಿದರು. ರಾಹುಲ್ ಗಾಂಧಿಯವರ ಬದಲಾದ ಈ ನಡವಳಿಕೆಯನ್ನು ತೀರಾ ಖಾಸಗಿ ಎಂದು ತಳ್ಳಿ ಹಾಕಲು ಸಾಧ್ಯವಿಲ್ಲ. ಯಾಕೆಂದರೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾದ ಅವರ ಈ ಬದಲಾವಣೆಯ ಹಿಂದೆ ನಿಶ್ಚಿತವಾಗಿಯೂ ಅವರ ಪಕ್ಷದ ರಾಜಕೀಯ ನಿಲುವಿನಲ್ಲಾಗಬಹುದಾದ ಅಲ್ಪಮಟ್ಟಿಗಿನ ಬದಲಾವಣೆಯೂ ಥಳಕುಹಾಕಿಕೊಂಡಿರುವಂತೆ ಕಾಣುತ್ತಿದೆ.

 ಕಾಂಗ್ರೆಸ್‌ನ ಈ ಮೃದು ಹಿಂದುತ್ವದ ಬದಲಾವಣೆಯ ಒಂದಿಷ್ಟು ಪರಿಣಾಮಗಳನ್ನು ಕರ್ನಾಟಕದಲ್ಲಿಯೂ ನಾವು ಕಾಣಬಹುದಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಎಲ್ಲಾ ಪಕ್ಷಗಳು ವಿವಿಧ ಹೆಸರಿನ ಯಾತ್ರೆಗಳ ಮೂಲಕ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿವೆ. ರಾಜ್ಯದ ಅಭಿವೃದ್ಧಿಯ ವಿಚಾರವನ್ನಾಗಲಿ, ಕೃಷಿಸಮಸ್ಯೆಗಳನ್ನಾಗಲಿ, ನಿರುದ್ಯೋಗ ಸಮಸ್ಯೆಯನ್ನಾಗಲಿ ಮುಂಚೂಣಿಗೆ ತಂದು ಚರ್ಚಿಸಲು ಇಚ್ಛಿಸದ ಪಕ್ಷಗಳು ಜಾತಿ, ಧರ್ಮದಂತಹ ಭಾವನಾತ್ಮಕ ವಿಚಾರಗಳ ಬಗ್ಗೆ ಆರೋಪ ಪ್ರತ್ಯಾರೋಪ ಮಾಡುತ್ತಾ ಕಾಲಹರಣ ಮಾಡುತ್ತಿವೆ. ಭಾಜಪದ ಹಿಂದುತ್ವದ ಪ್ರಚಾರಕ್ಕೆ ಉತ್ತರವಾಗಿ ಕಾಂಗ್ರೆಸ್ ಸಹ ತನ್ನ ಹಿಂದುತ್ವದ ಪರವಾದ ನಿಲುವುಗಳನ್ನು ಸಾರ್ವಜನಿಕವಾಗಿ ಹೇಳುತ್ತ ಹೋಗುತ್ತಿದೆ. ಇದಕ್ಕೆ ಉದಾಹರಣೆಯೆಂದರೆ ಭಾಜಪದ ಹಿಂದುತ್ವದ ಮಾತಿಗೆ ಉತ್ತರ ನೀಡುವ ಭರದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಾವು ನಿಜವಾದ ಹಿಂದು, ತಾವು ದೇವಸ್ಥಾನಗಳ ವಿರೋಧಿಯಲ್ಲ ಎನ್ನುತ್ತಾ ತಾವು ಬಹುಸಂಖ್ಯಾತರ ವಿರೋಧಿಯಲ್ಲ ಎನ್ನುವುದನ್ನು ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೇ ಇವತ್ತು ರಾಜ್ಯ ಕಾಂಗ್ರೆಸ್‌ನ ಹಲವಾರು ನಾಯಕರು ತಾವು ಸಹ ಹಿಂದೂಗಳೇ ಎಂದು ಹೇಳುತ್ತ ಹೋಗುತ್ತಿದ್ದಾರೆ.ಇದರ ಜೊತೆಗೆ ಇತ್ತೀಚೆಗೆ ರಾಹುಲ್ ಗಾಂಧಿಯವರು ಭಾಜಪದ ಟೀಕೆಗಳಿಗೆ ಉತ್ತರ ನೀಡಬೇಕಾದರೆ ಬಹಳ ಎಚ್ಚರಿಕೆಯಿಂದ ಉತ್ತರ ನೀಡಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರುಗಳಿಗೆ ಸೂಚನೆ ನೀಡಿರುವುದರ ಹಿಂದಿರುವುದು ಹಿಂದುತ್ವದ ವಿಚಾರದಲ್ಲಿ ಕಾಂಗ್ರೆಸ್ ವಿವಾದಾಸ್ಪದ ಹೇಳಿಕೆಗಳನ್ನು ನೀಡಬಾರದೆಂಬ ಎಚ್ಚರಿಕೆಯೇ ಹೊರತು ಬೇರೇನಲ್ಲ.

