ಈಗ ನಮ್ಮ ಮುಂದಿರುವ ದಾರಿ ಯಾವುದು? | Vartha Bharati- ವಾರ್ತಾ ಭಾರತಿ

ಈಗ ನಮ್ಮ ಮುಂದಿರುವ ದಾರಿ ಯಾವುದು?

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ಎರಡು ವರ್ಷ ತುಂಬುತ್ತಿವೆ. ಅಂದಿನ ಸಂದರ್ಭದಲ್ಲಿ ಹಿರಿಯ ಚಿಂತಕ ಪಿ. ಸಾಯಿನಾಥ್ ಬರೆದ ಲೇಖನ

‘‘ಅವರಿಗೆ ಬರೆಯುವುದು ಸಾಧ್ಯವಿಲ್ಲ ಎಂದಾದರೆ, ಮೊದಲು ಅವರು ಬರೆಯುವುದನ್ನು ನಿಲ್ಲಿಸಲಿ. ನಾವು ಆ ಮೇಲೆ ನೋಡಿಕೊಳ್ಳೋಣ’’ ಎಂದದ್ದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ. 2015ರಲ್ಲಿ ‘ಅವಾರ್ಡ್ ವಾಪಸಿ’ಯನ್ನು ವ್ಯಂಗ್ಯಮಾಡುತ್ತಾ ಆತ ಹೇಳಿದ ಮಾತದು.
ಅವರ ವ್ಯಂಗ್ಯದ ಕೂರಂಬಿಗೆ ಆವತ್ತು ಗುರಿಯಾದವರು, ತಮಗೆ ದೊರೆತ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಹಿಂದಿರುಗಿಸಿದ ದೇಶದ ಕೆಲವು ಅತ್ಯುತ್ತಮ ಬರಹಗಾರರು ಮತ್ತು ಕಲಾವಿದರು. ಅವರು ಎಂ. ಎಂ. ಕಲಬುರ್ಗಿ, ಗೋವಿಂದ ಪನ್ಸಾರೆ ಮತ್ತು ನರೇಂದ್ರ ದಾಭೋಲ್ಕರ್ ಅವರ ಕಗ್ಗೊಲೆಗಳನ್ನು ಮತ್ತು ಅಸಹಿಷ್ಣುತೆಯ, ಭಯದ ಮತ್ತು ಬಲವಂತದ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿರುವುದಕ್ಕೆ ಪ್ರತಿರೋಧ ತೋರಿಸಿ ತಮ್ಮ ಅವಾರ್ಡುಗಳನ್ನು ಹಿಂದಿರುಗಿಸಿದ್ದರು.
ಅವರಲ್ಲಿ ಹೆಚ್ಚಿನವರು ಶರ್ಮಾರ ಈ ನಿಂದೆಗೆ ಸೊಪ್ಪುಹಾಕದೆ ತಮ್ಮ ಬರವಣಿಗೆಯ ಕಾಯಕ ಮುಂದುವರಿಸಿದ್ದರು. ಬಹಳ ಮಂದಿ ಪ್ರತಿರೋಧ ತೋರಿಸಿ ಇನ್ನಷ್ಟು ತೀವ್ರತೆಯಿಂದ ಬರೆದರು. ಹಾಗಾಗಿ ನಿಂದಿಸಿದ ಮಂದಿ ಬರೆಯುವವರನ್ನು ತಡೆಯಲು ಬೇರೆ ನಿರ್ಧಾರಕ ಮಾರ್ಗಗಳನ್ನು ಹುಡುಕಿ ಕೊಂಡರು. ಗೌರಿ ಲಂಕೇಶ್ ಅವರ ಬರವಣಿಗೆಯನ್ನು ಎರಡು ರಾತ್ರಿಗಳ ಹಿಂದೆ ನಿಲ್ಲಿಸಲಾಯಿತು. ಆಗಂತುಕ ಕೊಲೆಗಾರರು ಆಕೆಯನ್ನು ಆಕೆಯ ಮನೆಯ ಹೊರಬದಿಯಲ್ಲೇ ಗುಂಡಿಕ್ಕಿ ಕೊಂದದ್ದು, ಬಹುತೇಕ ಈ ಹಿಂದಿನ ಕೊಲೆಗಳನ್ನೇ ಹೋಲುವಂತಿತ್ತು.
‘ಗೌರಿ ಲಂಕೇಶ್ ಪತ್ರಿಕೆ’ಯ ಬಿಚ್ಚುಮಾತಿನ, ನಿರ್ಭೀತ ಸಂಪಾದಕಿ, ವಿಚಾರವಾದಿ ಮತ್ತು ಲೇಖಕಿ ಗೌರಿ ಇನ್ನಿಲ್ಲ.
