ಲಂಡನ್: ಖಲಿಸ್ತಾನ ಪರ ಸಭೆಗೆ ಪ್ರತಿಯಾಗಿ ಭಾರತ ಪರ ಸಭೆ
ಘೋಷಣೆ, ಪ್ರತಿಘೋಷಣೆಗಳು; ಖಲಿಸ್ತಾನಿಯರಿಂದ ‘ಲಂಡನ್ ಘೋಷಣೆ’
ಲಂಡನ್, ಆ. 13: ಲಂಡನ್ನ ಟ್ರಾಫಲ್ಗರ್ ಚೌಕದಲ್ಲಿ ರವಿವಾರ ಎರಡು ಪರಸ್ಪರ ವಿರೋಧಿ ಸಭೆಗಳು ನಡೆದವು. ಒಂದು ಸಭೆಯು ಪಂಜಾಬ್ ರಾಜ್ಯವನ್ನು ಸ್ವತಂತ್ರ ‘ಖಲಿಸ್ತಾನ’ ದೇಶವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರೆ, ಇದನ್ನು ವಿರೋಧಿಸಿದ ಇನ್ನೊಂದು ಸಭೆಯು ಭಾರತ ಪರ ಧರಣಿ ನಡೆಸಿತು.
ಪಂಜಾಬನ್ನು ಸ್ವತಂತ್ರ ದೇಶವನ್ನಾಗಿ ಘೋಷಿಸುವುದಕ್ಕೆ ಸಂಬಂಧಿಸಿ 2020ರಲ್ಲಿ ಜನಮತಗಣನೆ ನಡೆಸುವ ‘ಲಂಡನ್ ಘೋಷಣೆ’ಯನ್ನು ಹೊರಡಿಸಲು 2,500ಕ್ಕೂ ಅಧಿಕ ಖಲಿಸ್ತಾನ ಬೆಂಬಲಿಗರು ನೆರೆದಿದ್ದರು. ಅಮೆರಿಕದ ‘ಸಿಖ್ಸ್ ಫಾರ್ ಜಸ್ಟಿಸ್’ ಈ ಸಭೆಯನ್ನು ಏರ್ಪಡಿಸಿತ್ತು.
ಯುರೋಪ್ನ ಇತರ ಭಾಗಗಳಲ್ಲಿ ವಾಸಿಸುತ್ತಿರುವ ಜನರೂ ಲಂಡನ್ ಸಭೆಯಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಕೆಲವು ಶಕ್ತಿಗಳು ಬೆಂಬಲ ನೀಡಿವೆ ಎಂದು ಆರೋಪಿಸಲಾಗಿದೆ. ಇದೇ ಸಂದರ್ಭದಲ್ಲಿ ಭಾರತ ಪರ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತಕ್ಕೆ ಸಂಬಂಧಿಸಿದ ಫಲಕಗಳನ್ನು ಪ್ರದರ್ಶಿಸಿದರು, ದೇಶಭಕ್ತಿ ಗೀತೆಗಳನ್ನು ಹಾಡಿದರು ಹಾಗೂ ಡೋಲಿನ ತಾಳಕ್ಕೆ ಕುಣಿದರು.
ಇದಕ್ಕೆ ಪ್ರತಿಯಾಗಿ ಖಲಿಸ್ತಾನ ಪರ ಹೋರಾಟಗಾರರು ಜೋರಾಗಿ ಖಲಿಸ್ತಾನ ಪರ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಭಾರತ ಪರ ಮತ್ತು ಖಲಿಸ್ತಾನ ಪರ ಗುಂಪುಗಳನ್ನು ಪ್ರತ್ಯೇಕಿಸಲು ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಸ್ಥಳದಲ್ಲಿದ್ದರು. ಖಲಿಸ್ತಾನ ಪರ ಸಭೆಯಲ್ಲಿ ಭಾರತೀಯ ಸಿಖ್ಖರು ಭಾಗವಹಿಸಲಿಲ್ಲ.
ಖಲಿಸ್ತಾನ ಪರ ಸಭೆ ನಿಲ್ಲಿಸಲು ಬ್ರಿಟನ್ ನಿರಾಕರಣೆ
ಇದಕ್ಕೂ ಮೊದಲು, ಖಲಿಸ್ತಾನ ಪರ ಸಭೆಯ ಪರವಾನಿಗೆಯನ್ನು ರದ್ದುಗೊಳಿಸಬೇಕೆಂದು ಭಾರತ ಬ್ರಿಟನ್ ಅಧಿಕಾರಿಗಳಿಗೆ ಮನವಿ ಮಾಡಿತ್ತು. ಆದರೆ, ಅಭಿವ್ಯಕ್ತಿ ಸ್ವಾತಂತ್ರವನ್ನು ಉಲ್ಲೇಖಿಸಿ ಅಧಿಕಾರಿಗಳು ಭಾರತದ ಮನವಿಯನ್ನು ತಳ್ಳಿಹಾಕಿದ್ದರು.
ಪಾಕ್ ಮೂಲದ ಸಂಸದ ಖಲಿಸ್ತಾನಕ್ಕೆ ಬೆಂಬಲ
ಖಿಲಿಸ್ತಾನ ಪರ ಸಭೆಯಲ್ಲಿ ಹೌಸ್ ಆಫ್ ಲಾರ್ಡ್ಸ್ ಸದಸ್ಯ ಪಾಕಿಸ್ತಾನ ಮೂಲದ ನಝೀರ್ ಅಹ್ಮದ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಖಲಿಸ್ತಾನಕ್ಕೆ ತನ್ನ ಬೆಂಬಲ ಘೋಷಿಸಿದರು.
ಇದಕ್ಕೆ ಸಂಬಂಧಿಸಿ ಆಗಸ್ಟ್ 15ರಂದು ಭಾರತೀಯ ಹೈಕಮಿಶನ್ ಹೊರಗೆ ಪ್ರದರ್ಶನ ನಡೆಸಲಾಗುವುದು ಎಂದು ಅವರು ಹೇಳಿದರು. ಖಲಿಸ್ತಾನ ಪರ ಚಳವಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಫಲಕಗಳನ್ನು ಹಿಡಿದುಕೊಂಡು ಭಾಗವಹಿಸಿದರು.
‘ಆಪರೇಶನ್ ಬ್ಲೂಸ್ಟಾರ್’ ಸ್ಮರಣೆ
ಈ ಸಂದರ್ಭದಲ್ಲಿ ಭಾಷಣ ಮಾಡಿದವರು, 1984ರ ‘ಆಪರೇಶನ್ ಬ್ಲೂಸ್ಟಾರ್’ ಕಾರ್ಯಾಚರಣೆ ಮತ್ತು ಇಂದಿರಾ ಗಾಂಧಿ ಹತ್ಯೆ ಬಳಿಕ ನಡೆದ ಸಿಖ್ ವಿರೋಧಿ ಹತ್ಯಾಕಾಂಡವನ್ನು ಸ್ಮರಿಸಿದರು.