ಹಲವು ಕುಸಿತಗಳ ನೆನಪುಗಳನ್ನು ಕೆದಕುವ ಮುರ್ಸಿ ಕುಸಿತ | Vartha Bharati- ವಾರ್ತಾ ಭಾರತಿ

ಹಲವು ಕುಸಿತಗಳ ನೆನಪುಗಳನ್ನು ಕೆದಕುವ ಮುರ್ಸಿ ಕುಸಿತ

ಜನರಲ್ ಮುರ್ಸಿ ನಿಧನರಾದರು - ಮೊನ್ನೆ ಸೋಮವಾರ ಈಜಿಪ್ಟ್ ನಲ್ಲಿ ಅಲ್ಲಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿ ನಿಧನರಾದಾಗ ಆ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದ ಕೆಲವರು ಬಳಸಿದ ಪದಗಳು ಇವು. ಅರಬ್ ದೇಶವೊಂದರ ಆಡಳಿತಗಾರನಾಗಿದ್ದವರು ಅಂದ ಮೇಲೆ ಅವರು ಒಂದೋ ಸರ್ವಾಧಿಕಾರಿ ದೊರೆಯಾಗಿದ್ದಿರಬೇಕು ಅಥವಾ ಸರ್ವಾಧಿಕಾರಿ ಮಿಲಿಟರಿ ಜನರಲ್ ಆಗಿರಬೇಕು ಎಂಬುದು ಜನರ ಸಾಮಾನ್ಯ ಧಾರಣೆ. ರಾಜಾಳ್ವಿಕೆ ಅಥವಾ ಮಿಲಿಟರಿ ಸರ್ವಾಧಿಕಾರವೇ ಹೆಚ್ಚಿನೆಲ್ಲ ಅರಬ್ ದೇಶಗಳ ಶಾಶ್ವತ ಭಾಗ್ಯವೆಂಬ ಕಲ್ಪನೆ ಅಷ್ಟೊಂದು ಆಳವಾಗಿ ಜನಮಾನಸದಲ್ಲಿ ಬೇರುಬಿಟ್ಟಿದೆ.

ನಿಜವಾಗಿ ಮುರ್ಸಿ ಎಂದೂ ದೊರೆ ಅಥವಾ ಜನರಲ್ ಆಗಿರಲಿಲ್ಲ. ಅವರು ತಮ್ಮ ಕೊನೆಯುಸಿರ ತನಕವೂ ಸರ್ವಾಧಿಕಾರದ ವಿರುದ್ಧ ಹೋರಾಟಗಾರರಾಗಿದ್ದರು. ಈಜಿಪ್ಟ್‌ನಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಸ್ಥಾಪನೆಗಾಗಿ ಮತ್ತು ಮಾನವೀಯ ಹಕ್ಕುಗಳ ಸಂರಕ್ಷಣೆಗಾಗಿ ಕೆಲವು ದಶಕಗಳಿಂದ ನಡೆಯುತ್ತಾ ಬಂದಿರುವ ಹೋರಾಟದ ಮುಂಚೂಣಿಯ ನಾಯಕರಲ್ಲೊಬ್ಬರಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಮುರ್ಸಿ, 2012ರಲ್ಲಿ ಈಜಿಪ್ಟ್‌ನಲ್ಲಿ ಪ್ರಜಾಸತ್ತಾತ್ಮಕ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದ ಆ ದೇಶದ ಪ್ರಥಮ ಚುನಾಯಿತ ಅಧ್ಯಕ್ಷರಾಗಿದ್ದರು.

