ಟ್ರಂಪ್ಗೆ ಪ್ರಶ್ನೆ ಕೇಳದಂತೆ ಶ್ವೇತಭವನದಿಂದ ಎಚ್ಚರಿಕೆ: ಸಿಎನ್ಎನ್ ವರದಿಗಾರ
ವಾಶಿಂಗ್ಟನ್, ಡಿ. 13: ಮಂಗಳವಾರ ನಡೆದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಸೂದೆಗೆ ಸಹಿ ಹಾಕುವ ಸಮಾರಂಭದಲ್ಲಿ ಯಾವುದೇ ಪ್ರಶ್ನೆ ಕೇಳದಂತೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ತನಗೆ ಎಚ್ಚರಿಕೆ ನೀಡಿದ್ದಾರೆ ಎಂದು ಸಿಎನ್ಎನ್ ಟಿವಿ ಚಾನೆಲ್ನ ವರದಿಗಾರ ಜಿಮ್ ಅಕೋಸ್ಟ ಆರೋಪಿಸಿದ್ದಾರೆ.
‘‘ನೀವು ಟ್ರಂಪ್ಗೆ ಪ್ರಶ್ನೆ ಕೇಳಿದರೆ, ನಿಮಗೆ ಶ್ವೇತಭವನದಿಂದ ಮತ್ತೆ ಸುದ್ದಿ ಪೂರೈಕೆಯಾಗುವ ಬಗ್ಗೆ ನಾನು ಭರವಸೆ ನೀಡಲಾರೆ’’ ಎಂಬುದಾಗಿ ಸ್ಯಾಂಡರ್ಸ್ ಹೇಳಿದರು ಎಂದು ಅಕೋಸ್ಟ ತಿಳಿಸಿದರು.
ಆದಾಗ್ಯೂ, ಅವರು ಟ್ರಂಪ್ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ‘‘ನ್ಯೂಯಾರ್ಕ್ ಸೆನೆಟರ್ ಕರ್ಸ್ಟನ್ ಗಿಲಿಬ್ರಾಂಡ್ ಚುನಾವಾಣಾ ಪ್ರಚಾರಕ್ಕೆ ಹಣ ನೀಡುವಂತೆ ನನ್ನಲ್ಲಿ ಬೇಡಿದ್ದರು ಹಾಗೂ ಅದಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ’’ ಎಂಬ ಟ್ರಂಪ್ರ ಟ್ವೀಟ್ ಬಗ್ಗೆ ಅವರು ಪ್ರಶ್ನೆ ಕೇಳಿದರು. ಆದರೆ, ಅದಕ್ಕೆ ಟ್ರಂಪ್ ಉತ್ತರಿಸಲಿಲ್ಲ.
‘‘ನಾವು ಬೆದರಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಾವು ಹೆದರುವುದಿಲ್ಲ’’ ಎಂದು ಬಳಿಕ ಅವರು ಸಿಎನ್ಎನ್ನಲ್ಲಿ ಹೇಳಿದರು.