ಕೊಲೆಗಡುಕರು ಬಳಸಿದ ವಿಧಾನ ಈ ಹಿಂದಿನ ಕೊಲೆಗಳಲ್ಲಿ ಬಳಸಿದ ವಿಧಾನಗಳಿಗೆ ತೀರಾ ಹತ್ತಿರದಲ್ಲಿತ್ತು ಎಂಬುದನ್ನು ಬಹಳ ಮಂದಿ ಈಗಾಗಲೇ ಗುರುತಿಸಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ: ಈ ಕಗ್ಗೊಲೆ ಒಂದು ಸಂದೇಶ. ಅದೇ ವಿಧಾನದ ಮರುಬಳಕೆ ಕೂಡ ಆ ಸಂದೇಶದ್ದೇ ಭಾಗ: ‘‘ಹೌದು, ನಾವೇ. ನಾವೇ ಮತ್ತೊಮ್ಮೆ ಮಾಡಿದ್ದೇವೆ. ಇನ್ನೂ ಮಾಡಲಿದ್ದೇವೆ. ಇದು ನಿಮಗೆಲ್ಲ ಎಚ್ಚರಿಕೆ.’’
ಹಾಗಾಗಿ ‘‘ಆಮೇಲೆ ನೋಡಿಕೊಳ್ಳೋಣ’’ - ಅಂದರೆ?
ಎದೆಯಾಳದಿಂದ ದುಃಖದ ಮಹಾಪೂರ ಹೊರಬರುತ್ತಿರುವುದರ ಜೊತೆಜೊತೆಗೇ ಆ್ಯಂಟಿ-ಸೋಷಿಯಲ್ ಮೀಡಿಯಾದಲ್ಲಿ ಕಾಕಧ್ವನಿಗಳು ಕಾವ್ಗಡಲಾರಂಭಿಸಿವೆ. ಆಕೆ ಈ ಸ್ಥಿತಿಯನ್ನು ತಾವೇ ಆಹ್ವಾನಿಸಿಕೊಂಡರು. ಆಕೆ ತಾನು ಮಾಡಿದ ಕರ್ಮದ ಫಲ ಅನುಭವಿಸಿದ್ದಾರೆ. ರಾಜಕೀಯದಿಂದ ಆಕೆಯ ಕೊಲೆ ಆದದ್ದಲ್ಲ ಬದಲಾಗಿ ಆಕೆಯ ಕೊಲೆಯನ್ನು ರಾಜಕೀಯ ಮಾಡಲಾಗುತ್ತಿದೆ ಎಂದೆಲ್ಲ ಸ್ವರಗಳು ಬರಲಾರಂಭಿಸಿವೆ.
ಈ ಸ್ವರಗಳಲ್ಲಿ ಬಹಳಷ್ಟು ತಾವು ಪತ್ರಕರ್ತರು ಎಂದುಕೊಂಡಿರುವವರಿಂದಲೇ ಬರಲಾರಂಭಿಸಿವೆ. ಆಕೆಯನ್ನು ಕೊಲೆ ಮಾಡಿರುವ ಆಗಂತುಕರಿಗೆ ಮಾಧ್ಯಮಗಳೊಳಗೆ ಸೈದ್ಧಾಂತಿಕ ಸ್ನೇಹಿತರಿದ್ದಾರೆ. ಸಹೋದ್ಯೋಗಿ ಪತ್ರಕರ್ತರೊಬ್ಬರು ಸಶಸ್ತ್ರ ಕೊಲೆಗಡುಕರಿಗೆ ಬಲಿಯಾದಾಗ ನಮ್ಮೋಳಗೇ ಕೆಲವರು ಈ ಕಗ್ಗೊಲೆಯನ್ನು ಸಂಭ್ರಮಿಸುವ, ಉಬ್ಬಿಸಿಹೇಳುವ ಕಾಲ ಬಂದೀತೆಂದು ನಾವು ಎಂದಾದರೂ ಅಂದುಕೊಂಡದ್ದಿದೆಯೆ?