ಅವರ ನೇತೃತ್ವದ ಪ್ರಜಾಸತ್ತಾತ್ಮಕ ಸರಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷದಲ್ಲೇ ಒಂದು ಮಿಲಿಟರಿ ದಂಗೆಯ ಮೂಲಕ ಅದನ್ನು ಪದಚ್ಯುತಗೊಳಿಸಿ ಚುನಾಯಿತ ಅಧ್ಯಕ್ಷರನ್ನು ಮತ್ತು ಅವರ ಅನೇಕ ಬೆಂಬಲಿಗರನ್ನು ಜೈಲಿಗೆ ತಳ್ಳಲಾಯಿತು. ಹಲವು ಗಂಭೀರ ಸ್ವರೂಪದ ಸುಳ್ಳಾರೋಪಗಳನ್ನು ಅವರ ಮೇಲೆ ಹೇರಲಾಯಿತು. ವಿಚಾರಣೆ ಎಂಬ ನಾಟಕ ನಡೆಸಿ ಅವರಿಗೆ ಮರಣ ದಂಡನೆ ವಿಧಿಸಲಾಯಿತು. ಮುಂದೆ, ಸಾರ್ವಜನಿಕರ ಆಕ್ರೋಶ ಮತ್ತು ಅಂತರ್‌ರಾಷ್ಟ್ರೀಯ ಒತ್ತಡದಡಿ ಮರಣದಂಡನೆ ರದ್ದುಗೊಳಿಸಿ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು. ಮುಂದಿನ ದಿನಗಳಲ್ಲಿ ಜೈಲಿನಲ್ಲೂ ಅವರಿಗೆ ಮೂಲಭೂತ ಸವಲತ್ತುಗಳನ್ನು ಮತ್ತು ಸೂಕ್ತ ವೈದ್ಯಕೀಯ ನೆರವನ್ನು ನಿರಾಕರಿಸುವ ಮೂಲಕ ಸರಕಾರ ಅವರನ್ನು ನಿಧಾನವಾಗಿ ಕೊಲ್ಲಲು ನಿರ್ಧರಿಸಿತು. ಅವರಿಗೆ ತುರ್ತು ಚಿಕಿತ್ಸೆ, ವಿಶೇಷ ಆಹಾರ ಮತ್ತು ವಿರಾಮದ ಅಗತ್ಯವಿದೆ ಎಂಬ ಅವರ ವಕೀಲರ ಸತತ ಮನವಿಗಳನ್ನೆಲ್ಲ ಸರಕಾರ ತಿರಸ್ಕರಿಸಿತು. ಕಳೆದ ವರ್ಷವಷ್ಟೇ ಅವರನ್ನು ಜೈಲಿನಲ್ಲಿ ಸಂದರ್ಶಿಸಿದ್ದ ಬ್ರಿಟಿಷ್ ಸಾಂಸದರ ಒಂದು ನಿಯೋಗವು ತನ್ನ ವರದಿಯಲ್ಲಿ, ಸೆರೆಮನೆಯಲ್ಲಿ ಮುರ್ಸಿಯವರಿಗೆ ಒದಗಿಸಲಾಗಿದ್ದ ತೀರಾ ಸೀಮಿತ ಹಾಗೂ ಕಳಪೆ ಸವಲತ್ತುಗಳ ಬಗ್ಗೆ ತೀವ್ರ ಕಳವಳ ಪ್ರಕಟಿಸಿತ್ತು. ಕೊನೆಗೆ ಸರಕಾರ ಬಯಸಿದಂತೆಯೇ ಮುರ್ಸಿ ಅನಾರೋಗ್ಯದಿಂದ ಬಳಲಿ, ಕೋರ್ಟಿನಲ್ಲೇ ಕುಸಿದು ಮೃತರಾದರು.

