4.69 ಬಿಲಿಯನ್ ಡಾಲರ್ ಪರಿಹಾರ ನೀಡಲು ಜಾನ್ಸನ್ & ಜಾನ್ಸನ್ ಕಂಪೆನಿಗೆ ನ್ಯಾಯಾಲಯ ಆದೇಶ
ಟಾಲ್ಕಂ ಪೌಡರ್ ನಿಂದ ಕ್ಯಾನ್ಸರ್ ಉಂಟಾಗಿದೆ ಎಂಬ ದೂರಿನ ಹಿನ್ನೆಲೆ
ವಾಷಿಂಗ್ಟನ್, ಜು.13: ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಟಾಲ್ಕಂ ಪೌಡರ್ ಶಿಶು ಉತ್ಪನ್ನಗಳ ಬಳಕೆಯಿಂದ ತಮಗೆ ಅಂಡಾಶಯ ಕ್ಯಾನ್ಸರ್ ಉಂಟಾಗಿದೆ ಎಂದು ಆರೋಪಿಸಿ 22 ಮಹಿಳೆಯರ ದೂರಿಗೆ ಸಂಬಂಧಿಸಿ ಅಮೆರಿಕದ ಮಿಸ್ಸೋರಿಯ ಸೈಂಟ್ ಲೂಯಿಸ್ ನಲ್ಲಿರುವ ನ್ಯಾಯಾಲಯವೊಂದು ಗುರುವಾರ ತನ್ನ ಆದೇಶದಲ್ಲಿ ಸಂತ್ರಸ್ತ ಮಹಿಳೆಯರು ಮತ್ತವರ ಕುಟುಂಬಗಳಿಗೆ ಕಂಪೆನಿಯು 4.69 ಬಿಲಿಯನ್ ಡಾಲರ್ ಪರಿಹಾರ ನೀಡಬೇಕೆಂದು ಸೂಚಿಸಿದೆ. ಈ ಒಟ್ಟು ಮೊತ್ತದಲ್ಲಿ 550 ಮಿಲಿಯನ್ ಡಾಲರ್ ಮೊತ್ತ ಪರಿಹಾರವಾಗಿ ಹಾಗೂ 4.41 ಬಿಲಿಯನ್ ಡಾಲರ್ ಮೊತ್ತ ದಂಡವಾಗಿ ಪಾವತಿಸಬೇಕಿದೆ.
ಇಂತಹುದೇ ಸುಮಾರು 9,000 ಪ್ರಕರಣಗಳನ್ನು ಕಂಪೆನಿ ಎದುರಿಸುತ್ತಿದ್ದರೂ ಇಷ್ಟೊಂದು ದೊಡ್ಡ ಮೊತ್ತದ ಪರಿಹಾರ ನೀಡುವಂತೆ ಆದೇಶ ಪಡೆದಿರುವುದು ಇದೇ ಮೊದಲ ಬಾರಿಯಾಗಿದೆ.
ಕಂಪೆನಿಯ ಶಿಶುಗಳ ಉತ್ಪನ್ನವಾದ ಟಾಲ್ಕಂ ಪೌಡರ್ ನಲ್ಲಿರುವ ಎಸ್ಬೆಸ್ಟೋಸ್ ತಮಗೆ 1970ರ ದಶಕದಿಂದ ಅಂಡಾಶಯ ಕ್ಯಾನ್ಸರಿಗೆ ಕಾರಣವಾಗಿದೆ ಎಂದು ದೂರುದಾರರು ಆರೋಪಿಸಿದ್ದರು. ದೂರುದಾರರ ಪೈಕಿ ಆರು ಮಂದಿ ಈಗಾಗಲೇ ಮೃತಪಟ್ಟಿದ್ದಾರೆ.
ತಾನು ಈ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುವುದಾಗಿ ಹೇಳಿರುವ ಜಾನ್ಸನ್ ಆ್ಯಂಡ್ ಜಾನ್ಸನ್, ತನ್ನ ಟಾಲ್ಕ್ ಉತ್ಪನ್ನಗಳು ಕ್ಯಾನ್ಸರ್ ಉಂಟು ಮಾಡುವುದಿಲ್ಲ ಹಾಗೂ ಅವುಗಳಲ್ಲಿ ಎಸ್ಬೆಸ್ಟೋಸ್ ಇಲ್ಲ ಎಂದು ಸ್ಪಷ್ಟಪಡಿಸಿದೆ.