ಇವರ ನಡುವೆ ಇದೊಂದು ‘ಬೇಸರದ ಸಂಗತಿ’ ಅನ್ನುತ್ತಲೇ, 2002ರಲ್ಲಿ ಗುಜರಾತ್ ದಂಗೆಗಳ ಬಳಿಕ ಪ್ರಧಾನಮಂತ್ರಿಗಳು ಕೊಟ್ಟ ಪ್ರಸಿದ್ಧ ಹೇಳಿಕೆಯನ್ನು ನೆನಪಿಸಿಕೊಂಡವರೂ ಇದ್ದಾರೆ: ‘‘ನಾಯಿಮರಿ ಚಕ್ರದಡಿ (ಕಾರಿನ) ಸಿಲುಕಿದರೂ ಬೇಜಾರಾಗುತ್ತದೆ ಅಲ್ಲವೇ? ಖಂಡಿತ ಬೇಜಾರಾಗುತ್ತದೆ.’’
ನಮ್ಮೆದುರು ಈಗಿರುವ ಸನ್ನಿವೇಶ ಎಷ್ಟೇ ಆತಂಕದ್ದಾಗಿದ್ದರೂ, ಅದೇ ವೇಳೆಗೆ ನಮಗೆ ಪಾಠ ಕೂಡ ಹೌದು. ಗೌರಿ ಲಂಕೇಶ್ ಕೊಲೆಗೆ ಕಾರಣರು ಯಾರೆಂಬುದು ನಮಗೆ ಈಗ ಗೊತ್ತಿಲ್ಲ. ಆದರೆ, ಈ ಹಿಂಸ್ರ ಸಂಸ್ಕೃತಿಗೆ, ಭಯೋತ್ಪಾದನೆಗೆ ಮತ್ತು ಆ ಮೂಲಕ ಕೊಲೆಗಳನ್ನು ಪ್ರೇರಿಸುವುದಕ್ಕೆ, ಅಭಿಪ್ರಾಯ ಭೇದಗಳಿರುವವರನ್ನು ‘ದೇಶ ವಿರೋಧಿಗಳು’ ಮತ್ತು ‘ರಾಷ್ಟ್ರದ್ರೋಹಿಗಳು’ ಎಂದು ಬ್ರಾಂಡ್ ಮಾಡುವುದಕ್ಕೆ ಹಾಗೂ ಅಂತಹ ವಿಮರ್ಶಕರ ವಿರುದ್ಧ ಹಿಂಸೆಯನ್ನು ಛೂಬಿಡುವುದಕ್ಕೆ ಯಾರು ಕಾರಣರು- ನಮಗೆ ಗೊತ್ತಿದೆ. ‘‘ನಾವು ನಮ್ಮ ಬಲೆಯನ್ನು ಹಿಗ್ಗಿಸಿಕೊಳ್ಳಲಿದ್ದೇವೆ’’ ಎನ್ನುತ್ತಿದೆ ಅವರ ಸಂದೇಶ.
ಗೌರಿ ಲಂಕೇಶ್ ಅವರ ಕೊಲೆಯನ್ನು ಒಬ್ಬರು ವಿಚಾರವಾದಿಯ ಕೊಲೆ ಎಂಬ ಕೋನದಿಂದ ನೋಡಿದರೆ ನಮಗೆ ಈ ಕೊಲೆಗಳ ವಿನ್ಯಾಸ ಖಚಿತವಾಗಿ ತೋರಿಬರುತ್ತದೆ: ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿ. ಈ ಕಗ್ಗೊಲೆ ಆಘಾತಕಾರಿ - ಆದರೆ ಕೆಲವರಿಗೆ ಅದು ಹಾಗಲ್ಲದಿರುವುದು ಆಶ್ಚರ್ಯಕರ. ಆದರೆ, ಆಕೆ ಪತ್ರಕರ್ತೆಯಾಗಿ ಹೆಸರಾದವರು.
ಈ ಕೊಲೆಯನ್ನು ನಾವು ಒಬ್ಬರು ಪತ್ರಕರ್ತೆಯ ಕೊಲೆಯಾಗಿ ನೋಡಿದರೆ, ಅದು ಸಾಮಾನ್ಯವಾಗಿ ಈ ದೇಶದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಕೊಲೆಗಳ ವಿನ್ಯಾಸಕ್ಕಿಂತ ಸ್ವಲ್ಪಭಿನ್ನವಾಗಿದೆ. ಕೊಲೆಗಡುಕರು ತಮ್ಮ ಪರಿಧಿಯನ್ನು ಹಿಗ್ಗಿಸಿಕೊಳ್ಳುತ್ತಿದ್ದಾರೆಂಬುದನ್ನೂ ಇದು ಬೊಟ್ಟುಮಾಡುತ್ತದೆ.