ಮುರ್ಸಿ ಮರಣದ ಸನ್ನಿವೇಶವು ಬಹಳಷ್ಟನ್ನು ಹೇಳುವಂತಿತ್ತು. ಈಗಿನ ಈಜಿಪ್ಟ್ ಸರ್ವಾಧಿಕಾರಿ ಅಬ್ದುಲ್ ಫತ್ತಾಹ್ ಅಲ್ ಸೀಸಿ, ನಿರಂಕುಶವಾದಿ ಅರಬ್ ದೊರೆಗಳ ಮತ್ತು ಆ ಎಲ್ಲ ದೊರೆಗಳ ಪರಮ ಸಂರಕ್ಷಕನಾಗಿರುವ ಅಮೆರಿಕದ ಮಡಿಲಲ್ಲೇ ಉಸಿರಾಡುತ್ತಿರುವವರು ಎಂಬುದು ಜಗತ್ತಿಗೆಲ್ಲ ಗೊತ್ತಿದೆ. ಅವರ ಸರಕಾರವು, ನ್ಯಾಯದ ಹತ್ಯೆಗಾಗಿಯೇ ನಿರ್ಮಿಸಿದ ಕಸಾಯಿಖಾನೆಯಂತಿದ್ದ ಆ ಅಣಕು ನ್ಯಾಯಾಲಯ, ಕೋರ್ಟಿನಲ್ಲಿ ವಿಚಾರಣಾಧೀನ ರಾಜಕೀಯ ಕೈದಿಗಳಿಗಾಗಿರುವ, ಯಂತ್ರಗಳ ಮೂಲಕ ನ್ಯಾಯಾಧೀಶರೊಂದಿಗೆ ಮಾತ್ರ ಮಾತನಾಡಬಹುದಾದ ಆ ಧ್ವನಿ ನಿರೋಧಕ ಗೂಡು, ಆ ಗೂಡಿನ ಸುತ್ತಲ ಬಲೆಗಳ ಹಿಂದಿನಿಂದ ತೀರಾ ಮಸುಕಾಗಿ ಕಾಣಿಸುತ್ತಿದ್ದ ಮುರ್ಸಿ, ನಿಕಟ ವೀಕ್ಷಕರ ಕಿವಿಗೂ ಕೇಳಿಸದ ಅವರ ಮಾತುಗಳು - ಇವೆಲ್ಲ, ಸದ್ಯ ಈಜಿಪ್ಟ್ ನಲ್ಲಿ ಪ್ರಜಾಪ್ರಭುತ್ವ, ಮೂಲಭೂತ ಹಕ್ಕುಗಳು ಮತ್ತು ಸಾಕ್ಷಾತ್ ಮಾನವೀಯತೆಗೆ ಒದಗಿರುವ ದುರ್ಗತಿಯನ್ನು ಪ್ರತಿನಿಧಿಸುವಂತಿದ್ದವು.

ಮುರ್ಸಿಯ ಮರಣ ಸದ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಯಲ್ಲಿದೆ. ಇತಿಹಾಸ, ಸಂಸ್ಕೃತಿ, ಧರ್ಮ, ಸಾಹಿತ್ಯ ಮತ್ತು ರಾಜಕೀಯ ಸಂವಾದಗಳ ರಂಗಗಳಲ್ಲಿ ಬಹುಕಾಲ ಅರಬ್ ಲೋಕಕ್ಕೆ ನೇತೃತ್ವ ನೀಡಿದ್ದ ಮತ್ತು ಮಿಲಿಟರಿ ದೃಷ್ಟಿಯಿಂದಲೂ ತುಂಬಾ ಆಯಕಟ್ಟಿನ ಸ್ಥಾನದಲ್ಲಿರುವ ಈಜಿಪ್ಟ್ ನಲ್ಲಿ ಕಳೆದ ಕೆಲವು ದಶಕಗಳಿಂದ ನಡೆದಿರುವ ಮತ್ತು ಮಾಧ್ಯಮಗಳ ಕೃಪೆಯಿಂದ ನೇಪಥ್ಯಕ್ಕೆ ತಳ್ಳಲ್ಪಟ್ಟಿದ್ದ ಹಲವು ಭೀಕರ ಅಂತರ್‌ರಾಷ್ಟ್ರೀಯ ಸಂಚುಗಳ ದಾರುಣ ಕಥೆ ಈ ಮೂಲಕ ಮತ್ತೆ ಚರ್ಚೆಗೆ ಬರುವ ಸಾಧ್ಯತೆ ಇದೆ.

