ಮುಶರ್ರಫ್ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ: ಸುಪ್ರೀಂ ಕೋರ್ಟ್
ಲಾಹೋರ್, ಜೂ. 14: ಪಾಕಿಸ್ತಾನದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಸೇನಾಡಳಿತಗಾರ ಪರ್ವೇಝ್ ಮುಶರ್ರಫ್ಗೆ ನೀಡಲಾಗಿದ್ದ ಶರತ್ತುಬದ್ಧ ಅನುಮೋದನೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಹಿಂದಕ್ಕೆ ಪಡೆದುಕೊಂಡಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ತನ್ನನ್ನು ಶಾಶ್ವತವಾಗಿ ನಿಷೇಧಿಸಿ 2013ರಲ್ಲಿ ಪೇಶಾವರ ಹೈಕೋರ್ಟ್ ನೀಡಿದ ತೀರ್ಪನ್ನು ಮುಶರ್ರಫ್ ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದರು. ಆದರೆ, ತನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಹೇಳಿ ಈ ವಿಚಾರಣೆಗೆ ಮುಶರ್ರಫ್ ಹಾಜರಾಗಿರಲಿಲ್ಲ.
ವಿಚಾರಣೆಗೆ ತನ್ನ ಮುಂದೆ ಗುರುವಾರ ಮಧ್ಯಾಹ್ನದ ಒಳಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಬುಧವಾರ ಅಂತಿಮ ಗಡು ನೀಡಿತ್ತು.
ಆದರೆ, ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ, ಮುಶರ್ರಫ್ ಚುನಾವಣೆಯಲ್ಲಿ ಸ್ಪರ್ಧಿಸಲು ನೀಡಿರುವ ಅನುಮತಿಯನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿದೆ.
Next Story