2015ರ ಡಿಸೆಂಬರಿನಲ್ಲಿ ಪನ್ಸಾರೆ ಸ್ಮಾರಕ ಉಪನ್ಯಾಸದಲ್ಲಿ ನಾನು ಹೇಳಿರುವಂತೆ, ಮೂಲಭೂತವಾದಿಗಳ ಗಮನ ಇರುವುದು ವಿಚಾರವಾದಿಗಳನ್ನು ಕೊಲ್ಲುವುದರತ್ತ. ಅವರು ಜಾತ್ಯತೀತತೆಯ ಮೇಲೆ ದಾಳಿ ಮಾಡುತ್ತಾರಾದರೂ, ಹೇಯ ದಾಳಿಗಳು ಮೀಸಲಿರುವುದು ವಿಚಾರವಾದದ ಕಾರ್ಯಕರ್ತರಿಗೆ. ಯಾಕೆಂದರೆ, ಮೂಢನಂಬಿಕೆಗಳು ಮತ್ತು ಮೂಲಭೂತವಾದದ ಪುರಾಣಗಳ ಬುಡಕ್ಕೇ ಕೈ ಹಾಕಿ ಹೊಡೆತ ನೀಡುವವರು ವಿಚಾರವಾದಿಗಳು. ಇದು ಮೂಲಭೂತವಾದಿಗಳ ಹುಚ್ಚು ಕೆದರಿಸುತ್ತದೆ.
ಹಾಗಾದರೆ, ಪತ್ರಕರ್ತರ ಕೊಲೆಗಳ ವಿನ್ಯಾಸ ಹೇಗಿರುತ್ತದೆ? 1992ರಿಂದೀಚೆಗೆ ದೇಶದಲ್ಲಿ 40 ಪತ್ರಕರ್ತರ ಕೊಲೆಗಳಾಗಿದ್ದು, ಅವುಗಳಲ್ಲಿ 27 (2015ರ ತನಕದ ಲೆಕ್ಕಾಚಾರ) ನೇರವಾಗಿ ಅವರ ಬರವಣಿಗೆ ಮತ್ತು ವೃತ್ತಿಗಳಿಗೆ ಸಂಬಂಧಿಸಿದ್ದು. ಗೌರಿ ಲಂಕೇಶ್ 28ನೇ ಬಲಿ.
ಗೌರಿ ಲಂಕೇಶ್ ಕೊಲೆಯೊಂದಿಗೆ ಭಾರತದಲ್ಲಿ ಪತ್ರಕರ್ತರ ಹತ್ಯೆಗಳಿಗೆ ಒಂದು ಸಣ್ಣ ಆದರೆ ಮಹತ್ವದ ತಿರುವು ಸಿಕ್ಕಂತಾಗಿದೆ. ಹೌದು, ಈ ಕೊಲೆ ನಾನು ಅಂದು ಹೇಳಿದ ವರ್ಗಕ್ಕೇ ಸೇರಿದ್ದು. ಪತ್ರಕರ್ತರ ರಕ್ಷಣಾ ಸಮಿತಿಯು (2016) ಭಾರತದಲ್ಲಿ ಪತ್ರಕರ್ತರ ಕೊಲೆಗಳ ಬಗ್ಗೆ ಮುನ್ನುಡಿ ಬರಹದಲ್ಲಿ ಹೀಗೆ ಹೇಳಿದ್ದೆ:
‘‘ಈ ವರದಿ ಗಮನಹರಿಸಿರುವ ಮೂರು ಪ್ರಕರಣಗಳಲ್ಲಿ - ಮತ್ತು 1992ರಿಂದೀಚೆಗೆ ದೇಶದಲ್ಲಿ ಕೊಲೆಯಾಗಿರುವ 27 ಮಂದಿಯ ಸಿಪಿಜೆ ಪಟ್ಟಿಯಲ್ಲಿ, ದೊಡ್ಡ ನಗರವೊಂದರ ಇಂಗ್ಲಿಷ್ ಭಾಷೆಯ ವರದಿಗಾರರ ಒಂದೂ ಹೆಸರಿಲ್ಲ. ಅಂದರೆ, ದೊಡ್ಡ ಕಾರ್ಪೊರೇಟ್ ಮಾಧ್ಯಮ ಕಂಪೆನಿಗಳು ನಡೆಸುವ ಹಲವು ಪತ್ರಿಕೆಗಳ ಗುಂಪಿನಲ್ಲಿ ಬರುವ ಇಂಗ್ಲಿಷ್ ಪತ್ರಿಕೆಯ ಪತ್ರಕರ್ತರು ಮತ್ತು ಬಲವಾನರ ಹಿತಾಸಕ್ತಿಗಳನ್ನು ಪ್ರಶ್ನಿಸುವ ವರದಿಗಳನ್ನು ಬರೆಯುವವರು.
