ಯೆಮನ್ ಬಂಡುಕೋರರ ಡ್ರೋನ್ ಹೊಡೆದುರುಳಿಸಿದ ಸೌದಿ ನೇತೃತ್ವದ ಮಿತ್ರಪಡೆ
ಸನಾ, ಜು.6: ಯೆಮನ್ನ ಯುದ್ಧನಿರತ ಬಂಡುಕೋರರು ಶನಿವಾರ ಹಾರಿಬಿಟ್ಟ ಡ್ರೋನ್ ಗಳನ್ನು ಹೊಡೆದುರುಳಿಸಿರುವುದಾಗಿ ಸೌದಿ ನೇತೃತ್ವದ ಮಿತ್ರಪಡೆಯ ಹೇಳಿಕೆ ತಿಳಿಸಿದೆ.
ಹೌಥಿ ಬಂಡುಕೋರರು ಯೆಮನ್ನ ರಾಜಧಾನಿ ಸನಾದಿಂದ ಡ್ರೋನ್ಗಳನ್ನು ಹಾರಿಬಿಟ್ಟಿದ್ದಾರೆ ಎಂದು ಮಿತ್ರ ಪಡೆ ತಿಳಿಸಿದೆ. ಡ್ರೋನ್ ದಾಳಿಯ ಬಳಿಕ ಯೆಮನ್ ಗಡಿಯ ಬಳಿಯಿರುವ ಸೌದಿ ಅರೇಬಿಯಾದ ಅಭಾ ಮತ್ತು ಜಿಝಾನ್ ವಿಮಾನನಿಲ್ದಾಣಗಳಲ್ಲಿ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸಲಾಗಿದೆ ಎಂಬ ಹೌಥಿ ಬಂಡುಕೋರರ ಹೇಳಿಕೆಯನ್ನು ಮಿತ್ರಪಡೆಗಳು ನಿರಾಕರಿಸಿವೆ.
ದಕ್ಷಿಣ ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡು ಹೌಥಿ ಬಂಡುಕೋರರು ನಡೆಸುತ್ತಿರುವ ಡ್ರೋನ್ ದಾಳಿ ಹೆಚ್ಚುತ್ತಿದ್ದು, ಇತ್ತೀಚೆಗೆ ಅಭಾ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಸೌದಿ ನೇತೃತ್ವದ ಮಿತ್ರರಾಷ್ಟ್ರಗಳ ಪಡೆ ಯೆಮನ್ನ ಮೇಲೆ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ನಾಗರಿಕರು ಮೃತಪಟ್ಟಿರುವುದಕ್ಕೆ ಜಾಗತಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
Next Story