ನಾವು ನಿರ್ಲಕ್ಷಿಸಿರುವ ಈಶಾನ್ಯ ರಾಜ್ಯಗಳ ಚುನಾವಣೆಗಳು: ತ್ರಿಪುರಾ-ಎಡರಂಗದ ಗೆಲುವು ಮುಂದುವರಿಯಲಿದೆಯೇ?

ಇಂಡಿಯಾದ ರಾಜಕಾರಣವೇ ಅಂತಾದ್ದು. ಅದು ಲೋಕಸಭಾ ಚುನಾವಣೆಗಳಿರಲಿ ಇಲ್ಲ, ರಾಜ್ಯ ವಿಧಾನಸಭಾ ಚುನಾವಣೆಗಳಿರಲಿ ಮಾಧ್ಯಮಗಳು ಅವನ್ನು ಒಂದು ಯುದ್ಧವೆಂಬಂತೆ ಚಿತ್ರಿಸುತ್ತ ತಿಂಗಳುಗಟ್ಟಳೆ ಚುನಾವಣಾ ವಾತಾವರಣವನ್ನು ದೇಶದಾದ್ಯಂತ ಸೃಷ್ಟಿಸುವುದು ಮಾಮೂಲಿ. ಆದರೆ ಇದು ಅನ್ವಯವಾಗುವುದು ದೇಶದ ದೊಡ್ಡ ಮತ್ತು ಅಭಿವೃದ್ಧಿಯಾದ ಕೆಲವೇ ಕೆಲವು ರಾಜ್ಯಗಳ ಚುನಾವಣೆಗಳಿಗೆ ಮಾತ್ರ. ಆಗಾಗ ಇಂಡಿಯಾದ ಕೇಂದ್ರ ಸರಕಾರಗಳು ಮತ್ತು ರಾಷ್ಟ್ರೀಯ ಮಾಧ್ಯಮಗಳು ತಮ್ಮನ್ನು ನಿರ್ಲಕ್ಷಿಸಿವೆ ಎನ್ನುವ ಆರೋಪವನ್ನು ಈಶಾನ್ಯ ರಾಜ್ಯಗಳ ಜನತೆ ಮಾಡುತ್ತಾ ಬಂದಿದ್ದರೆ ಅದಕ್ಕೆ ಇದೂ ಒಂದು ಕಾರಣ. ಕೇವಲ ಚುನಾವಣೆಗಳು ಮಾತ್ರವಲ್ಲ, ಈಶಾನ್ಯರಾಜ್ಯಗಳ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ, ಅಲ್ಲಿನ ಜನಾಂಗೀಯ ಸಮಸ್ಯೆಗಳ ಬಗ್ಗೆಯೂ ಇಂಡಿಯಾದ ಇತರೇ ಭಾಗದ ಜನರಿಗಿರುವುದು ದಿವ್ಯ ನಿರ್ಲಕ್ಷ್ಯ ಮತ್ತು ನಿರಾಸಕ್ತಿ. ಹೀಗಾಗಿಯೇ ಸ್ವಾತಂತ್ರಬಂದ ನಂತರದಿಂದ ಇವತ್ತಿನವರೆಗೂ ಆ ಭಾಗದ ಜನರಲ್ಲಿ ಪ್ರತ್ಯೇಕತೆಯ ಭಾವವೊಂದು ಮೂಡಿಬಿಟ್ಟಿದೆ.