ಈ ಪಟ್ಟಿಯಲ್ಲಿರುವವರೆಲ್ಲ (ಕೊಲೆಗೀಡಾದವರು) ಗ್ರಾಮೀಣ, ಅಥವಾ ಸಣ್ಣ ಪಟ್ಟಣಗಳ ಪತ್ರಕರ್ತರಾಗಿದ್ದು, ಬಡ ಇಲ್ಲವೇ ಇಂಗ್ಲಿಷ್ ಇಲ್ಲದ ವಾತಾವರಣದ ಹಿನ್ನೆಲೆಯಿಂದ ಬಂದವರು. ಅವರಲ್ಲಿ ಹೆಚ್ಚಿನವರು ಭಾರತೀಯ ಭಾಷೆಗಳಲ್ಲಿ ಬರೆಯುತ್ತಿದ್ದವರು, ಭಾರತೀಯ ಭಾಷೆಗಳ ಪ್ರಕಟನೆಗಳಿಗಾಗಿ ಬರೆಯುತ್ತಿದ್ದವರು (ಇವುಗಳಲ್ಲಿ ಹಲವು ಪ್ರಸಿದ್ಧ ಪತ್ರಿಕೆಗಳೇ). ಅವರು ಹೆಚ್ಚಾಗಿ ಸ್ಥಳೀಯ ಸ್ಟ್ರಿಂಜರ್‌ಗಳಾಗಿಯೋ ಅಥವಾ ಫ್ರೀಲಾನ್ಸರ್‌ಗಳಾಗಿಯೋ ಕೆಲಸ ಮಾಡುತ್ತಿದ್ದವರು, ಇಲ್ಲವೇ ಅವರ ಸಂಸ್ಥೆಯಲ್ಲಿ ಶ್ರೇಣಿಯ ತಳದಲ್ಲಿರುವ ಪೂರ್ಣಕಾಲಿಕ ಪತ್ರಕರ್ತರು. ಅವರಲ್ಲೂ ಹೆಚ್ಚಿನವರು ಮುದ್ರಣ ಮಾಧ್ಯಮಗಳಿಗೆ ಕೆಲಸ ಮಾಡುತ್ತಿದ್ದವರೇ.’’
ಇದಕ್ಕೆ ಅಪವಾದಗಳಿಲ್ಲ ಎಂದೇನಿಲ್ಲ. ಉದಾಹರಣೆಗೆ, ಕಾಶ್ಮೀರದಲ್ಲಿ ಸರಕಾರ ನಡೆಸುವ ದೂರದರ್ಶನದಲ್ಲಿ ಪ್ರಾಣ ತೆತ್ತವರಿದ್ದಾರೆ ಹಾಗೇ ಪ್ರಸಿದ್ಧ ‘ಆಜ್ ತಕ್’ ಚಾನಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್ ಸಿಂಗ್ ಪ್ರಾಣ ತೆತ್ತಿದ್ದಾರೆ. ಅಕ್ಷಯ್ ಸಿಂಗ್ ದಿಲ್ಲಿ ಮೂಲದ ಆಜ್ ತಕ್ ಚಾನಲ್‌ನ ತನಿಖಾ ತಂಡದ ಭಾಗವಾಗಿದ್ದರು. ಆದರೆ, ಇವು ಅಪವಾದಗಳು.
ಗೌರಿ ಮಹಾನಗರವೊಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತೆ (ಕಾರ್ಪೊರೇಟ್‌ಗಳಿಗೆ ಕೆಲಸ ಮಾಡುತ್ತಿದ್ದವರಲ್ಲ). ಆಕೆಯ ಕೊಲೆ ಕೂಡ ಈ ಕೊಲೆಗಳ ವಿಸ್ತೃತ ವಿನ್ಯಾಸಕ್ಕೆ ಹೊಂದಿಕೊಳ್ಳುತ್ತದೆ - ಆಕೆ ಕೂಡ ಮುದ್ರಿತ ಪತ್ರಿಕೆಯೊಂದರ ಪತ್ರಕರ್ತೆ ಮತ್ತು ಇಂಗ್ಲಿಷ್ ಪತ್ರಕರ್ತೆ ಅಲ್ಲ.
