ಆಸಿಯಾ ದೋಷಮುಕ್ತಿ ಎತ್ತಿಹಿಡಿದ ಪಾಕ್ ಸುಪ್ರೀಂ ಕೋರ್ಟ್
ಇಸ್ಲಾಮಾಬಾದ್, ಜ. 29: ದೇವನಿಂದನೆ ಪ್ರಕರಣವೊಂದರಲ್ಲಿ ಕ್ರೈಸ್ತ ಮಹಿಳೆ ಆಸಿಯಾ ಬೀಬಿಯನ್ನು ದೋಷಮುಕ್ತಗೊಳಿಸಿ ತಾನು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾ ದ ಮೇಲ್ಮನವಿಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಇದರೊಂದಿಗೆ, ತೀರ್ಪಿಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಆಸಿಯಾ ಬೀಬಿ ಮತ್ತು ಅವರ ಕುಟುಂಬ ಸದಸ್ಯರು ನಿರಾಳರಾಗಿದ್ದಾರೆ.
‘‘ಮೇಲ್ಮನವಿ ಅರ್ಜಿಯ ಅರ್ಹತೆಯ ಆಧಾರದಲ್ಲಿ ಅದನ್ನು ವಜಾಗೊಳಿಸಲಾಗಿದೆ’’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಆಸಿಫ್ ಸಯೀದ್ ಖೋಸ ಘೋಷಿಸಿದರು.
ಇದೇ ನ್ಯಾಯಾಲಯವು ಕಳೆದ ವರ್ಷ ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯಗಳು ನೀಡಿದ್ದ ಮರಣ ದಂಡನೆಯನ್ನು ರದ್ದುಪಡಿಸಿರುವುದನ್ನು ಸ್ಮರಿಸಬಹುದಾಗಿದೆ.
ಪಾಕಿಸ್ತಾನದ ದೇವನಿಂದನೆ ಕಾನೂನಿನಡಿಯಲ್ಲಿ ನ್ಯಾಯಾಲಯವೊಂದು ಆಸಿಯಾಗೆ 2010ರಲ್ಲಿ ಮರಣ ದಂಡನೆ ವಿಧಿಸಿತ್ತು. ಆದರೆ, ಕಳೆದ ವರ್ಷದ ಅಕ್ಟೋಬರ್ 31ರಂದು ಸುಪ್ರೀಂ ಕೋರ್ಟ್ ಅವರ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿತು ಹಾಗೂ ಅವರನ್ನು ದೋಷಮುಕ್ತಗೊಳಿಸಿತು.
ಇದನ್ನು ವಿರೋಧಿಸಿ ತೀವ್ರವಾದಿಗಳು ಭಾರೀ ಪ್ರಮಾಣದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.
ವಿದೇಶಕ್ಕೆ ತೆರಳಲು ಅವಕಾಶ: ಮಾನವಹಕ್ಕು ಕಾರ್ಯಕರ್ತರ ಒತ್ತಾಯ
ತೀರ್ಪು ಹೊರಬೀಳುತ್ತಿದ್ದಂತೆಯೇ, ಆಸಿಯಾ ಬೀಬಿಗೆ ದೇಶದಿಂದ ಹೊರಗೆ ಹೋಗಲು ಅವಕಾಶ ನೀಡಬೇಕು ಎಂಬುದಾಗಿ ಮಾನವಹಕ್ಕುಗಳ ಕಾರ್ಯಕರ್ತರು ಸರಕಾರವನ್ನು ಒತ್ತಾಯಿಸಿದ್ದಾರೆ.
ಪಾಕಿಸ್ತಾನದಲ್ಲಿ ಅವರು ತೀವ್ರವಾದಿ ಗುಂಪುಗಳ ಕೆಂಗಣ್ಣಿಗೆ ಗುರಿಯಾಗಿರುವುದನ್ನು ಸ್ಮರಿಸಬಹುದಾಗಿದೆ. ಪಾಕಿಸ್ತಾನ ಸರಕಾರವು ಆಸಿಯಾ ಬೀಬಿಯನ್ನು ಅಜ್ಞಾನ ಸ್ಥಳವೊಂದರಲ್ಲಿ ಇರಿಸಿದೆ ಹಾಗೂ ಅವರು ಎಲ್ಲಿರುವರು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದೆ.
ಆಸಿಯಾ ಐರೋಪ್ಯ ಅಥವಾ ಉತ್ತರ ಅಮೆರಿಕದ ದೇಶವೊಂದರಲ್ಲಿ ಆಶ್ರಯ ಪಡೆಯಲಿದ್ದಾರೆ ಎಂಬ ಊಹಾಪೋಹಗಳು ಹರಡಿವೆ. ಅವರ ಮಕ್ಕಳು ಈಗಾಗಲೇ ಕೆನಡಕ್ಕೆ ಪರಾರಿಯಾಗಿದ್ದಾರೆ ಎಂಬುದಾಗಿ ಖಚಿತಪಡದ ವರದಿಗಳು ಹೇಳಿವೆ.
‘‘ಈಗ ಅವರಿಗೆ ತನ್ನ ಕುಟುಂಬ ಸದಸ್ಯರನ್ನು ಕೂಡಿಕೊಳ್ಳಲು ಹಾಗೂ ತನ್ನ ಆಯ್ಕೆಯ ದೇಶದಲ್ಲಿ ಆಶ್ರಯ ಪಡೆಯಲು ಅವಕಾಶ ನೀಡಬೇಕು’’ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.