ಚೀನಾದ ಬಿಆರ್ಐ ಯೋಜನೆ ಬೆಂಬಲಿಸಲು ಭಾರತ ನಕಾರ: ಎಸ್ಸಿಓನ ಉಳಿದ 7 ಸದಸ್ಯ ರಾಷ್ಟ್ರಗಳಿಂದ ಯೋಜನೆಗೆ ಬೆಂಬಲ
ಕ್ವಿಂಗ್ಡಾಂಗ್, ಜೂ.10: ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ (ಬಿಆರ್ಐ) ಯೋಜನೆಯನ್ನು ಭಾರತ ರವಿವಾರ ನಡೆದ ಶಾಂಘೈ ಶೃಂಗಸಭೆಯಲ್ಲಿ ಬಲವಾಗಿ ವಿರೋಧಿಸಿದೆ. ಎಂಟು ರಾಷ್ಟ್ರಗಳ ಒಕ್ಕೂಟವಾದ ಶಾಂಘೈ ಶೃಂಗಸಭೆಯಲ್ಲಿ ಓಬಿಆರ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಏಕೈಕ ರಾಷ್ಟ್ರ ಭಾರತವಾಗಿದೆ. ಓಬಿಆರ್ನಂತಹ ಯಾವುದೇ ಬೃಹತ್ ಸಂಪರ್ಕ ಯೋಜನೆಯು ವಿವಿಧ ದೇಶಗಳ ಸಾರ್ವಭೌಮತೆ ಹಾಗೂ ಪ್ರಾಂತೀಯ ಸಮಗ್ರತೆಯನ್ನು ಗೌರವಿಸಬೇಕೆಂದು ಮೋದಿ ಶೃಂಗಸಭೆಯಲ್ಲಿ ಪ್ರತಿಪಾದಿಸಿದ್ದಾರೆ.
ಮೋದಿಯವರನ್ನು ಹೊರತುಪಡಿಸಿ ಎಸ್ಸಿಓನ ಉಳಿದ ಏಳು ರಾಷ್ಟ್ರಗಳ ನಾಯಕರು ಬಿಆರ್ಐ ಯೋಜನೆಯನ್ನು ಬೆಂಬಲಿಸುವ ಜಂಟಿ ಘೋಷಣಾ ಪತ್ರಕ್ಕೆ ಸಹಿಹಾಕಿದ್ದಾರೆ. ರಶ್ಯ,ಪಾಕಿಸ್ತಾನ, ಕಝಕಸ್ತಾನ, ಉಝ್ಬೆಕಿಸ್ತಾನ, ಕಿರ್ಗಿಝ್ಸ್ತಾನ ಹಾಗೂ ತಾಜಿಕಿಸ್ತಾನ ರಾಷ್ಟ್ರಗಳು ಚೀನಾದ ಬಿರ್ಐ ಯೋಜನೆಗೆ ತಮ್ಮ ಬೆಂಬಲವನ್ನು ಪ್ರಕಟಿಸಿವೆ.
ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಾ, ‘‘ ದೇಶಗಳ ಪ್ರಾದೇಶಿಕ ಏಕತೆ ಹಾಗೂ ಸಾರ್ವಭೌಮತೆಯನ್ನು ಗೌರವಿಸುವ ಸಂಪರ್ಕಶೀಲ ಯೋಜನೆಗಳನ್ನು ಭಾರತವು ಗೌರವಿಸುತ್ತದೆ’’ ಎಂದರು.
ಚೀನಾದ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಬಿಆರ್ಐನ ಭಾರತವು ಬಲವಾಗಿ ವಿರೋಧಿಸುತ್ತಿದೆ. 50 ಶತಕೋಟಿ ಡಾಲರ್ ವೆಚ್ಚದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ (ಸಿಪಿಇಸಿ)ನ ಭಾಗವಾದ ಬಿಆರ್ಐ ಯೋಜನೆಯು ಪಾಕ್ ಆಕ್ರಮಿತ ಕಾಶ್ಮೀರ ಮಾರ್ಗವಾಗಿ ಸಾಗುತ್ತದೆ.
ಈ ಯೋಜನೆಯನ್ನು ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಗೆ ಆತಂಕಕಾರಿಯಾಗಿರುವುದರಿಂದ ತಾನು ಆ ಯೋಜನೆಯನ್ನು ಬೆಂಬಲಿಸುದಿಲ್ಲವೆಂದು ಭಾರತವು ಹೇಳಿಕೊಳ್ಳುತ್ತಲೇ ಬಂದಿದೆ.