ಟ್ರಂಪ್- ಕಿಮ್ ಜಾಂಗ್ ಉನ್ ಶೃಂಗ ಸಮ್ಮೇಳನಕ್ಕಾಗಿ ಸಿಂಗಾಪುರ ವಾಯುಪ್ರದೇಶ ಬಂದ್
ಸಿಂಗಾಪುರ, ಜೂ. 6: ಮುಂದಿನ ವಾರ ನಡೆಯಲು ನಿಗದಿಯಾಗಿರುವ ಅಮೆರಿಕ-ಉತ್ತರ ಕೊರಿಯ ಶೃಂಗ ಸಮ್ಮೇಳನದ ವೇಳೆ ಸಿಂಗಾಪುರ ವಾಯು ಪ್ರದೇಶವನ್ನು ನಿರ್ಬಂಧಿಸಲಾಗುವುದು.
ಇದಕ್ಕೆ ಸಂಬಂಧಿಸಿದ ಸೂಚನೆಯನ್ನು ವಾಯುಯಾನ ಅಧಿಕಾರಿಗಳು ಬುಧವಾರ ಏರ್ಮನ್ (ವಾಯುಪ್ರದೇಶ ನಿಯಂತ್ರಕರು)ಗಳಿಗೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ಐತಿಹಾಸಿಕ ಸಮ್ಮೇಳನವು ಸಿಂಗಾಪುರದಲ್ಲಿ ಜೂನ್ 12ರಂದು ನಡೆಯಲು ನಿಗದಿಯಾಗಿರುವುದನ್ನು ಸ್ಮರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಿಂಗಾಪುರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಸಿಂಗಾಪುರ ವಾಯುಪ್ರದೇಶವನ್ನು ಜೂನ್ 11, 12 ಮತ್ತು 13ರಂದು ತಾತ್ಕಾಲಿಕವಾಗಿ ಆಂಶಿಕವಾಗಿ ನಿರ್ಬಂಧಿಸಲಾಗುವುದು ಎಂದು ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಘಟನೆ (ಐಸಿಎಒ) ಮತ್ತು ಯುಎಸ್ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್ಗಳ ವೆಬ್ಸೈಟ್ಗಳಲ್ಲಿ ಹಾಕಲಾದ ನೋಟಿಸ್ ಹೇಳಿದೆ.
ಸೆಂಟೋಸ ದ್ವೀಪದಲ್ಲಿ ಬೆಳಗ್ಗೆ 9 ಗಂಟೆಗೆ ಸಮ್ಮೇಳನ
ಸಿಂಗಾಪುರದ ಸೆಂಟೋಸ ದ್ವೀಪದಲ್ಲಿರುವ ಕ್ಯಾಪೆಲಾ ಹೊಟೇಲ್ನಲ್ಲಿ ಜೂನ್ 12ರಂದು ಬೆಳಗ್ಗೆ 9 ಗಂಟೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ರನ್ನು ಭೇಟಿಯಾಗಲಿದ್ದಾರೆ ಎಂದು ಶ್ವೇತಭವನ ಘೋಷಿಸಿದೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಸೋಮವಾರ ಉಭಯ ನಾಯಕರ ಭೇಟಿ ಸಮಯವನ್ನು ಪ್ರಕಟಿಸಿದರು ಹಾಗೂ ಮಂಗಳವಾರ ಟ್ವೀಟ್ ಮಾಡಿ ಸ್ಥಳವನ್ನು ಖಚಿತಪಡಿಸಿದರು.