ಆಸ್ಟ್ರೇಲಿಯ: ಯುವತಿಯ ವಿರುದ್ಧ ಭಾರತೀಯ ವಿದ್ಯಾರ್ಥಿಯ ಕೊಂದ ಆರೋಪ
ಮೆಲ್ಬರ್ನ್, ಜು. 30: ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾದ ಭಾರತೀಯ ವಿದ್ಯಾರ್ಥಿಯೋರ್ವನನ್ನು ಕೊಂದ ಆರೋಪವನ್ನು ಆಸ್ಟ್ರೇಲಿಯ ಪೊಲೀಸರು ಹದಿಹರೆಯದ ಹುಡುಗಿಯೊಬ್ಬಳ ಮೇಲೆ ಸೋಮವಾರ ಹೊರಿಸಿದ್ದಾರೆ.
ಸ್ಯಾನ್ಬರಿಯಲ್ಲಿರುವ ತನ್ನ ಮನೆಯಲ್ಲಿ ಸೋಮವಾರ ಮೌಲಿನ್ ರಾಥೋಡ್ ಎಂಬ ಭಾರತೀಯ ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿರುವುದಕ್ಕಾಗಿ 18 ವರ್ಷದ ಜೇಮೀ ಲೀ ಡೋಲ್ಗೈ ಎಂಬ ಯುವತಿಯನ್ನು ಕಳೆದ ವಾರ ಪೊಲೀಸರು ಬಂಧಿಸಿದ್ದರು.
ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ 25 ವರ್ಷದ ಭಾರತೀಯ ವಿದ್ಯಾರ್ಥಿಯು ಮರುದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಪೊಲೀಸ್ ಕಸ್ಟಡಿಯಿಂದ ವೀಡಿಯೊ ಲಿಂಕ್ ಮೂಲಕ ಪೊಲೀಸರು ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದಾಗ ಅವಳು ಯಾವುದೇ ಭಾವನೆಯನ್ನು ತೋರ್ಪಡಿಸಲಿಲ್ಲ.
ರಾಥೋಡ್ ಮತ್ತು ಡೋಲ್ಗೈ ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾಗಿದ್ದು, ಮುಖತಃ ಭೇಟಿಯಾಗಲು ನಿರ್ಧರಿಸಿದ್ದರು. ಡೋಲ್ಗೈಯನ್ನು ಆಕೆಯ ಮನೆಯಲ್ಲಿ ರಾಥೋಡ್ ಭೇಟಿಯಾದಾಗ ದಾಳಿ ನಡೆದಿದೆ.
Next Story