ಅಮೆರಿಕದ ವ್ಯಾಪಾರ ನಿರ್ಬಂಧದ ವಿರುದ್ಧ ಚೀನಾ ವಾಗ್ದಾಳಿ: ವ್ಯಾಪಾರ ಸಮರಕ್ಕೆ ಸಿದ್ಧವೆಂದ ಬೀಜಿಂಗ್
ಬೀಜಿಂಗ್, ಮೇ 30: ಚೀನಾದ ಸಂಸ್ಥೆಗಳ ಹೂಡಿಕೆಯ ಮೇಲೆ ನಿರ್ಬಂಧ ಹೇರುವ ಅಮೆರಿಕದ ಘೋಷಣೆಯ ವಿರುದ್ಧ ಬುಧವಾರ ತೀವ್ರವಾಗಿ ವಾಗ್ದಾಳಿ ನಡೆಸಿದ ಚೀನಾ, ಒಂದು ವೇಳೆ ಅಮೆರಿಕವು ವ್ಯಾಪಾರ ಸಮರವನ್ನು ಆರಂಭಿಸಲು ನೋಡುತ್ತಿರುವುದಾದರೆ ಚೀನಾ ಅದಕ್ಕೂ ಸಿದ್ಧವಾಗಿದೆ ಎಂದು ತಿಳಿಸಿದೆ. ಚೀನಾವು ಅಮೆರಿಕದ ಭೌತಿಕ ಆಸ್ತಿಯ ಕಳ್ಳತನವನ್ನು ತಡೆಯಲು ಸರಿಯಾದ ಕ್ರಮವನ್ನು ತೆಗೆದುಕೊಳ್ಳದಿದ್ದರೆ ದರ 50 ಬಿಲಿಯನ್ ಡಾಲರ್ ಆಮದಿನ ಮೇಲೆ ಸುಂಕ ಹೇರುವ ಪ್ರಸ್ತಾವ ಅಮೆರಿಕಾದ ಮುಂದಿದೆ ಎಂದು ಯುಎಸ್ ಮಂಗಳವಾರ ತಿಳಿಸಿತ್ತು.
ಅಮೆರಿಕಾದಿಂದ ಚೀನಾವು ಆಮದು ಮಾಡಿಕೊಳ್ಳುವ ಪ್ರಮಾಣದಲ್ಲಿ ಏರಿಕೆ ಮಾಡುವ ಬಗ್ಗೆ ಎರಡೂ ದೇಶಗಳ ಮಧ್ಯೆ ಈ ತಿಂಗಳ ಆರಂಭದಲ್ಲಿ ಮಾತುಕತೆ ನಡೆದಿತ್ತು. ಅಮೆರಿಕದ ಇತ್ತೀಚಿನ ಘೋಷಣೆಯಿಂದ ಆಘಾತಗೊಂಡಿರುವ ಚೀನಾ ಈ ಹೇಳಿಕೆ ಇದಕ್ಕೂ ಮೊದಲು ಎರಡು ದೇಶಗಳ ನಡುವೆ ನಡೆದಿದ್ದ ಮಾತುಕತೆಗೆ ವಿರುದ್ಧವಾಗಿದೆ ಎಂದು ತಿಳಿಸಿದೆ.
ಅಮೆರಿಕವು ಈ ರೀತಿ ಅತಿರೇಕದಿಂದ ವರ್ತಿಸುವುದಿಲ್ಲ ಎಂದು ಚೀನಾ ಭಾವಿಸಿತ್ತು. ಆದರೆ ನಾವು ನಮ್ಮ ಹಿತಾಸಕ್ತಿಯನ್ನು ಕಾಪಾಡಲು ಯಾವ ಹೋರಾಟ ಮಾಡಲೂ ಸಿದ್ಧರಾಗಿದ್ದೇವೆ ಎಂದು ಸುದ್ದಿ ಸಂಸ್ಥೆ ಕ್ಸಿನೌ ವರದಿ ಮಾಡಿದೆ. “ಚೀನಾದ ಧೋರಣೆ ಒಂದೇ; ನಾವು ಯುದ್ಧವನ್ನು ಬಯಸುವುದಿಲ್ಲ, ಆದರೆ ನಾವು ಯುದ್ಧ ಮಾಡಲು ಹೆದರುವುದೂ ಇಲ್ಲ ಎಂದು ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಅಮೆರಿಕದ ಭೌತಿಕ ಆಸ್ತಿಯ ಕಳ್ಳತನ ಮಾಡುವುದನ್ನು ತಡೆಯಲು ಚೀನಾದ ನಾಗರಿಕರಿಗೆ ನೀಡಲಾಗಿದ್ದ ವೀಸಾದ ಅವಧಿಯನ್ನು ಕಡಿತಗೊಳಿಸಲು ಅಮೆರಿಕ ಯೋಜಿಸುತ್ತಿದೆ ಎಂದು ಶ್ವೇತಭವನದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಅಮೆರಿಕದ ತಂತ್ರಜ್ಞಾನಗಳನ್ನು ಚೀನಾದ ವ್ಯವಹಾರಗಳಿಗೆ ವರ್ಗಾವಣೆ ಮಾಡುವಂತೆ ಚೀನಾ ವಿದೇಶಿ ಸಂಸ್ಥೆಗಳ ಮೇಲೆ ಒತ್ತಡ ಹೇರುತ್ತಿದೆ ಎಂಬ ಅಮೆರಿಕದ ಆರೋಪ ಆಧಾರರಹಿತವಾಗಿದೆ ಮತ್ತು ತನ್ನ ವ್ಯಾಪಾರ ರಕ್ಷಣಾವಾದವನ್ನು ಬಳಕೆ ತರುವ ಪ್ರಯತ್ನವಾಗಿದೆ ಎಂದು ಚೀನಾದ ಮಾಧ್ಯಮಗಳು ದೂರಿವೆ. ಯುಎಸ್ ಸಂಸ್ಥೆಗಳು ಮತ್ತು ಚೀನಾದ ಕಂಪೆನಿಗಳ ನಡುವೆ ನಡೆದಿರುವ ತಂತ್ರಜ್ಞಾನ ವರ್ಗಾವಣೆಗಳು ಸಹಜ ವ್ಯವಹಾರದ ಭಾಗವೇ ಆಗಿದೆ ವಿನಃ ಅದರಲ್ಲಿ ಯಾವುದೇ ವಂಚನೆ ನಡೆದಿಲ್ಲ ಎಂದು ಚೀನಾ ತಿಳಿಸಿದೆ.
ನಮ್ಮ ಶತ್ರುಗಳಿಗೆ ನಮ್ಮ ಭೌತಿಕ ಆಸ್ತಿಗಳು ವರ್ಗಾವಣೆಯಾಗುವುದನ್ನು ತಡೆಯಲು ಕೆಲವು ದೇಶಗಳ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ವೀಸಾ ನಿರ್ಬಂಧ ಹೇರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಟ್ರಂಪ್ ಕಳೆದ ಡಿಸೆಂಬರ್ನಲ್ಲಿ ಹೊರಡಿಸಿದ ಪ್ರಕಟನೆಯಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.