ನಿಜವಾಗಿ, ಮಧ್ಯ ಪ್ರಾಚ್ಯ, ಅರಬ್ ಮತ್ತು ಮುಸ್ಲಿಮ್ ದೇಶಗಳ ವರ್ತಮಾನ ಸಾಮಾಜಿಕ, ರಾಜಕೀಯ ಸನ್ನಿವೇಶಗಳ ಕುರಿತಂತೆ, ಅದೆಷ್ಟೋ ನಿರ್ಣಾಯಕ ವಿಷಯಗಳು ಆಯಾ ಸಮಾಜಗಳ ಮಟ್ಟದಲ್ಲಿ ಮಾತ್ರವಲ್ಲ ಜಾಗತಿಕ ಸ್ತರದಲ್ಲಿ ಗಂಭೀರ ಚರ್ಚೆಗಳು, ಬಿಸಿ ಸಂವಾದಗಳು ನಡೆಯಬೇಕಿತ್ತು. ಆದರೆ ಕೆಲವು ಹಿತಾಸಕ್ತಿಗಳು ಬಹಳ ನಾಜೂಕಾದ ವಿಧಾನಗಳನ್ನು ಬಳಸಿ ಅರಬ್ ಮತ್ತು ಮುಸ್ಲಿಮ್ ಜಗತ್ತಿಗೆ ಸಂಬಂಧಿಸಿದಂತೆ ತೀರಾ ಅಸಂಗತ ವಿಷಯಗಳನ್ನು ಭಾರೀ ದೊಡ್ಡ ಪ್ರಮಾಣದಲ್ಲಿ ಚರ್ಚೆಗೆ ತಂದು, ನಿರ್ಣಾಯಕವಾದ ಎಲ್ಲ ನೈಜ ವಿಷಯಗಳನ್ನು ತೆರೆಮರೆಗೆ ಸರಿಸಿ ಬಿಟ್ಟಿವೆ. ಇದೀಗ ಮುರ್ಸಿಯಂತಹ, ಜನಮನ್ನಣೆ ಪಡೆದ ಒಬ್ಬ ದೊಡ್ಡ ವ್ಯಕ್ತಿತ್ವದ ಜೊತೆ ಜಗತ್ತಿನ ಕಣ್ಮುಂದೆಯೇ ನಡೆದಿರುವ ದುರಂತದಲ್ಲಿ, ಹತ್ತಿಕ್ಕಲಾಗಿರುವ ಆ ಎಲ್ಲ ಚರ್ಚೆಗಳಿಗೆ ಜೀವ ತುಂಬುವ ಸಾಮರ್ಥ್ಯ ಅಡಗಿದೆ.

ಮುರ್ಸಿ ‘ಮುಸ್ಲಿಮ್ ಬ್ರದರ್ ಹುಡ್’ ಎಂಬ ಧಾರ್ಮಿಕ ಹಿನ್ನೆಲೆಯ ಇಸ್ರೇಲ್ ವಿರೋಧಿ ಪಕ್ಷವೊಂದರ ನಾಯಕರಾಗಿದ್ದರು ಎಂಬ ನೆಪವೊಡ್ಡಿ ಅವರ ಮಹತ್ವವನ್ನು ಕುಗ್ಗಿಸುವ ಶ್ರಮಗಳು ಈಗಾಗಲೇ ಆರಂಭವಾಗಿವೆ. ಆದರೆ ಮುರ್ಸಿ ಕೇವಲ ಒಂದು ಪಕ್ಷದ ಪ್ರತಿನಿಧಿಯಾಗಿರಲಿಲ್ಲ. ಅವರು ಹಲವು ವರ್ಷಗಳಿಂದ ಭ್ರಷ್ಟ ಸರ್ವಾಧಿಕಾರಿಗಳ ಕಪಿ ಮುಷ್ಟಿಯಲ್ಲಿ ನರಳುತ್ತಿದ್ದ ತಮ್ಮ ದೇಶದ ಹಲವು ವಲಯಗಳ ಆಶೋತ್ತರಗಳನ್ನು ಪ್ರತಿನಿಧಿಸುತ್ತಿದ್ದರು. ಈಜಿಪ್ಟ್‌ನ ವಿಶ್ವವಿದ್ಯಾನಿಲಯವೊಂದರಲ್ಲಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ, ತಮ್ಮ ವಿದ್ವತ್ತು ಮತ್ತು ನಯ ವಿನಯದ ನಡವಳಿಕೆಗಾಗಿ ಪ್ರಖ್ಯಾತರಾಗಿದ್ದ ಮುರ್ಸಿ ಜಗತ್ತೆಲ್ಲವೂ ಗೌರವಿಸುವ ಹಲವು ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದರು. ಆದ್ದರಿಂದಲೇ ಹುಸ್ನಿ ಮುಬಾರಕ್ ಎಂಬ ಸರ್ವಾಧಿಕಾರಿ ಮತ್ತು ಆತನ ದಮನಕಾರಿ ಧೋರಣೆಗಳ ವಿರುದ್ಧ ಮುರ್ಸಿಯ ತಂಡ ನಡೆಸಿದ ಧೀರ ಹೋರಾಟದಲ್ಲಿ ಅವರ ಪಕ್ಷದ ಜೊತೆ ಸಂಬಂಧವಿಲ್ಲದ ಈಜಿಪ್ಟ್ ನ ಲಕ್ಷಾಂತರ ಮಂದಿ ಅವರನ್ನು ಬೆಂಬಲಿಸಿದ್ದರು. ದಂಗೆಕೋರರ ಮೂಲಕ ಪ್ರಕ್ಷೋಭೆ ಸಂಘಟಿಸಿ ಮುರ್ಸಿ ಸರಕಾರವನ್ನು ಪದಚ್ಯುತಗೊಳಿಸುವ ಬೃಹತ್ ಸಂಚು ನಡೆದಾಗ ಅವರೆಲ್ಲ ಪಕ್ಷಾತೀತವಾಗಿ ಅದನ್ನು ವಿರೋಧಿಸಿದ್ದರು. ಮಾತ್ರವಲ್ಲ, ನಿರಂಕುಶ ಮಿಲಿಟರಿ ಪಡೆಗಳ ಗುಂಡುಗಳಿಗೆ ಎದೆಯೊಡ್ಡಿ ಈಜಿಪ್ಟ್ ನ ಬೀದಿಗಳಲ್ಲಿ ಪ್ರತಿಭಟಿಸಿದ್ದರು.

ಮುರ್ಸಿಯ ಪ್ರಜಾಸತ್ತಾತ್ಮಕ ಸರಕಾರವನ್ನು ಉರುಳಿಸುವಲ್ಲಿ ಈಜಿಪ್ಟ್‌ನ ಒಳಗಿನ ಮುರ್ಸಿ ವಿರೋಧಿ ದಂಗೆಕೋರರಿಗಿಂತ ಹೆಚ್ಚು ಆಸಕ್ತರಾಗಿದ್ದುದು ಮಧ್ಯ ಪ್ರಾಚ್ಯದ ಸರ್ವಾಧಿಕಾರಿ ದೊರೆಗಳು ಮತ್ತು ಪಶ್ಚಿಮದ ಅವರ ಪೋಷಕರು. ಮೇಲ್ನೋಟಕ್ಕೆ ಕೊಲ್ಲಿಯ ಸರ್ವಾಧಿಕಾರಿಗಳು ಅಮೆರಿಕ ಮತ್ತಿತರ ಪಶ್ಚಿಮದ ಪ್ರಜಾಸತ್ತಾತ್ಮಕ ಸರಕಾರಗಳ ನಡುವೆ ಯಾವುದೇ ಸಮಾನ ಅಂಶ ಇಲ್ಲವೆಂದೇ ತೋರುತ್ತದೆ. ಅಮೆರಿಕ, ಜಗತ್ತಿನಲ್ಲೆಲ್ಲ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಗುತ್ತಿಗೆಯನ್ನು ತಾನೇ ಹೊತ್ತಿರುವಂತೆ ಮಾತನಾಡುತ್ತಿರುತ್ತದೆ. ಯೂರೋಪಿನ ಪ್ರಜಾಸತ್ತಾತ್ಮಕ ದೇಶಗಳಿಗಂತೂ ರಾಜ ಮಹಾರಾಜರುಗಳ ದಬ್ಬಾಳಿಕೆಗಳ ವಿರುದ್ಧ ಹೋರಾಡಿದ ಅನುಭವವೂ ಇದೆ. ಆದರೆ ಕೊಲ್ಲಿ ರಾಷ್ಟ್ರಗಳಲ್ಲಿನ ರಾಜಕೀಯ ಭವಿಷ್ಯದ ಪ್ರಶ್ನೆ ಬಂದಾಗ ಕೊಲ್ಲಿಯ ಸರ್ವಾಧಿಕಾರಿ ಸರಕಾರಗಳು ಮತ್ತು ಪಶ್ಚಿಮದ ಪ್ರಜಾಸತ್ತಾತ್ಮಕ ದೇಶಗಳು ಒಂದೇ ದುಷ್ಟ ಪಡೆಯಾಗಿ ಮಾರ್ಪಡುತ್ತವೆ. ಈ ಎಲ್ಲ ದೇಶಗಳು ಒಂದೇ ಧೋರಣೆಯನ್ನು ಪಾಲಿಸುತ್ತವೆ. ಯಾವ ಬೆಲೆ ತೆತ್ತಾದರೂ ಪ್ರಜಾಪ್ರಭುತ್ವವು ತಲೆ ಎತ್ತದಂತೆ ನೋಡಿಕೊಳ್ಳಬೇಕು ಎಂಬುದೇ ಆ ನಿರ್ಲಜ್ಜ ಧೋರಣೆ. ಆದ್ದರಿಂದಲೇ ಆ ಪ್ರಾಂತದಲ್ಲಿ ಎಲ್ಲಾದರೂ ಪ್ರಜಾಸತ್ತೆ ಗರಿ ಬಿಚ್ಚುವ ಸಾಧ್ಯತೆ ಕಂಡರೂ ಸಾಕು, ಈ ಎಲ್ಲ ದೇಶಗಳು ತಕ್ಷಣ ಅಲ್ಲಿಗೆ ಧಾವಿಸಿ ಅದನ್ನು ಮೊಳಕೆಯಲ್ಲೇ ಚಿವುಟಿ ಬಿಡುತ್ತವೆ. 1979ರಲ್ಲಿ ಇರಾನ್ ಜನತೆ ರಾಜಾಳ್ವಿಕೆಯನ್ನು ಕಿತ್ತೆಸೆದು ಸೀಮಿತ ಪ್ರಮಾಣದ ಪ್ರಜಾಸತ್ತೆಯನ್ನು ತಂದುಕೊಂಡಾಗ ಅದು ಇವರೆಲ್ಲರ ಪರಮ ಶತ್ರುವಾಗಿ ಬಿಟ್ಟಿತು. ಆ ಶತ್ರುತ್ವ ಇಂದಿಗೂ ಮುಂದುವರಿದಿದೆ. ಟ್ಯುನೀಷಿಯಾದಲ್ಲಿ ಮತ್ತು ಅಲ್ಜೀರಿಯಾದಲ್ಲಿ ಅಲ್ಲಿನ ಜನತೆ ಬಹಳಷ್ಟು ಹೋರಾಡಿ ಪ್ರಜಾಸತ್ತಾತ್ಮಕ ಸರಕಾರಗಳನ್ನು ರಚಿಸಿದಾಗ ಆ ಸರಕಾರಗಳನ್ನು ಅಕ್ರಮವಾಗಿ ಉರುಳಿಸಿ ಮತ್ತೆ ಸರ್ವಾಧಿಕಾರವನ್ನು ಸ್ಥಾಪಿಸುವಲ್ಲಿ ಈ ದುಷ್ಟಕೂಟ ನಿರ್ಣಾಯಕ ಪಾತ್ರ ವಹಿಸಿತ್ತು. ಈಜಿಪ್ಟ್ ನಲ್ಲಿ ನಡೆದಿರುವುದು ಕೂಡ ಇದುವೇ. ಅಲ್ಲಿ ಮುರ್ಸಿಯ ಮೂಲಕ ಜನತೆಯ ಸರಕಾರ ಬಂದಾಗ ಪ್ರಸ್ತುತ ದುಷ್ಟ ಕೂಟ ಒಂದಾಗಿ ಅದರ ಮೇಲೆ ಮುಗಿಬಿದ್ದು ಅದನ್ನು ಕಿತ್ತೊಗೆಯಿತು. ಸೀಸಿಯ ಸರ್ವಾಧಿಕಾರಕ್ಕೆ ಪೂರ್ಣ ಬೆಂಬಲ, ರಕ್ಷಣೆ ನೀಡಿತು.

ಮುರ್ಸಿಯ ಮರಣವು ಕನಿಷ್ಠ ಪಕ್ಷ ಪಶ್ಚಿಮದ ಪ್ರಜಾಸತ್ತಾತ್ಮಕ ಸಮಾಜಗಳಲ್ಲಿ ಅಲ್ಲಿಯ ಜನತೆ ತಮ್ಮ ಸರಕಾರಗಳ ಇಬ್ಬಂದಿ ಧೋರಣೆಯ ಕುರಿತು ಚಿಂತಿಸಲು, ಚರ್ಚಿಸಲು ಪ್ರೇರಕವಾದರೆ ಮುರ್ಸಿಯ ಕುಸಿತದ ಹಿಂದೆ ಅಡಗಿರುವ ತಾವೇ ಪ್ರತಿಪಾದಿಸುವ ಹಲವು ಮೌಲ್ಯಗಳ ಕುಸಿತವು ಆ ಪಶ್ಚಿಮದವರ  ಮುಂದೆ ಅನಾವರಣಗೊಳ್ಳಬಹುದು.