ಪ್ರಸಿದ್ಧ, ಕಾರ್ಪೊರೇಟ್ ಮಾಧ್ಯಮಗಳಲ್ಲಿ ಕೆಲಸಮಾಡು ವವರು ಸುಮಾರಿಗೆ ಸುರಕ್ಷಿತರಾಗಿರುತ್ತಾರೆ. ಅಥವಾ ಈ ತನಕ ಸುರಕ್ಷಿತವಾಗಿದ್ದರು. ಅವರಿಗೆ ಜಾತಿ, ವರ್ಗ, ಸಾಮಾಜಿಕ ಬಲ ಮತ್ತವರ ಮಾಲಕರ ದೊಡ್ಡಸ್ಥಿಕೆ ಎಂಬ ವಿಮೆ ಇರುತ್ತದೆ. ದೊಡ್ಡ ಪತ್ರಿಕೆಗಳ ಪ್ರಸಿದ್ಧ ಪತ್ರಕರ್ತರು ಕೊಲೆಗೀಡಾಗಿರುವವರ ಪಟ್ಟಿಯಲ್ಲಿ ಇಲ್ಲ ಎಂದರೆ, ಅವರಿಗೆ ಸಾಮಾಜಿಕ-ರಾಜಕೀಯ ವಿಮೆ ಇದೆ ಎಂದು ಮಾತ್ರ ಅರ್ಥವಲ್ಲ, ಅವರು ಬಲವಾನರಿಗೆ ಸವಾಲು ಹಾಕುವ ಕೆಲಸಗಳನ್ನೇನೂ ತಮ್ಮ ವೃತ್ತಿ ಜೀವನದಲ್ಲಿ ಮಾಡಿಲ್ಲ ಎಂಬುದನ್ನೂ ಅದು ಬೊಟ್ಟು ಮಾಡುತ್ತದೆ.
 ಗೌರಿ ಕೊಲೆಗಡುಕರು ಈ ವಿಮೆಯ ಪ್ರಿಮಿಯಂನಲ್ಲಿ ಈಗ ಭಾರೀ ಏರಿಕೆ ಮಾಡಿಹೋಗಿದ್ದಾರೆ. ಯಾವುದೇ ಪತ್ರಕರ್ತನಿಗೆ ಈಗ ದೊಡ್ಡ ಕಾರ್ಪೊರೇಟ್ ವೇದಿಕೆ ಇದ್ದರೂ ಅವರೀಗ ಆತನನ್ನು/ಆಕೆಯನ್ನು ಕೊಲ್ಲಬಲ್ಲರು. ಆ ಕಾರ್ಪೊರೇಟ್ ವೇದಿಕೆಯೇ ಸ್ವತಃ ಪತ್ರಕರ್ತರ ಅಭಿವ್ಯಕ್ತಿಗಳನ್ನು, ಯೋಚನೆಗಳನ್ನು ಅಥವಾ ಹೇಳಬಯಸಿದ ಸತ್ಯಗಳನ್ನು ತಡೆಹಿಡಿದರೂ, ತಿಳಿಗೊಳಿಸಿದರೂ ಕೊಲೆ ತಪ್ಪಿದ್ದಲ್ಲ. ಗೌರಿ ಕೊಲೆಯಿಂದ ಹಾಗೂ ಕೊಲೆಯ ಕುರಿತು ನಾವು ಕಲಿಯಬೇಕಾದುದು ಬಹಳ ಇದೆ. ಕೊಲೆಗಾರರು ಯಾರೆಂದು ಗೊತ್ತಾಗಬೇಕಿದೆ.
ಆದರೆ ಒಂದಂತೂ ಸ್ಪಷ್ಟ. ಪತ್ರಕರ್ತರಿನ್ನು ಸುರಕ್ಷಿತ ವರ್ಗಕ್ಕೆ ಸೇರಿದವರಲ್ಲ.
ಪರಿಸ್ಥಿತಿ ಇದಕ್ಕಿಂತ ಕೆಡಲಾರದು ಎಂದುಕೊಂಡಿದ್ದೀರಾ? ಇಲ್ಲ ಇನ್ನೂ ಹದಗೆಡಲಿದೆ. ಈ ಕೊಲೆಗಡುಕರು ಯಾರೆಂದು ತಿಳಿದು ನಮಗೆ ಅಚ್ಚರಿ ಆಗಲೂ ಬಹುದು. ಆದರೆ, ಅವರ ಬಳಿ ಇರುವ ದ್ವೇಷದ ಪಟ್ಟಿಯಲ್ಲಿನ ಹೆಸರುಗಳು ಇನ್ನೂ ಮುಗಿದಿಲ್ಲ. ಪರಿಸ್ಥಿತಿ ಹದಗೆಡುತ್ತಾ ಸಾಗಿದಂತೆ ಭಂಡ, ಬಾಲಬಡುಕ ಮಾಧ್ಯಮದ ದೊರೆಗಳು ಏನು ಮಾಡಿಯಾರು?
