ಯುಎಇ: ಆಸ್ಪತ್ರೆ ಕಟ್ಟಡದಿಂದ ಹಾರಿ ಭಾರತೀಯ ನರ್ಸ್ ಆತ್ಮಹತ್ಯೆ
ದುಬೈ, ಎ. 10: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಅಲ್ ಐನ್ ನಗರದಲ್ಲಿರುವ ಆಸ್ಪತ್ರೆಯೊಂದರ ಮೇಲ್ಛಾವಣಿಯಿಂದ ಹಾರಿ ಭಾರತೀಯ ನರ್ಸ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ನರ್ಸ್ನ್ನು ಸುಮಾರು 40 ವರ್ಷದ ಸುಜಾ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಕೇರಳ ನಿವಾಸಿಯಾಗಿದ್ದಾರೆ.
ಅವರು ರವಿವಾರ ಮಧ್ಯಾಹ್ನ ಆಸ್ಪತ್ರೆಯ ಮೇಲ್ಛಾವಣಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರು ಎಂದು ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ‘ಗಲ್ಫ್ ನ್ಯೂಸ್’ ಸೋಮವಾರ ವರದಿ ಮಾಡಿದೆ.
ಸುಜಾ ಸಿಂಗ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಕ್ಕಳು ವಿದೇಶದಲ್ಲಿ ಕಲಿಯುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.
ಸುಜಾ ಸಿಂಗ್ ಜನವರಿಯಿಂದ ನರ್ಸ್ಗಳ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಆಸ್ಪತ್ರೆಯ ಅಧಿಕೃತ ವಕ್ತಾರರೊಬ್ಬರು ತಿಳಿಸಿದರು. ಅವರು ಗಂಡನಿಂದ ವಿಚ್ಛೇದನ ಪಡೆದಿದ್ದರು ಎಂದು ಪತ್ರಿಕೆ ಹೇಳಿದೆ. ವಿದೇಶದಲ್ಲಿರುವ ಮಕ್ಕಳು ಪಾರ್ಥಿವ ಶರೀರವನ್ನು ಪಡೆಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
Next Story