ಹಾಗೆಯೇ, ಮುಂದಿನ ಯಾವುದಾದರೂ ಯುಗದಲ್ಲಿ ನಮ್ಮ ನಾಡಿನ ಉಸ್ತುವಾರಿಯನ್ನು ನಾವೇ ನೋಡಿಕೊಳ್ಳುತ್ತೇವೆ ನಿಮ್ಮ ಹಸ್ತಕ್ಷೇಪ ಬೇಡ ಎಂದು ಹೇಳಬಹುದಾದ ಎಲ್ಲ ದೇಶ ಮತ್ತು ಸಮಾಜಗಳನ್ನು ಈಗಲೇ ಕುಬ್ಜಗೊಳಿಸಿ, ಸಮಾಜವಿರೋಧಿ ಶಕ್ತಿಗಳ ಮೂಲಕ ಅಲ್ಲಿ ಅರಾಜಕತೆ ಬೆಳೆಸಿ, ಅಲ್ಲಿಯ ಸಂಪನ್ಮೂಲಗಳನ್ನು ಲಪಟಾಯಿಸಿ, ಕೊನೆಗೆ ಆ ಸಮಾಜಗಳ ಎಲ್ಲ ನಾಗರಿಕರನ್ನು ಘೋರ ಸಾಮಾಜಿಕ ಬಿಕ್ಕಟ್ಟು ಮತ್ತು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸಿ ಕ್ರಮೇಣ ನಾಶಪಡಿಸುವ ಅಮೆರಿಕ ಮತ್ತದರ ದುಷ್ಟಕೂಟದ ಸಂಚು ಮುರ್ಸಿ ದುರಂತದ ಮೂಲಕ ಜಗತ್ತಿನ ಗಮನ ಸೆಳೆಯುವ ಸಾಧ್ಯತೆ ಇದೆ. ಪ್ರಜಾಸತ್ತೆ ಎಂಬ ಶಬ್ದ ಕೇಳಿದರೆ ಭಯ ಮತ್ತು ಆಕ್ರೋಶದಿಂದ ನಡುಗುವ ಅರಬ್ ದೊರೆಗಳು ತಮ್ಮ ಗದ್ದುಗೆ ಕಾಪಾಡಲಿಕ್ಕಾಗಿ ಮತ್ತು ತಮ್ಮ ಸಮಾಜಗಳಲ್ಲಿ ಪ್ರಜಾಸತ್ತೆಯ ಧ್ವನಿ ಅಡಗಿಸಲಿಕ್ಕಾಗಿ ಸ್ವತಃ ತಮ್ಮ ಜನತೆಯ ವಿರುದ್ಧ ಮೆರೆಯುತ್ತಿರುವ ಅಮಾನುಷ ಕ್ರೌರ್ಯಗಳು, ಖಶೋಗಿಯ ಹತ್ಯೆಯಂತಹ ನೂರಾರು ಘೋರ ಅಪರಾಧಳು ಮುರ್ಸಿಯ ಮರಣದ ಮೂಲಕ ಚರ್ಚೆಗೆ ಬಂದು ಜನಾಭಿಪ್ರಾಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಉಜ್ವಲವಾಗಿದೆ.

ಈ ರೀತಿ ನಿಜಕ್ಕೂ ಒಂದು ಸಾವು, ಸತ್ತು ಬಿದ್ದಿರುವ ಹಲವು ಮೌಲ್ಯಗಳನ್ನು, ಹಲವು ನೆನಪುಗಳನ್ನು ಮತ್ತು ಹೋರಾಟದ ಹಲವು ಸಂಕಲ್ಪಗಳನ್ನು ಜೀವಂತಗೊಳಿಸುವಲ್ಲಿ ಯಶಸ್ವಿಯಾದರೆ ಅದು ಸಂಭ್ರಮಿಸಬೇಕಾದ ಸಾವೆನಿಸಿಕೊಳ್ಳುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top