ದತ್ತಾಂಶ ಸೋರಿಕೆಯಿಂದ ಭಾರತದ ಚುನಾವಣೆಗಳ ಮೇಲೆ ಪರಿಣಾಮ : ಫೇಸ್ ಬುಕ್ ಸಿಇಒ ಝುಕರ್ ಬರ್ಗ್ ಹೇಳಿದ್ದೇನು?
ವಾಷಿಂಗ್ಟನ್,ಎ.11 : ತನ್ನ ಬಳಕೆದಾರರ ಮಾಹಿತಿಯ ಸೋರಿಕೆಯ ವಿಚಾರವಾಗಿ ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಬಹಿರಂಗವಾಗಿ ಮಂಗಳವಾರ ಕ್ಷಮೆ ಯಾಚಿಸಿದ್ದಾರೆ. ಅಮೆರಿಕಾದ ಸೆನೇಟ್ ನ ನ್ಯಾಯಾಂಗ ಮತ್ತು ವಾಣಿಜ್ಯ ಸಮಿತಿಗಳ ಜಂಟಿ ವಿಚಾರಣೆ ಸಂದರ್ಭ ಮಾತನಾಡಿದ ಝುಕರ್ ಬರ್ಗ್ ಭಾರತ, ಅಮೆರಿಕಾ, ಬ್ರೆಜಿಲ್ ಮತ್ತಿತರ ದೇಶಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಹಸ್ತಕ್ಷೇಪ ನಡೆಸಲು ತಮ್ಮ ಸಂಸ್ಥೆಯನ್ನು ಬಳಸದಂತೆ ಎಚ್ಚರಿಕೆ ವಹಿಸುವುದಾಗಿ ಅವರು ತಿಳಿಸಿದ್ದಾರೆ.
"ನಾವು ನಮ್ಮ ಜವಾಬ್ದಾರಿಯ ಬಗ್ಗೆ ಸರಿಯಾದ ಗಮನ ಹರಿಸಿರಲಿಲ್ಲ. ಇದು ದೊಡ್ಡ ತಪ್ಪಾಗಿತ್ತು. ಅದು ನನ್ನ ತಪ್ಪು, ಕ್ಷಮಿಸಿ, ನಾನು ಫೇಸ್ ಬುಕ್ ಸ್ಥಾಪಿಸಿದೆ. ಅದನ್ನು ನಡೆಸುತ್ತಿದ್ದೇನೆ, ಅಲ್ಲೇನು ನಡೆದರೂ ಅದಕ್ಕೆ ನಾನು ಜವಾಬ್ದಾರ,'' ಎಂದು 33 ವರ್ಷದ ಝುಕರ್ ಬರ್ಗ್ ತಿಳಿಸಿದರು.
"ಸದ್ಯಕ್ಕೆ ನಾನು ಗಮನ ಹರಿಸುವ ಅತ್ಯಂತ ಮುಖ್ಯ ವಿಚಾರವೆಂದರೆ 2018ರಲ್ಲಿ ಜಗತ್ತಿನ ಹಲವೆಡೆ ನಡೆಯುವ ಚುನಾವಣೆಗಳಲ್ಲಿ ಯಾರೂ ಹಸ್ತಕ್ಷೇಪ ನಡೆಸದಂತೆ ತಡೆಯುವುದಾಗಿದೆ,'' ಎಂದು ಝುಕರ್ ಬರ್ಗ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.
ತಮ್ಮ ಮಾತುಗಳ ನಡುವೆ ಝುಕರ್ ಬರ್ಗ್ ಭಾರತ, ಬ್ರೆಜಿಲ್, ಮೆಕ್ಸಿಕೋ, ಪಾಕಿಸ್ತಾನ ಮತ್ತು ಹಂಗೆರಿಯಲ್ಲಿ ನಡೆಯುವ ಚುನಾವಣೆಯ ಬಗ್ಗೆ ಮತ್ತೆ ಮತ್ತೆ ಉಲ್ಲೇಖಿಸಿದ್ದಾರೆ.
ಫೇಸ್ ಬುಕ್ ನ 2 ಬಿಲಿಯನ್ ಬಳಕೆದಾರರಲ್ಲಿ ಹೆಚ್ಚಿನವರು ಅಮೆರಿಕಾದ ಹೊರಗಿನವರು. ಭಾರತದಲ್ಲಿ 217 ಮಿಲಿಯನ್ ಬಳಕೆದಾರರಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಜನರ ಖಾಸಗಿ ಮಾಹಿತಿಯನ್ನು ಹೊರಗಿನವರು ಪಡೆಯದಂತೆ ಫೇಸ್ ಬುಕ್ ಕೈಗೊಂಡ ಕ್ರಮಗಳ ಬಗ್ಗೆಯೂ ಝುಕರ್ ಬರ್ಗ್ ಹೇಳಿದ್ದಾರೆ. ತಮ್ಮ ಸಂಸ್ಥೆ ವಿವಿಧ ಅಗತ್ಯ ವಿಚಾರಗಳ ಬಗ್ಗೆ ಚರ್ಚೆಯನ್ನು ಮುಂದುವರಿಸುವುದಾಗಿಯೂ ಅವರು ತಿಳಿಸಿದ್ದಾರೆ.