ಲಂಡನ್ನಲ್ಲಿ ಪ್ರಧಾನಿ ಮೋದಿಗೆ ಪ್ರತಿಭಟನೆಯ ಸ್ವಾಗತ ನೀಡಿದ ಅನಿವಾಸಿ ಭಾರತೀಯರು
ಲೈಂಗಿಕ ಹಿಂಸೆಗಳ ವಿರುದ್ಧ ಆಕ್ರೋಶ
ಲಂಡನ್, ಎ.18: ಪ್ರಧಾನಿ ನರೇಂದ್ರ ಮೋದಿ ಬುಧವಾರದಂದು ಲಂಡನ್ ತಲುಪಿದ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ನೂರಾರು ಜನರು ಅವರಿಗೆ ಪ್ರತಿಭಟನೆಯ ಸ್ವಾಗತವನ್ನು ನೀಡಿದರು. ಭಾರತದಲ್ಲಿ ನಡೆಯುತ್ತಿರುವ ಲೈಂಗಿಕ ಹಿಂಸೆಗಳ ಹಿನ್ನೆಲೆಯಲ್ಲಿ ಆಕ್ರೋಶಿತ ಅನಿವಾಸಿ ಭಾರತೀಯರು ಮೋದಿ ಆಗಮನದ ವೇಳೆ ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಕಥುವಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಹಾಗೂ ಉನ್ನಾವೊ ಅತ್ಯಾಚಾರ ಪ್ರಕರಣಗಳಿಂದ ದೇಶವೇ ತಲ್ಲಣಗೊಂಡಿದೆ. ಇದೀಗ ಇದರ ಬಿಸಿ ಹೊಸದೇಶಗಳಿಗೂ ಹಬ್ಬಿದ್ದು ಬುಧವಾರದಂದು ಪ್ರತಿಭಟನಾಕಾರರು 'ಮೋದಿ ಗೋ ಹೋಮ್' ಮತ್ತು 'ಮೋದಿಯ ದ್ವೇಷ ಮತ್ತು ದುರಾಸೆಯ ಸಿದ್ಧಾಂತದ ವಿರುದ್ಧ ನಾವು ನಿಲ್ಲುತ್ತೇವೆ' ಎಂಬ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಭಾರತದಲ್ಲಿ ನಡೆಯುವ ಶೇ. 40 ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರು ಮಕ್ಕಳಾಗಿರುತ್ತಾರೆ. 2012ರಿಂದ 2016ರ ವೇಳೆಗೆ ಅತ್ಯಾಚಾರ ಪ್ರಕರಣಗಳಲ್ಲಿ ಶೇ. 60 ಏರಿಕೆ ಕಂಡಿದೆ. 2016ರಲ್ಲಿ 40,000 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಸರಕಾರಿ ಅಂಕಿಅಂಶಗಳು ತಿಳಿಸುತ್ತವೆ.