  ಒಟ್ಟಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳೂ ಹಿಂದುತ್ವದ ಬಗ್ಗೆ ಮಾತನಾಡುತ್ತಾ ಜನಪರ ಸಮಸ್ಯೆಗಳನ್ನು ಕಡೆಗಣಿಸುತ್ತಿವೆ. ಆದರೆ ಈ ಎರಡೂ ಪಕ್ಷಗಳ ಹಿಂದುತ್ವದ ಅಜೆಂಡಾದಲ್ಲಿ ಒಂದು ಸ್ಪಷ್ಟವಾದ ವ್ಯತ್ಯಾಸ ಕಂಡುಬರುತ್ತಿದೆ. ಭಾಜಪ ತನ್ನ ಹಿಂದುತ್ವದ ಪ್ರತಿಪಾದನೆಯಲ್ಲಿ ಅಲ್ಪಸಂಖ್ಯಾತವಿರೋಧಿ ಎನ್ನುವ ಹಣೆಪಟ್ಟಿಗೆ ಒಳಗಾಗಿದ್ದರೆ ಕಾಂಗ್ರೆಸ್ ಸರ್ವಧರ್ಮಗಳನ್ನು ಒಳಗೊಂಡಿರುವ ಉದಾರ ಹಿಂದುತ್ವದ ಪ್ರತಿಪಾದನೆ ಮಾಡುತ್ತಿರುವಂತೆ ತೋರಿಸಿಕೊಳ್ಳುತ್ತಿದೆ. ಇದು ಕಾಂಗ್ರೆಸ್ ಸಹ ಇನ್ನೊಂದು ಭಾಜಪ ಆಗುವ ಹಾದಿಯಲ್ಲಿರುವಂತೆ ನಡೆದುಕೊಳ್ಳುವ ರೀತಿ.

ಬಹುಶ: 2013ರ ಹೊತ್ತಿಗೆ ನರೇಂದ್ರಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ತನಕವೂ ಭಾಜಪ ತಾನು ಕಾಂಗ್ರೆಸ್‌ಗಿಂತ ಭಿನ್ನಪಕ್ಷವೆಂದು ಹೇಳಿಕೊಳ್ಳುತ್ತಿತ್ತು ಮತ್ತು ಕೆಲ ಮಟ್ಟಿಗೆ ಹಾಗೆ ನಡೆದುಕೊಳ್ಳಲು ಪ್ರಯತ್ನಿಸುತ್ತಿತ್ತು. ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಭಾಜಪ, ಅದರ ಜೊತೆಗೇನೆ ಕಾಂಗ್ರೆಸ್‌ನ ದಿಲ್ಲಿಯ ಹೈಕಮ್ಯಾಂಡ್ ಸಂಸ್ಕೃತಿಯನ್ನೂ ಕಟುವಾದ ಶಬ್ದಗಳಲ್ಲಿ ಖಂಡಿಸುತ್ತ ಪ್ರಾದೇಶಿಕ ನಾಯಕತ್ವದ ಬಗ್ಗೆ, ಸಾಮೂಹಿಕ ಹೊಣೆಗಾರಿಕೆಯ ಬಗ್ಗೆ ಉದ್ದಾನುಉದ್ದದ ಭಾಷಣಗಳನ್ನು ಬಿಗಿಯುತ್ತಿತ್ತು.

ಆದರೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗುವುದರೊಂದಿಗೆ ಭಾಜಪದ ಸಾಮೂಹಿಕ ನಾಯಕತ್ವದ ಮಾತುಗಳು ಕಣ್ಮರೆಯಾಗತೊಡಗಿದವು. ಬದಲಿಗೆ ಇಡೀ ಪಕ್ಷದ ಆಗುಹೋಗುಗಳು ನರೇಂದ್ರ ಮೋದಿಯವರು ಮತ್ತು ಪಕ್ಷದ ರಾಷ್ಟ್ರಾದ್ಯಕ್ಷರಾದ ಅಮಿತ್ ಶಾರವರ ನಿರ್ದೇಶನದಂತೆ ನಡೆಯ ತೊಡಗಿದವು. ಹಿರಿಯ ನಾಯಕರನ್ನು ಬದಿಗೆ ಸರಿಸುತ್ತಾ ಬಂದ ಈ ಜೋಡಿ ನಂತರದಲ್ಲಿ ಪಕ್ಷದೆಲ್ಲಾ ನಿರ್ಧಾರಗಳನ್ನೂ ಏಕಪಕ್ಷೀಯವಾಗಿ ತೆಗೆದುಕೊಳ್ಳತೊಡಗಿತು. ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗಳನ್ನು ಗೆದ್ದ ನಂತರ ಅದು ಅಲ್ಲಿನ ಬಹುತೇಕ ಹಿರಿಯ ನಾಯಕರನ್ನು ಕಡೆಗಣಿಸಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಹೊಸ ನಾಯಕರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸುವಲ್ಲಿ ಸಫಲವಾಯಿತು. ಅದೇ ರೀತಿ ಉತ್ತರಪ್ರದೇಶದ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದಾಗಲೂ ಮೊದಿ-ಶಾ ಜೋಡಿ ಎಲ್ಲರಿಗೂ ಅಚ್ಚರಿ ನೀಡುವ ರೀತಿಯಲ್ಲಿ ಸಂಸದರಾಗಿದ್ದ ಯೋಗಿ ಆಧಿತ್ಯನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಉತ್ತರಪ್ರದೇಶದ ಶಾಸಕರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿತು.

