ತನ್ನ ಕುರಿತ ಪುಸ್ತಕ ಬಿಡುಗಡೆ ತಡೆಗೆ ಟ್ರಂಪ್ ವಿಫಲ ಯತ್ನ
ಪುಸ್ತಕದಲ್ಲಿ ಅಂತಹದ್ದೇನಿದೆ…ಇಲ್ಲಿದೆ ವಿವರ
ವಾಶಿಂಗ್ಟನ್, ಜ. 5: ಶ್ವೇತಭವನದ ಚಾಡಿಕೋರತನ, ಅಸಮರ್ಥತೆ ಮತ್ತು ಅದಕ್ಷತೆ ಬಗ್ಗೆ ವಿವರಗಳನ್ನು ಹೊಂದಿದೆಯೆನ್ನಲಾದ ನೂತನ ಪುಸ್ತಕವೊಂದರ ಪ್ರಕಟನೆಯನ್ನು ತಡೆಯಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ವಿಫಲ ಪ್ರಯತ್ನ ನಡೆಸಿದ್ದಾರೆ.
ಆದರೆ, ಪುಸ್ತಕವನ್ನು 4 ದಿನ ಮುಂಚಿತವಾಗಿ ಬಿಡುಗಡೆ ಮಾಡುವುದಾಗಿ ಘೋಷಿಸುವ ಮೂಲಕ ಪ್ರಕಾಶಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಲೇಖಕ ಹಾಗೂ ರಾಜಕೀಯ ವಿಡಂಬನಕಾರ ಮೈಕಲ್ ವುಲ್ಫ್ರ ಪುಸ್ತಕ ‘ಫಯರ್ ಆ್ಯಂಡ್ ಫ್ಯೂರಿ: ಇನ್ಸೈಡ್ ದ ಟ್ರಂಪ್ ವೈಟ್ ಹೌಸ್’ ಬಿಡುಗಡೆಯನ್ನು ತಡೆಯುವಂತೆ ಟ್ರಂಪ್ ತನ್ನ ವಕೀಲರಿಗೆ ಸೂಚಿಸಿದ್ದಾರೆ.
ಅಧ್ಯಕ್ಷ ಹುದ್ದೆಗೆ ಟ್ರಂಪ್ರ ಸಾಮರ್ಥ್ಯದ ಬಗ್ಗೆ ಅವರ ಪ್ರಮುಖ ಸಹಾಯಕರು ಈ ಪುಸ್ತಕದಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಮಾನಸಿಕ ಅಸ್ಥಿರತೆ ಹೊಂದಿದ್ದಾರೆ ಹಾಗೂ ಅವರಲ್ಲಿ ದಕ್ಷತೆ ಇಲ್ಲ ಎಂಬುದಾಗಿ ಪುಸ್ತಕ ಹೇಳುತ್ತದೆ. ಟ್ರಂಪ್ರ ಮಾಜಿ ಮಿತ್ರ ಹಾಗೂ ಮುಖ್ಯ ವ್ಯೂಹಗಾರ ಸ್ಟೀವ್ ಬ್ಯಾನನ್ರ ಹೇಳಿಕೆಗಳನ್ನು ಹೇರಳವಾಗಿ ಪ್ರಕಟಿಸಲಾಗಿದೆ.
ಬ್ಯಾನನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.