 ಗೋವಾ, ಪುದುಚೇರಿಯಂತಹ ಪುಟ್ಟ ರಾಜ್ಯಗಳ ರಾಜಕೀಯ ಬೆಳವಣಿಗೆಗಳಿಗೆ ಮತ್ತು ಅಲ್ಲಿನ ಚುನಾವಣಾ ರಾಜಕೀಯಕ್ಕೆ ನಾವು ನೀಡುತ್ತಿರುವ ಪ್ರಚಾರದ ಮತ್ತು ಪ್ರಾಮುಖ್ಯತೆಯ ಕನಿಷ್ಠ ಹತ್ತನೇ ಒಂದರಷ್ಟನ್ನಾದರೂ ನಮ್ಮ ಮಾಧ್ಯಮಗಳು ನೀಡಿದ್ದರೆ ಆ ರಾಜ್ಯಗಳ ಜನತೆಗೆ ಇಂತಹದೊಂದು ತಾರತಮ್ಯದ ಭಾವ ಹುಟ್ಟುತ್ತಿರಲಿಲ್ಲ. ಇವತ್ತಿಗೂ ನಮ್ಮ ಬಹಳಷ್ಟು ಮಾಧ್ಯಮಗಳಲ್ಲಿರುವವರಿಗೆ ಈಶಾನ್ಯರಾಜ್ಯಗಳ ರಾಜಕೀಯ ಪಕ್ಷಗಳ ಬಗ್ಗೆಯಾಗಲಿ, ರಾಜಕೀಯ ನಾಯಕರ ಬಗ್ಗೆಯಾಗಲಿ ಹೆಚ್ಚಿನ ಮಾಹಿತಿಯೇ ಇಲ್ಲವೆಂದರೂ ತಪ್ಪೇನಿಲ್ಲ. ಆ ಮಟ್ಟಿಗೆ ನಾವು ಆ ರಾಜ್ಯಗಳನ್ನು ಕಡೆಗಣಿಸಿ ಬಿಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ ಇದೇ ಫೆಬ್ರವರಿ ಹದಿನೆಂಟರಂದು ಈಶಾನ್ಯದ ಮೂರು ಮುಖ್ಯರಾಜ್ಯಗಳಾದ ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳ ಬಗ್ಗೆ ಮತ್ತು ಅಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಒಂದಿಷ್ಟಾದರೂ ತಿಳಿದುಕೊಳ್ಳುವುದು ಅಗತ್ಯವೆನಿಸುತ್ತಿದೆ. ಈ ನಿಟ್ಟಿನಲ್ಲಿ ಮೊದಲಿಗೆ ತ್ರಿಪುರ ರಾಜ್ಯದ ಬಗ್ಗೆ ನೋಡೋಣ:

 ಈ ಬಾರಿಯ ತ್ರಿಪುರಾ ರಾಜ್ಯದ ಚುನಾವಣೆ ಮುಖ್ಯವಾಗುವುದು ಮೂರು ಕಾರಣಗಳಿಗಾಗಿ. ಮೊದಲನೆಯದು ದೇಶದಲ್ಲಿ ವರ್ತಮಾನದಲ್ಲಿ ಎಡಪಕ್ಷಗಳು ಆಡಳಿತ ನಡೆಸುತ್ತಿರುವ ಎರಡು ರಾಜ್ಯಗಳಲ್ಲಿ ತ್ರಿಪುರಾ ಸಹ ಒಂದಾಗಿರುವುದು. ಎರಡನೆಯದು, ತ್ರಿಪುರಾದಲ್ಲಿ ಎಡಪಕ್ಷವು ಕಳೆದ ಐದು ದಾಖಲೆ ಅವಧಿಯ (ಇಪ್ಪತ್ತೈದು ವರ್ಷಗಳು) ಆಡಳಿತ ನಡೆಸುತ್ತಿರುವುದಾಗಿದೆ. ಮೂರನೆಯದು, ತ್ರಿಪುರಾದಲ್ಲಿ ಈಗ ರಾಜ್ಯಭಾರ ನಡೆಸುತ್ತಿರುವ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಇಂಡಿಯಾದ ಅತ್ಯಂತ ಬಡ ಮತ್ತು ಸರಳ ಮುಖ್ಯಮಂತ್ರಿಯಾಗಿರುವುದು.

ತ್ರಿಪುರಾ ವಿಧಾನಸಭೆಯ ಒಟ್ಟು 60 ಸ್ಥಾನಗಳ ಪೈಕಿ 49 ಸ್ಥಾನಗಳನ್ನು ಗೆದ್ದು ಅಧಿಕಾರ ನಡೆಸುತ್ತಿರುವ ಸಿಪಿಎಂ ಈ ಬಾರಿಯೂ ತನ್ನ ಎಡಪಕ್ಷಗಳ ಮೈತ್ರಿಕೂಟದ ನೇತೃತ್ವ ವಹಿಸಿದೆ. ಸಿಪಿಐ ಮತ್ತು ರೆವಲೂಷನರಿ ಸೋಷಿಯಲಿಸ್ಟ್ ಪಾರ್ಟಿ(ಆರ್‌ಎಸ್‌ಪಿ) ಅದರ ಮಿತ್ರ ಪಕ್ಷಗಳಾಗಿವೆ. ಕಳೆದ ಬಾರಿಯಂತೆ ಈ ಬಾರಿಯೂ ಇದೇ ಮೈತ್ರಿಕೂಟ ಮಾಣಿಕ್ ಸರ್ಕಾರ್ ಮುಂದಾಳುತ್ವದಲ್ಲಿ ಚುನಾವಣೆಗಳನ್ನು ಎದುರಿಸಲು ಸಿದ್ಧವಾಗಿದೆ. ಇನ್ನು ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಹತ್ತು ಸ್ಥಾನಗಳನ್ನು ಗೆದ್ದು ಅಧಿಕೃತ ವಿರೋಧಪಕ್ಷವಾಗಿತ್ತು. ಅಲ್ಲಿನ ಇನ್ನೊಂದು ಪ್ರಾದೇಶಿಕ ಪಕ್ಷವಾದ ಐಎನ್‌ಪಿಟಿ ಶೇ. 7.6 ಮತಗಳನ್ನು ಪಡೆದಿದ್ದರೂ ಒಂದು ಸ್ಥಾನವನ್ನೂ ಗೆಲ್ಲಲಾಗಿರಲಿಲ್ಲ. ಇನ್ನು ಭಾಜಪ ಕೇವಲ ಶೇಕಡಾವಾರು 1.5ರಷ್ಟು ಮತಗಳಿಸಿ ವಿಧಾನಸಭೆಯಲ್ಲಿ ತನ್ನ ಖಾತೆ ತೆರೆಯಲು ವಿಫಲವಾಗಿತ್ತು.

