ಸುಡಾನ್: ನಾಗರಿಕ ಸರಕಾರಕ್ಕೆ ಪ್ರತಿಭಟನಕಾರರ ಪಟ್ಟು; ಸೇನೆ ಒಪ್ಪಿಗೆ
ಖಾರ್ತೂಮ್ (ಸುಡಾನ್), ಎ. 15: ಸುಡಾನ್ ಆಡಳಿತವನ್ನು ನಾಗರಿಕ ಮಧ್ಯಂತರ ಸರಕಾರವೊಂದಕ್ಕೆ ತಕ್ಷಣ ಹಸ್ತಾಂತರಿಸಬೇಕು ಎಂಬುದಾಗಿ ದೇಶದ ಪ್ರಧಾನ ಪ್ರತಿಭಟನಾ ಗುಂಪು ರವಿವಾರ ಒತ್ತಾಯಿಸಿದೆ.
ಈ ಗುರಿ ಸಾಧನೆಯಾಗುವವರೆಗೆ ಬೀದಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಅದು ಹೇಳಿದೆ.
ಪ್ರಬಲ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, 30 ವರ್ಷಗಳ ಕಾಲ ದೇಶವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಅಧ್ಯಕ್ಷ ಉಮರ್ ಅಲ್-ಬಶೀರ್ರನ್ನು ಕಳೆದ ವಾರ ಸೇನೆಯು ಪದಚ್ಯುತಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.
ಸಶಸ್ತ್ರ ಪಡೆಗಳ ರಕ್ಷಣೆಯಲ್ಲಿ ಮಧ್ಯಂತರ ಸರಕಾರವೊಂದನ್ನು ಸ್ಥಾಪಿಸಬೇಕು ಎಂಬುದಾಗಿ ಸುಡಾನೀಸ್ ಪ್ರೊಫೆಶನಲ್ಸ್ ಅಸೋಸಿಯೇಶನ್ (ಎಸ್ಪಿಎ) ಕರೆ ನೀಡಿದೆ ಹಾಗೂ ತನ್ನ ಕ್ರಾಂತಿಯ ಉದ್ದೇಶಗಳನ್ನು ಸಾಧಿಸಲು ಎಲ್ಲ ರೀತಿಯ ಶಾಂತಿಯುತ ಒತ್ತಡ ಹೇರುವುದನ್ನು ಮುಂದುವರಿಸುವುದಾಗಿ ಅದು ಹೇಳಿದೆ.
ಈ ನಡುವೆ, ನೂತನ ನಾಗರಿಕ ಸರಕಾರವೊಂದನ್ನು ರಚಿಸುವ ನಿಟ್ಟಿನಲ್ಲಿ ಪ್ರತಿಭಟನಾನಿರತ ಗುಂಪುಗಳೊಂದಿಗೆ ಮಾತುಕತೆ ನಡೆಸಲು ಸೇನೆ ಸಿದ್ಧವಿದೆ ಎಂದು ಮಧ್ಯಂತರ ಸರಕಾರದ ವಕ್ತಾರರೊಬ್ಬರು ರಾಜಧಾನಿ ಖಾರ್ತೂಮ್ನಲ್ಲಿ ರವಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.