ಇನ್ನು ಇವತ್ತಿನ ಕರ್ನಾಟಕದ ಚುನಾವಣೆಗಳ ವಿಷಯಕ್ಕೆ ಬಂದರೆ ರಾಜ್ಯ ಭಾಜಪ ನಾಯಕರು ಟಿಕೆಟ್ ನೀಡುವ ಬಗ್ಗೆ ಯಾರಿಗೂ ಮಾತು ಕೊಡುವಂತಿಲ್ಲ. ಎಲ್ಲಾ ಟಿಕೆಟ್‌ಗಳನ್ನು ದಿಲ್ಲಿಯಲ್ಲಿ ಕೂತು ತಾವೇ ಹಂಚುವುದಾಗಿ ಇತೀಚೆಗೆ ಅದರ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿರುವುದು ಭಾಜಪ ಸಹ ಕಾಂಗ್ರೆಸ್‌ನಂತೆಯೇ ದಿಲ್ಲಿಯ ನಾಯಕರ ಆಣತಿಗೆ ಕಾಯುವ ಸ್ಥಿತಿಗೆ ಬಂದು ನಿಂತಿರುವುದನ್ನು ತೋರಿಸುತ್ತಿದೆ. ಇವತ್ತು ರಾಜ್ಯ ವಿಧಾನಸಭೆಯ ಚುನಾವಣೆಯ ಪ್ರಚಾರದಲ್ಲಿ ಪ್ರಸ್ತಾಪಿಸಬೇಕಾಗಿರುವ ವಿಚಾರಗಳಿಗಾಗಿ ರಾಜ್ಯ ಭಾಜಪ ನಾಯಕರು ದಿಲ್ಲಿಯತ್ತ ನೋಡಬೇಕಾದ ಸ್ಥಿತಿ ಬಂದೊದಗಿದೆ. ಬಹುಶಃ ಪ್ರಾದೇಶಿಕ ನಾಯಕತ್ವದ ಬಗ್ಗೆ ಭಾಜಪದ ಹೈಕಮ್ಯಾಂಡಿಗೆ ಇರುವ ಅಲಕ್ಷ್ಯ ಮತ್ತು ಅಸಡ್ಡೆಯನ್ನು ಇದು ತೋರಿಸುತ್ತದೆ. ಸಾಮೂಹಿಕ ನಾಯಕತ್ವದ ಮಾತಿಗೆ ಎಳ್ಳುನೀರು ಬಿಟ್ಟಿರುವ ಭಾಜಪ ಕಾಂಗ್ರೆಸ್ ರೀತಿಯಲ್ಲಿಯೇ ಕೇಂದ್ರೀಕೃತ ಅಧಿಕಾರವ್ಯವಸ್ಥೆಯ ಪಕ್ಷವಾಗಿ ಬದಲಾಗುತ್ತಿದೆ.

ಹೀಗೆ ಒಂದೆಡೆ ಕಾಂಗ್ರೆಸ್ ನಿಧಾನವಾಗಿ ಭಾಜಪದ ಮತೀಯವಾದದ ಕಡೆಗೆ ವಾಲುತ್ತಿದ್ದರೆ, ಭಾಜಪ ಕಾಂಗ್ರೆಸ್‌ನಂತೆಯೇ ಏಕವ್ಯಕ್ತಿಪಕ್ಷವಾಗಿ ಬದಲಾಗುತ್ತಿದೆ. ಅಂತಿಮವಾಗಿ ನಮ್ಮನ್ನಾಳುವ ಎರಡೂ ರಾಷ್ಟ್ರೀಯ ಪಕ್ಷಗಳು ತದ್ರೂಪಿಗಳಾಗುತ್ತಿವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top