 ಇಪ್ಪತ್ತೈದು ವರ್ಷಗಳ ಕಾಲ ಆಡಳಿತ ನಡೆಸಿದ ಎಡರಂಗಕ್ಕೆ ಸಹಜವಾಗಿಯೇ ಒಂದಷ್ಟು ಆಡಳಿತವಿರೋಧಿ ಅಲೆಯಿದ್ದು ಕಾಂಗ್ರೆಸ್ ಅದನ್ನು ಬಳಸಿಕೊಳ್ಳಲು ಪ್ರಯತ್ನ ನಡೆಸಿದೆ. ಆದರೆ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಭಾಜಪ ತ್ರಿಪುರಾವನ್ನು ಗೆಲ್ಲಲು ಎಲ್ಲ ವಿಧದ ಚುನಾವಣಾ ತಂತ್ರಗಳನ್ನು ಮಾಡುತ್ತಿದೆ. ಈಗಾಗಲೆ ತನ್ನ ರಾಜಕೀಯ ತಂತ್ರಗಾರಿಕೆಯಿಂದ ಮಣಿಪುರ ಮತ್ತು ಅರಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತಿತರೇ ಪ್ರಾದೇಶಿಕ ಪಕ್ಷಗಳ ಕೈಯಿಂದ ಅಧಿಕಾರ ಕಸಿದುಕೊಂಡು ಈಶಾನ್ಯರಾಜ್ಯಗಳಲ್ಲಿಯೂ ತನ್ನ ಬೇರುಗಳನ್ನು ಬಿಡುತ್ತಿರುವ ಭಾಜಪ ತ್ರಿಪುರಾದಲ್ಲೂ ಎಡರಂಗವನ್ನು ಸೋಲಿಸಿ ಅಧಿಕಾರಕ್ಕೆ ಏರುವ ಕನಸು ಕಾಣುತ್ತಿದೆ. ಇದಕ್ಕಾಗಿ ಕಳೆದೊಂದು ವರ್ಷದಿಂದ ಅದು ಪೂರ್ವಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವುದು ಸುಳ್ಳೇನಲ್ಲ. ಈ ದಿಸೆಯಲ್ಲಿ ಅದು ತ್ರಿಪುರಾದಲ್ಲಿ ನೆಲೆಯಿರುವ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆಗಳನ್ನು ದುರ್ಬಲಗೊಳಿಸುವತ್ತ ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆಯಲ್ಲಿಯೇ ಕಳೆದ ಒಂದು ವರ್ಷದಿಂದ ಭಾಜಪ ತೃಣಮೂಲ ಕಾಂಗ್ರೆಸ್‌ನ ನಾಯಕರನ್ನು ವಿವಿಧ ಆಮಿಷಗಳನ್ನು ಒಡ್ಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಅದರಲ್ಲಿ ಬಹಳ ಮುಖ್ಯವಾದ ನಾಯಕರೆಂದರೆ ತಿಪುರಾ ತೃಣಮೂಲ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾದ ರತನ್ ಚಕ್ರವರ್ತಿ. ಕಳೆದ ವರ್ಷ ಚಕ್ರವರ್ತಿಯವರ ಜೊತೆಗೆ ಸಾವಿರಾರು ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತರು ಭಾಜಪ ಸೇರಿದ್ದರು. ಇವತ್ತಿನವರೆಗೂ ಕಾಂಗ್ರೆಸ್ ಮತ್ತು ಟಿಎಂಸಿ ಪಕ್ಷದಿಂದ ಸ್ಥಳೀಯ ನಾಯಕರನ್ನು ಭಾಜಪಕ್ಕೆ ಸೆಳೆಯುವ ಕಾರ್ಯ ಚಾಲ್ತಿಯಲ್ಲಿದ್ದು ಅವೆರಡೂ ಪಕ್ಷಗಳನ್ನು ತಳ ಮಟ್ಟದಲ್ಲಿ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಜೊತೆಗೆ ಹಲವು ಮಾಜಿ ಶಾಸಕರನ್ನು ಸಹ ಭಾಜಪ ಪಕ್ಷಕ್ಕೆ ಸೇರಿಸಿಕೊಂಡು ತನ್ನ ಬಲ ಹೆಚ್ಚಿಸಿಕೊಳ್ಳುತ್ತಿದೆ. ಪದೇ ಪದೇ ಈಶಾನ್ಯರಾಜ್ಯಗಳಿಗೆ ಭೇಟಿ ನೀಡುತ್ತಿರುವ ಭಾಜಪದ ರಾಷ್ಟ್ರಾಧ್ಯಕ ಅಮಿತ್ ಶಾರವರು ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಅಧಿಕಾರ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಕಾರ ತ್ರಿಪುರಾದಲ್ಲಿ ನಿರುದ್ಯೋಗ ಸಮಸ್ಯೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದು ಇವೆರಡೂ ವಿಷಯಗಳನ್ನು ಚುನಾವಣೆಯ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರಂತೆ. ಇದರ ಜೊತೆಗೆ ಈಗಾಗಲೇ ಸಂಘಪರಿವಾರವು ಈಶಾನ್ಯ ರಾಜ್ಯಗಳಲ್ಲಿ ತನ್ನ ನೆಲೆ ಕಂಡುಕೊಂಡಿದ್ದು, ಅದರ ಪ್ರಭಾವವೂ ಸಾಕಷ್ಟು ಮಟ್ಟಿಗೆ ಚುನಾವಣೆಯಲ್ಲಿ ಆಗಬಹುದೆಂಬ ವಿಶ್ವಾಸವೂ ಭಾಜಪದ ನಾಯಕರಲ್ಲಿ ಇರುವಂತಿದೆ.

