"ಅಫ್ಘಾನಿಸ್ತಾನದ ಅತ್ಯಂತ ವಿಶ್ವಾಸಾರ್ಹ ಪ್ರಾದೇಶಿಕ ಪಾಲುದಾರ ಭಾರತ"
ವಾಷಿಂಗ್ಟನ್, ಡಿ.16: ಭಾರತ, ಅಪ್ಘಾನಿಸ್ತಾನದ ಅತ್ಯಂತ ವಿಶ್ವಾಸಾರ್ಹ ಪ್ರಾದೇಶಿಕ ಪಾಲುದಾರ ಎಂದು ಅಮೆರಿಕ ಬಣ್ಣಿಸಿದೆ. ಯುದ್ಧಪೀಡಿತ ದೇಶಕ್ಕೆ ಭಾರತ ನೀಡುವ ಹೆಚ್ಚುವರಿ ಆರ್ಥಿಕ, ವೈದ್ಯಕೀಯ ಹಾಗೂ ನಾಗರಿಕ ನೆರವು ಶ್ಲಾಘನೀಯ ಎಂದು ಅಮೆರಿಕ ಕಾಂಗ್ರೆಸ್ಗೆ ಪೆಂಟಗಾನ್ ಹೇಳಿದೆ.
"ಭಾರತ ಅಪ್ಘಾನಿಸ್ತಾನದ ವಿಶ್ವಾಸಾರ್ಹ ಪ್ರಾದೇಶಿಕ ಪಾಲುದಾರ ದೇಶ. ಈ ಪ್ರದೇಶದಲ್ಲಿ ಗರಿಷ್ಠ ಅಭಿವೃದ್ಧಿ ನೆರವನ್ನು ನೀಡುತ್ತಿದೆ" ಎಂದು ಕಾಂಗ್ರೆಸ್ಗೆ ನೀಡಿದ "ಅಪ್ಘಾನಿಸ್ತಾನದಲ್ಲಿ ಸ್ಥಿರತೆ ಮತ್ತು ಭದ್ರತೆ ವಿಸ್ತರಣೆ" ಎಂಬ ವರದಿಯಲ್ಲಿ ಪೆಂಟಗಾನ್ ವಿವರಿಸಿದೆ.
ಭಾರತದ ಅಭಿವೃದ್ಧಿ ನೆರವಿನಲ್ಲಿ ಮುಖ್ಯವಾಗಿ ನಾಗರಿಕ ಅಭಿವೃದ್ಧಿ ಯೋಜನೆಗಳು ಸೇರಿದ್ದು, ಅಪ್ಘಾನಿಸ್ತಾನ- ಭಾರತ ಸ್ನೇಹ ಅಣೆಕಟ್ಟು ಮತ್ತು ಅಫ್ಘಾನ್ ಸಂಸತ್ ಭವನ ನಿರ್ಮಾಣ ಮುಖ್ಯವಾದವು ಎಂದು ವರದಿ ಹೇಳಿದೆ.
ಅಪ್ಘಾನ್ ಅಧಿಕಾರಿಗಳಿಗೆ ಭಾರತ ಮಹತ್ವದ ತರಬೇತಿಯನ್ನೂ ನೀಡುತ್ತಿದೆ. ಪ್ರತೀ ವರ್ಷ ಸುಮಾರು 130 ಅಫ್ಘಾನ್ ಅಧಿಕಾರಿಗಳು ಭಾರತಕ್ಕೆ ಮಿಲಿಟರಿ ಮತ್ತು ನಿಯೋಜನೆ ಯೋಜನೆಗಳ ತರಬೇತಿಗಾಗಿ ತೆರಳುತ್ತಿದ್ದಾರೆ ಎಂದು ವಿವರಿಸಿದೆ. ಭದ್ರತಾ ನೆರವನ್ನು ಕೂಡಾ ಭಾರತ ನೀಡುತ್ತಿದ್ದು, ನಾಲ್ಕು ಎಂಐ- 35 ವಿಮಾನಗಳನ್ನು ನೀಡಿದೆ ಎಂದು ಉಲ್ಲೇಖಿಸಿದೆ.