ಸಾರ್ವಜನಿಕ ಸೊತ್ತುಗಳನ್ನು ಖಾಸಗೀಕರಿಸುತ್ತಿರುವ ಸರಕಾರದ ನೀತಿಯ ಅತಿದೊಡ್ಡ ಫಲಾನುಭವಿಗಳಾಗಿರುವ ಇವರು ಹೆಚ್ಚೆಂದರೆ ‘ತೀವ್ರವಾದಿ ಶಕ್ತಿಗಳಿಗೆ’ ‘ಕಡಿವಾಣ’ ಹಾಕಲು ಕರೆ ನೀಡುವ ಚೆಂದದ ಸಂಪಾದಕೀಯಗಳನ್ನು ಬರೆಸಿಯಾರು. ಇದು ಬಲಪಂಥೀಯ ಮೂಲಭೂತವಾದಿ ರಾಜಕೀಯದ ಬೇರು ಎಂಬುದನ್ನು ಒಪ್ಪಿಕೊಳ್ಳಲು ಅವರು ಎಂದಿಗೂ ಸಿದ್ಧರಾಗರು. ಈ ರೀತಿಯ ನೀತಿಭ್ರಷ್ಟ ಸನ್ನಿವೇಶಕ್ಕೆ ನಮ್ಮ ಮೌನ, ಅದರೊಂದಿಗೆ ಸೇರುವ ಹುನ್ನಾರ ಇಲ್ಲವೇ ಅದಕ್ಕೆ ಪ್ರೇರಣೆ ಆಗುವ ಸ್ಥಿತಿ ಕಾರಣ ಆಗುತ್ತಿದೆ ಎಂಬುದನ್ನು ಕಾಣುವ ಕಣ್ಣುಗಳು ಕಾರ್ಪೊರೇಟ್ ಮೇಲುಪದರದಲ್ಲಿ ಉದ್ದೇಶಪೂರ್ವಕವಾಗಿ ಕುರುಡಾಗಿವೆ.
ಅವರೀಗ ತಮ್ಮ ಶತ್ರುಗಳ ಮರ್ಯಾದೆ ಕಳೆಯುವ, ಅವರನ್ನು ಹೊಂಡಕ್ಕಿಳಿಸುವ ನಿಟ್ಟಿನಲ್ಲಿ ಖೋಟಾ ದಾಖಲೆಗಳನ್ನು ಅಥವಾ ವಿಡಿಯೋಗಳನ್ನು ತಯಾರಿಸುವವರೇ ‘ಪತ್ರಕರ್ತೋತ್ತಮರು’. ಇವರು ಪ್ರಶಸ್ತಿಗಳನ್ನು ಹಿಂದಿರುಗಿಸಿದ ಪತ್ರಕರ್ತರನ್ನು ಗೇಲಿ ಮಾಡಬಲ್ಲರು. ನೈತಿಕತೆ ಕಿಂಚಿತ್ತೂ ಇಲ್ಲದವರು ಈ ದೇಶದ ಆಡಳಿತ ಚುಕ್ಕಾಣಿ ಹಿಡಿದಾಗ ಸಮಾಜದ ಕೊಳಕು ರಾಡಿಗಳೆಲ್ಲ ಮೇಲೆದ್ದು ಬಂದು ಉಸಿರುಗಟ್ಟಿಸತೊಡಗುತ್ತವೆ ಎಂಬುದು ಅವರಿಗೆ ಗೊತ್ತಿಲ್ಲದ್ದೇನಲ್ಲ.