ತನಗೆ ನೆಲೆಯಿರದ ರಾಜ್ಯಗಳಲ್ಲಿ ಮಾಡಿದಂತೆಯೇ ಇಲ್ಲಿಯೂ ಭಾಜಪ ಸ್ಥಳೀಯ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅದರ ಮೂಲಕ ತನ್ನ ಬಲ ಹೆಚ್ಚಿಸಿಕೊಳ್ಳುವತ್ತಲೂ ಗಮನ ಹರಿಸಿದೆ. ಅದರ ಪರಿಣಾಮವಾಗಿ ಅದು ಈಗಾಗಲೇ ಐಪಿಎಫ್‌ಟಿ ಎನ್ನುವ ಪ್ರಾದೇಶಿಕ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದು ಅದಕ್ಕೆ ಒಂಬತ್ತು ಸ್ಥಾನಗಳನ್ನು ಬಿಟ್ಟುಕೊಟ್ಟು ತಾನು ಐವತ್ತೊಂದು ಸ್ಥಾನಗಳಲ್ಲಿ ಸ್ಪರ್ಧಿಸಲು ಸಿದ್ಧ್ದತೆ ನಡೆಸಿದ್ದು, ಈಗಾಗಲೇ ನಲವತ್ತಕ್ಕೂ ಅಧಿಕ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಿದೆ.

