ಅಮೆರಿಕಕ್ಕೆ ಇಮ್ರಾನ್ ಆಗಮನ: ಪ್ರಧಾನಿಯಾದ ಬಳಿಕ ಚೊಚ್ಚಲ ಅಮೆರಿಕ ಭೇಟಿ
ಇಂದು ಟ್ರಂಪ್ ಜೊತೆ ದ್ವಿಪಕ್ಷೀಯ ಮಾತುಕತೆ
ಟೆಹರಾನ್,ಜು.21: ಮೂರು ದಿನಗಳ ಅಮೆರಿಕ ಭೇಟಿಗಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಶನಿವಾರ ವಾಶಿಂಗ್ಟನ್ಗೆ ಆಗಮಿಸಿದ್ದಾರೆ. ಸೋಮವಾರ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಇಮ್ರಾನ್ ಖಾನ್ ಜೊತೆ ಪಾಕಿಸ್ತಾನದ ಸೇನಾ ಸಿಬ್ಬಂದಿ ವರಿಷ್ಠ ಕಮರ್ ಜಾವೇದ್ ಬಾಜ್ವಾ ಹಾಗೂ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐನ ಮಹಾನಿರ್ದೇಶಕ ಹಾಮೀದ್,ಪ್ರಧಾನಿಯವರ ವಾಣಿಜ್ಯ ಸಲಹೆಗಾರ ಅಬ್ದುಲ್ ರಝಾಕ್ ದಾವೂದ್ ಕೂಡಾ ಆಗಮಿಸಿದ್ದಾರೆ ಎಂದು ಪಾಕ್ ಸುದ್ದಿವಾಹಿನಿ ಡಾನ್ ವರದಿ ಮಾಡಿದೆ.
ಶ್ವೇತಭವನಕ್ಕೆ ಪ್ರಧಾನಿ ಜೊತೆ ಪಾಕ್ ಸೇನಾಪಡೆಯ ಇಬ್ಬರು ಉನ್ನತ ಅಧಿಕಾರಿಗಳು ಆಗಮಿಸುತ್ತಿರುವುದು ಇದೇ ಮೊದಲ ಸಲವೆಂದು ಅದು ಹೇಳಿದೆ.
ಜುಲೈ 22ರಂದು ಇಮ್ರಾನ್ ಅವರು ಟ್ರಂಪ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪಾಕ್ ಸೇನಾ ಸಿಬ್ಬಂದಿ ವರಿಷ್ಠ ಕಮರ್ ಜಾವೇದ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಎಂ.ಶಾನ್ಹಾನ್, ಸೇನಾಪಡೆಗಳ ಜಂಟಿ ವರಿಷ್ಠ ಮಾರ್ಕ್ ಮಿಲ್ಲೆ ಹಾಗೂ ಇತರ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಇಮ್ರಾನ್ ಖಾನ್ ಅವರು ಟ್ರಂಪ್ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಅಫ್ಘಾನ್ ಬಿಕ್ಕಟ್ಟು ಹಾಗೂ ದಕ್ಷಿಣ ಏಶ್ಯ ಪ್ರಾಂತದಲ್ಲಿ ಶಾಂತಿ ಸ್ಥಾಪನೆ ಕುರಿತಾಗಿ ಚರ್ಚಿಸಲಿದ್ದಾರೆಂದು ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರಿಕೆ ಇನ್ಸಾಫ್ ತಿಳಿಸಿದೆ.
ಪಾಕ್ ರಾಯಭಾರಿ ನಿವಾಸದಲ್ಲಿ ವಾಸ್ತವ್ಯ, ವಾಣಿಜ್ಯ ವಿಮಾನದಲ್ಲಿ ಪ್ರಯಾಣ: ವೆಚ್ಚ ಕಡಿತಕ್ಕೆ ಇಮ್ರಾನ್ ಕ್ರಮ
ಗಂಭೀರವಾದ ಆರ್ಥಿಕ ಮುಗ್ಗಟ್ಟಿನಿಂದ ಪಾಕ್ ಬಳಲುತ್ತಿರುವಂತೆಯೇ, ವೆಚ್ಚ ಕಡಿತದ ಪ್ರಯತ್ನವಾಗಿ ಇಮ್ರಾನ್ ಅವರು ವಾಣಿಜ್ಯ ವಾಯುಯಾನ ಸಂಸ್ಥೆಯಾದ ಕತರ್ ಏರ್ವೇಸ್ ವಿಮಾನದಲ್ಲಿ ಅಮೆರಿಕಕ್ಕೆ ಆಗಮಿಸಿದ್ದಾರೆ ಹಾಗೂ ಅಮೆರಿಕ ಭೇಟಿಯ ಅವಧಿಯಲ್ಲಿ ಅವರು ಪಾಕಿಸ್ತಾನ ರಾಯಭಾರಿಯವರ ನಿವಾಸದಲ್ಲಿ ಉಳಿದುಕೊಳ್ಳಲಿದ್ದಾರೆ. ಇಮ್ರಾನ್ ಖಾನ್ ಅವರಿದ್ದ ವಿಮಾನವು ದೋಹಾದಲ್ಲಿ ತುಸುಹೊತ್ತು ತಂಗಿದ್ದಾಗ, ಅವರಿಗೆ ಕತರ್ ಏರ್ವೇಸ್ನ ಸಿಇಓ ಅಕ್ಬರ್ ಅಲ್ ಬಕರ್ ಆತಿಥ್ಯ ನೀಡಿದರು.