ಈ ಕೊಲೆಗಳ ಸರಣಿ ಇಲ್ಲಿಗೇ ನಿಲ್ಲಲಾರದು. ಕೊಲೆಗಡುಕರಿಗೆ ತಾವೀಗ ಸುರಕ್ಷಿತ ವರ್ಗ ಎಂಬುದು ತಿಳಿದಿದೆ. ಅವರಲ್ಲಿ ತಳವರ್ಗದ ಕೆಲವರು ಆಹುತಿ ಆಗಬಹುದು ಆದರೆ, ಅವರ ಉದ್ದೇಶ ಪೂರ್ತಿಗೊಳಿಸಿಕೊಳ್ಳುವ ನಡೆ ಮುಂದುವರಿಯಲಿದೆ. ಅವರ ಬಳಿ ಪಟ್ಟಿ ಇದೆ. ಅವರ ಕೆಲಸ ಆ ಪಟ್ಟಿ ಪ್ರಕಾರ ನಡೆಯಲಿದೆ. ಅವರಿಗೆ ಈ ಕೆಲಸಕ್ಕೆ ದಂಡನೆ ಸಿಗದು. ಆ ಸುರಕ್ಷತೆ ಅವರಿಗೆ ಸಿಕ್ಕಿಯಾಗಿದೆ. ಅವರಲ್ಲಿ ಯಾರಾದರೂ ಸಿಕ್ಕಿಬಿದ್ದರೆ, ಹಾಗೆ ಸಿಕ್ಕಿಬೀಳುವವರು ತೀರಾ ತಳಮಟ್ಟದ, ನಿರ್ಲಕ್ಷಿಸಬಹುದಾದ ಜನಗಳು ಎಂಬುದು ಅವರಿಗೆ ಗೊತ್ತಿದೆ. ಅವರ ವಿರುದ್ಧ ಪ್ರಕರಣಗಳು ದಾಖಲಾದರೂ, ಪನ್ಸಾರೆ ಪ್ರಕರಣದಲ್ಲಿ ಆದಂತೆ ಆ ಪ್ರಕರಣವನ್ನು ದುರ್ಬಲಗೊಳಿಸಿ, ಎಳೆದು ಜಗ್ಗಾಡಿ, ದೂರು ಕೊಟ್ಟವರನ್ನೇ ಹೈರಾಣ ಮಾಡುವ ಕಲೆಯೂ ಅವರಿಗೆ ಸಿದ್ಧಿಸಿದೆ.
 2015ಅಕ್ಟೋಬರ್‌ನ್ನು ನೆನಪಿಸಿಕೊಳ್ಳಿ. ಅವಾರ್ಡ್ ವಾಪಸಿ ಮಾಡಿದವರನ್ನು ನಿಂದಿಸಿದ ನಮ್ಮ ಸಂಸ್ಕೃತಿ ರಕ್ಷಕ ಶರ್ಮಾರ ಬಗ್ಗೆ ದೇಶದ ಪ್ರಧಾನಿ ಪಿಟ್ಟೆನ್ನಲ್ಲಿಲ್ಲ. ಬದಲಿಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ದಿಲ್ಲಿ ಲ್ಯುಟೆನ್ಸ್ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶವನ್ನು ಈ ಸಚಿವರಿಗೆ ಕೊಡುಗೆಯಾಗಿ ಕೊಡಲಾಯಿತು. (ಕಲಾಂ ಅವರ ಕುಟುಂಬ ಈ ಮನೆಯನ್ನು ಕಲಾಂ ನೆನಪಿನಲ್ಲಿ ವಿಜ್ಞಾನ ವಸ್ತುಸಂಗ್ರಹಾಲಯ ಮಾಡಬೇಕೆಂದು ಸರಕಾರವನ್ನು ಕೋರಿಕೊಂಡಿತ್ತು)
ನಂತರ ಇದೇ ಸಚಿವ ಶರ್ಮಾ ದೇಶದ ಪರಿಸರ, ಅರಣ್ಯ ಮತ್ತು ವಾತಾವರಣ ಬದಲಾವಣೆ ಇಲಾಖೆಯ ಸಚಿವರಾದರು. ಹೌದು. ದೇಶದ ಸಾಂಸ್ಕ್ರತಿಕ, ಸಾಮಾಜಿಕ ಮತ್ತು ರಾಜಕೀಯ ರಂಗಗಳ ವಾತಾವರಣ ಬದಲಾವಣೆಯಲ್ಲಿ ಅವರ ಕೊಡುಗೆ ದೊಡ್ಡದಿದೆ. ಹಾಗಾದರೆ ನಾವೀಗ ಏನು ಮಾಡಬೇಕು? ಶರ್ಮಾ ಅವರ ಸಲಹೆಯ ಮೇರೆಗೆ ‘ಬರೆಯುವುದನ್ನು ನಿಲ್ಲಿಸೋಣವೇ’? ಗೌರಿ ಕೊಲೆಗಾರರ ಸಂದೇಶವನ್ನು ಸ್ವೀಕರಿಸೋಣವೇ? ಅಥವಾ ಈ ದೇಶದ ಬರಹಗಾರರು, ಕವಿಗಳು, ಕಲಾವಿದರು ಮತ್ತು ವಿದ್ಯಾರ್ಥಿಗಳು ಈ ಎಲ್ಲ ಆಕ್ರಮಣಗಳನ್ನು ಮೆಟ್ಟಿನಿಂತು ದೇಶದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟದಿಂದ ಧೈರ್ಯ ಪಡೆಯೋಣವೇ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top