 ತ್ರಿಪುರಾದಲ್ಲಿ ಹತ್ತು ಸ್ಥಾನಗಳು ಮೀಸಲು ಸ್ಥಾನವಾಗಿದ್ದರೂ ತಾನು ಇತರ ಒಂದು ಸ್ಥಾನದಲ್ಲಿಯೂ ದಲಿತ ಅಭ್ಯರ್ಥಿಯನ್ನು ನಿಲ್ಲಿಸುವುದಾಗಿ ಭಾಜಪ ಹೇಳಿಕೊಂಡಿದೆ. ತನ್ಮೂಲಕ ದಲಿತರ ಮತ ಸೆಳೆಯುವ ಹುನ್ನಾರ ಹೊಂದಿದೆ. ಇದರ ಜೊತೆಗೆ ಹಲವು ಉನ್ನತ ಹುದ್ದೆಗಳಲ್ಲಿರುವ ಸಂಘಪರಿವಾರದ ಬಗ್ಗೆ ಸಹಾನುಭೂತಿ-ಸಹಮತ ಹೊಂದಿರುವ ಅನೇಕ ಗಣ್ಯರನ್ನು ಚುನಾವಣೆಗೆ ನಿಲ್ಲಿಸುವತ್ತಲೂ ಅದು ಮನಸ್ಸು ಮಾಡಿದೆ. ಇದು ಚುನಾವಣಾ ಪೂರ್ವ ಸಿದ್ಧತೆಯಾದರೆ ಚುನಾವಣೆಯ ನಂತರ ಯಾವ ಪಕ್ಷಕ್ಕೂ ಬಹುಮತ ಬರದೇ ಹೋದರೆ ಮಣಿಪುರದಲ್ಲಿ ಮಾಡಿದಂತೆ ಇತರ ಪಕ್ಷಗಳ ಶಾಸಕರನ್ನು ತನ್ನತ್ತ ಸೆಳೆದುಕೊಂಡು ಸರಕಾರ ರಚಿಸಲು ಸಹ ಸಿದ್ಧವಾಗಿದೆ. ಅದಕ್ಕಾಗಿಯೇ ಅದು ಗೆಲ್ಲಬಹುದಾದ ಇತರ ಪಕ್ಷಗಳ ಕೆಲ ಶಾಸಕರನ್ನು ಗುರುತಿಸಿದ್ದು, ಅವರ ಜೊತೆ ಸಂಪರ್ಕ ಸಾಧಿಸಿದೆ. ಆದರೆ ಅಷ್ಟು ಸುಲಭಕ್ಕೆ ಭಾಜಪದ ಈ ತಂತ್ರಗಾರಿಕೆ ಯಶಸ್ವಿಯಾಗುವುದು ಕಷ್ಟ.

ಯಾಕೆಂದರೆ ಇಪ್ಪತ್ತೈದು ವರ್ಷಗಳ ಕಾಲ ಆಡಳಿತ ನಡೆಸಿದ ಎಡರಂಗಕ್ಕೆ ಆಡಳಿತ ವಿರೋಧಿ ಅಲೆ ಇರುವುದು ನಿಜವಾದರೂ, ಯಾವುದೇ ದೊಡ್ಡ ಭ್ರಷ್ಟಾಚಾರದ ಪ್ರಕರಣಗಳು ಸರಕಾರದ ಮೇಲೆ ಇಲ್ಲ. ಮಾಣಿಕ್ ಸರ್ಕಾರ್ ಅವರಂತಹ ಅತ್ಯಂತ ಪ್ರಾಮಾಣಿಕ ಮತ್ತು ಸರಳ ಮುಖ್ಯಮಂತ್ರಿಯನ್ನು ಕಳೆದುಕೊಳ್ಳಲು ತ್ರಿಪುರಾ ಜನತೆಗೆ ಸದ್ಯಕ್ಕಂತೂ ಯಾವ ಕಾರಣಗಳೂ ಇರುವಂತಿಲ್ಲ. ಇದರ ಜೊತೆಯೇ ದೇಶದ ಇತರೇ ಭಾಗದ ರಾಜ್ಯಗಳಲ್ಲಿರುವಂತೆ ತ್ರಿಪುರಾದಂತಹ ರಾಜ್ಯಗಳಲ್ಲಿ ಭಾಜಪದ ಮತೀಯವಾದ ಕೆಲಸ ಮಾಡುವುದು ಕಷ್ಟ. ಕಾಂಗ್ರೆಸ್, ಭಾಜಪ ಎಡರಂಗಗಳ ನಡುವೆ ತ್ರಿಕೋಣ ಸ್ಪರ್ಧೆೆ ನಡೆಯಲಿದ್ದು ಸ್ಥಳೀಯವಾಗಿ ಕಾಂಗ್ರೆಸ್ ತೆಗೆದುಕೊಳ್ಳಬಹುದಾದ ನಿಲುವುಗಳು ಫಲಿತಾಂಶಗಳ ಮೇಲೆ ಪರಿಣಾಮ ಬೀರುವುದು ನಿಶ್ಚಿತ!

 ಆದರೆ ಈಗಾಗಲೇ ಅಸ್ಸಾಂ, ಮಣಿಪುರ ಮತ್ತು ಅರುಣಾಚಲ ಪ್ರದೇಶಗಳನ್ನು ವಶಪಡಿಸಿಕೊಂಡಿರುವ ಭಾಜಪವಂತೂ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ತ್ರಿಪುರಾ ರಾಜ್ಯವನ್ನು ಗೆಲ್ಲಲು ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನೂ ಬಳಸಲು ತಯಾರಾಗಿ ನಿಂತಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top