ವಿಮಾನ ತಳದಲ್ಲಿದ್ದ ವ್ಯಕ್ತಿ ತೋಟಕ್ಕೆ ಬಿದ್ದು ಮೃತ್ಯು
ಲಂಡನ್, ಜು. 2: ಕೆನ್ಯ ಏರ್ವೇಸ್ ವಿಮಾನದ ತಳದಲ್ಲಿ ಪ್ರಯಾಣಿಸುತ್ತಿದ್ದ ಎನ್ನಲಾದ ವ್ಯಕ್ತಿಯೊಬ್ಬ ನೈರುತ್ಯ ಲಂಡನ್ನ ತೋಟವೊಂದರಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ತೋಟದ ಮಾಲಕನು ಈ ಸಂದರ್ಭದಲ್ಲಿ ಬಿಸಿಲಿಗೆ ಮೈಯೊಡ್ಡುತ್ತಾ ತೋಟದಲ್ಲಿ ಕುಳಿತಿದ್ದರು ಹಾಗೂ ಅವರ ಪಕ್ಕದಲ್ಲೇ ಆ ವ್ಯಕ್ತಿ ನೆಲಕ್ಕೆ ಅಪ್ಪಳಿಸಿದ್ದಾನೆ.
ಹೀತ್ರೂ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವಿಮಾನವೊಂದರ ಲ್ಯಾಂಡಿಂಗ್ ಗಿಯರ್ ಕಂಪಾರ್ಟ್ಮೆಂಟ್ನಲ್ಲಿ ಅಪರಿಚಿತ ವ್ಯಕ್ತಿಯು ಪ್ರಯಾಣಿಸಿರಬೇಕು ಎಂಬುದಾಗಿ ಪೊಲೀಸರು ಭಾವಿಸಿದ್ದಾರೆ.
ಪಶ್ಚಿಮ ಲಂಡನ್ನ ಹೀತ್ರೂ ವಿಮಾನ ಮಾರ್ಗದ ಉದ್ದಕ್ಕೂ ಹಲವು ದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಹೀಗೆ ಪ್ರಯಾಣಿಸುವ ಹೆಚ್ಚಿನವರು ಆಮ್ಲಜನಕದ ಕೊರತೆ ಮತ್ತು ಅತ್ಯಂತ ಎತ್ತರದ ಆಕಾಶದಲ್ಲಿನ ಶೀತಲ ಉಷ್ಣತೆಯಿಂದಾಗಿ ಸಾಯುತ್ತಾರೆ ಎಂದು ಅವರು ಹೇಳಿದ್ದಾರೆ.
Next Story