ಫೆಲೆಸ್ತೀನಿಯರ ಸಾವಿಗೆ ಇಸ್ರೇಲನ್ನು ಖಂಡಿಸುವ ನಿರ್ಣಯ: 120 ದೇಶಗಳ ಬೆಂಬಲ
ವಿಶ್ವಸಂಸ್ಥೆ, ಜೂ. 14: ಗಾಝಾದಲ್ಲಿ ನಡೆಯುತ್ತಿರುವ ಫೆಲೆಸ್ತೀನಿಯರ ಸಾವಿಗೆ ಇಸ್ರೇಲನ್ನು ಖಂಡಿಸುವ ಅರಬ್ ಬೆಂಬಲಿತ ನಿರ್ಣಯವೊಂದನ್ನು ವಿಶ್ವಸಂಸ್ಥೆಯು ಬುಧವಾರ 120 ದೇಶಗಳ ಅಗಾಧ ಬೆಂಬಲದೊಂದಿಗೆ ಅಂಗೀಕರಿಸಿದೆ ಹಾಗೂ ಸಾವುಗಳ ಹೊಣೆಯನ್ನು ಹಮಾಸ್ ಮೇಲೆ ಹೊರಿಸುವ ಅಮೆರಿಕದ ಯತ್ನವನ್ನು ಅದು ತಿರಸ್ಕರಿಸಿದೆ.
ಮಾರ್ಚ್ ಕೊನೆಯಿಂದ ಪ್ರತಿ ಶುಕ್ರವಾರ ಫೆಲೆಸ್ತೀನಿಯರು ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಗಡಿ ಸಮೀಪ ನಡೆಸಿಕೊಂಡು ಬರುತ್ತಿರುವ ಬೃಹತ್ ಪ್ರತಿಭಟನೆಗಳ ವೇಳೆ ಈವರೆಗೆ ಕನಿಷ್ಠ 129 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಇಸ್ರೇಲ್ ಕಡೆಯಿಂದ ಯಾವುದೇ ಸಾವು ಸಂಭವಿಸಿಲ್ಲ.
ಇಸ್ರೇಲ್ ದೇಶ ನಿರ್ಮಾಣದ ವೇಳೆ ನಿರ್ವಸಿತರಾದ ಫೆಲೆಸ್ತೀನಿಯರಿಗೆ ಮತ್ತೆ ತಮ್ಮ ಪೂರ್ವಿಕರ ಸ್ಥಳಗಳಿಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂಬುದಾಗಿ ಒತ್ತಾಯಿಸಿ ಫೆಲೆಸ್ತೀನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಿರ್ಣಯವನ್ನು ಅಲ್ಜೀರಿಯ ಮತ್ತು ಟರ್ಕಿಗಳು ಅರಬ್ ಮತ್ತು ಮುಸ್ಲಿಮ್ ದೇಶಗಳ ಪರವಾಗಿ ವಿಶ್ವಸಂಸ್ಥೆಯಲ್ಲಿ ಮಂಡಿಸಿದವು.
193 ಸದಸ್ಯರ ವಿಶ್ವಸಂಸ್ಥೆಯಲ್ಲಿ 120 ಸದಸ್ಯರು ನಿರ್ಣಯದ ಪರವಾಗಿ ಮತ ಹಾಕಿದರು. 8 ದೇಶಗಳು ನಿರ್ಣಯದ ವಿರುದ್ಧವಾಗಿ ಮತ ಹಾಕಿದರೆ, 45 ದೇಶಗಳು ಗೈರುಹಾಜರಾದವು.