ಮಗುವಿಗೆ ಜನ್ಮ ನೀಡಿದ ದಿನದಂದೇ ಬಂಪರ್ ಲಾಟರಿ ಹೊಡೆದ ವಾಷಿಂಗ್ಟನ್ ಮಹಿಳೆ
ವಾಷಿಂಗ್ಟನ್,ಫೆ.14 : ಜನವರಿ 5ರಂದು ತನ್ನ ಮೊದಲ ಮಗುವಿಗೆ ಜನ್ಮ ನೀಡಿದ ಮಹಿಳೆಯೊಬ್ಬಳು ಅದೇ ದಿನ 50,000 ಡಾಲರ್ ಲಾಟರಿ ಗೆದ್ದಿದ್ದು ಆಕೆಯ ಕುಟುಂಬದ ಸಂತಸ ಇಮ್ಮಡಿಗೊಳಿಸಿದೆ.
ಸ್ಥಳೀಯ ಸೂಪರ್ ಮಾರ್ಕೆಟ್ ಒಂದರಲ್ಲಿ ಆಕೆ ಖರೀದಿಸಿದ್ದ ಈ ಲಾಟರಿ ಆಕೆಯ ಜೀವನದ ಅತ್ಯಂತ ಮಹತ್ವದ ದಿನದಂದು ಅದೃಷ್ಟ ಆಕೆಯ ಪಾಲಿಗೆ ಒಲಿಯುವಂತೆ ಮಾಡಿತ್ತು. ಆಕೆ ಆಸ್ಪತ್ರೆಯಲ್ಲಿ ಹೆರಿಗೆ ನೋವು ಅನುಭವಿಸುತ್ತಿದ್ದಾಗ ಅತ್ತ ಲಾಟರಿ ಡ್ರಾ ನಡೆಯುತ್ತಿತ್ತು, ಆಕೆ ಮಗುವಿಗೆ ಜನ್ಮ ನೀಡಿದ ಕೆಲವೇ ಕ್ಷಣಗಳಲ್ಲಿ ಆಕೆಗೆ ಎರಡನೇ ಗುಡ್ ನ್ಯೂಸ್ ಬಂದಿತ್ತು.
ಈ ಬಗ್ಗೆ ಎರಡು ದಿನ ಯಾರಿಗೂ ಹೇಳದೆ ವಿಷಯವನ್ನು ಗೌಪ್ಯವಾಗಿರಿಸಿದ್ದ ದಂಪತಿಗಳು ನಂತರ ತಮ್ಮ ಸಂತಸವನ್ನು ಇತರರ ಜತೆಗೆ ಹಂಚಿಕೊಂಡಿದ್ದಾರೆ. ತಾವು ಗೆದ್ದ ಲಾಟರಿ ಹಣದಿಂದ ಅವರು ಆಸ್ಪತ್ರೆ ಬಿಲ್ ಪಾವತಿಸಲು ಹಾಗೂ ಅವರು ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ಖರೀದಿಸಿದ ಹೊಸ ಮನೆಗಾಗಿ ಉಪಯೋಗಿಸಲು ತೀರ್ಮಾನಿಸಿದ್ದಾರೆ.
ತರುವಾಯ ಇನ್ನೊಂದು ಬೆಳವಣಿಗೆಯೊಂದರಲ್ಲಿ ನ್ಯೂ ಹ್ಯಾಂಪ್ ಶಯರ್ ನಲ್ಲಿ ಪವರ್ ಬಾಲ್ ಲಾಟರಿಯೊಂದರಲ್ಲಿ 560 ಮಿಲಿಯನ್ ಡಾಲರ್ ಹಣ ಗೆದ್ದ ಮಹಿಳೆಯೊಬ್ಬಳು ತನ್ನ ಗುರುತು ಗೌಪ್ಯವಾಗಿಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.